ಹೆಣ್ಣು ಇಳಿಸಿಕೊಡುವುದು

ಮದುವೆಗೆ ಆಗಮಿಸಿದ ಸಕಲರ ಊಟವಾದ ಮೇಲೆ ಹೆಣ್ಣು ಇಳಿಸಿಕೊಡುವ ಕಾರ್ಯ ನಡೆಯುತ್ತದೆ. ಹೆಣ್ಣಿಗೆ ಒಂದು ಪಟ್ಟೆ ಸೀರೆ, ಊಟದ ಬಟ್ಟಲು, ಚಿಕ್ಕ ತಟ್ಟೆಗಳು, ಲೋಟ, ಕನ್ನಡಿ, ಬಾಚಣಿಗೆ, ಕುಂಕುಮ ಕರಡಿಗೆ, ಬಳೆಗಳನ್ನು ಬಳುವಳಿಯ ರೂಪದಲ್ಲಿ ತಾಯಿತಂದೆ ನೀಡಬೇಕು.

ಐದು ದಿನಗಳ ಮದುವೆ

ಹೆಣ್ಣು ತನ್ನ ಗಂಡನೊಂದಿಗೆ ಗಂಡನ ಮನೆಯವರೊಂದಿಗೆ ಹೊಂದಿಕೊಂಡು ಸುಖವಾಗಿ ಬಾಳಬೇಕೆಂದು ಎಲ್ಲ ಹೆಣ್ಣು ಹೆತ್ತವರ ಒಡಲಾಸೆ. ಶುಭ ಶೋಭನಗಳಲ್ಲಿ ಹೆಣ್ಣಿನ ಬಗ್ಗೆ ಇರುವ ಪ್ರೀತಿ, ಆದರಗಳು ನಿಚ್ಚಳವಾಗಿ ಇದನ್ನು ಸರಿ ಹೇಳುತ್ತದೆ. ಕೋಟೆ ಜನಾಂಗದವರು ಹಿಂದೆ ಐದು ದಿನಗಳ ಮದುವೆ ಸಮಾರಂಭವನ್ನು ಮಾಡುತ್ತಿದ್ದರು. ಮೊದಲ ನಾಲ್ಕು ದಿನಗಳ ಕಾಲ ಹೆಣ್ಣಿನ ಮನೆಯಲ್ಲಿ ವಿವಾಹವೇ ಮೊದಲಾದ ಕಾರ್ಯಕ್ರಮಗಳು. ಐದನೇ ದಿನ ಗಂಡಿನ ಮನೆಯಲ್ಲಿ ಗೃಹಪ್ರವೇಶ .

ಎರಡನೇ ದಿನ ವಿವಾಹದ ದಿನದಂತೆಯೇ ಅರಸಿನೆಣ್ಣೆ, ಕಲಶಸ್ಥಾನ (ಮೇಲ್ನೀರುಸ್ನಾನ) ಮಂಟಪದಲ್ಲಿ ಕುಳ್ಳಿರಿಸಿ ಆರತಿ, ಶೋಭಾನೆ ಹಾಡುಗಳ ಸಂಭ್ರಮ ಇದ್ದೇ ಇದೆ. ಬಾಸಿಂಗವನ್ನು ಕಲಶಸ್ನಾನದ ಅನಂತರ ಶ್ರಂಗಾರ ಮಾಡುವಾಗ ಕಟ್ಟಿದರೆ ಆರತಿಯಾದ ಮೇಲೆ ಬಿಚ್ಚುತ್ತಾರೆ. ಎರಡನೇ ದಿನ ಈ ಸಂದರ್ಭದಲ್ಲಿ ಹಿರಿಯ ಮುತ್ತೈದೆಯೊಬ್ಬಳು ವಧುವಿನ ಬಾಯಿಗೆ ಉಪ್ಪು ತುಪ್ಪ ಹಚ್ಚುವಳು. ಇದು ಬಾಳಿನಲ್ಲಿ ಸುಖ ದುಃಖಗಳೆರಡನ್ನು ಸಮವಾಗಿ ಉಣ್ಣಬೇಕೆಂಬ ಹಿತೋಪದೇಶದಂತಿದೆ. ಆಮೇಲೆ ಸೇಸೆ, ಆರತಿ ನಡೆಯುತ್ತದೆ.

ಮೂರನೇ ದಿನ ಬೆಳಿಗ್ಗೆ ವಧೂವರರು ಸ್ನಾನ ಅಲಂಕಾರ ಮುಗಿಸಿಕೊಂಡ ಇತರ ಸುಮಂಗಲೆಯರನ್ನು ಒಡಗೂಡಿ ಚಪ್ಪರಕ್ಕೆ ಬರುತ್ತಾರೆ. ಚಪ್ಪರದಲ್ಲಿ ಅಷ್ಟು ಜಾಗದಲ್ಲಿ ರಂಗೋಲಿ ಹಾಕಿರುತ್ತಾರೆ. ಆ ರಂಗೋಲಿಯ ಮೇಲೆ ಮರದ “ಮರಗಿ”ಯನ್ನು ಇಟ್ಟಿರುತ್ತಾರೆ. ಅದರೊಳಗೆ ಬೆಳ್ತಿಗೆ ಅಕ್ಕಿಯನು ಒಂದಷ್ಟು ಹಾಕಿಟ್ಟಿರುತ್ತಾರೆ. ವಧೂವರರು ಅಲ್ಲೇ ಪಕ್ಕದಲ್ಲಿ ಇಟ್ಟಿರುವ ಒನಕೆಯನ್ನು ತೆಗೆದುಕೊಂಡು ಅದನ್ನು ಕುಟ್ಟಬೇಕು. ಇದನ್ನು “ವಡೆಯಕ್ಕಿ ಮುಹೂರ್ತ” ಎನ್ನುತ್ತಾರೆ. ಆ ರಾತ್ರಿ ಮತ್ತೆ ಸೇಸೆ ಮತ್ತು ಆರತಿ ಇದೆ.

ನಾಲ್ಕನೇ ದಿನ: ಮೂರ್ನೇ ರಾತ್ರಿ ವರನು ತನ್ನ ಬಾಳಸಂಗಾತಿಯೊಡನೆ ಹತ್ತಿರದ ಬಂಧುವೊಬ್ಬರ ಮನೆಯಲ್ಲಿ ಉಳಿಯುವನು. ನಾಲ್ಕನೇ ದಿನ ಮಧ್ಯಾಹ್ನ ಹೆಣ್ಣಿನ ಕಡೆಯುವರು ಕರೆತರುವರು. ಚಪ್ಪರ ಪ್ರವೇಶ, ಅರಸಿನೆಣ್ಣೆ, ಮೇಲ್ ನೀರ್ ಸ್ನಾನ (ಕಲಶ ಸ್ನಾನ), ಸೇಸೆ, ಆರತಿ ನಡೆಯುತ್ತದೆ. ಪುರೋಹಿತರು ಬಂದು ಒಂದು ಚಿಕ್ಕ ಹೋಮವೂ ನಡೆಯುತ್ತದೆ. ಪುರೋಹಿತರು ಆಶಿರ್ವಾದಗಳೊಂದಿಗೆ ಮಂತ್ರಾಕ್ಷತೆ ತಳಿಯುವರು.

ಐದನೇ ದಿನ : ಇದು ತುಂಬ ಸಂಭ್ರಮದ ದಿನ. ಆ ದಿನಕ್ಕೆ ನೆರೆಹೊರೆ ಕೇರಿಯವರಿಗೆ ಸ್ವಜಾತಿ ಬಾಂಧವರಿಗೆಲ್ಲ ಹೇಳಿ ಮಾಡಿರುತ್ತಾರೆ. ಐದು ಮಂದಿ ಸುಮಂಗಲಿಯರು “ಬೋನಕ್ಕೆ” ನೀರು ತರಲು ಹೋಗುವರು. ವಧೂ ವರರಿಗೆ ಅರಿಸಿನ ಎಣ್ಣೆ ನಡೆದು ಮೇಲ್ ನೀರು ಸ್ನಾನವಾಗುತ್ತದೆ. ಆಮೇಲೆ “ಓಕುಳಿಯಾಟ”. ಮತ್ತೆ ವಧುವನ್ನು ಶೃಂಗಾರ ಮಾಡಿ ಧಾರೆ ಸೀರೆಯನ್ನು ಸೆರಗು ಹಾಕಿ ಉಡಿಸಿ, ಹಣೆಗೆ ಕುಂಕುಮ ಬೊಟ್ಟನ್ನು ಇಟ್ಟು ಅವಳೊಂದಿಗೆ ಮುತ್ತೈದೆಯರು ತಾಂಬೂಲ ಮೆಲ್ಲುವರು.

