ಹೊಟ್ಟು, ಅಕ್ಕಿ ಗಿರಣಿಗಳಲ್ಲಿ ತ್ಯಾಜ್ಯವಸ್ತು. ಗಿರಣಿಯೊಂದು ಹತ್ತು ತಾಸು ನಡೆದರೆ ಸಂಗ್ರಹವಾಗುವ ಹೊಟ್ಟಿನ ಪ್ರಮಾಣ ೨೦೦ ಚೀಲಕ್ಕೂ ಹೆಚ್ಚು. ಈಗ ಹೊಟ್ಟಿಗೂ ಬೆಲೆಯಿದೆ. ಗಿರಣಿಗಳಲ್ಲಿರುವ ಹೊಟ್ಟನ್ನು ಪೈಪೋಟಿಯ ಮೇಲೆ ಕೊಳ್ಳುವವರೂ ಇದ್ದಾರೆ. ಹೀಗಾಗಿ ಸಣ್ಣ, ಬಿಡಿವ್ಯಾಪಾರಿಗಳಿಗೆ ಹೊಟ್ಟು ಸಿಗುತ್ತಿಲ್ಲ. ಆದರೂ ಹಳೆಯ ವಿಶ್ವಾಸ, ಗಿರಣಿ ಮಾಲಿಕರು ಹಾಗೂ ವ್ಯಾಪಾರಿಗಳ ಪರಸ್ಪರ ಸಹಕಾರದ ಅಡಿಯಲ್ಲಿ ಈ ವ್ಯಾಪಾರ-ವ್ಯಾಪಾರಿಗಳು ನಿರಂತರ.
ಸಂಕ್ರಾಂತಿಯ ಗಾಳಿ ಧೂಳನ್ನು ಆಳೆತ್ತರ ಹಾರಿಸುತ್ತಿತ್ತು. ಅಕ್ಕಿ ಗಿರಣಿಯ ಹೊಟ್ಟೆಲ್ಲ ಮುಖಕ್ಕೆ ರಾಚುತ್ತಿತ್ತು. ಸುತ್ತೆಲ್ಲಾ ಹೊಟ್ಟಿನ ಪರದೆ. ಮುಖಕ್ಕೆ ಅಪ್ಪಳಿಸುವ ಹೊಟ್ಟು, ತೌಡನ್ನು ಕೈಯಿಂದ ನಿವಾರಿಸಿಕೊಳ್ಳುತ್ತಾ ಅವರು ಒಂದೇ ಸಮನೆ ಚೀಲ ಹೊಲಿಯುತ್ತಿದ್ದರು. ಮುಖ, ಮೈಮೇಲೆಲ್ಲಾ ಮಣ್ಣುಬಣ್ಣದ ಹೊಟ್ಟಿನ ಪದರ. ಹೊಟ್ಟಿನ ರಾಶಿಯನ್ನು ಚೀಲಕ್ಕೆ ತುಂಬುವುದು, ದಬ್ಬಣಕ್ಕೆ ದಾರ ಪೋಣಿಸಿ ಹೊಲಿಯುವುದು, ಅವರ ಏಕಾಂತ, ಏಕಾಗ್ರತೆ ಕೆಲಸದ ಮೇಲಿನ ನಿಷ್ಠೆಯನ್ನು ತೋರಿಸುತ್ತಿತ್ತು. ಹೊಟ್ಟು ಅವರ ಬದುಕನ್ನು ತನ್ನೊಳಗಿನ ಗಟ್ಟಿ ಅಕ್ಕಿಯಂತೆ ಕಟ್ಟಿಕೊಟ್ಟಿತ್ತು.
ಈಶ್ವರ್ ಸಂದೇಶ್ಕರ್ಗೆ ಈಗ ೫೦ ವರ್ಷ. ಬದುಕನ್ನು ಹಿಂತಿರುಗಿ ನೋಡಿದರೆ ಹೊಟ್ಟು ತುಂಬಿದ ಹಾದಿಯಲ್ಲಿನ ಹೆಜ್ಜೆಯ ಗುರುತೆಲ್ಲಾ ಮಬ್ಬಾಗಿರದೆ ನಿಚ್ಚಳವಾಗಿತ್ತು.
೧೯೬೯ರಲ್ಲಿ ೧೦ವರ್ಷದ ಬಾಲಕ ಈಶ್ವರ ಸಿರಿವಂತರ ಮನೆಯ ಜೀತದಾಳು. ತಂದೆಯ ಬಡತನ ಮಗನ ಶಾಲೆಯ ಕನಸನ್ನು ಎರಡನೇ ತರಗತಿಗೆ ಮೊಟಕುಗೊಳಿಸಿತ್ತು. ಹಬ್ಬ, ಆಟ, ಪಾಠಗಳ ಖುಷಿಯನ್ನು ಹೊಟ್ಟೆಪಾಡು ನುಂಗಿಹಾಕಿತ್ತು. ಹಸಿವು, ಭೂತ ದೆವ್ವಗಳಿಗಿಂತಲೂ ಕೆಟ್ಟದು. ಅಪ್ಪನ ಹಿಂದೆ ಜಾರುತ್ತಿದ್ದ ಚಡ್ಡಿಯನ್ನು ಏರಿಸುತ್ತಾ, ಧಣಿ ಹೇಳಿದ ಕೆಲಸಗಳನ್ನು ಮಾಡುತ್ತಾ ದಿನಗಳು ಜಾರುತ್ತಿದ್ದವು.
ಜೀತ ಬಿಟ್ಟ ಮೇಲೆ ರಸ್ತೆ ಕೆಲಸ, ಟಾರ್ ಕೆಲಸ, ಹೋಟೆಲ್ನಲ್ಲಿ ಕ್ಲೀನರ್ ಕೆಲಸ. ಹೀಗೆ ಏನೆಲ್ಲಾ ಕೆಲಸಗಳನ್ನು ಈಶ್ವರರು ಮಾಡಿದರೂ ಅದೆಲ್ಲಾ ಸ್ವಲ್ಪ ದಿನಗಳ ಹಂಗಾಮಿ ಬದುಕು. ಮನೆಯ ಹತ್ತಿರದಲ್ಲಿದ್ದ ಪ್ರಸಾದ್ ಅವಲಕ್ಕಿ ಗಿರಣಿಗೆ ಕೆಲಸಗಾರನಾಗಿ ಸೇರಿದಾಗ ಈಶ್ವರ ಸಂದೇಶ್ಕರರಿಗಿನ್ನೂ ೧೨ ವರ್ಷ ಮಾತ್ರ. ತಿಂಗಳಿಗೆ ೧೫ ರೂಪಾಯಿಗಳ ಸಂಬಳ. ಬೆಳಗ್ಗಿನಿಂದ ರಾತ್ರಿ ಗಿರಣಿ ಮುಚ್ಚುವವರೆಗೂ ದುಡಿತ. ಬೆಳಗ್ಗೆ ಇಡ್ಲಿ ತಿನ್ನಲು ನಾಲ್ಕಾಣೆ ಸಿಗುತ್ತಿತ್ತು. ನಾಲ್ಕಾಣೆಗೆ ನಾಲ್ಕು ಇಡ್ಲಿ, ಒಂದು ಕಾಫಿ ಸಿಗುತ್ತಿತ್ತು. ಆದರೆ ೧೫ ರೂಪಾಯಿಗಳಿಂದ ತಿಂಗಳ ಬದುಕು ಸಾಗುತ್ತಿರಲಿಲ್ಲ.
