ಮುಹೂರ್ತದ ನಂತರ ಭೂಮ (ಭಾಮ) ಅಥವಾ ಪೂಬಮತ ಊಟದ ಪದ್ಧತಿ ಇದೆ. ವಧು-ವರರು ಎದುರು ಬದುರಾಗಿ ಅಥವಾ ಅಕ್ಕಪಕ್ಕದಲ್ಲಿ ಊಟಕ್ಕೆ ಕೂತು ಅವರು ಇವರಿಗೆ ಇವರು ಅವರಿಗೆ ತಿನ್ನಿಸುತ್ತಾರೆ. ನವದಂಪತಿಗಳಲ್ಲಿ ಆತ್ಮೀಯತೆಯನ್ನು ಸಲುಗೆಯನ್ನು ಬೆಳೆಸುವಲ್ಲಿ ಇಂತಹ ಕ್ರಿಯೆಗಳು ಸಹಾಯವಾಗುತ್ತವೆ. ತರುವಾಯ ವಸಂತ ಮಾಧವ ಪೂಜೆ ಅಥವಾ ಓಕಳಿ ಆಡುವುದು. ದೊಡ್ಡ ಕೊಳಗಳಲ್ಲಿ ವಸಂತೋದಕ ಅಂದರೆ ಬಣ್ಣದ ನೀರನ್ನು ತುಂಬಿರುತ್ತಾರೆ. ವಧು-ವರರು ಪರಸ್ಪರ ನೀರಾಟ ಆಡಿ, ಜಲಕ್ರೀಡೆ ಮಾಡಿ ಸ್ನಾನ ಮಾಡುತ್ತಾರೆ. ಹರೆಯದ ಹುಮ್ಮಸ್ಸು ಮತ್ತು ಹೆಣ್ಣು ಗಂಡಿನ ಆಕರ್ಷಣೆಗಳು ಈ ನೀರಾಟಕ್ಕೆ ಉತ್ಸಾಹ ತುಂಬುತ್ತವೆ. ಇನ್ನು ಮದುವೆ ಆಗದ ಹುಡುಗ-ಹುಡುಗಿಯರು ಸುತ್ತಲೂ ಜಮಾಯಿಸಿ ಉತ್ಸಾಹ ತುಂಬುತ್ತಾರೆ. ಇದಾದ ನಂತರ ತೊಟ್ಟಿಲೊಂದನ್ನು ಕಟ್ಟಿ ಅದರಲ್ಲಿ ಗೊಂಬೆಯನ್ನಿಟ್ಟು ನಾಮಕರಣದ ಶಾಸ್ತ್ರ ಮಾಡುತ್ತಾರೆ. ವೈಶ್ಯರಲ್ಲಿ ಮಾತ್ರ ಮದುಮಗನಿಗೆ ಬೆಳ್ಳಿ ಅಥವಾ ಚಿನ್ನದ ಮುಡಿಯುಂಗುರ ಮತ್ತು ಕಂಕಣವನ್ನು ಕುಟ್ಟುತ್ತಾರೆ. ವಧುವಿಗೆ ಐದೋ ಕಡಗವನ್ನು ಹಾಕುತ್ತಾರೆ. ವಧುವಿನ ಕೊರಳಿಗೆ ವರನು ಮಾಂಗಲ್ಯ ಕಟ್ಟಿದ ಮೇಲೆ ಐದು ಜನ ಮುತ್ತೈದೆಯರು ಐದು ಗಂಟು ಹಾಕುವುದು ಕೂಡಾ ವೈಶ್ಯರ ವಿಶೇಷ.

