ನವರಾತ್ರಿ

ಇದೂ ವ್ಯಾಪಕವಾಗಿ ಆಚರಣೆಯಲ್ಲಿರುವ ಹಬ್ಬ, ಕೋಟೆ ಜನಾಂಗದವರು ಶಕ್ತಿಯ ಆರಾಧಕರು. ದುರ್ಗೆ, ಚಾಮುಂಡಿ, ಪಾರ್ವತಿ, ಮಹಮಾಯಿ, ಭದ್ರಕಾಳಿ, ಶಾಂತಾದುರ್ಗಾ, ಶಾಂತೇರಿ, ಮಹಿಷಾಸುರಮರ್ದಿನಿ, ಸತಿ ಮುಂತಾದ ಹೆಸರುಗಳಿಂದ ದೇವಿಯ ಆರಾಧನೆ ಮಾಡುತ್ತಾರೆ.

ಒಂಬತ್ತೂ ದಿನಗಳಲ್ಲಿ ದೇವಿಯ ಪೂಜೆ ಮಾಡುತ್ತಾರೆ. ತಮ್ಮ ವಂಶದ ಹಳೆಯ ವೀರರ ಕಠಾರಿಗಳನ್ನು ಪೂಜೆಗಿರಿಸುತ್ತಾರೆ. ಇದುವೇ ಆಯುಧಪೂಜೆ. ಮೂವತ್ತನಾಲ್ಕು ಅಥವಾ ಮೂವತ್ತಾರು ಕ್ಷತ್ರಿಯ ಕುಲಗಳು ಉಂಟು ಎಂಬ ಹೇಳಿಕೆ ಇದೆ. ಇವರೆಲ್ಲರೂ ಆಯುಧ ಪೂಜೆ ಮಾಡುತ್ತಾರೆ.

ನಿತ್ಯ ಕರ್ಮ ಮಾಡುವ ಉಪನೀತ ಕ್ಷತ್ರಿಯ ಹುಡುಗರು ದಿನಂಪ್ರತಿ ಖಡ್ಗಕ್ಕೆ ನಮಸ್ಕಾರ ಮಾಡುವ ಪದ್ಧತಿಯೂ ಇದೆ.

ಕೋಟೆಯವರ ಮನೆಗಳಲ್ಲಿ ವೆಂಕಟರಮಣ ದೇವರಿಗೆ ಮುಡಿಪು ಕಟ್ಟುವ ಸಂಪ್ರದಾಯವಿದೆ. ವರ್ಷಕ್ಕೊಮ್ಮೆ ಆ ಬಗ್ಗೆ ಹರಿಸೇವೆ, ದೇವಕಾರ್ಯಗಳು ಆಗಬೇಕು. ಸಾಮಾನ್ಯವಾಗಿ “ತುಲಸಿಪೂಜೆ”ಯ ದಿನವೇ ಮುಡಿಪು ಪೂಜೆಯನ್ನು ಮಾಡುತ್ತಾರೆ. ಸಾಧ್ಯವಿದ್ದಾಗ ತಿರುಮಲೆ ತಿಮ್ಮಪ್ಪನ ಸನ್ನಿಧಿಗೆ ಯಾತ್ರೆ ಮಾಡಿ ಮುಡಿಪು ಅರ್ಪಿಸಿಬರುತ್ತಾರೆ.

ಶೃಂಗೇರಿ ಶಾರದಾ ಪೀಠದ ಮಹಾಸಂಸ್ಥಾನ ಈ ಜನಾಂಗದವರಿಗೆ ಗುರುಮಠ. ಈ ಬಗ್ಗೆ ಉಲ್ಲೇಖಿಸುತ್ತಾರೆ.

ಮನೆ ದೇವರಾಗಿ ವಿಷ್ಣು, ಚಾಮುಂಡೇಶ್ವರಿ ಇತ್ಯಾದಿಯಾಗಿ ಅನೇಕ ಶಿವ, ಶಕ್ತಿ ರೂಪಗಳನ್ನೂ ಆಂಜನೇಯನನ್ನು ಅವರು ಗುಡಿ ಕಟ್ಟಿ ಆರಾಧಿಸುತ್ತಾರೆ. ಎಲ್ಲಾ ಕೋಟೆಗಳಲ್ಲಿ ಆಂಜನೇಯನ ಗುಡಿ ಇದೆ. ಈಚೆಗೆ ಇವೆಲ್ಲಾ ಅಭಿವೃದ್ಧಿ ಹೊಂದಿವೆ.

ಕೋಟೆ ಜನಾಂಗದ ಮಹಿಳೆ ಮತ್ತು ವಿವಿಧ ಪ್ರಮುಖ ಸಂಸ್ಕಾರಗಳು

ಹಿಂದೂ  ಧರ್ಮ ಎಲ್ಲಾ ಸಂಸ್ಕಾರಗಳನ್ನು  ಕೋಟೆ ಜನಾಂಗದವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ವರ್ಣಗಳಲ್ಲಿ ಮೊದಲನೆಯದು ಎನಿಸಿದ ಬ್ರಾಹ್ಮಣ ವರ್ಣದಷ್ಟು ಅಲ್ಲವಾದರೂ ಕ್ಷಾತ್ರವರ್ಣದವರು ಅನುಸರಿಸುವ ಸಂಸ್ಕಾರಗಳು ಸಾಂಫ್ರದಾಯಿಕವಾಗಿ ಬೆಳೆದುಬಂದಿವೆ. ಈ ಸಂಪ್ರದಾಯದ ಆಚರಣೆಗಳಲ್ಲಿ ಸಂಸ್ಕಾರಗಳಲ್ಲಿ ಚೌಲ, ಉಪನಯನ ಇತ್ಯಾದಿಗಳನ್ನು ಹೊರತುಪಡಿಸಿದರೆ ಉಳಿದಂತೆ ಸ್ತ್ರೀ ಪುರುಷರ ಭೇದಗಳಿಲ್ಲ. ಗಂಡಿನ ಸಂಸ್ಕಾರಕ್ಕೆ ಭಿನ್ನವಾಗಿ ಹೆಣ್ಣು ಮೈ ನೆರೆಯುವ ಕಾಲ, ಸೀಮಂತ, ಜಾತಕರ್ಮ, ಶುದ್ಧ, ನಾಮಕರಣದ ಸಂದರ್ಭಗಳಲ್ಲಿ  ಹೆಣ್ಣಿಗೆ ವಿಶಿಷ್ಟವಾದ ಆಚರಣೆಗಳೂ, ಸಂಸ್ಕಾರಗಳೂ ಇವೆ.

ಪಿತೃಪ್ರಧಾನ ಕುಟುಂಬಗಳಾಗಿರುವ ಕೋಟೆಯಲ್ಲಿರುವ ಮಾತೃವಿಗೂ ಯೋಗ್ಯ ಸ್ಥಾನವುಂಟು. ಹೆಣ್ಣು ಮಗುವೊಂದು ಹುಟ್ಟಿದರೆ ಅಸಹ್ಯಪಡುವಂಥ, ಹೊರೆ ಎಂದು ಕೊರಗುವ ಜಾಯಮಾನ ಅವರಲ್ಲಿಲ್ಲ.

ಜನನದ ಸಂದರ್ಭ -ಜಾತಕರ್ಮ

ಮಗುವೊಂದು ಜನಿಸಿದಾಗ “ನಂಜಿನ ಬಳ್ಳಿ ಕೊಯ್ಯುವುದು” ಎಂಬ ಆಚಾರವಿದೆ. ಮಗುವಿನ ಹೊಕ್ಕುಳ ಬಳ್ಳಿಯನ್ನೇ ಈ ಹೆಸರಿನಿಂದ ಕರೆಯುತ್ತಾರೆ. ಅದನ್ನು ದೂರ ಎಸೆಯದೆ ಮನೆಯಂಗಳದ ಹತ್ತಿರವೇ ಮಣ್ಣಿನೊಳಗೆ ಹೂತು ಬಿಡುತ್ತಾರೆ.  ಹನ್ನೊಂದನೇ ದಿನ ಶುದ್ಧದವರೆಗೆ ದಿನಾ ಸ್ನಾನ ಮಾಡಿಸುವಾಗ ಸ್ನಾನದ ನೀರು ಆ ನಂಜಿನ ಬಳ್ಳಿಗೆ ಬೀಳಬೇಕು. ಮರುದಿನ ಅಲ್ಲಿ ಒಂದು ಗಿಡ ನೆಟ್ಟು ಬಿಡುತ್ತಾರೆ. ಹನ್ನೆರಡನೆಯ ದಿನ ಮಗುವಿನ ಕಿವಿ ಸುರಿಯುವುದು ಎಂಬ ಕಾರ್ಯಕ್ರಮ. ಇದನ್ನೇ ಸಂಸ್ಕೃತದಲ್ಲಿ “ಕರ್ಣಭೇದನ” ಎಂದಿದ್ದಾರೆ. ಆ ದಿನ ಹಬ್ಬದಡುಗೆ. ಮಗುವಿಗೆ ಗಂಡಿರಲಿ, ಹೆಣ್ಣಿರಲಿ, ಸೊಂಟಕ್ಕೆ ನೇವಳ (ಸೊಂಟದ ಆಭರಣ), ಕುತ್ತಿಗೆಗೆ ಬಂಗಾರದ ಸರ, ಕಾಳಿಗೆ ಗೆಜ್ಜೆ, ಕೈಗೆ ಕಂಕಣ ಇತ್ಯಾದಿ ಆಭರಣಗಳನ್ನು ಹಾಕುತ್ತಾರೆ. ನಾಮಕರಣವನ್ನೂ ಅಂದೇ ಮಾಡುತ್ತಾರೆ.

