ಹಲವು ನೂರು ವರ್ಷಗಳ ಹಿಂದೆ ಕಣ್ಮರೆಯಾದರೂ ಇಂದೂ ಜನರ ಮನಸ್ಸಿನಲ್ಲಿ ನೆಲೆಸಿರುವ ವೀರರು ಕೋಟಿ ಚೆನ್ನಯರು. ತುಳುನಾಡಿನಲ್ಲಿ ಇಂದಿಗೂ ಜನಪದ ಗೀತೆಗಳು ಅವರ ಶೌರ್ಯವನ್ನು ಹಾಡಿ ಹೊಗಳುತ್ತವೆ.

ಜೀವದಾನ

ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಪಡುಮಲೆ ಎಂಬಲ್ಲಿ ಪೆರುಮಾಳ್ ಬಲ್ಲಾಳ ಎಂಬುವನು ಆಳುತ್ತಿದ್ದ. ಒಂದು ದಿನ ಅವನು ಬೇಟೆಗಾಗಿ ಹೋಗಿದ್ದನು. ಕಾಡಿನ ಹಳ್ಳತಿಟ್ಟುಗಳನ್ನು ದಾಟಿ ಓಡುವಾಗ, ಆತನ ಕಾಲಿಗೊಂದು ದೊಡ್ಡ ವಿಷಮುಳ್ಳು ತಗಲಿಕೊಂಡಿತು. ಮುಳ್ಳಿನ ವಿಷ ನಿಮಿಷ ನಿಮಿಷಕ್ಕೆ ಏರುತ್ತಿತ್ತು. ಈ ನೋವಿನಿಂದ ಒಂದು ಹೆಜ್ಜೆಯೂ ಮುಂದಿಡಲಾರದ ಬಲ್ಲಾಳನನ್ನು ಊಳಿಗದವರು ಹತ್ತಿರದ ವೈದ್ಯನೊಬ್ಬನ ಮನೆಗೆ ಹೊತ್ತರು.

ಆದರೆ ಮುಳ್ಳನ್ನು ಆತನಿಂದ ತೆಗೆಯಲಾಗಲಿಲ್ಲ. ಅನೇಕ ವೈದ್ಯರು ಬಂದು ಪ್ರಯತ್ನಿಸಿದರು. ಆದರೆ ಬಲ್ಲಾಳನ ಕಾಲು ದಿನೇದಿನೇ ಊದಿ, ಊಟ, ನಿದ್ರೆ ಇಲ್ಲದಂತೆ ಮಾಡಿತು. ನಾಡಿನ ಪ್ರಸಿದ್ಧ ವೈದ್ಯರು, ಮಂತ್ರಮಾಟ ಮಾಡುವವರು ಯಾರು ಬಂದರೂ ಬಲ್ಲಾಳನ ನರಳುವಿಕೆ ಕಡಿಮೆಯಾಗಲಿಲ್ಲ.

ಒಂದು ದಿನ ಅವನನ್ನು ನೋಡಲು ಬಂದಿದ್ದವರೊಬ್ಬರು, “ಇಂತಹ ವಿಷಮುಳ್ಳನ್ನು ನಮ್ಮ ಸಾಯಿನ ಬೈದ್ಯರು(ವೈದ್ಯರು) ಗುಣಪಡಿಸುತ್ತಿದ್ದರು. ಈಗ ಆತನಿಗೆ ಕಣ್ಣು ಕಾಣದಾಗಿದೆ. ಆದರೆ, ಆತನ ತಂಗಿ ದೇಯಿ ಬೈದಿತಿಯೂ ಔಷಧಿ ಮಾಡುತ್ತಾಳೆ” ಎಂದರು. ಬಲ್ಲಾಳನಿಗೆ ಹೋದ ಜೀವ ಬಂದಂತಾಯಿತು. ಬಲ್ಲಾಳನು ಆಕೆಯನ್ನು ತನ್ನ ಅರಮನೆಗೆ ಕರೆತರಲು, ಪಲ್ಲಕ್ಕಿಯೊಡನೆ ದೂತರನ್ನು ಕಳುಹಿಸಿದನು.

ಪೆರುಮಾಳ್ ಬಲ್ಲಾಳನ ದುರುದೃಷ್ಟಕ್ಕೆ ದೇಯಿ ಬೈದಿತಿ ತುಂಬು ಗರ್ಭಿಣಿಯಾಗಿದ್ದಳು. ಅವಳ ಗಂಡ ತೀರಿಕೊಂಡು ಮೂರೇ ತಿಂಗಳಾಗಿತ್ತು. ಆಕೆಯು ಬಲ್ಲಾಳನ ಅರಮನೆಗೆ ಹೋಗುವುದು ತುಂಬಾ ಕಷ್ಟವಾಗಿತ್ತು. ಆದರೂ ದೇಯಿ ಬೈದಿತಿ ಹೆದರದೆ ಬಲ್ಲಾಳನು ಕಳುಹಿಸಿದ ಪಲ್ಲಕ್ಕಿಯಲ್ಲಿ ಕುಳಿತು ಹೋದಳು.

ದೇಯಿ ಬೈದಿತಿ ಬಲ್ಲಾಳನ ಅರಮನೆಗೆ ಬಂದಾಗ, ಆತನು ಜೀವದಾಸೆ ಬಿಟ್ಟು ಅಳುತ್ತಿದ್ದನು. ನೋವಿನಿಂದ ತತ್ತರಿಸಿಹೋದ ಬಲ್ಲಾಳನು ಆಕೆಯ ಕೈ ಹಿಡಿದು, “ತಾಯಿ, ನನ್ನ ಜೀವವನ್ನುಳಿಸಿಕೊಂಡು, ನಿನ್ನ ಹೊಟ್ಟೆಯಲ್ಲಿ ಬಂದ ಮಗುವೆಂದು ನನ್ನನ್ನು ತಿಳಿ. ನಾನು ಇಲ್ಲಿಯವರೆಗೆ ಯಾರು ಕೊಡದಿದ್ದ ಬಹುಮಾನವನ್ನು ಕೊಡುತ್ತೇನೆ” ಎಂದು ಅಂಗಲಾಚಿ ಬೇಡಿದನು. ದೇಯಿ ಬೈದಿತಿಯು ತನ್ನೊಡನೆ ತಂದಿದ್ದ ಔಷಧಿಗಳನ್ನು ಅರೆದು ಲೇಪಿಸಿ, ಮುಳ್ಳನ್ನು ಬೀಳಿಸಿದಳು. ದಿನಗಳೆದಂತೆ ಬಲ್ಲಾಳನು ಸುಧಾರಿಸಿಕೊಂಡು ಓಡಾಡುವಂತಾದನು. ಬಲ್ಲಾಳನು ಆಕೆಯನ್ನು ಹೆತ್ತ ತಾಯಿಯಂತೆಯೇ ಗೌರವಿಸಿದನು.

ಆದರೆ, ಬಲ್ಲಾಳನ ಬೀಡಿನಲ್ಲಿ ಕೆಲವರಿಗೆ ಇದರಿಂದ ಹೊಟ್ಟೆ ಉರಿಯಿತು. ಇವರಲ್ಲಿ ಬಲ್ಲಾಳನ ಮಂತ್ರಿಯಾಗಿದ್ದ ಮಲ್ಲಯ್ಯ ಬುದ್ಧಿವಂತನೂ ಒಬ್ಬ.

ಬಲ್ಲಾಳನು ಗುಣಮುಖನಾದ ಕೂಡಲೇ ದೇಯಿ ಬೈದಿತಿಯು ಮನೆಗೆ ಹೊರಡಲನುವಾದಳು. ಬಲ್ಲಾಳನು ಭಾಷೆ ಕೊಟ್ಟಂತೆ, ಆಕೆಗೆ ಬೆಲೆಬಾಳುವ ಬಹುಮಾನಗಳನ್ನಿತ್ತನು. ಹಾಗೆಯೇ ಆಕೆ ಏಳು ವರ್ಷದ ಮಗಳು, ಕಿನ್ನಿದಾರುವಿಗೂ ಉಡುಗೊರೆಗಳನ್ನಿತ್ತನು. “ಇನ್ನು ಕೊಡಲಿಕ್ಕಿರುವ ವಿಶೇಷ ಬಹುಮಾನಗಳನ್ನು ನಿನ್ನ ಮುಂದಿನ ಮಕ್ಕಳು ಕೇಳಿದಾಗ ಕೊಡುತ್ತೇನೆ” ಎಂದು ಭಾಷೆಯಿತ್ತನು.

ಅರಮನೆಯಲ್ಲಿ ಜನನ

ದೇಯಿ ಬೈದಿತಿ ತುಂಬು ಗರ್ಭಿಣಿ. ಬಲ್ಲಾಳರಿಂದ ಬೀಳ್ಕೊಂಡು ಕಂಬಳ ಗದ್ದೆಗೆ ಬಂದಾಗ ಪ್ರಸವ ವೇದನೆ ತೋರಿತು. ನೋವನ್ನು ಸಹಿಸಲಾಗದೆ, ಯಾರ ಸಹಾಯವೂ ಇಲ್ಲದೆ ಒಂದು ತೆಂಗಿನಮರಕ್ಕೆ ಒರಗಿ ದಣಿವಾರಿಸಿ ಕೊಳ್ಳುತ್ತಿದ್ದಳು. ಅಷ್ಟರಲ್ಲಿ ಬಲ್ಲಾಳನ ಮಂತ್ರಿ ಮಲ್ಲಯ್ಯ ಬುದ್ಧಿವಂತನು ಅದೇ ದಾರಿಯಲ್ಲಿ ಬಂದ. ದಾರಿಗಡ್ಡವಾಗಿ ಕದಲದೆ ನಿಂತಿರುವ ಈಕೆಯನ್ನು ಕಂಡು, “ಬಿಲ್ಲವರ ಹೆಣ್ಣಿನ ಅದೆಷ್ಟು ಸೊಕ್ಕು? ದಾರಿಯಲ್ಲಿ ಯಾರು ಬರುತ್ತಿದ್ದಾರೆನ್ನುವ ಗಣನೆಯಿಲ್ಲದೆ ನಿಂತಿರುವೆಯಲ್ಲ? ಇದೇನು ಬಲ್ಲಾಳನು ಕೊಟ್ಟ ಬಹುಮಾನದ ಸೊಕ್ಕೆ?” ಎಂದು ಮೂದಲಿಸಿದನು. ಅದಕ್ಕೆ ದೇಯಿ ಬೈದಿತಿಯು, “ನಾನು ಸೊಕ್ಕಿನಿಂದ ನಿಂತಿದ್ದುದಾದರೆ, ಅದರ ಫಲವನ್ನು ನಾನುಣ್ಣುತ್ತೇನೆ. ನೀನು ಅಹಂಕಾರದಿಂದ ಮೂದಲಿಸುತ್ತಿರುವಿಯಾದರೆ ಅದಕ್ಕೆ ನನ್ನ ಹೊಟ್ಟೆಯಲ್ಲಿರುವ ಮಕ್ಕಳು ಉತ್ತರ ಕೊಡುವರು” ಎಂದಳು.

ಇಷ್ಟರಲ್ಲಿ ಪೆರುಮಾಳ್ ಬಲ್ಲಾಳನಿಗೆ ದೇಯಿ ಬೈದಿತಿಯು ಪ್ರಸವ ವೇದನೆಯಿಂದ ಕಷ್ಟಪಡುತ್ತಿರುವಳೆಂಬ ಸುದ್ದಿ ತಿಳಿದು, ಆಕೆಯನ್ನು ಆಳುಗಳ ಸಹಾಯದಿಂದ ಅರಮನೆಗೆ ಬರಮಾಡಿಕೊಂಡನು. ಶುಭ ಮುಹೂರ್ತದಲ್ಲಿ ಆಕೆ ಎರಡು ಗಂಡುಮಕ್ಕಳಿಗೆ ಜನ್ಮವಿತ್ತಳು. ಒಂದು ಶುಭ ದಿವಸ ಪೆರುಮಾಳ್‌ಬಲ್ಲಾಳನು, ಅವನಿಗೆ ವಿಶ್ವಾಸವಿದ್ದ ಕೋಟೇಶ್ವರ ಮತ್ತು ಚೆನ್ನಿಗದೇವರ ಹೆಸರಿನಲ್ಲಿ ಹಿರಿಯ ಮಗುವಿಗೆ ಕೋಟಿ ಎಂದು ಕಿರಿಯವನಿಗೆ ಚೆನ್ನಯ ಎಂದೂ ನಾಮಕಾರಣ ಮಾಡಿಸಿದನು.

