ಸೋವಿಯಟ್ ರಷ್ಯಾಕ್ಕೆ ನಾನೊಮ್ಮೆ ಹೋಗಿದ್ದೆ,
ಮನಸಿನಲ್ಲಿ;
ಬಂದಿರಲು ಗಾಢನಿದ್ದ,
ಕನಸಿನಲ್ಲಿ! –

ಶ್ರೀಮಂತರಿರಲಿಲ್ಲ: ಶ್ರೀಮಂತರೇ ಎಲ್ಲ!
ಆಳ್ವರಸರಲ್ಲಿಲ್ಲ; ಅರಸರೇ ಆಳ್ಗಳೆಲ್ಲ!
ಹೆಚ್ಚು ಕಡಮೆಗಳಿಲ್ಲ; ಮೇಲು ಕೀಳುಗಳಿಲ್ಲ;
ಕೆಲಸವಿಲ್ಲದ ಅಲಸಗಾರನಿಗೆ ಅಲ್ಲಿ ಕೂಳಿಲ್ಲ;
ಕೆಲಸವೆಂದರೆ ಉಸಿರು! ಕಲಸವೇ ಬಾಳೆಲ್ಲ!
ಆಳು ತನಗಾಗಿ ತಾ ದುಡಿಯಬಾರದು ಅಲ್ಲಿ:
ದುಡಿಮೆಯನಿಬರಿಗಾಗಿ; ತಾನೊಬ್ಬನನಿಬರಲ್ಲಿ!
ಸರ್ವಮನುಜರಿಗಾಗಿ ಸೃಷ್ಟಿ
ಎಂಬ ಸಮದೃಷ್ಟಿ! –
ಎಲ್ಲವರ ಸುಖಕಾಗಿ ಗೆಯ್ಯಬೇಕೆಲ್ಲ;
ಆದರೂ ಸುಖಿಗಳೆನಗೊಬ್ಬರೂ ಕಾಣಲಿಲ್ಲ! –
ಕೈಯ ಗೆಯ್ಮೆಯ ಬೆವರು ದಣಿವುಗಳಿಗದು ಬೀಡು.
ಕನಸೆಂದರಾಗದವರಿಗೆ: “ತಳ್ಳು! ಕನಸನಾಚೆಗೆ ದೂಡು!”
ಆದರೂ ಮುಂದೆ ಸೊಗವಹುದೆಂಬ ಹೆಗ್ಗನಸಿನಡಿಗಳಲಿ
ಕನಸಿನಾ ಹಗೆಗಳೆಲ್ಲರು ಕುರಿಗಳಂತೆ ಬಲಿ!
ನೋಡುವವರಿಗೆ ದೊಡ್ಡ ಜೈಲು;
ಮಾಡುವವರಿಗೊ ಬರಲಿರುವ ಸೊಗಕೆ ಸುಗ್ಗಿ ಕೊಯಿಲು!

ಮಾರ್ಗದರ್ಶಿಯ ಕೂಡಿ ನೋಡುತ್ತ ಹೋದೆ;
ನೋಡಿದಂತೆಲ್ಲ ನಾ ಬೆಪ್ಪುಬೆರಗಾದೆ;
ಯಂತ್ರನಾಗರಿಕತೆಯ ವಿಜ್ಞಾನ ಬುದ್ಧಿ
ತಾನಲ್ಲಿ ಪಡೆದಿತ್ತು ಪರಮ ಸಿದ್ಧಿ.
ಹೊಲದಲ್ಲಿ ಮನೆಯಲ್ಲಿ ಹಳ್ಳಿಯಲ್ಲಿ ನಗರದಲಿ,
ಪಂಕ್ತಿ ಪಂಕ್ತಿಯ ಯಂತ್ರವೆಲ್ಲಿ ನೋಡಿದರಲ್ಲಿ.
ದೇಶವೆಲ್ಲವು ದೊಡ್ಡದೊಂದು ಕಾರ್ಖಾನೆ:
ಪ್ರತಿಯೊಬ್ಬ ಮಾನವನು ಯಂತ್ರದಂತಿದ್ದಾನೆ!
ಮಾತನಾಡುವುದಿಲ್ಲ ಯಾರೊಬ್ಬರೂ ಒಂದು ಸೊಲ್ಲು:
ಹರಟೆಯಲಿ ಕಾಲ ಕಳೆದರೆ ಶಿಕ್ಷೆ – ಗಲ್ಲು!
