ಗೈರಿಕ ವಸನ ಧಾರಿಯಾದ ಮಾತ್ರಕೆ ಧರೆಯ
ಗೌರವಾರಾಧನೆಗಳಿಗೆ ಪಾತ್ರನೇನಯ್ಯ?
ಭ್ರಾಂತ ಸನ್ಯಾಸಿ, ಕಾವಿಯನುಟ್ಟ ಮಾತ್ರದಲಿ
ಶಾಂತಿ ಬಂದುದೆ ನಿನಗೆ? ಜ್ಞಾನಿಯಾದೆಯ ನೀನು?
ಕತ್ತೆ ಕೆಂಗಾವಿಯಲಿ ಎಷ್ಟು ಹೊತ್ತುರುಳಿದರೆ
ಉತ್ತಮೋತ್ತಮ ಅಶ್ವವಾಗುವುದು ಹೇಳಯ್ಯ?
ತಿಳಿದವರ ನುಡಿಗಳನು ಪಡಿನುಡಿಯೆ ನೀ ಜಾಣ-
ಗಿಳಿಯಾದೆ! ತಿಳಿದವನೆ? – ಅವಸರದ ಸನ್ಯಾಸ
ಜೀವನೋಪಾಯಕ್ಕೆ ಪಥವೆಂದು ತಿಳಿದೆಯಾ?
ಕಾವಿ ಬರಿ ಮಣ್ಣಲ್ಲ ಕಾಣಯ್ಯ; ಅದು ಬೆಂಕಿ!
ಅಧಿಕಾರಿ ಉಟ್ಟರದು ಉರಿಗಣ್ಣು; ನಿನ್ನಂಥ
ಮದಮೋಹಿ ಧರಿಸಿದರೆ ಕೆಮ್ಮಣ್ಣು! ಹಣ್ಣಾದ
ಮಿಡಿಗಾಯಿಯೋಲೆ ನೀ ಸನ್ಯಾಸಿಯಾಗಿರವೆ;
ಮಿಡಿಗಾಯಿ ಬೆಳೆಬೆಳೆದು ಹಣ್ಣಾದ ತೆರನಲ್ಲ:
ಬುಡದಿಂದ ಕ್ರಮವಾಗಿ ದಿನದಿನಕೆ ಅದು ಬಲಿತು
ಕಡೆಗೆ ಹೊನ್ನಿನ ಬಣ್ಣ ತುಂಬುವುದು ಮೈಯೆಲ್ಲ;
ಮಾರ್ದವ ಸುವಾಸನೆಗಳೊಂದೊಂದನೊಡಗೊಂಡು
ಆರ್ದ್ರತಾ ಮಾಧುರ್ಯ ರಸಪುಷ್ಟಿಯನು ಪಡೆಯೆ,
ಆ ಹಣ್ಣು ಬೆಲೆಹಣ್ಣು, ಜನರ ಮೆಚ್ಚುಗೆಹಣ್ಣು,
ಅಂತಲ್ಲದಾವುದೋ ಪೆಟ್ಟು ತಗುಲಿದ ಹಣ್ಣು
ಮೇಣು ಹುಳು ಗೈದ ಗಾಯದಿ ಮಿಡಿಯ ಮಿದುವಾಗೆ
ಅದರ ಮಾರ್ದವವೆ ಹೇಸಿಗೆ; ರಸವೊ ಬರಿ ಕೀವು!
ಜಾಣತನ ಅರಿವಲ್ಲ! ಹಮ್ಮು ಸೋsಹಮ್ಮಲ್ಲ;
ಅದು ಬರಿಯ ಕತ್ತಲೂ ಅಲ್ಲ; ಬೆಳಕಿನ ‘ಇಲ್ಲ’!

ಹುಲಿಯ ಬಣ್ಣಕೆ ನರಿಯ ಮೈಸುಟ್ಟುಕೊಂಡಂತೆ,
ಹುಲಿಯ ವೇಷದಿ ಕತ್ತೆ ಕಬ್ಬನುಣಹೋದಂತೆ
ಆವೇಶವಿಲ್ಲದೆಯೆ ವೇಷದಲ್ಲಿಯೆ ಮಾತ್ರ
‘ಸ್ವಾಮಿಜಿ’ಯ ಅನುಕರಿಸೆ, ನೀ ನಾಟಕದ ಪಾತ್ರ!

೧-೧-೧೯೩೫