ಕೋಟಿ ಚೆನ್ನಯರು ಹುಟ್ಟಿದ ಕೆಲವೇ ದಿನಗಳಲ್ಲಿ ದೇಯಿ ಬೈದಿತಿ ಕಾಲವಾದಳು. ಪೆರುಮಾಳ್ ಬಲ್ಲಾಳನು ತನ್ನ ಮಕ್ಕಳಂತೆಯೇ ಈ ತಬ್ಬಲಿ ಮಕ್ಕಳನ್ನು ಸಾಕಲು ತಕ್ಕ ವ್ಯವಸ್ಥೆ ಮಾಡಿದನು. ದೇಯಿ ಬೈದಿತಿಯ ಹತ್ತಿರದ ಸಂಬಮಧಿಯಾದ ಬಿಲ್ಲವರ ಸಾಯಿನ ಬೈದ್ಯನನ್ನು ಕರೆಸಿ, ಅವನ ಉಡಿಗೆ ಈ ಮಕ್ಕಳನ್ನು ಹಾಕಿದನು.

’ಈಗ  ಕಿತ್ತುಕೊಂಡ ಚೆಂಡನ್ನು-’

ಪೆರುಮಾಳ್ ಬಲ್ಲಾಳನ ಕೃಪೆಯಿಂದ ಹಾಗೂ ಸಾಯಿನ ಬೈದ್ಯನ ಪ್ರೇಮದಿಂದ ಮಕ್ಕಳು ಚೆನ್ನಾಗಿ ಬೆಳೆದರು. ಆಟದಲ್ಲಿ, ಓಟದಲ್ಲಿ ಕೋಟಿ ಚೆನ್ನಯರನ್ನು ಮೀರಿಸುವ ಮಕ್ಕಳು ಅಲ್ಲಿ ಯಾರೂ ಇರಲಿಲ್ಲ. ಒಂದು ದಿನ ಬಲ್ಲಾಳನ ಮಂತ್ರಿ, ಮಲ್ಲಯ್ಯ ಬುದ್ಧಿವಂತನ ಮಕ್ಕಳು ಸ್ಪರ್ಧೆಯಲ್ಲಿ ಸೋತು ಜಗಳವಾಡಿದರು. ಜಗಳವಾದಾಗ ಕೋಟಿ ಚೆನ್ನಯರು ಒಕ್ಕಲಿಗರ ಮಕ್ಕಳಿಂದ ಚೆಂಡನ್ನು ಕಸಿದುಕೊಂಡಿದ್ದರು.

ಅಪಮಾನಿತರಾಗಿ, ಅಳುತ್ತಾ ಮನೆಗೆ ಬಂದ ತನ್ನ ಮಕ್ಕಳನ್ನು ನೋಡಿದ ಮಲ್ಲಯ್ಯ ಬುದ್ಧಿವಂತನು ಕಿಡಿಕಿಡಿ ಯಾದನು. ಚೆಂಡನ್ನು ಆಡಿಸುತ್ತಾ ಹಾರಿಸುತ್ತಾ ಕೋಟಿ ಚೆನ್ನಯರು ಮನೆಗೆ ಹಿಂತಿರುಗುತ್ತಿದ್ದರು. ಮಲ್ಲಯ್ಯ ಬುದ್ಧಿವಂತನು ಆ ಚಿಕ್ಕ ಮಕ್ಕಳನನ್ನು ಥಳಿಸಿ, ಚೆಂಡನ್ನು ಕಸಿದುಕೊಂಡು ಅಪಮಾನಗೊಳಿಸಿದನು.

ಆದರೆ, ಕೋಟಿ ಚೆನ್ನಯರು ಸಿಟುಗೊಳ್ಳಲಿಲ್ಲ. ಬದಲು ಮಲ್ಲಯ್ಯ ಮಂತ್ರಿಯನ್ನುದ್ದೇಶಿಸಿ, “ಈ ಚೆಂಡನ್ನು ನಿಮ್ಮ ಮನೆಯಲ್ಲಿ ಭದ್ರವಾಗಿರಿಸಿರಿ. ಈ ಸಣ್ಣ ಕೈಗಳಿಂದ ಕಿತ್ತುಕೊಂಡ ಚೆಂಡನನ್ನು ದೊಡ್ಡ ಕೈಗಳಿಂದ ಸೆಳೆದುಕೊಳ್ಳುತ್ತೇವೆ” ಎಂದು ಹೇಳಿ ಮನೆ ದಾರಿ ಹಿಡಿದರು.

ಮಲ್ಲಯ್ಯ ಬುದ್ಧಿವಂತನ ಮನೆ ಬಿಲ್ಲವರ ಮನೆಗಳ ಹತ್ತಿರವೇ ಇದ್ದುದರಿಂದ ಪ್ರತಿದಿನ ಒಂದಲ್ಲ ಒಂದು ಜಗಳ ನಡೆಯುತ್ತಲೇ ಇತ್ತು. ಪ್ರತಿದಿನ ಇವರ ದೂರುಗಳನ್ನು ಕೇಳಿ ಪೆರುಮಾಳ್ ಬಲ್ಲಾಳನಿಗೆ ಸಾಕಾಗಿದ್ದಿತು. ಆದುದರಿಂದ ಬಲ್ಲಾಳನು ಹತ್ತಿರವಿದ್ದ ಮನೆಗಳನ್ನು ದೂರ ಮಾಡಿ, ಕಂಬಳ ಗದ್ದೆಗಳನ್ನೂ ಪ್ರತ್ಯೇಕಿಸಿಕೊಟ್ಟಿದ್ದನು. ಕೋಟಿ-ಚೆನ್ನಯರು ಇದರಿಂದ ಮಲ್ಲಯ್ಯ ಮಂತ್ರಿಯ ಮನೆಯಿಂದ ದೂರವಾದರೂ ದ್ವೇಷದ ಕಿಡಿ ಒಳಗೊಳಗೆ ಉರಿಯುತ್ತಿತ್ತು.

ಮಲ್ಲಯ್ಯನ ಕಥೆ ಮುಗಿಯಿತು

ಮಲ್ಲಯ್ಯ ಬುದ್ಧಿವಂತನ ಮತ್ತು ಕೋಟಿ ಚೆನ್ನಯರ ಗದ್ದೆಗಳು ಮೇಲೆಕೆಳಗಿದ್ದುದರಿಂದ ಪ್ರತಿವರ್ಷವೂ ಒಂದು ಶುಭ ಮುಹೂರ್ತವನ್ನು ಕಂಡುಹಿಡಿದು ಇಬ್ಬರ ಗದ್ದೆಗಳನ್ನು ಒಂದೇ ದಿನ ಉತ್ತು ಬಿತ್ತುವುದು ಸಂಪ್ರದಾಯವಾಗಿತ್ತು. ಆದರೆ ಮಲ್ಲಯ್ಯ ಮಂತ್ರಿಯು ಕೋಟಿ ಚೆನ್ನಯರಿಗಿಂತ ಮೊದಲು ಉತ್ತು ಬಿತ್ತಬೇಕೆಂದು ಗ್ರಾಮ ಪುರೋಹಿತನಲ್ಲಿ ದಿನವನ್ನು ನಿಶ್ಚಯಿಸಿಕೊಂಡ. ಕೋಟಿ ಚೆನ್ನಯರಿಗೆ ’ನಿಮ್ಮ ಗದ್ದೆಯನ್ನು ಮುಂದಿನ ವಾರ ಉಳಬಹುದಂತೆ’ ಎಂದು ಸುಳ್ಳು ಹೇಳಿದ. ಇದನ್ನು ತಿಳಿದ ಕೋಟಿ ಚೆನ್ನಯರು ಮಲ್ಲಯ್ಯನು ನಿಶ್ಚಯಿಸಿದ ದಿನದಂದೇ ಉಳಲು ಒಳಗೊಳಗೆ ಸಿದ್ದಪಡಿಸಿಕೊಂಡರು. ಊರಿನ ಜನರಲ್ಲಿ ಎತ್ತು, ಆಳುಗಳನ್ನು ಮೊದಲೇ ಏರ್ಪಾಡು ಮಾಡಿಕೊಂಡರು.

ಮಲ್ಲಯ್ಯ ಬುದ್ಧಿವಂತನು ತನ್ನ ಕಂಬಳ ಗದ್ದೆಯನ್ನು ಉಳುವ ದಿನ ಬಂದಿತು. ಸೂರ್ಯ ಮೂಡುವ ಹೊತ್ತಿಗೆ ಕೋಟಿ ಚೆನ್ನಯರ ಗದ್ದೆಯು ಉತ್ತು ಎರಡು ಸಾಲುಗಳಾಗಿದ್ದವು. ಬೆಳಿಗ್ಗೆ ಎದ್ದು ತನ್ನ ಗದ್ದೆಯತ್ತ ಬಂದ ಮಲ್ಲಯ್ಯನಿಗೆ ತುಂಬಾ ಅವಮಾನವಾಯಿತು. ಆತನ ಗದ್ದೆಯಲ್ಲಿ ಎರಡೇ ಜೊತೆ ಎತ್ತುಗಳಿದ್ದವು. ಆದರೆ ಕೋಟಿ ಚೆನ್ನಯರ ಗದ್ದೆ ಎರಡು ಸಾಲು ಉತ್ತಾಗಿದೆ. ಕೋಟಿಯು ಮಲ್ಲಯ್ಯನನ್ನು ಕೆಣಕಲೆಂದೇ, “ಯಜಮಾನರೇ, ನಿಮ್ಮ ಗದ್ದೆಯಲ್ಲಿ ಎರಡೇ ಜೊತೆ ಎತ್ತುಗಳಿವೆಯಲ್ಲಾ! ನಾನೆರಡು ಜೊತೆ ಕಳುಹಿಸುತ್ತೇನೆ. ಗ್ರಾಮಸ್ಥರೆಲ್ಲಾ ನೀವು ಮಂತ್ರಿಗಳೆಂದು ತಿಳಿದೂ ನಮ್ಮಲ್ಲಿಗೆ ಉಳಲು ಬಂದಿರುವರಲ್ಲಾ! ನೀವು ಈ ವಿಚಾರ ಮೊದಲೇ ಹೇಳಬಾರದಿತ್ತೇ?” ಎಂದು ತನ್ನ ಗದ್ದೆಯಿಂದ ಎರಡು ಜೊತೆ ಎತ್ತುಗಳನ್ನು ಕಳುಹಿಸಿಕೊಟ್ಟನು.

ತನ್ನ ಗದ್ದೆಗಿಂತ ಬಿಲ್ಲವ ಮಕ್ಕಳ ಗದ್ದೆಯನ್ನು ಮೊದಲು ಉತ್ತು ಬಿತ್ತಿದ್ದನ್ನು ನೋಡಿದ ಮಲ್ಲಯ್ಯ ಬೆಂಕಿಯ ಕೆಂಡವಾದ. ತನ್ನ ಗದ್ದೆಗೆ ಬಂದ ಎತ್ತುಗಳನ್ನು ಹೊಡೆದು, ಬಡಿದು ಉಳತೊಡಗಿದನು.

ಇದನ್ನು ಕಂಡ ಕೋಟಿಯು, “ಸ್ವಾಮಿ, ಉಪಕಾರಕ್ಕೆ ಬಂದ ಹೆರರ ಎತ್ತುಗಳನ್ನು ಹೊಡೆಯುವುದು ನ್ಯಾಯವಲ್ಲ. ಆ ಮೂಕ ಎತ್ತುಗಳ ಬೆನ್ನಮೇಲೆ ತನ್ನ ಸಿಟ್ಟನ್ನು ತೋರಿಸಬಾರದು” ಎಂದು ಹೇಳಿ ರೇಗಿಸಿದ.

ಮಲ್ಲಯ್ಯ ಕೋಪದಿಂದ ಕುದಿಯುತ್ತಿದ್ದ.

