ಹಿಂದಿನ ಗಣರಾಜ್ಯ (ರಿಪಬ್ಲಿಕ್‌)

ಯೌಧೇಯರು: ಉತ್ತರ ಹಿಂದೂಸ್ಥಾನದಲ್ಲಿ ಚಕ್ರವರ್ತಿ ಸಮುದ್ರ ಗುಪ್ತನ ಕಾಲದಲ್ಲಿ ಪ್ರಜೆಗಳಿಂದ ಆರಿಸಲ್ಪಟ್ಟ ಪ್ರತಿನಿಧಿಗಳಿಂದ ರಚಿಸಿದ ಗಣರಾಜ್ಯ (ರಿಪಬ್ಲಿಕ್‌) ಆಡಳಿತ ನಡೆಸಿತು.

ಮಂತ್ರಿಗಳು: (ರಾಜ ಮಹಾರಾಜರುಗಳ ಕಾಲದಲ್ಲಿ ಒಬ್ಬೊಬ್ಬರೇ ಮಂತ್ರಿಗಳು ಇರುತ್ತಿದ್ದರು)

೧. ತೇಜಪಾಲ

೨. ವಸ್ತುಪಾಲ

೩. ಬಾಮಷಹಾ

೪. ವಿಮಲ ಮಂತ್ರಿ

೫. ಉದಯನ ಮಂತ್ರಿ

೬. ವಾಗ್ಭಟ್ಟ

೭. ಅಮರ ಭಟ್ಟ

೮. ಅಭಡ ಮಂತ್ರಿ

 

ಕವಿಗಳು ಮತ್ತು ವಿದ್ವಾಂಸರು

೧        ಮಹಾಕವಿ ಮಾಘ

೨        ಭಕ್ತ ತುಕಾರಾಮ್

೩        ಆಚಾರ್ಯ ಹೇಮಚಂದ್ರ ಸೂರಿ

೪       ರಾಷ್ಟ್ರಕವಿ ಮೈಥಿಲೀ ಶರಣ ಗುಪ್ತ

೫       ಜಯಶಂಕರ ಗುಪ್ತ

೬        ಭರತೇಂದ್ರು ಹರಿಶ್ಚಂದ್ರ

೭        ಕವಿ ಚಕ್ರವರ್ತಿ ಶ್ರೀಪಾದ

೮        ಸಿದ್ದಪಾಲ

೯        ವಿಜಯಪಾಲ

೧೦      ಬಾಬುಗಂಗಾ ಪ್ರಸಾದ ಗುಪ್ತಾ

೧೧      ರಾಧಾಕೃಷ್ಣದಾಸ್

೧೨      ಜಗನ್ನಾಥ ದಾಸ್ ರತ್ನಾಕರ

೧೩      ಸಿಯಾರಾಮ್ ಶರಣಗುಪ್ತ

 

ಪೀಠಾಧಿಪತಿಗಳು

೧        ಆಚಾರ್ಯ ವಾದಿದೇವ ಸೂರಿ

೨        ಆಚಾರ್ಯ ವಜ್ರಸ್ವಾಮಿ

೩        ಆರ್ಯ ಸಮೇತಿ ಸೂರಿ

೪       ವಾದಿ ಬೇತಾಲ ಸೂರಿ ಶ್ರೀ ಶಾಂತಿ ಸ್ವರೂಪ

೫       ಆಚಾರ್ಯ ಹೇಮಚಂದ್ರ ಸೂರಿ

 

ವೈಶ್ಯ ಭಕ್ತ ಶಿಖಾಮಣಿಗಳು

೧        ತುಲಾಧಾರ

೨        ಸುಂದರ ಶ್ರೇಷ್ಠಿ

೩        ನಗರ ಶ್ರೇಷ್ಠಿ

೪       ದಾರಾ ಶ್ರೇಷ್ಠಿ

೫       ವೈರಾತಿ

೬        ಮಹಾಯೋಗಿನಿ ವೆಂಕಮ್ಮ

೭        ಬುಲ್ಲೇಷು ಮಲ್ಲಯ್ಯ ಶ್ರೇಷ್ಠಿ

೮        ಕಾಮದೇವ

೯        ಜ್ಞಾನದೇವ

೧೦      ವಿಜಯ ಶ್ರೇಷ್ಠಿ ದಂಪತಿಗಳು

೧೧      ಕೈವನ್ನ ಶ್ರೇಷ್ಠಿ

೧೨      ವೀರ ಮಹರ್ಷಿ

೧೩      ಭವಿಷ್ಯದತ್ತ

೧೪     ರಾಜ ಚಂದ್ರಬಾಯಿ

೧೫     ಮಹಾತ್ಮ ಸುಂದರದಾಸ

 

ಆಧಾರ ಗ್ರಂಥಗಳು

೧        ಜಾತಿ ಭಾಸ್ಕರಮು (ತೆಲಗು) – ಪಂಡಿತ ಜ್ವಾಲಾಪ್ರಸಾದ ಮಿಶ್ರ.

೨        ಭಾರತೀಯ ವೈಶ್ಯುಲ ಚರಿತ್ರ (ತೆಲಗು)- ಲಾರ್ಡ್ ಮರ್ಫಿ ಮತ್ತು ಲಾರ್ಡ್ ಡೆನ್‌ಬಿ.