ಮದುವೆಯ ಅನೇಕ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಕಾಣುವ ಅಂಶವೆಂದರೆ, ವ್ಯವಸ್ಥೆ ಮಾಡಿದ ಮದುವೆಯಲ್ಲಿ ಅಪರಿಚಿತರಾದ ವಧುವರರ ನಡುವೆ ಸಲುಗೆ, ಸ್ನೇಹ ಮತ್ತು ಆತ್ಮೀಯತೆಯನ್ನು ಉಂಟು ಮಾಡುವುದಾಗಿದೆ. ಅವರು “ಮೈಚಳಿ” ಬಿಟ್ಟು ಪರಸ್ಪರ ಮಾತಾಡುವುದಕ್ಕೆ, ಚುಡಾಯಿಸುವುದಕ್ಕೆ ಮತ್ತು ಪರಸ್ಪರ ಸ್ಪರ್ಶಕ್ಕೆ ಇಲ್ಲಿ ಸಾಕಷ್ಟು ಅವಕಾಶವಿರುತ್ತದೆ.

ವೈಶ್ಯರು ಸಾಧಾರಣವಾಗಿ ತುಂಬಾ ಲೆಕ್ಕಾಚಾರದ ಜೀವನ ನಡೆಸುತ್ತಾರೆ. ಹಣಮುಖಿಯಾದ ಸಮುದಾಯವಾದ ಕಾರಣ ಮಿತವ್ಯಯ, ಮರುಬಳಕೆ ಮತ್ತು ಸಂಗ್ರಹಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ನಮ್ಮ ಹಿಂದಿನ ತಲೆಮಾರಿನ ಜನರು ಒಂದು ರೀತಿಯ ಜಿಪುಣತನದಲ್ಲಿಯೇ ಜೀವಿಸುತ್ತಿದ್ದರು. ತಿಂಡಿ-ತಿನಿಸು, ಊಟ-ಉಪಚಾರ, ಬಟ್ಟೆ-ಬರೆಗೆ ವೆಚ್ಚ ಮಾಡುವಲ್ಲಿ ಅಷ್ಟೇನೂ ಜಿಪುಣರಾಗಿರಲಿಲ್ಲ. ಆದರೆ ಮನೆಗೆಲಸ, ನೀರು ತುರುವವರು, ಇಸ್ತ್ರಿ, ಮನೆಗೆ ತರತರದ ವಸ್ತುಗಳನ್ನು ತರುವುದು, ಹೋಟೆಲ್‌ಗಳಿಗೆ ಹೋಗಿ ತಿಂಡಿ-ಊಟ ಮಾಡುವುದು, ಪತ್ರಿಕೆ, ಪುಸ್ತಕ ಕೊಂಡು ತರುವುದು ಮತ್ತು ಓದುವುದು ನಮ್ಮ ಹಿರಿಯರಿಗೆ ಮುಖ್ಯವಾಗಿರಲಿಲ್ಲ. ಅನೇಕ ಕೆಲಸಗಳನ್ನು ಅವರೇ ಮಾಡಿ ಪೂರೈಸುತ್ತಿದ್ದರು. ಲೆಕ್ಕ ಬರೆಯುವುದು, ಖಾತೆ ತಯಾರಿಸುವುದು, ವಾರ್ಷಿಕ ಅಢಾವೆ ತಯಾರಿಸುವುದು, ಕಂದಾಯ-ಮಾರಾಟ ತೆರಿಗೆ-ಆದಾಯ ತೆರಿಗೆ ಇಲಾಖೆಗಳಿಗೆ ವರದಿಗಳನ್ನು ಕಳಿಸುವುದು ಇತ್ಯಾದಿ ಕೆಲಸಗಳನ್ನು ಸ್ವತಃ ಮಾಡುವುದೇ ಸರಿ ಎಂಬ ಭಾವನೆ.