ಉತ್ಪತ್ತಿ, ಉತ್ಪತ್ತಿ, ಉತ್ಪತ್ತಿ ಮತ್ತೆ ಉತ್ಪತ್ತಿ:
ಸೋವಿಯಟ್‌ ವೈಷ್ಣವರ ಧರ್ಮಕದು ಪರಮ ಪ್ರಪತ್ತಿ!
ಮಾತಾಡಲಿಲ್ಲ ನಾನೊಂದು ಸೊಲ್ಲು;
ಎಲ್ಲಿಯಾದರು ತಪ್ಪಿ ನುಡಿದರೆ ತಲೆಗೆ ಕಲ್ಲು!

ಮಾರ್ಗದರ್ಶಿಯ ಕೂಡೆ ನಡೆದು ಮುಂದೆ
ಕಂಡು ಸೋಜಿಗಗೊಂಡು ನಾನೆಂದೆ:
“ಏನದಾ ಕರಡಿ ಕಪಿಗಳ ದೊಡ್ಡ ಮಂದೆ
ತಿರುಗುತಿದೆ ಬಯಲಿನಲಿ ಹಿಂದೆ ಮುಂದೆ?”
ಹೇಳಿದನು ಅವನು ಕನಿಕರದ ನಗೆಗೂಡಿ
ಪೆಚ್ಚಾದ ನನ್ನ ಮೋರೆಯ ತಿವಿದು ನೋಡಿ:
“ನರರಾದರೇನಂತೆ? ಮೃಗವಾದರೇನಂತೆ?
ರಷ್ಯದಲ್ಲಿ ಸೋಮಾರಿಗೆಡೆಯಿಲ್ಲ, ಕೂಳಿಲ್ಲ;
ಪ್ರಾಣಿಗಳಿಗೂ ಇಲ್ಲಿ ಸಾಮ್ಯವಾದದ ಚಿಂತೆ!
ದುಡಿಯದಿರೆ ಮಿಡಿಹಕ್ಕಿಗಾದರೂ ಒಂದು ಕಾಳಿಲ್ಲ! –
ಕರಡಿ ಕಪಿಗಳಲ್ಲಿ ನಡೆಯುತ್ತಿದೆ ಡ್ರಿಲ್ಲು,
ಮುಂದೆ ಬರಲಿಹ ಸಮರಕಿಂದೆ ಸಮೆಯುತಿದೆ ಬಿಲ್ಲು –
ಬಾಳೆಂಬುದೊಂದು ನಿಷ್ಕರುಣ ಮಿಲ್ಲು;
ಸರ್ವ ಪ್ರಾಣಿಗಳದೆ ಬೀಸುವಾ ನಿಲ್ಲು;
ಎಂಬುದೆಮ್ಮಯ ತತ್ವದಡಿಗಲ್ಲು!”
ತಪ್ಪಿ ನುಡಿದರೆ ತಲೆಗೆ ಕಲ್ಲು
ಎಂದು ನಾ ಮಾತಾಡಲಿಲ್ಲೊಂದು ಸೊಲ್ಲು.
ನೋಡುತ್ತ ನೋಡುತ್ತ ನೋಡುತ್ತ ಹೋದೆ ಹೋದೆ ಹೋದೆ;
ಅದ್ಭುತದ ಮೇಲದ್ಭುತವ ಕಂಡು ಬಾಯಿಲ್ಲದಾದೆ:
ಕತ್ತೆ ಹಿಂಡಿಗೆ ಒಂದು ಕಡೆಯಲ್ಲಿ ಸಾಮ್ಯವಾದದ ಬೋಧೆ
ಭರದಿಂದ ಸಾಗುತ್ತಿತ್ತು;
ಮತ್ತೊಂದು ತಾಣದಲಿ ಹಂದಿಯೊಂದಕೆ ಕಠಿನ ಶಿಕ್ಷೆ;
ಕಿರ್ರೆಂದು ಕೂಗುತ್ತಿತ್ತು!
ಸಾಮ್ಯವಾದದ ನೀತಿಯನು ಮೀರಿ ತಿಂದಿತಂತೆ;
ಅದರಿಂದ ಆ ಹಂದಿ ಕ್ಯಪಿಟಲಿಸ್ಟಂತೆ!