ಅಕ್ಕಿ ಗಿರಣಿಗಳ ಹಿಂದಿರುವ ಹೊಟ್ಟಿನ ರಾಶಿ ಇವರನ್ನೇ ಕಾಯುತ್ತಿದ್ದವು. ಹುಡುಗರೆಲ್ಲಾ ಹೈಜಂಪ್ ಆಡುತ್ತಿದ್ದ ಹೊಟ್ಟಿನ ರಾಶಿ, ಜಾರುಬಂಡಿ ಆಡುತ್ತಿದ್ದ ಹೊಟ್ಟಿನ ರಾಶಿ, ಈ ಬಾಲಕನ ಹೊಟ್ಟೆಯ ಹಸಿವಿನ ಬೆಂಕಿಗೆ ಆಹಾರವಾಗಲು ಕಾದಿತ್ತು.
ಇಸವಿ ೧೯೭೪ರ ಸಮಯ. ಸಾಗರದ ವರದಾನದಿಯ ದಂಡೆಯ ಮೇಲೆ ಸಾಲು ಸಾಲು ಅಕ್ಕಿಗಿರಣಿಗಳು. ಅಕ್ಕಿ ಮಾಡಿಸಿದ ಮೇಲೆ ಹೊಟ್ಟು ಯಾಕೆ ಬೇಕು? ಕೆಲವು ರೈತರು ಹೊಟ್ಟಿನ ಬೂದಿ ಮಾಡಿ ಪಾತ್ರೆ ಉಜ್ಜಲು, ಹಲ್ಲುಜ್ಜುವ ಕೆಲಸಕ್ಕ ಒಯ್ಯುತ್ತಿದ್ದರು. ಕೆಲವರು ಹೊಲದಲ್ಲಿ ಸುಡುಮಣ್ಣು ಮಾಡವಾಗ ಮಣ್ಣಿನೊಂದಿಗೆ ಬೆರೆಸಿ ಬೆಂಕಿ ಬೇಗ ಉರಿಯುವಂತೆ ಮಾಡಲು ಒಯ್ಯುತ್ತಿದ್ದರು. ಅದೆಲ್ಲಾ ಬೆರಳೆಣಿಕೆಯಷ್ಟು ಚೀಲಗಳು ಮಾತ್ರ. ಆದರೂ ಗಿರಣಿಗಳಲ್ಲಿ ರಾಶಿ ರಾಶಿ ಹೊಟ್ಟು ಉಳಿಯುತ್ತಿತ್ತು. ಇಲ್ಲಾ ಪಕ್ಕದಲ್ಲಿದ್ದ ವರದೆಯ ಪಾಲಾಗುತ್ತಿತ್ತು.
ಮಲೆನಾಡಿನಲ್ಲೂ ಕಟ್ಟಿಗೆಯ ಅಭಾವ ಹೆಚ್ಚುತ್ತಿತ್ತು. ಮಳೆಗಾಲದಲ್ಲಿ ಕಟ್ಟಿಗೆ ನೆನೆಯದಂತೆ ಸಂಗ್ರಹಿಸುವ ಕೆಲಸ ಸುಲಭದ್ದಲ್ಲ. ಹೋಟೆಲ್ಗಳಲ್ಲಂತೂ ಒಲೆ ನಿರಂತರವಾಗಿ ಉರಿಸುವುದೇ ಸಮಸ್ಯೆ. ಹೀಗಾಗಿ ಹೋಟೆಲ್ಗಳಲ್ಲೂ ಹೊಟ್ಟನ್ನು ಉರುವಲಾಗಿ ಬಳಸಬಹುದಾದ ಒಲೆಗಳನ್ನು ಕಟ್ಟುವ ವಿಧಾನ ಬಳಕೆಗೆ ಬಂತು. ಕಟ್ಟಿಗೆಯನ್ನು ಹಣಕೊಟ್ಟು ಕೊಳ್ಳಬೇಕಾಗಿತ್ತು. ಹೊಟ್ಟಾದರೆ ಉಚಿತ. ಅಕ್ಕಿ ಗಿರಣಿಗಳಿಂದ ತರುವ ಖರ್ಚು ಅಂದರೆ ಹಮಾಲಿ ಕೊಟ್ಟರಾಯಿತು. ಒಂದು ಚೀಲಕ್ಕೆ ೧೫ ಪೈಸೆ ಹಮಾಲಿ ಕೂಲಿ.
ಈಶ್ವರ ಸಂದೇಶ್ಕರರು ತಮ್ಮ ತಂದೆ, ತಂಗಿಯ ಜೊತೆ ಸೇರಿ ಹೊಟ್ಟು ವ್ಯಾಪಾರ ಅಂದರೆ ಹೋಟೆಲ್ಗಳಿಗೆ ಹೊಟ್ಟು ಪೂರೈಕೆಯ ಕೆಲಸಕ್ಕೆ ತೊಡಗಿದರು. ಗಿರಣಿಗಳಿಂದ ಹೋಟೆಲ್ವರೆಗೆ ಒಮ್ಮೆಗೆ ಎರಡು ಚೀಲ ಹೊಟ್ಟನ್ನು ತಲೆಯ ಮೇಲಿಟ್ಟು ಹೊತ್ತೊಯ್ಯಲು ಸಾಧ್ಯವಾಗುತ್ತಿತ್ತು. ದಿನಕ್ಕೆ ಒಂದು ರೂಪಾಯಿಗಳಷ್ಟು ದುಡಿದರೆ ಅಂದು ಖುಷಿಯೋ ಖುಷಿ. ಮೂವರೂ ದುಡಿಯುವ ಕಾರಣ ಮನೆಯ ಖರ್ಚು ನಿಭಾಯಿಸಲು ಸಾಧ್ಯವಾಗುತ್ತಿತ್ತು.
ಸಾಗರದಲ್ಲಿ ಮೈಸೂರ್ ಬಾರ್ನವರ ಬಳಿ ಕೈಗಾಡಿಯಿತ್ತು. ಕೈಗಾಡಿಯಲ್ಲಿ ಒಮ್ಮೆಲೇ ೧೦-೧೨ ಚೀಲಗಳಷ್ಟು ಹೊಟ್ಟನ್ನು ಸಾಗಿಸಬಹುದಾಗಿತ್ತು. ಇದರಿಂದ ಹೋಟೆಲ್ಗಳಿಗೆ, ಗಿರಾಕಿಗಳಿಗೆ ಹೊಟ್ಟು ಸರಬರಾಜು ಮಾಡಬಹುದಿತ್ತು. ತಲೆ ಹೊರೆಯಾಗಿ ದಿನವಿಡೀ ಕೇವಲ ಎರಡೆರಡೇ ಚೀಲ ಹೊರುವ ಬದಲು ಒಟ್ಟಿಗೆ ಎಲ್ಲಾ ಸಾಗಿಸುವ ಸುಲಭ ವಿಧಾನ. ಕೆಲಸ ಬೇಗ ಬೇಗ ಮುಗಿಯುವ ಸಾಧ್ಯತೆ. ಮೂರು ಜನರ ಕೆಲಸ ಒಬ್ಬನೇ ಮಾಡಬಹುದು ಎನ್ನುವ ಆಲೋಚನೆ. ಹೀಗೆ ಬದಲೀ ವ್ಯವಸ್ಥೆಯ ಕುರಿತು ಯೋಚಿಸಿದರು.
