ದೇವರು ಸೆರೆಯಾಳ್, ದೇಗುಲ ಸೆರೆಮನೆ,
ಕಾವಲು ಪೂಜಾರಿ!

ನೀನಾವಾಗಲು ನನ್ನಯ ಬಳಿಯಿರೆ
ಬಲು ತೊಂದರೆ ಎಂದು
ಗಿರಿಶಿಖರದೊಳತಿದೂರದಿ ಕಟ್ಟಿದೆ
ಗುಡಿಯನು ನಿನಗೊಂದು:
ಕಲ್ಲಿನ ಗೋಪುರ, ಕಲ್ಲಿನ ಗೋಡೆ,
ದುರ್ಗದವೊಲೆ ಬಲು ದುರ್ಗಮ ನೋಡೆ!

ಸೆರೆಯನು ತಪ್ಪಿಸಿಕೊಳ್ಳದ ತೆರದಲಿ
ಅರ್ಚಕ ರಕ್ಷೆಯಿದೆ;
ತೆಂಗಿನ ಕಾಯೊಳೆ ತಲೆಯನು ಬಡಿಯುವ
ಪೂಜೆಯ ಶಿಕ್ಷೆಯಿದೆ!
ಪುರಸತ್ತಾದರೆ ಕೆಲಸದೊಳಿಲ್ಲಿ
ಬೇಸರ ಪರಿಹಾರಕೆ ಬಹೆನಲ್ಲಿ!

೧೪-೭-೧೯೩೬