ವೀಳೆಯದ ಕಥೆ

ವೀಳ್ಯದ ಎಲೆ, ಅಡಿಕೆ, ಸುಣ್ಣ – ಇವುಗಳನ್ನು ಮೆಲ್ಲುವ ಅಭಿರುಚಿ ಕೋಟೆಯವರಲ್ಲಿ ಸಾಮಾನ್ಯವಾಗಿ ಸಾರ್ವತ್ರಿಕವಾಗಿದೆ. ಶುಭ ಸಮಾರಂಭಗಳಲ್ಲಿ ವೀಳ್ಯ ಉಪಚಾರಕ್ಕಾಗಿ ಹಾಗೂ ತಿನ್ನುವದಕ್ಕಾಗಿ ಇದ್ದೇ ಇರುತ್ತದೆ. ಹಾಗಾಗಿ ಇದಕ್ಕಾಗಿ ಒಂದು ರೋಚಕ ಕಥೆ ಅವರಲ್ಲಿ ಪ್ರಚಲಿತವಿದೆ. ಇದರ ರಚನಕಾರ ಅನಾಮಿಕ. ತಲೆಮಾರಿನಿಂದ ಹಿರಿಯರಿಂದ ಕಿರಿಯರಿಗೆ ಹರಿದುಬಂದ ಕಥೆಯಿದು.

ಒಂದೂರಿನ ಅರಸನ ಮಗನೂ ಪ್ರಧಾನಿಯ ಮಗನೂ ದೇಹವೆರಡಾದರೂ ಜೀವ ಒಂದೇ ಎಂಬಂತಿದ್ದರು. ಒಮ್ಮೆ ತಿರುಗಾಡುತ್ತಾ ಯಾವುದೋ ಒಂದು ಊರಿನ ಕೆರೆಕಟ್ಟೆಯ ಮೇಲೆ ವಿಶ್ರಾಂತಿಗೆ ಕುಳಿತರು. ಅಲ್ಲಿಗೆ ಬಂದ ಜರಿಕುಪ್ಪಸದ ಸುಂದರ ತರುಣಿಯನ್ನು ನೋಡಿ ರಾಜಕುಮಾರ ಮೋಹಿಸಿದ. ಆಕೆ ನೀರನ್ನು ಒಯ್ದು ಹೋದ ಮೇಲೆ ಕಾತರಿಸಿದ ರಾಜಕುಮಾರನ ಗೆಳೆಯ ಆಕೆಯನ್ನೂ ಆತನನ್ನೂ ಒಂದಾಗಿಸುವ ಶಪಥ ಮಾಡಿದ.

ಪ್ರಧಾನಿಯ ಮಗನು ರತ್ನ ವ್ಯಾಪಾರಿಯ ವೇಷದಲ್ಲಿ ಊರಿನ ಬೀದಿಯಲ್ಲಿ ರತ್ನ ವ್ಯಾಪಾರಕ್ಕಾಗಿ ಬಂದ. ರತ್ನಗಳ ಖರೀದಿಗೆ ಚಿಲುವಿನ ನಾರೀ ರತ್ನವಾದ ಆ ಹುಡುಗಿಯೂ ಬಂದಳು. ಆಕೆಗೂ ಮುತ್ತು ಬೇಕಿತ್ತು. ರತ್ನ ವ್ಯಾಪಾರಿಯನ್ನು ತನ್ನ ತಂದೆಯ ಬಳಿ ಕರೆತಂದಾಗ ಆತ ವ್ಯಾಪಾರಿಯ ನಿಜವನ್ನು ಗುರುತಿಸಿ ಆತನೇ ತನ್ನ ಈ ಮಗಳನ್ನು ಬಾಲ್ಯದಲ್ಲಿ ಮದುವೆಯಾದ “ಕಂಗುವರ್ಮ” ಎನ್ನುತ್ತಾನೆ. ಕಂಗುವರ್ಮ ಆಘಾತಕ್ಕೊಳಗಾದ ತನ್ನ ಮಿತ್ರ ಬಯಸಿದ ತನ್ನ ಸತಿಯನ್ನೇ. ಆತ ಕೊಟ್ಟ ಮಾತಿಗಾಗಿ ಪತ್ನಿ ತನ್ನ ಸ್ನೇಹಿತನನ್ನೇ ಕೊಡಬೇಕೆಂದು ಹೇಳುತ್ತಾನೆ. ಆ ತರುಣಿಯ ಹೆಸರು ನಾಗಮ್ಮ. ಹೂವಿನ ಹಾಸುಗೆಯನ್ನೇರುವಾಗ ವಿಷದ ಮುಳ್ಳು ಕಂತಿದಂತಾಯಿತು. ರಾಜಕುಮಾರನನ್ನು ಅಂತಃಪುರಕ್ಕೆ ಕಂಗುವರ್ಮ ಬರಿಸುತ್ತಾನೆ. ಆಗ ಆಕೆ ಆತನನ್ನು ಅಣ್ಣನೆಂದು ಸಂಬೋಧಿಸಿ ತನ್ನ ಹಾಗೂ ಕಂಗುವರ್ಮನ ನಿಜವನ್ನೆಲ್ಲ ಬಿತ್ತರಿಸುತ್ತಾಳೆ.

ರಾಜಕುಮಾರನು ಆಶ್ಚರ್ಯಗೊಂಡು ತನ್ನ ಮಿತ್ರನ ಗುಣವನ್ನು ಮೆಚ್ಚಿನ ಆತನ ಪತ್ನಿಯನ್ನು ಬಯಸಿದ ತಾನು ಉಳಿಯಬಾರದೆಂದು ಕಠಾರಿಯಿಂದ ಇರಿದುಕೊಂಡು ಸಾಯುತ್ತಾನೆ. ಪತಿಯ ಮಾತನ್ನು ನಡೆಸಲಾರದೆ ತಾನು ಬದುಕಿರಬಾರದೆಂದು ಕಠಾರಿಯಿಂದ ಇರಿದುಕೊಂಡು ನಾಗವಲ್ಲಿ ಸಾಯುತ್ತಾಳೆ. ಅರುಣೋದಯಕ್ಕೆ ಬಂದ ಕಂಗುವರ್ಮ ಈ ದೃಶ್ಯವನ್ನು ನೋಡಿ ತಾನೂ ಮಿತ್ರನ ಕಠಾರಿಯನ್ನು ಎಳೆದು ಇರಿದುಕೊಂಡು ಸಾಯುವನು.

ಬೆಳಗಾದಾಗ ಈ ದಾರುಣ ದೃಶ್ಯವನ್ನು ನೋಡಿ ಎಲ್ಲರೂ ದಂಗಾದರು. ಕಂಡವರೆಲ್ಲ ಮನ ಮರುಗಿದರು. ಅಷ್ಟರಲ್ಲಿ ಅಲ್ಲಿಗೆ ಬಂದ ಒಬ್ಬ ವೃದ್ಧ ಸನ್ಯಾಸಿಯು ಕಂಗುವರ್ಮನನ್ನು ಮುಟ್ಟಿದನು. ಕಂಗುವರ್ಮ ಜೀವ ತೆಳೆದು ಎದ್ದು ರಾಜಕುಮಾರನನ್ನು ಅಪ್ಪಿಕೊಂಡನು. ಅವನೂ ಬದುಕಿ, ನಾಗವಲ್ಲಿಯ ಕಾಲಿಗೆರಗಿದನು. ಅವಳೂ ಎಚ್ಚೇತ್ತು ಕಾಲಗೆರಗಿದಳು. ವೃದ್ಧ ಸನ್ಯಾಸಿ “ಪವಿತ್ರ ಮೈತ್ರಿ ಎಂದರೆ ಇದು. ಈ ನೆನಪು ವೀಳೆಯ ರೂಪದಲ್ಲಿ ಜನರ ಬಾಯಲ್ಲಿ ಉಳಿಯಲಿ” ಎಂದು ಹೇಳಿ ಅದೃಶ್ಯನಾದನಂತೆ”.

ಕೋಟೆಯವರ ಅಜ್ಜಿಕತೆಗಳಿಗೆ ಒಂದು ಉದಾಹರಣೆ

ಹುಲಿತಾಕು ಕತೆ

“ತಾಕು” ಅಜ್ಜ ಚಿತ್ತಾರಿ ಪ್ರದೇಶದಲ್ಲೆಲ್ಲ ಹೆಸರಾದವನು. ತುಂಬ ಧೈರ್ಯಶಾಲಿ, ಸಾಹಸಿಯಿದ್ದ ನೀತ. ಊರಿನಲ್ಲೆಲ್ಲ ತನ್ನ ಬಹುವಿಧ ಚಟುವಟಿಕೆಯಿಂದ ಪ್ರಸಿದ್ಧನಾಗಿದ್ದ. ವೇಷ ಹಾಕುವದರಲ್ಲೂ ನಿಪುಣ. ಹಾಗಾಗಿ ರೂಢಿಯಲ್ಲಿ ಒಂದು ಮಾತು “ತಾಕಜ್ಜನ ಯೇಸ, ಬಾಲು ಅಜ್ಜಿ ಮಾಸ” (ಮಾಂಸ) ಚಾಲ್ತಿಯಲ್ಲಿತ್ತು.