ಬ್ರಾಹ್ಮಣರಿಗೆ ದಕ್ಷಿಣ ಕೊಡೋದರಲ್ಲಿ, ಅನ್ನದಾನ ಮುಂತಾದ ಕೈಂಕರ್ಯಗಳಿಗೆ ಹಣ ನೀಡುವಲ್ಲಿ ಪಾಪ ಪರಿಹಾರ ಮಾಡುವ ತೀರ್ಥಯಾತ್ರೆ, ಪುಷ್ಕರ ಸ್ನಾನ, ಸಮುದ್ರ ಸ್ನಾನ ಮಾಡುವಲ್ಲಿ ವೈಶ್ಯರಿಗೆ ತುಂಬಾ ಖುಷಿ. ಮನೆಯಲ್ಲಿ ಮುದುಕರು ಅನೇಕ ಗೃಹಕೃತ್ಯದಣಿವರಿಯದೇ ಮಾಡುತ್ತಿದ್ದರು. ಮುತ್ತಗದ ಎಲೆ ತರಿಸಿ ಪತ್ರಾವಳಿ ತಯಾರಿಸುವುದು. ದನಕರುಗಳಿದ್ದರೆ ಹಾಲು ಹಿಂಡುವುದು, ಮಜ್ಜಿಗೆ ಮಾಡಿ ಬೆಣ್ಣೆ ತೆಗೆಯುವುದು, ತುಪ್ಪ ಕಾಯಿಸಿದ ನಂತರ ಅದೇ ಬಾಣಲೆಯಲ್ಲಿ ಅವಲಕ್ಕಿ ಹುರಿಯುವುದು, ಹಿರಿಯರ ಕೆಲಸವಾಗಿತ್ತು. ಪುರಾಣ-ಪ್ರವಚನಗಳಿಗೆ ಹೋಗುವುದು, ಮನೆಯಲ್ಲಿಯೇ ಧಾರ್ಮಿಕ ಗ್ರಂಥಗಳ ಪಾರಾಯಣ ಆಡುವುದು, ಏಕಾದಶಿ, ಶಿವರಾತ್ರಿ, ಕೃಷ್ಣಜನ್ಮಾಷ್ಠಮಿ, ಅಧಿಕಮಾಸ ಮುಂತಾದ ವ್ರತಗಳನ್ನು ಆಚರಿಸುವುದು ಹಿರಿಯರ ಪ್ರಿಯವಾಗಿತ್ತು. ಅಳಿಯಂದಿರ ಮೇಲೆ ವಿಶೇಷ ಪ್ರೀತಿ, ಮನೆಯ ಮಗಳ ಮೇಲೆ ಮೊಮ್ಮಕ್ಕಳ ಮೇಲೆ ಇನ್ನಿಲ್ಲದ ಮಮತೆ, ಅತ್ಯಂತ ಧಾರ್ಮಿಕ ಶ್ರದ್ಧೆ ಮತ್ತು ಮಿತವ್ಯಯವದಿಂದ ಜೀವನ ನಡೆಸುವುದು ಸಾಮಾನ್ಯ.

ಎಲ್ಲರೂ ನಿತ್ಯ ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸುತ್ತಾರೆ. ಬಟ್ಟೆಗಳು ಮಲಿನವಾದಂತೆ ಕಾಣಬಹುದು. ಆದರೆ ಸ್ವಚ್ಚವಾಗಿರುತ್ತದೆ. ಮುಖದ ಮೇಲೆ ಗಡ್ಡ ಬೆಳೆದಿರಬಹುದು. ಜಿಡ್ಡು ಜಿಡ್ಡಾಗಿರಬಹುದು. ಆದರೆ ಹೊಲಸಾಗಿರುವುದು ಇಲ್ಲ. ಅತಿಥಿ ಸತ್ಕಾರ ಮಾಡುವಲ್ಲಿ ಸಂತೋಷ ಪಡುತ್ತಾರೆ. ವ್ಯಾಪಾರಿಗಳಾದ ಕಾರಣ ಸಮಾಜದಲ್ಲಿ ಎಲ್ಲರಿಗೂ ಬೇಕಾಗಲು ಪ್ರಯತ್ನಿಸುತ್ತಾರೆ. ನಿಷ್ಟುರವಾಗಲು ಅಂಜುತ್ತಾರೆ. ಎರಡು ಬೈದರೂ ಪರವಾಗಿಲ್ಲ. ನನ್ನ ದುಡ್ಡು ಕೊಟ್ಟು ಹೋಗಪ್ಪ ಎಂದು ಕೇಳುತ್ತಾರೆ.