ಕೆಲವು ಹೊಟ್ಟು ವ್ಯಾಪಾರಿಗಳ ಬಳಿ ಸೈಕಲ್ ಇತ್ತು. ಅದರಲ್ಲೂ ಹೆಚ್ಚು ಸಾಗಾಣಿಕೆ ಅಸಾಧ್ಯ. ೧೫ರ ಯುವಕ ಈಶ್ವರರು ತಮ್ಮ ತಂದೆಯ ಬಳಿ ಕೈಗಾಡಿಯ ಲಾಭ ತಿಳಿಸಿದರು. ಮೈಸೂರ್ ಬಾರ್ ಮಾಲಿಕರ ಬಳಿ ಕೈಗಾಡಿ ಕೇಳಿದರು.
೮೮೮೮೮೮೮೮ದಿನಕ್ಕೆ ೫೦ ಪೈಸೆ ಬಾಡಿಗೆಗೆ ಒಪ್ಪಂದವಾಯಿತು. ಹೊಟ್ಟಿನ ಚೀಲಗಳೆಲ್ಲಾ ಕೈಗಾಡಿಯಲ್ಲಿ ಮೆರವಣಿಗೆ ಹೊರಟವು. ದಿನದ ಗಳಿಕೆ ಮೂರುಪಟ್ಟು ಹೆಚ್ಚಾಯಿತು. ಇದರಿಂದ ಹೊಟ್ಟು ಮಾರುತ್ತಿದ್ದ ಇತರ ಕೆಲವು ಗಿರಾಕಿಗಳಿಗೆ ಅಸೂಯೆಯಾಗತೊಡಗಿತು. ಅವರೆಲ್ಲಾ ಈಶ್ವರರೊಂದಿಗೆ ಜಗಳಕ್ಕೆ ಕಾಲು ಕೆರೆಯತೊಡಗಿದರು.
ಒಂದು ದಿನ ಈಶ್ವರರು ತಂದೆಯೊಂದಿಗೆ ಹೊಟ್ಟಿನ ರಾಶಿಯನ್ನು ಚೀಲಕ್ಕೆ ತುಂಬಿದರು. ಹೋಟೆಲ್ಗಳಿಗೆ ಬೆಳಗ್ಗೆ ಸಾಗಿಸೋಣವೆಂದು ಗಿರಣಿಯ ಹಿತ್ತಲಿನಲ್ಲಿಯೇ ಪೇರಿಸಿದ್ದರು. ಕಾವಲಿಗೆಂದು ಅಲ್ಲಿಯೇ ಮಲಗಿದ್ದರು.
ಬೆಳಗಿನ ಝಾವ. ಸವಿನಿದ್ದೆ. ಏನೋ ಗುಜುಗುಜು ಸದ್ದು. ಎದ್ದು ನೋಡಿದರೆ ತುಂಬಿಟ್ಟ ಹೊಟ್ಟಿನ ಚೀಲವೆಲ್ಲಾ ಮಾಯ. ಯಾರೋ ಒಂದಿಬ್ಬರು ಓಡುವ ಸದ್ದು. ಇವರೂ ಅವರ ಹಿಂದೆ ಓಡಿದರು. ಹೊಟ್ಟು ಹಾರಿಸಿದವರ ಬೆನ್ನುಬಿದ್ದು ಹಿಡಿದೇಬಿಟ್ಟರು. ಭಾರೀ ಹೊಡೆದಾಟವೂ ಆಯಿತು.
ಇದಾದ ಮೇಲೆ ಈಶ್ವರರು ಸಾಗರದ ಗಿರಣಿಗಳಲ್ಲಿ ಹೊಟ್ಟು ತುಂಬುವುದನ್ನೇ ಬಿಟ್ಟರು. ಹೆಗ್ಗೋಡಿನ ಗುರುಪ್ರಸಾದ ಅಕ್ಕಿ ಗಿರಣಿಗೆ ಕಾಲಿಟ್ಟರು. ಆಗಲೇ ಸಾಗರದ ಅಕ್ಕಿಗಿರಣಿಗಳು ಒಂದು ಚೀಲ ಹೊಟ್ಟಿಗೆ ೧೫ ಪೈಸೆ ಬೆಲೆ ನಿಗದಿ ಮಾಡಿದ್ದರು. ಹೆಗ್ಗೋಡಿನ ಗುರುಪ್ರಸಾದ ಅಕ್ಕಿ ಗಿರಣಿಯಲ್ಲಿ ಹೊಟ್ಟು ಉಚಿತವಾಗಿ ಸಿಗುತ್ತಿತ್ತು.
ಸಾಗರದಿಂದ ಹೆಗ್ಗೋಡು ೧೨ ಕಿಲೋಮೀಟರ್ ದೂರದಲ್ಲಿದೆ. ಕೈಗಾಡಿಯಲ್ಲಿ ಹೊಟ್ಟಿನ ಚೀಲ ಹೇರಿಕೊಂಡು ಎಳೆದು ತರುವ ಕೆಲಸ ಸುಲಭದ್ದಲ್ಲ. ಆದರೂ ಅನಿವಾರ್ಯ. ಗುರುಪ್ರಸಾದ ಅಕ್ಕಿ ಗಿರಣಿ ಮಾಲೀಕರು ಬೆಳಗ್ಗೆ ತಿನ್ನಲು ಅವಲಕ್ಕಿ ನೀಡುತ್ತಿದ್ದರು. ಅದೇ ಸಂಜೆಯವರೆಗಿನ ಶಕ್ತಿ. ೧೦-೧೨ ಚೀಲ ಕೈಗಾಡಿಯಲ್ಲಿ ಹೇರಿಕೊಂಡು ದಿನಾಲೂ ನಾಲ್ಕಾರು ಸುತ್ತು ತಿರುಗಾಟ.
ಕೈಗಾಡಿ ಎಳೆದೂ ಎಳೆದೂ ಸುಸ್ತಾಗುತ್ತಿತ್ತು. ದಿನೇ ದಿನೇ ಎದೆಗೂಡೆಲ್ಲಾ ಬಿಡತೊಡಗಿತು. ಒಮ್ಮೆಯಂತೂ ಬಿಸಿಲು, ಉಷ್ಣದಿಂದ ಬಾಯಲ್ಲಿ ರಕ್ತವೇ ಕಿತ್ತು ಬಂತು. ಆಗ ಈಶ್ವರರು ನಿರ್ಧಾರ ಮಾಡಿದರು. ಎತ್ತು ತರಲೇಬೇಕು.
ಗಾಡಿಯೂ ಸ್ವಂತದ್ದಾದರೆ ಇನ್ನೂ ಅನುಕೂಲ ಎನ್ನುವ ವಿಚಾರವೂ ಸೇರಿತು. ಮೈಸೂರು ಕೆಫೆ ಶ್ರೀನಿವಾಸರಾಯರ ಸಹಾಯದಿಂದ ಗಾಡಿ ಎತ್ತು ಬಂದಿತು. ಗಾಡಿಯ ಖರ್ಚು ೫೫ ರೂಪಾಯಿಗಳು. ಮರದ ಚಕ್ರದ ಒಂಟೆತ್ತಿನ ಗಾಡಿ. ಕೈಗಾಡಿಯಲ್ಲಿ ಆಗುವ ವ್ಯವಹಾರಕ್ಕಿಂತಲೂ ಹೆಚ್ಚು ವಹಿವಾಟು ಎತ್ತಿನಗಾಡಿ ಬಂದಮೇಲೆ ಆಗತೊಡಗಿತು. ಕೈಗಾಡಿಯಿದ್ದಾಗ ದಿನಕ್ಕೆ ಸುಮಾರು ೫೦ ಚೀಲಗಳಷ್ಟು ಸಾಗಣೆ ಸಾಧ್ಯವಾಗಿತ್ತು. ಎತ್ತಿನ ಗಾಡಿಯಲ್ಲಿ ೧೦೦ ಚೀಲ ಹೊಟ್ಟನ್ನು ಸಾಗಿಸುವಷ್ಟು ವ್ಯವಹಾರ ಕುದುರಿತ್ತು.