ತವರುಮನೆಯಲ್ಲಿ ಹೆರಿಗೆಯಾಗುತ್ತದೆ. ಹಿಂದೆ ಮನೆಗಳಲ್ಲೇ ಸೂಲಗಿತ್ತಿಯರನ್ನು ಬರಿಸಿಯೀ, ತಾಯಂದಿರೇ ನೋಡಿಕೊಂಡೇ ಹೆರಿಗೆ ಮಾಡಿಬಿಡುತ್ತಿದ್ದರು. ಆದರೆ ಈಚೆಗೆ ಪ್ರಸವ ಆಸ್ಪತ್ರೆಯಲ್ಲಿ, ಉಳಿದ ಕಾರ್ಯಗಳು ತವರಿನಲ್ಲಿ.

ಕನಿಷ್ಠ ನಲವತ್ತು ದಿನಗಳ ಕಾಲ ಆಕೆ ತವರಿನಲ್ಲಿ ಇರಲೇಬೇಕು. ಸಾಮಾನ್ಯವಾಗಿ ಐದನೇ ತಿಂಗಳಲ್ಲಿ ಗಂಡನ ಮನೆಗೆ ಕಳುಹಿಸಿಕೊಡುವದು ಸಂಪ್ರದಾಯ. ಹಾಗೆ ಕಳುಹಿಸಿಕೊಡಬೇಕಾದರೆ ಹಿತ್ತಾಳೆ ತೊಟ್ಟಿಲು ತಂದು ಬಾಣಂತಿ ಮಗುವನ್ನು ಕಳುಹಿಸಬೇಕು. ಬಾಣಂತಿಗೆ ಎರಡು ಜೊತೆ ಬಟ್ಟೆ, ಸೀರೆ, ರವಿಕೆ, ಇತ್ಯಾದಿ ಎಣ್ಣೆ ತುಂಬಿದ ಭರಣಿ, ಮಗುವಿಗೆ ಎರಡು ಜೊತೆ ಬಟ್ಟೆ ಇಷ್ಟನ್ನೂ ತೊಟ್ಟಿಲೊಳಗೆ ಇಟ್ಟು ನೀಡಬೇಕು. ಊಟ ಮಾಡಲು ಬಟ್ಟಲು, ಗಿಣ್ಣಲು, ಎಣ್ಣೆಗಾಗಿ ಭರಣಿ, ತೆಂಗಿನಕಾಯಿ ಮಡಿಕೆಗಳು, ಐದು ವಿಳ್ಯದೆಲೆ, ಅಡಿಕೆ, ಬೆಳ್ತಿಗೆ ಅಕ್ಕಿ, ಒಂದಿಷ್ಟು ಹೂ, ಹಣ್ಣು ತವರುಮನೆಯಿಂದ ಕೊಡಬೇಕು.

ಬಾಣಂತಿ ಮಡಿಲು ತುಂಬಬೇಕು. ಐದು ಕುಡ್ತೆ ಅಕ್ಕಿ, ಎರಡು ತೆಂಗಿನಕಾಯಿ, ಐದು ವಿಳ್ಯದ ಎಲೆ, ಒಂದು ಅಡಿಕೆಯನ್ನು ಬಿಳಿಶಾಲಿನಲ್ಲಿ ಕಟ್ಟಿ ಮಡಿಲಲ್ಲಿ ಇಡಬೇಕು.

ಮಗು ಬಾಣಂತಿಯರನ್ನು ತವರುಮನೆಯಿಂದ ಕರೆದೊಯ್ಯಲು ಐದು ಜನ ಮುತ್ತೈದೆಯರು ಬಾಣಂತಿಯ ಗಂಡನ ಕಡೆಯಿಂದ ಬರಬೇಕು. ಅವರಿಗೆ ಸತ್ಕಾರ ಆಗಬೇಕು. ಬಾಣಮತಿಗೆ “ಮಡಿಲಕ್ಕಿ” ಆದ ಕೂಡಲೇ ಐದು ಜನ ಮುತ್ತೈದೆಯರೂ “ಸೇಸೆ” ಮಾಡುತ್ತಾರೆ. ಆಕೆಯ ಮಡಿಲಲ್ಲಿರುವ ಸಾಮಗ್ರಿಗಳನ್ನು ಒಂದು ಗಂಟಿನಂತೆ ಅನಂತರ ಕಟ್ಟಬೇಕು.

ಶುಭದಿನ ಶುಭವೇಳೆಯನ್ನು ಜೋಯಿಸರಲ್ಲಿ ಕೇಳಿ  ಇದನ್ನು ಆಚರಿಸುತ್ತಾರೆ.  ಈ ಕಾರ್ಯಕ್ರಮಗಳು ತವರಿನಲ್ಲಿ ನಡೆದಿದ್ದರೂ ಗಂಡನ ಮನೆಯಲ್ಲಿ ಮತ್ತೇ ಪ್ರತ್ಯೇಕ ತೊಟ್ಟಿಲು ಶಾಸ್ತ್ರ, ನಾಂಕರಣ ಮಾಡುತ್ತಾರೆ.

ಪುರೋಹಿತರು ಬಂದು ವೈದಿಕವಾಗಿ ನಾಮಕರಣವನ್ನು ಪೂರೈಸುತ್ತಾರೆ. ಅನಂತರ ಹೆಂಗಸರು ರಾತ್ರಿ ಮಗುವನ್ನು ಸಿಂಗರಿಸಿ ತೊಟ್ಟಿಲಲ್ಲಿ ಮಲಗಿಸುತ್ತಾರೆ. ಈ ವೇಳೆಯಲ್ಲಿ ಮಗುವನ್ನು ಮಲಗುವ ಮೊದಲು ಇನ್ನೊಂದು ಆಚರಣೆ ಇದೆ. ಒಂದು ಕಲ್ಲು ಗುಂಡನ್ನು ತಂದು ಅದಕ್ಕೆ ಅರಿಸಿನ ಲೇಪಿಸಿ, ವಸ್ತ್ರ ಸುತ್ತಿ, ತೊಟ್ಟಿಲ ಎರಡೂ ಕಡೆಗಳಲ್ಲಿ ಮಗುವಿನ ತಾಯಿ ಹಾಘೂ ಹಿರಿಯ ಮುತ್ತೈದೆಯರು ನಿಂತುಕೊಳ್ಳುತ್ತಾರೆ. ಮೂರು ಬಾರಿ ಆ ಗುಂಡುಕಲ್ಲನ್ನು ತೊಟ್ಟಿಲಿನ ಮೇಲಿಂದ ಕೊಟ್ಟು ಕೆಳಗಿನಿಂದ ತೆಗೆದುಕೊಳ್ಳುತ್ತಾರೆ.  ಆಗ,

ಗೋಪಾಲನಾ ತಕೋ…..
ಗೋವಿಂದನಾ ಕೊಡು……

ಎನ್ನುತ್ತಾರೆ. ಆದಿಯಲ್ಲಿ ಮೂರು ಬಾರಿ ಮಗುವನ್ನು ತೊಟ್ಟಿಲಿನ ಮೇಲಿಂದ ಹಾಘೂ ಮೂರು ಬಾರಿ ಕೆಳಗಿನಿಂದ ತಿರು ತಿರುಗಿ ತೆಗೆದುಕೊಂಡು  ಆಮೇಲೆ ತೊಟ್ಟಿಲಲ್ಲಿ ಮಲಗಿಸುತ್ತಾರೆ. ಪಕ್ಕದಲ್ಲಿ ಗುಂಡುಕಲ್ಲು.

ತೊಟ್ಟಿಲಲ್ಲಿ ಬೆಲ್ಲದ ಅಚ್ಚು ಹಾಗೂ ತೆಂಗಿನಕಾಯಿ ಹೋಳನ್ನಿಟ್ಟಿರುತ್ತಾರೆ. ಮಗು ಹೆಣ್ಣಾದರೆ ಗಂಡು ಮಕ್ಕಳು ಅದನ್ನು ತೆಗೆದುಕೊಳ್ಳುತ್ತಾರೆ.  ಮಗು ಗಂಡಾದರೆ ಹೆಣ್ಣು ಮಕ್ಕಳು ಅದನ್ನು ತೆಗೆದುಕೊಳ್ಳುತ್ತಾರೆ.  ಅನಂತರ ಹಂಚಿಕೊಂಡು ತಿನ್ನುತ್ತಾರೆ.

ರಾತ್ರಿ ದೇವರ ಕೋಣೆಯಲ್ಲಿ ಒಂದು ಕಲಶವನ್ನಿಟ್ಟು ಷಷ್ಠಿ (ಸುಬ್ರಹ್ಮಣ್ಯ) ದೇವರನ್ನಿಟ್ಟು ಸಿಂಗಾರ ಮಾಡಿ ಹೆಂಗಸರು ಪೂಜೆ ಮಾಡುತ್ತಾರೆ. ಅನಂತರ ಪುಗುಡಿ ನೃತ್ಯ ಮಾಡುತ್ತಾರೆ.

