ಜನಾಂಗದ ಪರಿಚಯ

ಕೋಟೆ ಜನಾಂಗದವರು ಕ್ಷತ್ರಿಯರು. ಇಕ್ಕೇರಿಯ ನಾಯಕ ಅರಸರು ಇವರನ್ನು ಕರವಳಿಯ ಪ್ರದೇಶಗಳಿಗೆ ಕರೆತಂದರೆಂದು ನಂಬಲಾಗಿದೆ. ಕೆಳದಿ ಸಂಸ್ಥಾನದ ಇತಿಹಾಸದಲ್ಲಿ ಈ ಬಗ್ಗೆ ಉಲ್ಲೇಖಗಳಿವೆ. ದಕ್ಷಿಣ ಕನ್ನಡದ ಇತಿಹಾಸ ಗ್ರಂಥದಲ್ಲಿ ಇದನ್ನು ದಾಖಲಿಸಲಾಗಿದೆ. ಕ್ರಿ.ಶ. ೧೫೮೨-೧೬೩೦ ರ ಅವಧಿಯಲ್ಲಿ ಬಾಳಿದ ಹಿರಿಯ ವೆಂಕಟಪ್ಪ ನಾಯಕ ೧೫೦೫ನೇ ಚಿತ್ರಭಾನು ಸಂವತ್ಸರದ ಮಾರ್ಗಶಿರ ಶುದ್ಧ ೫ರಲ್ಲಿ ಪಟ್ಟವೇರಿದ. ಭದ್ರಪ್ಪನೆಂಬ ಪುತ್ರ ಹಿರಿಯಮ್ಮನೆಂಬ ಪುತ್ರಿ ಇದ್ದರು. ಇವನು ಹೊಳೆಯ ಪಟ್ಟಣ, ಬೆಳೆವಂತೂರು, ಹಾರನಹಳ್ಳಿ ಸೀಮೆಯ ನಾಯಕರನ್ನು ಜೈಸಿ, ಸಾಮಂತರನ್ನಾಗಿಸಿಕೊಂಡು, ಅಲ್ಲೆಲ್ಲಾ ಬದಲಾದ ಕೋಟೆಗಳನ್ನು ಕಟ್ಟಿಸಿ, ತನ್ನ ಸೈನ್ಯವನ್ನಿಟ್ಟುಕೊಂಡು ತುಳು ಜೈನ ರಾಜರೊಂದಿಗೆ “ಕೌಲು” ಮಾಡಿಕೊಂಡ. ೧೬೦೮ರಲ್ಲಿ ಬಾರ್ಕೂರು, ಕಲ್ಯಾಣಪುರ, ಕಂಡ್ಲೂರು, ಕಾರ್ಕಳ, ಮೂಲ್ಕಿ, ಮೂಡಬಿದರೆ, ಉಳ್ಳಾಲ, ಮಂಜೇಶ್ವರ, ಕುಂಬಳೆ, ಕಾಸರಗೋಡು, ಚಂದ್ರಗಿರಿ, ಫಣಿಯಾಲ, ಕುಂಡಂಕುಯಿ, ಬಂದಡ್ಕ, ಕಾಂತಮಂಗಲ, ಬೆಳ್ಳಾರೆ, ಮೂಡುಕೊಡೆಯಾಲ (ಬೆಳ್ಳಾರೆಯ ಹತ್ತಿರ), ಶಿಶಿಲ, ಪುದುಬೆಟ್ಟು, ಕೊಲ್ಲೂರುಬಾಜಿ, ಕಿದೂರು – ಈ ಸ್ಥಳಗಳಲ್ಲಿ ಬಲವಾದ ಕೋಟೆಗಳನ್ನು ಕಟ್ಟಿಸಿ ರಾಜರಾಜ ಕ್ಷತ್ರಿಯರೆಂಬ ಜನಾಂಗದವರನ್ನು ಈ ಕೋಟೆಗಳಲ್ಲಿ ಸೈನಿಕರನ್ನಾಗಿ ನೇಮಿಸಿದನು.

ಈ ಜನಾಂಗದವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ವಿಜಯದುರ್ಗದವರು. ಅಲ್ಲಿಂದ ಇವರನ್ನು ಇಕ್ಕೇರಿಯ ಅರಸರು ತಂದು, ತಮ್ಮಪಾಳ್ಯದಲ್ಲಿ ಸೇರಿಸಿಕೊಂಡರು. ತಾವು ಗೆದ್ದುಕೊಂಡ ಕೋಟೆಗಳನ್ನು ರಕ್ಷಣೆಯಲ್ಲಿಡಲು ಈ ಕಾದಾಳುಗಳನ್ನು ನೇಮಿಸಿದರು. ಹೀಗೆ ರಕ್ಷಣೆಯ ಕಾರ್ಯವನ್ನು ಮಾಡುತ್ತಾ ಕೋಟೆಗಳ ಸನಿಹದಲ್ಲೇ ನೆಲೆಸಿ, ಬಾಳಿ ಬದುಕಿದ ಈ ಜನಾಂಗ ಕೋಟೆ ಕ್ಷತ್ರಿಯರೆಂದೆನಿಸಿದರು. ಅರಸರಿಗೆ ಅತಿ ವಿಧೇಯರಾಗಿದ್ದು, ಕೋಟೆಗಳನ್ನು ಕಾಯುವುದು, ವಿರೋಧಿ ಕೋಟೆಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಇವರ ಕಾರ್ಯವಾಗಿತ್ತು.

ಇಕ್ಕೇರಿಯ ಅರಸರು ೧೫೬೦-೧೭೬೩ ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಭಾಘವನ್ನು ಆಳಿದ್ದಾರೆ. ಪೋರ್ಚುಗೀಸರು ವಶಪಡಿಸಿಕೊಂಡ ಭಾಗಗಳನ್ನು ತಾವು ಗೆದ್ದುಕೊಂಡಿದ್ದಾರೆ. ಕುಂದಾಪುರ, ಗಂಗೊಳ್ಳಿ, ಹೊನ್ನಾವರ ಕಡೆಗಳಿಂದಲೂ ತೊಡಗಿ ಮಂಗಳೂರು, ಉಳ್ಳಾಲದ ಸಮೀಪವಿರುವ ಕಟ್ಟೆ ಕೀಲೂರನ್ನು ಚಂದ್ರಗಿರಿ, ಚಿತ್ತಾರಿ, ಬೇಕಲದ ಕೋಟೆಗಳನ್ನು ವಶಡಿಸಿಕೊಂಡು ಬಲಪಡಿಸಿದರು.

ಈ ಕಾಲಾವಧಿಯಲ್ಲಿ ದಕ್ಷಿಣ ಕನ್ನಡದ ಬಂಟ ಜನಾಂಗವದರು ಹೆಚ್ಚು ಸಂಖ್ಯೆಯಲ್ಲಿ ಸೈನ್ಯಗಳಲ್ಲಿ ಕಂಡುಬರುತ್ತಿರಲಿಲ್ಲ. ಹಾಗಾಗಿ ಇತರೆಡೆಗಳಿಂದ ಸಮರ್ಥ ಸೈನಿಕರನ್ನು ತರಿಸಿಕೊಂಡು ಆ ಕೊರತೆಯನ್ನು ತುಂಬಿಕೊಂಡರು. ಅಲ್ಲದೆ ತಾವು ಗೆದ್ದುಕೊಂಡ ಜೈನ ಅರಸರ ಪಾಳ್ಯದಲ್ಲಿದ್ದ ಬಂಟ ಸೈನಿಕರ ಮೇಲೆ ಅವರಿಗೆ ವಿಶ್ವಸವಿಲ್ಲದ್ದರಿಂದಲೋ ಏನೋ ಅವರು ದೂರದೇಶ (ಮಹರಾಷ್ಟ್ರ) ದಿಂದ ಕ್ಷತ್ರೀಯ ಸೈನಿಕರನ್ನು ತಂದು ನೇಮಿಸಿದರು. (ಆಧಾರ : ದ.ಕ. ಜಿಲ್ಲೆಯ ಇತಿಹಾಸ ಗ್ರಂಥದಿಂದ)

ಇವರಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಿದ್ದವರನ್ನು ಪ್ರತ್ಯೇಕ ಹೆಸರುಗಳಿಂದ .ಗುರುತಿಸಲಾಗುತ್ತಿದೆ. ರಾಜರ ಅಂಗರಕ್ಷಕರೆಂದು ಹೊಣೆ ಹೊತ್ತವರನ್ನು ಹಳೆ ಪೈಕ (ಪಾಯಕ = ಪಾಯಕ ಎಂದರೆ ಸೈನ್ಯ ಎಂದರ್ಥ – ಇವರದು ಹಳೇ ಸೈನ್ಯ) ಕೋಟೆಯನ್ನು ಕಾದವರನ್ನು ರಾಮರಾಜ ಕ್ಷತ್ರಿಯರು, ಮಹಾರಾಷ್ಟ್ರದಿಂದ ಬಂದ ಇನ್ನೊಂದು ವರ್ಗವನ್ನು “ಓಜಿ”ಗಳು ಎಂದು ಕರೆಯುತ್ತಾರೆ. “ಮರಾಠಿ ಕ್ಷತ್ರಿಯರು” ಎನ್ನುವುದು ಇವರ ನಾಮಾಂತರ.

ದಕ್ಷಿಣ ಕನ್ನಡ ಹಾಗೂ ಕರಾವಳಿಯ ಕನ್ನಡ ಪ್ರಾಂತ್ಯದಲ್ಲಿ ನೆಲೆಸಿದ ಈ ಕ್ಷತ್ರಿಯ ಜನಾಂಗವನ್ನು ಕೋಟೆ ಜನಾಂಗ ಅಥವಾ ವಿಶಾಲವಾದ ಅರ್ಥದಲ್ಲಿ ಕೋಟೆಗಾರ, ಕೋಟೆಯಾರ, ಕೊಟ್ಟೆಗಾರ, ರಾಮ ಕ್ಷತ್ರಿಯ, ರಾಮರಾಜ ಕ್ಷತ್ರಿಯ, ಸೇವೆಗಾರ, ಕೋಟೆ ಕ್ಷತ್ರಿಯ ಕ್ಷತ್ರಿಯ ಕುಮಾರ ಕ್ಷತ್ರಿಯ, ಕುಮಾರ ಪಂಥ ಇತ್ಯಾದಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಈ ಹೆಸರುಗಳೆಲ್ಲ ವಿಭಿನ್ನವಾಗಿ ತೋರುತ್ತದೆ. ಸಾಂಸ್ಕೃತಿಕವಾಗಿ ಅಂತಹ ಹೇಳಿಕೊಳ್ಳುವ ಅಂತರಗಳಿಲ್ಲ.