೩        ಭಾರತೀಯ ವೈಶ್ಯುಲ – (ತೆಲುಗು) – ತೇರಾಲ ಜಗದೀಶ್ವರಯ್ಯ

೪       ಭಾರತ ದೇಶಮುಲೋ ವೈಶ್ಯುಲು- (ತೆಲುಗು) -ಅನಾಮಿಕ

೫       ಶ್ರೀ ಕನ್ಯಕಾ ಪರಮೇಶ್ವರಿ ಪುರಾಣ- ಅನುವಾದ – ಗುರುಮೂರ್ತಿ ಪೆಂಡಕೂರು

೬        ಕನ್ನಡ ಜಾನಪದ ವಿಶ್ವಕೋಶ- ಸಂ : ಡಾ.ಚಂದ್ರಶೇಖರ ಕಂಬಾರ

೭        ಮುಂಬಯಿ ಕರ್ನಾಟಕದ ಗೆಝೆಟಿಯರ್- ಸಂ.: ವೆಂ.ರಂ. ಕಟ್ಟಿ

೮        ಮೈಸೂರು ಗೆಝೆಟಿಯರ್‌ಸಂ.: ಹಯವದನರಾವ್

೯        ಕರ್ನಾಟಕ ಗೆಝೆಟಿಯರ್ – ಸಂ: ಸೂರ್ಯನಾಥ ಕಾಮತ್

೧೦      ವೈಶ್ಯಧರ್ಮ ಪ್ರಕಾಶಿಕಾ (ತೆಲಗು)- ಲಕ್ಷ್ಮೀ ನರಸಿಂಹ ಸೋಮಯಾಜಿಲು

೧೧      ಆರ್ಯವೈಶ್ಯ ಧರ್ಮ – ಬಿ.ಪುಟ್ಟಸ್ವಾಮಯ್ಯ

೧೨      Mysore Castes & Tribes Vol. IV- ದಿವಾನ್ ಬಹಾದುರ್ ಎಲ್‌.ಕೆ.ಅನಂತಕೃಷ್ಣ ಅಯ್ಯರ್.

೧೩      ಶ್ರೀ ಕರ್ನಾಟಕ ವಚನ – ಕನ್ಯಿಕಾ ಪುರಾಣ- ಶ್ರೀ ಬೇಲೂರು ಕೇಶವದಾಸರು

೧೪     ಕಲ್ಯಾಣ ಸಂಸ್ಕೃತಿ – ಗುರುಮೂರ್ತಿ ಪೆಂಡಕೂರು

೧೫     ಸಾರ್ಥ ಷೋಡಶ ಸಂಸ್ಕಾರ ರತ್ನಮಾಲಾ- ವಿದ್ವಾರ್ನ ಗುರುಕೃಷ್ಣ ಭಟ್ ಪೆರ್ಲ.

೧೬      ಆರ್ಯವೈಶ್ಯ ಮಾರ್ಗದರ್ಶಿ – ಸಂ: ವೆಂಕಟಕೃಷ್ಣಯ್ಯ

೧೭      ವಾಸವಿ ಪಂಚಾಂಗ

೧೮      ನಮ್ಮ ಕುಲರಸಿಕರು – ಸಂ: ಗುರುಮೂರ್ತಿ ಪೆಂಡಕೂರು.

೧೯      ಪ್ರವಾಸ ಕಂಡ ಇಂಡಿಯಾ ಸಂಪುಟಗಳು- ಡಾ. ಎಚ್‌.ಎಲ್‌.ನಾಗೇಗೌಡರು

೨೦      ಸಾರ್ಥ (ಕಾದಂಬರಿ) – ಎಸ್‌.ಎಲ್‌.ಭೈರಪ್ಪ.

 

ಸುವ್ವಿ ಹಾಡು

೧)       ಸುವ್ವಿ ಕಾವೇರಿ ರಂಗ, ಸುವ್ವಿ ಕಸ್ತೂರಿ ರಂಗ,
ಸುವ್ವಿ ಶ್ರೀಧರನ ಪಾಡಿ ಮದುವೆ ಮನೆಯಲ್ಲಿ
|| ಸುವ್ವಿ ಸುವ್ವಿ ಸುವ್ವಾಲೆ ||
ತೋದ ಕಡಲಿ ಕಬ್ಬು ಬೆಲ್ಲ, ಸಾದಾಚಿಗಳಿ ತಂಬಿಟ್ಟು
ಆದಿಗಣನ ಪೂಜೆ ಮಾಡಿ ಮದುವೆ ಮನೆಯಲ್ಲಿ  || ಸುವ್ವಿ ||
ಚಿನ್ನ ಹರಿವಾಣದೊಳಗೆ ಚಿನ್ನ ಮುತ್ತು ಬಾಗಿಣವ
ಕನ್ನೆ ಮಹಾಲಕ್ಷ್ಮೀದೇವಿ ಮದುವೆ ಮನೆಯಲ್ಲಿ  || ಸುವ್ವಿ ||
ಮುತ್ತಿನ ಹರಿವಾಣದೊಳಗೆ ಮುತ್ತು ರತ್ನ ಬಾಗಿಣವ
ನಿತ್ಯ ಮಹಲಕ್ಷ್ಮೀದೇವಿ ಮದುವೆ ಮನೆಯಲ್ಲಿ  || ಸುವ್ವಿ ||
ಅಷ್ಟವರ್ಗದಾದಿಯಲ್ಲಿ ಅಷ್ಟ ದಿಕ್ಕಪಾಲಕರು
ಇಟ್ಟವರಳು ಗೋದಿಕಲ್ಲು ಪೂಜೆ ಮಾಡಿರಿ     || ಸುವ್ವಿ ||

 

