ಕಳೆದ ಶತಮಾನದಿಂದಲೂ ದೇವನಹಳ್ಳಿ, ಹೊಸಕೋಟೆ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಗಳಲ್ಲಿ ಮನೆತನದ ದ್ರಾಕ್ಷಿಯಿದು.  ವಾರಂಗಲ್‌ ಕಾಡಿನಿಂದ ತಂದು ಬೆಳೆಯುತ್ತಿದ್ದ ಈ ದೇಸೀ ತಳಿ ವಾರ್ನಿಯರ್‌ ಎಂಬ ಜನಾಂಗದ ಮೂಲ ಆಸ್ತಿಯೂ ಹೌದು.  ಇದಕ್ಕೆ ೮೦೦ ವರ್ಷಗಳ ಇತಿಹಾಸವಿದೆ.

ಅವರ ತೋಟದ ಕೆಲಸದವರು, ಸ್ನೇಹತರು ಕ್ರಮೇಣ ದ್ರಾಕ್ಷಿ ಬೆಳೆಯುವುದನ್ನು ಕಲಿತರು.  ಆದರೆ ಈ ದ್ರಾಕ್ಷಿಯು ಬೆಂಗಳೂರು ನೆಲ ಬಿಟ್ಟ ಹೊರಹೋಗಲು ಒಲ್ಲೆ ಎಂದಿತು.

ಕಾಯಿ ಹಸುರು, ಆಮೇಲೆ ನೇರಳೆ, ಆಮೇಲೆ ನೀಲಿ.  ಹಣ್ಣಾದಾಗ ಕಪ್ಪುನೀಲಿ.  ದೂರದ ರಸ್ತೆಗೂ ಪರಮಳದ ಸೋಂಕು.

ಕೊಯ್ದು ಹಾಗೇ ಇಟ್ಟರೆ ಹದಿನೈದು ದಿನ.  ತಂಪಿನಲ್ಲಿಟ್ಟರೆ ತಿಂಗಳಾದರೂ ಬಾಡದು.  ಹೊಳಪು ಕಳೆದುಕೊಳ್ಳದು.  ದಿನಕಳೆದಂತೆ ಸಿಹಿ ಹೆಚ್ಚು.

ಇದು ಶಿವನಾಪುರ ರಮೇಶ್‌ರವರ ತೋಟದಲ್ಲಿ ಕಳೆದ ೨೫ ವರ್ಷಗಳಿಂದ ಇರುವ ತಳಿ.  ವರ್ಷದಿಂದ ವರ್ಷಕ್ಕೆ ಅಧಿಕ ಫಸಲು.  ಇದೀಗ ೧೩ ಟನ್‌ ದಾಟಿದೆ ಕೇವಲ ೧೪೦ ದ್ರಾಕ್ಷಿ ಗಿಡಗಳಿಗೆ.

ಕೊಟ್ಟಿಗೆ ಗೊಬ್ಬರ, ಎರೆಗೊಬ್ಬರ, ಬೇವಿನ ಹಿಂಡಿ, ಹೊಂಗೆ ಹಿಂಡಿ, ಜೀವಾಣು ಗೊಬ್ಬರ, ಕಡಲೆಕಾಯಿ ಹಿಂಡಿ, ಹರಳು ಹಿಂಡಿ, ಹಸುರೆಲೆ, ನಾರುಬೇರು, ಕುರಿಗೊಬ್ಬರ ಹೀಗೆ ಎಲ್ಲಾ ಪೋಷಕಾಂಶಗಳನ್ನೂ ಇವುಗಳಿಂದಲೇ ಸರಿದೂಗಿಸುವ ರಮೇಶ್‌ರವರು ಯಾವ್ಯಾವುದನ್ನು ಯಾವ್ಯಾವಾಗ ಕೊಡಬೇಕೆಂದೂ ಹೇಳುತ್ತಾರೆ ಕೇಳಿ.  ಪೋಷಕಾಂಶ ಕೊರತೆಯಾದ್ರೆ ಎಲೆಗಳು ಬಣ್ಣಗೆಡುತ್ತವೆ.  ಆಗ ಕಡ್ಲೆಕಾಯಿ ಹಿಂಡಿ, ಎರೆಗೊಬ್ಬರ, ಬೇವಿನಹಿಂಡಿ.  ಹಣ್ಣಿಗೆ ಹೊಳಪು ಬೇಕಂದ್ರೆ ಕಡ್ಲೆಕಾಯಿ ಹಿಂಡಿ.  ನೆಲ ಹದ ಮಾಡಬೇಕಾದ್ರೆ ಕತ್ತಾಳೆ, ಬೇವು, ಹೊಂಗೆ ಹಿಂಡಿಗಳು.  ಮೇಲ್ಮಣ್ಣು ಸರಿಮಾಡೋದಕ್ಕೆ ಕೊಟ್ಟಿಗೆ ಗೊಬ್ಬರ, ನಾರುಬೇರು, ಹಸುರೆಲೆ ಗೊಬ್ಬರ, ಹರಳು, ಹೊಂಗೆ, ಬೇವಿನ ಹಿಂಡಿ, ಆಗಾಗ ಅಂದ್ರೆ ಚಾಟ್ನಿ ಮಾಡಿದ ಮೇಲೆ ಗಿಡ ಬೆಳೆಯಲು ಹಿಂಡಿಗಳು, ಸಗಣಿ ಹಾಗೂ ಗಂಜಲಗಳನ್ನು ಆರು ತಿಂಗಳು ಕಳಿಸಿ ಆಮೇಲೆ ಕೊಡೋದು.  ಇದನ್ನೇ ಗಿಡ ಬೆಳೀತಿರೋವಾಗ್ಲೂ ಕೊಡಬೇಕು.