ಒಂದು ಬಾರಿ ಚಿತ್ತಾರಿಯ “ಕೊಪ್ಲು” ಎಂಬಲ್ಲಿ ವಿಷ್ಣುಮೂರ್ತಿ ದೈವದ ಒತ್ತೆಕೋಲ (ಒಂದೇ ದೈವದ ಆಟ) ವಿಷ್ಣುಮೂರ್ತಿ ಮರದ ಹುಲಿಯ ಮೇಲೆ ಸವಾರಿ ಮಾಡುತ್ತಾ ಬರುತ್ತಿರುವಾಗ ಸೇರಿದ ಗುಂಪಿನಲ್ಲಿ ಯಾರೋ ಅದು ನಿಜದ ಹುಲಿಯಲ್ಲ, ಬೊಂಬೆ, ಅದರ ಮೇಲೆ ಕುಳಿತ ಇವನೇನು ಮಹಾ? ಎಂದನಂತೆ. ಆಗ ಇದನ್ನು ಗಮನಿಸಿದ ವಿಷ್ಣುಮೂರ್ತಿ ದೈವದ ವೇಷಹಾಕಿದವನು ಇದು ನಿಜದ ಹುಲಿಯೆಂದು ತೋರಿಸಿಕೊಡುವಂತೆ ಅದರ ಮೈಯಿಂದ ಸ್ವಲ್ಪ ರೋಮವನ್ನು ಕಿತ್ತು ತೋರಿಸಿದನಂತೆ. ಆಗ ಅದನ್ನು ಕೃತಕ ಎಂದು ಕೆಲವರು ಹಾಸ್ಯ ಮಾಡಿದರಂತೆ ಆಗ ಆತ ನಿಜದ ಹುಲಿಯನ್ನೇ ಊರ ಮೇಲೆ ಬಿಡುತ್ತೇನೆ ಎಂದನಂತೆ. ಸ್ವಲ್ಪ ಹೊತ್ತಿನಲ್ಲಿ ಒಂದು ಹೆಬ್ಬುಲಿ ಊರಲ್ಲಿ ಕಾಣಿಸಿತಂತೆ. ಅದು ಏತದ ಕಂಬದ ಮೇಲೆ ಹತ್ತಿ ಕೂತಿತಂತೆ. ಊರವರೆಲ್ಲ ಭಯದಿಂದ ಮನೆಯೊಳಗೆ ಸೇರಿದರಂತೆ.

ಆಗ ಅಲ್ಲಿಗೆ ತಾಕಜ್ಜ ಬಂದು ಕೋವಿ ಗುರಿಯಿಟ್ಟನಂತೆ. ಹುಲಿ ತಕ್ಷಣ ಕೆಳಗೆ ಬಾವಿಗೆ ಹಾರಿತಂತೆ. ತಾಕಜ್ಜ ಏನಾಯಿತೆಂದು ಕೆಳಗೆ ಇಣುಕಿದಾಗ ಅದು ಮೇಲಕ್ಕೆ ಹಾರಿ ತಾಕಜ್ಜನ ಮುಖವನ್ನು ಪರಚಿತಂತೆ. ಆಮೇಲೆ ಹೋದದ್ದು ಮತ್ತೆ ಕಾಣಲಿಲ್ಲ.

ಕೋಟೆಯವರ ಗಾದೆಗಳು

ಗಾದೆಗಳೆಂದರೆ ಒಂದು ಜನಾಂಗಕ್ಕೆ ಮೀಸಲಾಗಿರುವದು ಸಾಧ್ಯವಿಲ್ಲ.

ಉದಾ: ಕುಣೀಲಿಕೆ ತಿಳಿಯದವನಿಗೆ ಅಂಗಳ ವಾರೆ ಅಂತೆ

ಸಂತೆ ಕಟ್ಟೆಗೆ ನಾಯಿ ಹೋದ ಹಾಗೆ

ಸೋತು ನೋಡು ಸಂಗತಿ ಗುಣ ಹೇತು ನೋಡು ಹೆಂಡ್ತಿ ಗುಣ

ಹಿರೀರ ಮಾತು ಕೇಳ್ಬೇಕು, ಮುದಿನೆಲ್ಲಿಕ್ಯಾ ತಿನ್ಬೇಡ

ತಾಕಜ್ಜನ ಯೇಸ, ಬಾಲು ಅಜ್ಜನ ಮಾಸ (ಮಾಂಸ)

ಕೆಲವು ಸ್ವಾರಸ್ಯವಾದ ನುಡಿಗುಟ್ಟುಗಳು

೧. ಕೊತಲಿ ಕುಟ್ಟೇನು ಕುಡ್ಕೇಲ್ ನೀರು ಹೊತ್ತೇನು
ಸೊಸೆಯೆಂಬ ಗೆಸಣಿ ನನಗ್ಬೇಡಾ
ಬಸವನಾಗಿ ತಿರುಗುವೆ…..

೨. ಮಾರಿ ತುರಿಸ್ದಾಗೆ ತಲೆ ಸುರಿಸ್ತಾನೆ

೩. ನೀನು ರಂಪಿಗೆ ಎಳ್ ಯೋದ್ ನಿಲ್ಸು (ರಂಪಿಗೆ ಎಂದರೆ ಕ್ಷೌರದ ಕತ್ತಿ)

೪. ನಿನ್ನ ರಂಪಿಗೆ ನಿಲ್ಲಿಸು (ಉದ್ದ ಮಾತಾಡುವದನ್ನು ನಿಲ್ಲಿಸು)

ಮಹಿಳೆಯರ ಸಾಮಾಜಿಕ – ಅರ್ಥಿಕ ಸ್ಥಿತಿಗತಿ

ಕೋಟೆ ಜನಾಂಗದ ಹೆಣ್ಣು ಮಕ್ಕಳು ಹಿಂದೆ ಶಿಕ್ಷಣದಿಂದ ದೂರವಿದ್ದರು. ತೀರಾ ಹೆಚ್ಚೆಂದರೆ ನಾಲ್ಕನೆಯ ತರಗತಿಯವರೆಗೆ ಓದಿಸುತ್ತಿದ್ದರು. ಅನಂತರ ಮದುವೆಯಾಗುತ್ತಿತ್ತು. ಶಿಕ್ಷಣ – ಉದ್ಯೋಗ – ಆರ್ಥಿಕ ಸ್ವಾವಲಂಬನೆ ಇತ್ಯಾದಿಗಳ ಕಲ್ಪನೆಗಳು ಆಗ ಇರಲಿಲ್ಲ. ಹೆಚ್ಚೇಕೆ ಇತ್ತೀಚಿನ ಮೂರು ನಾಲ್ಕು ದಶಕಗಳವರೆಗೂ ಪರಿಸ್ಥಿತಿ ಹಾಗೆಯೇ ಇತ್ತು. ಸಾರ್ವತ್ರಿಕ ಶಿಕ್ಷಣದ ಪರಿಕಲ್ಪನೆಯ ಪರಿಣಾಮ ಒಟ್ಟಾರೆ ಜನಜೀವನದ ಆರ್ಥಿಕತೆಯ ಅಭಿವೃದ್ಧಿ, ಉದ್ಯೋಗಾವಕಾಶಗಳು ಹೆಣ್ಣು ಮಕ್ಕಳನ್ನು ಶಿಕ್ಷಣಕ್ಕೆ ಹಚ್ಚಿತು ಎನ್ನಬೇಕು.

ಕೆಲವೊಮ್ಮೆ ಗಂಡಸರೊಂದಿಗೆ ಸಮವಾಗಿ ನಿಂತು ಮಾತಾಡುವದನ್ನು ಹಿರಿಯರು ವಿರೋಧಿಸಿದರೂ ಅದು ಸಾರ್ವತ್ರಿಕ ಕಟ್ಟುಪಾಡೇನಲ್ಲ. ಕೋಟೆ ಹೆಣ್ಣು ಮಕ್ಕಳು ತೀರಾ ಸಂಕೋಚದ ಮುದ್ದೆಗಳೇನಲ್ಲ. ಚುರುಕಾಗಿ ವ್ಯವಹಾರಗಳನ್ನು ನಡೆಸಬಲ್ಲವರು. ವಿವಿಧ ಉದ್ಯೋಗ ಮಾಡಿಕೊಂಡು ಜೀವನೋಪಾಯವನ್ನು ಕಂಡುಕೊಂಡವರಿದ್ದಾರೆ.

ಕಳೆದ ದಶಕದ್ವಯಗಳಲ್ಲಿ ಸಾರ್ವತ್ರಿಕವಾಗಿ ಶಿಕ್ಷಣ ರಂಗಕ್ಕೆ ಹೆಣ್ಣು ಮಕ್ಕಳೂ ಧುಮುಕಿದ್ದಾರೆ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ನೆಲೆಯಾದವರಿದ್ದಾರೆ. ಹಾಗೆ ನೋಡಿದರೆ ಇಂದು ಈ ಜನಾಂಗದಲ್ಲಿ ಮುದುಕರನ್ನು ಬಿಟ್ಟರೆ ಹತ್ತನೇ, ಪಿಯುಸಿ ತರಗತಿ ಹತ್ತದವರು ಇಲ್ಲ ಎಂಬಷ್ಟು ಕಡಿಮೆ.

ಕಲಿಕೆ, ಉದ್ಯೋಗ ಇತ್ಯಾದಿಗಳ ಮೂಲಕವಾಗಿ ಸಮಾಜದಲ್ಲಿ ಮುಕ್ತವಾಗಿ ಬೆರೆಯುವ, ರಾಷ್ಟ್ರೀಯ ಸಂಪತ್ತಿನ ಉತ್ಪಾದನೆಯಲ್ಲಿ ಪಾಲ್ಗೊಳ್ಳುವ ತನ್ನ ಕಸುವನ್ನು ಈ ಜನಾಂಗದ ಹೆಣ್ಣು ತೋರಿದ ಮೇಲೆ ಆಕೆ ಇನ್ನೂ ಮೇಲಿನ ಸ್ಥಾನವನ್ನು ಏರಿದ್ದಾಲೆ. ಕೌಟುಂಬಿಕವಾಗಿ ಧಾರ್ಮಿಕ ಆಚರಣೆಗಳಲ್ಲಿ ಆಕೆಗೆ ಹಿಂದಿನಿಂದಲೂ ಮಹತ್ವದ ಸ್ಥಾನ ನೀಡಿ ಗೌರವಿಸಿದ ಕೋಟೆಯವರು ಈಗ ಆಕೆಯನ್ನು ಇನ್ನಷ್ಟು ಗೌರವದಿಂದ ಕಾಣುವಂತಾಗಿದೆ.