ಇಲ್ಲೊಂದು ವಿನೋದದ ಪ್ರಸಂಗವಿರುತ್ತದೆ. ಒಬ್ಬ ಎಳೆಯ ಹುಡುಗನಿಗೆ ಹುಡುಗಿಯ ವೇಷ ಹಾಕಿಸಿ ವಧುವಿನೊಡನೆ ಕೂರಿಸಿ ತಾವೆನ್ನಾ ಸುತ್ತುವರಿಯುವರು. ಮುತ್ತೈದೆಯರು ವರನನ್ನು ಕರೆಸಿ ವಧುವಿನ ಕೈಯನ್ನು ಹಿಡಿಯಲು ಹೇಳುವರು. ವರನು ಎಲ್ಲಾದರೂ ಹುಡುಗನ ಕೈಯನ್ನು ಹಿಡಿದರೆ ಚಪ್ಪರ ಹಾರಿ ಹೋಗುವಂತೆ ಗುಲ್ಲು ಏಳುತ್ತದೆ.

ಮಂಟಪದಲ್ಲಿ ಅಂದೂ ಹೋಮವಿದೆ. ಉಂಗುರ ಹೆಕ್ಕುವ ಆಟವನ್ನೂ ವಧೂವರರಿಗಾಗಿ ಆಡಿಸುತ್ತಾರೆ. ಆಮೇಲೆ ನಾಗಪೂಜೆ, ಕಂಕಣ ವಿಸರ್ಜನೆ ಪೂಜೆಗಳು ನಡೆಯುತ್ತವೆ. ಬಳಿಕ ಮನೆಗೆ ಬರುವುದು.

ಆರತಿ ಎಲ್ಲ ನಡೆದ ಮೇಲೆ ಭೋಜನ. ಆ ದಿನ ವಧುವು ತನ್ನ ಪತಿಯ ಬಂಧುಗಳಿಗೆ ತುಪ್ಪ, ಪಾಯಸ ಮುಂತಾದುವನ್ನು ಬಡಿಸುವಳು. ಅವಳನ್ನು ಗೌರವಿಸಲು ಅವರೆಲ್ಲ ಉಡುಗೊರೆ -ಒಸಗೆ ನೀಡುತ್ತಾರೆ.

ಕೊನೆಗೆ ವಧುವನ್ನು ವರನ ಕಡೆಯವರಿಗೆ ಒಪ್ಪಿಸುವಾಗ ವರನ ತಾಯಿ ತನ್ನ ಸೊಸೆಯು ಉಟ್ಟಿದ್ದ ಧಾರೆ ಸೀರೆಯ ಸೆರಗಿನ ತುದಿಯಲ್ಲಿ ಒಂದು ಚೌಲ ಕಟ್ಟುವಳು. ವಧುವು ತವರಿಂದ ಹೊರಡುವ ವೇಳೆಗೆ ಆಕೆಯ ತಾಯಿತು ಆ ಚೌಲವನ್ನು ಬಿಚ್ಚಿ ತೆಗೆದುಕೊಳ್ಳುವಳು.

ಇದರೊಂದಿಗೆ ಒಂದು ನಂಬಿಕೆಯೂ ಇದೆ. ವಧುವಿನ ತಾಯಿ ಹೀಗೆ ಮಾಡಲು ಕಾರಣವಿದೆಯಂತೆ. ತನ್ನ ಆ ಮಗಳು ಜನಿಸುವ ಸಮಯದಲ್ಲಿ ತಾನು ಕುಡಿದ ಕಾಳು ಜೀರಿಗೆ ಮದ್ದಿನ ಪ್ರಭಾವ ಎಂದು ಹೇಳುತ್ತಾರೆ. ವರನು ವಧುವನ್ನು ಬಳುವಳಿಯೊಂದಿಗೆ ಪರಿವಾರ ಸಮೇತ ಕರೆದೊಯ್ಯುತ್ತಾನೆ.

ಗೃಹಪ್ರವೇಶ

ಮದುಮಗಳು ತನ್ನ ಗಂಡನ ಮನೆಯನ್ನು ಪ್ರವೇಶಸುವಾಗ ಹೊಸ್ತಿಲಲ್ಲಿ ಸೇರು ತುಂಬಾ ಇರಿಸಿದ್ದ ಅಕ್ಕಯನ್ನು ತನ್ನ ಬಲಗಾಲು ಮುಂದಿಟ್ಟು ಚೆಲ್ಲುತ್ತಾ ಒಳಗೆ ಬರುತ್ತಾಳೆ. ಚೆಲ್ಲಿದ ಅಕ್ಕಿ ಸಂಪತ್ತಿನ ಸಂಕೇತ. ಪ್ರವೇಶಕ್ಕೆ ಮುನ್ನ ವರನ ತಂಗಿಯರು ಬಾಗಿಲಲ್ಲಿ ತಡೆಯುತ್ತಾರೆ.

ಮನೆಯ ನಡುಕೋಣೆಯಲ್ಲಿ ಒಂದು ಕಾಲುದೀಪ (ದೊಡ್ಡ ದೀಪ) ಉರಿಸಿ ಇಟ್ಟಿರುತ್ತಾರೆ. ಅದರ ಅಕ್ಕಪಕ್ಕ ಎರಡು ಅಕ್ಕಮುಡಿ (ಭತ್ತದ ಹುಲ್ಲಿನಲ್ಲೇ ಅಕ್ಕಯನ್ನು ಕಟ್ಟಿ ಇಡುವ ವಿಶಿಷ್ಟ ರೀತಿ)ಯ ಮೇಲೆ ವರನ ತಂದೆ ತಾಯಿ ಕುಳಿತಿರುತ್ತಾರೆ. ವರನು ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುತ್ತಾನೆ. ವಧುವು ತನ್ನ ಅತ್ತೆಯ ತೊಡೆಯನ್ನೇರುತ್ತಾಳೆ. ಮನೆಯಲ್ಲಿನ ಧಾನ್ಯಲಕ್ಷ್ಮಿ ಮನೆಗೆ ಬಂದ ಶ್ರೀಲಕ್ಷ್ಮಿಯರು ಒಂದಾದರು ಎಂಬುದು ಇಲ್ಲಿನ ನಂಬಿಕೆ.

ವಧುವಿನ ಬಾಯಗೆ ಸಕ್ಕರೆ ಹಾಕಿ “ನಿನ್ನ ಮಾತು ಈ ಮನೆಯಲ್ಲಿ ಇಲ್ಲರಿಗೂ ಸಕ್ಕರೆಯಂತಾಗಲಿ” ಎಂದು ಅತ್ತೆ ಹೇಳುತ್ತಾಳೆ. ಬಳಿಕ ಅಲ್ಲೇ ಕುಳ್ಳಿರಿಸಿ ವಧುವಿಗೆ ನೂತನವಾಗಿ ನಾಮಕರಣ ಮಾಡುತ್ತಾರೆ. ತವರಿನ ಹೆಸರಿನ ಬದಲಿಗೆ ವ್ಯವಹಾರಕ್ಕೆ ಪ್ರತ್ಯೇಕ ಹೆಸರಿಟ್ಟುಬಿಡುತ್ತಾರೆ. ಆಮೇಲೆ ಕುದೇವರ ಪೂಜೆ, ತುಳಸಿ ಪೂಜೆಗಳನ್ನು ಮಾಡುತ್ತಾರೆ. ವಧೂವರರು ಧರಿಸಿದ್ದ ಬಾಸಿಂಗಗಳನ್ನು ಬಿಚ್ಚಿ ಮನೆಯ ಕೊಗಳಿಗೆ (ಮಾಡಿನ ಜಂತಿ) ಅಥವಾ ಪಕ್ಕಾಸಿಗೆ ಕಟ್ಟುತ್ತಾರೆ.

