ಸ್ವರ್ಗವೆಲ್ಲಿದೆ?
ಸ್ವರ್ಗವೆಲ್ಲಿದೆ? –
ಕಾಮಧೇನು, ಕಲ್ಪವೃಕ್ಷ,
ಕಾಮಿನಿಯರ ಪೀನವಕ್ಷ,
ಅಮೃತ ಗಂಗೆಯಮಿತ ಪಾನ,
ಅಪ್ಸರೆಯರ ಅಮರ ಗಾನ,
ನಂದನೋsದ್ಯಾsನs? –
ಇವುಗಳಿರುವ ಕಟ್ಟುಕತೆಯ
ಮುಗಲಿನಾಚೆ ಲೊಕದಲ್ಲಿ
ನಾಕವಿಲ್ಲ!
ನಾಕವಿಲ್ಲ!

ಸ್ವರ್ಗವೆಲ್ಲಿದೆ?
ಸ್ವರ್ಗವೆಲ್ಲಿದೆ? –
ಹೆರರ ಸುಖದಿ ಸುಖಿಸುವೆನ್ನ
ಸುಖದ ಹೃದಯಕಮಲ ಮಧ್ಯೆ
ಜೇನು ಹೊಳೆಯ ಮಿಂದು ತೇಲಿ
ನಾಕವಲ್ಲಿದೆ!
ನಾಕವಲ್ಲಿದೆ!

ಹಣ್ಣು ತ್ತಿನುತಿರಲು ಹಕ್ಕಿ
ಅದರ ಸುಖದ ರಸದಿ ಸಿಕ್ಕಿ
ನಲಿಯಲೆನ್ನ ಆತ್ಮವುಕ್ಕಿ
ಆ ನನ್ನ ನಲ್ಮೆಯಲ್ಲಿ
ನಾಕ ತಾನಿದೆ!
ನಾಕ ತಾನಿದೆ!

ಕಿಟಿಕಿಯೆಡೆಗೆ ಮುದುಕಿ ತಿರುಕಿ
ಬಂದು ನಿಂದು ತಿರುಪೆ ಬೇಡೆ,
ಕೊಡುವ ಕಾಸಿಗೆನಸೊ ಹರಸಿ
ನಡಯೆ, ಅವಳ ಸುಖಕೆ ಸುಖಿಸಿ
ಧನ್ಯವಾಗುವೆನ್ನ ಮನದಿ
ನಾಕ ಮೂಡಿದೆ!
ಮನೆಯ ಮಾಡಿದೆ!

ಒಲುಮೆ ಬರಲು ಕೈ ಚಾಚಿ
ಅದರ ಮೈಯ ತಬ್ಬಿ ಬಾಚಿ,
ಸ್ವಾರ್ಥತೆಯನೆ ತೇಲಿಬಿಟ್ಟು
ನನ್ನದೆಂಬುದೆಲ್ಲ ಕೊಟ್ಟು
ಅದರೊಳಾನು ಲೀನವಾಗಿ
ನನ್ನ ಮರೆಯೆ ಬರಿಯನಾಗಿ –
ಸ್ವರ್ಗವೆಲ್ಲಿದೆ!
ಸ್ವರ್ಗವೆಲ್ಲಿದೆ!
ಸ್ವರ್ಗವೆಲ್ಲಿದೆ!

೬-೧೧-೧೯೩೪