“ನನ್ನಿಂದ್ರಿಯಂಗಳನು ನಾನೆಂದು ಜಯಿಸುವೆನು?”
ಎಂದೊಬ್ಬ ಸನ್ಯಾಸಿ ಕೇಳಿದನನೇಕರನು.
ಲೋಕೆವೆಲ್ಲವು ಮಾಯೆ; ಪ್ರೇಮವೆಂಬುದು ಮಿಥ್ಯೆ;
ಸೌಂದರ್ಯವೆಂಬುವುದು ಪ್ರಕೃತಿಯೊಡ್ಡಿದ ಜಾಲ;
ಸಂಸಾರ ಮರುಭೂಮಿ; ಎಲ್ಲ ಬಿಟ್ಟರೆ ಮುಂದೆ
ಎಲ್ಲವೂ ಲಭಿಸುವುದು; ಸನ್ಯಾಸದೊಳೆ ಮುಕ್ತಿ; –
ಎಂದವನು ಕಾವಿಯನು ಉಟ್ಟು, ಬೂದಿಯ ತೊಟ್ಟು,
ದುಡಿದು ತಿನ್ನುವ ಬದಲು ಬೇಡಿಯುಣುವುದ ಕಲಿತು,
ಮಿಂದು ನದಿಯಲಿ, ಧ್ಯಾನ ಜಪಗಳನು ಮಾಡುತ್ತ
ಇಂದ್ರಿಯಂಗಳ ಜಯಕೆ – ಮುಕ್ತಿಯಾಸ್ವಾದನೆಗೆ –
ಸಾಧನೆಯ ಮಾಡಿದನು. ಆದರೂ ಆತನಿಗೆ
ಇಂದ್ರಿಯಂಗಳ ಜಯವು ಸಾಧ್ಯವಾಗಲೆ ಇಲ್ಲ.
ಆಗವನು ಕಂಡಕಂಡವರನ್ನು ಕೇಳಿದನು:
“ನನ್ನಿಂದ್ರಿಯಂಗಳನು ನಾನೆಂದು ಜಯಿಸುವೆನು?”

“ಕಾಶಿಯನು ಕಂಡಂದು;” “ಮೋಹಗಳ ಬಿಟ್ಟಂದು;”
“ಕಾಮ ಜಯವಾದಂದು;” “ದ್ವಂದ್ವಗಳ ಗೆದ್ದಂದು;”
“ಕಾನನಕೆ ನಡೆದು ಏಕಾಂತದಲಿ ಕುಳಿತಂದು;”
ಎಂದು ಒಬ್ಬೊಬ್ಬರೊಂದನು ಹೇಳಿ ತೆರಳಿದರು.
ಸನ್ಯಾಸಿ ಒಂದೊಂದನೇ ಮಾಡಿ, ದೇವರನು
ಕಾಣದೆಯೆ, ಕಾಮಜಯಿಯಾಗದೆಯೆ, ಬೇಸತ್ತು
ಎದೆಗೆಟ್ಟು ಸೋತವನು, ದಾರಿಯಲಿ ಬರುತಿರಲು,
ಚೆಲುವೆಯೊಬ್ಬಳ ಕಂಡು ಕೇಳಿದನು, “ಹೇಳಮ್ಮ,
ನನ್ನಿಂದ್ರಿಯಂಗಳನು ನಾನೆಂದು ಜಯಿಸುವೆನು?”
ಸುಂದರಿಯು “ಬಾ” ಎಂದು ಸನ್ಯಾಸಿಯನು ತನ್ನ
ಆಲಯಕೆ ಕರೆದೊಯ್ದು, ಬಾಗಿಲಲಿ ನಿಲಹೇಳಿ,
ಒಳಗಿಂದ ಏನನೋ ಮುಚ್ಚುಹಿಡಿಯಲಿ ತಂದು
“ಹಿಡಿ” ಎಂದು ನೀಡಿದಳು. ಸಾಧುವೂ ಮುಷ್ಟಿಯಲಿ
ಮುಚ್ಚಿ ಹಿಡಿದದನು, ದೂರಕೆ ನಡೆದು, ನೋಡಿದನು!
ಬರಿಗೂದಿ! – ಕೈ ಬಿಚ್ಚಿದೊಡನೆಯೇ ಗಾಳಿಯಲಿ
ತೂರಿಹೋಯಿತು. – ಸಾಧು ಆಶ್ಚರ್ಯದಲಿ ನಿಂತು
ಚಿಂತಿಸುತ್ತಿರೆ ಬೂದಿ ಇಂತು ನುಡಿಯಿತ್ತಂದು:
“ನೀ ಸತ್ತು ಸೂಡಿನಲಿ ಹೆಣ ಬೂದಿಯಾದಂದು
ನಿನಗೆ ಇಂದ್ರಿಯ ಜಯವು, ನೀನು ನಾನಾದಂದು!”

೨-೮-೧೯೩೩