ಕಾರಣ ಸಾಗರ ಬೆಳೆಯತೊಡಗಿತ್ತು. ಹೋಟೆಲ್ಗಳು ಹೆಚ್ಚಿದವು. ಅದಕ್ಕೆ ತಕ್ಕಂತೆ ಖರ್ಚುಗಳೂ ಹೆಚ್ಚಿದ್ದವು. ಮನೆ ಖರ್ಚು, ತಂಗಿಯ ಮದುವೆ ಖರ್ಚು ಹೀಗೆ ಖರ್ಚಿನ ಪಟ್ಟಿ ಉದ್ದ ಬೆಳೆಯುತ್ತಿತ್ತು. ಹೀಗಿರುವಾಗಲೇ ಒಂದು ಕೆಟ್ಟ ರಾತ್ರಿ ಈಶ್ವರರ ಮನೆಗೆ ಬೆಂಕಿ ಬಿತ್ತು.
ಮನೆಯ ತುಂಬಾ ಜನ. ಎಲ್ಲರೂ ಮಲಗಿದ್ದ ಸಮಯ. ಬೆಂಕಿ ಹೇಗೆ ಹೊತ್ತಿತೋ? ಒಂದು ತಾಸಿನಲ್ಲಿ ಹುಲ್ಲಿನ ಮನೆ ಬೂದಿಗುಡ್ಡೆಯಾಗಿತ್ತು. ಪಾತ್ರೆಗಳು, ಬಟ್ಟೆಗಳು, ಹಾಸಿಗೆ ವಸ್ತ್ರಗಳು, ದಿನಸಿ, ದುಡ್ಡು ಎಲ್ಲವೂ ಸುಟ್ಟು ಕರಕಲಾಗಿದ್ದವು. ಇಡೀ ಕುಟುಂಬವೇ ಬೀದಿಗೆ ಬಿದ್ದಿತ್ತು.
ಬಡ ದಲಿತರೇ ತುಂಬಿರುವ ಕೇರಿಯಲ್ಲಿ ಇವರ ಕಣ್ಣೀರಿನೊಂದಿಗೆ ಉಳಿದವರ ಕಣ್ಣೀರೇ ಜೊತೆಯಾಗಿತ್ತು. ಹೊತ್ತಿದ ಬೆಂಕಿಯನ್ನು ಆರಿಸಲು ಹತ್ತಿರದಲ್ಲಿ ನೀರೆಲ್ಲಿ ಸಿಗಬೇಕು. ನೀರು ತರಲು ಮೈಲು ದೂರದ ವರದೆಯ ಬಳಿಯೇ ಹೋಗಬೇಕು.
ಆದರೆ ಅದೃಷ್ಟ ಕೈಕೊಟ್ಟಿರಲಿಲ್ಲ. ಈಶ್ವರರ ಮನೆಯ ಕೂಗಳತೆಯ ದೂರದಲ್ಲಿ ಎಸ್ಆರ್ಎಸ್ ಅಕ್ಕಿ ಗಿರಿಣಿಯ ಗುರುಬಸವಯ್ಯನವರ ಮನೆಯಿತ್ತು. ಇವರ ಮನೆಯ ಬೆಂಕಿ ಧಗೆ ಆಕಾಶಕ್ಕೆ ಚಾಚಿದ ಕೆನ್ನಾಲಿಗೆಯ ಝಳ, ಕರುಣಾಭರಿತ ಆಕ್ರಂದನ ಮನೆಯಲ್ಲಿದ್ದವರನ್ನೆಲ್ಲಾ ಬಡಿದೆಬ್ಬಿಸಿತು. ಗುರುಬಸವಯ್ಯನವರ ಸಹಿತ ಮನೆಯಲ್ಲಿದ್ದ ಗಂಡಸರು, ಹೆಂಗಸರೆಲ್ಲಾ ಓಡಿಬಂದರು. ಮನೆಯ ಬಾವಿಯಿಂದಲೇ ನೀರು ತಂದು ಬೆಂಕಿ ಆರಿಸಿದರು.
ಮನೆಯವರನ್ನೆಲ್ಲಾ ಸಂತೈಸಿದರು. ಮರುದಿನ ತಿಂಡಿ, ಗಂಜಿ, ಅಕ್ಕಿ ನೀಡಿದರು. ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿದರು. ಮನೆ ಸಿದ್ಧವಾಗುವವರೆಗೂ ತಮ್ಮ ಜಾಗದಲ್ಲೇ ಆಶ್ರಯ ನೀಡಿದರು. ಇಂದಿಗೂ ದೇವರೊಂದಿಗೆ ಗುರುಬಸವಯ್ಯನವರನ್ನೂ ನೆನೆಯುತ್ತೇನೆ ಎನ್ನುವಾಗ ಈಶ್ವರ ಸಂದೇಶ್ಕರರ ಕಣ್ಣಂಚಿನಲ್ಲಿ ನೀರು ತೊಟ್ಟಿಕ್ಕುತ್ತಿತ್ತು.
ಬೆಂಕಿ ಇವರ ಮನೆಯನ್ನು ಮಾತ್ರ ಸುಡಲು ಸಾಧ್ಯವಾಯಿತು. ಬದುಕನ್ನಲ್ಲ, ಶ್ರಮದ ಜೀವನ, ಪ್ರಾಮಾಣಿಕತೆಗಳು ಬದುಕನ್ನು ಶ್ರೀಮಂತಗೊಳಿಸುತ್ತಿತ್ತು.
೧೯೮೫ರಲ್ಲಿ ಈಶ್ವರರು ಪ್ರೇಮಾರನ್ನು ಮದುವೆಯಾದರು. ಕುಮಾರಿ, ಪವಿತ್ರ, ನಾಗರಾಜ, ವಿನಾಯಕ ನಾಲ್ವರು ಮಕ್ಕಳು ಜನಿಸಿದರು. ಕುಟುಂಬ ದೊಡ್ಡದಾಯಿತು. ವ್ಯಾಪಾರವೂ ದೊಡ್ಡದಾಗಿಯೇ ನಡೆಯುತ್ತಿತ್ತು.
ಒಂದು ಹೊಟ್ಟಿನ ಚೀಲಕ್ಕೆ ಒಂದು ರೂಪಾಯಿ ಸಿಗುತ್ತಿತ್ತು. ಅಕ್ಕಿ ಗಿರಣಿ ಮಾಲಿಕರು ಹೊಟ್ಟಿನ ಬೆಲೆ ಏರಿಸಿದ್ದರು. ಐದು ರೂಪಾಯಿಗಳಿಗೊಂದು ಹೊಟ್ಟಿನ ಚೀಲ. ಹೋಟೆಲ್ಗಳ ಸಂಖ್ಯೆಯೂ ಸುಮಾರು ೨೦ ದಾಟಿತ್ತು. ಹೊಟ್ಟು ವ್ಯಾಪಾರಿಗಳೂ ಹೆಚ್ಚಿದ್ದರು.