ಉಡಿ ತುಂಬುವ ಹಾಡು

೨)       ವನಜಾತ ಮುಖಿಯರೆಲ್ಲ ಬಂದು ಉಡಿಯ ತುಂಬಿರೆ
ಉಡಿಯ ತುಂಬಿರೆ ತಾವ್ ಮಡದಿಯರೆಲ್ಲ ಉಡಿಯ ತುಂಬಿರೆ || ಪ ||
ಹಣ್ಣು ತೆಂಗಿನಕಾಯಿ ಫಲ ಚಂದದಿಂದಲಿ
ಚಂದದಿಂದಲಿ ತಾವ್‌ಆನಂದದಿಂದಲಿ         || ೧ ||
ಹಳದಿ ಕುಪ್ಪುಸವನ್ನು ತೊಟ್ಟು ಹರಿದಿಯರೆಲ್ಲ
ಹರಿದಯರೆಲ್ಲ ತಾವ್ ಮಡದಿಯರೆಲ್ಲ          || ೨ ||
ಮುತ್ತು ಸುತ್ತಿದ ತಟ್ಟೆಯನ್ನು ಹಿಡಿದು ನೋಡುತ
ಹಿಡಿದು ನೋಡುತ ಕೈಯಲ್ಲಿಡಿದು ನೋಡು   || ೩ ||

 

ಆರತಿ ಹಾಡು

೩)       ಆರತಿ ಬೆಳಗಿರಿ ನಾರಿಯರು ಬೇಗ ಆದಿಕೊಲ್ಲಾಪುರದ ಮಹಾಲಕ್ಷ್ಮೀಗೆ
ಹಾಡುತ ಪಾಡುತ ಜಾಣೆಯರೆಲ್ಲರು ಆದಿ ನಾರಾಯಣನ ಪ್ರಿಯಳಿಗೆ || ಪ ||
ಜರದ ಪಿತಾಂಬರ ಸೀರಿಗೆ ಹೊಳೆಯುತ ಜಗಜಗೆಯಿಂದ ಹೊಳೆಯುತಲಿ
ಸಡಗರದಿಂದಲಿ ಹುಡಿಯ ಕುಂಕುಮ ಹಚ್ಚಿ ಒಡೆಯ ವೆಂಕೋಬವ ಮಡದಿಗೆ || ೧ ||
ಪಿಲ್ಲೆ ಕಾಲುಂಗರ ಲಲ್ಲು ಪೈಜಣರುಳಿ ಘಲ್ಲು ಘಲ್ಲೆಂದು ಹೆಜ್ಜೆಯನಿಡುತಲಿ
ಉಲ್ಲಾಸಿಂದಲಿ ನಡುವಿಗೊಡ್ಯಾಣ ಉಲ್ಲನಾಭನ ಪ್ರಿಯಳಿಗೆ      || ೨ ||
ಚೌರಿ ರಾಗುತಿ ಗೊಂಡ್ಯ ಹೆರಳು ಬಂಗಾರ, ಬುಗುಡಿ ವಾಲೆಗಳು ಹೊಳೆಯುತ್ತಲಿ
ತೊಟ್ಟ ಕುಂಚುಕವು ಇಟ್ಟ ವಂಕಿಯ ತೋಡೆ ಬೆಟ್ಟದ ವೆಂಕೋಬನ ಮಡದೀಗೆ || ೩ ||

 