ಇವರ ಪೈಕಿ “ರಮರಾಜ ಕ್ಷತ್ರಿಯ” ರು ಕ್ಷತ್ರಿಯ ಕುಲಪುಂಗವ ಶ್ರೀರಾಮನ ಹೆಸರನ್ನು ತಮ್ಮ ಜನಾಂಗಕ್ಕೆ ಸೇರಿಸಿಕೊಂಡಿದ್ದಾರೆ. ಹಿಂದೆ ವಿಜಯದುರ್ಗದಲ್ಲಿ ಇವರಿಂದ ರಾಮೇಶ್ವರ ದೇವಸ್ಥಾನವೂ ನಿರ್ಮಾಣವಾಗಿತ್ತಂತೆ. ಅಲ್ಲದೆ ಇವರಿದ್ದ ಕೋಟೆಗಳಲ್ಲಿ ಆಂಜನೇಯ ಗುಡಿ ಇರುವುದು ಸಾಮಾನ್ಯವಾಗಿದೆ. ಸ್ವತಃ ರಾಜರುಗಳೇ ಈ ಜನಾಂಗವನ್ನು ಕೋಟೆಗಳಲ್ಲಿ ಸ್ಥಾಪಿಸುವಾಗ ದೇವಸ್ಥಾನಗಳನ್ನೂ ನಿರ್ಮಿಸಿಕೊಡುತ್ತಿದ್ದರು ಎನ್ನಲಾಗಿದೆ.

ಇಂದಿಗೂ ಕುಂಬಳೆ, ಬೇಕಲ ಕಾಸರಗೋಡು ಕೋಟೆಗಳಲ್ಲಿ ಹನುಮಂತ ಮಲ್ಲಿಕಾರ್ಜುನ ದೇವಸ್ಥಾನಗಳಿವೆ. ಕೋಟೆಯ ರಕ್ಷಣೆ ಮಾಡುವ ಸೈನಿಕರಿಗೆ  “ವಜ್ರಾಂಗ ಬಲಿ” (ಹನುಮಂತ) ಯ ರಕ್ಷಾ ಕವಚ. ಶಿವನನ್ನೂ ಇವರು ಅಷ್ಟೇ ಭಕ್ತಿಯಿಂದ ಆರಾಧಿಸುತ್ತಿದ್ದಾರೆ. ಇಕ್ಕೇರಿಯ ಅರಸರು ಶೈವ, ವೈಷ್ಣವ ಭಕ್ತರಿಗೆ ಸಮಾನ ಅವಕಾಶಗಳನ್ನು ಕೊಟ್ಟಿರುವವರು. ಈ ಭೇದರಹಿತ ದೃಷ್ಟಿ ಈ ಜನಾಂಗದ ನಡೆವಳಿಯಲ್ಲಿ ಎದ್ದು ಕಾಣುತ್ತದೆ.

ಈ ಕೋಟೆ ಜನಾಂಗವನ್ನು “ಸೇರ್ವೆಗಾರರು” ಎಂದು ಕರೆಯುತ್ತಾರೆ.  ಇವರು ಹಿಂದೆ ಸೈನಿಕ ಶಿಕ್ಷಣವನ್ನು ನೀಡಿ ದಂಡು ಕಟ್ಟುವ ದಂಡಿಗೆ ಯುವ ಹೊಂತಕಾರಿಗಳನ್ನು ಸೇರಿಸುವ ಕಾರ್ಯ ಮಾಡುತ್ತಿದ್ದದ್ದೇ ಇದಕ್ಕೆ ಕಾರಣವಾಗಿದೆ. ಇವರನ್ನು ಇಂದಿಗೂ ಉಪನಾಮವಾಗಿ ಮಲೆಯಾಳಂನಲ್ಲಿ “ಚೇರ್ಯಕ್ಕಾರನ್”  “ಚೇರ್ಯಕಾರ್” ಎಂದು ಸಂಬೋಧಿಸುತ್ತಾರೆ.

“ಕುಮಾರ ಕ್ಷತ್ರಿಯ” ಎಂದುಕೊಳ್ಳುವ ಇನ್ನೊಂದು ವರ್ಗವೂ ಇದೆ. ಇವರು ಅರಸರ ಅಂಗರಕ್ಷಕ ಭಟರಾಗಿದ್ದರು. ಇವರು ಕರಾವಳಿಯ ಉದ್ದಕ್ಕೂ  ನೆಲೆಸಿದ್ದಾರೆ. ಕೋಟೆಯ ಕಾವಲು ಭಟರಾಗಿದ್ದವರೂ ಇವರಿಗೂ ಉದ್ಯೋಗದಲ್ಲಿ ವ್ಯತ್ಯಾಸ. ಆದರೆ ಸಂಸ್ಕೃತಿಯಲ್ಲಿ ಎದ್ದು ಕಾನುವ ವ್ಯತ್ಯಾಸವಿಲ್ಲ.

ಅಂತೂ ಈ ಜನಾಂಗ ಕ್ಷಾರವೃತ್ತಿಯನ್ನು ವ್ರತವಾಗಿ ಸ್ವೀಕರಿಸಿ ಬೆಳೆದುಬಂದಿದೆ. ಇಂದಿಗೂ ಸೈನ್ಯ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆಗಳಲ್ಲಿ ಈ ಜನಾಂಗದ ಗಂಡುಗಲಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರದ ಪಂಜಾಬಿ ಸಿಕ್ಖರು, ಕೊಡಗಿನ ಕೊಡವರು ಹಾಗೆಯೇ ಕೋಟೆಯವರು ನಿಷ್ಠಾವಂತ ಯೋಧರಾಗಿ ಮೆರೆದವರು.

ಕೋಟೆಗಳ ರಕ್ಷಣೆಯ ಸಂದರ್ಭದಲ್ಲಿ ಆತ್ಮಾಹುತಿ  ಮಾಡಿದ ಸ್ವಾಭಿಮಾನಿ ಮಹನೀಯರ ಮಹಿಳೆಯರ ಕಥೆಗಳಿವೆ. ಹಾಡುಗಳ ರೂಪದಲ್ಲಿ ಅವು ತಲೆಮಾರುಗಳಿಂದ ನೆನಪಾಗಿ ಹರಿದುಬಂದಿವೆ. ಬೇಕಲ ರಾಮನಾಯಕರ ತೆಂಕನಾಡ ಐತಿಹ್ಯಗಳು, ಕಿಚ್ಚಿನ ಕಿಡಿಗಳು, ಕೋಟೆಯ ಕತೆಗಳು ಮುಂತಾದ ಕೃತಿಗಳಲ್ಲಿ ಈ ಜನಾಂಗದ ಕೆಚ್ಚು ಸಾಹಸ, ಅರ್ಪಣೆಯ ಮನೋಭಾವ ಉಲ್ಲೇಖವಾಗಿದೆ.

ಕುಂಬಳೆಯ ಕೋಟೆಯ ಹೆಬ್ಬಾಗಿಲಿನ ಬಳಿಯಲ್ಲಿರುವ ಹನುಮಂತನ ದೇವಾಲಯದಲ್ಲಿ ಹಾಸಿದ ಶಿಲಾಕಲ್ಲುಗಳು ಸುಂದರ ಕೆತ್ತನೆಗಳಿಂದ ಕೂಡಿದ್ದು ಈ ಜನಾಂಗದ ಕಲಾಪ್ರಿಯತೆಯ ದ್ಯೋತಕಗಳಾಗಿವೆ. ಹಳೆಯ ವೀರರಿಗೆ ಸಂಬಂಧಿಸಿದ ವೀರಗಲ್ಲುಗಳು ಇತಿಹಾಸಜ್ಞರಿಗೆ ಶೋಧನೆಯ ಆಕರಗಳಾಗಿವ. ಮಾಸ್ತಿಗಲ್ಲುಗಳು ಈ ಜನಾಂಗದ ಮಹಿಳೆಯರು ಪುರುಷರಷ್ಟೆ ಕೆಚ್ಚು ಸಾಹಸಗಳನ್ನು ತೋರಬಲ್ಲವರೆಂಬುದಕ್ಕೆ ಪುರಾವೆಯಾಗಿವೆ. ಇವೆಲ್ಲ ಕೋಟೆ ಜನಾಂಗದ ಬದುಕನ್ನು ಮತ್ತೆ ಬಣ್ಣಿಸುತ್ತವೆ.

ಕುಂಬಳೆಯ ಕೋಟೆಯೊಳಗೆ ಮಾಸ್ತಿ ಗಿರಿಯಮ್ಮನ ಕಲ್ಲು ಇದೆ. ಮಾಸ್ತಿ ಗಿರಿಯಮ್ಮ ತನ್ನ ಪತಿಯಾದ ಶೇಷಗಿರಿ ನಾಯಕ ಯುದ್ಧದಲ್ಲಿ ಮಡಿದಾಗ ಚಿತೆಯೇರಿ ಸಹಗಮನ ಮಾಡಿದವಳು. ಆಕೆ ಅಂದು ಉಟ್ಟ ಸೀರೆ ಬೆಂಕಿಯಲ್ಲಿ ಉರಿಯದೇ ಉಳಿದಿತ್ತೆಂದು ಹೇಳುತ್ತಾರೆ.  ಪುರುಷನ ಪೌರುಷಕ್ಕೆ ಎಣೆಯಾದ ಆತ್ಮಾರ್ಪಣ ಬುದ್ದಿಯಿಂದ ಪೌರುಷಕ್ಕೆ ಇಂಬು ನೀಡುವ ಮಹಿಳೆಯರು ಕ್ಷಾತರ ಜನಾಂಗದ ವಿಶೇಷ ಸ್ವಭಾವಕ್ಕೆ ಮಾದರಿಯಾಗಿದ್ದಾರೆ.

“ಸೇರ‍್ವೇಗಾರ” ಎಂಬ ಸೈನಿಕಾರ್ಥದ ಮೇಲುನಾಮವಿದ್ದಂತೆ, ನಾಯಕ, ಅಯ್ಯರಾಯ ಮುಂತಾದವುಗಳು ಇವೆ. ಜಾತಿಯ ಮುಖಂಡರನ್ನು ಮೊಕ್ತೇಸರನೆಂದು ಕರೆಯುತ್ತಾರೆ. ಶೃಮಗೇರಿ ಮಠವನ್ನು ತಮ್ಮ ಗುರುಮಠವೆಂದು ಅಂಗೀಕರಿಸಿದ್ದಾರೆ.

