ಮೆಲ್ಲಮೆಲ್ಲಗೆ ಜೀವನದಿ ಬತ್ತುತಿದೆ, ತರುಣಿ;

ನನ್ನ ಮುಖವಿರಿಸು ನಿನ್ನೆದೆಯ ತೊಟ್ಟಿಲಲಿ.
ಸವಿಸುಖದ ಹಗಲು ಕಳೆಯಿತು, ಮುಳುಗಿದನು ತರುಣಿ;
ರಾತ್ರಿ ಬಂದಿಹುದೀಗ ನಿದ್ದೆ ಬೇಕೆನೆಗೆ.

ಆ ಬಿಸಿಲು ಬೆಳಕುಗಳು ಮಾಯವಾಗಿವೆ, ನಲ್ಲೆ;
ಜೀವನದ ಕುಸುಮಗಳು ಬೇಗನುದುರುತಿವೆ.
ಏಕೆ ಬಂದೆವೊ ಇಲ್ಲಿ? ಒಂದೆರಡು ದಿನದಲ್ಲೆ
ಮತ್ತೇಕೆ ಮರಳುವೆವೊ? ನಾನೊಂದನರಿಯೆ!

ಒಂದು ಮಿಂಚಿನ ಗುಳ್ಳೆ, ಸುಖದಃಖಕೆಚ್ಚತ್ತು
ಕುಣಿಯುವೆವು; ಬಂದಡೆಗೆ ಸಂದಪೆವು ಮತ್ತೆ;
ಏಕೆಂಬುದನು ಹೇಳಲಿಲ್ಲೊಂದು ದನಿ; ಮತ್ತು
ಲೀಲೆಯುದ್ದೇಶವನು ತೋರುವರ ಕಾಣೆ.

ನಾನೇರಲಿರುವಾ ಕತ್ತಲೆಯ ಲೋಕದಲಿ
ನಾಳೆ ನನಗಾವ ಗತಿ ಕಾದುಕೊಂಡಿದೆಯೊ?
ನಾವಿಲ್ಲಿ ತಿಳಿಯಲೆಳಸಿದುದೆಲ್ಲ ನಮಗಲ್ಲಿ
ತಿಳಿದರ್ಥಸಹಿತವಾಗುವುದೊ ತಪ್ಪುವುದೊ?

ಮರಣವೆಂಬುದು ಬರಿಯ ಹಿರಿನಿದ್ದೆ ಮಾತ್ರವೆನೆ
ಆ ನಿದ್ದೆಯಿಂದೆಂದೂ ಕಣ್ದೆರಯದಿಹೆವೋ?
ಮುನ್ನೆಲ್ಲರೂ ಹಿಡಿದ ಆ ಪಥದ ಸೂತ್ರವನೆ
ನಾ ಹಿಡಿವೆನಲ್ತೆ? – ಏನಾದರೇನಂತೆ!

ಮಾನವರ ಮಕ್ಕಳಲಿ ಸುಜ್ಞಾನ ಮೂರ್ತಿಗಳು,
ಪುಣ್ಯವಂತರು, ಸಾಧುಸಂತರೆಂಬುವರು,
ಕೋಟಿಗಟ್ಟಲೆ ತೆರಳಿದಜ್ಞಾತ ಜೀವಿಗಳು
ಎಲ್ಲರಾ ಹಾದಿಯನೆ ಬಿಡದೆ ಹಿಡಿದಿಹರು.

ಹಾ! ನನ್ನನೆದೆಗಪ್ಪು; ಬೆಳಕು ಕತ್ತಲೆಯಾಯ್ತು;
ಮೃತ್ಯುಶೀಲಹಸ್ತವೆದೆಯ ಕೊರೆಯುತಿದೆ.
ಹಗಲು ವಿಶ್ರಾಂತಿಯಿಲ್ಲದೆ ದುಡಿದು ಸಾಕಾಯ್ತು;
ಇನ್ನಿರಳು ಬರೆ ಮಲಗಲಂಜಿಕೆಯದೇಕೆ?

೧೪-೨-೧೯೩೨

*  j.Stark Browne ಅವರು ಸಾಯುವ ಮೊದಲು ರಚಿಸಿದ ಕವನದ ಭಾಷಾಂತರ.