ದಾವಣಿ

ಹುಟ್ಟಿದ ಮಗು ಗಂಡಾದರೆ ಉಪನಯನ ಸಂಸ್ಕಾರ ೮ ರಿಂದ ೧೨ ರ ಪ್ರಾಯದಲ್ಲಿ ಈ ಸಂಸ್ಕಾರ ಪುರೋಹಿತರ ನೇತೃತ್ವದಲ್ಲಿ  ವೈದಿಕ ಕ್ರಮದಲ್ಲಿ ಜರುಗುತ್ತವೆ. ಮಗು ಹೆಣ್ಣಾದರೆ ಆಕೆಗೆ ಎಂಟರಿಂದ ಹನ್ನೆರಡು ವರ್ಷ ಪ್ರಾಯದ ಹೊತ್ತಿಗೆ ಹಿಂದೆ ಮದುವೆ ಆಗುತ್ತಿತ್ತು.

ಹೆಣ್ಣು ಮೈ ನೆರೆದರೆ ಆಗ ಅವಳನ್ನು ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ. ಅವಳಿಗೆ ಲಂಗ, ರವಿಕೆ, ಜೊತೆಗೆ ದವಣಿ ಎಂಬ ಚಿಕ್ಕ ಸೆರಗು ಹಾಕುತ್ತಾರೆ. ಅಲ್ಲಿಗೆ ಅವಳು ದೊಡ್ಡವಳಾಗುತ್ತಾಳೆ ಎಂದರ್ಥ. ಕೆಲವೊಮ್ಮೆ ಮೈ ನೆರೆತ ಮೇಲೆ ಮದುವೆ, ಕೆಲವೊಮ್ಮೆ ಅದಕ್ಕೂ ಮಧ್ಯದಲ್ಲಿ ಈಚೆಗೆ ಸರಕಾರಿ ಕಾನೂನಿನಂತೆ  ೧೮ ದಾಟದೆ ಮದುವೆ ಇಲ್ಲ. ಹಾಗಾಗಿ, ದೊಡ್ಡವಳಾದಾಗಿನ ತವರುಮನೆಯಿಂದ ತುಪ್ಪ ತರುವ ಕ್ರಮ ಇದೆ. ಅವಳಿಗೆ ಉತ್ತಮ ಪೋಷಣೆ ದೊರೆಯಲಿ ಎಂಬ ಹಾರೈಕೆ, ಈ ಆಚರಣೆಯ ಹಿಂದೆ ಇದ್ದುದು ತೋರುತ್ತದೆ.

ಈ ತೆರನಾದ ಆಕೆ ಹೆಂಗಸಾದ ಮೇಲೆ ಬೆಳಿಗ್ಗೆ ಎದ್ದು ಸೂರ್ಯನಿಗೆ ಅರ್ಘ್ಯ ಕೊಟ್ಟು, ಸೂರ್ಯನಮಸ್ಕಾರ ಮಾಡಬೇಕು. ತುಲಸಿಗೆ ನೀರೆರೆದು ಮನೆಯೊಳಗೆ ಗಿಂಡಿನೀರು ತರಬೇಕು. ದೇವರ ಕೋಣೆಯಲ್ಲಿ “ತಾನ” ಉರಿಸಬೇಕು. (ತಾನ ಎಂದರೆ ಮನೆಯ ಮುಖ್ಯ ದೀಪ. ಸಾಮಾನ್ಯವಾಗಿ ಸರಪಳಿ ದೀಪ).

ತುಲಸಿ ಕಟ್ಟೆಯ ಹತ್ತಿರ ರಂಗೋಲಿ ಹಾಕುವ ಸಂಪ್ರದಾಯ ಬಹು ಸೀಮಿತವಾಗಿದೆ. ಚೌತಿಯ ಹಬ್ಬದ ವೇಳೆ “ಗೌರಿ ಒಳಗೆ ಬರುವ ಹೊತ್ತು” ಎಂದು  ವಿಶೇಷವಾಗಿ ನಂಬುತ್ತಾರೆ. ಆ ಸಮಯದಲ್ಲಿ ಹೊಸ್ತಿಲಿನ ಹತ್ತಿರ ರಂಗೋಲಿ ಹಾಕುತ್ತಾರೆ.  ಅದನ್ನು ಗಂಡು ಹೆಣ್ಣು ತುಳಿಯಬಾರದು. ತುಳಿದರೆ ದೋಷವುಂಟು ಎಂಬ ನಂಬುಗೆ ಇದೆ.

ಹೆಣ್ಣು “ದೊಡ್ಡವಳಾದಾಗ” ಅಜ್ಜಿ ಮನೆಗೆ ಎಂದರೆ ತಾಯಿಯ ತವರುಮನೆಗೆ ಕರೆದುಕೊಂಡು ಹೋಗುವ ಸಂಪ್ರದಾಯವಿದೆ. ಅಲ್ಲಿ ಆಕೆಗೆ ಸಮ್ಮಾನ ಮಾಡುತ್ತಾರೆ. ಸೀರೆ, ರವಿಕೆ, ಕೆಲವೊಮ್ಮೆ ಉಳ್ಳವರು ಬಂಗಾರದ ಆಭರಣ ನೀಡುವುದು ಉಂಟು. ತನ್ನ ತವರಿನಲ್ಲಿ ಸಿಹಿಯೂಟ, ಸೀರೆ ರವಿಕೆ ಇತ್ಯಾದಿಗಳೆಲ್ಲ ಆಕೆ ಪಡೆಯುತ್ತಾಳೆ.

ಹೆಣ್ಣು “ಮುಟ್ಟಾದರೆ” ಮೂರು ದಿನ ಅಶುದ್ಧ, ಮೈಲಿಗೆ ಆಚರಣೆಯೇ. ಅವಳು “ಮುಡಿಪು” ಇರುವ ದೇವರ ಕೋಣೆಗೆ ಹೋಗಬಾರದು. ಯಾರಿಂದಲೂ ಮುಟ್ಟುಸಿಕೊಳ್ಳಬಾರದು.  ಆಕೆಊ ಮುಟ್ಟಬಾರದು. ನಾಲ್ಕನೇ ದಿನಕ್ಕೆ ಸ್ನಾನ ಆದಕ್ಕಿ ಶುದ್ಧ ಆದ ಹಾಗೆ.

ಮದುವೆ ನಿಶ್ಚಿತಾರ್ಥ :

ಹೆಣ್ಣು  ನೆರೆಯುವ ಮೊದಲೇ ನಿಶ್ಚಿತಾರ್ಥ, ಮದುವೆಯಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಪ್ರಾಯಕ್ಕೆ ಬಂದ ಮೇಲೆ ಮದುವೆ.

ಕೋಟೆಯಲ್ಲಿ ಸೋದರಳಿಯನಿಗೆ ಮಗಳನ್ನು ಕೊಡುವುದಾದರೆ ಜಾತಕ ನೋಡುವ ರೂಢಿ ಇಲ್ಲ. ಸಗೋತ್ರ ವಿವಾಹ ಅಲ್ಲದು. ಸಪಿಂಡದಲ್ಲೂ ಲಗ್ನ ಇಲ್ಲ. ಜಾತಕ ನೋಡಿ ಗಂಡು-ಹೆಣ್ಣು ಒಪ್ಪಿಗೆಯಾದ ಮೇಲೆ ನಿಶ್ಚಿತಾರ್ಥದ ಕಾರ್ಯಕ್ರಮ

ಹೆಣ್ಣನ್ನು ಮೊದಲು ನೋಡುವುದು ಹುಡುಗನ ತಂದೆ-ತಾಯಿ. ಹುಡುಗ ನೋಡಬಾರದು ಎಂಬ ರೂಢೀ ಇತ್ತು. ಹೆಣ್ಣಿನ ಕಡೆಯವರು ತಮ್ಮದೊಂದು ಹೆಣ್ಣಿಗೆ, ತಮ್ಮ ಮಗನನ್ನು ಕೊಡುತ್ತೀರಾ ಎಂದು ಯಾಚಿಸುವದು ಅನುಮಾನಾಸ್ಪದ ಎಂದು ತಿಳಿಯುತ್ತಾರೆ.

ಹುಡುಗ ನಿಶ್ಚಿತಾರ್ಥಕ್ಕೆ ಬರಬಾರದು ಬಂತಲೂ ರೂಢಿ ಇದೆ. ಎರಡು ಕಡೆಯವರೂ ಒಟ್ಟಾಗುವುದು ನೆಣ್ಣಿನ ಮನೆಯಲ್ಲೇ. ಜೋಯಿಸರನ್ನು ಅಮಂತ್ರಿಸಿರುತ್ತಾರೆ. ಅವರು ಆ ದಿನ ಮತ್ತೊಮ್ಮೆ ಜಾತಕವನ್ನು ಪರಿಶೀಲಿಸಿ ಇಂತಿಂಥ ನಕ್ಷತ್ರ ರಾಶಿಯ ಹುಡುಗನ ಹುಡುಗಿಯ ಜಾತಕ ಮೇಳವಾಗುತ್ತದೆ ಎಂದು ಹೇಳುತ್ತಾರೆ.