ಒಂದೆರಡು ದಿನ ಬಿಟ್ಟು ವಧೂ ವರರನ್ನು ತವರು ಮನೆಗೆ ಕರೆತರುತ್ತಾರೆ. ಅಲ್ಲಿ ಅರಿಸಿನೆಣ್ಣೆ ಆಗಬೇಕು. ಹಿಂದಿನಂತೆಯೇ “ಅಂಬು”ವಿನಿಂದ ಅದನ್ನು ಹದದಿಂದ ಹಣೆಯವರೆಗೆ ಮುಟ್ಟಿಸುಸುವರು. ಅನಂತರ ವಧೂ ವರರು ಎಣ್ಣೆಯನ್ನು ಪರಸ್ಪರ ತಲೆಗೆ ಹಚ್ಚಿಕೊಳ್ಳುವರು. ಸ್ನಾನದ ಸಂಕೇತವಾಗಿ ವಧುವು ವರನ ತಲೆಗೆ ಐದು ಕಲಶ ನೀರನ್ನು ಹೊಯ್ಯುವಳು.

ಸ್ನಾನದ ಅನಂತರದಲ್ಲಿ ಅಲಂಕರಿಸಿಕೊಂಡು ಕುಳ್ಳರಿಸಿ ಸಕಲ ಉಪಚಾರಗಳನ್ನೂ ಪಡೆಯುತ್ತಾರೆ. ಆ ದಿನ ಅಥವಾ ಮರುದಿನ ವಧೂ ವರರ ಸಂಮಾನ ಕಾರ್ಯವಿರುತ್ತದೆ. ಇದಕ್ಕೆ ವರನ ತಂದೆತಾಯಿಯರನ್ನು ಪ್ರತ್ಯೇಕವಾಗಿ ಹೇಳಿಕೆ ಮಾಡಿ ಬರಿಸಬೇಕು. ಹತ್ತಿರದ ಬಂಧುಗಳನ್ನು ಕರೆತನ್ನಿ ಎಂದು ಆಹ್ವಾನಿಸಬೇಕು.

ಇದೇ ರೀತಿ “ಮರ್ಯಾದೆ” ಎಂದು ಸೀತೆ ಪಂಚೆ ಉಡುಗೊರೆಯಾಗಿ ವಧುವಿನ ತಾಯಿ ತಂದೆಗೆ ಕೊಡಬೇಕು. ನೀರು ಹೂವು ಕೊಟ್ಟು ಅವರನ್ನು ಸ್ವಾಗತಿಸಿ ಉಪಚರಿಸಬೇಕು. ರಾತ್ರಿಯ ಊಟದ ಸಮಯದಲ್ಲಿ ವಧು “ವೀಳ್ಯಸೀರೆ”ಯನ್ನು ಉಟ್ಟು ತನ್ನ ಗಂಡನಿಗೆ ಬಡಿಸಬೇಕು. ಗಂಡ ಉಂಡ ಮೇಲೆ ಆ ಎಲೆಯಲ್ಲಿ ತಾನು ಊಟ ಮಾಡಬೇಕು. ಇದು ಆ ದಿನಕ್ಕೆ ಸೀಮಿತ. “ವೀಳ್ಯಸೀರೆ” ಎಂದರೆ ಹೋಮಕ್ಕೆ ಅಗ್ನಿ ತಂದುದಕ್ಕೆ ಮರ್ಯಾದೆಯಾಗಿ ವರನ ಕಡೆಯಿಂದ ಅವಳಿಗೆ ದೊರೆತ ಸೀರೆ.

ಚಪ್ಪರ ಸಡಿಲಿಸುವುದು

ಚಪ್ಪರ ಮುಹೂರ್ತಕ್ಕೆ ನೆಟ್ಟು ಹಾಲೆ ಮರದ ಕೊಂಬೆಯನ್ನು ಅದುವರೆಗೂ ಯಾರೂ ಮುಟ್ಟುವುದಿಲ್ಲ. ಇದೀಗ ಅದನ್ನು ಮೂರು ಬಾರಿ ಅಲ್ಲಾಡಿಸಿ ಕೆಳಗೆ ಅಡ್ಡ ಹಾಕುವುದು. ಅನಂತರ ಚಪ್ಪರವನ್ನು ತೆಗೆಯುವುದು ರೂಢಿ ಇಲ್ಲ. ಮದುವೆಯ ಚಪ್ಪರದ ಬಗ್ಗೆ ವಿಶೇಷ ಕಾಳಜಿ ಗೋಚರಿಸುತ್ತದೆ.

ಮದುವೆಯ ಸಕಲ ಧಾರ್ಮಿಕ ಕಾರ್ಯಗಳಲ್ಲಿ ಸಿಂಹಪಾಲು ಮಹಿಳೆಯರದೇ. ಅಡುಗೆ ಮತ್ತು ಬಡಿಸುವ ಕಾರ್ಯಗಳು ಗಂಡಸರದು. ನಿತ್ಯ ಜೀವನಕ್ಕಿಂತ ವ್ಯತ್ಯಾಸ ಇದು. ಹೆಣ್ಣಿಗೆ ಸಾಮಾಜಿಕವಾಗಿ ನೀಡಿದ ಪ್ರಾಶಸ್ತ್ಯ ಇಲ್ಲಿ ಗೋಚರಿಸುತ್ತದೆ.

ಹೆಣ್ಣಿನ ಬದುಕಿಗೆ ಭದ್ರತೆ

ಹೆಣ್ಣು ಇಳಿಸಿಕೊಡುವ ಕಾರ್ಯ ಮಾಡುವಾಗ ಹತ್ತು ಜನ ಹಿರಿಯರ ಕಿರಿಯ ಬಾಂಧವರ ಸಮ್ಮುಖದಲ್ಲಿ ಕೇಳಿಕೊಳ್ಳುತ್ತಾರೆ. ವರನ ತಂದೆ ತಾಯಿ ಬಂಧು ಎದುರು ನಿಂತು, “ನಮ್ಮ ಹುಡುಗಿ ಮುಗ್ಧೆ. ಅವಳಿಗೆ ಏನೂ ತಿಳಿಯದು. ಭಾರ ನಿಮ್ಮದು. ಮತ್ತೆ ಏನಾದರೂ ಹೆಚ್ಚು ಕಡಿಮೆ ಆದರೆ ಕೇಳುವ ಹಕ್ಕು ಹತ್ತು ಜನಕ್ಕೆ ಇದೆ” ಎಂದು ಹೇಳಿ ಹೆಣ್ಣಿನ ಕೈಯನ್ನು ಗಂಡನ ಕೈಯಲ್ಲಿಡುತ್ತಾರೆ. ಎರಡೂ ಕಡೆಯವರು ಒಪ್ಪಿಗೆ ಸೂಚನೆ ಎಂದು ಮುಟ್ಟುತ್ತಾರೆ.

ಒಂದು ಪುಸ್ತಕದಲ್ಲಿ ವಧೂವರರ ಹೆಸರು, ಅವರವರ ತಾಯಿ ತಂದೆಯ ಹೆಸರುಗಳನ್ನು ಬರೆದು ವಿವಾಹ ದಾಖಲೆಪತ್ರ ತಯಾರಿಸುತ್ತಾರೆ. ಭಾಗವಹಿಸಿದ ಇಬ್ಬರು ಗಣ್ಯಬಂಧುಗಳು ಸಾಕ್ಷಿಗಳೆಂದು ಸಹಿ ಮಾಡುತ್ತಾರೆ. ಹುಡುಗ ಹುಡುಗಿ ತಾವೂ ಸಹಿ ಮಾಡಿ ವಿವಾಹ ಬಂಧನವನ್ನು ಒಪ್ಪಿಕೊಳ್ಳುತ್ತಾರೆ.

ಋಗ್ವೇದಿಗಳಾದ ಕೋಟೆಯವರು ನಡೆಸುವ ವಿವಾಹದ ವಿಧಿವಿಧಾನಗಳು ಋಗ್ವೇದದ ಅಶ್ವಲಾಯನ ಸೂತ್ರಗಳಿಗೆ ಅನುಗುಣವಾಗಿ ನಡೆಯುತ್ತವೆ. ವಿವಾಹದ ಐದಾರು ದಿನಗಳ ಅವಧಿ ಈಚೆಗೆ ಸಂಕೋಚವಾಗಿ ಐದಾರು ಗಂಟೆಗಳಲ್ಲಿ ಕಲ್ಯಾಣಮಂಟಪಗಳಲ್ಲಿ ನಡೆದು ಹೋಗುತ್ತದೆ.

