ಸತ್ತವರ ಕರೆಯು, ಓ ಕೂಗುತಿದೆ, ಅದೊ ಕೇಳು,
ಭೂತಕಾಲದ ಗರ್ಭ ಗೋರಿಯಿಂದ;
ಆಲಿಸಿಯು ಅದನು ನೀ ಸುಮ್ಮನಿರುವೆಯ ಹೇಳು,
ದೇಶಮಾತೆಯು ಹಡೆದ ವೀರಕಂದಾ?

“ಏಳಿರೈ, ಸೋದರಿರ, ನಿಮಗಾಗಿ ಮಡಿದೆಮ್ಮ
ಮರಿಯದಿರಿ, ನಿಮ್ಮಣ್ಣ ತಮ್ಮದಿರನು.
ನಿಮ್ಮಂತೆ ನಾವಿದ್ದು ಉಸಿರಳೆದು ನಲಿದುಲಿದು
ಒಲಿದೊಲಿಸಿ ಬಾಳಿದೆವು; ಮೊನ್ನೆ ಮೊನ್ನೆ
ಸ್ವಾತಂತ್ರ್ಯ ಸಾಧನೆಗೆ ಸಂಗ್ರಾಮ ದೇವತೆಗೆ
ರಕ್ತತರ್ಪಣವಿತ್ತು, ಎದೆಯ ಹರಿದು,
ಹೊರಳಿದೆವು ನೆಲಕೆ ಓ ಉರುಳಿ ಬಿದ್ದೆವು ನೆಲಕೆ
ಕೈಯ ಕತ್ತಿಯನೆಸೆದು ನಿಮ್ಮ ಕೈಗೆ,
ಮತ್ತೆ ಬಾವುಟವೆಸೆದು ನಿಮ್ಮ ರಕ್ಷೆಯ ವಶಕೆ,
ಹಿಡಿದೆತ್ತಿ ಮುಂಬರಿವಿರೆಂದು ನಂಬಿ!
ಸತ್ತವರ ಆನಂಬುಗೆಗೆ ಎರಡೆನೆಣಿಸದಿರಿ,
ಹಂದೆಯಾಗದೆ ಮುಂದೆ ನುಗ್ಗಿ ಹೋರಿ.
ಅಲ್ಲದಿರೆ ಸಾವಿನಲ್ಲಿಯು ಶಾಂತಿಯೆಮಗಿಲ್ಲ;
ಅಲೆವ ಪ್ರೇತಗಳಾಗಿ ಕೂಗಿ ಚೀರಿ
ಕಾಡುವೆವು ನಿಮಗೆ ನಿದ್ದೆಯ ಕೊಡದೆ ಚಿರದಿನಂ
ರಕ್ತತರ್ಪಣಕ್ಕಾಗಿ ಗಂಟಲಾರಿ!
ತನಿಯೆರೆಯಿರೈ ನಿಮ್ಮ ಎದೆನೆತ್ತರನು ಬಸಿದು
ಸ್ವಾತಂತ್ರ್ಯ ದೇವತೆಯ ತೃಷಿತ ಮುಖಕೆ.
ಇಂದು ಭಾರತಿ ಹಡೆದಳಲ್ತು ನಿಮ್ಮನು ಸುಖಕೆ;
ಪಶುಗಳೈ ನೀವೆಲ್ಲರಮೃತ ಮಖಕೆ!

“ಇರಲಿ ಹೂವಿನ ಮಾಲೆ, ಇರಲಿ ರೇಶ್ಮೆಯ ವಸನ,
ಇರಲಿ ಮುತ್ತಿನ ಹಾರ! ಕೈಗತ್ತಿ ಬರಲಿ!
ಇರಲಿ ಹೊಸ ಹೆಣ್ಣು ಮದುವೆಯ ಸೊಗಸು ಶೃಂಗಾರ;
ಬರಲಿ ಕಾರಾಗಾರ! ಮೃತ್ಯುವೈತರಲಿ!
ರಕ್ತ ಹೃದಯದ ಬಿಸಿಯ ರಕ್ತತರ್ಪಣವಿತ್ತು
ತಣಿಸಿರೈ ಸತ್ತರಾ ಬಯಕೆ ತೆತ್ತು;
ಇಲ್ಲದಿರೆ ನಿಮಗಾಗಿ ಸತ್ತೆಮಗೆ ಸೊಗವಿಲ್ಲ,
ಬದುಕಿರುವ ನಿಮಗುಮಾ ಬದುಕೆ ಮಿತ್ತು!”

ಇಂತು ಸತ್ತವರ ಕರೆ, ಓ, ಕೂಗುತಿದೆ, ಕೇಳು,
ಭೂತಕಾಲದ ಗರ್ಭಗೋರಿಯಿಂದ;
ಆಲಿಸಿಯು ಅದನು ನೀ ಸುಮ್ಮನಿರುವೆಯ ಹೇಳು,
ದೇಶಮಾತೆಯ ಹಡೆದ ವೀರಕಂದಾ?

೩೦-೯-೧೯೩೫