ನಿನ್ನೆಯ ಮೊನ್ನೆಯ ಹುಡುಗರೊ ನಾವು,
ನಮಗೇತಕೆ ಹೇಳಜ್ಜರ ಸಾವು?
ಜನನವು ಜೀವವು ಮರಣಗಳಂತೆ!
ಏತಕೆ ನಮಗಾ ತತ್ವದ ಕಂತೆ?
ಬಾಲ್ಯದ ತೋಯ ತರಂಗದ ಮೇಲೆ
ತೇಲುತ ನಗುವುದೆ ನಮ್ಮಯ ಲೀಲೆ.
ನಿನ್ನೆಯ ಮೊನ್ನೆಯ ಹುಡುಗರೊ ನಾವು;
ನಮಗೇತಕೆ ಹೇಳಜ್ಜರ ಸಾವು?

ನಶ್ವರ! ನಶ್ವರವೆಂದವರಾರೊ?
ಇಲ್ಲದುದನು ನಿನಗೊರೆದವರಾರೊ?
ಎಲ್ಲವನುಳಿವುದೆ ಆದರೆ ಮುಕ್ತಿ
ಎಲ್ಲವನಪ್ಪುವುದರೊಳಿದೆ ಶಕ್ತಿ.
ಶಕ್ತಿ ಮೀರುವುದೇನೋ ಮುಕ್ತಿ?
ಬಿಡು, ಅದು ಕೈಲಾಗದರ ಕುಯುಕ್ತಿ!
ನಿನ್ನೆಯ ಮೊನ್ನೆಯ ಹುಡುಗರೊ ನಾವು;
ನಮಗೇತಕೆ ಹೇಳಜ್ಜರ ಸಾವು?

ರವಿ ನಶ್ವರವನು ನೆನೆವನೆ? ಹೇಳು!
ಶಶಿ ಶಾಶ್ವತವನು ನೆನೆವನೆ? ಹೇಳು!
ಕನಸಿನ ಮುಕ್ತಿಯ ಪಡೆಯುವೆವೆಂದು
ಕೆಲಸವ ಬಿಡುವರೆ ದಿನಮಣಿ ಇಂದು?
ಏಳೆದ್ದೇಳೊ, ಓ ಸೋಮಾರಿ,
ವಚನಬ್ರಹ್ಮವು ‘ಮುಕ್ತಿ’ಗೆ ಮಾರಿ!
ನಿನ್ನೆಯ ಮೊನ್ನೆಯ ಹುಡುಗರೊ ನಾವು;
ನಮಗೇತಕೆ ಹೇಳಜ್ಜರ ಸಾವು?

೧೯೨೭-೧೯೨೮