ನಾಲ್ಕು ದಿವಸ ಕಳೆದಮೇಲೆ ಬಿತ್ತಿದ್ದ ಗದ್ದೆಯಿಂದ ಕಟ್ಟಿದ್ದ ನೀರನ್ನು ಬಿಡದಿದ್ದರೆ ಮೊಳಕೆ ಬಂದ ಬೀಜಗಳು ಕೊಳೆತುಹೋಗುತ್ತವೆ. ಸಾಮಾನ್ಯವಾಗಿ ಮೇಲಿನ ಗದ್ದೆಯ ನೀರು ಕೆಳಗಗೆ ತಾನೆ ಹರಿಯಬೇಕು? ನಾಲ್ಕು ದಿವಸದ ಮೇಲೆ ಕೋಟಿ ಚೆನ್ನಯರು ತಮ್ಮ ತುಂಬಿದ ಗದ್ದೆಯ ನೀರು ಕೆಳಗೆ ತಾನೆ ಹರಿಯಬೇಕು? ನಾಲ್ಕು ದಿವಸದ ಮೇಲೆ ಕೋಟಿ ಚೆನ್ನಯರು ತಮ್ಮ ತುಂಬಿದ ಗದ್ದೆಯ ನೀರನ್ನು ಕೆಳಗಿನ ಮಲ್ಲಯ್ಯನ ಗದ್ದೆಗೆ ಮಾಮೂಲಿನಂತೆ ಬಿಟ್ಟಿದ್ದರು. ಇದನ್ನು ಕಂಡ ಮಲ್ಲಯ್ಯನು ತನ್ನ ಆಳುಗಳನ್ನು ಕರೆಸಿ, ನೀರನ್ನು ಕಟ್ಟಿ, ತನ್ನ ಗದ್ದೆಗೆ ನೀರು ಬಿಡಕೂಡದೆಂದು ವಿರೋಧಿಸಿದನು. ನೀರನ್ನು ಕಟ್ಟಿದ ಮಲ್ಲಯ್ಯನು ಕೋಟಿಯನ್ನು ಅಣಕಿಸುವ ಧ್ವನಿಯಲ್ಲಿ, “ನೀರನ್ನು ತಲೆಯ ಮೇಲೆ ಹೊತ್ತು ಆಚೆ ಬಿಡು” ಎಂದು ಕೇಕೆ ಹಾಕಿ ನಕ್ಕನು.

ಕೋಟಿಗಿಂತ ಚೆನ್ನಯ ತುಂಬಾ ದುಡುಕು ಸ್ವಭಾವದವನು ಹಾಗೂ ಶೀಘ್ರ ಕೋಪಿ. ಚೆನ್ನಯ ಬಿರುಗಾಳಿಯಂತೆ ಮಲ್ಲಯ್ಯನತ್ತ ಧಾವಿಸಿದ. ಆತನನ್ನು ಅನಾಮತ್ತಾಗಿ ಎತ್ತಿ, ಕೆಳಕ್ಕೆ ಕುಕ್ಕಿ, ತನ್ನ ಕೈಯಲ್ಲಿದ್ದ ಕತ್ತಿಯಿಂದ ಎದೆಗೆ ಎರಡು ಬಾರಿ ಇರಿದ. ದೇಯಿ ಬೈದಿತಿಯು ಅಂದು, ’ನನ್ನ ಮಕ್ಕಳು ನಿನಗೆ ಉತ್ತರ ಕೊಟ್ಟಾರು’ ಎಂದ ಮರದಡಿಯಲ್ಲೇ ಮಲ್ಲಯ್ಯನು ಕಣ್ಮುಚ್ಚಿದನು. ಕೊಲೆಯಾದ ಮಲ್ಲಯ್ಯನ ದೇಹವನ್ನು ಅಣ್ಣತಮ್ಮಂದಿರು ಹತ್ತಿರದ ತೋಡಿಗೆ ಉರುಳಿಸಿ, ಮಣ್ಣು ಮುಚ್ಚಿ ಕೈತೊಳೆದರು.

ಪೆರುಮಾಳ್ ಬಲ್ಲಾಳನಿಂದ ದೂರ

ಕೊಲೆ ಮಾಡಿದ ನಂತರ ಕೋಟಿ ಚಿನ್ನಯರು ಮಲ್ಲಯ್ಯ ಬುದ್ಧಿವಂತನ ಮನೆಯತ್ತ ಸಾಗಿದರು. ಅವರ ಕೋಪಾವೇಶವನ್ನೂ ಕೈಯಲ್ಲಿದ್ದ ರಕ್ತದ ಕತ್ತಿಯನ್ನೂ ಕಂಡ ಮಲ್ಲಯ್ಯನ ಹೆಂಡತಿ ಓಡಿ ಹೋದಳು. ಕೋಟಿ ಚಿನ್ನಯರು ಮಲ್ಲಯ್ಯನ ಮನೆಗೆ ನುಗ್ಗಿ, ಅಂದು ಚಿಕ್ಕ ಕೈಗಳಿಂದ ಕಸಿದುಕೊಂಡ ಚೆಂಡನ್ನು ಹುಡುಕಿ, ದೊಡ್ಡ ಕೈಗಳಿಂದ ಅದನ್ನು ಹೊರತಂದು ತಮ್ಮ ಮನೆಯತ್ತ ಸಾಗಿದರು.

ಇವರು ಮನೆ ಮುಟ್ಟುವುದರೊಳಗೆ ಸಾಕುತಾಯಿ ಸಾಯಿನ ಬೈದಿತಿಗೆ ಕೊಲೆಯ ವಿಚಾರ ತಿಳಿದಿತ್ತು. ಬಲ್ಲಾಳನು ಮಕ್ಕಳನ್ನು ಶಿಕ್ಷಿಸುವನೆಂದು ಹೆದರಿ ಅಳುತ್ತಿದ್ದಳು. ಚೆನ್ನಯ, “ಅಮ್ಮಾ, ನೀನೇಕೆ ಅಳುವೆ? ನಮ್ಮ ಕೈಯಲ್ಲಿಂದು ಶಕ್ತಿಯಿದೆ, ಅನ್ಯಾಯ ಮಾಡುವವರಿಗೆ ತಕ್ಕ ಶಾಸ್ತಿ ಮಾಡದಿದ್ದರೆ ನಾವಿದ್ದು ಪ್ರಯೋಜನವೇನು? ನ್ಯಾಯಕ್ಕಾಗಿ ನಾವು ಪ್ರಾಣವನ್ನೇ ಕೊಟ್ಟೇವು” ಎಂದು ಅವಳನ್ನು ಸಂತೈಸಿದನು.

ಅಷ್ಟರಲ್ಲಿ ಬಲ್ಲಾಳನ ಸೈನಿಕರು ಬಂದು ಕೋಟಿ ಚೆನ್ನಯರನ್ನು ಅರಮನೆಗೆ ಕರೆದೊಯ್ದರು.

ಕೋಟಿ ಚೆನ್ನಯರನ್ನು ಕಂಡೊಡನೆ ಬಲ್ಲಾಳನು, “ಈ ರಾಜ್ಯದಲ್ಲಿ ನಿಮ್ಮನ್ನು ಕೇಳುವವರಾರೂ ಇಲ್ಲವೆ? ಮಾಣಿಕ್ಯವೆಂದು ಉಡಿಯಲ್ಲಿ ಕೆಂಡವನ್ನೇ ಕಟ್ಟಿಕೊಂಡೆನಲ್ಲಾ! ಇಂದು ನೀವು ಮಾಡಬಾರದ ಕೆಲಸವನ್ನು ಮಾಡುವಿರಿ. ನನ್ನ ಮಂತ್ರಿ ಮಲ್ಲಯ್ಯ ಬುದ್ಧಿವಂತನನ್ನು ಕೊಲೆ ಮಾಡಿದ್ದೀರಿ. ನಿಮಗೆ ಶಿಕ್ಷೆ ಮಾಡಬಾರದೇಕೆ?” ಎಂದು ಗರ್ಜಿಸಿದನು.

ಆ ಮರದಡಿಯಲ್ಲೇ ಮಲ್ಲಯ್ಯನು ಕಣ್ಮುಚ್ಚಿದನು

ಕೋಟಿ ಚೆನ್ನಯರಿಗೆ ಎದುರಿಸಬೇಕಿರುವ ವಿಪತ್ತಿನ ಅರಿವಾಯಿತು. ಯಾವುದಾದರೊಂದು ಉಪಾಯದಿಂದ ಅವರು ಅಲ್ಲಿಂದ ನುಣುಚ್ಚಿಕೊಳ್ಳಬೇಕಿತ್ತು. ಆಗ ಕೋಟಿಯು, ಅಂದು ತನ್ನ ತಾಯಿಯಾದ ದೇಯಿ ಬೈದಿತಿಯು ಬಲ್ಲಾಳನ ಜೀವವುಳಿಸಿ, ಮಾಡಿದ ಉಪಕಾರಕ್ಕೆ ಇತ್ತ ಭಾಷೆಯನ್ನು ನೆನಪು ಮಾಡಿಕೊಟ್ಟನು.

“ಅಂದು ನಮ್ಮ್ ತಾಯಿಗೆ ಭಾಷೆ ಕೊಟ್ಟಾಗ, ಅವಳ ಮಕ್ಕಳಿಗೆ ಕೇಳಿದ ಉಡುಗೊರೆ ಕೊಡುವುದಾಗಿ ಹೇಳಿದ್ದುಂಟಷ್ಟೆ?” ಎಂದ ಚೆನ್ನಯ.

“ಹೌದು ! ಅದಕ್ಕೂ ಈ ಕೊಲೆಗೂ ಸಂಬಂಧ ವೇನು?”

“ಸ್ವಾಮಿ, ನಾವು ನಿಮ್ಮಲ್ಲಿ ಪ್ರಾಣಭಿಕ್ಷೆಯನ್ನು ಬೇಡುತ್ತಿಲ್ಲ. ಮಲ್ಲಯ್ಯನನ್ನು ಕೊಂದದ್ದಕ್ಕೆ ನಮಗೆ ಶಿಕ್ಷೆಯಾಗಲಿ. ಆದರೆ ತಾವು ಕೊಟ್ಟ ಭಾಷೆಯನ್ನು ಈಗ ನೆರವೇರಿಸಿ ಕೊಡಿ ಎಂದು ಕೇಳುತ್ತಿದ್ದೇವೆ” ಎಂದ ಚೆನ್ನಯ.

“ನೀವು ನಮಗೆ ಮರಣದ ಶಿಕ್ಷೆಯನ್ನೇ ವಿಧಿಸಿದರೆ, ನಿಮ್ಮಲ್ಲಿ ಬಹುಮಾನವನ್ನು ಕೇಳುವುದಾದರೂ ಯಾರು?” ಎಂದು ಕೋಟಿ ಧ್ವನಿಗೂಡಿಸಿದ.

ಬಲ್ಲಾಳನು ಮಾತಿಗೆ ಕಟ್ಟುಬಿದ್ದದ್ದನು. ಅವನನ್ನು ಇನ್ನೂ ರೇಗಿಸಲು ಕೋಟಿ, “ತಮಗೆ ಹೇಳಿದಂತೆ ಕೊಡಲು ಸಾಧ್ಯವಿಲ್ಲದಿದ್ದರೆ ಹೋಗಲಿ ಬಿಡಿ” ಎಂದನು.

ಬಲ್ಲಾಳನಿಗೆ ಇದು ಇನ್ನೂ ಬಿಸಿ ಮುಟ್ಟಿದಂತಾಯಿತು. ರೇಗಿದ ಧ್ವನಿಯಲ್ಲಿ ಅವನು, “ನಿಮಗೇನು ಬೇಕು, ಹೇಳಿ” ಎಂದನು.

“ಬಲ್ಲಾಳರ ಭತ್ತದ ಗದ್ದೆ” ಎಂದ ಚೆನ್ನಯ.

“ಇಲ್ಲ” ಎಂದ ಬಲ್ಲಾಳ.

“ನಿಮ್ಮ ಹೆಂಡಂದಿರ ಹೂತೋಟ” ಎಂದ ಕೋಟಿ.

“ಸಾಧ್ಯವಿಲ್ಲ”.

“ಅದು ಸಾಧ್ಯವಾಗದಿದ್ದರೆ ನಿಮ್ಮ ಪಟ್ಟದ ಕತ್ತಿ ಕೊಡಿ” ಎಂದ ಚೆನ್ನಯ.

ಬಲ್ಲಾಳನಿಗೆ ಇನ್ನೂ ರೇಗಿತು. “ನೀವು ನನ್ನ ಗದ್ದೆ, ಹೂತೋಟ, ಪಟ್ಟದ ಕತ್ತಿ ಕೇಳುವವರು, ನಾಳೆ ನನ್ನ ಗದ್ದುಗೆಯನ್ನೇ ಕೇಳಬಹುದು. ನಿಮ್ಮನ್ನು ಹೀಗೆ ಬಿಟ್ಟರೆ ಆಗದು” ಎಂದು ಹೇಳಿ, “ಯಾರಲ್ಲಿ? ಇವರನ್ನು ಹೆಡೆಮುರಿ ಕಟ್ಟಿ ಸೆರೆಮನೆಗೆ ಹಾಕಿ” ಎಂದು ಅಪ್ಪಣೆಯಿತ್ತ.