ಮದುವೆಯ ಸಂದರ್ಭದಲ್ಲಿ ಹೆಂಗಸರಷ್ಟು ಓಡಾಟ ಗಂಡಸಿಗಿಲ್ಲ. ಸೇಸೆ ಹಾಕುವ ಸಂಭ್ರಮಕ್ಕೆ ತುಂಬಾ ಮಹತ್ವವಿದೆ. ಅಲ್ಲಿ ಅವರು “ಕಂಚಿನ ಹಣ” ಎಂದು ಎರಡು ರೂಪಾಯಿಯನ್ನು ವಧೂವರರಿಗೆ ಕೊಡುವ ಕಾರ್ಯಕ್ರಮವಿತ್ತು. ಚಪ್ಪರದ ಒಂದು ಭಾಗದಲ್ಲಿ ಹೆಂಗಸರಿಗೆ ಇದನ್ನೆಲ್ಲಾ ನೀಡಲು ಗಂಡಸರಿಬ್ಬರು ಮುಂದೆ ಕುಳಿತಿರಬೇಕು. ಹೆಂಗಸರು ಸರದಿಯ ಸಾಲಲ್ಲಿ ಬಂದು ವೀಳ್ಯ ಅಡಕೆ ಇತ್ಯಾದಿಗಳನ್ನು ಪಡೆದು ಮಂಟಪದ ಕಡೆಗೆ ಹೋಗುತ್ತಾರೆ.

ಮದುವೆಯಾಗಿ ಗಂಡನ ಮನೆಗೆ ಬರುವ ಹೆಣ್ಣು ತನ್ನ ತಾಯಿ ಕಟ್ಟಿಕೊಟ್ಟ ಮಡ್ಲಕ್ಕಿಯನ್ನು ತಂದಿರುತ್ತಾಳೆ. ಇದು ಇಲ್ಲಿಗೇ ಮುಕ್ತಾಯವಾಗದು. ಮುಂದಕ್ಕೂ ಅದು ತವರುಮನೆಯ ಬಾಂಧವ್ಯದ ಸಂಕೇತವಾಗಿ ಸೀಮಂತದ ಸಂದರ್ಭದಲ್ಲಿ ಮತ್ತೆ ಆಚರಣೆಯಲ್ಲಿ ತೆರೆದುಕೊಳ್ಳುತ್ತದೆ.

ಈ ಜನಾಂಗದವರು “ತಾಳಿ” ಎಂಬ ಆಭರಣವನ್ನು ಧರಿಸುವುದಿಲ್ಲ. ಬದಲಾಗಿ ಕರಿಮಣಿ ಸರ ಅದರಲ್ಲಿ ಎರಡು ಹವಳ, ಎರಡು ಬಂಗಾರದ ಗುಂಡುಗಳಿರುತ್ತವೆ. “ಅಡ್ಡೊರ್ಲು” ಎಂಬ ಶಾಲು ಆಕೆ ಬದುಕಿರುವವರೆಗೂ ಮುತ್ತೈದೆತನದ ಲಾಂಛನವಾಗಿ ಸರ್ವ ಶುಭ ಶೋಭನಗಳಲ್ಲಿ ಧರಿಸುವಂತಹ ವಸ್ತ್ರವಾಗಿದೆ. ಕೆಲವು ಸಮಾರಂಭಗಳಲ್ಲಿ ಹೆಂಗಸರು ಇದನ್ನು ಧರಿಸದೇ ಹೋಗುವಾಗ, ಕಾರ್ಯಕ್ರಮದ ಅಂಗಗಳಲ್ಲಿ ಭಾಗವಹಿಸುವಾಗ ಹಾಕಿಕೊಂಡು ಮರಳಿ ಕೊಟ್ಟು ಬಿಡಬೇಕು. ತಮ್ಮಲ್ಲಿನ “ಅಡ್ಡೊರ್ಲು” ಹರಿದು ಹಾಳಾಗಿದ್ದರೆ  ಇನ್ನೊಬ್ಬರ “ಅಡ್ಡೊರ್ಲು”ನ್ನು ಎರವಲು ತೆಗೆದುಕೊಳ್ಳುವುದು ಉಂಟು.

ಸೀಮಂತ

ವಿವಾಹ ನಡೆದ ಅನಂತರದ ಮುಖ್ಯ ಕಾರ್ಯಕ್ರಮವೆಂದರೆ ಸೀಮಂತ. ಇಲ್ಲೂ ಮಹಿಳೆಯರದೇ ಅದ ಹೊಣೆಯಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. “ಶೋಭನ ಪ್ರಸ್ತ” ಇತ್ಯಾದಿ “ಗರ್ಭಾಧಾನ” ಸಂಸ್ಕಾರಕ್ಕೆ ಹೆಚ್ಚು ಗಮನ ನೀಡಿದಂತೆ ಕಾಣುವುದಿಲ್ಲ.

ಸಾಮಾನ್ಯವಾಗಿ ೭ನೇ ಅಥವಾ ೯ನೇ ತಿಂಗಳಿನಲ್ಲಿ ಸೀಮಂತ ತಿಂಗಳಿನಲ್ಲಿ “ಸೀಮಂತ” ಕಾರ್ಯಕ್ರಮ ನಡೆಯುತ್ತದೆ. ಇದು ನಡೆಯುವುದು ಹೆಣ್ಣಿನ ಗಂಡಿನ ಮನೆಯಲ್ಲಿ. ಇದಕ್ಕೆ ಮನೆ ಹೇಳಿಕೆ ಮಾಡುವವರು ಹೆಂಗಸರು, ಒಬ್ಬ ಚಿಕ್ಕ ಹುಡುಗನನ್ನು ಜೊತೆಗೆ ಕರೆದುಕೊಳ್ಳುತ್ತಾರೆ. ಪ್ರತಿ ಬಂಧುಮಿತ್ರರ ಮನೆಗೆ ಹೋಗಿ ಹೂವು ಕುಂಕುಮ ಇಟ್ಟು ಹೇಳಿಕೆಯನ್ನು ಹೆಂಗಸರಲ್ಲಿಯೇ ಹೇಳುತ್ತಾರೆ. ಆ ಮನೆಯ ಗೃಹಿಣಿ ಇವರು ಹೊರಡುವಾಗ ಹೂವು ಕುಂಕುಮ ಕೊಟ್ಟು ಬೀಳ್ಕೊಡುವುದು ಪದ್ಧತಿ.

ಸೀಮಂತಕ್ಕೆ ಹೋಗುವಾಗ ತವರಿನಿಂದ ೭ನೆಯ ತಿಂಗಳನಲ್ಲಿ ಸೀಮಂತ ನಡೆಯುವ ಪಕ್ಷದಲ್ಲಿ ೭ ಬಗೆಯ ಹೂವು, ೯ನೆಯ ತಿಂಗಳಿನಲ್ಲಾದರೆ ೯ ಬಗೆಯ ಹೂವುಗಳನ್ನು ತೆಗೆದುಕೊಂಡು ಹೋಗಬೇಕು. ಈ ಹೂವುಗಳಲ್ಲಿ “ಸಿಂಗಾರ” (ಹಿಂಗಾರ-ಅಡಿಕೆ ಮರದ ಹೂವು) ಇರಲೇಬೇಕು.

ಮುಹೂರ್ತಕ್ಕಿಂತ ಸಾಕಷ್ಟು ಮುಂಚಿತವಾಗಿ ಮಗಳ ಮನೆಯನ್ನು ತವರಿನವರು ತಲುಪಬೇಕು. ಅಲ್ಲಿ ಸ್ವಾಗತ ಮಾಡುತ್ತಾರೆ. ತಾವು ತಂದಿರುವ ಹೂವುಗಳನ್ನು ಹರಿವಾಣಗಳಲ್ಲಿ ಇಟ್ಟು ಆದ ಮೇಲೆ ಯಥೋಚಿತ ಸತ್ಕಾರಗಳು ನಡೆಯುತ್ತವೆ. ಮುಖ್ಯ ಕಾರ್ಯಕ್ರಮದ ಅಂಗವಾಗಿ ದೇವಕಾರ್ಯ (ಮುಡಿಪು ಪೂಜೆ) ಅಥವಾ ಸತ್ಯನಾರಾಯಣ ಪೂಜೆಗಳನ್ನು ಮಾಡಿಸುತ್ತಾರೆ. ಅದೇ ರೀತಿ ಮುತ್ತೈದೆಯರು ಸೇರಿ ಗರ್ಭಿಣಿಯಿಂದ “ಗುಂಡು ತಾಳಿ ಪೂಜೆ”ಯನ್ನು ಮಾಡಿಸುತ್ತಾರೆ.