ಬಡವರ್ಗದ ಮಂದಿ ಚಿಕ್ಕಪುಟ್ಟ ಉದ್ಯೋಗ ಕೈಕೆಲಸಗಳು, ಬೀಡಿ ಕಟ್ಟುತ್ತಾ ಕೂಲಿನಾಲಿ ಮಾಡುತ್ತಾ ಜೀವನ ಸಾಗಿಸಿದರೂ ಈ ಹೆಣ್ಣು ಮಕ್ಕಳು ಕೌಟುಂಬಿಕವಾಗಿ ಅಲಕ್ಷಿತರಲ್ಲ. ಅವರದ್ದೇ ಆದ ಸ್ಥಾನ, ಹಿಡಿತ ಅವರಿಗೆ ತಮ್ಮ ಕುಟುಂಬದ ಮೇಲೆ ಇದ್ದೇ ಇದೆ.

ಹಬ್ಬ ಹರಿದಿನಗಳಲ್ಲಿ ಶುಭ ಶೋಭನಗಳಲ್ಲಿ ಅವರಿಗಿರುವ ಅವಕಾಶ ಸ್ಥಾನಮಾನಗಳು ಇತರ ಸಾಮಾಜಿಕ ವರ್ಗಗಳು ಅಸೂಯೆಪಡುವಷ್ಟಿದೆ. ಅವರು ಸುಶಿಕ್ಷಿತರಾಗಲಿ ಅಶಿಕ್ಷಿತರಿರಲಿ ಆ ದಿನಗಳಲ್ಲಿ ಅವರು ಆಚಾರ ವಿಚಾರ, ಸಂಪ್ರದಾಯಗಳನ್ನು ತಿಳಿದುಕೊಂಡು ಅನುಸರಿಸಿ ನಡೆಸಿಕೊಡುತ್ತಾರೆ. ಆಕೆ ಹಾಕಿಕೊಳ್ಳುವ “ಅಡ್ದೊರಲು” ಎಂಬ ಒಂದು ಶಾಲು ಆಕೆಯ ಘನತೆಯನ್ನು ಇನ್ನಷ್ಟು ಎತ್ತಿ ತೋರಿಸುತ್ತದೆ. ಹೀಗೆ ಎಲ್ಲಕ್ಕೂ ಮುಂದಿಟ್ಟು ಮಹಿಳೆಯರ ಹಿಂದೆ ನಿಂತು ಅವರು ಸೂಚನೆಗೆ ಅನುಗುಣವಾಗಿ ತಂಡಸು ನಡೆದುಕೊಳ್ಳುವ ಬಗೆಯಲ್ಲ ಇತರ ಅನೇಕ ಸಾಮಾಜಿಕ ವರ್ಗಗಳಲ್ಲಿ ಇಲ್ಲ.

ಕೋಟೆ ಜನಾಂಗದ ಸ್ತ್ರೀಯರು ಇತ್ತೀಚೆಗೆ ಹಲವು ಬಗೆಯ ದುಡಿಮೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಎಂದರೆ ಸುಮಾರು ೩೦ ರಿಂದ ೪೦ ವರ್ಷಗಳಾಚೆಯವರೆಗಿನ ಪರಿಸ್ಥಿತಿ ಹೀಗಿರಲಿಲ್ಲ. ಅವರ ದುಡಿಮೆ, ಮನೆಯ ಒಪ್ಪ ಓರಣ, ಅಡುಗೆ – ಊಟ – ಉಪಹಾರದ ವ್ಯವಸ್ಥೆ, ಮಕ್ಕಳ ಹೆರಿಗೆ, ಲಾಲನೆ, ಪಾಲನೆ; ಧಾರ್ಮಿಕ ವ್ರತಾಚರಣೆ, ಕೃಷಿಕಾಯಕಗಳಲ್ಲಿ ಗಂಡಸರಿಗೆ ನೆರವಾಗುವುದು ಇತ್ಯಾದಿಗಳಲ್ಲಿ ಹಂಚಿಹೋಗಿತ್ತು.

ಹೀಗೆಂದ ಮಾತ್ರಕ್ಕೆ ಯಾವುದೇ ಗುಲಾಮಗಿರಿ ಅವರಿಗಿರಲಿಲ್ಲ. ಗಂಡಸರು ಹೆಚ್ಚಾಗಿ ಪೋಲಿಸ್, ಸೈನಿಕ, ಅರಣ್ಯ ರಕ್ಷಕರಾಗಿ ಸರಕಾರಿ ಉದ್ಯೋಗಿಗಳಿಗೆ ತೆರಳುತ್ತಿದ್ದರು. ಆಗ ಮನೆಯ, ಮಕ್ಕಳ ಹೆಚ್ಚಿನ ಹೊಣೆ ಹೆಣ್ಣಿನ ಮೇಲೆಯೇ ಬೀಳುತ್ತಿತ್ತು. ಗಂಡಸರು ಸಂಪಾದಿಸುತ್ತಿದ್ದರು. ಮನೆಯ ಖರ್ಚು ವೆಚ್ಚಗಳಿಗೆಂದು ತನ್ನ ಸಂಪಾದನೆಯನ್ನು ಹೆಂಡತಿಯ ಕೈಯಲ್ಲಿಡುತ್ತಿದ್ದರು. ಕೃಷಿಕ ವರ್ಗದಲ್ಲಿ ಸ್ವಲ್ಪ ವ್ಯತ್ಯಾಸ. ಅವರ ಮನೆಯಲ್ಲೇ ಇರುತ್ತಿದ್ದರು. ಅಲ್ಲಿ ಆಡಳಿತ ಹೆಣ್ಣಿಗಿಲ್ಲ.

ಏನಿದ್ದರೂ ಹೆಣ್ಣು ಆರ್ಥಿಕವಾಗಿ ನಿರಾಧಾರ ಸ್ಥಿತಿಗೆ ತಲುಪುವ ಅಪಾಯ ಏನೂ ಇರಲಿಲ್ಲ. ಈಗಲೂ ಇಲ್ಲ. ತೀರಾ ಬಡವರಾದರೂ ದುಡಿಮೆಗೆ ಸಾಕಷ್ಟು ಅವಕಾಶಗಳು ಇರುವ ಇಂದಿನ ದಿನಗಳಲ್ಲಿ ಹೆಣ್ಣಿಗೆ ಆತಂಕದ ಸ್ಥಿತಿಯೇನೂ ಸ್ಪಷ್ಟವಾಗಿಲ್ಲ.

ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಂದಿಗೆ ಸರಕಾರ ಮನೆ ನಿವೇಶನ, ಉದ್ಯೋಗ, ಕೃಷಿಭೂಮಿ ಇತ್ಯಾದಿಗಳನ್ನು ನೀಡಿ ಆರ್ಥಿಕವಾಗಿ ನೆರವು ನೀಡುತ್ತಾ ಬಂದಿದೆ. ಸೈನಿಕರು ಮೃತ ಹೊಂದಿದರೆ ಅವರ ಹೆಂಡತಿ ಅಥವಾ ಮಕ್ಕಳಿಗೆ ಉದ್ಯೋಗ ಮೀಸಲು ಇಡುವ ಮೂಲಕ ಆಧಾರ ದೊರಿತಿದೆ.

ಪೋಲಿಸ್ ಅಥವಾ ಅರಣ್ಯ ಪಾಲಕರಾಗಿ ಉದ್ಯೋಗ ನಡೆಸುವ ಮಂದಿಗೂ ಅವರು ಗತಿಸಿ ಹೋದಲ್ಲಿ ಅವರ ಕುಟುಂಬಕ್ಕೆ ಸರಕಾರ ವಿವಿಧ ಬಗೆಯ ಸೌಲಭ್ಯಗಳನ್ನು ನೀಡಿ ಮೇಲೆತ್ತಿದೆ. ಇಂತಹ ವೇಳೆಗಳಲ್ಲಿ ಹೆಣ್ಣು ಕುಟುಂಬದ ನಿರ್ವಹಣೆ ಹೊಣೆ ಹೊತ್ತಿದ್ದಾಳೆ. ಹೆಣ್ಣು ಮಕ್ಕಳಿಗೆ ಗಂಡು ನೋಡಿ ಮದುವೆ ಮಾಡಿದ್ದಾಳೆ. ಗಂಡು ಮಕ್ಕಳನ್ನು ಓದಿಸಿ ಹೆಣ್ಣು ನೋಡಿ ಕುಟುಂಬವನ್ನು ಬೆಳೆಸಿದ್ದಾಳೆ.

ಕ್ಷತ್ರಿಯ ಕುಲದವರಾದ್ದರಿಂದ ಸಹಜವಾಗಿ ಕಷ್ಟಗಳನ್ನು ಕೆಚ್ಚೆದೆಯಿಂದ ಎದುರಿಸುವ ಗುಣ ಈ ಜನಾಂಗದ ಹೆಣ್ಣು ಮಕ್ಕಳಲ್ಲಿ ಇದೆ. ಸಾಮಾಜಿಕವಾಗಿ ಮುಂದುವರೆದ ಜನಗಳ ಜೊತೆಗೆ ಹೆಜ್ಜೆ ಹಾಕಲು ಬಲ್ಲವರಿವರು.

ಕೋಟೆ ಜನಾಂಗದಲ್ಲಿ ಮನೆಮದ್ದು ಕೊಡುವ, ನಾಟಿ ವೈದ್ಯ ಸೇವೆ ಮಾಡುವ ಹೆಂಗಸರು ಹಿಂದೆಯೂ ಇದ್ದರು, ಈಗಲೂ ಈ ಪೈಕಿ ಕೆಲವರಿದ್ದಾರೆ.