ಬಸುರಿ ಬಯಕೆ ಹಾಡು

೪)       ರಂಗನ ರಾಣಿಯ ಮಂಜುಳವೇಣಿಯ ಅಂಗನಿಗರ್ಭದ ಅಪೇಕ್ಷೆಗಳು
ಕರಿವದನೆ ನಿಮ್ಮ ಚರಣಕ್ಕೆ ನಮಿಸಲು ಚರಣತಿ ನಡಿಗರ್ಭ ತೋಡುವಳು || ಪ ||
ಪ್ರಥಮನೆ ತಿಂಗಳು ಅತಿ ಬಳಲುತ ನಾರಿ ಸುತನ ಬಯಕೆ ಕಾಟ ತಾಳುತಲಿ
ಘೃತಕ್ಷೀರ ಪರಮಾನ್ನ ಹಿತವಾಗದು ತನ್ನ, ಸುತನ ಬಯಕೆ ಕಾಟ ತಾಳುತಲಿ || ೧ ||
ಎರಡನೆ ತಿಂಗಳಲ್ಲಿ ಎಳೆಯ ಹುಣಸಿಕಾಯಿ, ಹುಳಿತು ಮಾವಿನಕಾಯಿ ಬಯಸುವವಳು
ಹುಳಿಯ ನೇರಳೆಕಾಯಿ, ಸವಿಯುತ್ತ ವನದಲ್ಲಿ, ಕೆನೆಮೊಸರವಲಕ್ಕಿ ಬಯಸುವಳು || ೧ ||
ಮೂರನೆ ತಿಂಗಳಲಿ ನಾರಿಗೆ ನಿಜವಾಗಿ, ತೋರಿ ಬರಲು ತನ್ನ ತವರಿನಲ್ಲಿ
ವಾರಿಗಿ ಗೆಳೆತರ ಕೂಡ ಆಡುತ್ತ ವನದಲ್ಲಿ ಪಾರಿಜಾತದ ಕುಸುಮ ಮುಡಿಸುವರು || ೨ ||
ನಾಲ್ಕನೆ ತಿಂಗಳಲ್ಲಿ ಪಾಕದೊಳೆದ್ದಿಗ, ಸೇತು ಜಿಲೇಬಿ ಚರೋಡಿಗಳು
ಬಾಸುಂದಿ ಖೀರುಪುರಿ ಬೇಸನ್ನ ಕೇಳುತ. ದೋಸೆ ಸೀಖರಣಿ ಬಯಸುವಳು || ೩ ||
ಐದನೆ ತಿಂಗಳಲ್ಲಿ ಪರಿಮಳದ ಮಲ್ಲಿಗೆ ಮರುಗ ಕೇದಿಗೆ ದವನ ಬಯಸುವಳು
ನಿಂಬೆ ನೀರಲ ಸೀಬೆ ಪೇರಲ ಅಂಜೂರ, ದ್ರಾಕ್ಷಿ ಗೋಡಂಬಿ ಬಯಸುವಳು || ೪ ||
ಆರನೆ ತಿಂಗಳಲ್ಲಿ ಆರಿದನ್ನವು ಬೇಳೆ, ಸಾರು ಉಪ್ಪಿನ ಕಾಯಿ ಬಯಸುವಳು
ಹಿರೇಸವತೆ ಬೆಂಡೆ, ಬಾಳೆ ಬಟಾಣಿ ಬಜ್ಜಿ ಖರದ ಹಪ್ಪಳ ಬಯಸುವಳು || ೫ ||
ಏಳನೆ ತಿಂಗಳಲ್ಲಿ ಹೋಳಿಗೊಣ್ಣೊರಿಗೆ ಹೊಸಬೆಣ್ಣಿ ಕಾಸಿದ ತುಪ್ಪ ಬಯಸುವಳು
ಸಣ್ಣ ಸಾವಿಗೆ ಜಿನುಗು ಗವಲಿ ಪರಡಿ ಪಾಯಸ ಚಟ್ನಿ ಕೋಸಂಬ್ರಿ ಬಯಸುವಳು || ೬ ||
ಎಂಟನೆ ತಿಂಗಳಲ್ಲಿ ಬಂಗಾರ ಸರತೊಟ್ಟು ಕಂಠಿ ಮುತ್ತಿನ ಹಾರ ಬಯಸುವಳು
ಹಸಿರು ಪತ್ತಲನುಟ್ಟು ಜರಿಯ ಕುಪ್ಪಸ ತೊಟ್ಟು ಹೊಸ ಮುತ್ತು ಬಿಗಿದ
ಹೊನ್ನುಂಗುರ ಬಯಸುವಳು || ೭ ||
ಒಂಭತ್ತು ತಿಂಗಳು ತುಂಬಲು ಅಂಗನೆರೆ ಬಂದವು ಟೊಂಕದ ಬೇನೆ ಸೂಲಿಗಳು
ಯಾತನೆ ನುಡಿಯಂಗುತ ಚಂದ್ರನ ಹೋಲುವ ಕಂದನ ಪಡೆದಳು ಶುಭದಿನದಿ || ೮ ||

ಹಾಡುಗಳನ್ನು ಹೇಳಿದವರು ” ಶ್ರೀಮತಿ ಬಳ್ಳಾರಿ ಪಾರ್ವತಮ್ಮ ಹಗರಿ ಬೊಮ್ಮನಹಳ್ಳಿ

ನಮ್ಮ ಭಾಗದ ಪ್ರಸಿದ್ದ ಕವಯಿತ್ರಿಯಾದ ಹರಪನಹಳ್ಳಿ ಭೀಮವ್ವನವರ ಅನೇಕ ರಚನೆಗಳನ್ನು ನಮ್ಮ ಜನರು ಹಾಡುತ್ತಾರೆ.

ಸಂದರ್ಶನ ೧
ಶ್ರೀಮತಿ ಗಂಗಮ್ಮ ಪದ್ಮಾವತೆಮ್ಮ

ವಯಸ್ಸು : ೮೬
ಜನನ: ಬಾಗಲಕೋಟೆ
ವಿದ್ಯಾಭ್ಯಾಸ: ೫ನೇ ತರಗತಿ
ತಂಗಿಯರು: ೨
ತಮ್ಮ : ೧

ರಾಮನಗರ ಹಗರಿಬೊಬ್ಬನಹಳ್ಳಿಯ ಆಗರ್ಭ ಶ್ರೀಮಂತರಾದ ದಿವಂಗತ ಗಂಗಾಮ ವೆಂಕಟರಮಣ ಸೆಟ್ಟರ ದ್ವಿತೀಯ ಪತ್ನಿ.

ಹಾಡು ಹಸೆ, ಹಬ್ಬ, ವ್ರತ-ನೇಮ, ವಿಧದ ಅಡಿಗೆಯಲ್ಲಿ ಪಳಗಿದ ಕೈ. ವಿತವ್ಯಯ ಮತ್ತು ಮರುಬಳಕೆಯಲ್ಲಿ ಶ್ರದೆ ಎಂಬಿತ್ತಾರನೆಯ ವಯಸ್ಸಾದರೂ ಅವರು ಅತ್ಯಂತ ಆರೋಗ್ಯವಂತರು. ಕ್ರಿಯಾಶೀಲರು ಆಗಿದ್ದಾರೆ.

ಅವರ ಪ್ರಕಾರ ಎಲ್ಲಿ ತಾಯಿಗೆ ಅಥವಾ ಅತ್ತಗೆ ಮನೆಯ ಗೃಹಕೃತ್ಯದ ಯಜಮಾನಿಕೆ ಇರುತ್ತದೋ ಅಲ್ಲಿ ಎಲ್ಲವೂ ಕಟ್ಟು ನಿಟ್ಟಾಗಿ ನಡೆಯುತ್ತದೆ.