ಈಶ್ವರರು ಸಾಗರದ ಅರಮನೆ ಕೇರಿಯಲ್ಲಿ ಚಂದದ ಮನೆ ಕಟ್ಟಿಸಿದರು. ಮಕ್ಕಳನ್ನೆಲ್ಲಾ ಶಾಲೆಗೆ ಸೇರಿಸಿದರು. ಕೇರಿಯ ಸಂಘದಲ್ಲಿ ಪ್ರಮುಖರಾದರು. ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡತೊಡಗಿದರು. ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸದಸ್ಯರಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿದರು. ಹೀಗೆ ರಾಜಕೀಯದಲ್ಲೂ ಕಾಣಿಸಿಕೊಳ್ಳತೊಡಗಿದರು. ಕೇರಿಯ ಮುಂದಾಳತ್ವ ವಹಿಸಿದರು.
ಮನೆಯಲ್ಲಿ ಸೌಕರ್ಯ ವೃದ್ಧಿಸತೊಡಗಿತು. ಮಿಕ್ಸರ್, ಸೋಫಾ, ದೂರದರ್ಶನ ಹೀಗೆ… ಆಧುನಿಕತೆಯೂ ಬಂತು. ಮಕ್ಕಳು ಕಾಲೇಜು ಮೆಟ್ಟಿಲು ಏರಿದರು. ಈಶ್ವರರವರು ಸಾಗರದ ಪುರಸಭೆಯ ಆಶ್ರಯ ಸಮಿತಿಯ ಸದಸ್ಯರೂ ಆದರು.
ಉಚಿತವಾಗಿ ಸಿಗುತ್ತಿದ್ದ ಹೊಟ್ಟು ಇಂದು ಚೀಲವೊಂದಕ್ಕೆ ೧೫ ರೂಪಾಯಿಗಳಾಗಿದೆ. ಒಂದು ಚೀಲಕ್ಕೆ ೧೫ ಪೈಸೆ ಸಿಗುವ ಕಾಲ ಹೋಗಿ, ನಾಲ್ಕು-ಐದು ರೂಪಾಯಿಗಳು ಸಿಗುತ್ತಿದೆ. ಬೇಡಿಕೆ ಹೆಚ್ಚಾದಾಗ ಬೆಲೆಯೂ ಏರುವುದು ಸಹಜ.
ಹೋಟೆಲ್ಗಳ ಸಂಖ್ಯೆ ಹೆಚ್ಚಿದೆ. ಇಟ್ಟಿಗೆ ಉದ್ದಿಮೆಗೆ ಹೊಟ್ಟು ಬೇಕು. ಕುಚ್ಚಿಗೆ ಅಕ್ಕಿ ತಯಾರಿಸಲು, ಗ್ಯಾಸಿಫೈಯರ್ಗಳಿಗೆ ಹೊಟ್ಟು ಲೋಡ್ಗಳ ಲೆಕ್ಕದಲ್ಲಿ ಬೇಕು. ಹೊಟ್ಟಿನ ವ್ಯಾಪಾರವೇ ಒಂದು ಪ್ರತ್ಯೇಕ ಉದ್ದಿಮೆಯಾಗಿದೆ. ಅಕ್ಕಿ ಗಿರಣಿಗಳೂ ಸಹ ಸಣ್ಣ ವ್ಯಾಪಾರಿಗಳಿಗಿಂತಲೂ ದೊಡ್ಡ ವ್ಯಾಪಾರಿಗಳಿಗೇ ಹೆಚ್ಚು ಹೊಟ್ಟಿನ ಚೀಲಗಳನ್ನು ಸರಬರಾಜು ಮಾಡತೊಡಗಿದವು.
ಹೆಚ್ಚಾದ ಸಣ್ಣ ವ್ಯಾಪಾರಿಗಳು, ವ್ಯಾಪಾರದಲ್ಲಿನ ಪೈಪೋಟಿ ಹೀಗೆ ನಾನಾ ಕಾರಣಗಳಿಂದ ವ್ಯವಹಾರ ಕುಂಠಿತವಾಗತೊಡಗಿತು. ಲಾಭವೂ ಕಡಿಮೆಯಾಗುತ್ತಿದೆ. ಅನೇಕರು ಹೊಟ್ಟಿನ ವ್ಯಾಪಾರ ಬಿಟ್ಟು ಹಮಾಲಿಗಳಾಗತೊಡಗಿದರು. ಬೇರೆ ಕೆಲಸ ಹುಡುಕತೊಡಗಿದರು. ವ್ಯಾಪಾರದಲ್ಲಿ ಸಾಮರಸ್ಯ, ವ್ಯಾಪಾರಿಗಳಲ್ಲಿ ಒಗ್ಗಟ್ಟು, ಸಂಘಟನೆಗಳು ಇಲ್ಲದ ಕಾರಣ ಹೊಂದಾಣಿಕೆ ಇಲ್ಲವಾಯಿತು.
ಇತ್ತೀಚೆಗೆ ಹೋಟೆಲ್ ಮಾಲೀಕರ ಸಂಘದವರು ಹೊಟ್ಟಿನ ಬೆಲೆ ಏರುತ್ತಿರುವುದನ್ನು ಗಮನಿಸಿ ನಿಯಂತ್ರಿಸಲು ನಿರ್ಧರಿಸಿದರು. ಸಂಘದ ವತಿಯಿಂದಲೇ ನೇರವಾಗಿ ಹೊಟ್ಟು ಖರೀದಿ, ಬೆಲೆ ನಿಗದಿ, ಕೂಲಿ ನಿಗದಿ ಮಾಡತೊಡಗಿದರು. ಕೆಲವು ಪ್ರದೇಶಗಳು ಗುತ್ತಿಗೆ ನೀಡತೊಡಗಿದರು. ಹೊಟ್ಟಿನ ವ್ಯಾಪಾರ ವ್ಯವಹಾರಗಳನ್ನು ತಮ್ಮ ನಿಯಂತ್ರಣಕ್ಕೆ ತಂದುಕೊಂಡರು. ಹೀಗಾಗಿ ಅನೇಕ ಸಣ್ಣ ವ್ಯಾಪಾರಿಗಳು ಹೊಟ್ಟಿನ ವ್ಯಾಪಾರದಿಂದಲೇ ದೂರ ಸರಿಯಬೇಕಾಯಿತು.
ಕೆಲವು ವರ್ಷಗಳ ಹಿಂದೆ ಅಕ್ಕಿ ಗಿರಣಿಗಳು ಹೊಟ್ಟಿನ ಬೆಲೆಯನ್ನು ತಮಗೆ ಬೇಕಾದಂತೆ ಏರಿಸುವುದನ್ನು ಈಶ್ವರರವರು ಖಂಡಿಸಿದರು. ಎಲ್ಲರೂ ಒಂದೇ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿದರು. ಗಿರಣಿ ಮಾಲಿಕರು ಇವರ ಕೂಗನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಈಶ್ವರವರು ಸಾಗರದ ಎಸಿಯವರೆಗೆ ದೂರು ಒಯ್ದರು. ಅದೂ ಪ್ರಯೋಜನವಾಗಲಿಲ್ಲ. ಹೀಗೆ ಹೊಟ್ಟು ಯಾವುದೇ ಕಾನೂನಿಗೂ ಸಿಗದೆ ಹಾರಿಹೋಗುವ ವಸ್ತುವಾಗಿದೆ.