ಆರ್ಯವೈಶ್ಯರು ಅನೇಕ ದೇವೋಪಾಸಕರೆಂದು ಹೇಳಬಹುದು. ಅವರ ಕುಲದೈವ ಶ್ರೀ ನಗರೇಶ್ವರ ಸ್ವಾಮಿ ಮತ್ತು ಶ್ರೀ ಕನ್ನಿಕಾಪರಮೇಶ್ವರಿ ದೇವಿ. ಆದರೆ ಅವರ ಮನೆದೇವರು ತಿರುಪತಿಯ ವೆಂಕಟೇಶನೂ, ಶ್ರೀಶೈಲದ ಮಲ್ಲಿಕಾರ್ಜುನನೋ, ಮೈಲಾರದ ಏಳುಕೋಟೆಯೋ, ಸಂಗೇಶ್ವರದ ಸಂಗಮನಾಥನೋ, ಹುಲಿಗೆಮ್ಮನೋ, ನಣಿಕೆರೆಯ ಆಂಜನೇಯನೋ, ಪಂಪಾ ವಿರುಪಾಕ್ಷನೋ, ಕೊಟ್ಟೂರೇಶನೋ, ಜಂಬುನಾಥನೋ, ಹರಿಹರೇಶ್ವರನೋ ಇನ್ನಾವುದೋ ಊರಿನ ದೇವರೋ ಆಗಿರುತ್ತದೆ. ಇದರ ಮೇಲೆ ಇಷ್ಟ ದೇವರು ಬೇರೆ ಧರ್ಮಸ್ಥಳದ ಮಂಜುನಾಥನೋ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳೋ, ಶಿರಡಿಯ ಸಾಯಿಬಾಬಾ ಅವರೋ, ಪುಟ್ಟಪರ್ತಿಯ ಸತ್ಯಸಾಯಿ ಅವರೋ, ಅರವಿಂದರೋ, ರಮಣ ಮರ್ಷಿಗಳೋ, ರಾಮಕೃಷ್ಣರೋ, ಯಮನೂರಪ್ಪನೋ, ಗೋಕರ್ಣೇಶ್ವರನೋ, ಇಡಗುಂಜಿಯ ಗಣಪನೊ, ಕನನಕಾಚಲ ಒಡೆಯನೋ, ಕಣಿವೆರಾಯನೋ ಹೀಗೆ ಅವರವರ ಶ್ರದ್ಧಾ, ನಿಷ್ಠೆ ಮತ್ತು ನಂಬುಗೆಗಳಿಗನುಸರಿಸಿ ನಾನಾ ದೇವರ ಪಟಗಳನ್ನು ಗೋಡೆಯ ಮೇಲೆ ಕಾಣಬಹುದು. ದೇವರ ಮಂದಾಸನದಲ್ಲಿ ನೋಡಬಹುದು. ಬೆಳಗಿನಲ್ಲಿ ಆಯಾ ದೇವರ ಸುಪ್ರಭಾತ, ಸ್ತೋತ್ರದ ಗಾನವನ್ನು ಆಲಿಸಬಹುದು.

ವರ್ಷಕ್ಕೊಮ್ಮೆ ತಿರುಪತಿ, ಧರ್ಮಸ್ಥಳ, ಹೊರನಾಡು, ಇಡಗುಂಜಿ, ಮುರ್ಡೆಶ್ವರ ಅಥವಾ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದರ್ಶನಕ್ಕೆ ಹೋಗುವವರು ಅನೇಕ. ಅಲ್ಲಲ್ಲಿ ಆಚಾರದ ಪ್ರಕಾರ ತಲೆಮುಡಿ ಕೊಡುವುದು, ಕಾಣಿಕೆ ಅರ್ಪಿಸುವುದು ಮತ್ತು ದಾರ-ತಾಯಿತಿ ಕಟ್ಟಿಕೊಳ್ಳುವುದು ನಡೆಯುತ್ತದೆ.