ಹುಚ್ಚುನಾಯಿ ಕಡಿತ, ಸಿಡುಬು, ಕೋಟ್ಲೆ, ಕೆಂಪು, ಸರ್ಪಸುತ್ತು ವಿವಿಧ ಬಗೆಯ ಹೊಟ್ಟೆನೋವು, ವಾತ ಪಿತ್ಥ ದೋಷಗಳು, ಮುಟ್ಟು ದೋಷಗಳು, ಬಾಲಪೀಡೆ ಮುಂತಾದ ಅನೇಕ ಕಾಯಿಲೆಗಳಿಗೆ ಔಷಧಿಯನ್ನು ನಾರುಬೇರು ಸೊಪ್ಪು ನಿಂಬೆಹಣ್ಣು, ಹಸುವಿನ ಹಾಲು, ತುಪ್ಪ, ಗೋಮೂತ್ರ, ಎಣ್ಣೆಗಳು, ಅಂಗಡಿ ಮದ್ದುಗಳನ್ನು ಬಳಸಿಕೊಂಡು ಮಾಡಿಕೊಡುತ್ತಿದ್ದರು.

ಇವರಲ್ಲಿ ಕೆಲವರು ಪ್ರಸಿದ್ದರು – ಲಕ್ಷ್ಮಿ ಹೊಸದುರ್ಗ, ರತ್ನಾಪಳ್ಳಿಕೆರೆ (ಸದ್ಯ ಮಂಗಳೂರಿನಲ್ಲಿ ನೆಲೆಸಿದ್ದಾರೆ), ಇನ್ನೋರ್ವರು ಲಕ್ಷ್ಮಿ ಪಳ್ಳಿಕೆರೆ.

ಪ್ರಸೂತಿಕಾ ಸೇವೆ ಬಹುವಿಶೇಷವಾದುದು. ಹಿಂದೆ ವೈದ್ಯರ ಸಂಖ್ಯೆ ಕಡಿಮೆ. ರತ್ನ ಬೇಕಲ ಇವರು ಹಲವು ಹಳ್ಳಿಗಳಲ್ಲಿ ಹೆಸರಾಂತ ಪ್ರಸೂತಿಕಾ ತಜ್ಞೆಯಾಗಿದ್ದರು. ಪಳ್ಳಿಕೆರೆ ಕಡೆಗಳಲ್ಲಿ ಇಂದಿಗೂ ಪ್ರಸಿದ್ಧಿಗೆ ಬಾರದ ಅನೇಕ ಮಹಿಳೆಯರು ವಿವಿಧ ಬಗೆಯಲ್ಲಿ ನಾಟಿ ವೈದ್ಯದ ಸೇವೆ ಮಾಡುತ್ತಿದ್ದಾರೆ. ಅವರ ಮನೆಗಳಲ್ಲಿ ಮದ್ದಿನ ಪಾತ್ರೆಗಳನ್ನು ಇಂದಿಗೂ ಕಾಣಬಹುದು. ಮದ್ದು ತಯಾರಿಸಲು ತಾಮ್ರದ ಪಾತ್ರೆಗಳೇ ಬೇಕು. ಅದು “ಕಿಲುಬ” ಬಿಡುವಂತಹದ್ದಿರಬೇಕು ಎಂದು ಅವರ ಅನಿಸಿಕೆ. ಎಣ್ಣೆಗಳನ್ನು ಕಾಯಿಸಲು ಕಂಚು, ತಾಮ್ರದ ಪಾತ್ರಗಳನ್ನು ಬಳಸುತ್ತಾರೆ.

ಬಾಲಪೀಡಾ ಪರಿಹಾರಕ್ಕೆ “ಕೋಲೆಣ್ಣೆ” ಎಂಬ ಔಸಧದೆಣ್ಣೆಯನ್ನು ತಯಾರಿಸುತ್ತಾರೆ.

ಸಾಹಿತ್ಯ, ಕಲೆ ಕ್ಷೇತ್ರದ ಸಾಧನೆಗಳು

ಈ ಜನಾಂಗದ ಮಹಿಳೆಯರು ಹೆಸರಾಂತ ಸಾಹಿತಿಗಳಾಗಿಲ್ಲ. ಹಾಡುಗಾರರಾಗಿ ಬಿ.ಕೆ.ಸುಮಿತ್ರ ಎಂಬವರ ಹೆಸರು ಹೇಳುತ್ತಾರೆ. ಉಳಿದಂತೆ ಗಂಡಸರು ಯಕ್ಷಗಾನ, ಕವಿತೆ, ಬರವಣಿಗೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಿದ್ದಾರೆ.

ವಿವಿಧ ಶುಭ ಸಮಾರಂಭಗಳಲ್ಲಿ ಜಾನಪದ ಹಾಡುಗಳನ್ನು ಹಾಡುವವರು ಹಿಂದೆ ತುಂಬ ಸಂಖ್ಯೆಯಲ್ಲಿ ಇದ್ದರಂತೆ. ಈಗಲೂ ನಿರಾಶೆಗೆ ಕಾರಣವಿಲ್ಲ. ಕೊಯಿಲದಲ್ಲಿ ನೆಲೆಸಿದ ಕೊಪ್ಲು ಶಾಂಭವಿ. ಅವರು ನಿವೃತ್ತ ಮೇಜರ್ ಪಾಂಡು ಅವರ ಪತ್ನಿ. ಉತ್ತಮ ಹಾಡುಗಾರ್ತಿ. ಆರು ಮಕ್ಕಳ ತಾಯಿ. ಗಂಡನ ಮನೆಯವರು ದೂರವಿಟ್ಟಾಗ ತನ್ನ ಉಳಿತಾಯದ ಹಣ ಹಾಗೂ ಗಂಡ ಸೇನೆಯಲ್ಲಿ ಉದ್ಯೋಗ ಮಾಡುತ್ತಾ ಕಳಿಸಿಕೊಟ್ಟ ಹಣದಲ್ಲಿ ಒಂದೂ ಕಾಲೆಕ್ರೆ ಭೂಮಿ ಖರೀದಿಸಿ ಕೊಪ್ಪುವಿನಲ್ಲಿ ಸ್ವತಃ ಕೃಷಿ ಮಾಡಿ ಮೇಲೆ ಬಂದವರು. ಖಾದಿ ಭಂಡಾರದ ಹತ್ತಿ ತಂದು ನೂಲೆಳೆಯುವ ತಕಲಿ ತಂದಿಟ್ಟು ನೂಲು ಮಾಡಿ ೩೦ – ೪೦ ಪೈಸೆ ದಿನಕ್ಕೆ ಸಂಪಾದಿಸುತ್ತಿದ್ದರು. ಒಂದೆರಡು ದಶಕ ಹೀಗೆ ಸ್ವಾಲಂಬಿ ಜೀವನ ಮಾಡಿದವರು.  ತೆಂಗಿನನಾರನ್ನು ಹೊಸೆದು “ಕಾಲೊರಸು” ಮುಂತಾದವುಗಳನ್ನು ತಯಾರಿಸಿ ಹುರಿಹಗ್ಗದ ಉದ್ಯಮಕ್ಕೂ ಕೈಯಿಕ್ಕಿದ ಸಾಹಸೀ ಮಹಿಳೆ. ಅನಂತರ ಗಂಡನಿಗೆ ನಿವೃತ್ತಿಯಾದ ಮೇಲೆ ಜಾಗ ಮಾರಿ ಪುತ್ತೂರಿನ “ಕಡಬ” ಎಂಬಲ್ಲಿ ಒಂದು ಗೂಡಂಗಡಿ ಮಾಡಿ ಕುಟುಂಬ ನಿರ್ವಹಣೆ ಮಾಡಿದರು. ಅನಂತರ ಸರಕಾರದಿಂದ ಸೈನ್ಯದಿಂದ ನಿವೃತ್ತರಾದವರಿಗೆ ನೀಡುವ ಕೃಷಿಭೂಮಿಯನ್ನು (ಸುಮಾರು ಎಂಟು ಎಕ್ರೆ)  ಪಡೆದು ಅದರಲ್ಲಿ ತೆಂಗು, ಗೇರು, ಅಡಕೆ ಬೆಳೆಯುವ ಯತ್ನ ಮಾಡಿದ ಶ್ರಮಜೀವಿ. ಮಣ್ಣಿನ ಗೋಡೆ ಇಡುವುದು, ಮಾಡಿಗೆ ಹುಲ್ಲು ಹೊದೆಸುವುದು ಇತ್ಯಾದಿ ಕಾರ್ಯಗಳನ್ನು ಸ್ವತಃ ಮಾಡಬಲ್ಲ ದಿಟ್ಟ ಹೆಂಗಸು. ದಿನಾ ಬೆಳಗು ಮುಂಜಾವ ದೇವರ ದೀಪ ಹಚ್ಚಿ,  ಧ್ಯಾನ, ಜಪ, ಪೂಜೆಗಳಲ್ಲಿ ಒಂದೂವರೆ ಗಂಟೆ, ಹಾಗೆ ಸಂಜೆ ಸರಿಯಾಗಿ ಆರು ಗಂಟೆಗೆ ದೀಪ ಹಚ್ಚಿ ಧ್ಯಾನ ಜಪ ಮಾಡುವ ಈ ಇಳಿಗಾಲದ ಸಂಜೆ ವಯಸ್ಸಿನ ಶಾಂಭವಿ ಈ ಜನಾಂಗದ ಧೀರ ಮಹಿಳಾ ಶಕ್ತಿಗೆ ಸಂಕೇತವೆನಿಸಿದ್ದಾಳೆ.

ಸಾಂಪ್ರದಾಯಿಕವಾದ ಕುಟುಂಬ ವ್ಯವಸ್ಥೆ ಕೋಟೆಯವರದು. ಸಾಮಾನ್ಯವಾಗಿ ಗಂಡಸರು ಸೈನ್ಯ, ಪೊಲೀಸ್, ಅರಣ್ಯ ಇಲಾಖೆಗಳಲ್ಲಿ ಸೇವಾ ನಿರತರಾಗಿದ್ದಾಗ ಮನೆ ನಡೆಸುವ ಹೊಣೆ ಹೆಂಗಸರ ಹೆಗಲಿಗೆ. ಹೆಂಗಸರು ಹೀಗಿದ್ದರೂ ಗಂಡನನ್ನು ಆಳುವ ಗಂಡುಬೀರಿಯಾಗಿ ನಡೆದುಕೊಳ್ಳುವುದಿಲ್ಲ. ಮಾನಸಿಕವಾಗಿ ಉತ್ತಮ ಹೊಂದಾಣಿಕೆಯಿಂದ ನಡೆದುಕೊಳ್ಳುವ ಈ ಹೆಂಗಳೆಯರು ಆದರ್ಶ ಗೃಹಿಣಿಯರೇ ಸರಿ.