ಹಾಗೆ ನೋಡಿದರೆ ಈಶ್ವರರವರು ಕಾಂಗ್ರೆಸ್ ಕಾರ್ಯಕರ್ತರಾಗಿ ೨೫ ವರ್ಷಗಳ ಕಾಲ ದುಡಿದಿದ್ದರು. ಆಶ್ರಯ ಸಮಿತಿಯ ಸದಸ್ಯರಾಗಿ ಸುಮಾರು ೪೦ ದಲಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಿದ್ದಾರೆ. ಸಾಗರದಲ್ಲಿನ ನವಜೀವನ ಯುವಕ ಸಂಘದ ಜೊತೆ ಜಾಗೃತಿ ಮೂಡಿಸುವ ಸಲುವಾಗಿ ಅಂಬೇಡ್ಕರ್, ರೈತ ಆತ್ಮಹತ್ಯೆ, ಪ್ರಜ್ಞಾ ರಂಗತಂಡದೊಂದಿಗೆ ದಲಿತ ಲೋಕ ಮುಂತಾದ ನಾಟಕಗಳಲ್ಲಿ ಪಾತ್ರ ವಹಿಸಿದ್ದಾರೆ. ಇಷ್ಟೆಲ್ಲಾ ಆಗಿಯೂ ಹೊಟ್ಟು ವ್ಯಾಪಾರಿಗಳ ಕಷ್ಟ ಬಗೆಹರಿಸುವ ಪ್ರಯತ್ನದಲ್ಲಿ ಹಿಂದಾದಾಗ ಕಾಂಗ್ರೆಸ್ ಬಿಟ್ಟು ಭಾರತೀಯ ಜನತಾಪಕ್ಷ ಸೇರಿದರು.
ಕೋಟಿ ಸಿಕ್ಕರೂ… ಹೊಟ್ಟಿನ ವ್ಯಾಪಾರ ಬಿಡಲಾರೆ ಎನ್ನುವ ದೃಢ ನಿಲುವು ಇವರದು. ಇಲ್ಲಿ ಭಾವುಕತೆಯಿದೆ, ಬದುಕಿದೆ, ಆರ್ಥಿಕತೆಯಿದೆ. ಏನೆಲ್ಲಾ ಇದೆ. ಹೊಟ್ಟಿನೊಂದಿಗೆ ಬರುತ್ತಿದ್ದ ನುಚ್ಚನ್ನು ಆರಿಸಿ ಗಂಜಿ ಕುಡಿದಿದ್ದನ್ನು ನೆನಪಿಸಿಕೊಳ್ಳುತ್ತಾ ಹೊಟ್ಟು ನನ್ನ ಎರಡನೇ ತಾಯಿ ಎನ್ನುತ್ತಾರೆ.
ಹಿರಿಯ ಮಗಳು ಕುಮಾರಿ ಪದವಿ ಮುಗಿದಿದೆ. ಪವಿತ್ರ, ನಾಗರಾಜ,ವಿನಾಯಕ ಓದುತ್ತಿದ್ದಾರೆ. ಸಾಗರದಲ್ಲಿ ಸಿಗುವಷ್ಟು ವಿದ್ಯಾಭ್ಯಾಸ ಕೊಡಿಸುವ ಕನಸು ಇವರದು. ಹಣ, ಆಸ್ತಿ, ಜಮೀನು ಎಂದೆಲ್ಲಾ ಕೂಡಿಡುವ ಬದಲು ವಿದ್ಯಾಭ್ಯಾಸವೇ ಮುಖ್ಯ ಎನ್ನುವ ವಿಚಾರ ಇವರದು. ಅದಕ್ಕಾಗಿ ಮಕ್ಕಳನ್ನೆಲ್ಲಾ ಓದಿಸುವುದೇ ಮೊದಲ ಗುರಿ.
ಹೊಟ್ಟಿನ ಧೂಳು ಅಲರ್ಜಿ, ಅಸ್ತಮಾಗಳಿಗೆ ಕಾರಣವಾಗುತ್ತದೆ. ಧೂಳನ್ನು ನಿರಂತರ ಸೇವಿಸುತ್ತಲೇ ಇರುವುದರಿಂದ ಶ್ವಾಸಕೋಶದ ಸಮಸ್ಯೆಗಳೂ ಉಂಟಾಗಬಹುದು. ಈಶ್ವರರಿಗೆ ಈಗಾಗಲೇ ಒಮ್ಮೆ ಮೂಗಿನ ಆಪರೇಷನ್ ಆಗಿದೆ. ಸದ್ಯ ಯಾವುದೇ ಸಮಸ್ಯೆಯೂ ಇಲ್ಲ.
ಆರೋಗ್ಯದ ದೃಷ್ಟಿಯಿಂದ ಹಾಗೂ ಮುಂದೆ ಹೊಟ್ಟಿನ ವ್ಯಾಪಾರ ಸುಲಭವಲ್ಲ ಎನ್ನುವ ಕಾರಣಕ್ಕೆ ಮಕ್ಕಳಿಗೆ ಹೊಟ್ಟಿನ ವ್ಯಾಪಾರಕ್ಕೆ ಬರಲು ಪ್ರೋತ್ಸಾಹ ನೀಡುತ್ತಿಲ್ಲ. ಈಗ ಹಿರಿಯ ಮಗ ನಾಗರಾಜ ಕಾಲೇಜು ಮುಗಿದ ಮೇಲೆ ಇವರೊಂದಿಗೆ ಸೇರಿ ಒಂದಿಷ್ಟು ಸಹಾಯ ಮಾಡುತ್ತಾನೆ. ಕಾರಣ ಕೂಲಿಗಳ ಅಭಾವ. ಜೊತೆಗೆ ಕಾಲೇಜಿನ ಕೆಲವು ಖರ್ಚುಗಳ ಪೂರೈಕೆಯೂ ಆದೀತು ಎಂಬ ಯೋಚನೆ. ಆದರೆ ವಿದ್ಯಾಭ್ಯಾಸ ಪೂರೈಸಿದ ಮೇಲೆ ಹೊಟ್ಟು ವ್ಯಾಪಾರ ಮಾಡಲು ಇಷ್ಟವಿಲ್ಲ. ಯಾವುದಾದರೂ ನೌಕರಿ ಹಿಡಿಯುತ್ತೇನೆ ಎನ್ನುವ ನಿಲುವು ನಾಗರಾಜನದು.
ಹಾಗಂತ ನಾಗರಾಜನಿಗೆ ಹೊಟ್ಟಿನ ವ್ಯಾಪಾರದ ಗುಟ್ಟೆಲ್ಲಾ ಗೊತ್ತು. ಲೆಕ್ಕಾಚಾರ ಬರುವ ಕಾರಣ ವ್ಯವಹಾರವೂ ಚೊಕ್ಕ ಹಾಗೂ ನೇರ. ಹೀಗಾಗಿ ಈಶ್ವರರಿಗೆ ಮಗನ ಸಹಾಯದಿಂದ ವ್ಯಾಪಾರ ಬಲು ಸುಲಭವಾಗಿದೆ. ಆದರೂ ಇದೊಂದು ಅನಿಶ್ಚಿತ ಬದುಕು. ಇದು ಮಗನಿಗೆ ಬೇಡ ಎಂಬುದು ಈಶ್ವರರ ಕಳಕಳಿ.