ಆದರೆ ಕೋಟಿ ಚೆನ್ನಯರ ಹತ್ತಿರ ಸುಳಿಯಲು ಯಾರಿಗೂ ಧೈರ್ಯವಾಗಲಿಲ್ಲ.

ಕೋಟಿಯು ತನ್ನ ವಸ್ತ್ರದೊಳಗಿನಿಂದ ಒಂದು ಕವಳಿಗೆ  ವೀಳ್ಯದೆಲೆಯನ್ನು ತೆಗೆದು, ಬಲ್ಲಾಳನು ಕುಳಿತಿದ್ದ ಆಸನದ ಬಳಿಯಿಟ್ಟು; “ನಮ್ಮ ಕೇಳಿಕೆಯನ್ನು ತೀರಿಸಲು ನಿಮಗೆ ಆರು ವರ್ಷದ ಅವಧಿ, ನೆನಪಿಡಿ” ಎಂದು ಹೇಳಿದ. ಕೋಟಿ ಚೆನ್ನಯರ ಮೈಮುಟ್ಟುವ ವೀರರು ಯಾರೂ ಅಲ್ಲಿಲ್ಲದ್ದರಿಂದ ಅಲ್ಲಿಂದ ಮಾಯವಾದರು.

ಬಲ್ಲಾಳನು ನಡೆದ ಘಟನೆಯಿಂದ ಬೆದರಿದ. ಈ ಹುಡುಗರಿಂದ ಇಂದಲ್ಲ ನಾಳೆ ಕೆಡುಕಾಗುವುದೆಂದು ತಿಳಿದು ಅವರನ್ನು ಹೇಗಾದರೂ ನಾಶಮಾಡಲು ಅನೇಕ ಒಳ ಸಂಚುಗಳನ್ನು ಮಾಡಿದನು. ಆದರೆ ಈ ಹಂಚಿಕೆಗಳಿಗೆ ಸಿಕ್ಕದೆ ಕೋಟಿ ಚೆನ್ನಯರು ರಾಜ್ಯದಲ್ಲೇ ತಲೆಯೆತ್ತಿ ತಿರುಗುತ್ತಿದ್ದರು.

ಮುಂದೆ-

ಒಮ್ಮೆ ಉರಿಬಿಸಿಲಿನಲ್ಲಿ ಸುತ್ತಿ ಬಳಲಿದ್ದ ಕೋಟಿ ಚೆನ್ನಯರು ಪಡುಮಲೆಯ ಅಂಚಿನಲ್ಲಿದ್ದ ಒಂದು ಅರಳೀ ಕಟ್ಟೆಯ ಮೇಲೆ ದಣಿವಾರಿಸಲು ಬಂದರು. ಆ ಕಟ್ಟೆಯ ಹಿಂದುಗಡೆ ಒಬ್ಬ ಬ್ರಾಹ್ಮಣನು ಬಾಯಾರಿದ ದಾರಿಹೋಕರಿಗೆ ನೀರು ಕೊಡಲು ಅರವಟ್ಟಿಗೆ ಇಟ್ಟಿದ್ದ.

ಚೆನ್ನಯ ಇತರರು ಕುಡಿದ ಎಂಜಲು ಪಾತ್ರೆಯಲ್ಲಿ ಕುಡಿಯುವುದಿಲ್ಲ ಎಂದ. ತನ್ನ ಕತ್ತಿಯ ತುದಿಯನ್ನು ಬಾಯೊಳಗಿಟ್ಟು, ಹಿಡಿಯನ್ನು ಬ್ರಾಹ್ಮಣನ ಕಡೆಗೆ ಮಾಡಿ, ಕತ್ತಿಯ ಅಲಗಿನ ಮೇಲೆ ನೀರು ಹುಯ್ಯಲು ಹೇಳಿದನು. ಬ್ರಾಹ್ಮಣನು ಹುಯ್ದ ನೀರು ಒಂದು ತೊಟ್ಟೂ ಕೆಳಗೆ ಬೀಳದಂತೆ ಕುಡಿದ. ಈ ಚಮತ್ಕಾರವನ್ನು ಕಂಡ ಬ್ರಾಹ್ಮಣ ಅಚ್ಚರಿಗೊಂಡ. ಇವರು ಅಸಾಧಾರಣ ಪುರುಷರೆಂದು ಭಾವಿಸಿದ ಬ್ರಾಹ್ಮಣ ಅವರ ಭವಿಷ್ಯ ಹೇಳಲು ಒಪ್ಪಿಗೆ ಪಡೆದ.

ತನ್ನ ಕವಡೆ ತುಂಬಿದ ಚೀಲವನ್ನು ತಂದು, ಜೇಡಿಮಣ್ಣಿನ ಚೂರಿನಿಂದ ಮಂಡಲ ಬರೆದು, ಕಣಿ ಹೇಳತೊಡಗಿದನು. “ತಾವು ಈಗ ಊರು ಬಿಡಬೇಕು. ಕೆಲವು ತಿಂಗಳುಗಳು ಕಳೆದ ನಂತರ ನಿಮ್ಮ ಅದೃಷ್ಟವು ಬದಲಾಗಿ, ನಿಮ್ಮ ಕೀರ್ತಿ ಹಬ್ಬುತ್ತದೆ. ಶಾಂತಿ, ಸೌಖ್ಯ ದೊರಕುತ್ತದೆ. ಹಾಗೆಯೇ ಅನಿರೀಕ್ಷಿತವಾಗಿ ಅಕಾಲ ಮೃತ್ಯುವೂ ಒದಗುತ್ತದೆ” ಎಂದು ಹೇಳಿದ.

ಸಂಧ್ಯಾಕಾಲವಾಗಿತ್ತು. ಬ್ರಾಹ್ಮಣನಿತ್ತ ವೀಳ್ಯದೆಲೆ, ಹಾಲು, ಹಣ್ಣುಗಳನ್ನು ಸ್ವೀಕರಿಸಿ, ಕೋಟಿ ಚೆನ್ನಯರು ಅಲ್ಲಿಂದೆದ್ದು ಹೊರಟರು.

ಇವರು ವಿಶ್ರಾಂತಿಗೆಂದು ಕೂತಿದ್ದ ಅರಳೀಕಟ್ಟೆಗೂ ಪಡುಮಲೆ ಬಲ್ಲಾಳನ ಸೀಮೆಯ ಗಡಿಕಲ್ಲಿಗೂ ಹೆಚ್ಚು ಅಂತರವಿರಲಿಲ್ಲ. ಕೋಟಿ ಚೆನ್ನಯರು ಹತ್ತಿರದ ಗುಡ್ಡವನ್ನು ಹತ್ತಿ ಮೇಲೇರಿದಾಗ, ಪೂರ್ವ ದಿಕ್ಕಿನಲ್ಲಿ ಆಕಾಶದೆತ್ತರ ಉರಿವ ಬೆಂಕಿ ಕಂಡರು. ಅವರು ಮತ್ತೊಮ್ಮೆ ಸಾಕುತಂದೆ ಸಾಯಿನ ಬೈದ್ಯನ ಮನೆಗೆ ಬರದಿರಲೆಂದು ಬಲ್ಲಾಳನು ಬೆಂಕಿಯಿಡಿಸಿದ್ದನು. ಕೋಟಿ ಚೆನ್ನಯರಿಗೆ ಆಗ ತಾನೆ ಕೇಳಿದ್ದ ಭವಿಷ್ಯ ಸತ್ಯವಾಗಿ ಕಂಡಿತು. ತಮ್ಮ ಸಾಕುತಾಯಿತಂದೆಯರು ಈ ಬೆಂಕಿಗೆ ಆಹುತಿಯಾದರೇ ಎಂದು ದುಃಖಿಸುತ್ತಾ, ಆ ನಸುಗತ್ತಲಲ್ಲಿ ಪಡುಮಲೆ ಬಲ್ಲಾಳನ ಸೀಮೆಯನ್ನು ದಾಟಿ ಪಂಜಸೀಮೆಗೆ ಕಾಲಿಟ್ಟರು.

ಅಕ್ಕನ ಮನೆ

ಪಡುಮಲೆ ಬಲ್ಲಾಳನಂತೆಯೇ ಪಂಜದಲ್ಲಿ ಕೇಮರ ಬಲ್ಲಾಳನೆಂಬುವನು ಅಧಿಕಾರ ನಡೆಸುತ್ತಿದ್ದನು. ಪಂಜವು ದೊಡ್ಡ ಊರಾಗಿದ್ದಿತು. ಕೋಟಿ ಚೆನ್ನಯರ ಒಬ್ಬಳೇ ಅಕ್ಕ ಕಿನ್ನಿದಾರು ಏಳನೆಯ ವರ್ಷದಲ್ಲೆ ಮದುವೆಯಾಗಿ ಪಂಜದಲ್ಲಿದ್ದಳು.

ಕಷ್ಟದಿಂದ ಕೋಟಿ ಚೆನ್ನಯರು ಅಕ್ಕನ ಮನೆಯನ್ನು ಕಂಡುಹಿಡಿದರು. ಅವಳೊಬ್ಬಳೇ ಮನೆಯಲ್ಲಿದ್ದಳು.

ತಾವು ಯಾರು ಎಂಬುದನ್ನು ಕೋಟಿ ಚೆನ್ನಯರು ಹೇಳಿಕೊಂಡು ಪಾದಗಳಿಗೆರಗಿದರು. ಆಗ ತಾನೆ ಬಂದ ಭಾವ ಪಯ್ಯ ಬೈದ್ಯನು ಸಂತೋಷದಿಂದ ಅವರನ್ನು ಆಲಂಗಿಸಿ ಕೊಂಡ. ಅಕ್ಕನಿಗೆ ತನ್ನ ತಮ್ಮಂದಿರನ್ನು ಕಂಡು ಸಂತೋಷ ಉಕ್ಕಿಬಂದಿತು.

ಕೋಟಿ ಚೆನ್ನಯರು ಬಂದ ವಿಚಾರ ಕೆಲವೇ ದಿವಸಗಳಲ್ಲಿ ಪಂಜದ ಎಲ್ಲಾ ಜನರಿಗೂ ತಿಳಿದು ಬಂತು. ಅವರ ಜಾಣ್ಮೆ, ಬುದ್ಧಿವಂತಿಕೆ, ಪರಾಕ್ರಮವನ್ನು ಕೇಳಿದ ಜನರು ಅವರನ್ನು ಕಾಣಲು ತಂಡ ತಂಡವಾಗಿ ಬರಹತ್ತಿದರು. ಹಾಗೆಯೇ ಈ ಸುದ್ದಿಯು ಪಂಜದ ಕೇಮರ ಬಲ್ಲಾಳನಿಗೂ ತಿಳಿಯಿತು.

ನಮ್ಮ ಕೇಳಿಕೆಯನ್ನು ತೀರಿಸಲು ಆರು ವರ್ಷಗಳ ಅವಧಿ.’

ಪೆರುಮಾಳ್ ಬಲ್ಲಾಳನ ಚಾಚಿದ ಕೈ

ಕೇಮರ ಬಲ್ಲಾಳನ ತಂದೆಯಿದ್ದಾಗ ಪಯ್ಯ ಬೈದ್ಯನು ಅವರ ಬಂಟನಾಗಿದ್ದನು. ಮುದುಕ ಬಲ್ಲಾಳನು ಸಾಯುವಾಗ, ಕೇಮರ ಬಲ್ಲಾಳನು ಇನ್ನೂ ಚಿಕ್ಕ ಹುಡುಗನಾಗಿದ್ದನು. ಅವನ ಜೊತೆಯಲ್ಲಿದ್ದ ಚೆಂದುಗಿಡಿಯೆಂಬ ಸಮ ವಯಸ್ಕನ ಮಸಲತ್ತಿನಿಂದ ಪಯ್ಯ ಬೈದ್ಯನು ಅಧಿಕಾರವನ್ನು ಕಳೆದುಕೊಂಡಿದ್ದನು. ಕೇಮರ ಬಲ್ಲಾಳನಿಗೆ ಪಟ್ಟವಾದಾಗ, ಚೆಂದುಗಿಡಿಯೇ ಮಂತ್ರಿಯೆಂದು ನೇಮಿತನಾದನು. ಆದರೆ, ಪಯ್ಯ ಬೈದ್ಯನು ಅಧಿಕಾರ ಕಳೆದುಕೊಂಡೂ ಕೇಮರ ಬಲ್ಲಾಳನು ಆತನನ್ನು ಗೌರವದಿಂದ ಕಾಣುತ್ತಿದ್ದನು. ಕೇಮರ ಬಲ್ಲಾಳನಿಗೆ ಪಯ್ಯ ಬೈದ್ಯನ ಸಂಬಂಧವೇ ಇಲ್ಲದಂತೆ ಮಾಡಲು ಚೆಂದುಗಿಡಿಯು ಸಂಧಿ ಕಾಯುತ್ತಿದ್ದನು.