ಈ ಜನಾಂಗದವರು ತಾವು ವಿವಿಧ ಗೋತ್ರಗಳಿಂದ ಬೆಳೆದು ಬಂದವರೆಂದು ಗುರುತಿಸಿಕೊಳ್ಳುತ್ತಾರೆ. ವಸಿಷ್ಠ, ವಿಶ್ವಾಮಿತ್ರ, ಜಮದಗ್ನಿ,  ಭಾರದ್ವಾಜ, ಕಾಶ್ಯಪ,  ವೈಶಂಪಾಯನ, ಕೌಶಿಕ, ಶಾಂತಣ್ಯ, ವತ್ಸ, ಕೌಂಡಿನ್ಯ ಮುಂತಾದ ಗೋತ್ರಗಳನ್ನು ಹೇಳುತ್ತಾರೆ.

ರಾಮನಾಥ, ಗೌಡಿಕೆರೆ ಮಲ್ಲಿಕಾರ್ಜುನ, ಮಹಾದೇವ, ಭದ್ರಾವಳಿ, ದುರ್ಗಾಂಬಿಕೆ, ಶಾಂತೇರಿ ಮಹಾಮಾಯಿ (ಅಮ್ಮನವರು) ಮಹಿಷಮರ್ಧಿನಿ, ವೆಂಕಟರಮಣ, ಗಣಪತಿ, ಚಿತ್ರಾವಳಿ, ಮಹಾಲಕ್ಷ್ಮಿ, ಮಹಾಲಿಂಗೇಶ್ವರ, ಆಂಜನೇಯ ಮುಂತಾದ ದೇವರುಗಳನ್ನು ಪೂಜಿಸುತ್ತಾರೆ. ತಾವು ವಾಸ ಮಾಡುತ್ತಿರುವ ಸ್ಥಳದ ದೈವಗಳು, ಭೂತಗಳನ್ನು ಆರಾಧಿಸುತ್ತಾರೆ. ತಮ್ಮ ಉಪಾಸನೆ, ಅರ್ಚನೆ, ಪೂಜೆಗಳಲ್ಲಿ ಬ್ರಾಹ್ಮಣ, ಪುರೋಹಿತ ವರ್ಗದವರನ್ನು ಆಚಾರ್ಯರನ್ನಾಗಿ ಆಹ್ವನಿಸುತ್ತಾರೆ.

ಕೋಟೆ ಜನಾಂಗದ ಜನಸಂಖ್ಯೆ  ನಿಖರವಾಗಿ ಹೇಳಲಾಗದಿದ್ದರೂ ಸುಮಾರು ೨೦,೦೦೦ ಇರಬಹುದೆಂದು ಅಂದಾಜಿಸಲಾಗಿದೆ. ೧೯೭೯ರಲ್ಲಿ ಬೇಕಲದ ರಾಮರಾಜ ಕ್ಷತ್ರಿಯ ಸಂಘದವರು ತಮ್ಮ ಪ್ರದೇಶದ ಜನಾಂಗದ ಜನಗಣತಿ ಮಾಡಿದರು. ಆಗ ೨೩೦ ಕುಟುಂಬಗಳು ೧೬೦೦ರಷ್ಟು ಜನಸಂಖ್ಯೆ ಇತ್ತೆಂದು ದಾಖಲಿಸಿದ್ದಾರೆ. ಒಟ್ಟಾರೆ ಎಲ್ಲ ವರ್ಗದ ಕೋಟೆ ಕ್ಷತ್ರಿಯರನ್ನು ಜನಗಣತಿ ಮಾಡಿದರೆ ಇವರ ಜನಸಂಖ್ಯೆಯನ್ನು ಗಣನೆ ಮಾಡಬಹುದು.

ಕೋಟೆಯ ಪರಿಸರದಲ್ಲೇ ಇವರು ಹಿಂದೆ ವಾಸವಾಗಿದ್ದರು. ಇಕ್ಕೇರಿಯ ವೆಂಕಟಪ್ಪ ನಾಯಕ, ಶಿವಪ್ಪ ನಾಯಕ ಮುಂತಾದ ಅರಸರು, ಆಯಾ ಕೋಟೆ  ಪ್ರದೇಶದ ಸುತ್ತಮುತ್ತಣ ಭೂಮಿಯನ್ನು ಕೃಷಿ ಮಾಡುವ ಉದ್ದೇಶಕ್ಕಾಗಿ ಇವರಿಗೆ ಉಂಬಳಿ ಬಿಡುತ್ತಿದ್ದುದು ಉಂಟು. ಯುದ್ಧಗಳು ಸಂಭವಿಸಿದಾಗ ತಕ್ಷಣ ದಂಡನ್ನು ಕೂಡಿಕೊಳ್ಳಲು ಇವರಿಂದ ಅನುಕೂಳವಾಗುತ್ತಿತ್ತು. ಅನಂತರದ ಕಾಲಕ್ಕೆ ವ್ಯವಸ್ಥೆಗಳು ಬದಲಾದಾಗ ಕೋಟೆಯ ಹೊರಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಜಾಗವನ್ನು ಹುಡುಕಿ ಬೆಳೆದುಬಂದಿದ್ದಾರೆ.

ಕೋಟೆ ಜನಾಂಗದವರು ಎಂದು ಕರೆಸಿಕೊಳ್ಳುವ ಜನ ಇಂದು ನಾಡಿನ ಉದ್ದಗಲಗಳಲ್ಲಿ ಹಂಚಿಹೋಗಿದ್ದಾರೆ. ಆದರೂ ಕೇರಳದ ಉತ್ತರ ಭಾಗದಲ್ಲಿರುವ ಕಾಂಞಂಗಾಡಿನ ಬಳಿಯಲ್ಲಿರುವ ಪಳ್ಳಿಕೆರೆ, ಉದುಮ, ಬೇಕಲ, ಹೊಸದುರ್ಗ, ಅಂತೆಯೇ ಕಾಸರಗೋಡು ಜಿಲ್ಲೆಯ ಕಾಸರಗೋಡು ನಗರ, ಗ್ರಾಮಾಂತರ, ಕುಂಬಳೆ ಮತ್ತು ಆರಿಕ್ಕಾಡಿಯಲ್ಲಿ, ದಕ್ಷಿಣ ಕನ್ನಡದ ಮಂಗಳೂರು  ಮಹಾನಗರದಲ್ಲಿ, ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಆರಕ್ಷಕ ಇಲಾಖೆ, ಅರಣ್ಯ ಇಲಾಖೆ ಹಾಗೂ ಸೈನ್ಯದಲ್ಲಿ ಇವರು ಹುದ್ದೆಗಳನ್ನು ಹಂಚಿಕೊಂಡಿದ್ದಾರೆ.

ವಿದ್ಯಾಭ್ಯಾಸದ ಕುರಿತಾಗಿ ಹಿಂದೆ ಅಧಿಕ ಆಸಕ್ತಿ ಹೊಂದದ ಇವರು ಶ್ರಮಜೀವಿಗಳು. ಸ್ವಭಾವತಃ ಕ್ಷಾತ್ರ ತೇಜಸ್ಸು ಅವರಲ್ಲಿ ಹೆಚ್ಚು. ಹಾಗಾಗಿ ಸೈನಿಕರಾಗಿ, ಆರಕ್ಷಕರಾಗಿ, ಅರಣ್ಯಪಲಕರಾಗಿ, ಹೆಸರು ಮಾಡಿದ್ದಾರೆ. ಸರಳ ಸಜ್ಜನಿಕೆಯ, ಪರೋಪಕಾರ ಮಾಡುವ ಸ್ವಭಾವ ಇವರದು. ಹೋಟೆಲನಂತಹ ಉದ್ಯಮಕ್ಕೆ ಕೈಯಿಕ್ಕಿ ಯಶಸ್ವಿಯಾದ ಮಂದಿಯೂ ಇದ್ದಾರೆ. ಮಹಿಳೆಯರು ಶಿಕ್ಷಕಿಯರಾಗಿ ಹೆಸರುವಸಿಯಾದವರಿದ್ದಾರೆ. ಈಚೆಗೆ ವಿದ್ಯಾರ್ಜನೆಯ ಕಡೆಗೆ ಗಮನ ನೀಡುತ್ತಿರುವವರೂ ಇದ್ದಾರೆ. ತಮ್ಮ ಮಕ್ಕಳನ್ನು ವೈದ್ಯರನ್ನಾಗಿ, ಇಂಜೀನಿಯರನ್ನಾಗಿ ಮಾಡುವ ಉತ್ಸಾಹ ಕೋಟೆ ಕ್ಷತ್ರಿಯರ ಕುಟುಂಬದಲ್ಲಿ ಕಂಡುಬರುತ್ತದೆ.

ಸಾಮಾನ್ಯವಾಗಿ ಸಮಷ್ಟಿ ಕುಟುಂಬಗಳಲ್ಲಿ ಬದುಕುತ್ತಿದ್ದ ಇವರು ಈಚೆಗೆ ಉದ್ಯೋಗ ವ್ಯವಹಾರ ನಿಮಿತ್ತವಾಗಿ ಹರಿಹಂಚಾಗಿ ಹೋಗಿದ್ದಾರೆ. ಹಿಂದೆ ಮೂರು ತಲೆಮಾರು ಜೊತೆಯಾಗಿ ಬದುಕುತ್ತಿದ್ದ ದಿನಗಳಿದ್ದವು. ಕುಟುಂಬದ ಯಜಮಾನಿಕೆ ಗಂಡಸಿನದು. ಉದ್ಯೋಗ ಉದ್ಯಮಗಳಲ್ಲಿ ತೊಡಗಿ ಮನೆಯ ಆರ್ಥಿಕ ವ್ಯವಸ್ಥೆಯನ್ನು ನೋಡಿಕೊಂಡು ಹೋಗುವ ಗಂಡು ಸಹಜವಾಗಿ ಕುಟುಂಬದ ಯಜಮಾನನಾಗಿದ್ದಾನೆ. ಹೆಣ್ಣು ಮನೆಯ ಮಕ್ಕಳ ಲಾಲನೆ ಪಾಲನೆ ಹಬ್ಬ ಹರಿದಿನಗಳಾಚರಣೆ, ಶುಭಶೋಭನ ಕಾರ್ಯಗಳಲ್ಲಿ ಕಾರ್ಯಭಾರ ಪಡೆಯುತ್ತಾಳೆ. ಮನೆಯೊಂದರ ಒಳ ಆಡಳಿತ ಹೆಣ್ಣಿನ ಕೈಯಲ್ಲಿರುತ್ತದೆ.

