ಒಂದೇ ಸಮನೆ ಒಂದೇ ರಾಗದಲಿ ಬಜಾಯಿಸುತ್ತಿದೆ ಈ ಕೋಗಿಲೆ:
– ಕುಹೂ ಕುಹೂ ಕುಹೂ.
ಮೈ ಉರಿದುಹೋಗಿದೆ ನನಗೆ; ಎಂದೋ ಯಾರೋ ಕಲಿಸಿದ್ದನ್ನೆ
ತಿರುಗಾಮುರುಗ ಶತಮಾನಗಳಿಂದ ಮಗ್ಗಿ ಒಪ್ಪಿಸುವ ಹವ್ಯಾಸ.
ಯಾರಾದರೂ ಸಂಗೀತಮೇಷ್ಟ್ರಿಗೆ ಹೇಳಿ, ಇದಕ್ಕೆ ಒಂದಷ್ಟು
ಕೂಗಿಸಬೇಕು ‘ಸಾ ಪಾ ಸಾ’.
ಆಗ ಬಂದೀತು ಒಂದಷ್ಟು ವೈವಿಧ್ಯ; ಬಿಟ್ಟುಹೋದೀತು
ಹಳೆಯ ಅಭ್ಯಾಸ,
‘ಸೊಗಯಿಸಿ ಬಂದ ಮಾಮರನೆ, ತಳ್ತ್ತೆಲೆವಳ್ಳಿಯೆ, ಪೂತ
ಜಾತಿ ಸಂಪಗೆಯೆ ಕುಕಿಲ್ವ ಕೋಗಿಲೆಯೆ’,
‘ಕುಹೂ ಕುಹೂ ಕೋಕಿಲ ವಾಣಿ
ಜಗ ಜುಮ್ಮೆಂದುದು ಅದ ಕೇಳಿ’-
ಪಂಪನಿಂದ ಕುವೆಂಪುವಿನತನಕ ಅದೇ ವಂದಿಮಾಗಧ ವೃಂದ
ಸಾಕಾಗಿಹೋಗಿದೆ ನಮಗೆ ಈ ವಸಂತ ವರ್ಣನೆಯ ಪದ್ಯಬಂಧ.

ಎಲ್ಲ ಕ್ಷೇತ್ರಗಳಲ್ಲಿಯೂ ನಡೆಯುತಿದೆ ಈಗ ಸುಧಾರಣೆ
ಪ್ರೈಮರೀ ತರಗತಿಯಿಂದ ಕಾಲೇಜಿನಾಚೆಯವರೆಗೆ.
ಯೋಜನಾಮಂಡಲಿಗೇಕೆ ಹೊಳೆಯದೊ ಕಾಣೆ, ಕೋಗಿಲೆಯ ಕೊರಳ
ರಿಪೇರಿ ಮಾಡುವ ಬಯಕೆ.
ಗಮನಿಸಬೇಕು ನಮ್ಮ ಘನ ಸರ್ಕಾರ:
ಹೇಗೂ ಕೋಗಿಲೆಗೆ ಕಂಠವಿದೆ, ಬೇಕಾದದ್ದು ಶಾಸ್ತ್ರ ಸಂಸ್ಕಾರ;
ಕಡೇ ಪಕ್ಷ ಒಂದಿಷ್ಟು ಶಾಸ್ತ್ರೀಯ ಸಂಗೀತವಾದರೂ ರಿಕಾರ್ಡಾಗಿ ಉಳಿಯಲಿ
ಕೋಗಿಲೆಯ ಕೊರಳಿನಲ್ಲಿ,
ನಂಬಿದ್ದೇನೆ, ನನ್ನ ಈ ಅಹವಾಲು ಬೀಳುವುದಿಲ್ಲ
ನಿಮ್ಮ ಮೇಜಿನ ಕೆಳಗೆ ಬುಟ್ಟಿಯಲ್ಲಿ.