ಹೆಂಗಸರು ಗಂಡನನ್ನು ಕಳೆದುಕೊಂಡರೆ ಮರುಮದುವೆಯ ಅವಕಾಶವಿದೆ. ಆದರೆ, ಈ ವಿವಾಹ ಸಮಾರಂಭವು ಸರಳವಾಗಿ ಹಾರ ವಿನಿಮಯದೊಂದಿಗೆ ದೇವಸ್ಥಾನದ ದೇವರೆದುರಿಗೆ ನಡೆಯುತ್ತದೆ. ವಿಧವೆಯಾದಾಗ ಕೇಶಮುಂಡನವಿಲ್ಲ. ಕುಂಕುಮ, ಬಳೆ, ಕರಿಮಣೆ ತೆಗೆದಿಡುತ್ತಾಳೆ. ಹಿಂದೆ ಬೆಳ್ಳಿ ಕರಿಮಣಿ, ಈಚೆಗೆ ಬಂಗಾರದ ಕರಿಮಣಿ ಮಾಡಿಸುವುದೇ ಹೆಚ್ಚು. ತೀರಾ ಬಂಗಾರ ಎಂದು ಹಾತೊರೆಯುವ ಹೆಂಗಸರು ಈ ಸಮೂಹದಲ್ಲಿ ಕಡಿಮೆ. ವರದಕ್ಷಿಣೆ ಪಿಡುಗು ಆಗಿ ಬಾಧಿಸಿಲ್ಲ. ಹೀಗಾಗಿ ಹೆಣ್ಣು ಹೆತ್ತವರಿಗೆ ಸಂಕಟವೇನಿಲ್ಲ. ಆದರೆಸ್ಣ ಪ್ರಮಾಣದ ಹಣ ಬಂಗಾರ ಇತ್ಯಾದಿಗಳನ್ನು ಕೊಟ್ಟು ತಮ್ಮ ಆಸ್ತಿ, ಉದ್ಯೋಗ ಅಂತಸ್ತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ.

 

ಸಂದರ್ಶನ ೧

ಶಾಂಭವಿ ಕೊಯಿಲ – ವಯಸ್ಸು ೬೫ ವರ್ಷ

 • ಪ್ರಶ್ನೆ   – ಅಮ್ಮಾ ನಮಸ್ಕಾರ

ನಮಸ್ಕಾರ

 • ಅಮ್ಮಾ ನಿಮ್ಮ ಬಾಲ್ಯದ ಜೀವನದ ಬಗ್ಗೆ ಸ್ವಲ್ಪ ಹೇಳ್ತಿರಾ ?

ನಾನು ಈ ಊರಿನವಳಲ್ಲ. ನೀವು ಬೇಕಲ ಅಂತ ಒಂದು ಊರಿನ ಬಗ್ಗೆ ಕೇಳಿದ್ದಿರಲ್ಲ? ಅಲ್ಲಿಗೆ ಹತ್ತಿರದ “ಚಿತ್ತಾಂ” ಎಂಬಲ್ಲಿಯವಳು.  ನಾಣು ನಮ್ಮ ತಾಯಿ ತಂದೆಯವರಿಗೆ ಇದ್ದ ಏಳು ಮಕ್ಕಳಲ್ಲಿ ಹಿರಿಯವಳು. ಮೂರು ಮಂದಿ ಹುಡುಗಿಯರು, ನಾಳ್ಕು ಮಂದಿ ಹುಡುಗರು. ನಮ್ಮ ಹಿರಿಯರಿಗೆ ಸ್ವಲ್ಪ ಕೃಷಿ ಭೂಮಿ ಇತ್ತು. ನಾವೆಲ್ಲ ಅಲ್ಲಿ ಕೆಲಸ ಮಾಡಬೇಕಿತ್ತು. ತುಂಬ ಬಡತನದ ದಿನಗಳು. ನಾವೆಲ್ಲ ಅನ್ನ ಉಂಡು ಬೆಳೆದವರಲ್ಲ. ಉಪ್ಪು ಗಂಜಿ ಉಂಡು ಬೆಳೆದವರು. ಅದೂ ಹೊಟ್ಟೆ ತುಂಬ ಅಲ್ಲ.

 • ನಿಮಗೆಲ್ಲ ವಿದ್ಯಾಭ್ಯಾಸಕ್ಕೆ ಅವಕಾಶ ಇತ್ತಾ ?

ನಮ್ಮ ಕಾಲದಲ್ಲಿ ಹತ್ತಿರ ಶಾಲೆ ಇರಲಿಲ್ಲ. ಉದುಮಕ್ಕೆ ಹೋಗಬೇಕು. ಸ್ವಲ್ಪ ದೂರ ಅಂತೂ ಎರಡನೇ ಕ್ಲಾಸಿಗೆ ಹೋಗಿದ್ದೇನೆ ಅಷ್ಟೇ. ಉಳಿದವರೂ ನಾಲ್ಕನೇ, ಐದನೇ ತರಗತಿಯವರೆಗೆ, ಆಮೇಲೆ ಕೆಲಸಕ್ಕೆ.

 • ಹೆಣ್ಣು ಮಕ್ಕಳಿಗೆ ಶಿಕ್ಷಣ ಬೇಡ ಅಂತ ಹಿರಿಯರು ಹೇಳುತ್ತಿದ್ರಾ?

ಹ್ಞಾ, ಹಾಗೆನಿಲ್ಲ. ಹೆಣ್ಣು ಮಕ್ಕಳಿಗೆ ಬೇಗ ಮದುವೆ ಆಗಿತ್ತು. ಆಮೇಲೆ  ಗಂಡನ ಮನೆಯೇ ಶಾಲೆ, ಜೀವನಕ್ಕೆ ಬೇಕಿದ್ದನ್ನೆಲ್ಲ ಅಲ್ಲೇ ಕಲಿಯುವುದು.

 •  ಶಾಲೆಗೆ ಹೆಣ್ಣು ಮಕ್ಕಳು ಹೋಗುವುದು ತಪ್ಪು ಹಾಳಾಗ್ತಾರೆ ಎಂಬ ಭಾವನೆ ಇತ್ತಾ?

ಇಲ್ಲ. ಶಾಲೆಯ ವಿದ್ಯೆ ಹೆಣ್ಣಿಗೆ ಬೇಡ ಅಂತ ಮಾತ್ರ. ಕಲಿತು ಉದ್ಯೋಗ ಮಾಡಲಿಕ್ಕೇನೂ ಇಲ್ಲ. ಮತ್ಯಾಕೆ? ಅಂತ ಹೇಳ್ತಿದ್ದರು. ನಾನು ಸ್ವಲ್ಪ ಹಠ ಮಾಡಿದ್ದೆ. ಆದರೆ ಉಪಯೋಗವಾಗಲಿಲ್ಲ.

 • ಮದುವೆ ಎಷ್ಟನೇ ವಯಸ್ಸಿನಲ್ಲಿ ?

ಸಾಮಾನ್ಯವಾಗಿ ೮ ಅಥವಾ ೯ ರಲ್ಲಿ. ನನಗೆ  ೯ ನೇ ವಯಸ್ಸಿನಲ್ಲಿ ಮದುವೆ ಆಯ್ತು. ನಮ್ಮೆಜಮಾನ್ರು ಮಿಲಿಟ್ರಿಯಲ್ಲಿ ಇದ್ರು. ಹವಾಲ್ದಾರ್ ಮೇಜರ್ ಆಗಿದ್ರು.

 • ನಿಮ್ಮ ಗಂಡನ ಮನೆಗೆ ಮದುವೆ ಆದ ಕೂಡ್ಲೆ ಹೋದ್ರಾ? ಅಲ್ಲಿನ ವಾತಾವರಣ ನಡವಳಿಕೆ ಬಗ್ಗೆ ಹೇಳಿ

ಅಲ್ಲಿ …… ಮದುವೆ ಆದ ಮೊದಲಿಗೆ ….. ಆಗ ನಾಣು ಬಹಳ ಚಿಕ್ಕವಳು. ಅಲ್ಲಾ? ಎಲ್ಲ ನೆನಪಿಲ್ಲ. ನಾನು ಮಕ್ಕಳೊಟ್ಟಿಗೆ ಆಟ ಆಡ್ತಾ ಇದ್ದೆ. ಬೇರೆ ಏನೂ ಗೊತ್ತಾಗ್ತಿರಲಿಲ್ಲ. ಹೆಣ್ಣು ಗಂಡು ಮಕ್ಕಳು ಸೇರಿ ಆಟ ಆಡ್ತಾ ಇದ್ದೆವು. ಉಂಡ ಬಟ್ಲು, ಉಟ್ಟ ಬಟ್ಟೆ ಸಹಿತ ನಾವು ತೊಳ್ದು ಗೊತ್ತಿಲ್ಲ. ಎಲ್ಲಾ ದೊಡ್ಡವ್ರು ಮಾಡ್ತಿದ್ರು. ದೊಡ್ಡವಳಾದ ಮೇಲೆ ಆಟಕ್ಕೆ ಲಗಾಮು ಬಿತ್ತು. ಕೆಲಸದ ಹೊರೆ ಹೆಚ್ಚಾಯಿತು.

