ಬೇಸಗೆಯ ಬಿಸಿಲು ಸುಡುತಿಹುದು ಸುಡುಸುಡನೆ;
ಮೂರ್ಛೆ ಹೋಗಿದೆ ಭೂಮಿ ನಡುಗಿ ನಡನಡನೆ!
ಹರಿಯುತಿದೆ ಬಯಲಿನಲಿ ಕಂಬಿ ದಾರಿ
ಕರ್ಕಶದ ಕಟುನೀಲ ಕಾಂತಿಯನು ಕಣ್ಗೆ ಕಾರಿ:
ದೂರ, ಸಮದೂರವಾಗಿ,
ದಿಙ್ಮೂಲೆಯಿಂ ಬಂದು ದಿಙ್ಮೂಲೆಗಾಗಿ
ವೇಗದಿಂದೋಡುತಿರುವೆರಡು ಕಾಳಾಹಿಗಳ ಹೋಲಿ;
ನೂತ್ನನಾಗರಿಕತೆಯ ಯಂತ್ರಾಸ್ಥಿಪಂಜರದಿ
ಕಬ್ಬಿಣದ ಹೃದಯಕ್ಕೆ ಹೊತ್ತು ರಕ್ತವ ಭರದಿ
ಪ್ರವಹಿಸುವ ಲೌಹ ರೇಖಾ ನಾಳಗಳ ಹೋಲಿ;
ಕರ್ಕಶದ ಕಟುನೀಲ ಕಾಂತಿಯನು ಕಣ್ಗೆ ಕಾರಿ
ಹರಿಯುತಿದೆ ಕಂಬಿದಾರಿ!

ಬಡಕಲಾಗಿಹ ಹಸುವು ಬರಿಬಯಲ ಮೇಯುತಿದೆ;
ತನ್ನ ನೆಳಲೂ ತನಗೆ ಕಾವಾಗಿ ಸಾಯುತಿದೆ!
ಎಲೆಯಿದಾ ಮರವೊ ಮಳೆಯ ಹಾರೈಸಿತಿದೆ;
ಅದರ ನೆಳಲೆಲುಬುಗೂಡನೆ ಬಿಸಿಲು ದಹಿಸುತಿದೆ!
ಶಬ್ದ ನಿಶ್ಯಬ್ದವಾಗಿದೆ ಮಹಾ ಶೂನ್ಯತೆಯ ಶವದಂತೆ,
ವೈಶಾಖರುದ್ರನ ಸಮಾಧಿಯಂತೆ?
ಯಾವುದನು ಲೆಕ್ಕಿಸದೆ ಕಂಬಿದಾರಿ
ಬಿಸಿಲ ಝಳದಲಿ ಇನಿತು ಕಂಪನವ ತೋರಿ,
ಕರ್ಕಶದ ಕಟುನೀಲ ಕಾಂತಿಯನು ಕಣ್ಗೆ ಕಾರಿ
ಹರಿಯುತಿದೆ ರೈಲುದಾರಿ!

ನೋಡುತಿಹುದಿದ್ದಕಿದ್ದಂತೆ ಹಸು ಕೊರಳನೆತ್ತಿ:
ತನ್ನ ಸದ್ದನೆ ತಾನು ಬಿಡದೆ ಬೆಂಬತ್ತಿ
ಬಂದಿತದೊ ನಾಗರಿಕತೆಯ ಮಾರಿ ಬೋರೆ ಹತ್ತಿ!
ರೈಲು ಬಂದಿತು, ರೈಲು!
ಜಾಗರಿತವಾಗುತಿದೆ ಪ್ರಜ್ಞೆಯಿಲ್ಲದ ಬೈಲು!

ಕರಿಯ ತಲೆ, ಗಾಜುಗಣ್ಣು;
ಬಾಯಲ್ಲಿ ಹೊಗೆ, ಮೂಗಿನಲ್ಲಿ ಕಿಡಿ, ‘ರೈಲಿನೆಂಜಿಣ್ಣು’!
ಹರಿಯುತಿದೆ ಗಡಗಡನೆ ಸದ್ದುಮಾಡಿ
ದೊಡ್ಡದೊಂದೊನಕೆ ಹುಳು! ಹೊಟ್ಟೆಯೆಲ್ಲಾ ಗಾಡಿ!
ಸಿಳ್ಳು ಹಾಕುತಿದೆ; ಕಿಡಿಯ ಸೂಸುತಿದೆ;
ಹೊಗೆಯನೂದುತಿದೆ; ನುಗ್ಗಿಯೋಡುತಿದೆ!
ಜನರು ಕೂತಿಹರೇನು?
ಸಾಗುತಿಹವೇನು ಸಾಮಾನು?
ಅಲ್ಲ; ರೈಲೋಡುತಿದೆ!
ಮಾನವರೊ? ಸಾಮಾನೊ? ಏನಾದರೇನಂತೆ?
ಯಂತ್ರಕೇಕಾ ಚಿಂತೆ? ಅಂತು ರೈಲೋಡುತಿದೆ!

ಸದ್ದು ಸತ್ತಿತು; ಕಣ್ಣುಮರೆಯಾಯ್ತು ರೈಲು;
ಪ್ರಜ್ಞೆ ತಪ್ಪಿದೆ ಮತ್ತೆ ಬಿಸಿಲಿನಲಿ ಬೈಲು!
ಏನೊಂದು ಕ್ಷಣಕಾಲದಲಿ ಮಿಂಚಿ ಮರೆಯಾಯ್ತು;
ಬಯಲ ನಿದ್ದೆಯು ಕಂಡ ಕೆಟ್ಟ ಕನಸಾಯ್ತು!
ಹಾ! ಕತ್ತರಿಸಿದೊಂದು ನರವೆ ಸಾಕು
ನೆತ್ತರನು ಶೋಷಿಸಲು! ಇನ್ನೇನು ಬೇಕು?
ಈ ಕಬ್ಬಿಣದ ಕಂಬಿದಾರಿ
ಅಲ್ಲಿ ಮೇಯುವ ದನದ ರಕ್ತವನು ದಿನದಿನವು ಹೀರಿ
ಕೊಂಡೊಯ್ವ ನಾಗರಿಕತೆಯ ನಾಡಿ,
ಎನಲು ನಂಬುವರಾರು? ಆದರೂ ನಂಬದಿರಬೇಡಿ!

ಸದ್ದು ಸತ್ತಿದೆ! ಎಲ್ಲಿ ಹೋಯ್ತೊ ಏನೋ ರೈಲು?
ಮೂರ್ಛೆ ಹೋಗಿದೆ ಮತ್ತೆ ಬಸಿಲಿನಲಿ ಬೋಳು ಬೈಲು!
ಕರ್ಕಶದ ಕಟುನೀಲ ಕಾಂತಿಯನು ಕಣ್ಗೆ ಕಾರಿ,
ಹರಿಯುತಿದೆ, ಹರಿಯುತಿದೆ, ಹರಿಯುತಿದೆ ರೈಲುದಾರಿ,
ಕಂಪಿಸುವ ಕಬ್ಬಿಣದ ಕಂಬಿದಾರಿ!

೧೬-೩-೧೯೩೪