ಮಾರ್ಗದರ್ಶಿಯ ಕರೆಗೆ ಮುಂಬರಿಯುತಿದ್ದೆ;
ಕಾಲು ಕಾಲಿಗೆ ತಗುಲಿ ಎಡವಿ ಬಿದ್ದೆ.
ಮೈಕೊಡವಿಕೊಳ್ಳುತ್ತ ಫಕ್ಕನೆಯ ಮೇಲೆದ್ದು
ನಿಂತಿರಲು, ಕೇಳಿಸಿತ್ತಲ್ಲಿ ಪಕ್ಕದೊಳೊಂದು ನರಳು ಸದ್ದು.
ನೋಡಿದರೆ ಆ ಸಂದಣಿಯ ಗಲಿಬಿಲಿಯ ಹೋರಟೆಯ ಮಧ್ಯೆ,
ಯಂತ್ರ ಸಂಕುಲ ಕಾರುತಿಹ ಧೂಮಮಧ್ಯೆ,
ಬಿಡುವಿರದೆ ತಿರುಗುವಾ ಯಾನ ಚಕ್ರದ ಧೂಳಿಯಲ್ಲಿ,
ಹಸುರೆಂಬ ಮರವೆಂಬ ಹೆಸರಿರದ ಆ ತಾಣದಲ್ಲಿ,
ಅಯ್ಯೊ ಆ ಬಟ್ಟಬಯಲಿನ ಹಾಳು ಬಹಿರಂಗದಲ್ಲಿ,
ಕೋಗಿಲೆಯದೊಂದು ಕರ್ರಗೆ ಹುದುಗಿ ಕೂತಿತ್ತು;
ಕಃಪದಾರ್ಥವದಾಗಿ ಲಕ್ಷ್ಯಬಾಹಿರವಾಗಿ ನರಳಿ ಕೂತಿತ್ತು!
ನಳನಳಿಪ ಮಾಮರದ ಕೆಂದಳಿರನುಂಡು
ಕುಕಿಲವಾ ಚೈತ್ರದೂತನ ದಃಸ್ಥಿತಿಯ ಕಂಡು
ನೋವಿನಿದಲುಗಾಡದಾದೆ ಬೆಕ್ಕಸಗೊಂಡು.
ಹೇಳಿತದು ಕಣ್ಣೀರು ಕರೆದು
ಯಂತ್ರಪಕ್ಷಿಯ ತೆರದಿನಿಂಚರವ ತೊರೆದು
ಕರ್ಕಶಧ್ವನಿಯಿಂದೆ ಮೊರೆದು:
“ಕವಿವರ್ಯ, ಇದುವರೆಗೆ ಸಂಸಾರ ಕಷ್ಟಗಳನುಳಿದು,
ಸುಖಗಳನೆ ಮಾತ್ರ ತಿಳಿದು,
ವನವನವ ಸಂಚರಿಸಿ, ಹಾರಾಡಿ, ಹಾಡಿ,
ಹಣ್ಣು ಹಂಪಲು ತಿಂದು, ಬೇಟದಲಿ ಜತೆಗೂಡಿ,
ಹೆತ್ತು ಸಲಹುವ ಹೊರೆಯ ಹೊಣೆಯನೀಡಾಡಿ,
ಕಾಗೆಗಳ ಗೂಡಿನಲಿ ಮೋಸದಿಂ ಮೊಟ್ಟೆಯಿಟ್ಟು,
ಮರಿಗಳಾರೈಕೆಯನು ಅವುಗಳಿಗೆ ಬಿಟ್ಟು
ನಲಿದಿದ್ದೆ ಕವಿಸ್ತುತಿಯ ಸೂರೆಮಾಡಿ.
ಕಾಗೆಗಳೊ, (ಬುದ್ಧಿಯಿಲ್ಲದ ಪೆದ್ದ ಪ್ರೊಲಿಟೇರಿಯಟ್ಟು!)
ಚೈತ್ರದಲಿ ರಟ್ಟಾಗುವನ್ನೆಗಂ ಗುಟ್ಟು
ತಮ್ಮ ಮರಿಗಳ ಕೂಳನನ್ಯರ್ಗೆ ಗುಟುಕು ಕೊಟ್ಟು
ಕೊಳುಹೋಗುತ್ತಿದ್ದುವಂದು ಜ್ಹಾರ್ ಇದ್ದಯುಗದಲ್ಲಿ!