ಸುಶಿಕ್ಷಿತರಾಗಲಿ, ಅಶಿಕ್ಷಿತರಾಗಲಿ ನಮ್ಮ ಜನಾಂಗದ ಮಹಿಳೆಯರು ಮನೆತನವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಆದರೆ ಈಗ ಆ ಪರಿಸ್ಥಿತಿ ಬದಲಾಗಿದೆ. ದೊಡ್ಡವರಿಗೆ ಯಜಮಾನಿಕೆ ಇಲ್ಲ ಎಲ್ಲವನ್ನೂ ದುಡಿಯುವವರೇ ನಿರ್ವಹಿಸುತ್ತಾರೆ.

ಸುಮಾರು ನಲವತ್ತು ವರುಷ ಸ್ಥಳೀಯ ಮಹಿಳಾ ಸಮಾಜದ ಅಧ್ಯಕ್ಷರಾಗಿ ಕೆಲಸ ಮಾಡಿದ ಅವರಿಗೆ ಜನಾಂಗದಲ್ಲಿ ಹೆಂಗಸರ ಪರಿಸ್ಥಿತಿ ಅಭದ್ರವಾಗಿದೆ ಎನಿಸುತ್ತದೆ. ಗಂಡಸರು ಮಹತ್ವಾಂಕ್ಷೆಯಿಂದ ಅನೇಕ ತಪ್ಪುಗಳನ್ನು ಮಾಡುತ್ತಿದ್ದಾರೆ. ಅದರಿಂದ ಅನೇಕ ಮನೆತನಗಳ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ. ಆದರೆ ಗೃಹಿಣಿಯರು ಸಾಂಸ್ಕೃತಿಕವಾಗಿ ಇನ್ನೂ ಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿರುವುದು ಸಂತೋಷಕರ. ಆಗಿನ ಕಾಲದ ಮದುವೆ, ಉತ್ಸವ, ತೇರು, ಜಾತ್ರೆ, ಹಬ್ಬ-ಹರಿದಿನಗಳು. ಮತ್ತು ಆಗಿನ ಕಾಲದ ಅಡಿಗೆ-ಉಡುಗೆ, ಆಭರಣ ಮತ್ತು ಆಚರಣೆಗಳ ಬಗ್ಗೆ ನೆನಪಿಸಿಕೊಳ್ಳಬೇಕಷ್ಟೆ ಎಂಬುದು ಅವರ ಖಚಿತ ಅಭಿಪ್ರಾಯ.

 

 

 

ಸಂದರ್ಶನ ೨
ಶ್ರೀಮತಿ ಸಂಧ್ಯಾ ಕೃಷ್ಣಪ್ಪ

ಜನನ: ನಾಗಪುರ ಮಹಾರಾಷ್ಟ್ರ
ವಯಸ್ಸು: ೫೦
ವಿದ್ಯಾಭ್ಯಾಸ: ಎಸ್‌.ಎಸ್‌.ಎಲ್‌.ಸಿ.
ಸೋದರ: ೧
ಸೋದರಿ: ೧
ತಂದೆ: ರೈಲ್ವೆ ಇಲಾಖೆಯಲ್ಲಿ ಮೆಕ್ಯಾನಿಕಲ್‌ಇಂಜಿನೀಯರ್ ಆಗಿದ್ದರು.
ಮದುವೆ: ಎರಡನೇ ಸಂಬಂಧ. ೧೯ ವರ್ಷ ಆಯಿತು.
ಗಂಡ: ಶ್ರೀ ಕೃಷ್ಣಪ್ಪ ಕೆ.ಎಸ್‌.ಆರ್.ಟಿ.ಸಿ.ಯಲ್ಲಿ ಟ್ರಾಫಿಕ್‌ಕಂಟ್ರೋಲರ್ ಆಗಿ ನಿವೃತ್ತರಾಗಿದ್ದಾರೆ.
ಮಕ್ಕಳು: ಗಂಡನ ಮೊದಲ ಪತ್ನಿಯ ಮಕ್ಕಳು, ೨ ಪುತ್ರರು, ೧ ಪುತ್ರ.

ಹಗರಿಬೊಮ್ಮನಹಳ್ಳಿ-ರಾಮನಗರದಲ್ಲಿರುವ ಶ್ರೀಮತಿ ಸಂಧ್ಯಾ ಅವರದು ಸಂತೃಪ್ತ ಜೀವನ. ಅವರದು ಈಗ ಅಪರೂಪವೆನಿಸುವ ಅವಿಭಕ್ತ ಕುಟುಂಬ. ಪತಿ ಮತ್ತು ಪುತ್ರರು ವ್ಯಾಪಾರ, ವ್ಯವಹಾರ ಮತ್ತು ಸಂಬಂಧ ಏನೇ ಮಾಡಲಿ ಪರಸ್ಪರ ಚರ್ಚಿಸಿ ಮಾಡುತ್ತಾರೆ. ಮನೆಯಲ್ಲಿ ತಾಯಿಗೆ ಗೌರವ, ದೊರೆಯಬೇಕಾದ ಹಿರಿತನ ಎಲ್ಲಾ ದೊರೆತಿದೆ.

ಅವರ ಪ್ರಕಾರ ಮದುವೆ ನಮ್ಮ ಕೈಯಲಿಲ್ಲ. ಅದು ಪೂರ್ವಜನ್ಮದ ಸಂಬಂಧ. ಅವರ ಜಾತಕದ ಪ್ರಕಾರ ಅವರಿಗೆ ಎರಡನೇ ಸಂಬಂಧವೇ ಆಗುತ್ತದೆಂದು ತಿಳಿಸಿದ್ದರಂತೆ. ಆದ್ದರಿಂದ ಅವರ ತಂದೆ ಎಷ್ಟೇ ಪ್ರಯತ್ನಿಸಿದರೂ ದೊರೆತದ್ದು ಎರಡನೇ ಸಂಬಂಧ ಈಗಾಗಲೇ ಗಂಡನಿಗೆ ಮೂರು ಮಕ್ಕಳಿದ್ದ ಕಾರಣ ಮತ್ತೆ ತಾವು ಹೆರುವುದು ಬೇಡ ಎಂದು ನಿಶ್ಚಯಿಸಿ ಕುಟುಂಬ ನಿಯಂತ್ರಣ ಪಾಲಿಸಿದ್ದಾರೆ. ಮನೆಯಲ್ಲಿ ಬಿಚ್ಚು ಮಾತು ನಡೆಯುವುದರಿಂದ ಯಾವ ರೀತಿಯ ಭಿನ್ನಾಭಿಪ್ರಾಯಗಳಿಲ್ಲ.