ನಿಶ್ಚಯ ತಾಂಬೂಲಕ್ಕೆ ಗಂಡಿನ ಕಡೆಯವರು ಬರುವಾಗ ಚಿನ್ನಾಭರಣ, ಬಟ್ಟೆ ಬರೆ ತರುತ್ತಾರೆ. ಅದನ್ನೆಲ್ಲಾ ಹುಡುಗಿಯ ಆಯಿಯ ಕೈಯಲ್ಲಿ ಕೊಡುತ್ತಾರೆ. ಅವುಗಳನ್ನೇ ಧರಿಸಿಕೊಂಡು ಹುಡುಗಿ ಬರಬೇಕು. ಜ್ಯೋತಿಷಿಗಳು “ಜಾತಕ ಕಟ್ಟಿಕೊಡುವುದು” ಅಂತ ಒಂದು ಸಂದರ್ಭವಿದೆ.  ಹರಿವಾಣದಲ್ಲಿ ತಾಂಬೂಲ ಇಟ್ಟು ಗಂಡ ಹೆಣ್ಣಿನ ಜಾತಕಗಳನ್ನಿಟ್ಟು ಘೋಷಣೆ ಮಾಡುತ್ತಾರೆ.

ಹತ್ತು ಮನೆ ಜನ ಈ ನಿಶ್ಚಿತಾರ್ಥಕ್ಕೆ ಸೇರಬೇಕು. ಅವರೆದುರು ಈ ವಾಗ್ದಾನ ನಡೆಯುತ್ತದೆ. ಅನಂತರ ವೀಳ್ಯ ಕೊಟ್ಟು ಹುಡುಗಿಗೆ ಸೀರೆ ಕೊಟ್ಟು ಹೂವನ್ನು ಮುಡಿಸುತ್ತಾರೆ. ಕೆಲವರು ಉಂಗುರ ಮಾಡಿಸಿದ್ದಲ್ಲಿ, ಅದನ್ನು ಪರಸ್ಪರ ಹಾಕುತ್ತಾರೆ. ನಾಲ್ಕು ಕಾರ್ಯಕ್ರಮಗಳು ಮುಖ್ಯವಾಗಿ ಮದುವೆಯಂದು ನಡೆಯಲಿರುವುದರಿಂದ ಅವುಗಳಿಗೆ ಮುಹೂರ್ತ ನೋಡಿ ಜೋಯಿಸರು ಹೇಳುತ್ತಾರೆ. ಚಪ್ಪರ ಮಹೂರ್ತ, ಅರಿಶೀನೆಣ್ಣೆ, ಧಾರೆ, ಹೆಣ್ಣು ಇಳಿಸುವುದು. ಈ ನಾಲ್ಕೂ ಕಾರ್ಯಕ್ರಮಗಳಿಗೆ ಹೇಳಿಕೆ ಮಾಡುತ್ತಾರೆ. ಕೊನೆಗೆ ವಧು ಹಿರಿಯರ ಪಾದ ಮುಟ್ಟು ನಮಸ್ಕಾರ ಮಾಡು ಆಶಿರ್ವಾಧವನ್ನು ಪಡೆದುಕೊಳ್ಳುತ್ತಾಳೆ. ಇದು ನಿಶ್ಚಿತಾರ್ಥ.

ವರದಕ್ಷಿಣೆ ಎಂಬದು ಒಂದು ಪಿಡುಗು ಎಂಬಂತಿಲ್ಲ. ಬಂಗಾರವನ್ನು ಕೊಡುವುದು ಐಚ್ಛಿಕ. ಕನಿಷ್ಠ ಆಭರಣಗಳನ್ನಂತೂ ಹಾಕಿಯೇ ಹಾಕುತ್ತಾರೆ. ವರದಕ್ಷಿಣೆಯನ್ನು “ಕಾಸಿ” (ಕಾಶ) ಎಂದು ಕರೆಯುತ್ತಾರೆ. ಅದನ್ನು ಕೊಡುವುದಿದ್ದರೆ ಹರಿವಾಣದಲ್ಲಿ ವಿಳ್ಯದೊಂದಗೆ ಇರಿಸಿಕೊಡಬೇಕು. ಅದೂ ನಿಶ್ಚಿತಾರ್ಥದ ದಿನವೇ ಕೊಟ್ಟುಬಿಡುವುದು ಇದರ ಪದ್ಧತಿಯಾಗಿದೆ.

ಮದುವೆಗೆ ಹೇಳಿಕೆ ರೀತಿಯಲ್ಲಿ ವಿಳ್ಯದ ಹರಿವಾಣವನ್ನು ಮೂರು ಸಲ ಅತ್ತಿತ್ತ ಕೊಟ್ಟು ತೆಗೆದುಕೊಳ್ಳುತ್ತಾರೆ. ಇದೂ ಹೆಂಗಸರ ಜವಾಬ್ದಾರಿ. ಮದುವೆಗೆ ಹೇಳಿಕೆ ಕೊಡುವ ಹೊಣೆಯೂ ಹೆಂಗಸರದೇ ಆಗಿದೆ.

ನಾಂದಿ

ಆಮೆ-ಸೂತಕಗಳು-ಹೆರಿಗೆ-ಸಾವುಗಳು ಬರುವ ಸಾಧ್ಯತೆಗಳು ಇದ್ದರೆ ಮಾತ್ರ ನಾಂದಿಯನ್ನು ಮಾಡುತ್ತಾರೆ. ಅಲ್ಲದಿದ್ದರೆ ಈ ಕಾರ್ಯಕ್ರಮ ಪ್ರತ್ಯೇಕವಾಗಿ ನಡೆಯುವುದಿಲ್ಲ. ನಾಂದಿಯ ದಿನ ಪುರೋಹಿತರು ಬಂದು ಸಂಬಂಧಪಟ್ಟ ವೈದಿಕ ಕಾರ್ಯಗಳನ್ನು ಮಾಡುತ್ತಾರೆ. ಇದು ಹುಡಗಿ ಹಾಗೂ ಹುಡುಗನ ಮನೆಯಲ್ಲಿ ಪ್ರತ್ಯೇಕವಾಗಿ ನಡೆಯುತ್ತದೆ.

ಪುರೋಹಿತರು ಕಾರ್ಯಕ್ರಮದ ಕೊನೆಗೆ ಹುಡುಗ ಅಥವಾ ಹುಡುಗಿಗೆ ಹಾಗೂ ಅವರ ತಾಯಿ-ತಂದೆಯರಿಗೆ “ಅರಿಸಿನ ಕೊಂಬು” ತುಂಡನ್ನು ಪಟ್ಟೆ, ನೂಲಲ್ಲಿ ಕಟ್ಟಿ ಗಂಡಾಗಿದ್ದರೆ ಬಲಗೈಗೆ, ಹೆಣ್ಣಾಗಿದ್ದರೆ ಎಡಗೈಗೆ ಕಟ್ಟುತ್ತಾರೆ.

ಸಾಮೂಹಿಕ ವಿವಾಹ

೧೯೫೬ರ ಸನಂತರದಲ್ಲಿ  ಸಾಮೂಹಿಕ ವಿವಾಹ ಮಾಡುವ ವಿಧಾನ ರೂಢಿಗೆ ಂದಿದೆ ಎಂದು ಹಿರಿಯರ ಆಂಬೋಣ. ಇಲ್ಲಿ ಐದರಿಂದ ಆರು ಜೊತೆಗಳು ಗ್ರಹಸ್ಥಾಶ್ರಮಿಗಾಘುತ್ತಾರೆ. ಇದಕ್ಕೆ “ಕೂಡಿಕೆ ಮದುವೆ” ಎನ್ನುತ್ತಾರೆ.

ಶ್ರೀಮಂತರು ತಮ್ಮ  ಮಕ್ಕಳಿಗೆ ಮದುವೆ ಮಾಡುವ ಸಂದರ್ಭ ನೋಡಿ, ಬಡವರು ಅವರ ಬಳಿ ಬಂದು ತಮ್ಮ ಮಗಳಿಗೂ ಅದೇ ದಿನ ಧಾರೆ ಮಾಡಲು ಆವರಣವನ್ನು  ಅದೇ ಚಪ್ಪರದಲ್ಲಿ ನೀಡಬೇಕೆಂದು ವಿನಂತಿಸಿಕೊಳ್ಳುತ್ತಾರೆ.  ಒಪ್ಪಿದಲ್ಲಿ ಐದಾರು ಮಂದಿ ಒಂದೇ ಕಡೆ, ಊಟ,ಭೋಜನ ಚಪ್ಪರಗಳ ಯಾವ ಪ್ರತ್ಯೇಕ ಖರ್ಚೂ ಇಲ್ಲದೆ ಅತ್ಯಲ್ಪ ವೆಚ್ಚದಲ್ಲಿ ಬಡವರಿಗೆ ಮದುವೆ ಮಾಡಲು ಇದು ಒಂದು ಅವಕಾಶ ಮಾಡಿದೆ. ಇದು ಸಾರ್ವತ್ರಿಕ ಆಗಿಲ್ಲ. ಆಲ್ಲೊಮ್ಮೆ ಇಲ್ಲೊಮ್ಮೆ ಇಂತಹ ಕೂಡಿಕೆ ಮದುವೆಗಳಾಗಿದೆಯಂತೆ.