 • ನಿಮ್ಮ ಗಂಡ  ಸೈನ್ಯಕ್ಕೆ ಹೋಗಿದ್ದರಿಂದ ಮನೆಯಲ್ಲಿ ಏನಾದರೂ ಕಷ್ಟ ಆಗ್ತಿತ್ತಾ? ನಿಮ್ಮವರು ಅಂತ ಯಾರೂ ಇಲ್ಲದ ಒಂದು ಪರಿಸ್ಥಿತಿ?

ಅಂಥದ್ದೇನಿಲ್ಲ. ನಮ್ಮ ಪೈಕಿ ಹೆಚ್ಚಿನ  ಗಂಡಸರು ಒಂದೋ ಮಿಲಿಟ್ರಿ, ಅಲ್ಲದಿದ್ದೆ ಪೋಲಿಸು, ತಪ್ಪಿದರೆ ಅಲ್ಪಸ್ವಲ್ಪ ಕೃಷಿ ಮಾಡಿಕೊಂಡೆ ಜೀವನ. ಗಂಡ ದೂರ ಇದ್ದಾರೆ ಅಂತ ಅನ್ನಿಸ್ತಿತ್ತು. ಯಾರೂ ಬೈಯ್ತಿರಲಿಲ್ಲ. ನಾನೊಬ್ಬಳೇ ಅಂತ ಅನಿಸ್ತಿರಲಿಲ್ಲ. ಆದರೆ ನೀವು ಹೇಳಿದ ಹಾಗೆ ಸ್ವಲ್ಪ ಸಮಯದ ನಂತರ ಆಯ್ತು.

 • ಅದ್ಯಾಕೆ ಹಾಗಾಯ್ತು ? ಹೆಣ್ಣು ಮಕ್ಕಳನ್ನು ಪ್ರೀತಿ ಗೌರವದಿಂದ ಕಾಣಬೇಕು ಅಂತ ನಿಮಗೆ ಆ ಹೊತ್ತಿಗೆ ಕಾಣ್ತಿರಲಿಲ್ವಾ?

ಅಂತಹ ಪರಿಸ್ಥಿತಿ ಬರಲಿಕ್ಕೆ ತೊಡಗಿದ್ದು ನನ್ನ ಗಂಡ ನನಗೆ ಸ್ವಲ್ಪ ಸ್ವಲ್ಪ ಹಣ ಕಳಿಸ್ಲಿಕ್ಕೆ ತೊಡಗಿದಾಗ. (ಮೊದ್ಲು ಅವರ ತಂದೆಗೆ ಕಳಿಸಿದ್ರೂ ಮಕ್ಕಳಾದ ಮೇಲೆ ನನ್ನ ಹೆಸ್ರಿಗೆ ಕಳಿಸಲಿಕ್ಕೆ ತೊಡಗಿದ್ರು). ನನಗೆ ಆರು ಮಕ್ಳು. ಮೂರು ಹೆಣ್ಣು, ಮೂರು ಗಂಡು. ನನ್ನ ಗಂಡ ಹಣವನ್ನು ನನ್ನ ಹೆಸರಿಗೆ ಕಳಿಸುವುದು ಅವರಿಗೆ ಇಷ್ಟ ಆಗ್ತಿರಲಿಲ್ಲ ಅಂತ ಕಾಣಿಸುತ್ತೆ.

 • ಏನಾಯ್ತು ಮುಂದೆ ?

ನಾಣು ಸ್ವಲ್ಪ ಕಾಲ ಅವರ  ಮಾತುಗಳನ್ನು ಸಹಿಸಿಕೊಂಡೆ. ಆಮೇಲೆ ನನ್ನ ಹತ್ರ ಇದ್ದ ದುಡ್ಡಿನಲ್ಲಿ ಒಂದೂವರೆ ಎಕ್ರೆ ಜಮೀನು ತಗೊಂಡು ಬೇರೆ ಮನೆ ಮಾಡಿ ಮಕ್ಕಳನ್ನು ಕಟ್ಟಿಕೊಂಡು ಹೊರಟೆ. ಆಮೇಲೆ ಸ್ವತಂತ್ರ ಜೀವನ. ಅವರದ್ದು ದೇಶದ ಗಡಿಯಲ್ಲಿ ಹೋರಾಟ. ನನ್ನದು ಗದ್ದೆಯಲ್ಲಿ ಹೋರಾಟ (ನಗು).

 • ಹಾಗಾದರೆ ಮನೆ ಯಜಮಾನಿಕೆ ನಿಮ್ಮದೇ?

ಹೌದು. ಇವ್ರು (ಗಂಡ) ನಿವೃತ್ತಿಯಾಗಿ ಬರುವವರೆಗೆ ನನ್ನ ಮಕ್ಳು ನಾನು ಸೇರಿ ಗದ್ದೆಯಲ್ಲಿ ಹೂಟೆ, ಬಿತ್ತನೆ, ಕೊಯ್ಲು, ಕೈ (ಪೈರು) ಹೊಡೆಯುವುದು, ಗೊಬ್ಬರ ಹೊರುವುದು ಇತ್ಯಾದಿ ಕೆಲಸ ಮಾಡಿದ್ದೇವೆ. ಮಕ್ಳು ಸಣ್ಣವರು. ಇಷ್ಟರ ಜೊತೆಗೆ ಹುರಿಹಗ್ಗದಿಂದ ಕಾಲೊರಸು (ಮ್ಯಾಟ್) ಆಡುವುದನ್ನು ನಮ್ಮೂರಲ್ಲಿ ಹೇಳಿಕೊಡುತ್ತಿದ್ದರು. ಹಗ್ಗ ಹೊಸೆಯುವುದುನ್ನು ಹೇಳಿಕೊಡುತ್ತಿದ್ದರು. ಅದರಲ್ಲಿ ಇಪ್ಪತ್ತೈದು ರೂಪಾಯಿ ಸಿಗುತ್ತಿತ್ತು.

 • ಹಾಗಾದರೆ ಗಾಂಧೀಜಿಯವರ ಸ್ವಾವಲಂಬನೆಯ ಪಾಠ ನಿರ್ಮಾಣ ಆಗಿತ್ತು ಅನ್ನಿ.

ನಾನು ಗಾಂಧೀಜಿಯವರನ್ನು ನೋಡಿಲ್ಲ. ಅವರು ನೀಲೇಶ್ವರಕ್ಕೆ ಭಾಷಣಕ್ಕೆ ಬರ‍್ತಾರೆ ಅಂತ ಹೇಳಿದ್ರು, ಏನೇ ಇದ್ರೂ ಬದುಕಬೇಖಾದರೆ ಏನಾದರೂ ಒಂದು ದಾರಿ ಬೇಕಲ್ಲ?

 • ಕೃಷಿ ಗುಡಿ ಕೈಗಾರಿಕೆ ಬಿಟ್ಟರೆ ಬೇರೇನು ಮಾಡುತ್ತಿದ್ದಿರಿ?

ಬೇರೇನೂ ಇಲ್ಲ.

 • ಹಾಡುವ ಹವ್ಯಾಸ ಏನಾದರೂ ಇತ್ತೇ?

ಹಾಡು ಅಂದರೆ ನನಗೆ ತುಂಬ ಇಷ್ಟ. ಈಗೆಲ್ಲ ಮರೆತುಹೋಗಿದೆ. ನಮ್ಮಲ್ಲಿ ಯಾರ ಕಾರ್ಯಕ್ರಮಾದ್ರೂ ಹಾಡು ಬೇಖೆ ಬೇಕು. ನಮ್ಮಲ್ಲಿ ನಾನು ಇದ್ರೆ ಹಾಡ್ಲೇ ಬೇಕು ಅಂತ ಒತ್ತಾಯ ಮಾಡ್ತಿದ್ರು. ಹಾಗಾಗಿ ಹಿರಿಯರಿಂದ ಹೆಲವು ಹಾಡುಗಳನ್ನು ಕಲೀಯಲಿಕ್ಕೆ ಆಯ್ತು. ಈಗಿನವರಿಗೆ ಅದು ಯಾವುದೂ ಬೇಡ.

 • ಹಾಡು ಬರೆಯುವ ಹವ್ಯಾಸ ಇತ್ತೇ?

ಇಲ್ಲ. ಬಾಯಿಪಾಠ ಮಾಡ್ತಿದ್ದೆ. ನಮ್ಮ ತಾಯಿ ಹೇಳ್ತಿದ್ದ ಹಾಗೆ, ಹೇಳ್ತಿದ್ದೆ. ಚಂದ ಸ್ವರವೂ ಇತ್ತು. ಈಗ ಎಲ್ಲ ಹೋಗಿದೆ.

 

ಸಂದರ್ಶನ ೨

ಸುಂದತ್ತೆ (ಸುಂದರಿ), ಉದುಮ – ವಯಸ್ಸು ೬೧

 • ಲೇಖಕ – ಅಮ್ಮ ನಮಸ್ಕಾರ

ಸುಂದರಿ – ನಮಸ್ಕಾರ ಮಾಸ್ಟ್ರೆ.

 • ನಿಮ್ಮ ಹೆಸ್ರು “ಸುಂದತ್ತೆ” ಅಂತ ಹೇಳ್ತಾರಲ್ಲ ಯಾಕೆ?

ಹ್ಹ….. ಹ್ಹ……. ಅದು ಹಾಗಲ್ಲ. ಸೋದತ್ತೆ ಅಂತ ಮಕ್ಳು ಹೇಳಾದು. ನನ್ನ ನಿಜವಾದ ಹೆಸ್ರು ಸುಂದರಿ. ಮಕ್ಳು ಸುಂದತ್ತೆ ಅಂತ ಹೇಳಿ ಈಗ ಅಜ್ಜಿಯಾದರೂ ಸುಂದತ್ತೆಯೆ ! ಕೆಲವರು “ಸುಂದತ್ತೆಜ್ಜಿ” ಅಂತಲೂ ಕರೀತಾರೆ. ಹೆಸ್ರು ಸುಂದರಿ. ಏನೋ ಒಂದು ಹೆಸ್ರು.