ಪಿತೃಗಳಿಗೆ (ಗತಿಸಿ ಹೋದವರು) ಆ ದಿನ ಎಲೆಯಲ್ಲಿ ಅನ್ನಾಹಾರ ಅಥವಾ ಅರಳು ಬೆಲ್ಲ ಬಾಳೆಹಣ್ಣು ಬಡಿಸುವ ಪದ್ಧತಿಯೂ ಉಂಟು. ಅಲ್ಲಿ ಗರ್ಭಿಣಿ ತನ್ನ ಧಾರೆ ಸೀರೆಯನ್ನು ಇರಿಸಿ ಕೈಮುಗಿದು ಅಭಯವನ್ನು ಬೇಡಬೇಕು.

ಗರ್ಭಿಣಿಯನ್ನು “ಅಡ್ಡೊರ್ಲು” ಹಾಕಿಸಿ ಒಂದು ಮಣೆಯಲ್ಲಿ ಕುಳ್ಳರಿಸುತ್ತಾರೆ. ಗಂಡನ ತಾಯಿ ಆಕೆಯ ಸೀಮಂತದ ಸೀರೆ ರವಿಕೆಯನ್ನು ಉಡುಗೊರೆಯಾಗಿ ಕೊಡುತ್ತಾರೆ. ಆಕೆಯ ತಲೆಗೆ ಹೆಣ್ಣಿನ ಅತ್ತೆ ಎಣ್ಣೆ ಹಚ್ಚುತ್ತಾಳೆ. ಆಮೇಲೆ ಸೇಸೆ ಹಾಕುತ್ತಾಳೆ.

ಗರ್ಭಿಣಿಗೆ ಹೆರಳು ತುಂಬುವ, ಹೂವು ಮುಡಿಸುವ ಕಾರ್ಯ ಆಕೆಯ ತಾಯಿಯ ಕಡೆಯಿಂದ ಬಂದ ಮುತ್ತೈದೆಯರು ಮಾಡಬೇಕು. ಎಲ್ಲಾ ಬಗೆಯ ಅಲಂಕರಣ ಸಾಮಗ್ರಿಗಳನ್ನು ತವರಿಗೆ ಕಡೆಯವರು ತರುವುದು ರೂಢಿ. ಅವರು ಮಡ್ಲಕ್ಕಿಯನ್ನು ತುಂಬಿ, ಒಂದು ಮದ್ದಿನ ಕಟ್ಟನ್ನು ಇಡುತ್ತಾನೆ. ಮದ್ದಿನ ಕಟ್ಟಿನಲ್ಲಿ ಕಾಳಜೀರಿಗೆ, ಓಮ, ಕಾಳುಮೆಣಸು ಇತ್ಯಾದಿ ಇರುತ್ತದೆ. ಇವುಗಳನ್ನೆಲ್ಲ ಒಂದು ಬಿಳಿ ಬಟ್ಟೆ ತುಂಡಿನಲ್ಲಿ ಕಟ್ಟಿ ಮಡಿಲಲ್ಲಿ ಇರಿಸುತ್ತಾರೆ. ಜೊತೆಗೆ ಒಂದೂಕಾಲು ರೂಪಾಯಿ  ಕೊಡುತ್ತಾರೆ. ಈಗ ಸಾಮರ್ಥ್ಯಕ್ಕೆ ಹೊಂದಿ ಹಣವನ್ನು ಹೆಚ್ಚು ಕೊಡುವವರೂ ಇದ್ದಾರೆ.

ಹತ್ತು ಜನ ಹಿರಿಯರ ಆಶೀರ್ವಾದವನ್ನು ಗರ್ಭಿಣಿ ಪಡೆಯುತ್ತಾಳೆ. ಆಕೆ ಊಟ ಮಾಡುವಾಗ ಐದು ಮುತ್ತೈದೆಯರು ಜೊತೆಗೆ ಕುಳಿತು ಊಟ ಮಾಡಬೇಕು. ಹುಡುಗಿಯ ಅಕ್ಕ, ತಂಗಿ, ಚಿಕ್ಕಮ್ಮ, ದೊಡ್ಡಮ್ಮ ಇವರೆಲ್ಲ ಸೀರೆಯನ್ನೇ ಉಡುಗೊರೆಯಾಗಿ ಕೊಡುವುದು ಪದ್ಧತಿ.

ನಿಶ್ಚಯಿಸಿದ ಶುಭ ಮುಹೂರ್ತದಲ್ಲಿ ಗಂಡನ ಮನೆಯಿಂದ ಗರ್ಭಣಿಯನ್ನು ಕಳುಹಿಸಿಕೊಡಬೇಕು. ಹೊರಡುವಾಗ ಗರ್ಭಿಣಿಗೆ “ಹಿಟ್ಟು ಬಡಿಸುವುದು” ಎಂಬ ಕ್ರಮವಿದೆ. ಏಳು ಬಗೆಯ ತಿಂಡಿಗಳನ್ನು ಮಾಡುತ್ತಾರೆ. ಕಡ್ಳೆಕಾಳು, ಹೆಸರು ಕಾಳು, ಮೊಟ್ಟಿಪಲ್ಯ, ಬೆಳ್ತಿಗೆ ಅನ್ನ ಇತ್ಯಾದಿಗಳನ್ನೆಲ್ಲಾ ಆಕೆಗೆ ಎಲೆಯಲ್ಲಿ ಬಡಿಸುತ್ತಾರೆ. ಇದು ಮುಹೂರ್ತ ಕಾಲದಲ್ಲೇ ಆಗಬೇಕು. ಅದನ್ನು ತಿನ್ನುವುದಿಲ್ಲ. ಆ ತಿಂಡಿಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕ ಮಕ್ಕಳಿಂದ ಹೆಕ್ಕಿಸುತ್ತಾರೆ. ಅದರ ಸಂಖ್ಯೆಗನುಗುಣವಾಗಿ ಹುಟ್ಟಲಿರುವ ಮಗು ಗಂಡೋ, ಹೆಣ್ಣೋ ಎಂದು ಲೆಕ್ಕ ಹಾಕುತ್ತಾರೆ. ಆ ತಿಂಡಿಗಳನ್ನು ಅಲ್ಲಿ ಸೇರಿದವರಿಗೆಲ್ಲ ಹಂಚಿಬಿಡುತ್ತಾರೆ.

ಗರ್ಭಿಣಿಯನ್ನು ಕಳಿಸಿಕೊಡುವಾಗ ೭ ಬಗೆಯ ತಿಂಡಿಗಳನ್ನು ಬೇರೆ ಬೇರೆ ಡಬ್ಬಗಳಲ್ಲಿ ತುಂಬಿ ಕೊಡಬೇಕು.

ಇನ್ನು ತವರುಮನೆಯಲ್ಲಿ ಆರನೆಯ ತಿಂಗಳಲ್ಲಿ ಇನ್ನೊಂದು ಸಲ ಸೀಮಂತದ ಕಟ್ಟಳೆ ಇದೆ. ಆದರೆ ಅದನ್ನು ಸೀಮತವೆಂದು ಹೆಸರಿಸದೆ “ಹಿಟ್ಟು ಬಡಿಸುವುದು” ಎಂದು ಹೇಳುವುದು ವಾಡಿಕೆ. ಹಿಟ್ಟು ಬಡಿಸುವ ಕಾರ್ಯಕ್ರಮಕ್ಕೆ ಕುಟುಂಬದವರನ್ನು ನೆರೆಹೊರೆ ಮಿತ್ರರನ್ನು ಬರಹೇಳುತ್ತಾರೆ.