ಚಪ್ಪರ ಮಹೂರ್ತ

ಮದುಮಗಳ ಮನೆಯಲ್ಲಿ ಲಗ್ನಕ್ಕೆ ಕೆಲವು ದಿನ ಮೊದಲು ಒಂದು ಶುಭದಿನ ಶುಭವೇಳೆಯಲ್ಲಿ ಕನ್ಯೆಯನ್ನು ಅಲಂಕರಿಸುತ್ತಾರೆ. ಮನೆಯ ಅಂಗಳದ ಬಲಭಾಗದಲ್ಲಿ ಅತ್ತಿ ಮರದ ಕೊಂಬೆಯನ್ನು ಅಥವಾ ಹಾಲೆ ಮರದ ಗೆಲ್ಲನ್ನು ನೆಟ್ಟು ಐದು ಹಿಡಿ ಮಣ್ಣನ್ನು ಹಾಕಿ ಮುತ್ತೈದೆಯವರು ಹೂವು ಗಂಧ ಅಕ್ಷತೆಗಳಿಂದ ಪೂಜಿಸುವರು. ಮದುವೆ ಕಾರ್ಯಕ್ರಮಕ್ಕಾಗಿ  ಹಾಕಿದ ಒಲೆಗಳಿಗೆ ಕನ್ಯೆ ಬೆಂಕಿಯುರಿಸಿ ಎಸರಿಡುವ ಕಾರ್ಯಕ್ರಮವಿದೆ. ವರನ ಮನೆಯಲ್ಲೂ ಚಪ್ಪರ ಮುಹೂರ್ತ ನಡೆಯುತ್ತದೆ.

ಈ ದಿನದಿಂದ ಈ ಎರಡೂ ಮನೆಗಳಲ್ಲಿ ಮೀನು ಮಾಂಸ ಬಳಕೆಯಿಲ್ಲ. ಕನ್ಯೆಯ ಮನೆಯಲ್ಲಿ ಚಪ್ಪರದ ಕೆಲಸದೊಡನೆ ಅಗಸನೊಬ್ಬ ಬಂದು ಚಪ್ಪರಕ್ಕೆ ವಸ್ತ್ರ ಕಟ್ಟಿ “ಕೊಡಿ ಹಾಕುವ” ಕೆಲಸ ಮಾಡುತ್ತಾನೆ.

ಲಗ್ನಕ್ಕೆ ಎರಡು ದಿನವಿರುವಾಗ ವಿವಾಹ ಮಂಟಪ ರಚನೆ ಮಾಡಿರುತ್ತಾರೆ. ಮಂಟಪದೊಳಗೆ ಎರಡು ಆಸನಗಳ ವ್ಯವಸ್ಥೆ ಇರುತ್ತದೆ. ಅದು ವಧೂವರರಿಗಾಗಿ. ಅಗಸ ತಂದ ಮಡಿ ಬಟ್ಟೆಯನ್ನು ಅದಕ್ಕೆ ಹೊದೆಸುತ್ತಾರೆ. ಒಂದು ಕೋಣೆಯಲ್ಲಿ ಗೋಡೆಯಲ್ಲಿ ಬಾಸಿಂಗ, ತೊಂಡಿಲ, ಕಲಶ ಮೊದಲಾದ ಮಂಗಲ ಸಾಮಾಗ್ರಿಗಳ ಚಿತ್ರವನ್ನು ಬಣ್ಣಗಳಿಂದ ಹೆಂಗಸರು ಬಿಡಿಸುವರು. ಇಲ್ಲಿಂದ ತೊಡಗಿ ಮುಂದೆ ಐದು ದಿನಗಳವರೆಗೂ ಇರುವಂತೆ ಒಂದು ಚಾಪೆಯನ್ನು ಆ ಕೋಣೆಯಲ್ಲಿ ಬಿಡಿಸಿ ಅದರ ಮೇಲೆ ಮಡಿಸೀರೆ ಹಾಸುತ್ತಾರೆ. ವಧುವು ಆ ಐದು ದಿನಗಳಲ್ಲಿ ಹಸೆಯಿರುವ ಆ ಕೋಣೆಯಲ್ಲಿ ಉಳಿದುಕೊಳ್ಳಬೇಕೆಂದು ರೂಢಿ ಇದೆ.

ದಿಬ್ಬಣಿಗರಿಗಾಗಿ ಹೆಣ್ಣಿನ ಕಡೆಯವರು ಒಂದು ಉಗ್ರಾಣವನ್ನು ರಚಿಸಬೇಕು. ಅದು ಅವರಿಗಾಗಿ ಪ್ರತ್ಯೇಕವಾಗಿ ಉಳಿದುಕೊಳ್ಳುವ ಕೊಠಡಿ. ಮದುವೆ ಮುಗಿಸಿ ದಿಬ್ಬಣ ಮರಳಿ ಹೋಗುವವರೆಗೆ ಈ ಉಗ್ರಾಣ ಕೊಠಡಿಯಲ್ಲಿ ಪಾರಿತೋಷಕವಾಗಿ ಹಣ್ಣು ಹಂಪಲು, ತೆಂಗಿನಕಾಯಿ, ಒಂದು ವರಹ ಹಣ ಇಟ್ಟು ಹೋಗಬೇಕು. ಇದು ಈ ವ್ಯವಸ್ಥೆಗಾಗಿ ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಗೆ ಕೊಡುವ ಮರ್ಯಾದೆ.

ಚಪ್ಪರದ ಕಂಬಕ್ಕೆ ಕೈ ಮುಗಿದು “ಹುಡುಗಿಗೆ ಸೆರಗು ಹಾಕುತ್ತೇವೆ” ಎಂದು ಬಿನ್ನಹ ಮಾಡಿಕೊಳ್ಳುವ ಒಂದು ಪದ್ಧತಿಯೂ ಉಂಟು. ಶುಕ್ರವಾರ ಮತ್ತು ಮಂಗಳವಾರ ಮದುವೆ ಮಾಡುವುದಿಲ್ಲ. ಉಳಿದ ದಿನಗಳಲ್ಲಿ ಮುಹೂರ್ತ ನೋಡಿ ಮದುವೆ ಮಾಡುವುದು ರೂಢಿ.  ಮದುವೆ ಸಮಾರಂಭದಲ್ಲಿ ಗಂಡಸರ ಪಾತ್ರ ತೀರ ಕಡಿಮೆ. ಎಲ್ಲ ಕೆಲಸ ಹೆಂಗಸರದೇ ಮುತ್ತೈದೆ ಹೆಂಗಳೆಯರು ” ಅಡ್ಡೊರ್ಲು” (ಒಂದು ಬಗೆಯ ಶಾಲು) ಹಾಕಿಕೊಂಡು ಮದುವೆ ಮಂಟಪದಲ್ಲಿ ಮೆರೆಯುವ ಚಂದವೇ ಬೇರೆ.

ದಿಬ್ಬಣವನ್ನು ಎದುರುಗೊಳ್ಳುವುದು

ಹುಡುಗನ ದಿಬ್ಬಣ ಬಂದಾಗ ಚಪ್ಪರದ ಹೊರಗೆ ಸ್ವಾಗತ ಕಮಾನಿನ ಹತ್ತಿರ ಕಲಶ ಕನ್ನಡಿ ಉಪಚಾರ ಆಗಬೇಕು. ಹುಡುಗನ ಕಡೆಯವರೂ  ಕಲಶ ಕನ್ನಡಿಗಳನ್ನು ಮುಂದಿಟ್ಟುಕೊಂಡೇ ಬರಬೇಕು ಇವುಗಳನ್ನು ಹಿಡಿಯುವ ಕೆಲಸ ವಧುವಿನ ತಂಗಿ ಹಾಗೆಯೇ ವರನ ತಂಗಿ ಇವರಿಗೆ ಸೇರಿದ್ದು. ಅವರಿಲ್ಲವಾದರೆ ಮುತ್ತೈದೆ ಹೆಂಗಸರು, ಸಂಬಂಧಿಗಳು ಹಿಡಿಯುತ್ತಾರೆ. ಬಂದವರಿಗೆ ಮುಖ್ಯವಾಗಿ ಹೆಂಗಸರಿಗೆ – ಅರಿಶಿನ, ಕುಂಕುಮ, ಗಂಧ ಕೊಟ್ಟು ಸ್ವಾಗತಿಸುತ್ತಾರೆ. ವಧುವಿನ ತಮ್ಮ ವರನ ಪಾದ ತೊಳೆದು ಉಪಚಾರ ಮಾಡುತ್ತಾನೆ. ದೃಷ್ಟಿದೋಷ ನಿವಾರಿಸಲು ಒಂದು ತೆಂಗಿನಕಾಯಿಯನ್ನು ಪ್ರದಕ್ಷಿಣಾಕಾರ ಹಾಗೂ ಅಪ್ರದಕ್ಷೀಣಾಕಾರವಾಗಿ ಮೂರು ಸಲ ಸುಳಿದು ಅದನ್ನು ಒಡೆದುಬಿಡುತ್ತಾರೆ. ಅನಂತರ ತಾಂಬೂಲ ವಿನಿಮಯ. ಅದನ್ನು ಮೂರು ಸಲ ಕೊಟ್ಟು ತಕ್ಕೊಂಡು ಕೊನೆಗೆ ಕೊಟ್ಟು ಬಿಡುವುದು ಪದ್ಧತಿ. ಇದು ಮಾತ್ರ ಗಂಡಸರು ಮಾಡುವ ಕಾರ್ಯ. ಅನಂತರ ಎಲ್ಲರೂ ಚಪ್ಪರವನ್ನು ಪ್ರವೇಶಿಸುತ್ತಾರೆ. ಮದುಮಗನಿಗೆ ಒಂದು ಲೋಟ ಹಾಲು ನೀಡುತ್ತಾರೆ.

