ಬಾ ಮುತ್ತುಕೊಡು ನನ್ನನಪ್ಪಿ, ಓ ಚೆಲುವೆ,
ಬಾಳು ಸಾಯಲು ಹೆಚ್ಚು ಹೊತ್ತಿಲ್ಲವಂತೆ. ಈ
ಬಾಳಳಿದ ಮೇಲೆ ಮುಂದಿನ ಬಾಳು ದಿಟವಲ್ಲ;
ಸಂದಿಗ್ಧವಂತೆ: ರವಿ ಚಣಚಣಕೆ ಬಿಸಿಗಳೆದು
ತಣ್ಣಗಾಗುತ್ತಿರುವನಂತೆ; ಧರೆ ರವಿಯಿಂದೆ
ದೂರ ದೂರಕೆ ಸರಿದು ತಣ್ಣಗಾಗಲು ಹೆಚ್ಚು
ಹೊತ್ತಿಲ್ಲವಂತೆ; ಈ ಜೀವರಾಶಿಗಳೆಲ್ಲ
ನಿರ್ನಾಮವಾಗುತಿವೆಯಂತೆ; ಆ ನಕ್ಷತ್ರ
ನೀಹಾರಿಕಾ ರಾಜಿಯೆಲ್ಲ ತುದಿಯಲಿ ಬಿಸುಪು
ಲವಲೇಶವಿಲ್ಲದೆಯೆ, ಬ್ರಹ್ಮಾಂಡವೆಲ್ಲವೂ
ಕಗ್ಗತ್ತಲೆಯ ಗೋರಿಯೊಳಗೆ ನುಗ್ಗುವುದಂತೆ;
ಪೂಜೆ ಪ್ರಾರ್ಥನೆ ವ್ಯರ್ಥವಂತೆ; ಏಕೆನೆ, ಪೂಜೆ
ಪಾರ್ಥನೆಯ ಕೇಳಿ ಕೃಪೆಮಾಡುವಾ ದೇವರೇ
ಗೈರುಹಾಜರಿಯಂತೆ, ಮೇಣ್‌ಮೊಲದ ಕೊಂಬಂತೆ;
ಸಗ್ಗವೆಂಬುದು ಕಟ್ಟುಕಥೆಯಂತೆ; ಶಾಶ್ವತತೆ,
ನಮ್ಮಾತ್ಮದಮೃತತ್ವ, ಪ್ರೇಮದಾ ನಿತ್ಯತ್ವ,
(ಕಹಿಯಾದರೂ ನಿನಗೆ ನನ್ನಿಯನೆ ಹೇಳುವೆನು!)
ಎಲ್ಲ ಕನಸಿನ ಜೇಡ ನೆಯ್ದ ಹುಸಿ ಬಲೆಯಂತೆ,
ಅಲಸ ಕವಿಗಳ ತಲೆಯ ಪಾಳ್ಗುಡಿ ಮೆದಳಿನಲ್ಲಿ!

ಏನಾದರೇನಂತೆ? ಹಾಳಾಗಲಾ ಚಿಂತೆ!
ಎಲ್ಲ ಹಾಳಾಗುವಾ ಮುನ್ನವೇ ನಾವೊಲಿದು,
ಬಾಳ ಹಲ್ಲೆಯ ಹಿಂಡಿ, ಜೇನನೆಲ್ಲವ ಹೀರಿ,
ಮೃತ್ಯು ಬರೆ ಬಾಗಿಲಿಗೆ, ತೆರೆದದರ ಹೆಬ್ಬಾಯ್ಗೆ
ಬಿಸುಡುವಂ! ಸತ್ತೆಸಾಯುವೆವೆ ಎಂದಿದ್ದರೂ?
ಶೂನ್ಯವಾಗುವ ಮೊದಲೆ ಒಲಿದು ನಲಿವುದೆ ಜಾಣ್ಮೆ!
ಸತ್ತಮೇಲೊಂದು ವೇಳೆಗೆ ಶೂನ್ಯವಾಗದಿರೆ,
ಮಾತು ಕೊಡುವೆನು ನಿನಗೆ ನಾ ನಿನ್ನನಲ್ಲಿಯೂ
ಇಲ್ಲಿಯೊಲಿದಂತೆ ಎದೆಮುಟ್ಟಿಯೊಲಿವೆನೆಂದು!

೨೮-೧೨-೧೯೩೫