ಭುವನ ಗಗನ ಸರ್ವಗ್ರಾಸಿ
ನಿಶಾಸರಸ್ತೀರದಿ
ಶತಸಹಸ್ರದಲದ ಮಹಾ
ದಿವಾಪದ್ಮ ಮುಕುಳವಹಾ
ದಳ ದಳ ದಳವರಳುತ್ತಿದೆ
ಪೂರ್ವದಿಶಾ ದೂರದಿ!

ತಿಮಿರ ಜಲತರಂಗರಾಶಿ
ವರುಣದಿಕ್ಕಿಗುರುಳಿದೆ.
ಅರುಣತರುಣನಿನಿಯಕಾಂತೆ
ಉಷೆಯು ಹಿಡಿದ ಸೊಡರಿನಂತೆ
ಮುಗಿಲಿನಂಚು ಬಿರುಕುಗಳಲಿ
ಹೊನ್ನಿ ನುರಿಯು ಕೆರಳಿದೆ!

ಇಂಪು ಕಂಪು ತಂಪುವೆರಸಿ
ಮೆಲುಗಾಳಿಯು ತೀಡಿದೆ.
ಸುಪ್ರಭಾತ ಪಕ್ಷಿಗಾನ
ಕೇಳುತಲಿದೆ ತಾನತಾನ:
ನೀರವತಾ ನೀರಧಿಯಲಿ
ನಾದವೀಚಿ ಮೂಡಿದೆ!

ಥರ ಥರ ಥರ ಕಂಪಿಸುತಿವೆ
ತಳಿರ್ಗಳರಳಿಮರದಲಿ.
ಕಿರಣದೀಪ್ತಬಾಲಪರ್ಣ
ಗಳಲಿ ನೋಡು, ರಕ್ತವರ್ಣ!
ಚಿಮ್ಮುತಿಹುದು ರಸದ ಬುಗ್ಗೆ
ಪ್ರಕೃತಿದೇವಿಯುರದಲಿ!

ಇಂದುವದನೆ ಕುಂದರದನೆ,
ಇಲ್ಲಿ ಪ್ರಕೃತಿ ರೂಪಸಿ!
ಅಲ್ಲಿ ಭೂಮಿ ನಡುಗಿತಂತೆ;
ಲಕ್ಷ ಲಕ್ಷ ಮಡಿದರಂತೆ:
ರಕ್ತನಖಿ, ರಕ್ತಮುಖಿ,
ಅಲ್ಲಿ ಪ್ರಕೃತಿರಾಕ್ಷಸಿ!

ನೆಲವು ನಡುಗಿ ಮನೆಗಳುರುಳಿ
ಹಿರಿಯ ಕಿರಿಯರೆಲ್ಲರು
ತಾಯಿ ಕೂಸು ಗಂಡು ಹೆಣ್ಣು
ಸತ್ತರಯ್ಯೊ, ಮುಚ್ಚಿ ಮಣ್ಣು!
ಏಕೆ? ಇದಕೆ ಹೊಣೆಯದಾರು?
ಯಾರು ಹೇಳಬಲ್ಲರು?

ಕೆಲರು ಹೇಳಬಲ್ಲರಂತೆ!
ಏನು ಹೇಳಬಲ್ಲರು?
ನಡುಗಿತೆಂದು ಹೇಳುವುದನೆ
‘ಭೂಮಿಕಂಪ’ ಎನಲು, ಅದನೆ
ವಿವರವೆಂದರಾಯಿತೇನು?
ಬರಿಯ ಮಾತುಗಳ್ಳರು!

ಇಲ್ಲಿ ನಲಿಯುತಿಹುದು ತಳಿರು,
ಎಲ್ಲ ಚೆನ್ನು, ಚೊಕ್ಕಟ!
ಇಲ್ಲಿ ಉಲಿಯುತಿಹುದು ಹಕ್ಕಿ –
ಅಲ್ಲಿ? ತೊಲೆಯ ಕೆಳಗೆ ಸಿಕ್ಕಿ
ಕಂದನಪ್ಪಿದಮ್ಮನೊರಲೆ,
ಗೋಳೆಗೋಳು ಅಕ್ಕಟಾ!