ಮಧುಮಗ ಹಾಗೂ ಮಧುಮಗಳು ಆ ದಿನ ಉಪವಾಸದಲ್ಲಿರುತ್ತಾರೆ (ನಿರಾಹಾರ). ಲಘುವಾಗಿ ಫಲಹಾರ ಸ್ವೀಕರಿಸಬಹುದು; “ಮುಸುರೆ” ತಿನ್ನಬಾರದು. ಬೀಗರಿಗೆ ತಿಂಡಿ ತೀರ್ಥ ಆದ ಆನಂತರ ಮದುವೆಯ ಮೊದಲ ಘಟ್ಟ.

ಮದುವೆ ಚಪ್ಪರದ ಮೂಲೆಯಲ್ಲಿ ಒಂದು ಹಾಲೆ ಮರದ ಕೊಂಬೆ ಇರಿಸಿ, ಅದರ ಬಳಿ ಗಣಪತಿ ದೇವರಿಗೆ ಐದು ಕುಡ್ತೆ ಅಕ್ಕಿ, ಹಾಕಿ ತೆಂಗಿನಕಾಯಿ ಇರಿಸಿ, ಐದು ಎಲೆ ಅಡಿಕೆ, ಅಡಿಕೆಹೋಳು ೫ ಇರಿಸುತ್ತಾರೆ.  ಇಲ್ಲಿಗೆ ಹುಡುಗಿಯ ತಾಯಿ ಮತ್ತು ಮುತ್ತೈದೆಯರು ಪೂಜೆ ಮಾಡುತ್ತಾರೆ. ವಿಘ್ನನಿವಾರಕ ಗಣಪತಿಯನ್ನು ವಿವಾಹ ಸಾಂಗೋಪವಾಗಿ ನಿರ್ವಿಘ್ನವಾಗಿ ನೆರವೇರಲು ಪ್ರಾರ್ಥಿಸುತ್ತಾರೆ. ಇದು ನಿರ್ದಿಷ್ಟ ಮುಹೂರ್ತದಲ್ಲಿ ನಡೆಯುತ್ತದೆ.

ಅನಂತರ ವೀಳ್ಯ ಬದಲಿಸುವುದು. ಹುಡುಗ ಹಾಗೂ ಹುಡುಗಿ ಕಡೆಯಿಂದ ೨೦೦ ಅಡಕೆ ಹಾಗೂ ೨೫ ಸೂಡಿ ಎಲೆಗಳ ವಿನಿಮಯ. ಮೂರು ಸಲ ಕೈ ಬದಲಿಸಿ ಕೊನೆಗೆ ಎಲ್ಲವನ್ನು ಹುಡುಗಿ ಕಡೆಯ ಹೆಂಗಸರಲ್ಲಿ ಕೊಡುತ್ತಾರೆ. ಕೆಲವೊಮ್ಮೆ ಎರಡೂ ಕಡೆಯ ಸಣ್ಣ ಪ್ರಾಯದ ಹುಡುಗ (ಹುಡುಗಿ ಕಡೆ) ಹುಡುಗಿ (ಹುಡುಗನ ಕಡೆ)ಯವರು ವೀಳ್ಯ ಬದಲಿಸುವುದುಂಟು. ಈ ಎಲೆ ಅಡಿಕೆಯನ್ನು ಮದುವೆಗೆ ಕೊನೆಗೆ ಸೇಸೆ, ಉಡುಗೊರೆ ಆಗಿ ಮಂಟಪದಿಂದ ಹೊರಬರಲು ನೆಂಟರಿಗೆ ನೀಡುತ್ತಾರೆ. ಐದು ಎಲೆ, ಒಂದು ಅಡಕೆಯಂತೆ ಮನೆಯೊಬ್ಬರಿಗೆ ನೀಡುತ್ತಾರೆ.

ಅರಸಿನೆಣ್ಣೆ

ಮದುವೆಯ ಮುಂದಿನ ಪ್ರಧಾನ ಘಟ್ಟವಿದು. ೪ ಅರಸಿನ, ಒಂದು ಮದುರಂಗಿ ಎಂಬ ಮಾತೇ ಇದೆ. ಈ ಅರಿಸಿನವನ್ನು ಹೆಂಗಸರು ಮೊದಲೇ ಅರೆದು ಸಿದ್ಧಪಡಿಸಿ ಇಟ್ಟಿರುತ್ತಾರೆ. ಮದುರಂಗಿ, ಅರಸಿನವನ್ನು ತರುವುದೇ ಒಂದು ಸಂಭ್ರಮದ ಕಾರ್ಯ. ಈ ಮದುರಂಗಿ ಅರಸಿನಗಳು ತುಂಬಿದ ಪಾತ್ರೆಯನ್ನು ಮುತ್ತೈದೆಯರು ಹಿಡಿದು ಮನೆಗೆ ಸುತ್ತು ಬರುತ್ತಾರೆ. ಇದಕ್ಕೆ ಪ್ರಧಾನವಾಗಿ ಐದು ಮಂದಿ ಮುತ್ತೈದೆಯರು ಬೇಕು. ಇದು ಹುಡುಗನಿಗೆ ಹಾಗೂ ಹುಡುಗಿಗೆ ಪ್ರತ್ಯೇಕವಾಗಿ ನಡೆಯಬೇಕು.

ವಧುವನ್ನು ವರನನ್ನು ಮುಂದೆಯಲ್ಲಿ ಕೂರಿಸುತ್ತಾರೆ. ಹುಡುಗನ ತಾಯಿ ಹುಡುಗನ “ಬಂದಿ ಎರಿಸಿ” (ಚಿನ್ನದ ಹಾರ ಹಾಕುವುದು) ಆಶೀರ್ವಾದ ಮಾಡುತ್ತಾರೆ. ಒಂದು ಕೋಲಿನ ತುದಿಗೆ ಮಾವಿನ ಎಲೆ ಅಥವಾ ಚೂರಿಯನ್ನು ಕಟ್ಟುತ್ತಾರೆ. ಅದಕ್ಕೆ ಅಂಬು ಅಥವಾ ಖಡ್ಗ ಎನ್ನುತ್ತಾರೆ. ಅದನ್ನು ಹಿಡಿದು ಸುಮಂಗಲೆಯರು ನಾಲ್ಕು ಬಾರಿ ಅರಸಿನ, ಒಂದು ಬಾರಿ ಮದುರಂಗಿ ಹಚ್ಚುತ್ತಾರೆ. ಪ್ರತಿ ಸಾರಿ ಹುಡುಗನಾಗಲಿ ಹುಡುಗಿಯಾಗಲಿ ಎದ್ದು ನಿಲ್ಲಬೇಕು. ಅರಸಿನ ಹಚ್ಚುವವರು “ಹುಡುಗನಿಗೆ ಬಂದಿ ಏರಿಸ್ತೇನೆ” ಹುಡುಗಿಗೆ ಬಂದಿ ಏರಿಸ್ತೇನೆ ಅಂತ ಹೇಳಬೇಕು. ಅನಂತರ ಕೂರಬೇಕು. ಹೀಗೆ ಏಳುವುದು ಕೂರುವುದು (ಜನ ಹೆಚ್ಚಿದ್ದರೆ ಹೆಚ್ಚು ಸಲ) ನಡೆದು ವಧುವರರೂ ಸುಸ್ತಾಗಿ ಬಿಡುತ್ತಾರೆ. ಸಹಕಾರಕ್ಕೆ ಸಣ್ಣ ಹುಡುಗರು ಕೈ ಹಿಡಿದುಕೊಳ್ಳುತ್ತಾರೆ. ಅರಸಿನವನ್ನು ಪಾದದಿಂದ ಮೇಲಕ್ಕೆ , ಎಡ ಬಲ ಸಂದು ಹಾಗೂ ಹಣೆಗೆ ಹಚ್ಚುತ್ತಾರೆ.

ಇನ್ನೊಂದು ಕಡೆಯಲ್ಲಿ ಪುರೋಹಿತರು ಚಪ್ಪರ ಮಂಟಪದಲ್ಲಿ ಮಂಡಲ ಬರೆದು  (ಕಳ ಹಾಕಿ) ಕಲಶೋದಕ್ವನ್ನು (ಮಂತ್ರ ಜಪ ಮಾಡಿ) ಇರಿಸುತ್ತಾರೆ. ಎರಡೂ ಕಡೆಯ ಇಬ್ಬಿಬ್ಬರು ಮುತ್ತೈದೆಯರು ಬಂದು ವಧೂ ವರರನ್ನು “ಕಲಶ ಸ್ನಾನ” ಮಾಡಿಸುತ್ತಾರೆ. ಇದಕ್ಕೆ ” ಮೇಲ್ ನೀರು ಸ್ನಾನ” ಎಂದು ಹೇಳುತ್ತಾರೆ.