ಹೆಣ್ಣಿಗೆ ಬಾಲ್ಯದಲ್ಲೇ ಮದುವೆ ಮಾಡುವ ಪದ್ಧತಿ ಕೋಟೆ ಜನಾಂಗದಲ್ಲಿ ಹಿಂದೆ ಚಾಲ್ತಿಯಲ್ಲಿತ್ತು. ಮೈ ನೆರೆಯುವ ಕಾಲಕ್ಕೆ ಮೊದಲೇ ಈ ಮದುವೆಗಳು ನಡೆದು ಹೋಗುತ್ತಿದ್ದವು.  ಹುಡುಗನಿಗೆ ಮಾತ್ರ ಹದಿನೆಂಟೋ ಇಪ್ಪತ್ತೋ ವಯಸ್ಸಾಗಿರುತ್ತಿತ್ತು. ಹೆಣ್ಣಿಗೆ ಹತ್ತು ವರ್ಷ ವಯಸ್ಸಿಗೂ ಮೊದಲೇ ಮದುವೆ. ಅವಳು ನಾಲ್ಕನೇ ತರಗತಿಗಿಂತ ಹೆಚ್ಚು ಓದಬೇಕಾಗಿಲ್ಲ ಎಂಬ ಭಾವನೆ ಹಿಂದೆ ಇತ್ತು. ಹುಡುಗಿ ಮನೆಯಿಂದ ಹೊರಗೆ ತಿರುಗಾಡುವುದು, ಗಂಡಸಿನ ಹತ್ತಿರ ಮಾತನಾಡುವುದು ಇತ್ಯದಿಗಳು ಆಕ್ಷೇಪಗಳಿಗೆ ಕಾರಣವಾಗುತ್ತವೆ.

ಕೋಟೆಯವರು ಮಿಶ್ರಾಹಾರಿಗಳು. ಸಸ್ಯಾಹಾರ ಹಾಗೂ ಮಾಂಸಾಹಾರಿಗಳು ಅವರಿಗೆ ಇಷ್ಟವೇ. ಹಬ್ಬ, ಹರಿದಿನಗಳಲ್ಲಿ ಶುಭಸೋಭಾನೆಗಳಲ್ಲಿ ಮಾಂಸಾಹಾರ ಭೋಜನ ಇಲ್ಲ. ಮಧ್ಯ ಅವರಿಗೆ ವರ್ಜ್ಯವೇನಲ್ಲ. ಹಾಗೆಂದು ಹೆಂಗಸರು ಎಲ್ಲರೂ ಸಂಸಾರದ ಹೊಣೆಯರಿತು ತಮ್ಮ ಹವ್ಯಾಸಗಳನ್ನು ನಿಯತ್ತಿನಲ್ಲಿರಿಸಿಕೊಳ್ಳುವ ಜನ. ಈ ಕೋಟೆಯವರು ಮನೆಮುರುಕರಲ್ಲ. ಹೆಣ್ಣೀಗೆ  ಸಂಸಾರದ ಹೊಣೆಯನ್ನು ಹೊರಬೇಕಾದ ಅನಿವಾರ‍್ಯ ಸ್ಥಿತಿಯಿಲ್ಲ.

ಭಾಷೆಯ ಬಳಕೆಯಲ್ಲಿ ಮೂಲ ರೂಪಗಳನ್ನು  ಅಷ್ಟಿಷ್ಟಾದರೂ ಉಳಿಸಿಕೊಂಡು ಬಂದವರು ಮಹಿಳೆಯರು. ಅವರ ಶಿಕ್ಷಣದ ಮಟ್ಟ ಕಡಿಮೆ. ಆಂಗ್ಲಭಾಷಾ ಪದಗಳನ್ನು ಅವರು ಬಲ್ಲವರಲ್ಲ. ಆ ಪದಗಳನ್ನು ಬಳಸಲು ಸಂಕೋಚ, ನಾಚಿಕೆಪಡುತ್ತಾರೆ. ಹಾಗಾಗಿ, ಅಚ್ಚ ಕನ್ನಡದ ಪದಗಳು ಬಳಕೆಯಲ್ಲಿ ಉಳಿದುಕೊಂಡು ಬಂದಿದೆ. ಇನ್ನು ಹೆಚ್ಚಾಗಿ ಮನೆ ವ್ಯವಹಾರಗಳು, ಹಬ್ಬದಾಚರಣೆಗಳಲ್ಲಿ ಕೋಟೆ ಮಹಿಳೆಯರದೇ ಮೇಲುಗೈಯಾಗಿರುವುದರಿಂದಲೂ ಭಾಷೆಯ ಸ್ವರೂಪ ನಾಶವಾಗಿಲ್ಲ.

ತುಸು ವಯ್ಯಾರದಿಂದ ರಾಗದಿಂದ ಕೂಡಿ ಕೇಳಲು ಹಿತವಾದ ಆಡುನುಡಿಯ ಶೈಲಿ ಹೃದ್ಯವಾಘಿದೆ. ಗಂಡಸರ ಮಾತು ತುಸು ಒರಟಿನಂತೆ ಕಾಣುತ್ತದೆ. ಆಧುನಿಕರು ಮಾತ್ರ ತಮ್ಮ ಮಾತೃಭಾಷೆಯ ಬಗ್ಗೆ ಕೀಳರಿಮೆ ಹೊಂದಿದ್ದಾರೆ.

ಹಬ್ಬಗಳು ಮತ್ತು ಮಹಿಳೆಯ ಭಾಗವಹಿಸುವಿಕೆ :

ಕನ್ನಡ ನಾಡಿನಲ್ಲಿ ರೂಢಿಯಲ್ಲಿರುವ ಹೆಚ್ಚಿನ ಹಬ್ಬಗಳನ್ನು ಇವರೂ ಆಚರಿಸುತ್ತಾರೆ. ಆಚರಣೆಯ ವೇಳೆ ಹೆಂಗಸರಿಗೆ ತುಂಬ ಪೂರ್ವ ತಾರಿಯ ಹೊಣೆ. ಹಬ್ಬದಡಿಗೆ, ಮನೆ ಅಲಂಕಾರ ಇತ್ಯಾದಿಗಳ ಬಗ್ಗೆ ಇರುತ್ತದೆ.

೧. ಚಾಂದ್ರಮಾನ ಯುಗಾದಿ

ಕರಾವಳಿಯಲ್ಲಿ ಸೌರಮಾನ, ಚಾಂದ್ರಮಾನ, ಯುಗಾದಿಗಳೆರಡನ್ನೂ ಆಚರಿಸುವ ಸಮುದಾಯಗಳಲ್ಲಿ ಕೋಟೆ ಜನಾಂಗದ ಮಂದಿ ಯುಗಾದಿ ದಿನ ಎಣ್ಣೆ ಸ್ನಾನ ಮಾಡುತ್ತಾರೆ. ಹೊಸ ಉಡುಪು-ತೊಡಪುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳುತ್ತಾರೆ. ಕಹಿಬೇವು ಮತ್ತು ಬೆಲ್ಲವನ್ನು ತಾವೂ ತಿಂದು ಬಂದ ಬಂಧುಗಳಿಗೆ, ನೆಂಟರಿಗೆ, ಇಷ್ಟರಿಗೆ ಹಂಚುತ್ತಾರೆ. ಸ್ತ್ರೋತ್ರ, ರಾಮಸ್ತ್ರೋತ್ರಗಳನ್ನು ಮಾಡಿ ದೈವಕೃಪೆಯನ್ನು ಪ್ರಾರ್ಥಿಸುತ್ತಾರೆ. ಇಲ್ಲೆಲ್ಲ ಮಹಿಳೆಯರೇ ಆಚರಣೆಯ ಮುಖ್ಯ ಕರ್ತೃಗಳಾಗಿರುತ್ತಾರೆ. ಗಂಡಸರು ಅವರ ಸೂಚನೆಯಂತೆ ನಡೆದುಕೊಳ್ಳುತ್ತಾರೆ.

೨. ನಾಗರಪಂಚಮಿ

ಮುತ್ತೈದೆ ಮಹಿಳೆ ಸಾಮಾನ್ಯವಾಗಿ ಚೌತಿಹಬ್ಬದವರೆಗೆ ಹೊಸ್ತಿಲು ರಂಗೋಲಿ ಬರೆದು ಪೂಜೆ ಮಾಡಬೇಕಾಗಿದೆ, ನಾಗರಪಂಚಮಿಯಿಂದ ಇದು ತೊಡಗುತ್ತದೆ. ಬೆಳಿಗ್ಗೆ ಎದ್ದು ಸ್ನಾನ ತೀರಿಸಿಕೊಂಡು, ಹೊಸ್ತಿಲನ್ನು ತೊಳೆದು ರಂಗೋಲಿ ಇಟ್ಟು, ದೀಪಧೂಪಗಳಿಂದ ಪೂಜೆ ಮಾಡುತ್ತಾರೆ. ನಾಗರಪಂಚಮಿಯ ದಿನ ನವಧಾನ್ಯಗಳನ್ನು ಅರಿಸಿನ ಬೆರೆಸಿ ಅಂಗಳದ ಬದಿಯಲ್ಲಿ ಮಣ್ಣಿನಲ್ಲಿ ಹಾಕಿ, ನೀರು ಹನಿಸಿ ಮಡಕೆ ಮುಚ್ಚುತ್ತಾರೆ.  ಮೊಳೆತು ಚಿಗುರಿ ಸಣ್ಣ ಸಣ್ಣ ಸಸಿಗಳಾದ ಕೂಡಲೆ ಅವುಗಳನ್ನು ಸ್ವಲ್ಪ ಸ್ವಲ್ಪ ಕಿತ್ತು ತೆಗೆದು ಹೂವು ಮತ್ತು ಗರಿಕೆಯೊಂದಿಗೆ “ಚೂಡಿ” ಕಟ್ಟಿ (ಸೂಡಿ) ಹೊಸ್ತಿಲ ಪೂಜೆಗೆ ಬಳಸುತ್ತಾರೆ. ಅನಂತರ ಅದನ್ನು ಪಕ್ಕದ ಮನೆಯ ಹೆಂಗಸರಿಗೆಲ್ಲ ಹಂಚಿವುದು ಪದ್ಧತಿ. ಹಾಗೆಯೇ ಪಾಯಸದೊಂದಿಗೆ ಹಬ್ಬದೂಟ. ನಾಗನಿಗೆ ಹಾಲೆರೆಯುವುದು ಉಂಟು. ಆದರೆ ಅದು ಪ್ರಧಾನ ಕಾರ್ಯವಲ್ಲ.