ಹೀಗೆ ಬರೀ ಗೊಬ್ಬರಗಳನ್ನು ಕೊಟ್ರಷ್ಟೇ ಸಾಲದು.  ಅದನ್ನೆಲ್ಲಾ ಗಿಡ ಸೇವಿಸೋದು ದ್ರವರೂಪದಲ್ಲಿ ತಾನೇ.  ಹಾಗೇ ಬಳ್ಳಿಗೆ ತಕ್ಕಂತೆ, ಎಲೆಗೆ ತಕ್ಕಂತೆ, ಹೂವು, ಹೀಚು, ಕಾಯಿ, ಗೊನೆ, ಹಣ್ಣು ಹೀಗೆ ಪ್ರತಿ ಹಂತಕ್ಕೆ ಅವುಗಳಿಗೆ ಎಷ್ಟು ಬೇಕೋ, ಅಷ್ಟೇ ನೀರನ್ನು ಕೊಡಬೇಕು.

ಅದೇ ರೀತಿ ಮೊಗ್ಗುಗಳು ಅರಳುವ ಸಮಯದಲ್ಲಿ, ವಿಶ್ರಾಂತಿಯ ಸಮಯದಲ್ಲಿ ನೀರು ಕೊಡದೆ ನಿಲ್ಲಿಸುವುದೂ ಗಣನೆಗೆ ಬರುತ್ತದೆ.

ದ್ರಾಕ್ಷಿಗೆ ವಿಪರೀತ ಬಿಸಿಲು ಬೇಕು.  ಹಬ್ಬಲು ಹಂದರವೂ ಬೇಕು.  ಅಡಿಯಲ್ಲಿ ತೇವಾಂಶವೂ ಬೇಕು.  ರೋಗಗಳಿಂದ ರಕ್ಷಣೆಯೂ ಬೇಕು.

ಸುತ್ತಮುತ್ತ ಮರಗಳಿರದಂತೆ, ಬಿಸಿಲು ಹೆಚ್ಚಾಗಿ ಸಿಗುವಂತೆ ದಕ್ಷಿಣೋತ್ತರವಾಗಿಯೇ ತೋಟ ಕಟ್ಟಿದ್ದಾರೆ.  ಇದು ಗಾಳಿ ನಿಯಂತ್ರಿಸುತ್ತದೆ.  ಕಲ್ಲಿನ ಹಂದರ ಆರೂವರೆ ಅಡಿ ಎತ್ತರ.  ತೇವಾಂಶ ಉಳಿಯಲು ಮರಳು, ಬುಡದಲ್ಲಿ ಮಡಿಕೆ ಚೂರುಗಳು, ಗಾಜಿನ ಚೂರುಗಳನ್ನು ಹಾಕಿದ್ದಾರೆ.

ಬೋರ್ಡೋ ಸಿಂಪಡಣೆ. ಕಂಬಳಿಹುಳ ಆರಿಸುವುದು-ಬಳ್ಳಿ ಕೆಳಗೆ ಪಂಚೆ ಹಿಡಿಯೋದು, ಬಳ್ಳಿ ಅಲುಗಿಸೋದು.  ತುಪತುಪನೆ ಹುಳುಗಳು ಪಂಚೆಗೆ ಬೀಳುತ್ತವೆ.  ಇರುವೆ ಬಾರದಂತೆ ನೀರಿನ ಹರಿವಿನಲ್ಲಿ ಬಟ್ಟೆಗೆ ಇಂಗು ಕಟ್ಟಿ ಇಡುವುದು.  ಬೇವು, ಎಕ್ಕ, ನೆಕ್ಕಿಸೊಪ್ಪಿನ ಕಷಾಯ ಹೀಗೆ ಒಂದಿಲ್ಲೊಂದು ಸರಳ ಉಪಾಯಗಳು ಇವರ ಬತ್ತಳಿಕೆಯಲ್ಲಿವೆ.

