ಪ್ರಾಣ ಮೇಣಾಕಾಶಗಳ ಮಹದ್ಗರ್ಭದಿಂ
ಬ್ರಹ್ಮಾಂಡವನು ರಚಿಸಿದಾ ಪರಮ ಪರಮೇಷ್ಠಿ,
ಯಂತ್ರವಿದ್ಯಾಕಲಾಕೋವಿದಂ, ಮಂತ್ರನಿಧಿ,
ಮುನ್ನಮಾದಿಯಲಿ ತನ್ನಾತ್ಮ ಸಂಸ್ಫೂರ್ತಿಯಿಂ
ಸ್ವಾನಂದ ವ್ಯಕ್ತಾಭಿಲಾಷೆಯಿಂ, ಧರ್ಮದಿಂ
ಮೀರಲರಿಯದ ಕಠೋರತರ ನಿಯಮಂಗಳಿಂ
ಬಂಧಿಸಿದನೆಲ್ಲಮಂ ಋತವಜ್ರಪಂಜರದಿ.
ತನ್ಮಧ್ಯೆ ಸ್ವಾತಂತ್ರ್ಯಮೂರ್ತಿ ತಾಂ ನೆಲಸಿಹಂ
ಸರ್ವನಿಯಮಾತೀತನಾಗಿ; ಋತರಕ್ಷಕಂ
ತಾನಾಗಿ; ನಿಯಮದುಲ್ಲಂಘನೆಗೆ ಶಿಕ್ಷಕಂ
ತಾನಾಗಿ. ಪ್ರಕೃತಿಯಾತನ ಭೀಷಣಾತಿಗೆ
ತಲೆಬಾಗಿ ಸಾಗುತಿದೆ ಕ್ರಮದಿಂದೆ. ನೆಲದಲ್ಲಿ
ಹೊರಳುತಿಹ ಹುಡಿಯಿಂದೆ ಹಿಡಿದು ತಾರಂಬರಂ
ಆ ಪರಮ ಯಂತ್ರಜ್ಞ ಮಂತ್ರ ಸಂಮೋಹದಲಿ
ಮುಗ್ಧರಾಗಿಹರು. ಅವಿಧೇಯತೆಗೆ ತಾವಿಲ್ಲ.
ಯಾರೆ ಕಾಣಲಿ ಬಿಡಲಿ ಬೆಂಕಿಯುರಿಯಲೆ ಬೇಕು;
ಯಾರಿರಲಿ ಇರದಿರಲಿ ಗಾಳಿ ತೀಡಲೆ ಬೇಕು;
ಯಾರಿಲ್ಲವೆಂದರಿತು ನಿಶ್ಚಲ ಸರೋವರಂ
ತನ್ನ ದಡದಲಿ ಬೆಳೆದ ಮರದ ಪ್ರತಿಬಿಂಬಮಂ
ತನ್ನ ಹೃದಯದಿ ಧರಿಸಲೊಲ್ಲೆನೆನಲಾರದಿದೆ.
ಇಲ್ಲಿ ಈ ಭೂಮಿಯಲಿ ಅಧಿಕಾರ ಬಲ ದರ್ಪ
ಐಶ್ವರ್ಯವಿನಿತಿರದ ಪಂಚಮನ ಗುಡಿಸಲಲಿ
ಬೆಂಕಿಯು ವಿಧೇಯತೆಯೊಳುರಿವಂತೆ, ಪ್ರಭುವಾಗಿ
ಲೋಕವನ್ನಾಳುವವನರಮನೆಯ ಒಲೆಯಲ್ಲಿ
ಹೆಚ್ಚೇನು ದಾಕ್ಷಿಣ್ಯವಿಲ್ಲದುರಿವಂದದಲಿ,
ಅಲ್ಲಿ ಆ ದೂರದಲಿ, ಶತಕೋಟಿ ದೂರದಲಿ,
ಹೊಳೆವ ಭೀಮಾಕಾರ ತಾರೆಯೊಳುಮಿದರಂತೆ
ತನ್ನ ಕರ್ತವ್ಯದಲಿ ತೊಡಗಿಹುದು.