ಹೊಟ್ಟಿನಲ್ಲಿ ದುಡಿದದ್ದು–ಶುಂಠಿಯಲ್ಲಿ ಹೋಯ್ತು
ಈಶ್ವರರಿಗೆ ಊರಿನಲ್ಲಿ ಸ್ವಲ್ಪ ಜಮೀನಿದೆ. ಕೆಲವು ವರ್ಷಗಳ ಹಿಂದೆ ಶುಂಠಿಗೆ ವಿಪರೀತ ಬೆಲೆ. ತಮ್ಮ ಜಮೀನಿನಲ್ಲೂ ಶುಂಠಿ ಹಾಕಿದರು. ಸಾಗರದಲ್ಲಿರುವ ಮನೆಯ ಮೇಲೆ ಸಾಲ ತೆಗೆದು ಕೃಷಿ ಮಾಡಿದರು. ಆದರೆ ಶುಂಠಿ ಕೈಗೆ ಉರಿ, ಬಾಯಿಗೆ ಖಾರವಾಯಿತು. ಬೆಲೆಯೂ ಕುಸಿಯಿತು. ಶುಂಠಿ ಗದ್ದೆಯಲ್ಲೇ ಹಾಳಾಯಿತು. ಲಕ್ಷಾಂತರ ರೂಪಾಯಿಗಳ ನಷ್ಟ. ಈಗ ಸಾಲದ ಬಾಬ್ತು ನಾಲ್ಕು ಲಕ್ಷ ದಾಟಿಗೆ. ಮನೆ ಹರಾಜಿಗೆ ಬಂದಿದೆ. ಹೀಗೆ ಹೊಟ್ಟಿನ ವ್ಯಾಪಾರದಿಂದ ಗಳಿಸಿದ್ದೆಲ್ಲಾ ಮಣ್ಣುಪಾಲಾಗಿದೆ.
ಹಾಗಂತ ಇವರು ಧೈರ್ಯ ಕಳೆದುಕೊಂಡಿಲ್ಲ. ನನ್ನ ರಟ್ಟೆಯಲ್ಲಿ ಬಲವಿರುವವರೆಗೂ ಮನೆಯ ಹೆಂಗಸರನ್ನು ಕೆಲಸಕ್ಕೆ ಕಳುಹಿಸುವುದಿಲ್ಲ ಎನ್ನುವ ನಿಲುವು. ಹಿಂದಿನಂತೆ ವ್ಯಾಪಾರವಿಲ್ಲದಿದ್ದರೇನು? ಶ್ರಮ ವಹಿಸಿ ನಿಷ್ಠೆಯಿಂದ ದುಡಿದರೆ ಸಾಲ ತೀರಿಸುವುದು ಕಷ್ಟವಲ್ಲ ಎನ್ನುವ ಪರಿಹಾರವೂ ಅವರಲ್ಲಿದೆ.
ಈಶ್ವರರೊಂದಿಗೆ ಕೆಲಸ ಮಾಡುತ್ತಿದ್ದ ಗೌಸ್ ಮೊಯುದ್ದೀನ್ ಈಗ ಹೊಟ್ಟಿನ ವ್ಯಾಪಾರ ಬಿಟ್ಟು ಹಮಾಲಿ ಕೆಲಸ ಹಿಡಿದಿದ್ದಾರೆ. ಗೌಸ್ ಸೈಕಲ್ ಮೇಲೆ ಹೊಟ್ಟು ಹೇರಿಕೊಂಡು ನಡೆದರೆ, ಈಶ್ವರ ಕೈಗಾಡಿ ಎಳೆಯುತ್ತಾ ಜೊತೆ ಜೊತೆಯಲ್ಲಿ ಕಷ್ಟ-ಸುಖ ಹಂಚಿಕೊಳ್ಳುತ್ತಾ ದುಡಿದವರು. ಹೊಟ್ಟಿನ ವ್ಯಾಪಾರ ಕುಸಿದ ಮೇಲೆ ಗೌಸ್ ಕೆಲಸ ಬದಲಿಸಿದರು. ತಮ್ಮ ಬಳಿ ಈಗಿರುವ ಎತ್ತು ಗಾಡಿಗಳನ್ನು ಹಮಾಲಿ, ಸಾಗಾಣಿಕೆ ಮುಂತಾದವುಗಳಿಗೆ ಬಳಸುತ್ತಾರೆ.
ಈಶ್ವರರ ಬಳಿಯೂ ಎತ್ತು-ಗಾಡಿ ಇದೆ. ಆತ ಏಕೋ ಹಮಾಲಿ ಕೆಲಸ ಮಾಡಲು ಒಪ್ಪುತ್ತಿಲ್ಲ. ಹೊಟ್ಟು ವ್ಯಾಪಾರ ಬಿಡಲು ಸಿದ್ಧವಿಲ್ಲ. ಎಷ್ಟೇ ದುಡಿಮೆ ಮಾಡಿದರೂ ಗಳಿಕೆಯಿಲ್ಲ. ಹೇಗೋ ಕಷ್ಟಪಡುತ್ತಿದ್ದಾನೆ ಎನ್ನುವ ಪ್ರೀತಿಯ ಆಕ್ಷೇಪ ಗೆಳೆಯನ ಮೇಲೆ.
ಸುತ್ತಲಿನ ಅಕ್ಕಿ ವ್ಯಾಪಾರಿಗಳು, ಮಿಲ್ ಮಾಲೀಕರೂ ಸಹ ಈಶ್ವರರ ದುಡಿಮೆ, ಪ್ರಾಮಾಣಿಕತೆಯನ್ನು ಮೆಚ್ಚುತ್ತಾರೆ. ಇಲ್ಲಿ ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಸಹಕಾರಿಗಳಾಗಿರಲೇಬೇಕು. ಇದೊಂದು ಉದ್ದಿಮೆ. ಲಾಭ-ನಷ್ಟಗಳು ಸಹಜವೆನ್ನುತ್ತಾರೆ.
ಹೊಟ್ಟು ಕನಿಷ್ಠವಲ್ಲ, ವ್ಯರ್ಥ ತ್ಯಾಜ್ಯವಲ್ಲ. ಹೊಟ್ಟೆಯನ್ನು ಕಟ್ಟಿಕೊಡುವ ಮೂಲ. ಈಶ್ವರ ಸಂದೇಶ್ಕರರಂತೆ ಹೊಟ್ಟಿನಿಂದಲೇ ಬದುಕುವವರು ಸಾಕಷ್ಟಿದ್ದಾರೆ.
ಹೊಟ್ಟಿನ ವಿವಿಧ ಬಳಕೆಗಳು
-ಹೋಟೆಲ್ಗಳಲ್ಲಿ ಕಟ್ಟಿಗೆ ಬದಲು ಹೊಟ್ಟನ್ನು ಉಪಯೋಗಿಸುವ ತಂತ್ರಜ್ಞಾನ ಬಂದು ನಲವತ್ತು ವರ್ಷಗಳ ಮೇಲಾಗಿದೆ. ಈ ಒಲೆಗಳೂ ಕಟ್ಟಿಗೆ ಒಲೆಯಂತೆ ನೇರವಾಗಿ ಕಟ್ಟಿಗೆ ಕೊಡುವ ವ್ಯವಸ್ಥೆಯ ಮಾದರಿಯಲ್ಲ. ಮೇಲ್ಭಾಗದಿಂದ ತಳದವರೆಗೆ ಇಳಿಜಾರು ಮಾಡಿ ಹೊಟ್ಟು ಮೇಲಿನಿಂದ ಹಾಕುವ ರೀತಿ ಒಲೆಯನ್ನು ಕಟ್ಟಿಸುತ್ತಾರೆ. ಒಲೆಯ ಮಧ್ಯೆ ಬೀಳುತ್ತದೆ. ಇಳಿಜಾರಿನಲ್ಲಿ ತುಂಬಿದ ಹೊಟ್ಟು ಸುಟ್ಟಂತೆ ನಿಧಾನವಾಗಿ ಜಾರುತ್ತ ಕೆಳಗಿಳಿಯುತ್ತದೆ. ಕೆಲವರು ಅಸ್ತ್ರ ಒಲೆಯ ಮಾದರಿಯಲ್ಲೂ ಹೊಟ್ಟಿನ ಒಲೆ ನಿರ್ಮಿಸಿಕೊಳ್ಳುತ್ತಾರೆ.