೩. ಕದಿರು ಹಬ್ಬ

ಕೋಟೆಯವರು ಕ್ಷತ್ರಿಯವರಾದರೂ ಯೋಧರಾದರೂ ಬಿಡುವಿನಲ್ಲಿ ತಮ್ಮ ಉಂಬಿ ಭೂಮಿಯಲ್ಲಿ  ಕೃಷಿ ಕಾಯಕ ಮಾಡಿ ಅನ್ನ ಕಂಡವರು.  ವೈಶ್ಯರು, ಗೋರಕ್ಷೆ, ಕೃಷಿ, ವಾಣಿಜ್ಯಗಳನ್ನು ಮಾಡಿದಂತೆ ಇವರೂ ಈ ಮಾರ್ಗಗಳನ್ನು ಜೀವನೋಪಾಯವೆಂದು ಅಂಗೀಕರಿಸಿದ್ದಾರೆ. ಗದ್ದೆ ಕೊಯ್ಲು ಆಗುತ್ತಲೇ ಈ ಹಬ್ಬಕ್ಕೆ ಪ್ರೇರಣೆ.

ಕೊಯ್ಲಿನ ದಿನ ಮನೆಯ ಹಿರಿಯ ಅಥವಾ ಯಜಮಾನ ಇಲ್ಲವೆ ಹಿರಿಯ ಮಗ ಗದ್‌ಎಯಿಂದ ಪೈರನ್ನು (ಕದಿರು) ಹೊತ್ತುಕೊಂಡು ಅಂಗಳಕ್ಕೆ ಬರುತ್ತಾನೆ.  ಆಗ ಮನೆಯ ಮುತ್ತೈದೆಯರು ಒಂದು ಹರಿವಾಣದಲ್ಲಿ ಹಾಳು, ನೀರು ಹಾಕಿ ತಂದು ಅದರಲ್ಲೇ ಅವನಿಗೆ  ಆರತಿ ಮಾಡಿ, ಹಣೆಗೆ ಕುಂಕುಮ ತಿಲಕವನ್ನಿಡುತ್ತಾರೆ. ತಲೆಗೆ ಮಂಗಲಾಕ್ಷತೆ ಹಾಕಿ ಅವನ ಪಾದವನ್ನು ಗಿಂಡಿ ನೀರಿನಿಂದ ತೊಳೆಯುತ್ತಾರೆ. ಅನಂತರ ಅವನು “ಪೊಲಿ ಪೊಲಿ” ಎನ್ನುತ್ತಾ ತುಲಸಿಗೆ ಪ್ರದಕ್ಷಿಣೆ ಬಂದು, ರಂಗೋಲಿಯಿಂದ ಅಲಂಕಋತವಾದ ಒಂದು ಮಣೆಯಲ್ಲಿ ತುಲಸಿಯ ಕಟ್ಟೆ ಎದುರಿಗೆ ತಾನು ತಂದ ಕದಿರನ್ನು ಇರಿಸುತ್ತಾನೆ. ಒಂದು ಕೊಡಿಬಾಳೆ (ತುದಿ ಇರುವ ಬಾಲೆ ಎಲೆ ತುಂಡು) ಎಲೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ವಿಳ್ಯದೆಲೆ, ಅಡಿಕೆ ಇರಿಸಿ ಧೂಪ, ದೀಪ, ನೈವೇದ್ಯ ಸಮೇತ ಕದಿರು ಪೂಜೆಯನ್ನು ಮಾಡುತ್ತಾರೆ.

ಈ ವೇಳೆ ಸಿಡಿಮದ್ದು ಪಟಾಕಿಗಳನ್ನು ಹಚ್ಚುವುದೂ ಉಂಟು. ಅನಂತರ ಕದಿರುಗಳನ್ನು ಮನೆಯ ವಿವಿಧ ಭಾಗಗಳಿಗೆ ಕೃಷಿ ಉಪಕರಣಗಳಿಗೆ ಕಟ್ಟುವ ಕಾರ್ಯಕ್ರಮ ನಡೆಯುತ್ತದೆ. ಜಾನಪದ ತ್ರಿಪದಿಯೊಂದು ಈ ವೇಳೆ ನೆನಪಾಗುತ್ತದೆ.

ಬೇಸಾಯಗಾರನ ಬೆಳೆಯ ಚಂದಾ ನೋಡಿ |
ನೇಗಿಲು ನೂರು ನೊಗ ನೂರು – ನಮ್ಮನೆಯ |
ಹೂಡ್ಬಿಟ್ಟ ಎತ್ತು ಐನೂರು ||

ಈ ಹಬ್ಬಕ್ಕೆ “ಕೊಯ್ಲು ಹಬ್ಬ” ಎಂಬ ನಾಮಾಂತರವೂ ಇದೆ. ಹಾಡು ಶೋಭಾನೆ ಈ ಹಬ್ಬದ ಕಳೆಯನ್ನು ಬೆಳೆಸುತ್ತವೆ.

ಹುಟ್ಟಂದನೇ ಶಿವನೇ ಮಳೆಯಿಲ್ಲೆಂಬುದ ಕೇಳಿ|
ಮುತ್ತಿನಂಥ ಮಳೆ ಹೊಯ್ದಾವು ಬಿದಿರಂಥ ಸಸಿ ಹುಟ್ಟಿ |
ಮದುಮಗಳಂತೆ ಬಾಗಿ ನಿಂತಾವು ||

೪. ದೀಪಾವಳಿ

ಚತುದರ್ಶಿಯ ಹಿಂದಿನ ದಿನ ಹಂಡೆಗೆ ನೀರು ತುಂಬುವುದು, ಜಾಗಟೆ ಬಡಿದು ಬಾವಿಗೆ ತೋರಣ, ನೀರಿನ ಹಂಡೆ ಅಲಂಕಾರ ಮಾಡಿರುತ್ತಾರೆ. ಮರುದಿನ ಬೆಳಗ್ಗೆ ದೇವರ ಕೋಣೆಯಲ್ಲಿ ದೇವರ ದೀಪ ಹಚ್ಚುತ್ತಾರೆ. ಅಲ್ಲಿ ಮಣೆಯಲ್ಲಿ ಎಣ್ಣೆಯ ಪಾತ್ರೆ ಇರುತ್ತದೆ.  ಮನೆಯ ಹಿರಿಯ ಮಹಿಳೆ ಅಥವಾ ಮಕ್ಕಳ ತಾಯಂದಿರು ಮಕ್ಕಳಿಗೆಲ್ಲಾ ಎಣ್ಣೆ ಹಚ್ಚುತ್ತಾರೆ. ತಲೆಗೆ, ಅವರು ಹಚ್ಚಿದ ಮೇಲೆ ಮೈಗೆಲ್ಲಾ ಮಕ್ಕಳೇ ಹಚ್ಚಿಕೊಳ್ಳುತ್ತಾರೆ. ಗಂಡ ಹಾಗೂ ಮಕ್ಕಳಿಗೆ ಎಣ್ಣೆ ಹಚ್ಚಿ ತಾವೂ ಹಚ್ಚಿಕೊಳ್ಳುತ್ತಾರೆ. ಒಂದಷ್ಟು ಹೊತ್ತಿನ ನಂತರ ಸ್ನಾನ ಮನೆಯ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ತಾಯಂದಿರು ತಲೆ ತಿಕ್ಕಿ ಸ್ನಾನ ಮಾಡಿಸಿ ಬಿಡುತ್ತಾರೆ. ಚತುದರ್ಶಿಯ ದಿನ ಸ್ನಾನ ಮಾಡಿ ಬಂದ ಮೇಲೆ ಹಿಂಡ್ಲ ಕಾಯನ್ನು ಕಾಳಿನ ಮುಮ್ಮಡಿಯಲ್ಲಿಟ್ಟು ನಿಂತು ಹೆಣ್ಣು ಮಕ್ಕಳಿಗೆ ಕುರುದಿ ಆರತಿ (ಕುಂಕುಮ ನೀರು) ಮಾಡುತ್ತಾರೆ. ಗಂಡು ಮಕ್ಕಳಿಗೆ ಹಾಲ್ನೀರಿನ ಬಟ್ಟಲಿಗೆ ಹಾಕಿ ಆರತಿ ಮಾಡುತ್ತಾರೆ. ಹಿಂಡ್ಲಕಾಯನ್ನು ಮೂರನೆಯ ದಿನ ಕಾಲಲ್ಲಿ ಮೆಟ್ಟಿ ಒಡೆಯಬೇಕು. ಆಮೇಲೆ ಅದನ್ನು ಮನೆಯ ಮಾಡಿನ ಹಿಂದಕ್ಕೆ ಎಸೆಯಬೇಕು.

ಅಮಾವಾಸ್ಯೆಯ ದಿನ ಹಿಂಡ್ಲಕಾಯಿಯ ಹಣತೆ (ಹಂತಿಗೆ, ಹಂತಿ, ಹಣತಿಗೆ ಬಗೆಯ ಪ್ರಯೋಗಗಳುಂಟು) ಮಾಡಿ ತುಲಸಿಗೆ ಆರತಿ ಮಾಡುತ್ತಾರೆ. ಇದು ಮಹಿಳೆ ಮಾಡುವ ಕಾರ್ಯ.

ಹಬ್ಬದ ದಿನ ಕುಚ್ಚಿಲಕ್ಕಿಗೆ ಅರಿಸಿನ ಸೇರಿಸಿ ಹಿಟ್ಟು ಮಾಡಿ ಬಾಳೆಎಲೆಯಲ್ಲಿ ಬಡಿಸಿ, ಅದರ ಮೇಲೆ “ಕೊಲ್ತಿರಿ” ಯನ್ನು ಹಚ್ಚಿ ಇರಿಸುತ್ತಾರೆ. ಮನೆಯ ಸುತ್ತ-ಮುತ್ತ ಹಣತೆಗಳನ್ನು ಹಚ್ಚಿಡುತ್ತಾರೆ. ತುಲಸೀಕಟ್ಟೆಯನ್ನು ಸಿಂಗರಿಸಿ ದೀಪ ಹಚ್ಚಿ ಇಟ್ಟು ಪೂಜಿಸುತ್ತಾರೆ. ಪಟಾಕಿ ಸಿಡಿಮದ್ದು ಹಚ್ಚಿ ಸಂಭ್ರಮಿಸುತ್ತಾರೆ. ಹಬ್ಬಕ್ಕೆ ಕಡಬು ವಿಶೇಷವಾದ ತಿಂಡಿ. ಇನ್ನು ಪಾಯಸ, ಸಿಹಿ ತಿಂಡಿ, ಖಾರದ ತಿನಿಸುಗಳು ಇದ್ದದ್ದೇ. ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳು ಮಕ್ಕಳ ಸಮೇತ ತವರಿಗೆ ಬಂದರೆ ಹಬ್ಬಕ್ಕೆ ರಂಗು ಇನ್ನೂ ಏರುತ್ತದೆ.