ಅಮವಾಸ್ಯೆಗೊಮ್ಮೆ ಅಥವಾ ಪೌರ್ಣಮಿಗೊಮ್ಮೆ ದೇವರ ಪೂಜೆ ಮನಿಯಾರ್ಡರ್ ಕಳಿಸುವವರು, ಶಾಶ್ವತವಾಗಿ ಮಾಸಪೂಜೆ, ವಾರ್ಷಿಕ ಪೂಜೆಗೆ ಪುದುವಟ್ಟು ನೀಡುವುದು ಸಾಮಾನ್ಯ.

ಬೆಳಗಿನಲ್ಲಿ ಎದ್ದವರೇ ಪ್ರಾತರ್ವಿಧಿಗಳನ್ನು ಪೂರೈಸಿ ದೇವರ ಮುಂದೆ ದೀಪ ಮುಡಿಸಿ ಸಂಧ್ಯಾವಂದನೆ, ಗಾಯಿತ್ರಿ ಜಪ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ತಾವೇ ತಯಾರಿಸಿದ ಸಾದ (ಕಪ್ಪು ತಿಲಕ)ದಿಂದ ಭ್ರೂಮಧ್ಯದಲ್ಲಿ ತಿಲಕವಿಟ್ಟು, ವಿಭೂತಿ ಧರಿಸುತ್ತಿದ್ದರು. ಅನೇಕರು ಪ್ರತಿದಿನ ಮನೆಯ ಪೂಜಾ ಮಂದಿರ ಅಥವಾ ಗೂಡಿನಲ್ಲಿದ್ದ ವಿಗ್ರಹಗಳಿಗೆ ಅಭಿಷೇಕ ಮಾಡಿ ಗಂಧ, ಪತ್ರಿ, ತುಳಸಿ, ಹೂ ಏರಿಸಿ ಪೂಜಿಸುತ್ತಿದ್ದರು. ದೇವರಿಗೆ ಎರಡು ಉತ್ತತ್ತಿ, ಬಾಳೆಹಣ್ಣು, ಅಥವಾ ಸಕ್ಕರೆ ನೈವೇದ್ಯ ಮಾಡುತ್ತಿದ್ದರು. ಗಂಡಸರು ಪೂಜೆ ಮುಗಿಸಿದ ಮೇಲೆ ಗೃಹಿಣಿಯರ ಸರತಿ, ಮನೆಯಲ್ಲಿ ಗೋಡಗೆ ನೇತು ಹಾಕಿದ್ದ ಎಲ್ಲ ದೇವ-ದೇವತೆಯರ ಫೋಟೋಗಳನ್ನು ಸ್ವಚ್ಛವಾಗಿ ತೊಳೆದು ಅರಿಷಿಣ, ಕುಂಕುಮ, ಗಂಧ ಮತ್ತು ವಿಭೂತಿ ಹಚ್ಚುತ್ತಾರೆ. ಅತ್ಯಂತ ಆಸ್ತಿಕ ಭಾವದಿಂದ ನಿರ್ಮಲ ಮನಸ್ಸಿನಿಂದ ಪ್ರತಿನಿತ್ಯ ದೇವರನ್ನು ಪೂಜಿಸುವುದು ವಾಡಿಕೆಯಾಗಿದೆ.

ಗೃಹಿಣಿಯರು ಲಲಿತಾ ಸಹಸ್ರನಾಮ, ಭಗವದ್ಗೀತೆ, ಲಕ್ಷ್ಮೀ ಸರಸ್ವತೀ ಸ್ತೋತ್ರ ಮುಂತಾದವುಗಳನ್ನು ನಿತ್ಯ ಪಠಿಸುತ್ತಾರೆ. ಆಗೊಮ್ಮೆ, ಈಗೊಮ್ಮೆ ಸಾಮೂಹಿಕವಾಗಿ ದೇವಾಲಯದಲ್ಲಿ ಸೇರಿ ಲಕ್ಷ ಪಠನೆ, ಕೋಟಿ ಕುಂಕುಮಾರ್ಚನ ಮುಂತಾದವುಗಳನ್ನು ಮಾಡುತ್ತಾರೆ. ಮನೆಯಲ್ಲಿ “ಏನೇ ಶುಭ ಕಾರ್ಯ ನಡೆದರೂ ವಿಷ್ಣು ಸಹಸ್ರನಾಮ ಪಠನ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಮಾಡುವುದು ಸಂಪ್ರದಾಯ. ವಾಸ್ತು, ಆಯ, ಲಕ್ಷಣ, ಶಾಂತಿಗಳಲ್ಲಿ ವೈಶ್ಯ ಸಮುದಾಯಕ್ಕೆ ಗಾಢವಾದ ನಂಬುಗೆ.