ಸಭ್ಯತೆಯ
ನರಗೆ ನಂದನವಾಗಿ ನಗೆಸೂಸಿ ನಲಿಯುತಿಹ
ಈ ಕ್ಷೋಣಿಯಾದಿಕಾಲದೊಳಗ್ನಿ ಪುಂಜದಲಿ
ನೆಲ ನೀರು ಗಾಳಿಗಳು ಬೇರಾಗಿ, ಸಸ್ಯಾದಿ
ಜೀವಗಳಿಗೆಡೆಯಿತ್ತ ಸಮಯದಲಿ, ನಾಗರಿಕ
ಮನುಜ ಸೃಷ್ಟಿಯ ಸ್ವಪ್ನವನು ಕಂಡವರದಾರು?
ಅಗ್ನಿ ಜಲವಾಯುಗಳ ಕಠಿನಕರುಣವ ನಂಬಿ
ಜೀವವನು ಹೊರೆಯುತಿರ್ದಾ ಮನಜ ಮೃಗದಿಂದೆ
ತನ್ನ ಮೇಧಾಶಕ್ತಿಯಿಂ ಪ್ರಕೃತಿಯನೆ ಗೆದ್ದು
ದಾಸ್ಯವನು ನೀಗಿ ಲೋಕೇಶನಾಗಲು ಬಲ್ಲ
ಸುಜ್ಞಾನ ವಿಜ್ಞಾನ ಸರ್ವವಿದ್ಯಾಮೂರ್ತಿ
ನಾಗರಿಕ ಯಂತ್ರರ್ಷಿಯನು ಮಂತ್ರಿಸಿದವರಾರು?
ಸಿಡಿಲು ಮಿಂಚಿಗೆ ನಡುಗುತಂದು ಗುಹೆಗೋಡಿದನು;
ಅಂದು ಕೊಚ್ಚುವ ಹೊಳೆಯ ಕೈಮುಗಿದು ಬೇಡಿದನು;
ಇಂದದನು ಕಟ್ಟಿ ಕಿಂಕರನಂತೆ ಮಾಡಿಹನು.
ಅಂದು ಇಂದ್ರಾಗ್ನಿಯರು ದೇವರಾಗಿದ್ದವರು
ಇಂದು ಗದ್ದುಗೆಯಿಳಿದು ದಾಸರೆಮಗಾಗಿಹರು.
ಅ ಮೂಢನರನೆಲ್ಲಿ? ಈ ಯಂತ್ರಋಷಿಯೆಲ್ಲಿ?
ಆ ಅನಾಗರನೆಲ್ಲಿ? ಈ ನಾಗರಿಕನೆಲ್ಲಿ?

ಯುಗಯುಗಗಳಜ್ಞಾನದಿಂದೆಮ್ಮನುತ್ತರಿಸಿ
ವಿಜ್ಞಾನ ವಿದ್ಯೆಯನು ನೀಡಿ ಕಾಪಾಡಿರುವ
ಓ ಮಾನವನ ಧೀರ ಮತಿಯೆ, ನೀನಿಂದೆಮಗೆ
ಆರಾಧ್ಯ ದೇವತೆಯು! ನಿನ್ನ ಪೂಜಿಪ ನರರು,
ಯಂತ್ರರ್ಷಿ ಮಾನವರೆ, ಮಂತ್ರರ್ಷಿಗಳು ನಮಗೆ!
ಹೇ ಪುಣ್ಯಯಂತ್ರರ್ಷಿ, ನಿನೆಮ್ಮ ವಿಜಿಗೀಷು
ಮತಿಗೆ ಪ್ರತಿನಿಧಿಯಾಗಿ ನಿಂತಿರುವೆ, ಅದರಿಂದೆ
ರಾಜರಾಜರ ಹೊಗಳಲಾರದೀ ಕಬ್ಬಿಗನ
ವಾಣಿ ನಿನ್ನನು ಕರಿತು ಹಾಡುತಿದೆ! ಇನ್ನೆಲ್ಲಿ
ಭೂತಳಾದಿಪರ ನುತಿ? ಇನ್ನೆಲ್ಲಿ ಮಾನವರ
ಕೊಲೆಗೈವ ರಕ್ತದಾಹಾತುರರ ವೀರಕಥೆ?
ಜಯಮಕ್ಕೆ! ಸೊಗಮಕ್ಕೆ! ಮನುಜ ಜೀವನ ಶಾಂತಿ
ಸಂಸ್ಥಾಪನೆಗೆ ಯಶೋಲೋಭವಿನಿತಿಲ್ಲದೆಯೆ
ಮೂರ್ಖ ನಿಂದೆಯ ಲೆಕ್ಕಿಸದೆ ದುಡಿವ ಯಂತ್ರರ್ಷಿ,
ನಿನಗೆ ಜಯವಾಗಲಿ! ಶಾಂತಿ ಸುಖವಾಗಲಿ!

ನಿನ್ನ ತಂತ್ರಕೆ ಮಣಿದು ಹರಿವ ವಾಹಿನಿ ನಿಂತು
ಕೈವೊಲಕೆ ಕೈನೀರನೆರೆಯುತಿದೆ; ಮರುಭೂಮಿ
ಹಸುರು ನಗೆಯನು ಸೂಸುವುದ್ಯಾನವಾಗುತಿದೆ;
ಲೋಹ ಸ್ವಪ್ನವ ಕಾಣುತೊರಗಿದ್ದ ಸಹ್ಯಾದ್ರಿ
ನಿನ್ನ ಮಂತ್ರಾಘಾತದಲಿ ನಿದ್ರೆಯಿಂದೆದ್ದು
ಮಾನವಗೆ ಕೈಂಕರ್ಯವೆಸಗುತಿದೆ! ಓ ಋಷಿಯೆ,
ನೀನು ಮನುಜನ ಮಹಾಮತಿಗೆ ವಿಜಯಪತಾಕೆ!
ಮನುಜ ಮಾನಸ ನಾಕದಿಂದ ಧೀ ಗಂಗೆಯಂ
ಭೂಮಿಗೆಳೆತಂದಿರುವ ನೂತನ ಭಗೀರಥನೆ,
ನನಗೆ ಜಯವಾಗಲಿ! ಶಾಂತಿಸುಖವಾಗಲಿ:
ವಿಶ್ವೇಶ ಕೃಪೆಯಿಂದೆ ಧೀಶಕ್ತಿ ಚಿರವಾಗಲಿ!

೧೫-೯-೧೯೩೩