ಮೃತವಾಗಿಹೆಯಾ? ಚಿಃ, ಓ ಹೃದಯಾ!
ನೋಡದೊ! ಏಳೆಳಿಂದ್ರ ದಿಗಂತದಿ
ಸುಂದರ ಮಧುರ ಉಷಾ ಉದಯ!

ಅರುಣನ ಮುತ್ತಿಗೆ ಉಷೆಯ ಕಪೋಲಂ
ಕೆಂಪೇರೆ,
ಕತ್ತಲ್ಗರುಳಿನ ನೀಲಿಯ ಹಣೆಯಲಿ
ಬಾಡುತಲಿವೆ ತಾರೆ.
ಶ್ಯಾಮಲ ಕಾನನಮಯ ಗಿರಿಕಂದರಗಳ ಮಧ್ಯೆ
ಕಣ್ಪಿಡುತಿದೆ ನಿದ್ದೆ.
ನುಣ್ದನಿ ಬೀರಿರೆ ನೂರಿಂಚರ ಹಕ್ಕಿ
ಉದಯದ ಸುಖಸಾಗರ ತುಳುಕುತ್ತಿದೆ ತೆರೆಯುಕ್ಕಿ!

ನಿನ್ನಲಸತೆಯಾಗಲಿ ಬಾಡುವ ಚುಕ್ಕಿ;
ನಿನ್ನುಲ್ಲಸವಾಗಲಿ ಹಾಡುವ ಹಕ್ಕಿ;
ಕನಸೊಡೆದೇಳಲಿ ಹಿಮಗಲ್ಲಾಗಿ
ನಿದ್ರಿಪ ಜೀವಂ; ಜಾಡ್ಯವ ನೀಗಿ,
ಚಿಮ್ಮಲಿ ಚಿರಚೇತನ ರಸವುಕ್ಕಿ,
ಆನಂದದ ನಿರ್ಝರಿಣಿಯ ಜಲ ಧುಮ್ಮಿಕ್ಕಿ!

೯-೮-೧೯೩೫