ಬೀಳಲಿ ಮೈ ನೆತ್ತರು ಕಾರಿ;
ಹೋದರೆ ಹೋಗಲಿ ತಲೆಹಾರಿ.
ತಾಯ್ನಾಡಿನ ಮೇಲ್ವೆಗೆ ಹೋರಿ;
ಸ್ವಾತಂತ್ರ್ಯದ ಸ್ವರ್ಗಕೆ ಏರಿ!

ಸೋದರ ಸೋದರಿಯರೆ, ಮೇಲೇಳಿ;
ಕರಿಯುತ್ತಿಹಳದೊ ರಣಕಾಳಿ.
ದೇಶಪ್ರೇಮಾವೇಶವ ತಾಳಿ,
ಖಳವೈರಿಯ ಸೀಳಿ!

ತ್ಯಾಗದ ಯಾಗಕೆ ನುಗ್ಗಿರಿ ಮುಂದೆ,
ಭೋಗದ ರೋಗವ ಬಿಡಿ ಹಿಂದೆ.
ತಡಮಾಡಿದರಮ್ಮನ ನೀಂ ಕೊಂದೆ!
ಸುಮುಹೂರ್ತವೊ ಇಂದೆ!

೩೦-೧೦-೧೯೩೫