ಹಕ್ಕಿಗಳು, ಬಾವಲಿಗಳಿಗೆ ಒಳಪ್ರವೇಶವನ್ನು ಬಲೆಗಳ ಮೂಲಕ ತಡೆದಿದ್ದಾರೆ.  ಹಾಗಂತ ಬಾವಲಿಗಳ ವಾಸಾಸ್ಥಾನಕ್ಕೆ ಹೋಗಿ ಅವುಗಳ ಮಲಮೂತ್ರ ಗೊಬ್ಬರ ತಂದು ನೀಡುವುದೂ ಪ್ರತಿವರ್ಷದ ಸಾಹಸ.  ಬಳ್ಳಿ ಊರುವುದರಿಂದ ಗೊನೆ ಯೊಯ್ಯುವವರೆಗೂ ಬೆಳಗಿನಿಂದ ಸಂಜೆಯವರೆಗೂ ತೋಟದಲ್ಲೇ ವಾಸ, ಊಟ, ಕೆಲಸ.  ಇದರ ಫಲಿತಾಂಶವೇ ದಾಖಲೆ ಇಳುವರಿ.

ಬೆಂಗಳೂರು ಬ್ಲೂ ದ್ರಾಕ್ಷಿಯನ್ನು ವರ್ಷಕ್ಕೆ ಎರಡು ಬಾರಿ ಬೆಳೆಯಬಹುದು.  ಮೊದಲ ಫಸಲು ೧೨೦-೧೩೦ ದಿನಗಳಿಗೆ ಸಿಕ್ಕರೆ, ಎರಡನೆಯದು ೯೦ ದಿನಗಳಿಗೆ ಸಿಗುತ್ತದೆ.  ಚಾಟ್ನಿ ಮಾಡಿದ ದಿನವನ್ನು ಅವಲಂಬಿಸಿ ಫಸಲಿನ ದಿನಾಂಕ ನಿಗದಿಯಾಗುತ್ತದೆ.  ಇದನ್ನು ಸ್ವಲ್ಪ ಸರಿಯಾಗಿ ಗಮನಿಸಿ, ಚಾಟ್ನಿಯನ್ನು ಹಬ್ಬಗಳಿಗೆ ಫಸಲು ಸಿಗುವಂತೆ ಮಾಡಿದರೆ ಬೆಲೆಯೂ ಹೆಚ್ಚು ಸಿಗುತ್ತದೆ.

ಅಕ್ಟೋಬರ್‌ನಲ್ಲಿ ಚಾಟ್ನಿ ಮಾಡಿದರೆ ಅಲಾವಿ, ಶಿವರಾತ್ರಿಗಳಿಗೆ, ನವೆಂಬರ್‌ನಲ್ಲಿ ಮಾಡಿದರೆ ಯುಗಾದಿ, ಮದುವೆ ಸಮಾರಂಭಗಳಿಗೆ ಫಸಲು ಸಿಗುತ್ತದೆ.  ಇದರಿಂದ ಮಾರಾಟ ಹೆಚ್ಚುತ್ತದೆ.  ಬೆಳೆದವರ ಕೈಗೂ ಲಾಭವಾಗುತ್ತದೆ.

ರಮೇಶ್‌ರವರಿಗೆ ಮಾರುಕಟ್ಟೆ ಹುಡುಕಿಕೊಂಡು ಹೋಗಬೇಕಾದ ಅಗತ್ಯವಿಲ್ಲ.  ಇವರ ಬೆಲೆಗೆ ವ್ಯಾಪಾರಿಗಳೇ ಕಾಲಬುಡಕ್ಕೆ ಬರುತ್ತಾರೆ.  ಕಾರಣ ರಾಸಾಯನಿಕ ಗೊಬ್ಬರ-ಕೀಟನಾಶಕಗಳನ್ನು ಬಳಸದ, ದೀರ್ಘಕಾಲ ಇಡಬಹುದಾದ, ಹೆಚ್ಚು ಸಕ್ಕರೆ, ಸ್ವಲ್ಪ ಹುಳಿ ಇರುವ ಸುವಾಸನಾಯುಕ್ತ, ರೋಗರಹಿತ, ಒಂದೇ ಗಾತ್ರದ ಹೀಗೆ ಏನೆಲ್ಲಾ ವಿಶೇಷಗಳೇ ತುಂಬಿರುವ ಬೆಂಗಳೂರು ಬ್ಲೂ ಯಾರಿಗೆ ಬೇಡ.  ಇಲ್ಲಿಂದ ಒಯ್ದ ತಾಸುಗಳಲ್ಲೇ ಮಾರಾಟವಾಗುವ ಉತ್ಕೃಷ್ಟ ದರ್ಜೆಯ ಹಣ್ಣಿದು ಎನ್ನುತ್ತಾರೆ ಇವರ ಖಾಯಂ ವ್ಯಾಪಾರಿ ವಿಜಯಪುರದ ಸಿ. ನಂಜಾಮರಿ.

ಹಣ್ಣಾದಾಗ ಭೇಟಿ ಕೊಟ್ಟರೆ ಎಷ್ಟು ತಿನ್ನುತ್ತೀರೋ ಅಷ್ಟೂ ನಿಮಗೆ.  ಕೈಯಲ್ಲೊಂದಿಷ್ಟು, ಬ್ಯಾಗ್‌ನಲ್ಲೊಂದಿಷ್ಟು ತುಂಬಿದಿರೋ ತಿಂದದ್ದೆಲ್ಲಾ ಹೊರಗೆ!?