ಆಲಿಸು ನಿಂತಿಲ್ಲಿ,
ಈ ತಂತಿಯ ಕಂಬದ ಬುಡದಲ್ಲಿ.
ಆಲಿಸು, ಕಿವಿಗೊಟ್ಟಾಲಿಸು, ಕಣ್ಮುಚ್ಚಿ,
ಕಲ್ಪನೆ ರೆಕ್ಕೆಯ ಬಿಚ್ಚಿ!
ಹಾರಲಿ, ಹಾರಲಿ ನಿನ್ನಾತ್ಮದ ಹಕ್ಕಿ
ದಿಕ್ಕಿನ ದಿಕ್ಕಿನ ಗೋಡೆಯ ಮೀಟಿ,
ಕಾಲವ ದೇಶವನಾಕಾಶವ ದಾಟಿ,
ಬ್ರಹ್ಮಾಂಡದ ಚಿಪ್ಪನ್ನೊಡೆವಂದದಿ ಕುಕ್ಕಿ!-
ಹಾರಲಿ ನಿನ್ನಾತ್ಮದ ಹಕ್ಕಿ.
ಆಲಿಸು, ಝೇಂಕಾರ!
ನಾದಬ್ರಹ್ಮದ ವೀಣೆಯ ಮಿಡಿದಂದದ ಓಂಕಾರ!

ಮಲೆನಾಡಿನ ಕಾಡಿನ ಮಧ್ಯೆ
ಜಗದಿಂ ಜಗುಳಲ್ಕಿರುಳಿನ ನಿದ್ದೆ,
ಚೈತ್ರ ದಿನೇಶನ ಚಿನ್ನದ ಹೊನಲು
ಬನದೆಲೆ ಹಸುರಲಿ ಹೊಳೆಹರಿಯಿತ್ತೆನಲು,
ದನಿಜೇನಿಳಿಸುತ್ತಿರೆ ಕಾಜಾಣ,
ಉಲಿಯುಲಿಯುತ್ತಿರೆ ಬಹು ಖಗ ಸಂಮೇಲನಗಾನ,
ಹುಚ್ಚಿಡಿದಂದದಿ ಹೂ ತುಂಬಿ
ಬೆಳೆದ ಬಿತ್ತರದೆತ್ತರದಾ ನಂದಿಯ ಮರದಲ್ಲಿ
ಲಕ್ಕಲಕ್ಕದಲಿ ಕಿಕ್ಕಿರಿದಿರೆ ಜೇಂಬುಳು ಮೇಣ್ ದುಂಬಿ,
ನಿಂತೇಕಾಂತದೊಳಾ ಮರದಡಿಯಲ್ಲಿ
ನಾನಿಂತಹ ಅನುಭವವನು ಪಡೆದಿದ್ದೆ
ನನ್ನಾ ಮಲೆನಾಡಿನ ಕಾಡಿನ ಮಧ್ಯೆ:
ಆಲಿಸು ಅದೆ ಝೇಂಕಾರೆ!
ನಾದಬ್ರಹ್ಮದ ವೀಣೆಯ ಮಿಡಿದಂದದ ಓಂಕಾರ!

ಆ ಅನುಭವವಾಯಿತ್ತಂದು
ಅಲ್ಲಿ.
ಬಯಲಿನ ಸೀಮೆಯೊಳದನಿಂದು
ಇಲ್ಲಿ,
ಈ ತಂತಿಯ ಕಂಬದ ಬುಡದಲಿ ನಿಂತು
ಪುನರಾಸ್ವದಿಸುತಿಹೆನಿಂತು,
ಕಲ್ಪನೆ ರೆಕ್ಕೆಯ ಬಿಚ್ಚಿ
ಕಣ್ಮುಚ್ಚಿ,
ಕರಗಿದ ನವರತ್ನಾಗ್ನಿಯ ಹೋಲಿ
ಪ್ರವಹಿಸುವಾತ್ಮದ ರಸ ಭಾವಾನಂದದಿ ತೇಲಿ!

ಕಣ್ಣನು ತೆರೆ, ಸುತ್ತಲು ನೋಡು:
ಈಗೆಂತಿದೆ ಧರೆ? ರಸಸುಖ ಘನಿತಂತಿಹ ಬೀಡು!
ಕೈಮುಗಿ ಈ ತಂತಿಯ ಕಂಬಕ್ಕೆ;
ವಂದಿಸಿ ನಡೆ ಮುಂದಕ್ಕೆ!

೧೮-೯-೧೯೩೫