 • ಸುಂದತ್ತೆ ಅಂದ್ರೆ ವಠಾರಕ್ಕೆಲ್ಲಾ ಬಹಳ ಪ್ರೀತಿ ಯಾಕೆ?

ಏನೋಪ್ಪಾ….. ಮಕ್ಳ ಮನಸೇ ಹಾಗೆ.. ಯಾರನ್ನಾದರೂ ಅವ್ರು ಪ್ರೀತಿಸ್ಲೇ ಬೇಕು. ಅದು ಅವ್ರ ಗುಣ. ನಾವು ಸ್ವಲ್ಪ ಪ್ರೀತಿ ತೋರ್ಸಿದ್ರ ಅವ್ರು ತುಂಬ ಕೊಡ್ತಾರೆ. (ನಾವು ಕೊಂಡೇಲಿ ಕೊಟ್ರೆ ಅವ್ರು ಕೊಳ್ಗದಾಗ ಕೊಡ್ತಾರ).

 • ನೀವು ಒಬ್ಬರು ವೈದ್ಯ ಅಂತ ಕೇಳಿದ್ದೇನೆ ಹೌದಾ?

ಎಂತದು ಮಣ್ಣಂಗಟ್ಟಿ? ವೈದ್ಯನೂ ಅಲ್ಲ. ಇನ್ನೊಂದು ಇಲ್ಲ. ಏನೋ ಹಿರಿಯರು ಹೇಳಿ, ಮಾಡ್ತಿದ್ದುದು ನೋಡಿ ನಾನೂ ಮದ್ದು ಹೇಳಾದು ಮಾಡಾದು ಮಾಡ್ತೇನೆ ಅಷ್ಟೇಯ.

 • ಯಾವುದಕ್ಕೆಲ್ಲ ಮದ್ದು ಕೊಡ್ತಿರಿ?

ಹೆಚ್ಚಾಗಿ ಹುಡುಗೀರ ತಿಂಗಳ ಕುದಿ ಹೊಟ್ಟೆನೋವಿಗೆ ಮದ್ದು ಕೊಡ್ತಿದ್ದೆ. ಈಗ ಅದೆಲ್ಲ ನಿಲ್ಸಿ ಎಟೋ ಕಾಲ ಆಯ್ತು. ಈಗ  ಇಂಗ್ಲಿಷು ಮದ್ದು ಅಂತ ಡಾಕ್ಟ್ರಲ್ಲಿಗೆ ಹೋಗ್ತರೆ. ನಮ್ಮ ಮದ್ದು ಯಾರಿಗೆ ಬೇಕು?

 • ಮತ್ತೆ ಯಾವುದಕ್ಕೆ ಕೊಟ್ತಿದ್ರಿ?

ಕೆಂಪು ಅಂತ ಉಂಟು ನೋಡಿ. ಮತ್ತೆ ವಿಷ ಮುಟ್ಟಿದ್ದಕ್ಕೆ, ಇನ್ನು ಹೊಟ್ಟೆನೋವು ಶೀತ, ಜ್ವರ ಇತ್ಯಾದಿ.

 • ನಿಮ್ಮ ಕಾಲದಲ್ಲಿ ಡಾಕ್ಟ್ರುಗಳ ಸಂಖ್ಯೆ ತುಂಬಾ ಕಡಿಮೆ ಇತ್ತಲ್ಲಾ?

ಆಗ ಏನಾದರೂ ಹೆಚ್ಚು ಕಡಿಮೆ ಆದರೆ (ಆಪತ್ತು ಬಂದರೆ) ನಮ್ಮ ಮನೆಗೆ ಜನ ಬರ‍್ತಿತ್ತು. ಮೈಲುಗಟ್ಟಲೆ ನಡೆದುಕೊಂಡು ಹೋಗಿ ನೋಡಿ ಮದ್ದು ಕೊಡ್ಬೇಕಿತ್ತು. ಕೆಲವೊಮ್ಮೆ ಬೇಕಾದ ಮದ್ದು ಸಿಗದಿದ್ರೆ ಮತ್ತೆ ಮನೆಗೆ ಬಂದು ಮದ್ದು ತಯಾರು ಮಾಡಿ ಕೊಡಬ್‌ಏಕಿತ್ತು. ಕೆಲವು ಮದ್ದಿನ ಗಿಡ ಎಲ್ಲಾ ಕಡೆ ಇರಾದಿಲ್ಲ. ಸ್ವಲ್ಪ ಸ್ವಲ್ಪ ಅಂಗಡಿ ಮದ್ದು ತರ್ಬೆಕಾಗ್ತದೆ.

 • ಗರ್ಭಿಣಿ, ಬಾಣಂತಿ ಮುಂತಾದವರಿಗೆಲ್ಲ ನೀವು ಭಾರೀ ಬೇಕಾದವ್ರು ಅಂತ ಹೇಳ್ತಾರೆ ನಿಮ್ಮ ಜನ. ಅದೇನು?

ಇದೆಲ್ಲ ಶಾಲೇಲಿ ಕಲಿತ ವಿದ್ಯೆ ಅಲ್ಲ. ಏನೋ ನೋಡಿ ಅಭ್ಯಾಸ ಆದದ್ದು. ಗರ್ಭಿಣಿ ಬಾಣಂತಿಯರಿಗೆ ಸ್ವಲ್ಪ ಮದ್ದು ಸ್ವಲ್ಪ ಪಥ್ಯ ಬೇಕೇ ಬೇಕು. ಮತ್ತೆ ಈಗಿನ ಹಾಗೆ ಯಾವ ಟಾನಿಕ್ಕೂ ಇಲ್ಲ. ಮದ್ದೂ ಆಗ ಇರ್ಲಿಲ್ಲ.

 • ಸೂಲಗಿತ್ತಿಯಾಗಿ ನೀವು ತುಂಬಾ ಜನರಿಗೆ ಹೆರಿಗೆ ಮಾಡಿಸಿದ್ದೀರಿ ಎಂದು ಹೇಳುವುದನ್ನು ಕೇಳಿದ್ದೇನೆ.

ಹೌದು, ನೋಡಿ ಆ ಕಾಳದಲ್ಲಿ ವೈದ್ಯರು  ನಮ್ಮೂರಲ್ಲಿ ಇರ‍್ಲಿಲ್ಲ. ಗರ್ಭೀಣಿಗೆ ಬೇನೆ ಬಂದಾಗ ಹೆರಿಗೆ ಮಾಡಿಸಲಿಕ್ಕೆ ಕರೆದುಕೊಂಡು ಹೋಗಲು ವಾಹನ ಇರ‍್ಲಿಲ್ಲ.  ಎತ್ತಿನ ಗಾಡಿ ನಮ್ಮೂರಲ್ಲಿ ಇದ್ದದ್ದು ಒಟ್ಟಾರೆ ಎರಡು. ಆ ಎತ್ತಿನ ಗಾಡಿಯಲ್ಲಿ ವೈದ್ಯರಲ್ಲಿಗೆ ಕರೆದುಕೊಂಡು ಹೋದರೆ ದಾರಿಯಲ್ಲೇ ಹೆರಿಗೆ ಆಗಿತ್ತು. ಅದಕ್ಕೆ ನಮ್ಮೂರಿನ ಜನ ನನ್ನನ್ನು ಕರೆದುಕೊಂಡು ಹೋಗಿ ಅವರ ಮನೆ ಮನೆ ಗರ್ಭಿಣಿಯರ ಹೆರಿಗೆ ಮಾಡಿಸಿದ್ದು.

 • ಇದನ್ನೆಲ್ಲ ನೀವು ಕಲಿತುಕೊಂಡಿದ್ದು ಎಲ್ಲಿಂದ?

ಅದೆಲ್ಲಾ ಕಲಿತು ಬಂದ ವಿದ್ಯೆ ಅಲ್ಲ. ನಮ್ಮ ಅತ್ತೆ ಅಜ್ಜಿ, ಅವರೆಲ್ಲ ಹೆರಿಗೆ ಮಾಡಿಸಿದ್ದಿತ್ತು. ಅವರು ನನ್ನ ಹಾಗೆ ಬೇರೆ ಕಡೆ ಹೋಗಿ ಮಾಡಿಸ್ತಿರಲಿಲ್ಲ. ಆದರೂ ಹತ್ತಿಪ್ಪತ್ತು ಹೆರಿಗೆ ಮಾಡಿಸಿದ್ದನ್ನು ನಾನು ನೋಡಿದ್ದೇಣೆ. ಹಾಗೆ ನನಗೂ ಅಭ್ಯಾಸ ಆಯ್ತು. ಈಗೆಲ್ಲ ನರ್ಸಮ್ಮ, ಡಾಕ್ಟ್ರು ಇದ್ರೆ ಹೆರಿಗೆ ಸುಲಭ ಆಗ್ತದೆ. ಬಾಣಂತಿಗೆ ನಾವೆಲ್ಲ ಆಹಾರ ಅನುಪಾನ ಹೀಗೆಯೇ ಅಂತ ಕಟ್ಟುನಿಟ್ಟು ಮಾಡ್ತಿದ್ದೇವು. ಕುಡೀಲಿಕ್ಕೆ ಹೀಗೆಲ್ಲ ನೀರು ಕೊಡ್ತಿರಲಿಲ್ಲ. ಕೆಲವರು ಬಿಸಿನೀರ ಹಂಡೆಯಿಂದ ಕದ್ದು ನೀರು ಕುಡಿತಿದ್ರು. ಬಾಣಂತಿ ಹೊಟ್ಟೆಗೆ ಬಿಗಿಯಾಗಿ ಬಟ್ಟೆ ಸುತ್ತುತ್ತಿದ್ದೇವು. ಈಗಿನವರು ನೋಡಿ, ಅವರ ಹೊಟ್ಟೆಯೋ! ಅವರಿಗೆ ಆಪರೇಷನ್ ಮಾಡಿ ಮಗೂನ ತೆಗೆದರೆ ಮತ್ತೆ ಅವ್ರ ಕತೆ ದೇವ್ರಿಗೆ ಪ್ರೀತಿ. ಸೊಂಟನೋವು, ಬೆನ್ನುನೋವು ತಪ್ಪಿದ್ದಲ್ಲ. ಸೊಂಟಕ್ಕೆ ಬಲವೇ ಇಲ್ಲ. ನಮ್ಮ ಕಾಲದಲ್ಲಿ ಹತ್ತು, ಹೆತ್ತ ಹೆಂಗಸರೂ ಗಟ್ಟಿಮುಟ್ಟು ಇರುತ್ತಿದ್ದರು.