ಕೋಟಿ ಚೆನ್ನಯರ ಭುಜಬಲ ಪರಾಕ್ರಮವನ್ನು ತಿಳಿದಿದ್ದ ಚೆಂದುಗಿಡಿ ನಡುಗಿಹೋಗಿದ್ದನು. ಕೇಮರ ಬಲ್ಲಾಳನ ತಂದೆಯ ಬಂಟನಾದ ಪಯ್ಯ ಬೈದ್ಯನು ಈ ಸಂಧಿ ಉಪಯೋಗಿಸಿ ಸೇಡು ತೀರಿಸುವುದಿಲ್ಲವೆಂದು ಹೇಗೆ ಹೇಳುವುದು? ಆದುದರಿಂದ ಪಯ್ಯ ಬೈದ್ಯ ಮತ್ತು ಕೋಟಿ ಚೆನ್ನಯರನ್ನು ದೂರ ಇಡಲು ಚೆಂದುಗಿಡಿ ಪ್ರಯತ್ನಿಸಿದನು.

ಆದರೆ ಕೋಟಿ ಚೆನ್ನಯರಿಗೆ ಕೇಮರ ಬಲ್ಲಾಳನನ್ನು ಕಾಣಬೇಕೆಂದು ಆಸೆಯಿತ್ತು. ಪಯ್ಯ ಬೈದ್ಯನು ಅದಕ್ಕಾಗಿ ಚೆಂದುಗಿಡಿಯನ್ನು ಅನೇಕ ಸಾರಿ ಕೇಳಿದ್ದನು. ಆದರೆ ಅನೇಕ ತಿಂಗಳುಗಳು ಕಳೆದರೂ ಚೆಂದುಗಿಡಿ ಈ ಭೇಟಿಗೆ ಅವಕಾಶ ಕೊಡಲೇ ಇಲ್ಲ.

ಕೋಟಿ ಚೆನ್ನಯರು ಪಡುಮಲೆ ಪೆರುಮಾಳ್ ಬಲ್ಲಾಳನ ಗದ್ದುಗೆಯ ಮೇಲೆ ವೀಳ್ಯವಿಟ್ಟು, ಆರು ವರ್ಷದ ಅವಧಿ ಕೊಟ್ಟು, ಮರಳಿದಂದಿನಿಂದ ಬಲ್ಲಾಳನ ಮನಸ್ಸು ತುಂಬಾ ಕೆಟ್ಟುಹೋಗಿತ್ತು. ಕೋಟಿ ಚೆನ್ನಯರು ಜೀವದಿಂದಿದ್ದರೆ, ತನಗೆ ಕೇಡು ತಪ್ಪದೆಂದು ಅವನು ತಿಳಿದಿದ್ದನು. ಆದುದರಿಂದ ಕೋಟಿ ಚೆನ್ನಯರ ಸಾಕು ತಂದೆಯ ಮನೆಯನ್ನು ಸುಟ್ಟು ಹಾಕಿದ್ದನು. ಈ ಸಂದರ್ಭದಲ್ಲಿ ಸಾಕು ತಾಯಿ ಸಾಯಿನ ಬೈದಿತಿಯು ಹೇಗೋ ತಪ್ಪಿಸಿಕೊಂಡು ಎಣ್ಮೂರಿಗೆ ಹೋಗಿಬಿಟ್ಟಳು. ಆದರೆ ಸಾಕುತಂದೆ ಸಾಯಿನ ಬೈದ್ಯನು ಮಾತ್ರ ಸೆರೆ ಸಿಕ್ಕಿ ಪೆರುಮಾಳ್ ಬಲ್ಲಾಳನಲ್ಲಿ ಕೆಲಸ ಮಾಡುತ್ತ ಆತನ ಬೀಡಿನಲ್ಲುಳಿದನು.

ಪೆರುಮಾಳ್ ಬಲ್ಲಾಳನಿಗೆ ಕೋಟಿ ಚೆನ್ನಯರು ಅಕ್ಕನ ಮನೆಯಲ್ಲಿರುವರೆಂದು ತಿಳಿದುಬಂತು. ಅವನು ಕೇಮರ ಬಲ್ಲಾಳನಿಗೆ ಒಂದು ಪತ್ರವನ್ನು ಬರೆದು, “ಕೋಟಿ ಚೆನ್ನಯರು ಕೊಲೆಗಡುಕರು, ನನ್ನ ಮಂತ್ರಿಯನ್ನು ಕೊಂದು ಪರಾರಿಯಾದ ಅಪರಾಧಿಗಳು. ಅವರನ್ನು ಹಿಡಿದು ನನ್ನ ಸೀಮಗೆ ಕಳುಹಿಸಿಕೊಡಬೇಕು. ಕಳುಹಿಸಲಾಗದಿದ್ದರೆ, ಅವರನ್ನು ನೀವೆ ಕೊಲ್ಲಬೇಕು” ಎಂದು ತಿಳಿಸಿದ.

ಕೇಮರ ಬಲ್ಲಾಳನು ಯಾವ ವಿಷಯವನ್ನೂ ವಿಮರ್ಶಿಸದೆ ಚೆಂದುಗಿಡಿ ಅವರನ್ನು ಹಿಡಿದು ತರಲು ಅಪ್ಪಣೆ ಕೊಟ್ಟನು. ಆದರೆ, ಅವರನ್ನು ಹಿಡಿದು ತರುವುದು ಹುಲಿಯನ್ನೇ ಹಿಡಿದಷ್ಟು ಅಪಾಯವೆಂದು ಚೆಂದುಗಿಡಿ ತಿಳಿದಿದ್ದನು.

ಒಂದು ದಿವಸ ಪಯ್ಯ ಬೈದ್ಯನೂ ಕೋಟಿ ಚೆನ್ನಯರೂ ಕೇಮರ ಬಲ್ಲಾಳನ ದರ್ಶನದ ವಿಚಾರವಾಗಿಯೇ ತಿಳಿಯಲು ಚೆಂದುಗಿಡಿಯ ಬಳಿಗೆ ಬಂದರು. ಚೆಂದುಗಿಡಿಯು, “ನಿಮಗೆ ನಾನು ನಾಳೆಯೇ ಕೇಮರ ಬಲ್ಲಾಳರ ದರ್ಶನ ಮಾಡಿಸುವೆನು” ಎಂದು ಆಶ್ವಾಸನೆಯಿತ್ತ.

ಪಂಜರದಿಂದ ಪಾರು

ಮರುದಿನ ಕೋಟಿ ಚೆನ್ನಯರು ಶುಭ್ರವಸ್ತ್ರವನ್ನುಟ್ಟು, ನಡುವಿಗೆ ಕೆಂಪು ದಟ್ಟಿಯನ್ನು ಸುತ್ತಿ, ವೀರಗಚ್ಚೆ ಹಾಕಿ, ತಮ್ಮ ಕೈಯಲ್ಲಿ ಕತ್ತಿಗಳನ್ನು ಹಿಡಿದು ಕೇಮರ ಬಲ್ಲಾಳನ ದರ್ಶನಕ್ಕಾಗಿ ಹೊರಟರು. ದಾರಿಯಲ್ಲಿ ಪಯ್ಯ ಬೈದ್ಯನಿಗೆ ಅಪಶಕುನಗಳೇ ಆದವು. ಆತನ ಕಾಲಿಗೆ ಕಲ್ಲೆಡವಿ ರಕ್ತ ಬಂತು. ಆದರೂ ಮೊಂಡು ಧೈರ್ಯದಿಂದ ಮೂವರೂ ಕೇಮರ ಬಲ್ಲಾಳನ ಬೀಡಿಗೆ ಬಂದರು.

ಚೆಂದುಗಿಡಿ ನಯವಿನಯದಿಂದ ಅವರನ್ನು ಬರಮಾಡಿಕೊಂಡು ಕೇಮರ ಬಲ್ಲಾಳನ ಅರಮನೆಗೆ ಕರೆತಂದನು. ಕೋಟಿ ಚೆನ್ನಯರ ಹೆಸರು ಕೇಳಿದ್ದ ಅಲ್ಲಿಯ ಜನತೆ ಅವರನ್ನು ನಿಬ್ಬೆರಗಾಗಿ ನೋಡುತ್ತಿತ್ತು. ವೀರ ಕುಮಾರರ ನಡೆಯೇನು! ಅವರ ನಿಲುವೇನು! ಅವರ ಮುಖದಲ್ಲೆದ್ದು ಕಾಣುತ್ತಿದ್ದ ಕಾಂತಿ-ಕಳೆಯೇನು!

ಚೆಂದುಗಿಡಿ, ಕೋಟಿ ಚೆನ್ನಯರನ್ನು ಮಾತ್ರ ಒಳಗೆ ಹೋಗುವಂತೆ ಹೇಳಿ, ಪಯ್ಯ ಬೈದ್ಯನನ್ನು ಹೊರನಿಲ್ಲಿಸಿದನು. ಮಾಳಿಗೆಯಲ್ಲಿ ಒಬ್ಬಾತ ಗದ್ದುಗೆಯಲ್ಲಿ ಕುಳಿತಿದ್ದ. ಈ ಹುಲಿಮರಿಗಳನ್ನು ಕಂಡು ಅವನು, “ಬನ್ನಿಬನ್ನಿ, ಈ ಮಣೆಯ ಮೇಲೆ ಕೂಡಿ” ಎಂದು ಆಹ್ವಾನಿಸಿದ. ಆದರೆ, ಕೋಟಿ ಚೆನ್ನಯರು ಕೂಡಲು ಹಿಂದುಮುಂದು ನೋಡುತ್ತಿದ್ದಾಗಲೇ, ಹಿಂದಿನಿಂದ ಬಾಗಿಲನ್ನು ಜಡಿದ ಕೀಲಿಯ ಶಬ್ದ ಕೇಳಿತು. ಈಗ ಅವರಿಗೆ ತಾವು ಸೆರೆಬಿದ್ದಿರುವುದು ತಿಳಿಯಿತು. ಬಲ್ಲಾಳನ ವೇಷದಲ್ಲಿ ಕೂತಿದ್ದವನು, ತನ್ನ ಕತ್ತಿಯನ್ನು ಒರೆಯಿಂದೆಳೆದು, ಹಾರಿ ಓಡಿ, ಹಿಂಬದಿಯಯ ಬಾಗಿಲನ್ನು ಭದ್ರಪಡಿಸಿ ಕಾಣದಾದನು. ಎರಡು ಕಡೆಯಿಂದಲೂ ಬಾಗಿಲನ್ನು ಭದ್ರವಾಗಿ ಹಾಕಿತ್ತು. ಒಳಗೆ ಸಿಕ್ಕಿದ ಕೋಟಿ ಚೆನ್ನಯರು ಸಿಟ್ಟಿನಿಂದ ಬುಸುಗುಟ್ಟುತ್ತಿದ್ದರು. ಚೆಂದುಗಿಡಿಯ ಮೋಸವನ್ನು ನೆನೆಸುತ್ತಾ, ಮುಂದೇನು ಎನ್ನುವ ಪ್ರಶ್ನೆಯನ್ನು ಇದಿರಿಸುವ ಪ್ರಯತ್ನದಲ್ಲಿದ್ದರು.