ಕೋಟೆಯವರಲ್ಲಿ ಹೆಣ್ಣಿಗೆ ಈ ಸ್ನಾನದ ಅನಂತರ “ಅಂಕೋಲೆ ಸೀರೆ” ಉಡಿಸುತ್ತಾರೆ. ಹಣೆಗೆ ಹಿಟ್ಟಿನ ಬೊಟ್ಟು ಇಟ್ಟು ಒಂದು ಅತ್ತಿಮರದ ಕೊಡಿಯನ್ನು ನೆಟ್ಟು ಪುರೋಹಿತರ ಮಂತ್ರಘೋಷದೊಂದಿಗೆ ಬರುತ್ತಾರೆ. ಅಲ್ಲಿ ಅತ್ತಿ ಮರಕ್ಕೆ ಅವಳನ್ನು ಧಾರೆಯರೆದು ಕೊಡುತ್ತಾರೆ. ಆ ಸಮಯದಲ್ಲಿ ವಧುವರರನ್ನು (ಮತ್ತಿಮರವನ್ನು) ಹುಡುಗಿ ನೋಡಬಾರದು. ಇದು “ಅಂಕೋಲೆಧಾರೆ”. ಇದಾದ ಬಳಿಕ ವಧುವಿನ ಎರಡೂ ಪಕ್ಕದಲ್ಲಿ ಆಕೆಯ ತಂದೆ ತಾಯಿ ನಿಲ್ಲುತ್ತಾರೆ. ಇತರರು ಆ ಮೂವರ ತಲೆಗೆ ಬಿಳಿವಸ್ತ್ರದಿಂದ ಮುಸುಕು ಹಾಕುವರು. ಅನಂತರ ತಂದೆ ತಾಯಿ ಮಗಳನ್ನು ಕರೆದು ಮನೆಯ ಹೊಸ್ತಿಲ ಎದುರು ಅಂಗಳದಲ್ಲಿ ಕುಳಿತುಕೊಳ್ಳುವರು. (ಇದು ದುಃಖಸೂಚಕ). ಅಲ್ಲಿ ಇದು ಮಣ್ಣಿನ ಬಿಂದಿಗೆಗಳನ್ನು ತಂತಮ್ಮ ಸೀರೆ ಸೆರಗಿನಿಂದ ಮುಚ್ಚಿಡುವರು. ವಧುವಿನ ಎಡದ ಸೊಂಟಕ್ಕೆ ಮುಟ್ಟಿಸಿ, ತೆಂಗಿನ ಮರದ ಬುಡಕ್ಕೆ ಎಸೆಯುವರು. ಅನಂತರ ಪುರೋಹಿತರು “ನವಕನ್ಯಾ” ಎಂದು ಉದ್ಘೋಷಿಸಿ ಆ ವಧುವಿನ ತಲೆಗೆ ಮಂತ್ರಾಕ್ಷತೆ ಎರಚುವರು. ಅಲ್ಲಿ ಒಂದು ಸಲ ಅವಳಿಗೆ ಆರತಿ ಎತ್ತಿ ಅನಂತರ ಹಸೆಗೆ ಬಂದು ನೂತನ ಅಲಂಕಾರಕ್ಕೆ ಸಿದ್ಧತೆ.

ಈ ಅಂಕೋಲೆಧಾರೆ ಎಲ್ಲಾ ಕ್ಷತ್ರೀಯ ಪಂಗಡಗಳಲ್ಲಿ ಚಾಲ್ತಿಯಲ್ಲಿಲ್ಲ. ವೈಧವ್ಯ ವಿಧುರ ಯೋಗ ಪರಿಹಾರಕ್ಕಾಗಿ ಕ್ಷತ್ರಿಯರಲ್ಲಿ ಇದು ಕಡ್ಡಾಯವೆಂದು ಆಚರಣೆಯಲ್ಲಿ ಹಿಂದೆ ನಡೆಯುತ್ತಿತ್ತು.

ಲಗ್ನದವರೆಗೆ ಕನ್ಯೆ ವೀಳ್ಯ ಸೇವನೆ ಮಾಡಕೂಡದು. ಅಂಕೋಲೆ ಧಾರೆಯಾದೊಡನೆ ಅವಳು ಗೃಹಿಣಿಯಾದಳು ಎಂಬುದರ ಸೂಚನೆಯಂತೆ ವೀಳ್ಯದೆಲೆ “ಸಂಚಿ”ಯನ್ನು ದೇವಕನ್ಯೆಯರು ಬಿಸುಟರು ಎಂಬಂತೆ ವೀಳ್ಯ ಎಸೆಯುವ ರೂಢಿ ಇದೆ. ಅಂದರೆ ಮತ್ತೆ ಕನ್ಯೆಯಾಗುತ್ತಾಳೆ ಎಂದು ಭಾವನೆ.

ಇದಾದ ಅನಂತರ ವಧುವಿಗೆ ಸಿಂಗಾರ. ಹುಡುಗಿ ಉಡಬೇಕಾದ ಧಾರಸೀರೆಯನ್ನು ಹುಡುಗನ ಕಡೆಯವರು ತಂದು ಹುಡುಗಿಯ ತಾಯಿಯ ಕೈಯಲ್ಲಿ ಕೊಡಬೇಕು. ಆಭರಣವಿದ್ದರೆ ಅದನ್ನು ಆಗಲೇ ನೀಡಬೇಕು. ಕರಿಮಣಿಯನ್ನು ಮಾತ್ರ ಮಂಟಪದಲ್ಲಿ ಧಾರೆಯ ವೇಳೆಗೆ ಹಾಕುವುದು (ಹಾರ ಬದಲಿಸಿದ ಮೇಲೆ). ಕಲಶ ಸ್ನಾನವಾದ ಹುಡುಗಿಗೆ ಮಡಿವಾಳತಿ ಒಂದು ಮೊದಲ ಮಡಿಸೀರೆ ಉಡಿಸುತ್ತಾಳೆ. ಕುರುದಿನೀರು ತೋರಿಸಿ ನಿವಾಳಿಸುತ್ತಾರೆ. ಧಾರೆಸೀರೆಯನ್ನು ಉಡಿಸಿ, ಹೂ ಮುಡಿಸಿ ಬಾಸಿಂಗ ಕಟ್ಟಿ ಅಲಂಕಾರ ಮಾಡುತ್ತಾರೆ.

ಇನ್ನೊಂದು ಕಡೆ ಹುಡುಗನಿಗೆ ಜನಿವಾರ (ಯಜ್ಞೋಪವೀತ) ಹಾಕುತ್ತಾರೆ. ಮೊದಲೇ ಉಪನಯವಾಗದಿದ್ದಲ್ಲಿ ಈ ಕಟ್ಟಳೆ ನಡೆಯುತ್ತವೆ. ಅನಂತರವೇ ಹುಡುಗನ ಅಲಂಕಾರ. ಬಾಸಿಂಗ ಕಟ್ಟಿದಲ್ಲಿಗೆ ಮಧುಮಗ ಮದುವೆಗೆ ಸಿದ್ಧನಾದಂತೆ.

ಹುಡುಗಿಯನ್ನು ಧಾರೆಗೆ ಬರುವಾಗ ಭಾವ (ತಂಗಿ ಗಂಡ ಅಥವಾ ಅಕ್ಕನ ಗಂಡ) ಕೊಡೆ ಹಿಡಿಯಬೇಕು. ಹುಡುಗಿಯ ಸೋದರ ಪಾದಕ್ಕೆ ನೀರು ಹಾಕಿ ವರನನ್ನು ಸ್ವಾಗತಿಸಬೇಕು. ವಧುವಿನ ತಂದೆ, ಆತನನ್ನು ಮಂಟಪಕ್ಕೆ ಕರೆತರಬೇಕು. ಆಗ ಒಂದು ಚಿಕ್ಕ ತೆಂಗಿನಕಾಯಿಯನ್ನು ಅವನ ಕೈಗೆ ಕೊಡಬೇಕು (ಹಿಡಿಕಾಯಿ).

ಮಂಟಪದಲ್ಲಿ ಅಂತಃಪಟ (ಪರದೆ) ಕಟ್ಟಿರುತ್ತಾರೆ. ಮೂಡುದಿಕ್ಕಿಗೆ ಮುಖ ಮಾಡಿ ಒಂದು ಪುಟ್ಟ ಅಕ್ಕಿ ರಾಶಿಯ ಮೇಲೆ ವಧು ಹಾಗು ಪಡುದಿಕ್ಕಿಗೆ ಮುಖ ಮಾಡಿ ಒಂದು ಸಾಣೆ ಕಲ್ಲಿನ ಮೇಲೆ ವರನನ್ನು ನಿಲ್ಲಿಸುತ್ತಾರೆ. ಪರದೆ ತೆಗೆದ ಮೇಲೆ ಮೊದಲು ವಧು ವರನ ಕೊರಳಿಗೆ ಅನಂತರ ವರ ವಧುವಿನ ಕೊರಳಿಗೆ ಮಾಲೆ ಹಾಕಿಕೊಳ್ಳುತ್ತಾರೆ.