ನಮ್ಮ ಸಮಾಜದಲ್ಲಿ ಮಹಿಳೆಯರ ಪರಿಸ್ಥಿತಿ ಚೆನ್ನಾಗಿದೆ. ಅಲ್ಲೊಂದು-ಇಲ್ಲೊಂದು ದುಃಖಕರ ಪ್ರಸಂಗಗಳಿವೆ. ಆದರೆ ಆರೆಂಟು ಜನ ಹುಡುಗಿಯರು ಮದುವೆಯಾಗದೇ ಇದ್ದಾರೆ. ಅದರಂತೆ ಕೆಲ ಹುಡುಗರೂ ಮದುವೆ ಆಗಲಾಗಿಲ್ಲ. ತಂದೆಯಿಲ್ಲದ ಮಕ್ಕಳು ತುಂಬಾ ಕಷ್ಟಕ್ಕೆ ಗುರಿಯಾಗಿದ್ದಾರೆ. ಸಂಧ್ಯಾ ಅವರು ಮಹಿಳಾ ಸಮಾಜದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹೆಣ್ಣು ಮಕ್ಕಳು ಹೆಚ್ಚು ವಿದ್ಯಾಭ್ಯಾಸ ಮಾಡಬೇಕು ಮತ್ತು ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಬೇಕು, ಮನೆಯ ಹಿರಿಯರಿಗೆ ಗೌರವ, ಅಂತಃಕರಣ ತೋರಬೇಕು.

 

ಸಂದರ್ಶನ ೩
ಶ್ರೀಮತಿ ಬಳ್ಳಾರಿ ಪಾರ್ವತಮ್ಮ

ವಯಸ್ಸು: ೪೨ ವರ್ಷ
ಜನನ: ಮುಂಡರಗಿ ಗದಗ ಜಿಲ್ಲೆ
ವಿದ್ಯಾಭ್ಯಾ: ಪಿ.ಯು.ಸಿ.
ತಂಗಿಯರು: ೧
ತಮ್ಮ: ೧
ತಂದೆ: ಸಣ್ಣ ವ್ಯಾಪಾರಸ್ಥರು.
ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು.

ರಾಮನಗರ-ಹಗರಿಬೊಮ್ಮನಹಳ್ಳಿಯ ಶ್ರೀ ಬಳ್ಳಾರಿ ಸಂಗಮನಾಥ ಅವರ ಮೂರನೇ ಮಡದಿ. ಮೊದಲ ಇಬ್ಬರು ಹೆಂಡಂದಿರು ತೀರಿಕೊಂಡಿದ್ದಾರೆ. ಇವರ ಮೊದಲ ಮಕ್ಕಳು ಮದುವೆಯಾಗಿ ಬೇರೆ ವ್ಯಾಪಾರ ಮಾಡಿಕೊಂಡಿದ್ದಾರೆ.

ಮೂರನೇ ಮಡದಿಯಾಗಿ ಬಂದ ಪಾರ್ವತಮ್ಮ ಸಾಧಾರಣ ಪರಿಸ್ಥಿತಿಯ ಮನೆತನವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಪತಿಯ ಕಿರಾಣಿ ಅಂಗಡಿಯಲ್ಲಿ ಸಹಾಯ ಮಾಡುತ್ತಾರೆ. ತಮ್ಮ ಮೂವರು ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ-ವಿದ್ಯಾಭ್ಯಾಸವನ್ನು ಕೊಡುತ್ತಾರೆ.

ವೈಶ್ಯಬಂಧು ಪರಿಷತ್ತಿನವರು ನಡೆಸುತ್ತಿರುವ ಕಲಾ ವಿದ್ಯಾಲಯದಲ್ಲಿ ಆರೋಗ್ಯ ಯೋಜನಾ ಪ್ರಮುಖರಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯ ಸೊಂಡೂರಿನ ೩೦, ಹ.ಬೊ.ಹಳ್ಳಿಯ ೩೦, ಕೂಡ್ಲಿಗಿ ೩೦ ಮತ್ತು ಸಿರುಗುಪ್ಪ ತಾಲೂಕಿನ ೯೦ ಅಲ್ಲದೇ ಕೊಪ್ಪಳ ಜಿಲ್ಲೆಯ ೯೦ ಅಂದರೆ ಒಟ್ಟು ೨೭೦ ಗ್ರಾಮಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಇವರು ಮಾರ್ಗದರ್ಶನ ಮಾಡುತ್ತಾರೆ. ತಿಂಗಳಿಗೆ ೨೫ ಕಡೆ ಪ್ರವಾಸ ಮಾಡಬೇಕಾಗುತ್ತದೆ. ಅಲ್ಲಲ್ಲಿಯ ಜನರಿಗೆ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡುವುದೇ ಇವರ ಕೆಲಸ.

