ಸರ್ವವ್ಯಾಪಿ ಮೇಘರಾಹು
ರವಿಯ ನುಂಗಿದೆ;
ಬಿಸಿಲ ಬೇಗೆ ಹಿಂಗಿದೆ.
ಭೀಮ, ದೀರ್ಘ, ವ್ಯೋಮಚುಂಬಿ,
ವರ್ಶಸ್ನಾತ ಚಿರ ಶ್ಯಾಮ
ಗಿರಿ ಅರಣ್ಯ ಶ್ರೇಣಿ ಶ್ರೇಣಿ
ಶ್ರೇಣಿ ಹಬ್ಬಿದೆ;
ಮಬ್ಬು ಹಿಡಿದು ತಬ್ಬಿದೆ!
ಸಿಡಿಲ ನಿದ್ದೆಯಂತೆ ಮೌನ
ಭೀಷ್ಮವಾಗಿದೆ;
ನಿಶ್ಚಲತಾ ನೀರವತಾ
ಗ್ರೀಷ್ಮವಾಗಿದೆ:
ಪಕ್ಷಿಗಾನ ಸೆಡೆತಿದೆ;
ವೃಕ್ಷ ಚಲನೆಯುಡುಗಿದೆ;
ಬರೆದ ವರ್ಣಚಿತ್ರದಂತೆ
ಜಗತ್ ಮೂಕವಾಗಿದೆ;
ಲೋಕನಯನಕಶ್ರುಪೂರ್ಣ
ಮಹತ್ ಶೋಕವಾಗಿದೆ;
ಕರ್ಮಹೀನ ಕವಿಯ ಮನಕೆ
ಲಸತ್ ನಾಕವಾಗಿದೆ!

೧೮-೫-೧೯೩೬