ಮಾಂಗಲ್ಯ ಸೂತ್ರಧಾರಣೆಗೆ ಅಥವಾ ಕರಿಮಣಿ ಕಟ್ಟುವ ಕಾರ್ಯ ಇನ್ನು ಮುಂದೆ ನಡೆಯುತ್ತದೆ. ಇದಾದ ಮೇಲೆ “ಸೂತ್ರ ಪರಿವೇಷ್ಟನ”. ವಧೂವರರನ್ನು ೮ ಸುತ್ತು ಬಿಳಿನೂಲಿನಿಂದ ಬಂಧಿಸುತ್ತಾರೆ. ಆಮೇಲೆ ಅದನ್ನು ಮಧ್ಯದಿಂದ ತುಂಡು ಮಾಡಿ ಮೇಲಿನಿಂದ ತೆಗೆದ ತುಂಡನ್ನು ವಧುವಿನ ಬಲಗೈಗೂ ಕೆಳಗಿನಿಂದ ತೆಗೆದ ತುಂಡನ್ನು ವರನ ಎಡಗೈಗೂ ಅಶ್ವತ್ಥ ಎಲೆಯಲ್ಲಿ ಸುತ್ತಿದ ಅರಿಶಿನ ತುಂಡು ಸೇರಿಸಿ ಕಟ್ಟುವರು. ಇದು ಕಂಕಣ ಬಂಧ”.

ಧಾರೆ

ಮಹೂರ್ತಕ್ಕೆ ಹುಡುಗಿಯ ತಂದೆ ೧೦ ಜನರ (ಸಭಾಸದರ) ಅನುಮತಿ ಕೇಳಿ ಕೈಯಲ್ಲಿ ನೀರಿನ ಗಿಂಡಿಯನ್ನು ಹೆಗಲಲ್ಲಿ ಹೊತ್ತು ಹಿಡಿದು ಬರುತ್ತಾನೆ. ತಾಯಿ ಒಂದು  ಹರಿವಾಣವನ್ನು ಹಿಡಿದಿರುತ್ತಾರೆ. ಮಂಟಪ್ಕ್ಕೆ ಹೀಗೆಯೇ ಮೂರು ಸುತ್ತು ಬರುತ್ತಾರೆ. ಮಂಟಪದ ಹತ್ತಿರ ಇತರರು ಎಂದರೆ ಕಲಶ ಕನ್ನಡಿಯವರು, ಗಂಡಿನ ಕಡೆಯ ಮುತ್ತೈದೆಯರು, ಹೆಣ್ಣಿನ ತಂದೆ ತಾಯಿ, ಪುರೋಹಿತರು ಇರುತ್ತಾರೆ. ಪುರೋಹಿತರು ಇರುತ್ತಾರೆ. ಪುರೋಹಿತರ ಗೋತ್ರ ಸೂತ್ರ ಪ್ರವರ ನಾಮಗಳನ್ನು ಉಧ್ಘೋಷಿಸುತ್ತಾರೆ. ಆಮೇಲೆ ಧಾರೆ.

ಕರಿಮಣಿ ಕಟ್ಟುವ ಮೊದಲು ಹತ್ತು ಜನ ಮುತ್ತೈದೆಯರು ಮುಟ್ಟಬೇಕು. ಧಾರೆಯಾದ ಮೇಲೆ ಸಿಹಿತಿಂಡಿ, ಲಘುಪಾನೀಯ, ಹೂವು ಕುಂಕುಮ ನೀಡುತ್ತಾರೆ. ಸಕ್ರೆ ತೊಟ್ಟೆ ಅಥವಾ ಸಕ್ರಿ ಪೀಘ್ಳಿ ಹಂಚುವುದು ಹಿಂದೆ ನಡೆಯುತ್ತಿತ್ತು. ಸಕ್ಕರೆ ಮತ್ತು ಅರಳು ಹುಡಿಯ ಪೊಟ್ಟಣ ಮಾಡಿ ಹಂಚುತ್ತಿದ್ದರು. ಇದೇ ಸಕ್ರೆ ತೊಟ್ಟೆ.

ಧಾರೆ ಎರೆದವರಿಗೆ ಸೀರೆ ಪಂಚೆ ಮರ್ಯಾದೆಯನ್ನು ಹುಡುಗನ ಕಡೆಯವರು ನೀಡಬೇಕು. ಲಾಜಹೋಮ, ಆಶ್ಮಾರೋಹಣ ಮತ್ತು ಸಪ್ತಪದಿಗಳು ಅನಂತರದ ಕ್ರಿಯೆಗಳು.

ಮೋದಲು ಲಾಜಹೋಮ ನಡೆಯುತ್ತದೆ. ವಧುವಿನೊಂದಿಗೆ ವರನು ಹೋಮ ಕುಂಡಕ್ಕೆ ಸುತ್ತು ಬರುತ್ತಾನೆ. ಹುಡುಗನ ಕೈಮೇಲೆ ಹುಡುಗಿಯ ಕೈಯನಿಟ್ಟು ಹುಡುಗಿಯ ಸೋದರ ಲಾಜ (ಅರಳು) ವನ್ನು ತುಂಬುತ್ತಾನೆ. ಅದನ್ನು ಸುತ್ತು ಬರುತ್ತಾ ಹುಡುಗ ಹೋಮಕ್ಕೆ ಹಾಕಿಸಬೇಕು. ಅರಳು ತುಂಬಿಸಿದ ಹುಡುಗಿಯ ತಮ್ಮನಿಗೆ ವರ “ಮರ್ಯಾದೆ” ಕೊಡಬೇಕು (ಹಣ ಅಥವಾ ವಸ್ತು ರೂಪದಲ್ಲಿ).

ಆನಂತರ ಸಪ್ತಪದಿಯ ವಿಧಿ. ಅಗ್ನಿಕುಂಡದ ಈಶಾನ್ಯ ದಿಕ್ಕಿನಲ್ಲಿ ಒಂದು ಸಾಣೆಕಲ್ಲನ್ನು ಇರಿಸಿರುತ್ತಾರೆ. ವರನು ವಧುವಿಗೆ ಆ ಕಲ್ಲನ್ನು ತೋರಿಸಿ ಆ ಕಲ್ಲನ್ನು ಏರಿನಿಲ್ಲು, ಕಲ್ಲಿನಂತೆ ಗಟ್ಟಿಯಾಗಿರು, ಶತ್ರುಗಳನ್ನು ಗೆಲ್ಲು ಎಂದು ಹೇಳಿ ಕೈ ಹಿಡಿದು ಏರಿಸುವನು. ಇದು ಅಶ್ಮಾರೋಹಣ.

ಮತ್ತೆ ಪ್ರತಿಜ್ಞಾ ವಾಕ್ಯದೊಂದಿಗೆ ಪುರೋಹಿಸ್ತರ ಮಂತ್ರ ಘೊಷದೊಂದಿಗೆ ವಧುವಿನೊಂದಿಗೆ ವರನು ಅಕ್ಕಿಯ ಪುಟ್ಟದಾದ ಏಳು ರಾಶಿಗಳನ್ನು ಮೆಟ್ಟಿಸುತ್ತಾ ಬರುತ್ತಾನೆ. ಇಲ್ಲಿ ಸಖಾಸಪ್ತಪದೀ ಭವ ಹೆಜ್ಜೆಯೇಳರಲ್ಲಿ ನೀನು ಗೆಳತಿಯಾಗಿದ್ದೀ ಹೀಗೆಯೇ ಚಿರಂತನ ಗೆಳತಿಯಾಗಿರು ಎಂದು ಹಾರೈಸುತ್ತಾನೆ.

ಹುಡುಗಿಯು ತಮ್ಮ ಹೋಮವಾದೊಡನೆ ಒಂದು ಸರಪಳಿ ದೀಪ ಹಿಡಿದುಕೊಡು ಭಾವವನ್ನು ಹಸೆಗೆ ಕರೆತರುವುದು. ಅಲ್ಲಿ ಬಾಸಿಂಗ ಬಿಚ್ಚುವುದು. ಬಳಿಕ ಧಾರೆಯೂಟ. ಈ ಉಟವನ್ನು “ಅರಸಿನೆಣ್ಣೆ ಊಟ” ಎಂದೂ ಕರೆಯುತ್ತಾರೆ.

ಊಟಕ್ಕೆ ಮೊದಲು ಸೇಸೆಯಾಗುತ್ತದೆ. ಆಗ ಸೇಸೆ ಮಾಡಿದ ಪ್ರತಿ ಮನೆಯವರಿಗೂ ವೀಳ್ಯದೆಲೆ ಅಡಿಕೆ ಮರ್ಯಾದೆ ಕೊಡಬೇಕು. ಒಸಗೆ ಇಕ್ಕಲು ಪ್ರತಿಯೊಬ್ಬರಿಗೆ ಎರಡೆರಡು ರೂಪಾಯಿ ಕೊಡುವ ಕ್ರಮವಿದೆ. ಇದರಲ್ಲಿ ಮದುವೆಗೆ ಬಂದ ಬಂಧುಗಳ ಲೆಕ್ಕವೂ ಗೊತ್ತಾಗುತ್ತದೆ.