ಗಂಡನ ಮನೆಯವರಿಗೆ ಹೇಳಿಕೆಯನ್ನು ಹಿಂದಿನಂತೆ ಮಾಡಿಬರಬೇಕು. ಒಬ್ಬಾಕೆ ಹೆಂಗಸು, ಒಬ್ಬ ಹುಡುಗ ಜೊತೆಯಾಗಿ ಹೋಗಬೇಕು. ಒಂದು ಡಬ್ಬಿಯಲ್ಲಿ ತಿಂಡಿಗಳನ್ನು ತುಂಬಿಸಿ, ಹೆಚ್ಚಾಗಿ ಉಳಿದ ತಿಂಡಿಯನ್ನು ಇನ್ನೊಂದು ಚೀಲದಲ್ಲಿ ತುಂಬಿಸಿಕೊಂಡೊಯ್ಯಬೇಕು. ಒಟ್ಟು ಎರಡು ಪೊಟ್ಟಣ ಇರಬೇಕು. ಸಮೃದ್ಧಿ ಸಂತೋಷದ ಸೂಚನೆ ಇದು. ಹೇಳಿಕೆ ಮಾಡುವವರು ಮುತ್ತೈದೆಯರಾಗಿರಬೇಕು.

ಹೇಳಿಕೆ ಸ್ವೀಕರಿಸಿದ ಗಂಡನ ಮನೆಯವರು ಒಂಬತ್ತು ಬಗೆಯ ತಿಂಡಿಗಳನ್ನು ತಯಾರಿಸಿಕೊಂಡು “ಹಿಟ್ಟು ಇಕ್ಕುವ” ದಿನ ಬರುತ್ತಾರೆ. ಗರ್ಭಿಣಿಗೆ ಸೀರೆ ಉಡುಗೊರೆ ಮಾಡುತ್ತಾರೆ. ವಿಶೇಷ ಧಾರ್ಮಿಕ ಕಾರ್ಯಗಳಿಲ್ಲ. ಪಾಯಸದ ಊಟ ಇರುತ್ತದೆ.

ಅನಂತರ ಕೆಲವು ದಿನಗಳಲ್ಲಿ ಗಂಡನ ಕಡೆಯಿಂದ ಗರ್ಭಿಣಿಗೆ ಒಂದು ಬಗೆಯ ತಿಂಡಿ ತಂದು ಕೊಡುವ ವಾಡಿಕೆ ಇದೆ. ಅವರು ಮುಂಚಿತವಾಗಿ ಇಂತಹ ದಿನವೇ ಬರುತ್ತೇವೆಂದು ತಿಳಿಸಬೇಕು. ತವರು ಮನೆಯ ಗರ್ಭಿಣಿ ತನ್ನ ಬಯಕೆಗಳನ್ನೆಲ್ಲ ತೀರಿಸಿಕೊಂಡು (ಯಥಾಸಾಧ್ಯ) ಸುಖವಾಗಿ ಇರಬೇಕೆಂಬುದು ಇದರ ಹಿಂದಿನ ಇಂಗಿತ.

ಈ ಜನಾಂಗದ ಸಾಹಿತ್ಯ ಮತ್ತು ಮಹಿಳೆ

ಕೋಟೆ ಜನಾಂಗದವರ ಹಾಡುಹಸೆಗಳು ನೂರಾರು. ಇಂದಿಗೂ ಕಂಠಪಾಠ ಮಾಡಿಕೊಂಡು ಹಾಡಬಲ್ಲವರಿದ್ದಾರೆ.

ಹೆಣ್ಣು ಇಳಿಸಿ ಕೊಡುವ ಹಾಡು

ಜೋಕೆ ಪೋಗಮ್ಮಾ ಮಗಳೇ|
ಶ್ರೀರಾಮನ ಕೂಡಿಕೊಂಡಿಗಳೇ | ಜೋಕೆ ಪೋಗಮ್ಮಾ ಮಗಳೇ ||
ಕಾಕುತನವ ಮಾಡಿ ಶೋಕ ಕಷ್ಟಕೆ ನೀನು
ಹಾಕದಿರೆಲೆ ಜಾನಕಿ| ಜೋಕೆ ಪೋಗಮ್ಮಾ ಮಗಳೇ ||೧||
ಮಾತ್ತೆಯರ ಧರ್ಮವು ಮೀರಲು ಬೇಡಾ
ಯಾವಾಗಲೂ ನೀನಮ್ಮಾ ಜೋಕೆ ಪೋಗಮ್ಮಾ ಮಗಳೇ ||೨||
ಭಾವ ಮೈದುನರೊಳು ಬಲುನಿಷ್ಠುರವು ಬೇಡ
ಭಾವಕಿ ಬಾಳ್ವೆ ನೀನು | ಜೋಕೆ ಪೋಗಮ್ಮಾ ಮಗಳೇ ||೩||
ಗಂಡನಿಗೆ ದುರಾಡದೆ ಮೇಲ್ ನೀನವ್ವ |
ಉಂಡೇಳ್ವ ಮೊದಲುಣ್ಣದೆ | ಜೋಕೆ ಪೋಗಮ್ಮಾ ಮಗಳೇ ||೪||
ಹಿಂಡು ಬಳಗದೊಳು ಪುಂಡು ಪಡಿಸದೆ
ಕೊಂಡು ಚಾಡಿಯ ಪೇಳದೆ | ಜೋಕೆ ಪೋಗಮ್ಮಾ ಮಗಳೇ ||೫||
ಗುರುಗಳಾಜ್ಞೆಯ ಮೀರದೆ ಮನಸಿನಲ್ಲಿ
ಗರುವ ಮತ್ಸರ ತಾಳದೆ | ಜೋಕೆ ಪೋಗಮ್ಮಾ ಮಗಳೇ ||೬||
ನೆರೆ ಧರ್ಮದೊಳು ಕುಂದು ಕೊರತೆಗಳೆಣಿಸದೆ
ವರನ ಸೇವೆಗೆ ಒದಗು | ಜೋಕೆ ಪೋಗಮ್ಮಾ ಮಗಳೇ ||೭||
ಧನಧಾನ್ಯ ಬಹುಕನಕ ವಸ್ತು ಗೋವುದಳಾನಂದ ತಿಲಕ
ವನಿತೆ ಶ್ರೀಪತಿ ಶ್ರೀರಾಮಚಂದ್ರಗೇ ಹೆಣ್ಣನೊಪ್ಪಿಸಿ ಕೊಟ್ಟೆವು | ಜೋಕೆ ಪೋಗಮ್ಮ ಮಗಳೇ ||೮||
ಅಣ್ಣ ನಿನ್ನ ಸೊಸೆಗೆ ಬುದ್ಧಿ ಹೇಳಿ
ಚೆನ್ನಾಗಿ ಸಲಹೊಮ್ಮೆಗೆ
ಸಣ್ಣ ಪ್ರಾಯದೀಕೆಯ ಎತ್ತಿ ಒಪ್ಪಿಸಿದೆವು
ಇನ್ನು ಬಾರದು ನಮಗೆ | ಜೋಕೆ ಪೋಗಮ್ಮ ಮಗಳೇ ||

ಮಗಳನ್ನು ವರನಿಗೆ ಒಪ್ಪಿಸಿಕೊಡುವಾಗ ಹೆಂಗಸು ಹಾಡುವ ಹಾಡಿದು. ವಧುವಿನ  ತಾಯಿ ಇದನ್ನು ಹೇಳುವಂತಿದೆ. ಜಾನಕೀ ಕಲ್ಯಾಣದ ಸಂದರ್ಭದ ವರ್ಣನೆ ಇಲ್ಲಿ ಬಂದಿದೆ.

