ಘಜ್ಹನಿಯ ಮಹಮೂದನು ದಂಡೆತ್ತಿ
ಬಂದನು ಪ್ರತಿಸಲವೂ ಮುಂದೊತ್ತಿ.
ಹಣದ ಪಿಶಾಚಿಯು ರಣದ ಪಿಶಾಚಿಗೆ
ಘಜನಿಯ ದೊರೆಯಲಿ ಹಿಡಿದಿತ್ತು;
ಅವನೆದೆಯಲಿ ಮುಸ್ಲಿಮ ಮರುಭೂಮಿಯು
ಕಾಫರ ರಕ್ತವ ಕುಡಿದಿತ್ತು!
ರಾಜಾಸ್ಥಾನದ ರಾಜ್ಯಗಳೆಲ್ಲಾ
ಬಿದ್ದುವು ಪುಡಿಯಾಗುತ ನೆಲಕೆ;
ಗುಡಿಗಳು ಬಿದ್ದು ಮಸೀದಿಗಳೆದ್ದುವು;
ಪಳಿವಾಯಿತು ಕ್ಷತ್ರಿಯ ಕುಲಕ್ಕೆ.
ಬೆಚ್ಚಿತು ಬೆದರಿತು ವೈದಿಕ ಶಾಂತಿ;
ಕೊಚ್ಚಿತು ನಾಡನು ಮ್ಲೇಚ್ಛಕ್ರಾಂತಿ!


ಇಂತಿರೆ, ದೂರದ ಗುಜರಾತಿನಲಿ,
ಮುಸ್ಲಿಮ ದೃಷ್ಟಿಗೆ ಬಹುದೂರದಲಿ
ಸೋಮನಾಥ ದೇವಾಲಯ ತಾನು
ಪಾವನ ಏಕಾಂತದೊಳಿತ್ತು.
ಸಾಕ್ಷತ್ ಕೈಲಾಸವೊ ಇದು ಏನು?
ಎಂಬಂದದಿ ಅದು ಮೆರೆದಿತ್ತು!
ಚಿನ್ನದ ಗೋಪುರ, ರನ್ನದ ಗೊಂಬೆ!
ಅದರೈಸಿರಿಯನು ನೀನೇನೆಂಬೆ?
ಅಲಕಾವತಿಯೂ ಅಮರಾವತಿಯೂ
ಲಕ್ಷ್ಮಿ ಸರಸ್ವತಿ ರತಿ ಪಾರ್ವತಿಯೂ
ಎಲ್ಲವು ಎಲ್ಲರು ಆ ದೇಗುಲದಲಿ
ಸುಖವಾಗಿದ್ದರು ಮಂತ್ರದ ಬಲದಲಿ!
ಗುಜರಾತಿನ ಆ ಮೂಲೆಯಲಿ
ದೂರದ ಮೂಲೆಯಲಿ


ದೂರದ ಗುಡಿಯದು ತುರುಕರ ಕಣ್ಣಿಗೆ
ಬೀಳದು ಎಂದಾಲೋ ಚಿಸಿ ತಣ್ಣಗೆ
ಜೀವನಯಾಪನೆ ಮಾಡುತಲಿದ್ದರು,
ಮಂತ್ರಗಿಂತ್ರಗಳ ಹೇಳುತಲಿದ್ದರು
ಆ ನಿಲಯದ ಪೂಜಾರಿಗಳು,
ದೇವರ ಸೋಮಾರಿಗಳು!
ಇಂತಾಲಸ್ಯದೊಳಿರುತಿರೆ ಬುದ್ಧಿ
ಬಂದಿತು ತುರುಕರ ದಾಳಿಯ ಸುದ್ದಿ.
ಕಂಪಿಸಲವರಾ ಡೊಳ್ಳಿನ ಕುಕ್ಷಿ
ನಡುಗಿತು ಪಾರ್ವರ ಶ್ರೀರುದ್ರಾಕ್ಷಿ!
ತಲೆಗಾವರಿಸಿತು ಬೆಪ್ಪು!
ಮುಖಕಾಯಿತು ಕಪ್ಪು!