ಹಬ್ಬದಾಚರಣೆ ಕೆಲವು ಕೋಟೆಯವರ ಮನೆತನಗಳಲ್ಲಿ ಇಲ್ಲ. ಇದಕ್ಕೆ ಹಿನ್ನೆಲೆಯಾಗಿ ತಿಮ್ಮನಾಯಕನ ದುರಂತ ಕಥೆ ಪ್ರಚಾರದಲ್ಲಿದೆ. ಬೇಕಲಕೋಟೆಯ ಪರಿಸರದಲ್ಲಿ ಇರುವ ಮನೆತನಗಳಲ್ಲಿ ಜನಿಸಿದ ತಿಮ್ಮನಾಯಕನೆಂಬ ಯೋಧ ಇದ್ದನಂತೆ. ಈತ ಬ್ರಿಟಿಷರ ವಿರುದ್ಧ ಬಂಡು ಹೂಡಿ ಅವರಿಂದಲೇ ಕೊನೆಗೆ ಹತನಾದನಂತೆ. ಹಾಗಾಗಿ  ಅವನ ಕುಟುಂಬಸ್ಥರು ಬಂಧುಗಳು ಹಬ್ಬವನ್ನಾಚರಿಸುವುದಿಲ್ಲ. ಈ ಕಥೆ ರೋಚಕವಾಗಿದೆ.

ತಿಮ್ಮನಾಯಕ ಬೇಕಲ  ಕೋಟೆಯ ವೀರರ ಮನೆತನದಲ್ಲಿ ಹುಟ್ಟಿದವ. ಬಾಲ್ಯದಿಂದಲೂ ಕೋಟೆಯ ಪರಿಸರದಲ್ಲಿ ಓರಗೆಯವರೊಂದಿಗೆ ಕೋಟೆಯ ಎತ್ತರವನ್ನು ಏರುವ ಮಹದಾಸೆಯನ್ನು ಹೊತ್ತಿದ್ದ. ಇವನ ಶೌರ್ಯ, ವೀರಗಳನ್ನು ಗುರುತಿಸಿದ ಆಂಗ್ಲರು ಇವನನ್ನು ಬೇಕಲದಲ್ಲಿ ಸೈನ್ಯಕ್ಕೆ ಸೈನಿಕರನ್ನು ಜಮಾಯಿಸುವ ಕಾರ್ಯಕ್ಕೆ ಹಚ್ಚಿದರು. ಈತ ಈ ಉದ್ಯೋಗವನ್ನು ಪರಕೀಯ ಬಿಳಿ ಜನರಿಗಾಗಿ ಮಾಡುವುದು ಅವನ ಕಾಲದ ಹಿರಿಯರಿಗೆ ಸರಿಬರಲಿಲ್ಲವಂತೆ.

ಒಮ್ಮೆ ಬ್ರಿಟಿಷರ ಹದ್ದಿನ ಕಣ್ಣು ಬೆಳ್ತಂಗಡಿ ಹೊಳೆಯಾಚೆಯ ಜಮಲಾಬಾದು ಕೋಟೆಯ ಮೇಲೆ ಬಿತ್ತು. ಕರ್ನಲ್  ವೀಸ್ಮಾನ್ ಎಂಬ ಅಧಿಕಾರಿ ಕೋಟೆಯ ಮೇಲೆ ದಾಳಿ ಮಾಡಲು ದಂಢೆತ್ತಿ ಹೊರಟ. ತಿಮ್ಮನಾಯಕನಿಗೂ ಸೂಚನೆ ತಲುಪಿತು. ಬಿಸಿ ನೆತ್ತರುಕ್ಕುವ ಜವ್ವನಿಗ ತಿಮ್ಮನಾಯಕನಿಗೆ ಸುದ್ದಿ ಕೇಳಿ ಕಿವಿ ನೆಟ್ಟಗಾಯಿತು. ಎದೆಯಲ್ಲಿ ಹುರುಪು ಹುಟ್ಟಿತು. ಬೇಕಲದಿಂದ ಅವನೂ ಗುಟ್ಟಾಗಿ ಹೊರಟ. ಕೋಟೆಯ ಕಾವಲುಭಟರ ಜೊತೆ ಸೇರಿ ರಾತ್ರೋರಾತ್ರಿ ಕೋಟೆ ಏರಿದ. ಹಿರಿಯರ ಹಿತವಚನ ಅವನ ಕಿವಿಯಲ್ಲಿ ಅನುರಣನವಾಗುತ್ತಿತ್ತು. ದೇಶದ್ರೋಹಿಯಾಗುವ ಬದಲು ದೇಶಪ್ರೇಮಿಯಾಗಿ ಹುತಾತ್ಮನಾಗುವ ಹೊಸ ಹಂಬಲ ಹುಟ್ಟಿತು.

ಇನ್ನೇನು? ಅವನ ಗರಡಿಯಲ್ಲಿ ಪಳಗಿದ ಯೋಧರು ಪರಂಗಿಯ ದಂಡನ್ನು ಮಣ್ಣು ಮುಕ್ಕಿಸಿ ಬಿಟ್ಟರು. ಅವನದು ರಾತ್ರಿಯ ಕಾಲದ ಯುದ್ಧ ಬೆಳಗಿನವರೆಗೆ ಅವಿರತ ಹೋರಾಟ. ಬ್ರಿಟಿಷರ ದೊಡ್ಡದೊಂದು ಭಂಡತನಕ್ಕೆ ತಿಮ್ಮನಾಯಕನ ಕೈ ಸೋತಿತು. ಶತ್ರುಗಳ ಕೈ ಸೆರೆಯಾದ.  ಮಂಗಳೂರಲ್ಲಿ ಫಿರಂಗಿ ಬಾಯಿಗೆ ತಿಮ್ಮನಾಯಕ ಹಿಡಿ ತುತ್ತಾದ. ಅವನ ಕುಟುಂಬ ಬೇಕಲದಲ್ಲಿ ಇಂದಿಗೂ ಈ ದಾರುಣ ದುರಂತವನ್ನು ಕಣ್ಣೀರ ಕತೆಯಾಗಿ ಅನುವಂಶೀಕವಾಗಿ ನೆನಪಿರಿಸಿದೆ. ಹಾಗಾಗಿ ದೀಪಾವಳಿ ದಿನ ನಡೆದ ದುರಂತದ ಎದುರು ಹಬ್ಬದೂಟ ಸಾಧ್ಯವೇ?

ತುಪ್ಪವನ್ನು ತಯಾರಿಸಿದ ಕೂಡಲೇ ಬಿಸಿಯಾಗಿರುವಾಗಲೇ ಅಳೆದು ಅನ್ಯರಿಗೆ ಮಾರಾಟ ಮಾಡಬಹುದು. ತುಪ್ಪ ಗವ್ಯ ಉತ್ಪನ್ನಗಳಲ್ಲಿ ಅತಿ ಶ್ರೇಷ್ಠ. ಗೋವಿನ ಮಹತ್ವವನ್ನು ಮರೆಯಬಾರದು ಎಂದು ಇದರ ಹಿಂದಿನ ವಿಚಾರ. ಹಾಗೆಯೇ ಹಣವನ್ನು ಅಲಕ್ಷ್ಯದಿಂದ ತೆಗೆಯುವುದು, ಕೊಡುವುದು ಮಾಡಬಾರದು. “ಹಣ” ಎಂದರೆ ಲಕ್ಷ್ಮಿದೇವಿ ಎಂಬ ನಂಬಿಕೆ. ಅದಕ್ಕೆ ಬದುಕಿನಲ್ಲಿ ಮಹತ್ವವಿದೆ. ಅಲಕ್ಷ್ಯ ಸಲ್ಲದು. ಹಣದಲ್ಲಿ ಆಟವಾಡಬಾರದು ಎಂದು ಹಿರಿಯರು ಮಕ್ಕಳಿಗೆ ಹೇಳುತ್ತಾರೆ.

೫. ತುಲಸೀಪೂಜೆ

ಬೆಳಗ್ಗೆ ಸುಮಾರಾಗಿ ಮಧ್ಯಾಹ್ನದ ಒಳಗಾಗಿ ಪೂಜೆ ನಡೆಯುತ್ತದೆ. ಇದು ಹೆಂಗಸರ ಪಾಳಿ ಹಿಂದಿನ ದಿನವೇ ತುಲಸೀಕಟ್ಟೆಯ ಅಲಂಕಾರ ನಡೆದಿರುತ್ತದೆ. ಕೆಮ್ಮಣ್ಣು ಸಾರಿಸಿ, ಸೆಗಣಿ ಬಳಿದು, ಸುಣ್ಣ ಇಲ್ಲವೇ ಜೇಡಿಮಣ್ಣಿನ ಬೊಟ್ಟುಗಳನ್ನು ಇಟ್ಟು, ಮಾವಿನ ತೋರಣ ಕಟ್ಟಿ ಸಿದ್ಧತೆ ಆಗಿರುತ್ತದೆ.

ಪೂಜೆಯ ದಿನ ಎಂದಿನಂತೆ ಹೂವಿನ ಅಲಂಕಾರ, ಧೂಪ, ದೀಪ, ನೈವೇದ್ಯ, ಮಂಗಲಾರತಿ ಮಾಡಿ ಪ್ರಸಾದ ಹಂಚುತ್ತಾರೆ. ದೀಪಾವಳಿಯ ಪಟಾಕಿಯನ್ನು ಉತ್ಥಾನ ದ್ವದಶಿಯ ತುಲಸೀಪೂಜೆಯವರೆಗೂ ಇಟ್ಟುಕೊಂಡು ಅದನ್ನು ಸಿಡಿಸುತ್ತಾರೆ.

