ಗುಡಿಯ ವಿಕಗ್ರಹದೆದುರು ಕುಳಿತು ಹಗಲೂ ಇರುಳು
ಹಾಡಿದನು ದಾಸನೊಬ್ಬನು. ಬೇಯುತಿರೆ ಕರುಳು
ಭಗವಂತನಿಗೆ, ಸಹಿಸಲಾರದೆಯೆ ಮೈದೊರಿ
ಭಕ್ತನಿಗೆ ಕೈಮುಗಿದು ತಲೆವಾಗಿ ನಗೆಬೀರಿ
ಬೇಡಿದನು, ತನಗೊಂದು ವರವ ಕೊಡಬೇಕೆಂದು.
ಭಕ್ತನೆಂದನು “ದೇವ, ತಿರುಕನನು ತಿರಿಯುವರೆ?
ನಾನೇನ ಕೊಡಬಲ್ಲೆ? ಪರಿಹಾಸ್ಯಮಾಡುವರೆ?”
“ಪರಿಹಾಸ್ಯವಲ್ಲಯ್ಯ ಇದು! ನಿನ್ನ ದಮ್ಮಯ್ಯ;
ನನಗೊಂದು ವರವಿತ್ತು ನನ್ನ ಕಾಪಾಡಯ್ಯ!”
ಭಗವಂತನಿಂತೆನಲು ಭಕ್ತನಚ್ಚರಿಯಿಂದೆ
ವರವೀಯಲೊಪ್ಪಿ ನುಡಿದನು “ಬೇಡು, ಓ ತಂದೆ!”
ಭಗವಂತ ಬೇಡಿದರೆ ನೀಡದಿರಲಾದೀತೆ?
ಭಗವಂತನಿಗೆ ಕೊಟ್ಟ ದಾನ ಹೊಳ್ಳಾದೀತೆ?

ದೇವರೆಂದನು “ಭಕ್ತವರ್ಯ, ನಾ ಕೇಳಲಾರೆ;
ಸಾಕು, ನಿಲ್ಲಲಿ ನಿನ್ನ ಗಂಟಲಿನ ಗಾನಧಾರೆ!
ಈ ಸಾರೆ ತಪ್ಪಾಯ್ತು, ಕ್ಷಮಿಸಯ್ಯ ದಯವಿಟ್ಟು,
ನಿನಗೆ ಮುಂದಿನ ಜನ್ಮಕೊಳ್ಳೆಕಂಠವ ಕೊಟ್ಟು
ತಕ್ಕ ಪ್ರಾಯಶ್ಚಿತ್ತ ಮಾಡಿಕೊಳ್ಳುವೆ ನಾನು;
ಸದ್ಯಕ್ಕೆ ಭಕ್ತನಾಂ, ಭಗವಂತನೈ ನೀನು!
ಈ ಸಾರಿ ವರವಿತ್ತು ನನ್ನ ಕಾಪಾಡಯ್ಯ;
ನಿನ್ನ ಗಂಟಲು ಕಟ್ಟು, ದಾಸಯ್ಯ, ದಮ್ಮಯ್ಯ!”

ಎಂದು ಭಗವಂತ ತೆರಳಿದನು ವೈಕುಂಠಕ್ಕೆ!-
ಅಂತು ಕೀರ್ತನೆ ಮಹಿಮೆ ಗೊತ್ತಾಯ್ತು ಲೋಕಕ್ಕೆ!

೧೭-೯-೧೯೩೪