ಅಯ್ಯೊ, ನಿಮಗೀಗೇಕೆ ಬಿರುದು ಗಿರುದಿನ ಗೋಜು,
ಮೇಣು ಪತ್ರಿಕೆಯ ಲಘುತರ ಕೀರ್ತಿ? ಕಾಣಿಸದೆ
ಅನಿವಾರ್ಯವಾಗಿ ಬಳಿಸಾರುತಿಹ ಜೀವನದ
ಸಂಜೆ? ಇನ್ನೇನು ಕವಿದು ಬಹ ಕತ್ತಲೆಗಾಗಿ
ಎದೆಯ ಹಣತೆಗೆ ಎಣ್ಣೆಬತ್ತಿಗಳನೊಡ್ಡಯಿಸಿ
ಸೊಡರು ಹೊತ್ತಿಸಿಕೊಳುವ ಹೊತ್ತಾಗಲಿಲ್ಲೇನು,
ಹೇಳಿ ಮುದುಕಯ್ಯ? ಇರುಳಿನ ಪಯಣಕನುವಾಗಿ,
ಕಾಣದೂರಿನಲಿ ಕೈಹಿಡಿದು ನಡೆವಾತನನು
ಹೃದಯಕಾಹ್ವಾನಿಸುತೆ, ದೃಢನಿಶ್ಚಯವ ಮಾಡಿ,
ಶಾಂತಿ ಯಷ್ಟಿಯ ಹಿಡಿಯಲಿನ್ನೂ ನಿಮಗೆ ಮನಸು
ಬರಲಿಲ್ಲವೇನು? – ಗೌರವವಿಹುದು ನಿಮ್ಮಲ್ಲಿ
ನನಗೆ; ಜನ ಮೆಚ್ಚುವಂದದಿ ಬದುಕಿ ಬಾಳಿಹಿರಿ;
ಪಡೆಯ ಬೇಕಾದುದನು ಪಡೆದಿಹಿರಿ; ಕೊಡುವುದನು
ಕೊಟ್ಟಿಹಿರಿ. – ಸ್ತುತಿಸಿದರೆ ಮಂದೆಯ ಮರುಳು ಮಂದಿ
ಮರುಳಾಗಬೇಡಿ ನೀವದಕೆ: ಬಾಳಂಚಿನಲಿ
ನಿಂತು, ತತ್ತರಿಸಿತ್ತೆ ಸಾವಿನಾಳವ ಕಂಡು,
ಕಳೆದ ಬದುಕನು ನೆನೆದು, ಮೆಲ್ಲನೆಯೆ ತಲೆದಿರುಹಿ,
ಹಿಂದೆ ಹಾರೈಸಿ ನೋಡುವ ನಿಮ್ಮನೀ ಮಂದಿ
‘ಮತ್ತೆ ಹಿಂದಕ್ಕೆ ಬಂದು ತಮ್ಮ ತುತ್ತನು ಕಸಿದು
ತಮಗೆ ತೊಂದರೆ ಕೊಡದೆ ಇರಲಿ’ ಎಂಬಂದದಲಿ
ಬಿರುದೆಂಬ ಬಿದಿರುಗಳುವಿಂ ನಿಮ್ಮ ನೂಂಕುತಿದೆ
ತಿಮಿರ ಪಾತಾಳ ನಿಮ್ನತೆಗೆ! ಬಣ್ಣಕೆ ಬಾಯಿ
ತೆರೆವ ಮಕ್ಕಳ ತೆರದಿನಾಗುವಿರಿ ನೀವಿವರ
ಮೆರವಣಿಗೆಗಳಿಪಿದರೆ! ಈ ಮಂದಿಗೇನಂತೆ?
ಕಪ್ಪೆಯೋ ಕೋತಿಯೋ ಯಾವುದಾದರು ಸಾಕು,
ವಾದ್ಯವೂದುತ್ತೆ ಪಲ್ಲಕ್ಕಿಯನು ಹೊತ್ತೊರಲಿ
ನಲಿದು ಮೆರವಣಿಗೆ ಮಾಡಿದರಾಯ್ತ! ಮೆರೆದರಾಯ್ತು!
ನಿಮಗೆ ಜೀರ್ಣಿಸಿಕೊಳುವ ಶಕ್ತಿಯಿರುವಾಗಂದು
ನಿಮ್ಮ ಸುಖವನು ಕರುಬಿ ನಿನಲೀಯದಿವರೆಲ್ಲ
ಹಲ್ಲುದುರಿ ಹೋದುದನು ಕಂಡಿಂದು ತರತರದ
ಸಿರಿಯ ನೈವೇದ್ಯವನು ತಂದಿಕ್ಕುತಿಹರಯ್ಯ,
ನಿಮಗೆ ತೋರಿಸಿ ತಾವು ತಿಂದು ಸುಖಿಸುವೆವೆಂದು
ಚೆನ್ನಾಗಿ ನಂಬಿ! ಸಭೆಯಲಿ ನೋಡಿ; ಅದೊ ಅವರು
ಇವರ ಸಿಹಿ ಸಿಹಿ ಮಾಡೆ ಬಂದಿಹರು! ನೋಡುವನು
ಮಾನಪತ್ರವನೋದುತಿರೆ ನಿಮಗೆ, ಮಂತ್ರಿಗಳ
ಕಡೆಗೆ ತಿರುಗುತೆ ಕೃಪೆಯ ಕೋರುತಿಹನಕ್ಷಿಯೊಳೆ! –
ತಿನ್ನಲಾರದ ದೇವರಿಗೆ ರುಚಿರುಚಿಯ ನೈವೇದ್ಯ!
ನಕಲಿಯಿದು ನಿಜವೆಂದು ಮೋಸ ಹೋದೀರಯ್ಯ
ನೀವಿವರ ಬಲೆಯ ತಳುಕಿಗೆ ಬೀಳದಿರಿ, ಬಿರುದು
ಗಿರುದಿನ ಬಿಸಲ್ಗುದುರೆಗೆದೆಯ ಬಾಯಾರಿಕೆಯು
ಬತ್ತದು. ಮುನಿಯಬೇಡಿ, ಕಿರಿಯನ ಬೋಧೆಯೆಂದು!

೧೪-೯-೧೯೭೫