ಒಡನೆಯೆ ಆರ್ಚಕರೆಲ್ಲಾ ಸೇರಿ
ಮಂತ್ರಾಲೋಚನೆ ಮಾಡಿದರು;
ಶಾಸ್ತ್ರವನ್ನೆಲ್ಲಾ ಕೇರಿ ತೂರೀ
ಬಹು ಸಂಶೋಧನೆ ಮಾಡಿದರು.
ದಿನ ದಿನ ದಿನವೂ ಸೋಮೇಶ್ವರನಿಗೆ
ಹೆಚ್ಚಿಗೆ ಹೊನ್ನಿನ ನಗವಿಟ್ಟು
ಪೂಜಿಸಿದರು ಮಾಹೇಶ್ವರ ಲಿಂಗಕೆ
ಅನ್ನದ ರಾಶಿಯನೇ ಕೊಟ್ಟು!
ಅಸ್ತ್ರಶಸ್ತ್ರಗಳ ಸೇರಿಸಲಿಲ್ಲ;
ರಣದಾಳುಗಳನ್ನು ಕೂಡಿಸಲಿಲ್ಲ.
ಶತ್ರುವಿನಾಶಕ ಮಂತ್ರವನೊಂದನು
ಹಲಿರುಳೂ ಹುಡಿಕಿದರೆಲ್ಲ!
ಕಡೆಗೊಬ್ಬನೆ ಪೂಜಾರಿಗೆ ಸಿಕ್ಕಿತು
ಭೀಷಣ ಮಂತ್ರವು- ‘ಧ್ರಾಂ ಧ್ರೀಂ ಧ್ರೂಂ!’
ಆ ಮಂತ್ರದ ವಂಶವನೇಂಬೆನು?
ಅದರ ಪಿತಾಮಹ-‘ಹ್ರಾಂ ಹ್ರೀಂ ಹ್ರೂಂ!’
ಮಂತ್ರದ ಶಕ್ತಿಗೆ ಮೇರೆಯೆ ಇಲ್ಲ.
ಆಲಿಸಿ ಪೂಜಾರಿಯ ಸೊಲ್ಲ:
“ಓ ಸೋದರರೇ ಬೆದರುವುದೇತಕೆ?
ಖಡ್ಗಗಿಡ್ಗಗಳ ನೆರವೂ ಏತಕೆ
ಈ ಮಂತ್ರದ ಬಲವಿರೆ ನಮಗೆ?
ಮ್ಲೇಚ್ಛರ ಖಳದಳವಿಲ್ಲಿಗೆ ಬರಲಿ,
ಸಾಸಿರ ಸಾಸಿರ ಸಾಸಿರವಿರಲಿ!
ಒಂದೆ ಮಂತ್ರದಲಿ ಎಲ್ಲರ ಕೊಂದು
ಮಂತ್ರಶಕ್ತಿಯನು ಮಾಡುವೆ ಸಿಂಧು.
ಮಂತ್ರೋಚ್ಚಾರದಿ ಮಂತ್ರಾಕ್ಷತೆಯನು
ಬೀರಿದ ಕೂಡಲೆ ಮುಸಲರು ಚಿತೆಯನು
ಸೇರುವರಯ್ಯಾ ಸೇರುವರು;
ಸುಮ್ಮನೆ ಚೀರುವರು!
ನಮ್ಮೀ ವೈದಿಕ ಧರ್ಮದ ಯುಕ್ತಿಯ,
ನಮ್ಮ ಪುರೋಹಿತ ವರ್ಗದ ಭಕ್ತಿಯ,
ನಮ್ಮ ಸುಧಾಕರ ಮೌಳಿಯ ಶಕ್ತಿಯ
ಮೂರ್ಖರು ಮ್ಲೇಚ್ಛರು ಬಲ್ಲವರೆ?
ಕ್ಷಾತ್ರಶಕ್ತಿಯನು ಗೆದ್ದಂದದಲಿ
ಬ್ರಾಹ್ಮ ತೇಜವನು ಗೆಲ್ಲುವರೆ?”
ಕೇಳಿ ಪುರೋಹಿತರೆಲ್ಲರು ಹಿಗ್ಗಿ
ಸೋಮನಾಥನಿಗೆ ಮಣಿದರು ಬಗ್ಗಿ!


