ಕ್ಲೈಬ್ಯವನು ಸಂಹರಿಸೊ, ದೌರ್ಬಲ್ಯವನು ದಹಿಸೊ,
ಹೃದಯಕ್ಕೆ ಪೌರುಷವ ದಯಪಾಲಿಸೊ!
ಮನವು ಸರಿ ಎಂದುದನು ಎದೆಯನುಸರಿಸುವಂತೆ
ದೃಢತೆಯಾ ನಡತೆಯನು ನನ್ನದೆನೆಸೊ!
ರಾಗಸಾಗರದಲ್ಲಿ ಭೋಗಾಭಿಲಾಷೆಗಳ
ಭೈರವ ತರಂಗಗಳು ಅಪ್ಪಳಿಸಲು,
ಲೋಕಮೋಹಕ ಇಂದ್ರಜಾಲ ಸಂಮ್ಮೋಹನಕೆ
ಇಂದ್ರಿಯ ವಿಹಂಗಗಳು ಮನವಳುಕಲು,
ಕ್ಲೈಬ್ಯವನು ಸಂಹರಿಸೊ, ದೌರ್ಬಲ್ಯವನು ದಹಿಸೊ,
ಹೃದಯಕ್ಕೆ ಪೌರುಷವ ದಯಪಾಲಿಸೊ;
ಮನವು ಸರಿ ಎಂದುದನು ಎದೆಯನುಸರಿಸುವಂತೆ
ದೃಢತೆಯಾ ನಡತೆಯನು ನನ್ನದೆನೆಸೊ!

೧೮-೬-೧೯೩೩