ಇಂದು, ಈ ವಿಪರೀತ ಕಾಲದಲ್ಲಿ,
ನನ್ನ ಮೊಟ್ಟೆಯ ಮೇಲೆ ನಾನೆ ಕಾವಿಗೆ ಕೂತು
ಮರಿಮಾಡಬೇಕೆಂದು ಸೋವಿಯಟ್‌ ತಾಕೀತು!
ಮರದ ಮೇಗಡೆ ಗೂಡು ಕಟ್ಟಿದರೆ ಸಾಮ್ಯವಾದಕೆ ಕುಂದು,
ಹಂದಿಗಳ ಕರುಬಿಗೂ ಗುರಿಯಾಗಬೇಕೆಂದು
ಇಲ್ಲಿ ಮೊಟ್ಟೆಯನಿಟ್ಟು ಕಾವು ಕೂತಿದ್ದೇನೆ;
ಮೊತ್ತಮೊದಲನೆ ಹೊಚ್ಚಹೊಸ ಚೊಚ್ಚಲನುಭವಕೆ ಕಾಯುತಿದ್ದೇನೆ.”
ಕೋಗಿಲೆಯ ನುಡಿಗಳನು ನಂಬಲಾರದೆ ಮೆಲ್ಲನದನೆತ್ತಿ
ನೋಡಿದರೆ, ಕಂಡುವದೊ ದೂಳಿನಲಿ ಎರಡು ಕರಿತತ್ತಿ!
ಬಾಗಿದೆನ್ನಯ ಕಿವಿಗೆ ಕೇಳಿಸಿತು ಕೋಗಿಲೆಯ ದೀನವಾಣಿ:
“ಒಂದು ಮೊಟ್ಟೆಯನಾದರೂ ಕದ್ದುಕೊಂಡೆಯ್ಯು ನಿನ್ನೂರಿಗೆ,
ಪರಪುಟ್ಟರಿಗೆ ತವರುಮನೆಯಾದ ಮೈಸೂರಿಗೆ.”
ಪಾಪ! ಬಡ ಪ್ರಾಣಿ,
ತನ್ನೊಂದು ಮರಿಯಾದರೂ ಮಾಡಿ ನಲಿಯಲಿ ಎಂದು
ಕನ್ನಡದ ಕಬ್ಬಿಗನ ಬೇಡಿತೆಂದು,
ಮಾರ್ಗದರ್ಶಿಯ ಕಣ್ಗೆ ಬೀಳದಂತೆ,
ಒಂದು ಮೊಟ್ಟೆಯನೆತ್ತಿ, ಜೇಬಿಗಿಳಿಬಿಟ್ಟು, ನಿಂತೆ….
ಎಲ್ಲ ನೋಡಿದ ಮೇಲೆ
ಮಾರ್ಗದರ್ಶಿಯನು ಬೀಳ್ಕೊಂಡು ಬರುವಾ ವೇಳೆ,
ಜೇಬಿನಲ್ಲಿದ್ದ ಕೋಗಿಲೆಮೊಟ್ಟೆಯನು ಕೈಯೊಳಾಂತೆ;
ನೋಡುತಿರಲು ಚಿಮ್ಮಿ ನೆಗೆದಿಳೆಗೆ ಬಿತ್ತು;
ಬಿರದಯ್ಯೆ ಚೂರು ಚೂರಾದತ್ತು!
ಏನು ಕಾಣುತಿಹೆ ನಾನೆನಗೇನು ಭ್ರಾಂತೆ?
ಮೊಟ್ಟೆಯಿಂದುದ್ಭವಿಸಿದುದು ಕೋಗಿಲೆಯ ಕಂದನಲ್ಲ:
(ಸಾಮ್ಯವಾದದ ಮಹಿಮೆ! ಮೇಣದರ ಬೋಧೆ!
ಸಂತಾನ ಪರಿಣಾಮವನು ಕಂಡು ಬೆರಗಾಗಿ ಹೋದೆ!)
ಮೊಟ್ಟೆಯಿಂದೈತಂದುದೇನು? ಪಿಕಶಿಶುವಲ್ಲ! –
ಮೂಡಿಬಂದೆನ್ನ ಹಿಡಿದನು ಸೋವಿಯಟ್ಟೊಬ್ಬ ಗೂಢಚಾರ!
ಕೋಗಿಲೆಯ ಮೊಟ್ಟೆಯೊಳಗೂ ಕೂಡ ಸಾಮ್ಯವಾದ ಪ್ರಚಾರ!

೨೨-೧-೧೯೩೬