ಸತ್ತ ಕಬ್ಬಿಗನೊಬ್ಬನೈತಂದಿಳೆಗೆ ಮತ್ತೆ
ತನ್ನ ಕೀರ್ತಿಯ ಹಬ್ಬುಗೆಯನಳೆಯಲೆಂದೆಳಸಿ
ನೋಡುತರಸುತ ತೊಳಲಿದನು, ಸೂಕ್ಷ್ಮ ಕಾಯದಲಿ,
ನಾಡೊಳಲ್ಲಲ್ಲಿ. ಒಂದೆಡೆ  ಸೃತಿಯ ಮಂದಿರಂ
ಕಣ್ಣು ಕೋರೈಪಂತೆ ಹೊನ್ನ ಸಿಂಗಾರದಲಿ
ಮೆರೆದಿತ್ತು. ಮತ್ತೊಂದು ಕಡೆ ತನ್ನ ವಿಗ್ರಹಂ
ಹಾಲ್ಗಲ್ಲಿನಲಿ ಕಡೆದು ನಡುಬೀದಿ ಚೌಕದಲಿ
ಹೊನ್ನಕ್ಕರದ ಬರಹದೊಡಗೂಡಿ ನಿಂತಿತ್ತು.
ಮಗುದೊಂದು ತಾಣದಲಿ ತನ್ನ ಚಿತ್ರಕೆ ಹೂವು
ಮುಡಿಸಿ, ಪರಿಮಳ ಗಂಧ ಕರ್ಪೂರಗಳನಿತ್ತು,
ಪೂಜೆ ನಡೆದಿತ್ತು. ಒಂದೆಡೆ ವಿಮರ್ಶಕವರ್ಯ
ಪಂಡಿತೋತ್ತಮನೊಬ್ಬನವನ ಕಬ್ಬವ ಕುರಿತು
ವ್ಯಾಖ್ಯಾನ ಕೊಡುತಿದ್ದನಲಿಪರ ಚಪ್ಪಾಳೆ
ಕಿವುಡುಗೈವಂತೆ. ಇನ್ನೊಂದು ಕಡೆ ಪತ್ರಿಕೆಯ
ಮುಖವೆಲ್ಲ ಕವಿಯ ಸಂಕೀರ್ತನೆಯ ಮಸಿಯಿಂದೆ
ಕರಿಹಿಡಿದು ಹೋದಂತೆಯಿತ್ತು! ಇದನೆಲ್ಲವನು
ಕಂಡು ಕವಿ ಕಂಬನಿಯ ಸೂಸಿದನು ನಿಡುಸುಯ್ದು
ತನ್ನೊಡನೆ ತನ್ನ ಕೀರ್ತಿಯುಮಳಿದುದೇ ಎಂದು!

ಖಿನ್ನಮುಖದಲಿ ಮರಳಿ ಸಗ್ಗಕೆ ಮರಳಲೆಂದು
ನಡೆಯುತಿರೆ, ದಾರಿಯೆಡೆ ಒಂದರಣ್ಯದ ಮಧ್ಯೆ,
ಹಳ್ಳಿಮನೆಯೊಂದರಿಂ ತನ್ನೊಂದು ಕಬ್ಬಮಮ್
ವಾಚಿಸುವ ಸಂಗೀತ ಕೇಳಿಸಿತು. ಕೌತುಕಕೆ
ಕವಿ ನಡೆದನಲ್ಲಿಗೆ. ಅಲ್ಲಿ , ಯಃಕಶ್ಚಿತಂ
ತಾನೊಬ್ಬನ ಕವನವನ್ನೋದುತೆದೆಯುಕ್ಕಿ,
ಭಾವರಸದಾನಂದದಾವೇಶದಿಂ ಪೊಂಗಿ
ಕಂಬನಿಯ ಕರೆಯುತಿರೆ, ಆತನಿಗೆ ಕಬ್ಬಿಗಂ,
ಕೈಮುಗಿದನೊಡನೆ: ಯಾರೊಬ್ಬರಲ್ಲಿರಲಿಲ್ಲ ;
ತನ್ನ ಕಲ್ಪಿಯ ತೋರೈಗವನೋದುತಿರಲಿಲ್ಲ;
ಕವಿಯ ಪ್ರತಿಭೆಗೆ ಭಾವದಾರತಿಯನಿರದೆತ್ತಿ
ತನ್ನಯಾನಂದ ಪೂಜೆಯೊಳಿರ್ದನಾ ಹೃದಯಿ!
ಅವನ ಕಣ್ಣಿನ ಹನಿಯ ಹೃದಯದಲಿ ಕಾಣಿಸಿತು
ಕಬ್ಬಿಗಗೆ ತನ್ನ ಕೀರ್ತಿಯ ನಿತ್ಯಮಂದಿರಂ!
ಆ ರಸಸಲಿಲ ಗಂಗೆಯಲಿ ಮಿಂದು ಶುಚಿಯಾಗಿ,
ನಗೆಮುಗುಳ ಮಾಲೆಯಿಂದಿರದೆ ಸಿಂಗರಗೊಂಡು,
ಧನ್ಯ ನಾನೆಂದೆನುತ ಸಗ್ಗಕಡರಿದನು ಕವಿ,
ತನ್ನಾ ಯಶಃಸ್ಥಿರತೆಯುತ್ಸಾಹದಲಿ ತೇಲಿ!

೨೪-೯-೧೯೩೫