ರಾತ್ರಿಯಾಯಿತು. ಹೊರಗೆ ಯಾವುದೇ ಚಟುವಟಿಕೆ ಗಳಿಲ್ಲದೆ, ಜಗತ್ತು ನಿದ್ರಿಸುತ್ತಿತ್ತು. ನಿದ್ರೆ ಬಾರದೆ, ಬೋನಿನಲ್ಲಿಟ್ಟ ಸಿಂಹದಂತೆ ಅತ್ತಿತ್ತ ಸುತ್ತುತ್ತಿದ್ದ ಚೆನ್ನಯನು ತಡೆದು ನಿಂತ. ಆಕಾಶದಲ್ಲಿಯ ಚಂದ್ರನ ಒಂದು ಕಿರಣವು ಮಾಳಿಗೆಯ ಮೇಲಿನ ಕಿಟಕಿಯಿಂದ ಬರುತ್ತಿತ್ತು. ಕೋಟಿಯನ್ನುದ್ದೇಶಿಸಿ ಚೆನ್ನಯ, “ಅಣ್ಣಾ, ನನ್ನನ್ನು ಒಂದು ನಿಮಿಷ ನಿನ್ನ ಹೆಗಲ ಮೇಲೆ ಹೊತ್ತುಕೊಳ್ಳುವಿಯಾ?” ಎಂದ. ಕೋಟಿಯು ತನ್ನ ಮೊಣಕಾಲೂರಿ ತಮ್ಮನನ್ನು ತನ್ನ ಹೆಗಲ ಮೇಲಿರಿಸಿ ನಿಂತನು. ಚೆನ್ನಯನು ಪ್ರಯಾಸದಿಂದ ಸಣ್ಣ ಕಿಟಕಿಯನ್ನು ಹಿಡಿದು ಅಲುಗಾಡಿಸಿದನು. ಆತನು ಅಲುಗಾಡಿಸಿದ ರಭಸಕ್ಕೆ ಕಿಟಕಿಯ ಚೌಕಟ್ಟು ಒಮ್ಮೆಗೇ ಕಿತ್ತುಬಂತು. ತಮ್ಮ ನಡುವಿಗೆ ಬಿಗಿದುಕೊಂಡಿದ್ದ ದಟ್ಟಿಯನ್ನು ಒಂದಕ್ಕೊಂದು ಸೇರಿಸಿ, ಕಿಟಕಿಯ ಕಿಂಡಿಯಿಂದ ತೆವಳಿ, ಇಬ್ಬರೂ ತಪ್ಪಿಸಿಕೊಂಡರು.

ಮರುದಿವಸ ಕೇಮರ ಬಲ್ಲಾಳನಿಗೆ ಕೋಟಿ ಚೆನ್ನಯರನ್ನು ಸೆರೆಹಿಡಿದ ವಿಚಾರ ತಿಳಿಸಿ ಅವರನ್ನು ನೋಡಲು ಚೆಂದುಗಿಡಿ ಬಂದ. ಆದರೆ ಪಂಜರ ಬರಿದು!

ಚೆಂದುಗಿಡಿಯ ಸೈನಿಕರು ಕೋಟಿ ಚೆನ್ನಯರನ್ನು ಮೂಲೆಮೂಲೆಗಳಲ್ಲಿ ಹುಡುಕಲು ಪ್ರಾರಂಭಿಸಿದರು.

ಎಣ್ಮೂರಿನತ್ತ

ಪಂಜರವನ್ನು ಬಿಟ್ಟು ಪರಾರಿಯಾದ ಕೋಟಿ ಚೆನ್ನಯರು ಎಣ್ಮೂರು ಸೀಮೆಯ ದಾರಿ ಹಿಡಿದರು. ಪಂಜಕ್ಕೂ ಎಣ್ಮೂರಿಗೂ ಸರಹದ್ದಾಗಿ ಒಂದು ದೊಡ್ಡ ಕಾಡಿತ್ತು. ಅದನ್ನು ತುಪ್ಪೆಕಲ್ಲಿನ ಕಾಡೆಂದು ಕರೆಯುತ್ತಿದ್ದರು. ಈ ಸರಹದ್ದಿನ ಪ್ರದೇಶವನ್ನು ಕುರಿತು ಎರಡು ಕಡೆಯ ಬಲ್ಲಾಳರಿಗೆ ಆಗಾಗ ವಾದವಿವಾದಗಳುಂಟಾಗುತ್ತಿದ್ದವು. ಈ ದಟ್ಟಡವಿಯಲ್ಲಿ ಕೋಟಿ ಚೆನ್ನಯರು ಕೆಲವು ದಿವಸಗಳವರೆಗೆ ಅವಿತುಕೊಂಡು ಹೊರಗಿನ ಆಗುಹೋಗುಗಳನ್ನು ವೀಕ್ಷಿಸುತ್ತಿದ್ದರು.

ಎಣ್ಮೂರಿನಲ್ಲಿ ಹೆಚ್ಚು ಬಿಲ್ಲವ ಜಾತಿಯವರಿದ್ದರು. ಈ ಸೀಮೆಯನ್ನು ದೇವಬಲ್ಲಾಳನೆಂಬುವನು ಆಳುತ್ತಿದ್ದನು. ಪಡುಮಲೆ ಬಲ್ಲಾಳನ ಮಂತ್ರಿ ಮಲ್ಲಯ್ಯ ಬುದ್ಧಿವಂತನ ಕೊಲೆ, ಪೆರುಮಾಳ್ ಬಲ್ಲಾಳನ ಗದ್ದುಗೆಯ ಮೇಲೆ ವೀಳ್ಯವಿಟ್ಟು ಪ್ರತಿಜ್ಞೆ ತೆಗೆದುಕೊಂಡ ವಿಚಾರ ಎಣ್ಮೂರ ಜನತೆಯಲ್ಲಿ ಹರಡಿತ್ತು. ಈ ಬಿಲ್ಲವ ಮಕ್ಕಳ ಶೌರ್ಯ ಸಾಹಸ, ಶಕ್ತಿ ಸಾಮರ್ಥ್ಯದ ಹೊಗಳಿಕೆಯು ಜನತೆಯಲ್ಲಿ ಹರಡಿದಂತೆಲ್ಲಾ ಅವರಲ್ಲಿ ಭಯಭರಿತ ಭಕ್ತಿ ಉಂಟಾಗಿತ್ತು. ಪಂಜದ ಕೇಮರ ಬಲ್ಲಾಳನು ಕೋಟಿ ಚೆನ್ನಯರನ್ನು ಮೋಸದಿಂದ ಸೆರೆಮನೆಯಲ್ಲಿಟ್ಟಿರುವನೆಂದು ಕೇಳಿದ ಬಿಲ್ಲವರು ಎಣ್ಮೂರ ದೇವಬಲ್ಲಾಳನಿದ್ದಲಿಗೆ ಬಂದು ಕೋಟಿ ಚೆನ್ನಯರನ್ನು ಹೇಗಾದರೂ ಮಾಡಿ ಬಿಡಿಸಲು ಪತ್ರ ಬರೆಯಬೇಕೆಂದು ಕೇಳಿಕೊಂಡರು. ಈ ಪತ್ರಕ್ಕೆ ಮಾನ್ಯತೆ ಕೊಟ್ಟು ಅವರನ್ನು ಬಿಡದಿದ್ದರೆ, ಪಂಜದ ಸೀಮೆಯ ಒಳನುಗ್ಗಿ, ಅವರನ್ನು ಬಿಡಿಸಲು ಅಪ್ಪಣೆ ಕೊಡಬೇಕೆಂದು ಬಿನ್ನವಿಸಿಕೊಂಡರು.

ಸ್ವಾಗತ

ದೇವಬಲ್ಲಾಳನು ಬಿಲ್ಲವರ ಮಾತಿಗೆ ಬೆಲೆಕೊಟ್ಟು, ತನ್ನ ಕಡೆಯ ಕಿನ್ನಿಚೆನ್ನಯನೆಂಬವನನ್ನು ಕರೆದು, ಪಂಜದ ಕೇಮರ ಬಲ್ಲಾಳನೊಡನೆ ಸಂಧಾನ ನಡೆಸಿ, ಕೋಟಿ ಚೆನ್ನಯರನ್ನು ಬಿಡಿಸಿತರಲು ಆಜ್ಞಾಪಿಸಿದನು.

ಅಂದೇ ತುಪ್ಪೆಕಲ್ಲಿನ ಕಾಡಿನಲ್ಲಿ ಅಡಗಿದ್ದ ಕೋಟಿ ಚೆನ್ನಯರು ಹೊರಬಿದ್ದಿದ್ದರು. ದಾರಿಯಲ್ಲಿ ಒಂದು ಕಲ್ಲುಬರಹವನ್ನು ಕಂಡು ಅದು ಪಂಜ ಮತ್ತು ಎಣ್ಮೂರ ಗಡಿಕಲ್ಲೆಂದು ಓದಿ ತಿಳಿದುಕೊಂಡರು. ಆದರೆ, ಈ ಮೊದಲು ಆ ಗಡಿಕಲ್ಲು ತುಪ್ಪೆಕಲ್ಲು ಕಾಡಿನ ಮತ್ತೊಂದು ಪಾರ್ಶ್ವದಲ್ಲಿದ್ದದ್ದು ಅವರಿಗೆ ತಿಳಿದಿತ್ತು. ಗಡಿಕಲ್ಲನ್ನು ಬದಲಾಯಿಸಿ, ಪಂಜದವರು ತುಪ್ಪೆಕಲ್ಲನ್ನು ತಮ್ಮ ಸೀಮೆಗೆ ಸೇರಿಸಿ ಕೊಂಡಿದ್ದರು. “ಅಣ್ಣಾ, ಈ ಕಲ್ಲು ಮೊದಲಿದ್ದ ಸ್ಥಳದಲ್ಲೇ ಏಕಿರಬಾರದು?” ಎಂದ ಚೆನ್ನಯ. ಕೋಟಿಯು ಅದಕ್ಕೆ ಸಮ್ಮತಿಸಿ, ಇಬ್ಬರೂ ಸೇರಿ ಕಲ್ಲನ್ನು ಕಿತ್ತರು. ನಾಲ್ಕು ಜನರಿಂದಲೂ ಹೊರಲು ಸಾಧ್ಯವಾಗದ ಆ ಗಡಿಕಲ್ಲನ್ನು ಚೆನ್ನಯ ಒಬ್ಬನೇ ಹೊತ್ತು ಒಯ್ಯತೊಗಡಿದನು.

ಅಷ್ಟರಲ್ಲಿ ಎಣ್ಮೂರಿನಿಂದ ಪಂಜಕ್ಕೆ ಕೋಟಿ ಚೆನ್ನಯರ ಬಿಡುಗಡೆಗಾಗಿ ಹೊರಟಿದ್ದ ಕಿನ್ನಿಚೆನ್ನಯನ ಸಂಗಡಿಗರು ಭೇಟಿಯಾದರು. ಚೆನ್ನಯನು ಬೆನ್ನಲ್ಲಿ ಹೊತ್ತ ಗಡಿಕಲ್ಲನ್ನು ಕಂಡು ಅಪ್ರತಿಭರಾದರು. ಗಡಿಕಲ್ಲನ್ನು ಎಲ್ಲಿ ನೆಡಬೇಕೋ ಅಲ್ಲಿ ಅದನ್ನು ಹಾಕಿ, ಚೆನ್ನಯ, “ಪಂಜಕ್ಕೆ ಸ್ವಲ್ಪ ಬಲ ಬರುತ್ತಲೇ ಗಡಿಕಲ್ಲುಗಳು ಕೂಡ ಜಾಗದಿಂದ ಮತ್ತೊಂದು ಜಾಗಕ್ಕೆ ಹಾರಬೇಕೆ?” ಎಂದ.

ಇದನ್ನೆಲ್ಲಾ ನೋಡುತ್ತಿದ್ದ ಕಿನ್ನಿಚೆನ್ನಯ, “ಬುದ್ದಿ, ನಿಮ್ಮನ್ನು ನೋಡಿದರೆ ವೀರಪುರುಷರಂತೆ ಕಾಣುವಿರಿ. ತಮ್ಮ ಪರಿಚಯ ಕೇಳಬಹುದೇ?” ಎಂದ. ಚೆನ್ನಯ ಅಪರಿಚಿತರನ್ನು ಕಂಡು, ಇವರು ಪಂಜದ ಕಡೆಯಿಂದ ನಮ್ಮನ್ನು ಸೆರೆಹಿಡಿಯಲು ಬಂದಿರಬಹುದೇ ಎಂದು ಶಂಕಿಸಿದ. ಆದರೆ, ಕೋಟಿಯು ತಾಳ್ಮೆಯಿಂದ, “ನಾವು ಅಣ್ಣತಮ್ಮಂದಿರಾದ ಕೋಟಿ ಚೆನ್ನಯರು” ಎಂದು ಹೇಳಿದ. ಇದನ್ನು ಕೇಳಿದ ಕಿನ್ನಿಚೆನ್ನಯ ಅವರಿಗೆ ಭಯಭಕ್ತಿಯಿಂದ ನಮಸ್ಕರಿಸಿ, “ಸ್ವಾಮಿ, ಹುಡುಕುತ್ತಿದ್ದ ನಿಧಿಯೇ ಕಾಲಿಗೆಡವಿದಂತಾಯಿತು. ತಮ್ಮಿಬ್ಬರನ್ನು ಪಂಜದಿಂದ ಸಂಧಾನದ ಮೂಲಕ ಸೆರೆಬಿಡಿಸಿ ತರಬೇಕೆಂದು ನಮ್ಮ ಎಣ್ಮೂರ ದೇವಬಲ್ಲಾಳರು ಅಪ್ಪಣೆ ಕೊಟ್ಟಿದ್ದಾರೆ. ಅಷ್ಟರಲ್ಲಿಯೇ ತಮ್ಮ ದರ್ಶನವಾಯಿತು” ಎಂದ ವಿನಯದಿಂದ. ಅವರ ಸಾಕುತಾಯಿ ಸಾಯಿನ ಬೈದಿತಿ ಎಣ್ಮೂರನ್ನು ಸೇರಿ ಮೂರು ತಿಂಗಳಾಯಿತೆಂದೂ ಅಯ್ಯನೂರು ಬೈಲಿನ ತಿಮ್ಮಣ್ಣ ಬೈದ್ಯರಲ್ಲಿರುವಳೆಂದೂ ಮತ್ತು ಕೆಲವು ದಿವಸಗಳಿಂದ ಜೀವದಾಸೆ ಬಿಟ್ಟು ಮಲಗಿರುವಳೆಂದೂ ತಿಳಿಸಿದನು.