ರಾತ್ರೆಯ ಹೊತ್ತು ಮತ್ತೊಮ್ಮೆ ತುಲಸೀಪೂಜೆ. ಇದನ್ನು ಗಂಡಸರು ಮಾಡುತ್ತಾರೆ. ಹೆಂಗಸರು ಅದಕ್ಕೆ ಬೇಕಾದ ಸಹಕಾರ ನೀಡುತ್ತಾರೆ.

ಕಾರ್ತಿಕ ಹುಣ್ಣಿಮೆ

ಇದು ಕ್ಷತ್ರಿಯರ ಒಂದು ಪ್ರಮುಖ ಹಬ್ಬ. ಇದು ಕೂಡಾ ಸುಮಂಗಲಿಯರೇ ಪ್ರಥಮವಾಗಿ ಆಚರಿಸುವ ಹಬ್ಬ. ಇದನ್ನು ವ್ರತದಂತೆ ಆಚರಿಸುತ್ತಾರೆ.

ದಿನವಿಡೀ ಹೆಂಗಸರಿಗೆ ಉಪವಾಸ, ಮಡಿ, ಇದನ್ನು ಸಂತಾನಾಭಿವೃದ್ಧಿಗೆ ಮಾಡುತ್ತಾರೆ. ಆ ದಿನ ಬಾಳೆಯ ಗಿಡದ ಸಿಪ್ಪೆ (ದಂಬೆ) – ಅದನ್ನು  ಪೋಳ ಎನ್ನುತ್ತಾರೆ. ಅದನ್ನು ಕತ್ತರಿಸಿ ತೊಟ್ಟಿಲು ಮತ್ತು ಮಗುವಿನ ಪ್ರತಿಕೃತಿಗಳನ್ನು ಮಾಡಿ ಅದರಲ್ಲಿ “ಕೊಲ್ತಿರಿ” (ಒಂದು ಉದ್ದನೆಯ ಕಡ್ಡಿಯ ತುದಿಗೆ ಬಟ್ಟೆ ಸುತ್ತಿ ಎಣ್ಣೆಯಲ್ಲಿ ಅದ್ದಿ ತೆಗೆದು ಉರಿಸುವ ದೀಪ) ಆಡಿ ತೊಟ್ಟಿಲಲ್ಲಿದ್ದ ಮಗುವಿನ ಪ್ರತಿಕೃತಿಗೆ ಚುಚ್ಚುತ್ತಾರೆ. ದೀಪ ಹಚ್ಚಿ ಗಂಧದ ಕಡ್ಡಿ ಹಚ್ಚಿ ಪೂಜಿಸುತ್ತಾರೆ. ಮನೆಯಲ್ಲಿ ಇರುವ ಪ್ರತಿಯೊಯ್ಯ ಮುತ್ತೈದೆಯೂ ಪ್ರತ್ಯೇಕವಾಗಿ ತೊಟ್ಟಿಲು ಮಗು ಪ್ರತಿಕೃತಿಗಳನ್ನು ತಯಾರು ಮಾಡಿಟ್ಟುಕೊಂಡು ಪೂಜೆ ಮಾಡುವುದು ಇಲ್ಲಿ ಪದ್ಧತಿಯಾಗಿದೆ. ಈ ತೊಟ್ಟಿಲು ಮಗುವನ್ನು ಪೂಜೆ ಮುಗಿದ ಮೇಲೆ ಹರಿಯುವ ನದಿಯಲ್ಲಿ ತೇಲಿಬಿಡುತ್ತಾರೆ. ಇದು ತುಂಬ ನಯನ ಮನೋಹರ ದೃಶ್ಯ. ಕೋಲ್ತಿರಿ ಹಚ್ಚಿ ಚುಚ್ಚುವ ಬಾಳೆಯ ದಂಬೆ ತೊಟ್ಟಿನಂತೆ ತೇಲುತ್ತ ಸಾಗುವ ನೋಟ ಬಲು ಚಂದ. ಈ ಬಾಳೆಯ ತೊಟ್ಟಿಲಲ್ಲಿ ಹಣವನ್ನಿಡುವ ಕ್ರಮವೂ ಇದೆ.

ಹೀಗೆ ತೇಲಿಬರುವ ತೊಟ್ಟಿಲು ಮಗುವಿನ ಚಂದ ನೋಡುತ್ತಾ ಹುಡುಗರು ಕೊನೆಗೆ ನೀರಿಗಿಳಿದು ಆ ತೊಟ್ಟಿಲಲ್ಲಿಟ್ಟು  ಹಣವನ್ನು ತೆಗೆದುಕೊಳ್ಳಲು ಹೋರಾಡುವುದು. ಹೀಗೆ ಈ ಹಬ್ಬ ತುಂಬ ಸಂಭ್ರಮದಿಂದ ಕೂಡಿದೆ.

ಈ ರೀತಿ ಕೋಲ್ತಿರಿ  ಹಚ್ಚಿ ನೀರಲ್ಲಿ ತೊಟ್ಟಿಲು ಮಗು ಬಿಡುವ ಸಂಪ್ರದಾಯದ ಜಲದೇವತೆಯ ಆರಾಧನೆಯೂ ಎದೆಯೆಂದು ಈ ಜನಾಂಗದವರ ನಂಬಿಕೆ.

ಥಾಯಿಲ್ಯಾಂಡಿನಲ್ಲೂ ಇದೇ ತೆರನಾದ ಹಬ್ಬದಾಚರಣೆಯು ಇದೆಯಂತೆ. ಕಾರ್ತಿಕ ಹುಣ್ಣಿಮೆಯಂದು ರಾತ್ರಿ ಬಾಳೆ ಎಲೆಯ ದೊನ್ನೆ ಮಾಡಿ, ಅದರಲ್ಲಿ ಉರಿಯುವ ದೀಪದ ಹಣತೆ ಇರಿಸಿ, ಹೂವು ಹಾಗೂ ಪರಿಮಳ ದ್ರವ್ಯಗಳಿಂದ ಅಲಂಕರಿಸಿ, ಹರಿಯುವ ನದಿಗಳಲ್ಲಿ ತೇಲಿಬಿಡುತ್ತಾರೆ. ಇದರಿಂದ ಸಂತುಷ್ಟಳಾದ ಜಲದೇವತೆ ಮಳೆ ಬೆಳೆ ಸೌಭಾಗ್ಯ ಕೊಡುತ್ತಾಳೆಂದು ಥಾಯಿ ಜನರ ನಂಬಿಕೆ.

ಕಾರ್ತಿಕ ಹುಣ್ಣಿಮೆಯ ಪೂಜೆಯನ್ನು ಹಗಲು ಹೊತ್ತು ಮಾಡುವುದೂ ಉಂಟು. ರಾತ್ರಿ ತುಲಸಿಗೆ ಪೂಜೆ ಮಾಡುತ್ತಾರೆ. ನೈವೇದ್ಯ, ಪ್ರಸಾದ ಇತ್ಯಾದಿ ಇದ್ದೇ ಇದೆ. ಒಂದು ತೆಂಗಿನಕಾಯಿಯನ್ನು ಒಡೆಹುವುದೂ ಉಂಟು.

ರಾತ್ರಿ ಇನ್ನೊಂದು ವಿಶೇಷ “ವರ್ಷಬತ್ತಿ” ಕಾರ್ಯಕ್ರಮ. ಇದು ಲಕ್ಷದೀಪ ಬೆಳಗಿದಂತೆ ಕೋಟೆ ಜನಾಂಗದ ಪ್ರತಿಯೊಂದು ಮನೆಯಲ್ಲೂ ಇದರ ಆಚರಣೆ ಇದೆ. ಮುನ್ನೂರ ತೊಂಬತ್ತು ಬತ್ತಿಗಳನ್ನು ತಯಾರಿಸಿ, ತುಲಸಿ ಕಟ್ಟೆಯ ಹತ್ತಿರ ಈ ಎಲ್ಲಾ ಬತ್ತಿಗಳನ್ನು ಒಟ್ಟುಗೂಡಿಸಿ ಉರಿಸುತ್ತಾರೆ. ದೀಪ ಬೆಳಗಿದ ಮೇಲೆ ಮೂರು ಅಥವಾ ಐದು ಬಾರಿ ಗೋವಿಂದನನ್ನು ಕರೆಯುವುದು.

ನೆಲ್ಲಿಕಾಯಿ ಆರತಿ ಈ ಹಬ್ಬದ ಇನ್ನೊಂದು ಕಾರ್ಯಕ್ರಮ. ಈ ಆರತಿ ತುಲಸಿಗೆ ಕೇಲ್ ಮಡ್ಡೆಯಲ್ಲಿ (ಮಣ್ಣಿವ ಪಾತ್ರೆ, ಬಾಯಿ ಅಗಲವಾಗಿದೆ) ಅಕ್ಕಿಯನ್ನು ತುಂಬಿ ಅದರಲ್ಲಿ ಐದು ನೆಲ್ಲಿಕಾಯಿಗಳನ್ನು ಇಟ್ಟು ಅವುಗಳಿಗೆ ಕೋಲ್ತಿರಿ ಚುಚ್ಚಿ ಬೆಳಗಿಸಿ ಮಂಗಲಾಂಗಿಯರು ತುಲಸಿಗೆ ಆರತಿ ಮಾಡುತ್ತಾರೆ.

ಈ ಆರತಿ ಮಾಡುವ ಕೋಲ್ ಮಡ್ಡೆಗೆ ಹಿಂಡಿಕಾಯಿ ಬಳ್ಳಿಯನ್ನು ಕಟ್ಟಿ ಜೇಡಿಮಣ್ಣಿನಿಂದ ನಾಮ ರಂಗೋಲಿ ಬರೆದು ಸೂರ್ಯಚಂದ್ರರ ಚಿತ್ರ ಮಾಡಿ ಅಲಂಕಾರ ಮಾಡುತ್ತಾರೆ.

ಇಲ್ಲಿ ಬಳಕೆ ಮಾಡುವ ಕೇಲ್ ಮಡ್ಡೆಯನ್ನು ಈ ಹಬ್ಬಕ್ಕೆ ಮಾತ್ರ ಬಳಸುತ್ತಾರೆ. ನರಕ ಚತುರ್ದಶಿಯಂದು ಇದನ್ನು ಹೊರತೆಗೆದು ತೊಳೆದು ಹಂಡೆ ತುಂಬಿ, ಅದರೊಂದಿಗೆ ಈ ಪಾತ್ರೆಯನ್ನು ಇಟ್ಟು ಪೂಜಿಸುತ್ತಾರೆ. ಅದರ ಒಣಗೆ ಎಲೆ, ಅಡಿಕೆ, ಗೊಂಡೆ ಹೂವನ್ನಿರಿಸಿ ತೆಗೆದಿಡುತ್ತಾರೆ. ಮುಂದೆ ದಶಮಿಯ ದಿನ ಅದನ್ನು ಮತ್ತೆ ತೆಗೆದು ತೊಳೆದು ಉಪಯೋಗಿಸುತ್ತಾರೆ.