ಒಬ್ಬ ದೇವರೊಂದೆ ಸೃಷ್ಟಿ;
ಅದರೊಳಿಷ್ಟು ಭೇದವೆ?
ಒಂದು ಕಣ್ಗೆ ಬೆಣ್ಣೆತಿಕ್ಕಿ,
ಒಂದು ಕಣ್ಗೆ ಸುಣ್ಣವಿಕ್ಕಿ,
ಒಂದು ನಗಲು, ಒಂದು ಅಳಲು,
ಅವನಿಗೊಂದು ಮೋದವೆ?

ಭೀತಿ, ಶೋಕ, ಸರ್ವನಾಶ, –
ಇದುವೆ ಮತಿಯ ಉತ್ತರ:
ತಣ್ಣಗಾಗುತಿಹನು ಸೂರ್ಯ,
ಜಗವಿದೊಂದು ಹಗೆಯ ಕಾರ್ಯ,
ಪ್ರಕೃತಿ ಹೃದಯ ಬರಿಯ ಕ್ರೌರ್ಯ,
ಇದೆ ವಿಚಾರದುತ್ತರ!

ಆದರಾಲಿಸೆದಯ ವಾಣಿ
ಬೇರೆ ಕಥೆಯ ಹೇಳಿದೆ;
ಕಷ್ಟನಷ್ಟವೆಲ್ಲ ಬರಲಿ,
ನೋವು ಸಾವು ಏನೆ ಇರಲಿ,
ಸೃಷ್ಟಿ ಮುಖ ಪರಮಸುಖ
ಎಂದು ಧೈರ್ಯ ತಾಳಿದೆ!

ಸೃಷ್ಟಿಯೊಂದನಂತ ಚಲನೆ,
ಅಖಂಡ ಪ್ರಾಣವಾಹಿನಿ.
ಕ್ಷಣವ ಕಣವನರಿವ ಬುದ್ಧಿ
ಕಾಲದೇಶನದಿಯೊಳದ್ದಿ
ಹೊಕ್ಕು ಹರಿದು ತಿಳಿಯಲರಿದು:
ಅಗಮ್ಯವದಕೆ ವಾಹಿನಿ!

ಶಿಲ್ಪ ಕೃತಿಯ ರಚನೆ ಸಾಕು
ಶಿಲ್ಪವರನ ನಂಬಲು.
ಅಗ್ನಿಮೇಘವೊಂದರಿಂದ
ಸೂರ್ಯಗ್ರಹಗಳೆಲ್ಲ ಬಂದ
ಸಾಕ್ಷಿಗಿಂತ ಹಿರಿಯ ಸಾಕ್ಷಿ
ನರನ ಎದೆಯ ಹಂಬಲು!

ಮುಳಿಯಬೇಡ, ಹಳಿಯಬೇಡ;
ಶಾಂತಿ ಬಂದೆ ಬರುವುದು.
ಕೇಡು ತುತ್ತ ತುದಿಯದಲ್ಲ;
ಬೇವಿನಾಚೆಗಿಹುದು ಬೆಲ್ಲ.
ಕೇಡು ಲೇಸುಗಳನು ಮೀರಿ
ಮಹಾನಂದವಿರುವುದು!

ಮೃತರ ಗತಿಯೆ? ಚಿಂತೆಯೇಕೆ?
ಅಲ್ಲಿರುವುದೆ ಇಲ್ಲಿಯೂ!
ಇಂದು (ಮುಂದೆ ಏನೆ ಬರಲಿ)
ನರಗೆ ನರನ ನೆರವು ಇರಲಿ!
ಇಲ್ಲಿ ಒಲಿದರೊಲಿವೆವಲ್ಲಿ:
ಇಲ್ಲಿರುವುದೆ ಅಲ್ಲಿಯೂ!

೨೯-೧-೧೯೩೪