ಕಲ್ಪಾಂತರಗಳ ಸಂಕ್ಷಿಪ್ತಾಕೃತಿ,
ಜಗಶಿಲ್ಪಿಯ ಯುಗಯುಗ ಕರ್ಮದ ಕೃತಿ,
ಶತಮಾನಂಗಳ ಸಂಗ್ರಹ ಸಂಸ್ಕ್ರತಿ:
ಮಲಗಿದೆ ನವಶಿಶು ತೊಟ್ಟಿಲಲಿ!
ಮಲೆನಾಡಿನ ಬನಬೆಟ್ಟದ ಮೇಲೆ
ಹೊಮ್ಮಲು ಹೊಸ ಹೊಂಗದಿರನ ಲೀಲೆ
ಮೆರೆದಪುದಿಂತೆಯೆ ಇರ್ಬ್ಬನಿ ಬಾಲೆ
ಹೂವೆಸಳಿನ ಹೊಂಬಟ್ಟಲಲಿ!

ಜೋಗುಳದಿಂಪಿಗೆ ತೊಟ್ಟಿಲು ತೂಗಿ
ಹಸುಳೆಯು ಮಲಗಲು ಮೇಲ್ಗಡೆ ಬಾಗಿ
ಸರ್ವೇಂದ್ರಿಯವೂ ಕಣ್ಣೊಂದಾಗಿ
ದಿಟ್ಟಿಸುವಳು ಚೊಚ್ಚಲು ತಾಯಿ!
ಹಸುರಂಗಿಯು ಮೊಗ್ಗೆಯ ಮೈಮುಚ್ಚಿ
ತುದಿ ಮೊಗದಾ ಹೊಮ್ಮೊನೆಯನೆ ಬಿಚ್ಚಿ
ಮೆರೆವೊಲೆ, ಹಸಿಹೊದಿಕೆಯು ಮೈ ಹೊಚ್ಚಿ
ಮೆರೆದಿದೆ ಮಗುಮೊಗದಿನಿವಯಿ!

ತನ್ನಾ ಕನ್ಯಾಪ್ರಣಯದ ರೀತಿ
ಪ್ರಥಮಾಲಿಂಗನ ಚುಂಬನ ಭೀತಿ
ಫಲಿತ ವಿವಾಹದ ಸುಸ್ಥಿರ ಪ್ರೀತಿ
ಪ್ರತಿಫಲಿಸಿರೆ ಶಿಶು ವದನದಲಿ,
ಚೆಲ್ವಿನ ಬೇಟದ ಚಿನ್ನದ ಚಿಂತೆ
ಹೊಂಗನಸಿನ ಹೂದೋಂಟದ ಸಂತೆ
ರೂಪಂ ಒಡೆದುದೆ ದಿಟವೆಂಬಂತೆ,
ಪೆಣ್ಣಳ್ದಳು ರಸ ಸದನದಲಿ!

ನಂದನವಾಗಿರೆ ಮಾತೆಯ ಮನಸು
ಬೇರೊಂದಾಗಿದೆ ಕಂದನ ಕನಸು:
ಯುಗ ಯುಗ ಕೋಟಿಯ ಬಾಳ್ಗಳ ಕಣಸು
ಪುನರಭಿನಯಿಸಿಹುದಾತ್ಮದಲಿ!
ತಿಲಮಾತ್ರವೊ ಎಂಬ ಪ್ರಿಯಗಾತ್ರದಿ,
ನೇತ್ರ ಸುಸೂಕ್ಷ್ಮದ ಕೋಮಲಪಾತ್ರದಿ,
ನಾಟಕವಾಡಿದೆ ಸ್ವಪ್ನದ ಸೂತ್ರದಿ
ಪ್ರಪ್ರಾಚೀನತೆ ನೂತ್ನದಲಿ!

ಆಕೃತಿಗಳ್ಗಾಕಾರವೆ ಇಲ್ಲ;
ಅರ್ಥಾನರ್ಥದ ಸ್ಟಷ್ಟತೆಯಿಲ್ಲ.
ಪಸುಳೆಯ ಮೊದಲನೆ ತೊದಲಂತೆಲ್ಲ
ಅರ್ಥದ ಮೆಚ್ಚಿಲ್ಲದ ಕೆಚ್ಚು!
ಪ್ರಳಯ ಸೃಷ್ಟಿಗಳ ಪ್ರಥಮದ ರತಿಯೋ?
ಕಲದೇಶಗಳ ಭ್ರೂಣ ಸ್ಥಿತಿಯೋ?
ಅಸ್ತಿತ್ವಕೆ ಹಿಡಿಯುತ್ತಿಹ ಮತಿಯೋ:
ಅರ್ಥಾವಶ್ಯಕತೆಯ ಹುಚ್ಚು?

