“ಸರ್ವರಿಗೆ ಸಮಬಾಳು! ಸರ್ವರಿಗೆ ಸಮಪಾಲು!”
ಎಂಬ ನವಯುಗವಾಣಿ ಘೋಷಿಸಿದೆ ಕೇಳಿ!
ಯುಗಯುಗದ ದಾರಿದ್ರ್ಯಭಾರದಿಂ ಬೆನ್‌ಬಾಗಿ
ಗೋಳಿಡುವ ಬಡಜನರೆ, ಏಳಿರೈ ಎಳಿ!
ಶ್ರೀಮಂತರಡಿಗಳಡಿ ಹುಡಿಯಲ್ಲಿ ಹೊರಳಾಡಿ
ಕುಸಿದು ಕುಗ್ಗಿದರೆಲ್ಲ ಸಂತಸವ ತಾಳಿ!
ಕಂಗೆಟ್ಟ ಸೋದರರೆ, ಬರುತಿಹಳು ಕಾಣಿರೈ
ದಾನವರ ಸೀಳಿ ಅದೊ ವಿಪ್ಲವದ ಕಾಳಿ!

ಇಂದ್ರ ಸಿಂಹಾಸನಕೆ ಬಂದಿಹುದು ಕೊನೆಗಾಲ;
ಕಳಚಿ ಬೀಳುವುದಿಂದು ನಂದನದ ಬೇಲಿ!
ದೇವತೆಗಳಶ್ಲೀಲಮೋದಕ್ಕೆ ಬದಲಾಗಿ
ಹೋಚರಿಪುದಲ್ಲಿ ಮರ್ತ್ಯರ ಕೃಷಿಯ ಕೇಲಿ!
ದ್ರವ್ಯಾನುಕೂಲತೆಯ ಜಾತಿಯಾ ನೀತಿಯಾ
ಪಕ್ಷಪಾತವನೆಲ್ಲ ಕೊಚ್ಚುವುದು ಬುದ್ಧಿ:
ಮತ್ತೊಂದು ನಾಕವನೆ ನೆಯ್ಯುವರು ಲೋಕದಲಿ
ದೇವರನ್ಯಾಯವನು ಮಾನವರೆ ತಿದ್ದಿ!

ಕೈಲಾಗದವರೆಂಬ ನಾವು ಕೀಳೆಂದೆಂಬ
ಹಣೆಬರಹವೆಂದೆಂಬ ಮೂಢತೆಯ ನೀಗಿ
ಯುಗಚಕ್ರ ಪರಿವರ್ತನೆಗೆ ಸರ್ವರೂ ಸೇರಿ
ಹೆಗಲು ಕೊಟ್ಟೊಮ್ಮನಸು ಮಾಡಿ ನೆರವಾಗಿ!
ಮೋಹಿನಿಗೆ ಮರುಳಾಗಿ ಮೂರ್ಖ ದಾನವರೆಲ್ಲ
ತಮ್ಮ ಗೆಯ್ಮೆಯ ಪಾಲನನ್ಯರಿಗೆ ತೆತ್ತು
ಸತ್ತಂತೆ ಸಾಯದಿರಿ: ಸಂಸ್ಕೃತಿಯ ಹೆಸರಿಂದೆ
ಶ್ರೀಮಂತರೊಡ್ಡುವಾ ಬಲೆ ನಿಮಗೆ ಮೃತ್ಯು!

ಇಂದು ನೆತ್ತರು ಚೆಲ್ಲಿ ಮುಂದೆ ಬಹ ಮಕ್ಕಳಿಗೆ
ಹೊಟ್ಟೆಗನ್ನವ, ಮೈಗೆ ಬಟ್ಟೆಯನು ನೀಡಿ.
ಇಂದು ನೋವಾದರೂ ಇಂದು ಸಾವಾದರೂ
ಮುಂದೆ ಬಾಳಿಗೆ ಸೊಗಸು ನೆಮ್ಮದಿಯ ಮಾಡಿ.
ಇಂದು ನೀವೇಳದಿರೆ ಕಚ್ಚೆದೆಯ ತಾಳದಿರೆ
ನಿಮ್ಮವರ ಬಾಳು ಎಂದೆಂದಿಗೂ ಹೇಡಿ!
“ಇಂದು ರಕ್ತದ ಬಿಂದು ಮುಂದೆ ಸೌಖ್ಯದ ಸಿಂಧು!”
ಎಂದು ಸಾಹಸಕೇಳಿ, ಹಿಂಜರಿಯಬೇಡಿ!

೨-೮-೧೯೩೫