ಕೂಗುತಿವೆ ಕಲ್ಲು:
ಕಿವಿವೆತ್ತ ಕಿವುಡರಿರ, ಕೇಳಿ ಆ ಸೊಲ್ಲು!
ನಮ್ಮ ನಾಡಿನ ಮೂಲೆ ಮೂಲೆಯ ವೀರಗಲ್ಲು,
ಮಾಸತಿಯ ಮೃದು ಕಠೋರದ ಚಾಗಸೊಲ್ಲು!

ಸತ್ತವರು ನಾವಲ್ಲ, ನೀವೆಂದು ಸಾರುತಿವೆ.
ಆಳಾಳ್ಗೆ ಕೈದೋರಿ ಮೌನಗಳೆ ದೂರುತಿವೆ:
“ನಮ್ಮಂದಿನ ಕೆಚ್ಚು
ನಮ್ಮಂದಿನಾ ನೆಚ್ಚು
ನಿಮ್ಮೊಳಿಂದುದ್ಭವಿಸಲಾ ದಿವ್ಯ ಹುಚ್ಚು!”
ಎಂದಣಕಿ ಚೀರುತಿವೆ
ಹರಸಿ ಹಾರುತಿವೆ.

ಪಾಳು ದೇಗುಲದಲ್ಲಿ, ಲಂಟಾನ ಪೊದೆಯಲ್ಲಿ,
ಕಲ್ಲುರುಳಿ ಮುರಿದರಳಿಕಟ್ಟೆ ಹಳು ಬೆಳೆದಲ್ಲಿ,
ಇಲ್ಲಿ ಏನಿಲ್ಲವೆಂದು
ಇಲ್ಲಿ ಯಾರಿಲ್ಲವೆಂದು
ಸಾಗುತಿರಲನಿರೀಕ್ಷಿತಂ ಪ್ರೇತವೊಂದು
ಕೂಗುವುದು ಹಾದಿ ಬದಿಯ
ಕದಡಿ ನೆಮ್ಮದಿಯ!

“ಕೇಳಿಲ್ಲಿ ಮಡಿದೆನಾಂ ಜೀವವನೆ ತೃಣಮಾಡಿ
ಹೆಣ್ತನದ ಮಾನರಕ್ಷಣೆಗಾಗಿ ಕಾದಾಡಿ!”
“ಇಲ್ಲಿ ನಾಂ ಬಲಿಯಾದೆ,
ಹೆಬ್ಬುಲಿಯೊಡನೆ ಕಾದೆ;
ತಬ್ಬಲಿತನವ ತಡೆದು ಕರುಗೆ ತಾಯ್ವೋದೆ!”
“ಹಗೆಯಿರಿಯುತಿಲ್ಲಿ ಬಿದ್ದೆ;
ಮಿತ್ತುವನು ಗೆದ್ದೆ!”

ಇಲ್ಲಿ ದೇವರಿಗಾಗಿ, ಅಲ್ಲಿ ಹದಿಬದೆಗಾಗಿ,
ಇಲ್ಲಿ ಒಡೆಯನಿಗೊಡಲನಲ್ಲಿ ನಾಡಿಂಗಾಗಿ,
ಎಲ್ಲಿ ಕಣ್ಣಿಡಲಲ್ಲಿ,
ಎಲ್ಲಿ ಕಿವಿಯಿಡಲಲ್ಲಿ,
ಬಲಿದಾನಗೈದ ಕನ್ನಡತನದ ತುತ್ತೂರಿ
ಭೋರಿಡುತಿದೆ ಶಿಲಾಭೇರಿ,
ಪ್ರಾಣ ಸಂಚಾರಿ!

೧೩-೧೨-೧೯೪೧