ಕೋಟಿ ಚೆನ್ನಯರು ತಿಮ್ಮಣ್ಣ ಬೈದ್ಯನ ಮನೆಗೆ ಬಂದರು. ಒಂದು ಕೋಣೆಯಲ್ಲಿ ಹರಳೆಣ್ಣೆ ದೀಪದ ಬೆಳಕಿನಲ್ಲಿ ಒಂದು ಮುದುಕಿಯು ಮಲಗಿತ್ತು. ಶರೀರವು ಜ್ವರದಿಂದ ಇಳಿದುಹೋಗಿತ್ತು. ಕಡೆಯಗಳಿಗೆಯಲ್ಲಾದರೂ ಮಕ್ಕಳನ್ನು ಕಂಡು ಸಮಾಧಾನದಿಂದ ಮುದುಕಿ ಕಣ್ಮುಚ್ಚಿದಳು.

ಎಣ್ಮೂರ ದೇವಬಲ್ಲಾಳನು ಪಡುಮಲೆ ಪೆರುಮಾಳ್ ಬಲ್ಲಾಳನಂತೆ ಧೈರ್ಯಶಾಲಿಯಲ್ಲ. ಪಂಜದ ಕೇಮರ ಬಲ್ಲಾಳನಂತೆ ಠಕ್ಕನೂ ಅಲ್ಲ. ಆದರೆ, ಆತನಲ್ಲಿ ಧರ್ಮಬುದ್ಧಿಯಿದ್ದು ಸತ್ಯಾಸತ್ಯದ ವಿಮರ್ಶೆ ಬುದ್ಧಿಯಿತ್ತು. ಅವನು ಈ ಒಳ್ಳೆಯ ಗುಣದಿಂದಾಗಿ ಜನಪ್ರಿಯನಾಗಿದ್ದ. ಹಾಗೆಯೇ ಆತನಿಗೆ ಇಕ್ಕೇರಿ ರಾಜಮನೆತನದವರೊಡನೆ ಒಳ್ಳೆಯ ಸಂಬಂಧವೂ ಇತ್ತು. ಆದರೆ, ನೆರೆಹೊರೆಯವರಾದ ಪಂಜದ ಮತ್ತು ಪಡುಮಲೆಯ ಬಲ್ಲಾಳರಿಂದ ಎಣ್ಮೂರಿನ ಜನತೆಗೆ ಸುಖ, ಶಾಂತಿಯಿರಲಿಲ್ಲ. ವಿಸ್ತಾರವಾಗಿದ್ದ ಎಣ್ಮೂರು ದಿನಗಳೆಯುತ್ತಾ ಕಿರಿದಾಗುತ್ತಾ ನಡೆದಿತ್ತು. ನೆರೆಯವರು ಗಡಿ ಪ್ರದೇಶಗಳನ್ನು ಬಲಾತ್ಕಾರದಿಂದ ಆವರಿಸಿಕೊಂಡು, ಇಲ್ಲದ ಕಿರುಕುಳ ಕೊಡುತ್ತಿದ್ದರು. ಆದುದರಿಂದ ಭುಜ ಬಲದಿಂದ ಜನತೆಯನ್ನು ಎತ್ತಿಕಟ್ಟಿ, ತನ್ನ ರಾಜ್ಯವನ್ನು ಮರಳಿ ತಲೆಯೆತ್ತುವಂತೆ ಮಾಡಬೇಕೆಂದು ದೇವ ಬಲ್ಲಾಳನು ಆಶಿಸಿದ್ದನು.

ಮರುದಿವಸ ಕೋಟಿ ಚೆನ್ನಯರು ದೇವಬಲ್ಲಾಳನ ಓಲಗಕ್ಕೆ ಬಂದರು. ಬಲ್ಲಾಳನು ಅವರನ್ನು ಸಂತೋಷದಿಂದ ಬರಮಾಡಿಕೊಂಡನು. ತಮ್ಮಲ್ಲಿಯೇ ಇದ್ದು ಎಣ್ಮೂರಿನ ಶ್ರೇಯಸ್ಸಿಗಾಗಿ ಸಹಾಯ ಮಾಡಬೇಕೆಂದು ಅವರಿಗೊಂದು ನೆಲೆ ಕೊಡಲು, ಒಳ್ಳೊಳ್ಳೆಯ ಗದ್ದೆಗಳನ್ನು, ಸ್ಥಳಗಳನ್ನು ಸೂಚಿಸಿದನು. ಆದರೆ, ಕೋಟಿ ಚೆನ್ನಯರು ಪಂಜದವರು ಗಡಿಕಲ್ಲನ್ನು ಕಿತ್ತು ಬೇರೆಡೆ ನೆಟ್ಟಿದ್ದ ಸ್ಥಳವನ್ನೇ ಆರಿಸಿಕೊಂಡರು. ಬಲ್ಲಾಳನು ಸಂತೋಷದಿಂದ ಕೋಟಿ ಚೆನ್ನಯರಿಗೆ ವೀಳ್ಯ ಕೊಟ್ಟು ಹರಸಿದನು.

ಕೇಮರ ಬಲ್ಲಾಳನ ತೇಜೋವಧೆ

ಕೋಟಿ ಚೆನ್ನಯರು ಎಣ್ಮೂರಿಗೆ ಬಂದುದರಿಂದ ದೇವಬಲ್ಲಾಳನಿಗೆ ಭೀಮಶಕ್ತಿ ಬಂದಿತ್ತು. ಇವರ ಸಹಾಯ ದಿಂದ ತಲೆಯೆತ್ತುತ್ತಿರುವ ಎಣ್ಮೂರ ಬಲ್ಲಾಳನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಪೆರುಮಾಳ್ ಬಲ್ಲಾಳನೂ ಚೆಂದುಗಿಡಿಯೂ ನಿಶ್ಚಿಯಿಸಿದ್ದರು. ಇದಕ್ಕೆ ಪೋಷಕರಾಗಿ ಎಣ್ಮೂರಿನವರು ಪಂಜಸೀಮೆಗೆ ಸೇರಿದ ಬಂಟಮಲೆಯಲ್ಲಿ ಬೇಟೆಯಾಡುವುದು ಸಹಿಸದ ವಿಚಾರವಾಗಿತ್ತು. ಇದಕ್ಕೆ ಪರಿಹಾರವೇನು? ಯುದ್ಧವೊಂದೇ ಎಂದು ಅವರು ತೀರ್ಮಾನಿಸಿ ಸಮಯ ಸಾಧಿಸುತ್ತಿದ್ದರು.

ಇದೇ ಸಮಯಕ್ಕೆ ಎಣ್ಮೂರಿಗೆ ಹೊಸದಾಗಿ ಸೇರಿಸಿ ತುಪ್ಪೆಕಲ್ಲಡವಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಮೇರೆ ಮೀರಿತ್ತು. ಹತ್ತಿರದ ರೈತರ ದನಕರುಗಳು ಕ್ರೂರ ಮೃಗಗಳಿಂದ ನಾಶವಾಗುತ್ತಿದ್ದವು. ರೈತರ ಹೊಲಗದ್ದೆಗಳು ನಿರ್ನಾಮವಾಗತೊಡಗಿದವು. ಇದರಿಂದ ಕಂಗಾಲಾದ ರೈತರು, ದೇವಬಲ್ಲಾಳನಲ್ಲಿ ಅವುಗಳನ್ನು ನಿಗ್ರಹಿಸಲು ಬಿನ್ನಹ ಮಾಡಿಕೊಂಡರು. ಅವರ ಹೇಳಿಕೆಯಂತೆಯೇ ಬೇಟೆಯ ವ್ಯವಸ್ಥೆಗಳಾದವು.

ಒಂದು ದಿವಸ ಎಣ್ಮೂರ ಜನರು, ಕೋಟಿ ಚೆನ್ನಯರ ಮುಖಂಡತ್ವದಲ್ಲಿ ಕಾಡಿಗೆ ನುಗ್ಗಿದರು. ತುಪ್ಪೆಕಲ್ಲಿನ ಕಾಡಿನ ಸುತ್ತಮುತ್ತು ಕೊಂಬುಕಹಳೆ, ನಾಯಿಗಳ ಬೊಗಳಾಟ, ಮತ್ತು ಮನುಷ್ಯರ ಕೂಗಾಟದಿಂದ ಕೋಲಾಹಲವೆದ್ದಿತು. ಓಡುತ್ತಿದ್ದ ಕಾಡುಹಂದಿಯನ್ನು ಕಂಡ ಕೋಟಿಯು ಸಂದರ್ಭ ನೋಡಿ ತನ್ನ ಬಾಣದಿಂದ ಘಾಸಿ ಮಾಡಿದನು. ಗಾಯಗೊಂಡ ಹಂದಿಯು ಓಡುತ್ತಾ ಎಣ್ಮೂರ ಗಡಿ ದಾಟಿ, ಪಂಜದ ಸೀಮೆಯನ್ನು ಹೊಕ್ಕಿತು. ಅದನ್ನು ಹಿಂಬಾಲಿಸುತ್ತಿದ್ದ ಚೆನ್ನಯನು ಸಮಯ ಸಾಧಿಸಿ, ತನ್ನ ಕತ್ತಿಯಿಂದ ಹೊಡೆದು ಕೊಂದನು.

ಈ ಬೇಟೆಗಾರರ ಕೋಲಹಲವನ್ನು ಕೇಳಿ ಚೆಂದುಗಿಡಿಯು ತನ್ನ ಸುಮಾರು ಮುನ್ನೂರು ಜನರೊಡನೆ ಅಲ್ಲಿಗೆ ಬಂದಿದ್ದನು. ಚೆನ್ನಯನು ಹಂದಿಯನ್ನು ಸಂಹರಿಸಿ, ಕೈಯನ್ನು ಘಾಸಿ ಮಾಡಿಕೊಂಡು ರಕ್ತದಿಂದ ತೊಯ್ದುಹೋಗಿದ್ದನು. ಅಷ್ಟರಲ್ಲಿಯೇ ತಮ್ಮನನ್ನು ಅನುಸರಿಸಿ ಕೋಟಿಯೂ ಜತೆಯವರೊಡಗೂಡಿ ಅಲ್ಲಿಗೆ ಬಂದನು. ಚೆಂದುಗಿಡಿಯೂ ಅವನ ಕಡೆಯವರೂ ಈ ಹಂದಿ ನಮ್ಮದು, ನಮ್ಮ ಸೀಮೆಯಲ್ಲಿ ಬಿದ್ದಿದೆ ಎಂದು ಜಗಳಕ್ಕೆ ಕಾಲುಕೆರೆಯ ತೊಡಗಿದರು. ಈ ಹಂದಿಯ ಬಾಲ ಮತ್ತು ತಲೆಯನ್ನು ನಮಗೆ ಕಾಣಿಕೆ ಕೊಟ್ಟು ಹೋಗಿ ಎಂದು ಅಬ್ಬರಿಸಿದ ಚೆಂದುಗಿಡಿ. ಆತನ ಆಳುಗಳು ಇಷ್ಟರಲ್ಲಿ ಹಂದಿಯನ್ನು ಹೊರಲು ಅಣಿ ಮಾಡಿದರು. ಇದನ್ನು ಕಂಡ ಚೆನ್ನಯನಿಗೆ ಕೋಪ ಕುದಿಯಿತು. ತನ್ನ ನಡುವಿನ ಬೆಳ್ಳಿಯ ಉಡಿದಾರವನ್ನು ಈಚೆಗೆ ತೆಗೆದು ಹಂದಿಯ ಕೋರೆಗಳಿಗೆ ಸಿಕ್ಕಿಸಿ, ನಡುವೆಯಿದ್ದ ಗಡಿಯವರೆಗೆ ಒಬ್ಬನೇ ದರದರನೆ ಎಳೆದು ತಂದನು. ಇದರಿಂದ ಅವಮಾನಿತರಾದ ಚೆಂದುಗಿಡಿಯ ಜನರು ಕತ್ತಿ ಬೀಸಿದರು. ಆದರೆ, ಕೋಟಿಯೊಬ್ಬನೇ ಅವರನ್ನೆಲ್ಲಾ ಬಾಳೆಗಿಡ ಕಡಿದಂತೆ ಕಡಿದುಹಾಕಿದನು. ಉಳಿದವರು ಜೀವಭಯದಿಂದ ಪಲಾಯನ ಮಾಡಿದರು. ಎಣ್ಮೂರ ಬೇಟೆಗಾರರು ಕೋಟಿ ಚೆನ್ನಯರನ್ನು ಮತ್ತು ಹಂದಿಯನ್ನು ಹೊತ್ತು ವಿಜಯೋತ್ಸವದಿಂದ ತಮ್ಮ ಸೀಮೆಗೆ ಮರಳಿದರು.

