ಮೊದಲನೆ ದೇವರು ಈ ಹಣ್ಮುದುಕಿ:
ನೀಡಜ್ಜಿಗೆ ಭಿಕ್ಷೆ!
ಬಾಳೀಕೆಗೆ ಸಾಕಾಗಿದೆ ಬದುಕಿ:
ಜೀವಿಸುವುದೆ ಶಿಕ್ಷೆ!
ನತ್ತಿಯ ದೇವರಿಗೇನಂತಿರಲಿ;
ಮೊದಲಜ್ಜಿಯ ಮನಕಿಂಪೈತರಲಿ.

ಗಿರಿ ಮಸ್ತಕದಾ ಕಲ್ಗುಡಿ ದೇವರೊ
ಸಂಪತ್ತಿನ ಬೀಡು;
ಗಿರಿ ಪದಧೂಳಿಯೊಳುರುಳುವಳಿವಳೋ
ತೊವಲೆಲುವಿನ ಗೂಡು.
ಮೊದಲೇ ತಿರುಕಿಗೆ ಪೂಜೆಯ ಮಾಡು:
ಮೊಗ ನಗುವಂದದಿ ಕಾಣಿಕೆ ನೀಡು.

ಮಲೆಯಾ ಮೂರ್ತಿಯ ನೋಡಲು ತವಕವೆ?
ಇರಲದು ಆಮೇಲೆ!
ಮುದಿತನ ಮೈವೆತ್ತೀಕೆಯೊಳೊಂದಿದೆ
ರುದ್ರ ಕಲಾಲೀಲೆ!
ನೋಡದೊ: ಬತ್ತಿದ ಹಲ್ಲಿಲಿ ಬಾಯಿ;
ತೆರೆ ಸುಕ್ಕಿದ ಮೊಗದಾ ಬಡ ತಾಯಿ!

ತಲೆ ಕೆದರಿದ ಹಣ್ಕೂದಲು ಬೆಳ್ಳಿ,
ಕಬ್ಬಿಣದೊಲು ಮೋರೆ;
ಕಣ್ಕಾಣದು, ಕಿವಿಕೇಳದು; ಕಾಣಿದೋ,
ಕೆನ್ನೆಯೊಳಿದೆ ಕೋರೆ!
‘ಕಾಣುತ್ತಿದೆ ಶಿವ ಮಾಡಿದ ಸೃಷ್ಟಿ!’
‘ಅಯ್ಯೋ, ಕುರುಡಾದುದೆ ಶಿವ ದೃಷ್ಟಿ?’
‘ಯಾರಿಲ್ಲವೆ ನಿನಗೋ ಎನ್ನಜ್ಜೀ?
ಮೊಮ್ಮಕ್ಕಳು ಕೂಡ?’
‘ಮಾತಾಡಲು ತ್ರಾಣವೆ ಇಲ್ಲವಳಿಗೆ;
ನೀ ಪ್ರಶ್ನಿಸಬೇಡ.’
‘ಹಾಳಾ ಯಮನಿಗೆ ಕರುಣೆಯೆ ಇಲ್ಲ:
ಸಾವ್ ಬೇಕಾದವರನು ಕೊಲಲೊಲ್ಲ!’

ಇಲ್ಲಾ, ಈ ಮುದುಕಿಗೆ ಯಾರಿಲ್ಲ!
ಹಾ, ದೇವರು ಇಲ್ಲ!
ಈಕೆಗೆ ಮರುಭೂಮಿಯು ಜಗವೆಲ್ಲ;
ಹಸುರಿನ ಹನಿಯಿಲ್ಲ.
ಮನುಜರ ಕನಿಕರವಾದರು ಇರಲಿ;
ದೇವರನದು ಈ ನೆಲಕೆಳೆತರಲಿ!

ತಟ್ಟೆಯ ತೆಂಗಾಯನು ಒಡೆದಲ್ಲಿಡು;
ಕೊಡು ಹಣ್ಗಳನಿಲ್ಲಿ!
ನಲ್ಮಾತೆರಡನು ನುಡಿ ಮುದಿಕಿವಿಗೆ:
ಮರುವನಹುದಲ್ಲಿ!
ಅದಕಿಂ ಪಿರಿದೇನರ್ಚಕ ಮಂತ್ರ?
ಈ ಪೂಜೆಗೆ ಮಿಗಿಲಾವುದು ತಂತ್ರ?

ಕ್ಷಮಿಸೆಮ್ಮನು, ಓ ಕಣ್ಕಿವುಡಜ್ಜೀ:
ನಾವೆಲ್ಲರು ಸೇರಿ,
ಹೇಗೋ ಏನೋ ಅಂತೂ ಇಂತೂ
ನಾವೆಲ್ಲರು ಸೇರಿ,
ನಿನ್ನನು ಈ ಗತಿಗೆಳೆದಿದ್ದೇವೆ!
ಆ ತಪ್ಪಿಂ ತಪ್ಪಿಸಿಕೊಳ್ಳಲು ಈ ದೇವರಗೀವರ ಸೇವೆ!

೧೭-೯-೧೯೩೫