೬. ಗೋಪೂಜೆ

ಪಾಡ್ಯದ ದಿನಕ್ಕೆ “ಗೋಪೂಜೆ” ಮಾಡುತ್ತಾರೆ. ಗೋವಿನ ಮೈತೊಳೆದು, ಶೃಂಗಾರ ಮಾಡಿ, ಮೈಯೆಲ್ಲಾ ಮುದ್ರೆಯೊತ್ತೆ ಹಣೆಗೆ ಕುಂಕುಮ, ಕೊರಳಿಗೆ ಹೂವಿನ ಹಾರ ಹಾಕುತ್ತಾರೆ. ಪೂಜೆ-ಆರತಿ ಮಾಡಿ, ತಿನ್ನುವುದಕ್ಕಾಗಿ ಹಸುವಿಗೆ ಭತ್ತ, ಕಡುಬು ಕೊಡುತ್ತಾರೆ. ಮಹಿಳೆಯರೇ ಈ ಪೂಜೆಯನ್ನು ಮಾಡುತ್ತಾರೆ.

ಇಲ್ಲಿನ ಒಂದು ವಿಶೇಷವೆಂದರೆ “ಒನಕೆ ದಾಟಿಸುವುದು”. ಇಟ್ಟಿರುವ ಒನಕೆಯೊಂದನ್ನು ಹಸು ದಾಟಬೇಕು. ಇದು ಯಾಕೆಂದರೆ “ಹುಲಿಕರಣ” ಆಗಬಾರದು. ಹಿಂದೆ ಹುಲಿಗಳಿಂದ ಹಸುಗಳಿಗೆ ಅಪಾಯವಿತ್ತು. ಅದು ಬಾರದಿರಲಿ ಎಂದು ಈ ಶಾಸ್ತ್ರ. “ಕೌಲಿ ಹಾಡು” ಎಂಬೊಂದು ಹಾಡು ಈ ಜನಾಂಗದಲ್ಲಿ ಪ್ರಚಲಿತವಿದೆ. ಈ ಹಾಡು ಈ ಆಚರಣೆಯ ಹಿನ್ನೆಲೆಯ ಮೇಲೆ ಬೆಳಕು ಬೀರುವ ಕಾರ್ಯ ಮಾಡುತ್ತದೆ.

ಕೌಲಿ ಹಾಡು

ಇದೊಂದು ಶಕುನ ಗೀತೆ. ಕೌಲಿ ಅಥವಾ ಕೌಲೆ ಎಂದರೆ ಕಪಿಲೆ ಎಂದರೆ ಹಸು ಎಂದರ್ಥ. ನಂದಮ್ಮ ಎಂಬ ಹೆಸರಿನ ಕಪಿಲೆ ಇತ್ತಂತೆ. ಅದು ಎಂದಿನಂತೆ ಮೇಯುವುದಕ್ಕೆ ಹೋದದ್ದು ಸಂಜೆಯ ಹೊತ್ತಿಗೆ ಮರಳಿ ಬಂತು. ಮನೆಯೊಡತಿ ಬಂದ ಹಸುಗಳನ್ನೆಲ್ಲ ಹಟ್ಟಿಯೊಳಗೆ ತಂದು ಅವುಗಳಿಗೆ ಹುಲ್ಲು, ನೀರು ಕೊಡುತ್ತಾ ಬರುತ್ತಾಳೆ. ಆದರೆ ನಂದಮ್ಮ ಮಾತ್ರ ಹುಲ್ಲು, ನೀರುಗಳನ್ನು ಮುಟ್ಟಲಿಲ್ಲ. ಮನೆಯೊಡತಿಗೆ ಆಶ್ಚರ್ಯ! ಹತ್ತಿರ ಬಂದು ನೋಡಿದರೆ ನಂದಮ್ಮನ ಕಣ್ಣು ತುಂಬ ನೀರು. ನಂದಮ್ಮ ಎಕೆ ಎಂದು ಪ್ರಶ್ನಿಸುತ್ತಾಳೆ. ಆಗ ನಂದಮ್ಮ-

ಮಜ್ಜನದೊತ್ತಿಗೆ ಮಜ್ಜಿಗೆ ಕಡದಾರು
ಹೊಂದೀಸಿ ಬೆಣ್ಣೆ ತೆಗೆದಾರು ನಮ್ಮೊಡತಿ
ಲಕ್ಷಣಕೆ ನಾನು ಹುಲಿಕಂಡೆ

ಮನೆಯೊಡತಿ ಮಧ್ಯಾಹ್ನದ ಹೊತ್ತಿಗೆ ಮಜ್ಜಿಗೆ ಕಡೆದಿದ್ದಾಳೆ. ಇದು ಅನಿಷ್ಟಕಾರಕ. ಮಜ್ಜಗೆ ಕಡೆಹುವುದೆಂದರೆ ಮೊಸರು ಕಡೆಯುವುದು. ಇದು ಬೆಳಿಗ್ಗೆ ಬೇಗನೆ ಮುಗಿಸಿಕೊಳ್ಳಬೇಕಾದ ಕೆಲಸ. ಆದರೆ ಸಲ್ಲದ ಹೊತ್ತಿನಲ್ಲಿ ಮಾಡಿದ್ದರಿಂದ ಅದರ ಕೆಟ್ಟ ಪರಿಣಾಮ ಹಸುಗಳ ಮೇಲಾಗುತ್ತದೆ. ಅದು ಹುಲಿಯನ್ನು ಕಾಣುತ್ತದೆ.

ಮುಂದುವರೆದು ನಂದಮ್ಮ ಹೇಳುತ್ತಾಳೆ-
ಸಂಜೆಯ ಹೊತ್ತೀಗೆ ಬಂದ್ನೋನೆ ಹೊಸವಾರು
ಸೂರಾಗಿನ ಹುಲ್ಲು ಸುಗಿವಾರು ನಮ್ಮೊಡತಿ
ಲಕ್ಷಣಕೆ ನಾನು ಹುಲಿ ಕಂಡೆ

ಮುಸ್ಸಂಜೆ ವೇಳೆಗೆ ದೀಪದ “ನೆಣಿ” (ಬತ್ತಿ) ಹೊಸೆಯುತ್ತಾ ಕುಳಿತಿರಬಾರದು ಎಂಬ ನಂಬಿಕೆ. ಅಂತದ್ದೇನಾದರೂ ನಡೆದರೆ ಅನಿಷ್ಟ ತಪ್ಪಿದ್ದಲ್ಲ ಎಂದು ತಿಳಿಯುತ್ತಾರೆ. ನಂದಮ್ಮ ಈ ಕೆಟ್ಟ ಲಕ್ಷಣದಿಂದ ಹುಲಿ ಮುಖ ನೋಡುವಂತಾಯಿತು. ಇನ್ನೊಂದು ಮನೆಯ ಮಾಡಿನ ಹುಲ್ಲು ಕೀಳುವುದು. ಹಿಂದೆ ಮನೆಯ ಚಾವಣಿ ಹುಲ್ಲಿನದ್ದಾಗಿತ್ತು. ಸಂಜೆಯ ಹೊತ್ತು ಮನೆಯ ಹೊರಗೆ ನಿಂತು ಕುಂತು ಮಾತಾಡುವ ಜನ ಆ ಹುಲ್ಲನ್ನು ಕೀಳುವುದು ಅದನ್ನು ಕಚ್ಚುವುದು, ತುಂಡು  ಮಾಡುವುದು, ಮಾತಾಡುವುದು ಉಂಟು. ಹಿರಿಯರು ಅದನ್ನು ಆಕ್ಷೇಪಿಸುತ್ತಾರೆ. ಅದನ್ನೂ ಹಾಡಿನಲ್ಲಿ ತಂದಿದ್ದಾರೆ.

ಬಿಸಿ ಬಿಸಿ ತುಪ್ಪ ಬಸ ಬಸ ಅಳೆದಾರು
ಜೂಗಾಡಿ ಹಣವ ತೆಗೆದಾರು ನಮ್ಮೊಡತಿ
ಲಕ್ಷಣಕೆ ನಾನು ಹುಲಿಕಂಡೆ

ಕೋಟೆ ಜನಾಂಗದ ಹೆಂಗಸರು ಈ ಕೌಲಿ ಹಾಡನ್ನು ತಮ್ಮದೆಂದು ಬಹಳ ಹೆಮ್ಮೆಯಿಂದ ಹಾಡಿಕೊಳ್ಳುತ್ತಾರೆ. ಮಾಡಬಾರದ ಹೊತ್ತಿನಲ್ಲಿ ಉತ್ತಮ ಕೆಲಸಗಳನ್ನು ಮಾಡಿದರೆ ಅದರಿಂದ ಕೇಡು ಉಂಟೆಂದು  ಈ ಹಾಡು ಸಾರುತ್ತದೆ. ಹಸುವಿಗೆ ಹುಲಿಕರ್ಣವಾಯಿತು ಎಂಬ ಮಾತಿನ ಹಿಂದೆ  ಮನುಷ್ಯನಿಗೆ ಇದರಿಂದ ಒಳಿತಾಗದು ಎಂಬ ಸಂದೇಸವಿದೆ ಎನ್ನುತ್ತಾರೆ ಈ ಮಹಿಳೆಯರು.

ಸೊಗಸಾದ ಈ ತ್ರಿಪದಿಗಳು ಹಾಡಿಗೆ ಒಗ್ಗುವ ತ್ರಿಪದಿ ಧಾಟಿಯ ಕೋಮಲತೆ, ಹೃದಯಾರ್ದ್ರ ಭಾವಗಳಿಂದ ಸೊಗಸಾದ ಕಲ್ಪನೆಗಳಿಂದ ತುಂಬಿದೆ. ಹೆಣ್ಣುಮಕ್ಕಳು ಮನೆಯ ಕೆಲಸಕಾರ್ಯಗಳನ್ನು ಕಟ್ಟುನಿಟ್ಟಿನಲ್ಲಿ ಪಾಲಿಸಿಕೊಂಡು ಬರಬೇಕೆಂಬ ನೀತಿ ನಿಯಮದ ಸೂಚನೆಯು ಈ ಹಾಡಿನಲ್ಲಿದೆ.