ಗರಿಗರಿಯಾಗಿದ್ದಾ ‘ಗಾಳಿಯ ಮರ’ಗಳ ಹಿಂದೆ
ಹೊಮ್ಮಿತು ತಣ್ಣಗೆ ಹೊಂಬಣ್ಣದ ಪ್ರಾತಃಸಂಧ್ಯೆ.
ಚಿನ್ನದ ನಗೆವೆಳಗನೆ ಚಿಮುಕಿಸುವಾಕಾಶ ಪಟಕ್ಕೆ
ಬೀಳುತ್ತೇಳುತ ನೆಟ್ಟಗೆ ಸೊಟ್ಟಗೆ ಎದುರಾಗಿ
ದೀರ್ಘದಿಗಂತದ ಫಣಿಸಮ ರೇಖೆ
ಹರಿಹರಿಹರಿಯಿತು ತೆರೆತೆರೆವೋಗಿ.
ಸುತ್ತಮುತ್ತಲಿರೆ ಬತ್ತದ ಪೈರಿನ ಹಳದಿ ಬಿತ್ತರದ ಬೈಲು,
ಸಾಗಿರಲಲ್ಲಲ್ಲಿಯೆ ಗೆದ್ದೆಯ ಕೊಯ್ಲು,
ಸಾಗಿತು ಬುಹುಜವದಲಿ ಕಬ್ಬಿಣಸದ್ದಿನ ರೈಲು.

ಕಾರ್ತಿಕಮಾಸದ ಫಲಿತವ್ರೀಹಿಯ ವಿಸ್ತೀರ್ಣದ ಮಧ್ಯೆ
ಹಸುರಾಗೆಸೆದುದು ಆಳೆತ್ತರ ಬೆಳದಿಹ ಕಬ್ಬಿನ ಗದ್ದೆ; . . .
ಲಂಬಗ್ರೀವದ ಬಕದ ಕುತಂತ್ರಧ್ಯಾನದ ನಿದ್ದೆ! . . .
ಹುಚ್ಚೆಳ್ಳಿನ ಹೊಲ ಕಣ್ಣಿಗೆ ಹೂ ಹೊನ್ನನೆ ಮೆತ್ತಿ
ಹಿಂದೋಡುತ್ತಿದೆ ನೋಡದೊ ಬೋರೆಯ ಹತ್ತಿ . . .
ಆಃ ಕಣ್ಮರೆಯಾಯಿತು! ಕಾಣದೊ ಗುಡ್ಡದ ನೆತ್ತಿ! . . .

ಅಃ! ಮತ್ತೇನಿದು ಗಡಿಬಿಡಿ ಸದ್ದು?
ಕಲ್ಲುಕಬ್ಬಿಣದ ಕರ್ಕಶತರ ಸ್ಪರ್ಧೆಯ ಸದ್ದು!
ಆ ಕಡೆ ಕಲ್ಲು!
ಈ ಕಡೆ ಕಲ್ಲು!
ನೋಟವೆ ಕಣ್ಣಿಗೆ ಗರಗಸಹಲ್ಲು!
ಓಹೋ ತಿಳಿಯಿತು: ಪೂರೈಸಿತು ಬೈಲು;
ಕಂದಕದಾರಿಯೊಳೋಡುತಲಿದೆ ಸಿಲ್ಪಿಯನೂದುತ ರೈಲು!
ಕಣ್ಮುಚ್ಚದೆ ನೆರೆ ನೋಡೆ
ಭರದಲಿ
ಗಾಡಿಯ ಕಿಟಕಿಯ ಕೀಸುವ ತೆರದಲಿ
ಧಾವಿಸುತಿಹುದಿಕ್ಕಡೆ ಕಗ್ಗಲ್ಲಿನ ಗೋಡೆ! . . .

ನೋಡದೊ ಮತ್ತೆ,
ನಗುತಿದೆ ಹೃದಯಂಗಮ ದೃಶ್ಯವು ಕಂಗೊಳಿಸುತ್ತೆ:
ಕನ್ನಡಿಯೊಲು ಮಿರುಗುತ್ತಿದೆ ಆ ಕೆರೆ
ಚಿನ್ನದ ಗೆರೆ ಪ್ರತಿಬಿಂಬಿಸಿರೆ! . . .
ಆ ಮರಗಳ ಮರೆಯಲಿ ನೋಡಲ್ಲಿ
ಹದುಗಿದೆ ಕೈಹೆಂಚಿನ ಮನೆಗಳ ಬಡಹಳ್ಳಿ. . .
ಹಳದಿ ಗದ್ದೆಗಳ ನಡುನಡು ನೋಡು:
ರೈತರ ಗೆಯ್ಮೆಯ ನೆಲ್ಬಣಬೆಯ ಗೂಡು!. . .
ಕಡುಹಸುರೆಸಳಿನ ನೀರುಳ್ಳಿಯ ಹೊಲ,
ಬಿತ್ತರದೆಲೆಗಳ ಹೊಗೆಸೊಪ್ಪಿನ ಹೊಲ,
ಕಿರುಬಿಳಿ ಹೂವಿನ ಕೊತ್ತುಂಬರಿ ಹೊಲ,
ಹೊನ್ನಿನ ಹೊನಲಿನ ಹುಚ್ಚೆಳ್ಳಿನ ಹೊಲ,
ಕನ್ನಡ ನಾಡಿನ ಸಂಪತ್ತಿನ ನೆಲ . . .
(ರೈತನ ಬಡತನ ಮಾತ್ರ ಸುನಿಶ್ಚಲ). . .

ರೈಲಿನ ಕಿಟಕಿಗೆ ಕಣ್ಮುಚ್ಚಿ,
ರಷ್ಯಾದೇಶದ ವಿಪ್ಲವ ಚರಿತೆಯ ಹೊತ್ತಗೆಯನು ಬಿಚ್ಚಿ
ಓದುತ ಕುಳಿತೆನು ಸಂಕಟವತಿ ಹೆಚ್ಚಿ! . . .
‘ಕಲ್ಪನೆ’ಯಲಿ ರಕ್ತವ ಕಾರುತ್ತಿರೆ ರೈತನ ಪ್ರಾಣ
ಕೆಮ್ಮನೆ ಧಿಮ್ಮನೆ ಸಾಗಿತು ಕಾಲಾಯಸ ಯಾನಃ
ಯಾಂತ್ರಿಕ ನವನಾಗರಿಕತೆಯುಪಮಾನ!

೧೬-೧೨-೧೯೩೪