ಕದನವು ಮುಗಿದಿತ್ತು; ಜಯ ಕೈಸೇರಿತ್ತು;
ರಕ್ತದ ರಣರಂಗಕೆ ಬೆಳ್ದಿಂಗಳು
ಹಾಲನು ಹೊಯ್ದಿತ್ತು;
ರಾತ್ರಿಯ ನಿಶ್ಯಬ್ದತೆ ಮೆಯ್ಯಿಲ್ಲದ
ಶವದೊಲು ಬಿದ್ದಿತ್ತು!

ಶಿಬಿರದ ಹೊರಗಡೆ ದಳಪತಿಯೊಬ್ಬನೆ
ಕುಳಿತಿದ್ದನುಚಿಂತೆಯೊಳದ್ದಿ;
ಹೆಡೆಮುಚ್ಚಿದ್ದಿತು ಜ್ಯೋತ್ಸ್ನಾ ಮಂತ್ರದಿ
ವಿಜಿಗೀಷುಗೆ ಹಿಂಸಾಬುದ್ಧಿ.
ಭೀಷಣ ರಣದೊಳು ಗೆಲ್ದಾ ಕಣದೊಳು
ತನ್ನವರನ್ಯರ ಸೈನಿಕ ಶವಗಳು
ಬಿದ್ದಿದ್ದುವು ರಾಶಿಯೆ ರಾಶಿ;
ನರಳಿದ್ದಿತು ಮೆಲುಗಾಳಿಯು ಸುಯ್ಯನೆ
ಹೆಣಗಳ ಕೊಳೆಗಂಪನು ಮೂಸಿ!

ಕಣ್ಣೆವೆಯಿಕ್ಕದೆ ಚಿಂತಿಸುತಿದ್ದಾ
ಸೇನಾನಿಯು ಕಂಡನದೇನು?
ಪ್ರಾಣವಿಹೀನತೆ ಮೈವೆತ್ತಾಯೆಡೆ
ಚಲಿಸುತ್ತಿದೆ! ಪ್ರಾಣಿಯೆ ಏನು?
ನೋಡಿದರಲ್ಲೊಂದಿದೆ ಬಡನಾಯಿ!
ಏಂ ಗೈಯುತ್ತಿದೆ ಆ ಬಡಪಾಯಿ?
ಮಡಿದೊಬ್ಬಾಳಿನ ಹೆಣದೆಡೆ ನಿಂತು
ಮೌನದಿ ದುಃಖವ ತೋಡಿತ್ತು;
ಕದನದಿ ಕೆಡೆದಾ ತನ್ನಾ ಸ್ವಾಮಿಗೆ
ಪ್ರೀತಿಯ ಮುದಿಪನು ನೀಡಿತ್ತು.

ದೂರದಿ ದಳಪತಿಯಿರಲದ ಕಂಡು
ಮೆಲ್ಲನೆ ನಾಯಾತನ ಬಳಿ ಹೋಯ್ತು;
‘ಬದುಕಿಸು ನನ್ನೊಡೆಯನ ದಮ್ಮಯ್ಯ’
ಎಂಬೊಲು ದಳವಾಯಿಯ ನೋಡಿತ್ತು:
ನೋಡುತ ಮುಖವನೆ ಸುಮ್ಮನೆ ನಿಂತಿರೆ
ನಾಯಿಯ ಕಣ್ ದೇವರ ಕಣ್ಣಾಯ್ತು!

ವಿಜಯಿ ನೆಪೋಲಿರ್ಯ ನೋಡುತ್ತಿರೆಯಿರೆ
ನರದೃಷ್ಟಿಗೆ ಮೃಗದೃಷ್ಟಿಯು ಸೇರಿರೆ
ಗೋಚರಿಸಿತ್ತಾ ಪಕ್ಷದಿ ನೀತಿ,
ನಾಯಿಯ ಹೃದಯದ ಸ್ವಾಮಿಪ್ರೀತಿ:
ದಳಪತಿಯಲಿ ಸಂಚರಿಸಿತು ಒಡನೆಯೆ
ಆವುದೊ ಭಯಾವಲ್ಲದ ಭೀತಿ!

ಬಡನಾಯಿಯು ತುಸು ಹೊತ್ತಿನವೊಳಗೆ
ಹಿಂತಿರುಗಿತು ತನ್ನೊಡೆಯನ ಬಳಿಗೆ;
ನಾಲಗೆಯಿಂದಾ ಶವವನು ತೀಡಿ
ಮತ್ತೆ ಮತ್ತೆ ದಳಪತಿಯನು ನೋಡಿ
ಕಡೆಗಾಕಾಶಕೆ ಮೊಗಮಾಡಿ
ಪಳಯಿಸತೊಡಗಿತು ಸದ್ದಿಲಿಯಿರುಳನು
ನಿಡುರೋದನದಲಿ ಕಡೆದಾಡಿ!

ಸಾವಿರ ಸಮರವ ಗೆಲಿದಾ ದಳಪತಿ-
ಪಡೆಪಡೆಗಳನೇ ಕೊಲಿಸಿದ ದಳಪತಿ
ಲಕ್ಷಲಕ್ಷ ನರರಳಲನು ಕೇಳಿ
ಕಲ್ಲಾಗಿದ್ದೆದೆ ಮರುಕವ ತಾಳಿ-
ಅತ್ತನು ನಾಯಿಯ ಕ್ಷಮೆಬೇಡಿ;
ನೆತ್ತರ ಕಾಲುವೆ ಹರಿಸಿದ ತಪ್ಪಿಗೆ
ಕಣ್ಣೀರ್ ಗಂಗೆಯೊಳಳ್ದಾಡಿ!

ಬಡ ನಾಯಿಯು ಗೋಳೆಂದುಳುತಿತ್ತು;
ಮಡಿದೊಡೆಯಗೆ ಕಣ್ಣೀರಿಡುತಿತ್ತು.
ವಿಜಯಿ ನೆಪೋಲಿರ್ಯ ಮರುಕದಿ ಕರಗಿ
ಶಿಬಿರಕೆ ನಡೆದೈತಂದನು ತಿರುಗಿ:
ಕೈಯಲ್ಲಿದ್ದುದು ತುಂಬಿದ ಕೋವಿ!
ಒರಲುವ ನಾಯಿಗೆ ಗುರಿಯಿಟ್ಟೋವಿ
ಕದುರೆಯನೆಳೆದನು ಬಿಲ್ಲೊತ್ತಿ;
ಢಮ್ಮೆಂದೊಡನೆಯೆ ಮಲಗಿತು ನಾಯಿ
ಒಡೆಯನ ಒಡಲಿಗೆ ಮೈಯೊತ್ತಿ!

೧೮-೬-೧೯೩೬