ಹೆಣ್ಣು ತನ್ನ ಗಂಡನ ಮನೆಯಲ್ಲಿ ಅತ್ತೆ ಮಾವಂದಿರೊಡನೆ, ಭಾವ ಮೈದುನರೊಡನೆ ನಡೆದುಕೊಳ್ಳಬೇಕಾದ ರೀತಿ ನೀತಿಗಳ ಬೋಧನೆ ಇಲ್ಲಿ ಅಡಕಗೊಂಡಿದೆ. ಗಂಡನಿಗೆ ಅನುಕೂಲವಾಗಿರಬೇಕು. ಅವನ ಮಾತುಗಳೀಗೆ ಪ್ರತಿಕೂಳವಾಗಿ ವರ್ತಿಸಬಾರದು.  ಅವನ ವಿರುದ್ಧ ಮಾತನಾಡದೆ ನಿತ್ಯದಲ್ಲೂ ವಿಧೇಯತೆಯನ್ನು ತೋರಬೇಕು. ಪ್ರತಿಯೊಂದರಲ್ಲೂ ಅವನನ್ನು ದಾಟಿ ಹೋಗಬಾರದು. ಅವನು ಉಂಡೆದ್ದ ಮೇಲೆ ಅವಳು ಉಣ್ಣಬೇಕು. ಬಂಧು-ಬಳಗದವರೊಡನೆಯೂ ಸರಸ, ಸಜ್ಜನಿಕೆ ಬೇಕು.  ಚಾಡಿ ತಂಟೆ ತಕರಾರುಗಳು ಬೇಡ. ಗುರುಗಳಾಜ್ಞೆಯನ್ನು  ಮೀರಬಾರದು.  ಕುಂದಿಲ್ಲದೆ ಗಂಡನ ಸೇವೆಯನ್ನು ಮಾಡಬೇಕು. ಬಳುವಳಿಯಾಗಿ ಧನಧಾನ್ಯ ಬಹುಕನಕ ವಸ್ತು ಗೋವುಗಳನ್ನು ನೀಡಿ ಗಂಡನೊಂದಿಗೆ ಕಳುಹಿಸುತ್ತಿದ್ದೇನೆ. ಇವೆಲ್ಲವೂ ನಿನ್ನದು. ಚೆನ್ನಾಗಿ  ಇರುವುದು ನಿನಗೆ ಹೊಣೆ” ಎಂದು ಹಿತವಚನ ಹೇಳುತ್ತಾರೆ. ಗಂಡನ ತಂದೆಯಲ್ಲೂ ಬೇಡಿಕೆಯಿದೆ. ತಮ್ಮ ಮಗಳು ಅವನಿಗೆ ಸೊಸೆ. ಸಣ್ಣವಳಾದ ಇವಳು ತಪ್ಪಿದರೆ ತಿರಸ್ಕರಿಸದೆ ಬುದ್ಧಿ ಹೇಳಿ ತಿದ್ದಿ ಒಪ್ಪಿಕೋ. ಇನ್ನು ನಮ್ಮ ಅಧಿಕಾರವಿಲ್ಲ. ಇನ್ನು ಬಾರದು ನಮಗೆ” ಎಂಬ  ಸಾಲು ಹೆಣ್ಣು ಹೆತ್ತ ಕರುಳಿನ ಸಂತಾಪದ ಪ್ರತೀಕ. ಕಣ್ಣ ಕೊನೆಯಲ್ಲಿ ತೊಟ್ಟಿಕ್ಕುವ ಸಾಲು ಅದು.

ಹಸೆ ಹಾಡು

ಬಾರೆ ಬಾರೆ ಬಾಬಾ ಮಣಿಯೇ |
ನಾರಿಯರು ಕರೆವರೂ |
ಬಾರೆ ಬಾರೆ ಬಾಬಾ ಮಣಿಯೆ |

ಧಾರೆಯ ಎರೆಯ ಹಾಡು

ಧರೆಯೆರೆದನು ಕನಕಾಂಗಿಯ ಬಲನು |
ಧೀರ ಪಾರ್ಥನ ಸುಕುಮಾರಗೆ ಸುತೆಯನು |
ರನ್ನದ ಗಿಂಡಿಯೊಳು ಉದಕವ ತಂದೂ
ಚೆನ್ನಾಗಿ ಪಾದವ ತೊಳದೂ . . .

ವಿವಿಧ ಶುಭ ಶೋಭನ ಸಮಾರಂಭಗಳಲ್ಲಿ ಹಾಡುವ ಸಂಪ್ರದಾಯವಿತ್ತು. ಮೆಹಿಳೆಯರು ರೂಢಿಯ ಆಚಾರ ವೈಶಿಷ್ಟ್ಯಗಳನ್ನೆಲ್ಲ ಈ ಹಾಡುಗಳಲ್ಲಿ ಅಡಗಿಸಿ ಇರಿಸಿದ್ದಾರೆ. “ಕೆರೆಗೆ ಹಾರ” ಅಥವಾ “ತುಂಬೆ” ಹಾಡು ಸುಪ್ರಸಿದ್ಧವಾದ ಒಂದು ಗೀತೆ.

ಕಲ್ಲನ ಕೇರಿ ಎಂಬ ಸಣ್ಣ ಹಳ್ಳಿ. ಅದು ಧಾನ್ಯದ ಕಣದಂತಿತ್ತು. ಒಂದು ಬಾರಿ ಅಲ್ಲಿ ಬರ ಬಂತು. ದನಕರುಗಳಿಗೆ ಇಲ್ಲ, ಹಾರುವ ಹಕ್ಕಿಗೆ ಇಲ್ಲ, ಇರುವೆ ಎಂಬತ್ತುಕೋಟಿಗೂ ನೀರು ಇಲ್ಲವಾಯಿತು. ಕಟ್ಟಿಟ್ಟ ಬೀಜವು ಉಳಿಯಲಿಲ್ಲ. ಮಲ್ಲನಗೌಡ ಊರ ಕಷ್ಟಕ್ಕೆ ಒದಗಿ ತನ್ನ ಕಣಜವನ್ನು ಬರಿದು ಮಾಡಿದ. ಹೊಸ ಕೆರೆ ಮಾಡಿಸಿದ, ನೀರಿಲ್ಲ. ಕೊನೆಗೆ ಜೋಯಿಸರು ಬಂದರು. ಪಂಚಾಂಗ ಬಿಡಿಸಿ, ಗುಣಿಸಿ ಈ ಕೆರೆಯಲ್ಲಾದರೂ ನೀರುಕ್ಕಬೇಕಾದರೆ ಗೌಡರ ಹಿರಿಯ ಸೊಸೆ ಹೊನ್ನಮ್ಮನನ್ನು ಕೆರೆಗೆ ಹಾರ ಕೊಡಬೇಕು ಎಂದರು. ಇಲ್ಲದಿದ್ದರೆ ನೀರಿನ ಬೊಟ್ಟೂ ಗಿಟ್ಟದು ಎಂದು ಬಿಟ್ಟರು.

ಗೌಡರ ಕರುಳನ್ನು ಕತ್ತಿಯಿಂದ ಕುತ್ತಿ ಎತ್ತಿದಂತಾಯಿತು. ಕಣ್ಣು ಕತ್ತಲೆ ಬಂತು. ಹಿರಿ ಸೊಸೆ ಮನೆಯ ಹಿರಿತನಕ್ಕೆ ಮನೆವಾರ್ತೆಗೆ ಇರುವವಳು. ಅವಳು ಹೋದರೆ ಮನೆ ಹಾಳಾದಂತೆ. ಕಿರಿಸೊಸೆ ಭಾಗೀರಥಿ ಮೊನ್ನೆ ಬಂದ ಹುಡುಗಿ. ಸಂಸಾರದ ಸುಖ ದುಃಖ ಕಂಡಿಲ್ಲ. ಮಕ್ಕಳು ಮರಿಗಳನ್ನು ಹೆತ್ತಿಲ್ಲ. ಅವಳ ಗಂಡ ಮಗ ಮಾಧುರಾಯ ದಂಡಿಗೆ ಹೋಗಿದ್ದಾನೆ. ಈಗ ಕೆಡುವದು ಸರಿಯಲ್ಲ. ಆದರೂ ಊರು ಮಂದಿಯ ಸುಖ ಹೆಚ್ಚೋ ಒಂದು ಹೆಣ್ಣು ಜೀವ ಹೆಚ್ಚೋ? ನಿರ್ಧಾರವಾಯಿತು.

ಭಾಗೀರಥಿಗೂ ವಿಚಾರ ಗೊತ್ತಾಗಿ ಹೌಹಾರಿದಳು. ಗಂಡನ ಮುದ್ದು ಮೊಗ ಕಣ್ಣು ಮುಂದೆ ಸುಳಿಯಿತು. ಕೊಟ್ಟಿಗೆಯ ಕರುಗಳ ಕೊರಳು ತಬ್ಬಿದಳು. ಅವು ಕಣ್ಣೀರಿಟ್ಟವು. ಅತ್ತೆಯಲ್ಲಿ ಕೆಟ್ಟ ಕನಸು ಬಿದ್ದ ಕತೆ ಹೇಳಿ ತವರಿಗೆ ಬರುತ್ತಾಳೆ. ಶೋಭನ ಪ್ರಸ್ಥವಾಗಿ ಗಂಡನ ಮನೆ ಸೇರಿದ್ದ ಮಗಳು ಆಕಸ್ಮಿಕವಾಗಿ ಬಂದಾಗ ತಾಯಿ ತಂದೆ ಗಾಬರಿಯಾದರು.