ಎಣ್ಮೂರಿನಿಂದಾದ ಮುಖಭಂಗದಿಂದ ಕೇಮರ ಬಲ್ಲಾಳನು ಬುಸುಗುಟ್ಟತೊಡಗಿದನು. ಚೆಂದುಗಿಡಿಯನ್ನು ಕರೆದು, ಎಣ್ಮೂರ ಬಲ್ಲಾಳನಿಗೆ ತಕ್ಕುದಾದ ಅವಮಾನ ಮಾಡಲು ಒಂದು ಪರಿಹಾಸ್ಯದ ಓಲೆಯನ್ನು ಬರೆಸಿದನು.

ರಣವೀಳ್ಯ

ಕಾಗದದಲ್ಲಿ ಸರಹದ್ದುಗಳನ್ನು ವಿಸ್ತರಿಸಿದ ವಿಚಾರ ತುಪ್ಪೆಕಲ್ಲಡವಿಯನ್ನು ಆಕ್ರಮಿಸಿ ಬೇಟೆಯಾಡಿದ ನೆಪ, ಗಡಿಯನ್ನುಲ್ಲಂಘಿಸಿ ಹಂದಿಯನ್ನು ಎಳೆದೊಯ್ದು ಅವಮಾನಿಸಿದ ಸಂಗತಿಗಳನ್ನು ಸವಿಸ್ತಾರವಾಗಿ ಬರೆಸಿ, ಕೇಮರ ಬಲ್ಲಾಳನು ಓಲೆಯನ್ನು ತಂದವನ ಕೈಯಲ್ಲಿ ಆ ಹಂದಿಯ ಬಾಲ ಮತ್ತು ತಲೆಯನ್ನು ಕಳುಹಿಸಬೇಕೆಂದು ಬರೆದಿದ್ದನು. “ಇದು ಸಾಧ್ಯವಾಗದೆ ಹೋದರೆ, ಯುದ್ಧಕ್ಕೆ ತಯಾರಾಗಿ ಬರತಕ್ಕದ್ದು. ಇಲ್ಲದೆ ಹೋದರೆ ಬಲ್ಲಾಳರಾದ ನೀವು ಸೀರೆ, ರವಿಕೆಯನ್ನು ತೊಟ್ಟು, ನಿಮ್ಮ ಬೀಡಿನ ಚಾವಡಿಯಲ್ಲಿ ತಲೆಬಾಗಿ ನಿಂತುಕೊಂಡಲ್ಲಿ ವೀರ ಪರಾಕ್ರಮಿಗಳಾದ ನಾವು ದಿಬ್ಬಣ ಸಮೇತ ಹೆಣ್ಣು ಕೇಳಲು ಬರುವೆವು” ಎಂದು ಬರೆಸಿದ್ದನು.

ದೇವಬಲ್ಲಾಳನಿಗೆ ದಿಕ್ಕೇ ತೋಚದಾಗಿತ್ತು. ಕಿನ್ನಿಚೆನ್ನಯನ ಮುಖ ನೋಡಿ, “ಕೈಯಲ್ಲಿ ಕೆಂಡ ಹಿಡಿದ ಹಾಗಾಯಿತು” ಎಂದ. ಇದನ್ನು ಕೇಳಿದ ಕೋಟಿಯು “ಬಲ್ಲಾಳರೇ, ಜನರನ್ನು ಹುರಿದುಂಬಿಸಿ ಕೆಲಸ ಸಾಧೀಸುವ ನೀವೇ ಹೀಗೆ ಹೆದರಿ ಕೂತರೆ ಹೇಗೆ? ಬೆಂಕಿಗೆ ಚಳಿ ಹಿಡಿದರೆ, ನೀರಿಗೆ ಬಾಯಾರಿದರೆ, ಗಾಳಿಗೆ ಮೈ ಬೆವರಿದರೆ ನೀವಾರಿಸುವರಾರು?” ಎಂದ. ಚೆನ್ನಯನು ಎದ್ದು, “ಬಲ್ಲಾಳರೇ, ನಮ್ಮಿಂದ ನಿಮ್ಮ ಬೀಡಿಗೆ ಅಪಾಯ ಬರುವುದಾದರೆ ನಾವು ಬೇರೆಲ್ಲಿಗಾದರೂ ಹೋಗುತ್ತೇವೆ ಅಪ್ಪಣೆ ಕೊಡಿ” ಎಂದ. ಕೋಟಿಯು ಉದ್ವೇಗದಿಂದ, “ಅಯ್ಯಾ, ತಾವು ಹೆದರುವ ಪ್ರಸಂಗವೇನೂ ಈಗ ಬಂದಿಲ್ಲ. ನಮಗೆ ರಣವೀಳ್ಯ ಕೊಡಿ, ನಿಮ್ಮನ್ನು ಅವಮಾನಿಸಿದವರನ್ನು ಸದೆಬಡಿಯುವೆವು. ಇಲ್ಲವೇ “ನಿಮ್ಮ ಉಪ್ಪಿನ ಋಣದ ಬದಲಾಗಿ ನಮ್ಮ ಮೈರಕ್ತವನ್ನು ಚೆಲ್ಲಿ ಧನ್ಯರಾಗುವೆವು” ಎಂದು ಕೂಗಿದ.

ಓಲೆ ತಂದವರನ್ನು ಕೆಲವರು ಅವಮಾನಿಸಿ ನೂಕಿದರು. ಕೇಮರ ಬಲ್ಲಾಳನು ಚೆಂದುಗಿಡಿಯನ್ನು ಪಡುಮಲೆಗೆ ಕಳುಹಿಸಿ, ಸೈನ್ಯ ಸಜ್ಜುಗೊಳಿಸಲು ಸೂಚಿಸಿದನು.

ತುಳುನಾಡಿನಲ್ಲಿ ಅತ್ಯಂತ ಪ್ರಸಿದ್ಧವಾದ ಸುಬ್ರಹ್ಮಣ್ಯ ಜಾತ್ರೆಗೆ ನಾಲ್ಕು ದಿವಸಗಳಿದ್ದವು. ಎರಡು ಸೈನ್ಯಗಳು ಎದಿರುಬದಿರಾದವು.

ಅಮರ ಕೀರ್ತಿ

ಯುದ್ಧ ಪ್ರಾರಂಭವಾಯಿತು. ಸ್ವಲ್ಪ ಸಮಯದಲ್ಲಿ ಪಂಜದ ಕೇಮರ ಬಲ್ಲಾಳನ ಕುದುರೆಯ ಕಣ್ಣಿಗೆ ಬಾಣ ತಗಲಿ, ಬಲ್ಲಾಳನು ನೆಲಕ್ಕೆ ಬಿದ್ದು ಓಡಿಹೋದನು. ಎರಡು ಕಡೆಯ ಸೈನ್ಯವು ಒಮ್ಮೆಗೇ ಕೋಟಿ ಚೆನ್ನಯರ ಸೈನ್ಯದ ಮೇಲೆ ಬಿದ್ದುದರಿಂದ, ಹೊಡೆತನವನ್ನು ತಡೆಯಲಾರದೆ ಎಣ್ಮೂರ ಸೈನಿಕರು ಓಡಹತ್ತಿದರು. ಇದನ್ನು ಕಂಡ ಕೋಟಿಯು ಓಡಿಹೋಗುತ್ತಿದ್ದ ತನ್ನ ಸೈನಿಕರನ್ನು ಹುರಿದುಂಬಿಸಿದನು. ಕಬ್ಬಿನ ತೋಟಕ್ಕೆ ನುಗ್ಗಿದ ಸಲಗನಂತೆ ಸಿಕ್ಕಿದವರನ್ನು ಕಡಿಯಲಾರಂಭಿಸಿದನು. ಶತ್ರು ಪಕ್ಷದವರ ಸೈನ್ಯವು ಹೆಚ್ಚಿದ್ದು ಶತ್ರುಗಳು ಕೋಟಿ ಚೆನ್ನಯರನ್ನು ಬಳಸಿ, ಸುತ್ತುಗಟ್ಟಿ ಕಾದಾಡುತ್ತಿದ್ದರು.

ದನದ ಹಿಂಡಿಗೆ ಹೆಬ್ಬಲಿ ನುಗ್ಗಿದಂತೆ ಕೋಟಿಯು ಸಿಕ್ಕಿದವರನ್ನು ಕಡಿದು ಮುಂದೊತ್ತುತ್ತಿದ್ದನು. ಅನಿರೀಕ್ಷಿತವಾಗಿ ಎಲ್ಲಿಂದಲೋ ಒಂದು ಬಾಣವು ಕೋಟಿಯ ಎದೆಗೆ ರೊಯ್ಯನೆ ಬಂದು ನೆಟ್ಟುಕೊಂಡಿತು. ಇದನ್ನು ಕಂಡ ಚೆನ್ನಯನು, ಬಿರುಗಾಳಿಯಂತೆ ಆತನ ಸಹಾಯಕ್ಕಾಗಿ ನಿಂತನು. ಇದನ್ನು ನೋಡಿ ಈ ಸುಸಂದರ್ಭವನ್ನು ಉಪಯೋಗಿಸಿ ಚೆಂದುಗಿಡಿಯು ಚೆನ್ನಯನನ್ನು ಹಿಂದಿನಿಂದ ಹೊಡೆಯಲು ಕತ್ತಿ ಯೆತ್ತಿದನು. ಆದರೆ ಮಿಂಚಿನಂತೆ ತಿರುಗಿ, ಚೆನ್ನಯನು ಚೆಂದುಗಿಡಿಯನ್ನು ಒಂದೇ ಹೊಡೆತಕ್ಕೆ ನೆಲಕ್ಕುರುಳಿಸಿದನು. ಚೆಂದುಗಿಡಿಯು ನೆಲಕ್ಕುರುಳಿದ ಕೂಡಲೇ ಆತನ ಸೈನಿಕರಲ್ಲಿ ಹಾಹಾಕಾರ ಉಂಟಾಯಿತು. ಸೈನಿಕರು ಜೀವಭಯದಿಂದ ದಿಕ್ಕುದೆಸೆಯಿಲ್ಲದೆ ಓಡಹತ್ತಿದರು. ಎಣ್ಮೂರ ವೀರರು ಅವರನ್ನು ಹಿಂಬಾಲಿಸಿ ಸದೆಬಡಿದರು. ಯುದ್ಧದಲ್ಲಿ ಎಣ್ಮೂರಿಗೆ ಜಯವಾಯಿತು.

ಜಯದಿಂದ ಉಬ್ಬಿದ ದೇವಬಲ್ಲಾಳನು ಕೋಟಿ ಚೆನ್ನಯರನ್ನು ಇದಿರುಗೊಳ್ಳಲು ಸಂಭ್ರಮದಿಂದ ಪಲ್ಲಕ್ಕಿ ಸಮೇತ ಹೋದನು. ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಕೋಟಿಯು ಗಾಯಗೊಂಡು ಬಿದ್ದಿದ್ದನು.