ಕೋಟೆ ಹೆಬ್ಬಾಗಿಲಲಿ ಬಿಸುಸುಯ್ವನಿವನಾರು?
ಬಲ್ಗದೆಯ ಮೈಗಲಿಯು! ಭೀಮನೇನು?
ಕಂಬನಿಯ ಕರೆಯುತ್ತ ಮೂಕನಾಗೇಕಿಂತು
ನಿಂತಿರುವೆ, ಮಾರುತಿಯೆ? ಮಾತನಾಡು.

ಬೀರ, ಬೀರರ ಬೀರ, ಕಲ್ಲಾಗಿ ನೀನಿಂತು
ಹಾಳೂರ ಬಾಗಿಲನು ಕಾಯುತಿಹೆಯೇನು?
ಧರಣಿಪರು, ಮಂತ್ರಿಗಳು, ಸೈನಿಕರು, ಕಬ್ಬಿಗರು
ಬಿಟ್ಟಳಿದ ಪಾಳ್ನೆಲವ ಕಾಯುತಿಹೆಯೇನು?

ಸೊನ್ನೆ ದಿಟ್ಟಿಯನಟ್ಟಿ ಶೂನ್ಯತರ ಶೂನ್ಯವನು
ಮನದಿ ಮರುಕವನಾಂತು ನೆನೆವಯೇನು?
ನೀನು ಬಾಗಿಲ ಕಾಯುತಿರ್ದೊಡಂ ಹಂಪೆಯಿದು
ಮುಸಲರಿಂ ಹಸಿಮಸಣವಾದುದೇನು?
ನಿನ್ನಣ್ಣ ಹನುಮಂತನಿಲ್ಲಿರ್ದೊಡಂ ಬಂದು
ನಿನಗೆ ನೆರವಾಗಿದನು ಪೊರೆಯಲಿಲ್ಲೇನು?

ರನ್ನಪಂಪರ ಮಹಾಕಾವ್ಯರಸರಂಗದಲಿ
ಭಾರತದ ಕೊಳುಗುಳದಿ ನಿನ್ನ ನೋಡಿಹೆನು.
ಕಂಬನಿಯ ಕರೆವ ಭೀಮನನಲ್ಲಿ ಕಂಡಿಲ್ಲ;
ಜಯಮತ್ತ ರುದ್ರ ಮಾರುತಿಯ ಕಂಡೆ!
ನಮಿಸುವ ಹಿಮಾಲಯವ ಕಂಡು ವಿಸ್ಮಿತನಾದೆ,
ಹಂಪೆಯಲಿ, ಭೀಮ, ನೀನಳುವುದನು ಕಂಡು!

ತಿರುಗವೀ ಗದೆಯೇಕೆ ನಿಷ್ಪಂದವಾಗಿಹುದು?
ಮೈಮರೆತು ಗೋಳಿಡುತ ನೀನಾರ ನೆನೆವೆ?
ಇಲ್ಲಿಗೈತಹ ಯಾತ್ರಿಕರ ಎದೆಯ ಮೂಷೆಯಲಿ
ಹಾಳಾದ ಐಸಿರಿಯ ಕಿಚ್ಚ ಮರುಕೊಳಿಸು!

ಅಣಕಿಸೆಮ್ಮನು, ವೀರ; ಹೆಂಬೇಡಿಗಳು ನಾವು!
ನಿನ್ನ ಗದೆಯಾಘಾತದಿಂದೆಚ್ಚರುವೆವು!
ಹೇ ವೀರಮೂರ್ತಿಯೇ, ಹಂಪೆಯೀ ಮಸಣದಲಿ
ಭೈರವಾಶ್ರುವ ಚೆಲ್ಲಿ ಮೌನದಲಿ ನಿಲ್ಲು!
ಯಾತ್ರಿಕರ ಹೃದಯದಲಿ ಕೆಚ್ಚೂರಿ, ನೆಚ್ಚೂರಿ,
ಹೆಂಬೇಡಿಗಳನೆಲ್ಲ ನಿನ್ನೆಡೆಗೆ ಗೆಲ್ಲು!

೧೯-೨೮-೧೯೨೯