ತಂದೆ ಯಾಕೆಂದು ಕೇಳಿದಾಗ “ಅತ್ತೆ ಮಾವ ನನ್ನನ್ನು ಬೇರೆ ಇಡುತ್ತಾರಂತೆ” ಎನ್ನುತ್ತಾಳೆ. ಆಗ ಆತ “ಹೆದರಬೇಡ ಮಗಳೇ, ಹೊಲಮನೆ ಹೊಂಡಿಸಿ ಕೊಟ್ಟೇನು” ಎನ್ನುತ್ತಾನೆ. ಭಾಗೀರಥಿ ಬಿಮ್ಮನೆ “ಹೊಲ ಮನೆ ಒಯ್ದು ಹೊಳಗೆ ಹಾಕಪ್ಪ” ಎಂದುಬಿಡುತ್ತಾಳೆ. ತಾಯಿ ಕೇಳಿದಾಗಲೂ ಸತ್ಯವನ್ನು ಮುಚ್ಚಿಟ್ಟಳು. ಆಗ ತಾಯಿ “ಇಟ್ಟರೆ ಇಡಲೇಳು ಮುತ್ತಿನೋಲೆ ಇಟ್ಟು ಊರಮುಂದೆ ಮೆರೆಸುವೆನು ಮಗಳೆ” ಎಂದು ಸಂತೈಸುತ್ತಾಳೆ. “ನಿನ್ನ ಮುತ್ತಿನೋಲೆ ಒಯ್ದು ಒಲೆಗೆ ಹಾಕವ್ವ” ಎಂದು ಭಾಗೀರಥಿ ಅಕ್ಕನಲ್ಲಿಗೆ ಬರುತ್ತಾಳೆ. ಅಕ್ಕ “ಯಾಕೆ ದುಕ್ಕ” ಎಂದು ಕೇಳಿದಾಗಲೂ ಸತ್ಯವನ್ನು ಹೇಳಲಿಲ್ಲ ಆಕೆ. ಅಕ್ಕಾ ಮಕ್ಕಳನ್ನು ಜೊತೆಯಲ್ಲಿ ಕುಳ್ಳಿರಿಸಿ ಮನೆಯನ್ನು ಸರಿಗೊಳಿಸುತ್ತೇನೆ ಎಂದಾಗ “ಮಕ್ಕಳು ದುಕ್ಕ ಕಳೆದಾವೇನೇ ಅಕ್ಕಾ?” ಎಂದು ಬಿಡುತ್ತಾಳೆ.

ಗೆಳತಿಯ ಮನೆಗೆ ಬಂದಾಗ ಸತ್ಯವು ಗಟ್ಟಿ ಚಿನ್ನದಂತೆ ಹೊಟ್ಟೆಯಿಂದ ಹೊರಬಿತ್ತು. ಅವಳು ಕಣ್ಣೀರಿಟ್ಟು, “ಅವರಿಟ್ಟಂತೆ ಇರಬೇಕಲ್ಲವೇ? ಹೆಣ್ಣು ಬದುಕು ಇಷ್ಟೇ ಅಲ್ಲವೇ?” ಎಂದು ಅಲ್ಲಿಂದ ಅತ್ತೆಯ ಮಾತಿನಂತೆ ಸರನೆ ಹೋಗಿ ಭರನೆ ತನ್ನ ಮನೆಗೆ ಬಂದುಬಿಟ್ಟಳು.

ಗಂಗೆ ಪೂಜೆ ದಿನ ಬಂತು. ಔತಣದ ಊಟಕ್ಕೆ ಬೇಳೆ ಗೇರುವಾಗ ಕಣ್ಣೀರು ಗೆರಸೆಗೆ ಬೊಟ್ಟಿಕ್ಕಿತು. ಮಾವ ಕೇಳಿದರೆ “ಬೇಳೆಯ ಕಡಿಯೊಂದು ಕಣ್ಣಿಗೆ ಬಿತ್ತೆಂದು” ಹೇಳಿಬಿಡುತ್ತಾಳೆ. ಅಕ್ಕಿ ಗೇರುತ್ತಿದ್ದಾಗ ಕಣ್ಣೀರು ಉಕ್ಕಿ ಅಕ್ಕಿ ಗೆರಸೆಯಲ್ಲಿ ತೊಟ್ಟಿಕ್ಕಿತು. ಅತ್ತೆ ಕೇಳಿದರೆ “ಅಕ್ಕಿಯ ಕಸ ಕಣ್ಣಗೆ ಬಿತ್ತು ಅತ್ತೆಮ್ಮ” ಎಂದಳು.

ಮಡಿಮಜ್ಜನಕ್ಕೆ ೧೦ ಕೊಪ್ಪರಿಗೆ ನೀರು ಕಾಯಿಸಿದರು. ಜಳಕ ಮಾಡಿ ಭಾಗೀರಥಿ ಸಿಂಗಾರ ಸಿಂಬಿಯ ಮೇಲೆ ಹೂವು ಪತ್ರೆ ತುಂಬಿಸಿದ ಬುಟ್ಟಿಯನ್ನು ಹೊತ್ತು ತಂದು ಹೊಸ ಕೆರೆಯ ತಳದಲ್ಲಿ ಗಂಗೆಯ ಪೂಜೆ ಮಾಡಿದಳು. ಮುತ್ತೈದೆಯರು ಗಂಧ, ಕುಂಕುಮ, ಸೀರೆ, ಕುಪ್ಪಸ ಕೊಟ್ಟು ಬಾಗಿನ ಕೊಟ್ಟು ಹೊದಂಡೆ ಮುಡಿಸಿದರು. ಊಟ ಮುಗಿಯಿತು. ಬಳಿಕ ಎಲ್ಲರೂ ದಂಡೆಗೆ ಬಂದರು. ಭಾಗೀರಥಿ ಬೇಕಂದೇ ಬಂಗಾರದ ಬಟ್ಟಲನ್ನು ಕೆರೆಯ ತಳದಲ್ಲಿ ಬಿಟ್ಟುಬಂದಳು. “ಅದನ್ನು ತರಲು ಯಾರೂ ಒಲ್ಲದೆ ಇದ್ದಾಗ ಭಾಗೀರಥಿ ಹೋಗುತ್ತಾಳೆ. ನೇಸರಿನ ಬೆಳಕಲ್ಲಿ ಬಂಗಾರದ ಬಟ್ಟಲು ತಳತಳಿಸುತ್ತಿತ್ತು. ಕಿರಿ ಸೊಸೆ ಬಾಗವ್ವನ ಕುಡಿ ಸೆರೆಗು ಗಾಳಿಗೆ ಹಾರುತ್ತಿತ್ತು. ಬಟ್ಟಲನ್ನೆತ್ತಿ ಒಂದನೇ ಮೆಟ್ಟಲೇರಿದರೆ ನೀರ ಚಿಲುಮೆ ಜಲ್ಲೆಂದು ಎದ್ದು ಅವಳ ಪಾದ ತೋಯಿಸಿತು. ಎರಡನೇ ಮೆಟ್ಟಲೇರುವಾಗ ನೀರುಕ್ಕೆ ಕಣಕಾಲನ್ನು ಮುಳಿಗಿಸಿತು. ಮೂರನೇ ಮೆಟ್ಟಲಲ್ಲಿ ಮೊಣಕಾಲು, ನಾಲ್ಕನೇ ಮೆಟ್ಟಲಲ್ಲಿ ಸೊಂಟದ ಪಟ್ಟಿ, ಐದರಲ್ಲಿ ಎದೆ, ಆರರಲ್ಲಿ ಕೊರಳ ಪದಕ ಕಾಣುವಷ್ಟು ಮುಳುಗಿದಳು. ಏಳನೇ ಮೆಟ್ಟಲೇರುವಾಗ ತಲೆಯ ರಾಗಟೆ ಕಂಡಿತು. ರಾಗಟೆ ಕಂಡಲ್ಲಿ ಸಾವಿರ ಎಸಳಿನ ತಾವರೆ ಕಂಡಿತು, ಕೂಡಿದವರು ಈ ಅದ್ಭೂತ ನೋಡಿ ಕೈಮುಗಿದರು.

ಈ ಕಥೆಯಲ್ಲಿ ಹೆಣ್ಣಿನ ತ್ಯಾಗದ ಗುಣ ಚಿರಸ್ಮರಣೀಯವಾಗಿದೆ.