ಈಗ ಆರ್ಯವೈಶ್ಯ ಮನೆಗಳಲ್ಲಿ ಮಹಿಳೆಯರಿಗೆ ಗೌರವ, ಸ್ವಾತಂತ್ರ್ಯ ಮತ್ತು ಜವಾಬ್ದಾರಿ ನೀಡಲಾಗುತ್ತಿದೆ. ಮಕ್ಕಳ ಶಿಕ್ಷಣ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ತಾಯಂದಿರ ದನಿಗೆ ಅವಕಾಶವಿದೆ. ಕುಟುಂಬ ನಿರ್ವಹಣೆಯಲ್ಲಿ ಸಮಾನ ಅವಕಾಶ. ಜವಾಬ್ದಾರಿ ದೊರಕುತ್ತಿದೆ. ಆದ್ದರಿಂದ ಗೃಹಸ್ಥ ಜೀವನದಲ್ಲಿ ತೊಂದರೆ ಇಲ್ಲ. ಆದರೂ ಎರಡನೇ ಅಥವಾ ಮೂರನೇ ಸಂಬಂಧಗಳು ಅಪೇಕ್ಷಣಿಯವಲ್ಲ.

ಇವರ ಅಭಿಪ್ರಾಯದ ಪ್ರಕಾರ ವಿಧವೆ-ವಿಧುರ ಮದುವೆಗಳು ಸೂಕ್ತ ಆದರೆ ಸಮಾಜದಲ್ಲಿ ವಿಧವಾ ವಿವಾಹಗಳು ನಡೆಯುತ್ತಿಲ್ಲ. ಅದಕ್ಕೆ ಪ್ರೋತ್ಸಾಹ ನೀಡಬೇಕು.

ಇವರಿಗೆ ಸಮುದಾಯದ ಕಾರ್ಯಕ್ರಮಗಳಲ್ಲಿ, ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಅತೀವ ಆಸಕ್ತಿ. ಮಹಿಳಾ ಮಂಡಳಿಯ ಕಾರ್ಯದರ್ಶಿಯಾಗಿ ನಾನಾ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಹಾಡು-ಹಸೆ, ರಂಗೋಲಿ, ಕಸೂತಿ, ಒಡಪು, ಒಗಟು, ಗಾದೆ ಮತ್ತು ಕತೆಗಳಲ್ಲಿ ಆಸಕ್ತಿ. ಅವರ ಪ್ರಕಾರ ಮಹಿಳೆಯರು ಆದಷ್ಟು ತರಬೇತಿ ಪಡೆದಿರಬೇಕು. ಅತ್ಯಂತ ಸಹನೆಯಿಂದ ಕುಟುಂಬ ಪರಿಸ್ಥಿತಿಯನ್ನು ನಿಭಾಯಿಸಬೇಕು. ಎಲ್ಲವನ್ನು ಗಂಡಸರ ಮೇಲೆ ಹೊರಿಸಬಾರದು.

ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ನೀಡಬೇಕು. ಅವರಿಗೆ ವೈಯಕ್ತಿಕ ಸ್ವಚ್ಛತೆ, ಸಾರ್ವಜನಿಕ ನೈರ್ಮಲ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಬಗ್ಗೆ ತಿಳಿಸಬೇಕು. ಓದುವ ಆಸಕ್ತಿಯನ್ನು, ಗೌರವಯುತ ನಡೆಯನ್ನು ಕಲಿಸಬೇಕು.

 

ಸಂದರ್ಶನ ೪
ಹೆಗ್ಡಾಳು ತಾರಮ್ಯ

ವಯಸ್ಸು: ೬೭
ಸೋದರರು: ೨
ವಿದ್ಯಾಭ್ಯಾಸ: ೭ನೇ ತರಗತಿ
ಜನನ: ಆನವಟ್ಟಿ, ಶಿವಮೊಗ್ಗ ಜಿಲ್ಲೆ
ತಂದೆ: ವ್ಯಾಪಾರಸ್ಥರು.

ಹಗರಿಬೊಮ್ಮನಹಳ್ಳಿ-ರಾಮನಗರದ ದಿವಂಗತ ಹೆಗ್ಡಾಳ ವೆಂಕಣ್ಣ ಅವರೊಂದಿಗೆ ೪೯ ವರ್ಷದ ಹಿಂದೆ ವಿವಾಹ. ಹೆಗ್ಡಾಳ ವೆಂಕಣ್ಣ ಸ್ಥಳೀಯ ಆರ್ಯವೈಶ್ಯ ಸಂಘ ಟ್ರಸ್ಟ್‌ನ ಉಪಾಧ್ಯಕ್ಷರಾಗಿದ್ದರು. ಅವರು ಕಳೆದ ಆಗಸ್ಟ್‌ನಲ್ಲಿ ಸ್ವರ್ಗಸ್ಥರಾದರು.

ಇವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು. ಶ್ರೀಮತಿ ತಾರಮ್ಮ ಈಗ ಸ್ಥಳೀಯ ಆರ್ಯವೈಶ್ಯ ಮಹಿಳಾ ಸಮಾಜದ ಅಧ್ಯಕ್ಷರಾಗಿದ್ದಾರೆ. ಅವರ ಪ್ರಕಾರ ಅವರದು ಸುಖೀ ಸಂಸಾರ. ವ್ಯಾಪಾರ, ವ್ಯವಸಾಯ, ಬಂಧುತ್ವ, ಏನೇ ಮಾಡಲಿ ಸತಿಪತಿಗಳಿಬ್ಬರು ವಿಚಾರ ವಿನಮಯ ಮಾಡಿ ನಿರ್ಧರಿಸುತ್ತಿದ್ದರಂತೆ. ಈಗ ಇಬ್ಬರು ಪುತ್ರರೂ ತಾಯಿಯ ಅಪೇಕ್ಷೆಯಂತೆ ನಡೆಯುತ್ತಾರೆ.

