ಕೋಗಿಲೆಯ ಕಂಠಕ್ಕೆ ಸ್ವರ್ಣಪದಕವ ತೊಡಿಸಿ
ನೇಣು ಬಿಗಿಯುವುದೇಕೆ ಬಹುಮಾನವೆಂದು?
ಹಾರ ಭಾರಕೆ ಗೋಣು ಕುಸಿದು ಕುಗ್ಗಲು, ಗಾನ
ಕೊರಗಿ ಕರ್ಕಶವಾಗಿ ನರಳುವುದು ನೊಂದು!
ಬಿರುದು ಬಾವಲಿ ಹೆಚ್ಚೆ? ಹೆಸರು ಹೊಗಳಿಕೆ ಹೆಚ್ಚೆ,
ಪಿಕವರಗೆ ಶಿವ ಕೊಟ್ಟ ಸವಿಗೊರಲಿಗಿಂತ?
ಕೇಳಿ ಸವಿದೆಯ? ಸಾಕು, ಅದೆ ಪರಮ ಬಹುಮಾನ!
ದಿವ್ಯ ನಿರ್ಲಕ್ಷತೆಯ ವರಕವಿಯ ಪಂಥ!

೩೦-೧೨-೧೯೩೫