ಆ ಮರದ ತಣ್ಣೆಳಲು!
ಹುಲ್ಲು ಮೈದಾನದಲಿ ನೋಡೆನಿಸಿತು ಇಂಪಾಗಿ,
ಕಂಗಳಿಗೆ ತಂಪಾಗಿ, ಸೊಂಪುದಳಿರಿನ ಪ್ರೀತಿ
ಇಂದ್ರಿಯಂಗಳ ಕಾಣ್ಕೆಗೊಳಗಾದ ರೀತಿಯಲಿ
ಹಸರಿಸಿದೆ, ಮರದೊಂದು ಆಹ್ವಾನವೆಂಬಂತೆ,
ಬಿಸಿಲ ಮರುಭೂಮಿಯಲಿ ನೆಳಲ ಮರುವನದಂತೆ!
ಓ ಮರವೆ, ಆ ನೆಳಲು ನಿನತೊಂದು ಕರ್ತವ್ಯ;
ನಿನ್ನ ಕೃಪೆ; ನಿನ್ನ ಆತ್ಮದ ಒಂದು ಔದಾರ್ಯ!
ನಿನ್ನ ಮೇಣಿನನ ಸಂಭೋಗದಿಂದುದಿಸಿರುವ
ಒಂದು ಆನಂದ ಶಿಶು! ನಿನ್ನ ಮನಸಿನ ಕನಸು!

ಗಾಳಿಯಲಿ ತಲೆದೂಗುತಿವೆ ಹುಲ್ಲು ಹಿಸ್ಸೆಂಬ
ಮೃದುನಾದದಿಂದ ಚಾಮರವಿಕ್ಕುವಂದದಲಿ,
ಬಯಲು ಮಲಗಿರೆ ತನ್ನ ದೀರ್ಘಕಾಯವ ಚಾಚಿ!
ಮೆಲುಕು ಹಾಕುತಿದೆ ಹಸು ನೆಳಲಿನಲಿ ನೆಳಲಾಗಿ
ಕಣ್ಣನರೆಮುಚ್ಚಿ ಮಲಗಿ. ಅದರ ನೆಳಲಿನ ತೆರದಿ
ಕರುವಿಹುದು ಪಕ್ಕದಲಿ ತಾಯ ಮೈಸೋಂಕಿನಲಿ!

ಸವಿನೆಳಲೆ, ತಳಿರು ಬಿಸಿಲಿನ ತರುದಿನೇಶರಿಗೆ
ಜನಿಸಿರುವ ಹಸುಳೆ, ನಾ ನಿನ್ನ ಔದಾರ್ಯದಲಿ
ಎನಿತು ಸಲ ನಿಂತಿರುವೆ! ಆವಾವ ರೀತಿಯಲಿ
ಬಣ್ಣಿಸಿಹೆ! ಒಮ್ಮೆ , ನಿನ್ನನು ದಾಸನೆಂದಾಡಿ
ನಿಂದಿಸಿಹೆ; ನಿನ್ನ ಕರ್ತವ್ಯವನು ಹಳಿದಿರುವೆ
ಚಿತ್ತದಾಸ್ಯಕೆ ಚಿಹ್ನೆಯದು ಎಂದು. ಕರ್ತವ್ಯ
ದಾಸ್ಯಗಳಿಗನಿತೇನು ಬಾಹ್ಯ ಭೇದಗಳಿಲ್ಲ.

ಅಂದು ಬಾಹ್ಯವ ನೋಡಿ ಅಣಕಿದೆ, ನಿಂದಿಸಿದೆ;
ಇಂದು ಅಂತರಂಗವ ಹೊಕ್ಕು ಸುಖಿಸುವೆನು
ನಿನ್ನ ಈ ನಿಷ್ಠೆಯಲಿ: ನೆಳಲು ನಿನ್ನಯ ನಿಷ್ಠೆ;
ದಾಸ್ಯವಲ್ಲ! ಕವಿಯ ಭಾವದ ಮುಕ್ತಿ ಛಂದಸ್ಸಿನ
ಶೃಂಖಲೆಯ ಬಂಧನಕೆ ಸಿಲುಕಿದೊಲು ತೋರುತಿದೆ;
ಆದರಾ ಬಂಧನವೆ ಅದರ ಮುಕ್ತಿಗೆ ಶಕ್ತಿ.
ಏತಕೆನೆ, ಮಾಯೆ ಮುಕ್ತಿಗೆ ಆಳು. ಅದರಂತೆ
ನಿನ್ನ ಸ್ವಾತಂತ್ರ್ಯದಾನಂದದುದ್ಭಾಸವದು
ನೆಳಲಾಗಿ ನಲಿಯುತಿದೆ ಹಸಿರು ಬಯಲಲಿ ಮಲಗಿ;
ಬಳಿಗೆ ಬಂದವರನೂ ನಲಿಸುತಿದೆ ಸಾದರದಿ!

ಸವಿನೆಳಲೆ, ನನ್ನ ಆ ದರ್ಶನವ ಮರೆತುಬಿಡು.
ನನ್ನ ಇಂದಿನ ದರ್ಶನಕೆ ಮನ್ನಣೆಯ ಮಾಡು!

೧೦-೧೧-೧೯೩೩