“ನಮ್ಮೂರಿಗೆ ಬರುವ ಸೊಸೆಯಂದಿರು ತುಂಬಾ ಸುಖವಾಗಿದ್ದಾರೆ. ನಮ್ಮೂರ ಹೆಂಗಸರು ಮದುವೆಯಾಗಿ ಬೇರೆ ಊರಿಗೆ ಹೋದವರು ಅಷ್ಟು ನೆಮ್ಮದಿಯಿಂದಿಲ್ಲ. ಈಗ ನಮ್ಮ ಸಮಾಜದಲ್ಲಿ ಹೆಂಗಸರ ಪರಿಸ್ಥಿತಿ ಚೆನ್ನಾಗಿದೆ. ತಂದೆಯಿಲ್ಲದ ಮದುವೆಯಾಗದ ಕೆಲ ಹುಡುಗ, ಹುಡುಗಿಯರ ಪರಿಸ್ಥಿತಿ ಸರಿಯಿಲ್ಲ. ವರದಕ್ಷಿಣೆ, ಅಬ್ಬರದ ಮದುವೆ ನಮ್ಮಲ್ಲಿ ಹಿತಮಿತವಾಗಿದೆ. ಹೆಂಗಸರು ಈಗ ಏನಾದರೂ ಮಾಡಿ ದುಡಿದು ಬದುಕಲು ಕಲಿಯುತ್ತಿದ್ದಾರೆ. ಒಟ್ಟಿನಲ್ಲಿ ನಮ್ಮೂರ ವೈಶ್ಯ ಮನೆತನಗಳ ಪರಿಸ್ಥಿತಿ ಪರವಾ ಇಲ್ಲ” ಎಂದು ಅವರ ಅಭಿಪ್ರಾಯ.

 

ಒಡಪುಗಳು

೧        ಕಾಂಗ್ರೆಸ್ಸಿಗರು ಉಡುವುದು ಖಾದಿಯನ್ನು
ಎರೆನಾಡಿನಲ್ಲಿ ಬೆಳೆಯುವುದು ಗೋದಿಯನ್ನು
ರಾಯರ ಹೆಸರ ಹೇಳುವೆನು ಬಿಡಿರೇ ಹಾದಿಯನ್ನು

೨        ಅರುಣೋದಯ ಕೂಗುವುದು ಕೋಳಿ
ಮತ್ತೆ ಫಲಕೊಡದಿರುವುದು ಬಾಳಿ
ರಾಯರ ಹೆಸರ ಹೇಳುವೆನು ನೀವೆಲ್ಲ ಕೇಳಿ

೩        ಶಿವನ ತಲೆಯ ಮೇಲಿರುವುದು ಮೂರುದಳದ ಪತ್ರಿ
ರಾಯರ ಹೆಸರು ಹೇಳುವೆನು…………………

೪       ಸೂರ್ಯಚಂದ್ರರ ಬೆಳಕು, ಕಾಲ್ಪಿ ಕಲ್ಲುಸಕ್ಕರೆ ಹಳುಕು
ನಕ್ಷತ್ರದ ಬೆಳಕಿಗೆ ಅಕ್ಷರ ಬರೆಯುತ್ತಾರೆ…………………..

೫       ಊಟಕ್ಕೆ ಮೂರು ಉಪ್ಪಿನಕಾಯಿ, ತೋಟಕ್ಕೆ ನೂರು ಬಾಳೆದೆಲೆ
ಊಟಕ್ಕೆ ಬರ‍್ರಿ ಅಂದರೆ
ಹುಬ್ಬಳ್ಳಿ ನಾಟಕಕ್ಕೆ ಹೋಗ್ತೀನಿ ಅಂತಾ ……………………………

೬        ಹೂಗಾರರ ಮನೆಯಲ್ಲಿದೆ ಹೂವಿನ ಚೀಲ
ರಾಯರ ಹೆಸರ ಹೇಳಿ ಕೊಡುವೆನು ಪಾನ್‌ಪಟ್ಟಿ

೭        ವಿಜಯನಗರವನ್ನು ಸ್ಥಾಪಿಸಿದರು ಹಕ್ಕ ಬುಕ್ಕ
ರಾಯರ ಹೆಸರ ಹೇಳುವೆನು…………………..ಅವರ ಅಕ್ಕ

೮        ಸಾವಿರ ರೂಪಾಯಿ ಸದ್ದಿನಕೋಲು
ಹಜಾರ ರೂಪಾಯಿ ಫ್ಯಾಷನ್ ಹ್ಯಾಟ್
…………………………………..

೯        ಗುರುವಾರಕ್ಕೊಮ್ಮೆ ಶ್ರೀನಿವಾಸನಿಗೆ ಉಡಿಸುವುದು ಹೂವಿನ
ಅಂಗಿ ರಾಯರ ಹೆಸರ ಹೇಳುವೆನು……………..ಇವರ ತಂಗಿ

೧೦      ಶ್ರೀಕೃಷ್ಣನು ಕೊಳಲನೂದಿದ್ದು ಬೆಳಿಗನ ಝಾವದಲ್ಲಿ
ರಾಯರ ಹೆಸರ ಹೇಳುವೆನು ನಿಮ್ಮೆಲ್ಲರ ಗುಂಪಿನಲ್ಲಿ.

ಸಂಗ್ರಹಿಸಿದವರು : ಶ್ರೀಮತಿ ಬಳ್ಳಾರಿ ಪಾರ್ವತಮ್ಮ