ಹೇಳುವರಾರಂತೂ ಸಿಸುಗನಸಲಿ,
ಇನ್ನೂ ಮನಸಲ್ಲದ ಆ ಮನಸಲಿ,
ಸೃಷ್ಟಿಯ ಕಂಕಾಲದ ತಾಂಡವ ಕಲಿ
ಪ್ರೇತದವೋಲೊಯ್ಯನೆ ಮೂಡಿ
ಪ್ರಲಯಾಗ್ನಿಯ ಕೇಸರಿ ಜಡೆಗಳವೋಲ್,
ಕಂಗೆಟ್ಟಲೆಯುವ ಮುನ್ನೀರ್ಗಳವೋಲ್,
ಮೇಲ್ವಾಯುವ ಹೊಗೆ ಮುಗಿಲ್ಬಂಡೆಗಳೋಲ್
ಕಣಿವನು ಭೂತಾಟವನಾಡಿ!

ಹಸುಳೆಗೆ ಭಯವೇನದೊ ಭ್ರೂಭಂಗ?
ಕಂಪಿಸುತಿದೆ ಸುಮಕೋಮಲ ಅಂಗ:
ಪ್ರಲಯ ಸೃಷ್ಟಿ ತಾಂಡವಕದು ರಂಗ!-
ಕಾರಣವರಿಯದೆ ಆ ಮಾತೆ
‘ನಿದ್ದೆಯೊಳೇತಕೊ ಮಗು ಕುಮುಟುತ್ತಿದೆ;
ದುಃಸ್ವಪ್ನಕೆ ಹುಬ್ಬನು ಸೆಡೆಯುತ್ತಿದೆ;
ಒಳಿತಾಗಲಿ, ಶಿವ, ಪುಣ್ಯಂ ಬತ್ತದೆ!’
ಎಂಬಳು ಪ್ರೇಮಾಕುಲ ಭೀತೆ!

ತಾರಾ ಗರ್ಭಿಣಿಯಾಗಿಹ ಸೃಷ್ಟಿ;
ನಕ್ಷತ್ರ ಪ್ರಸವದ ಸಂತುಷ್ಟಿ;
ಗ್ರಹ ನಿರ್ಮಾಣದ ವರ್ತುಲ ವೃಷ್ಟಿ;
ಮೇಣ್‌ಪ್ರಾಣೋದಯದಾನಂದ;
ಸ್ಥಲ ಜಲ ಸಸ್ಯದ ಪ್ರಾದುರ್ಭಾವ;
ಪ್ರಥಮ ರಚನೆಗಳ ಕಾವ್ಯಾಭಾವ;
ಜನ್ಮಾಂತರ ಸಂಸ್ಕಾರ ಪ್ರಭಾವ:
ಶಿಶು ಸ್ವಪ್ನದ ರಚನಾ ಬಂಧ!

ಕರ್ಬುದ ವಿಶ್ವಗಳವಶಂ ಬಿದ್ದಿವೆ;
ಅರ್ಬುದ ತಾರಗಳಕ್ಷರ ತಿದ್ದವೆ;
ಅರ್ಭಕ ಹೃದಯದಿ ಕುದಿಕುದಿದೆದ್ದಿವೆ
ಪೂವಾದ್ಭುತ ಜನ್ಮ ಸ್ಮರಣೆ!
ಬಹುಶಃ ಪ್ರಥಮ ಸಮುದ್ರದ ಬಾಳೋ?
ಬಹುಶಃ ಭೀಷಣ ವ್ಯಾಳದ ಗೋಳೋ?
ಮೀನಿನ, ಹಕ್ಕಿಯ, ಮಂಗನ ಪಾಳೋ?
ಮೇಣ್‌ಸಂಮಿಶ್ರವೋ ಆ ಸ್ಮರಣೆ?

ಅಥವಾ ವಿಜ್ಞಾನ ನಿಸರ್ಗಕ್ಕೆ
ಗೋಚರವಾಗದ ಆ ಸ್ವರ್ಗಕ್ಕೆ
ಪರಮ ಪರಾತ್ಮದ ಸಂಸರ್ಗಕ್ಕೆ
ಕೂಸಿನ ಕನಸೇರಿಹುದೇನೊ!
ಅಥವಾ ಮುಂದಣ ದಃಖಕೊ ಸುಖಕೋ?
ಪ್ರಕೃತಿಯ ಶೋಣಿತ ಶೋಷಕ ನಖಕೋ
ಅಥವಾ ಚುಂಬಿಪ ಸುಂದರ ಮುಖಕೋ?
ಅಥವಾ – ಯಾವುದಕೋ ಏನೋ?

ಹಸುಗೂಸಿನ ಕನಸದು ಬಲು ಆಳ:
ಅದಕಿಲ್ಲವು ಆದ್ಯಂತ್ಯದ ಕಾಲ!
ಕಿರುಕವನದೊಳಿರಲಾರದೆ, ಹೇಳ,
ಗಾನದ ಕೊನೆಗಾಣದ ಅರ್ಥ?
ಕಡೆಜಾವದ ಇರುಳಿನ ತೊಡೆಮೇಲೆ
ಮೂಡುವ ಉಷೆಯ ನಿಮೀಲಿತದೋಲೆ
ಶಿಶು ಮಲಗಿರೆ, ಕಾವ್‌ಕೂತಿದೆ ಮೇಲೆ
ಮಾತೃಪ್ರೇಮದ ನಿಃಸ್ವಾರ್ಥ.

೨೬-೮-೧೯೩೬