ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೊ ಮನು ಬರೆದಿಟ್ಟುದಿಮ್ದೆಮಗೆ ಕಟ್ಟೇನು?
ನಿನ್ನದೆಯ ದನಿಯೆ ಋಷಿ! ಮನು ನಿನಗೆ ನೀನು!

ನೀರಡಿಸಿ ಬಂದ ಸೋದರನಿಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು?

ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ
ದಡದಲ್ಲಿ ಮಿಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದೊ
ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು?

ಅಂತು ಮನು ತಾನು ಹೇಳಿರಲಾರನಯ್ಯಯ್ಯೊ!
ಹೇಳಿದ್ದರವನೂ ಶಾಸ್ತ್ರದೊಳೆ ಸುತ್ತಿ,
ಸ್ವರ್ಗ ಹೋಗಲಿ, ಮತ್ತೆ ನರಕ ಬಂದರು ಬರಲಿ,
ಎದೆಯ ಧೈರ್ಯವ ಮಾಡಿ ಬಿಸುಡಾಚೆಗೆತ್ತಿ!

ಸ್ವರ್ಗ ಹೋಗುವುದಿಲ್ಲ, ನರಕ ಬರುವುದು ಇಲ್ಲ;
ಸ್ವರ್ಗ ನರಕಗಳೇನು ಶಾಸ್ತ್ರಸ್ಥವಲ್ಲ.
ಎದೆಯ ದನಿ ಧರ್ಮನಿದಿ! ಕರ್ತವ್ಯವದೆ ವಿಧಿ!
ನಂಬದನು; ಅದನುಳಿದು ಋಷಿಯು ಬೇರಿಲ್ಲ!

ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ:
ಕಾಲಕ್ಕೆ ತಕ್ಕಂತೆ, ದೇಶಕ್ಕೆ, ತಕ್ಕಂತೆ,
ನಮ್ಮ ಹೃದಯವೆ ನಮಗೆ ಶ್ರೀಧರ್ಮಸೂತ್ರ!

೨೩-೧-೧೯೩೪