ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮುಟ್ಟ ಕೀಳಬನ್ನಿ.
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ.
ಓ, ಬನ್ನಿ, ಸೋದರರೆ, ಬೇಗ ಬನ್ನಿ!

ಅದೋ ನೋಡಿ, ರಷ್ಯಾ ಜಪಾನು ತುರ್ಕಿಗಳೆಲ್ಲ
ಪರೆಗಳಚಿ ಹೊರಟಿಹವು ಹೊಸಪಯಣಕೆ.
ಬೆಳಗಿಹವು ನೆತ್ತರೆಣ್ಣೆಯ ತಿಳಿವಿನುರಿಯಲ್ಲಿ
ಕಿಚ್ಚಿಟ್ಟು ಹಳೆಕೊಳಕು ಬಣಗು ತೃಣಕೆ.
ಓ, ಬನ್ನಿ, ಸೋದರರೆ, ರಾಷ್ಟ್ರರಣಕೆ.!

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ;
ಮತಿಯಿಂದ ದುಡಿಯಿರೈ ಲೋಕಹಿತಕೆ.
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ.
ಓ, ಬನ್ನಿ, ಸೋದರರೆ, ವಿಶ್ವಪಥಕೆ!

೨೯-೧೦-೧೯೩೫