ಯಾಗಕುಂಡವನು ಬೇಗನೆ ಮಾಡಿ,
ಯಜ್ಞಯೂಪವನು ಶೀಘ್ರದಿ ಹೂಡಿ,
ಅಗ್ನಿದೇವನನು ಸ್ಥಾಪನೆಗೈದು,
ತುಪ್ಪಗಿಪ್ಪಗಳ ಬೆಂಕಿಗೆ ಹುಯ್ದು,
ಮೇಷವನೊಯ್ದು, ಮರ್ದಿಸಿ ಹೊಯ್ದು,
ಮಂತ್ರಪೂರ್ವಕದಿ ಮಾಂಸವ ಕೊಯ್ದು,
ಮ್ಲೇಚ್ಛ ಸೈನ್ಯಗಳ ವಧೆಗಾಗಿ
ತಿಂದರು ತೇಗಿ!
ಇಂತಿರೆ, ದೂರದಿ ಕೇಳಿತು ಸದ್ದು;
ಅರ್ಚಕರೆಲ್ಲರು ನಡುಗಿದರೆದ್ದು.
ಏನಿದು ಎನುತಿರೆ ಬಂದಿತು ಸೈನ್ಯ,
ಘಜ್ಹನಿಯ ಮಹಮೂದನ ಸೈನ್ಯ!
ವೀರ ಕರಾಳ ಭಯಂಕರ ಭಟರು,
ಮೃತ್ಯುದೇವತೆಯ ಕೆಚ್ಚಿನ ನಟರು
ಖಡ್ಗಭಲ್ಲೆಗಳ ಕೈಯತ್ತಿ
ನುಗ್ಗಿ ಬಂದರೈ ಮೇಲೊತ್ತಿ!
ಗುಡಿಯನು ನುಗ್ಗುಲು ಮುಸಲರ ದಂಡು
ಶ್ರದ್ಧಾಪೂರ್ವಕ ಅರ್ಚಕ ಹಿಂಡು
ಮಂತ್ರಾಕ್ಷತೆಯನು ಕೈಕೊಂಡು
ತಳಿಯುತ್ತೊರಲಿತು “ಧ್ರಾಂ ಧ್ರೀಂ ಧ್ರೂಂ!”
ಗುಡಿಯ ಗೋಡೆಗಳು ಕಲ್ಲುಗೊಂಬೆಗಳು
ಮರುದನಿಗೈದವು “ಧ್ರಾಂ ಧ್ರೀಂ ಧ್ರೂಂ!”
ಆದೊಡೆ ಮ್ಲೇಚ್ಛರು ಮಡಿಯಲೆ ಇಲ್ಲ;
ಸತ್ತರು, ಪಾಪ, ಪುರೋಹಿತರೆಲ್ಲ!
ಮೈಲಿಗೆಯಾಯಿತು ದೇವರ ಮನೆಗೆ;
ಮುಸಲರ ಕೈಸೇರಿತು ಸಿರಿ ಕೊನೆಗೆ.
ಸೋಮೇಶ್ವರ ಸಂಪತ್ತಿನ ಲಿಂಗ-
ಕ್ಕಾಯಿತು ಮುಸಲಾಘಾತದಿ ಭಂಗ!
ಧೂರ್ತರ ದಾಳಿಗೆ ಗುಡಿ ವಿಗ್ರಹಗಳು
ಪುಡಿಪುಡಿಯಾದುವು ಗೋಪುರ ಗೃಹಗಳು.
ಎಸೆಯಿತು ಮುಸಲರ ಜಯಭೇರಿ,
ವೀರರ ಜಯಭೇರಿ!

ಗುಡಿ ಹಾಳಾದರೆ ಏನಂತೆ?
ವೈದಿಕ ಧರ್ಮಕೆ ಅದೆ ಚಿಂತೆ?
ನಶ್ವರ ಕಾಂಚನ ಹೋದರೆ ಹೋಯಿತು!
ಮಂತ್ರದ ಸಾಮರ್ಥ್ಯವು ಸ್ಥಿರವಾಯಿತು!
ಎಂತನೆ, – ಮಂತ್ರಕೆ ಕುಂದೆಲ್ಲಿ? –
ಆ ಖಲ ಮ್ಲೇಚ್ಛರು ಸತ್ತೇ ಸತ್ತರು! –
ಬಹು ಕಾಲಾನಂತರದಲ್ಲಿ!

೧೨-೮-೧೯೩೩