-ಇಟ್ಟಿಗೆಗಳ ನಿರ್ಮಾಣಕ್ಕೆ ಹಾಗೂ ಇಟ್ಟಿಗೆ ಸುಡಲೂ ಸಹ ಹೊಟ್ಟನ್ನು ಬಳಸುತ್ತಾರೆ. ಇತ್ತೀಚೆಗೆ ಅತಿ ಹೆಚ್ಚು ಹೊಟ್ಟು ಇಟ್ಟಿಗೆ ಉದ್ಯಮಕ್ಕೆ ಮೀಸಲು. ಇಟ್ಟಿಗೆ ತಯಾರಿಸುವಾಗ ಮಣ್ಣಿನೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಹೊಟ್ಟನ್ನು ಬೆರೆಸುವುದರಿಂದ ಇಟ್ಟಿಗೆ ಹಗುರವಾಗುತ್ತದೆ. ಇಟ್ಟಿಗೆ ಸುಡಲು ಹೊಟ್ಟನ್ನು ಬಳಸುವುದರಿಂದ ಕಟ್ಟಿಗೆ ಖರ್ಚು ಅಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
-ಆಧುನಿಕ ಅಕ್ಕಿ ಗಿರಣಿಗಳಲ್ಲಿ, ವಿದ್ಯುತ್ಗೋಸ್ಕರ ತ್ಯಾಜ್ಯ ವಸ್ತುಗಳನ್ನು ಇಂಧನವಾಗಿಸಿ ವಿದ್ಯುತ್ ತಯಾರಿಕೆ ಮಾಡುವ ವಿಧಾನವಾದ ಗ್ಯಾಸಿಫೈಯರ್ಗಳು ಇಂದು ಪ್ರಚಲಿತ. ಈ ಗ್ಯಾಸಿಫೈಯರ್ಗಳಿಗೆ ಉರುವಲು, ಹೊಟ್ಟು. ಹೀಗಾಗಿ ಎಲ್ಲಾ ಕಡೆ ಹೊಟ್ಟಿಗೆ ಬೇಡಿಕೆ.
-ಕಬ್ಬಿನ ಗದ್ದೆಗೆ ಮಣ್ಣು ಕೊಡಲು ಗದ್ದೆಯ ಮಣ್ಣನ್ನು ಸುಡುವ ಪದ್ಧತಿ ಮಲೆನಾಡಿನಲ್ಲಿದೆ. ಹೀಗೆ ಮಣ್ಣು ಸುಡಲು ಹೊಟ್ಟಿನ ಬಳಕೆ ಮಾಡುತ್ತಾರೆ.
-ಮನೆಯಲ್ಲಿ ಪಾತ್ರೆ ತೊಳೆಯಲು, ಹಲ್ಲುಜ್ಜಲು ಸುಟ್ಟ ಹೊಟ್ಟನ್ನು ಬಳಸುವ ಪದ್ಧತಿ ಬಹಳ ಹಳೆಯದು. ಕಂಚು, ತಾಮ್ರ, ಹಿತ್ತಾಳೆಯ ಪಾತ್ರೆಗಳನ್ನು ಜಿಡ್ಡು ಮುಕ್ತವಾಗಿಸಲು ಉಮಿಕರಿ ಬೂದಿ (ಹೊಟ್ಟಿನ ಬೂದಿ) ಬಳಸುವಿಕೆ ಹಳ್ಳಿಹಳ್ಳಿಗಳಲ್ಲೂ ಇತ್ತು.
-ಕೃಷಿಯಲ್ಲೂ ಹೊಟ್ಟು, ಹೊಟ್ಟಿನ ಬೂದಿಯ ಬಳಕೆ ಇದೆ. ಟೊಮೆಟೋ ಮೆಣಸಿನಕಾಯಿ ಬೆಳೆಯಲು, ತೆಂಗಿನ ಗೊಬ್ಬರವಾಗಿಯೂ ಹೊಟ್ಟಿನ ಬೂದಿಯ ಬಳಕೆ ಇದೆ. ಹೋಟೆಲ್ಗಳಲ್ಲಿ ಸಿಗುವ ಬೂದಿಯೂ ಸಹ ಒಳ್ಳೆಯ ಬೆಲೆಗೆ ಮಾರಾಟವಾಗುತ್ತದೆ.
-ಹೆಬ್ರಿ ಬಳಿಯ ಚಾರಗ್ರಾಮದ ರಾಜೀವಶೆಟ್ಟಿಯವರು ತಮ್ಮ ಹಸುಗಳಿಗೆ ನೀರಿನೊಂದಿಗೆ ಹೊಟ್ಟನ್ನು ಸೇರಿಸಿ ಕುಡಿಯಲು ನೀಡುತ್ತಾರೆ. ಇದರಿಂದ ಅವುಗಳ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆನ್ನುವ ಅನುಭವ ಅವರದು. ಹೊಟ್ಟನ್ನು ಸೇವಿಸುವ ಜಾನುವಾರುಗಳು, ಹೊಟ್ಟಿನಿಂದ ಅನಾರೋಗ್ಯಕ್ಕೆ ಗುರಿಯಾದ ದಾಖಲೆಗಳೇನೂ ಇಲ್ಲ.
-ಗಾಜು, ಸಿಮೆಂಟ್, ಮಣ್ಣು ಕಲ್ಲುಗಳಿಂದ ತಯಾರಾಗುವ ಅಮೂಲ್ಯ ವಿಗ್ರಹಗಳನ್ನು, ವಸ್ತುಗಳನ್ನು, ಆಕೃತಿ-ಕಲಾಕೃತಿಗಳನ್ನು ಒಡೆಯದಂತೆ ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಲು ಹೊಟ್ಟು ಬಳಸುತ್ತಾರೆ.
-ಭತ್ತದ ಕಣಜಗಳಲ್ಲಿ ಹಗೇವುಗಳಲ್ಲಿ ಭತ್ತವನ್ನು ತುಂಬುವ ಮೊದಲು ಹೊಟ್ಟನ್ನು ತುಂಬುತ್ತಾರೆ. ದಪ್ಪಗೆ ಅರ್ಧ ಅಡಿ ಹೊಟ್ಟು ತುಂಬಲಾಗುತ್ತದೆ. ಕಾರಣ ಇಲಿಗಳ ಕಾಟ ತಪ್ಪಿಸುವಿಕೆ.
-ಹೊಟ್ಟನ್ನು ಸಗಣಿ, ಗೊಬ್ಬರದೊಂದಿಗೆ ಹಾಗೂ ತೋಟಕ್ಕೆ ಮುಚ್ಚಿಗೆಯಾಗಿಯೂ ಬಳಸುತ್ತಾರೆ. ಇಂದಿನ ಬೆಲೆ ಏರಿಕೆಯಿಂದಾಗಿ ಹೊಟ್ಟಿನ ಬಳಕೆ ಕಡಿಮೆಯಾಗಿದೆ.
Leave A Comment