 • ಇದಕ್ಕೆಲ್ಲಾ ಸಂಭಾವನೆ ?

ಮೊದಲೆಲ್ಲಾ ಉಚಿತ ಆಮೇಲಾಮೇಲೆ ನೂರು ಇನ್ನೂರು ರೂಪಾಯಿ, ಸೀರೆ ಕೊಡುತ್ತಿದ್ದರು.

 • ನಿಮ್ಮ ಸಮುದಾಯದವರು ದುಡಿಯುವ ಹೆಣ್ಣಿನ ಬಗ್ಗೆ ಏನು ಭಾವನೆಯನ್ನು ಹೊಂದಿದ್ದಾರೆ?

ಭಾವನೆ ! ಇಲ್ಲ. ನಮ್ಮಲ್ಲಿ  ಕೀಳು  ದೃಷ್ಟಿಯಿಂದ ನೋಡುವುದಿಲ್ಲ. ಹೆಚ್ಚಾಗಿ ನಮ್ಮ ಮನೆಗಳಲ್ಲಿ ಹೆಂಗಸರೇ ಆರ್ಥಿಕ ವ್ಯವಹಾರ ನೋಡುವುದು ಉಂಟು. ಗಂಡಸರು ಉದ್ಯೋಗದ ನಿಮಿತ್ತ ಹೊರಗೆ ಹೋದರೆ ಮತ್ತೆ ಮನೆಗೆ ದಿಕ್ಕು ಯಾರು? ಹಾಗಾಗಿ ಅಗೌರವದ ಪ್ರಶ್ನೆ ಇಲ್ಲ.

 • ಲೇಖಕ – ಧನ್ಯವಾದಗಳು.

 

ಉಪಸಂಹಾರ

ಕೋಟೆ ಜನಾಂಗದ  ಮಹಿಳೆಯರು ಸಾಮಾನ್ಯ ಬದುಕಿನ ಎಲ್ಲ ಸ್ತರಗಳಲ್ಲೂ ನಿರ್ಭಿಡೆಯಿಂದ ಬದುಕುವ ಉತ್ತಮ ಸ್ಥಿತಿಯಲ್ಲಿದ್ದಾರೆ.  ಮನೆಯೊಳಗೆ ಗಂಡಿಗೆ ಸಮನಾದ ಸ್ಥಾನಮಾನ  ಆಕೆಗೆ ಇದ್ದೇ ಇದೆ. ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಸ್ತರಗಳಲ್ಲಿ ಆಕೆಗೆ ಎಲ್ಲೂ ಕುಂದು ಬರುವುದು ಕಾಣುವುದಿಲ್ಲ. ಜಾತಿಯ ಆಚಾರ-ಸಂಸ್ಕಾರಗಳಲ್ಲಂತೂ ಆಕೆಯದೇ ಮೇಲುಗೈ.

ಇತ್ತೀಚಿನ ದಿನಗಳಲ್ಲಿ ಆಧುನಿಕ ಶಿಕ್ಷಣದ ಪರಿಣಾಮವಾಗಿ ಈಕೆ ವೈದ್ಯೆಕೀಯ, ತಾಂತ್ರಿಕ ಶಿಕ್ಷಣ ಕ್ಷೇತ್ರಗಳಲ್ಲಿಯೂ ತನ್ನ ಛಾಪು ಮೂಡಿಸುತ್ತಿದ್ದಾಳೆ. ಔದ್ಯೋಗಿಕ ರಂಗದಲ್ಲಿ ಗಂಡಸಿಗೆ ಸರಿಸಾಟಿಯಾಗಿ ನಿಲ್ಲುವ ಛಾತಿ ಅವಳಿಗೆ ಇದೆಯೆಂಬುದರಲ್ಲಿ ಸಂದೇಹವಿಲ್ಲ.

ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಹೆಸರು ಸೇರಿಸಬೇಕೆಂಬ ತವಕ ಅದರಲ್ಲೂ ಹಿಂದುಳಿದ ಜಾತಿಯ ಸಾಲಿನಲ್ಲಿ ಸೇರುವ ಪ್ರಯತ್ನಗಳು ಮುಖಂಡರ ಮೂಲಕ ನಡೆಯುತ್ತಿವೆ. ಸರಕಾರ ನೀಡುವ ಸೌಲಭ್ಯಗಳಿಂದ ಮಹಿಳೆಯರಿಗೂ ಮುಂದೆ ತುಂಬ ಪ್ರಯೋಜನಗಳಾಗಬಹುದೆಂಬ ಕನಸು ಈ ಜನಾಂಗದ ಮಹಿಳೆಯರ ಕಣ್ಣಮುಂದಿದೆ.

 

ಅನುಬಂಧ ೧

ಕ್ಷೇತ್ರ ಕಾರ್ಯದ ಸಮಗ್ರ ವಿವರ

೧. ಕ್ಷೇತ್ರಕಾರ್ಯದ ವ್ಯಾಪ್ತಿ – ಕುಂಬಳೆ, ಕಾಸರಗೋಡು, ಉದುಮೆ, ಬೇಕಲ, ಚಿತ್ತಾರಿ, ಕೊಯಿಲ, ಕೊಪ್ಲು, ಪಳ್ಳಿಕೆರೆ, ಮಂಗಳೂರು, ಅರಿಕ್ಕಾಡಿ, ಕೂಡ್ಲು, ಇತ್ಯಾದಿ ಪ್ರದೇಶಗಳು

೨. ಸಂಪರ್ಕಿಸಿದ ವ್ಯಕ್ತಿಗಳ ಸಂಖ್ಯೆ ಅಂದಾಜು – ೩೫

೩. ಸಂಪರ್ಕಿಸಿದ ಮನೆಗಳು ೪೫

೪. ಪ್ರಚ್ಛಕರು – ಗಣರಾಜ ಕುಂಬ್ಳೆ, ಪ್ರಮೋದ್ ಕುಮಾರ್, ಮಂಕಿ ಬಾಲಕೃಷ್ಣ, ಡಾ. ಬೇ.ಸೀ. ಗೋಪಾಲಕೃಷ್ಣ, ರಾಜಶೇಕರ, ನಾರಾಯಣ, ದಯಾಸಾಗರ, ರವಿಪ್ರಸಾದ.

೫. ವಕ್ತಾರರು  – ಕೊಪ್ಲು ಶಾಂಭವಿ (೯೫ ವರ್ಷ) ಕೊಯಿಲ
ಸರೋಜ (೪೦ ವರ್ಷ) ಕೊಯಿಲ
ಉಷಾರಾಣಿ (೪೫ ವರ್ಷ) ಕಾಸರಗೋಡು
ದಯಾನಂದ (೩೩ ವರ್ಷ) ಕೊಯಿಲ
ಭಾಸ್ಕರ (೪೫ ವರ್ಷ) ರಾಮನಗರ
ಪ್ರಭಾಕರ (೪೭ ವರ್ಷ) ಕಾಸರಗೋಡು
ಲಕ್ಷ್ಮಿ (೭೦ ವರ್ಷ) ಉದುಮ
ಭವಾನಿ (೬೬ ವರ್ಷ) ಚಿತ್ತಾರಿ
ವಿಮಲ (೪೫ ವರ್ಷ) ಚಿತ್ತಾರಿ
ಶಕುಂತಲ (೪೦ ವರ್ಷ) ಕುಂಬಳೆ, ಆರಿಕ್ಕಾಡಿ
ನಾರಾಯಣ (೫ ವರ್ಷ) ಉದುಮ
ಭವಾನಿ (೫೮ ವರ್ಷ) ಬೇಕಲ
ಕೊಪ್ಪು ಮಾಧವ (೭೦ ವರ್ಷ) ಚಿತ್ತಾರಿ
ರಾಜಮ್ಮ  (೬೫ ವರ್ಷ) ಕೂಡ್ಲು
ಸುಂದಸ್ತೆ (ಸುಂದರಿ ) (೬೧ ವರ್ಷ) ಪಳ್ಳಿಕೆರೆ
ರಘುವೀರ (೬೩ವರ್ಷ) ಕೋಟೆಕಾರು
ಸುಂದರಿ (೮೮ ವರ್ಷ) ಕೋಟೆಕಾರು, ಶಾರದಾನಗರ
ಚಂಚಲ (೪೬ ವರ್ಷ) ಕೋಟೆಕಾರರು

 

ಅನುಬಂಧ ೨

ಪರಾಮರ್ಶನ ಗ್ರಂಥಗಳು

ಕ. ಕೇರಳ ಪ್ರಾಂತದ  ಕನ್ನಡ – ಡಾ ಪಿ.  ಶ್ರೀಕೃಷ್ಣ ಭಟ್ಟ, ೧೯೭೬.

ಖ. ರಾಮಕ್ಷತ್ರಿಯ ಕುಲೋತ್ಪತ್ತಿ – ಪ್ರಕಾಶಕರು – ಬಿ ಶಿವರಾಮಯ್ಯ, ಕೆ. ಸೋಮನಾಥ, ಪಿ.ಕೆ. ನಾರಾಯಣ, ೧೯೪೯.

ಗ. ಕೆಚ್ಚಿನ ಕಿಡಿಗಳು – ಬೇಕಲ ರಾಮನಾಯಕ

ಘ. ದಕ್ಷಿಣ ಕನ್ನಡದ ಇತಿಹಾಸ