ವರ್ಷವಿಡೀ ಅನೇಕ ಹಬ್ಬಗಳನ್ನು ವೈಶ್ಯರು ಆಚರಿಸುತ್ತಾರೆ. ವೇದೊಕ್ತ ಷೋಡಕ ಸಂಸ್ಕಾರಗಳನ್ನು ತಪ್ಪದೇ ನಡೆಸುತ್ತಾರೆ. ಶೋಭನ ಅಥವಾ ಪ್ರಸ್ತಕ್ಕೆ ಗರ್ಭದಾನವೆಂದು ಹೆಸರು. ಆಗ ಪಠಿಸಬೇಕಾದ ಕೆಲ ಮಂತ್ರಗಳನ್ನು ಪಠಿಸಿ, ಶುಭದೈವಗಳನ್ನು ಆಹ್ವಾನಿಸಿ, ಸತ್ ಸಂತಾನಕ್ಕಾಗಿ ಪ್ರಾರ್ಥಿಸಿ, ಹಿರಿಯ ದಂಪತಿಗಳಿಗೆ ಫಲದಾನ ನೀಡಿ ಆಶೀರ್ವಾದ ಪಡೆಯುತ್ತಾರೆ.

ಎರಡನೆಯದಾಗಿ ಪುಂಸವನ, ಹೆಣ್ಣು ಗರ್ಭವತಿಯಾದ ೩ ಅಥವಾ ೪ನೇ ತಿಂಗಳಿನಲ್ಲಿ ಅವಳಿಗೆ ಉಲ್ಲಾಸವನ್ನುಂಟು ಮಾಡಲು ಹಂಗಳೆಯರು ನಡೆಯುವ ಆತ್ಮೀಯ ಕಾರ್ಯಕ್ರಮ. ಅನಂತರ ೮-೯ ತಿಂಗಳು ಗರ್ಭಿಣಿಯರಿಗೆ ಸಡಗರದಿಂದ ನೆರವೇರಿಸುವ ಕಾರ್ಯಕ್ರಮ ಶ್ರೀಮಂತ ಅಥವಾ ಸೀಮಂತ. ತಲೆಗೆ ನೀರೆರೆದು ಚನ್ನಾಗಿ ಬಾಚಿ ಹೂಮುಡಿಸುತ್ತಾರೆ. ಅವಳು ಬಯಸಿದ ಖ್ಯಾದ ಪದಾರ್ಥಗಳನ್ನು ಮಾಡಿ ಉಣಿಸುತ್ತಾರೆ. ಅತ್ತೆಯ ಮನೆಯವರೂ, ತವರು ಮನೆಯವರೂ, ಅತ್ತಿಗೆ-ನಾದಿನಿಯರೂ, ಸೀರೆ-ಕಣ ಉಡಿತುಂಬಿ ತಿಂಡಿ-ತಿನಿಸುಗಳ ಒಸಗೆ ಮಾಡುತ್ತಾರೆ. ಗರ್ಭಿಣಿ ಸ್ತ್ರೀಗೆ ಅಪೂರ್ವ ಕಳೆ ಬಂದಿರುವುದನ್ನು, ಅವಳು ಉಲ್ಲಾಸದಿಂದಿರುವುದನ್ನು ನೋಡಿ ಬೀಗುವ ಸರತಿ ಗಂಡನದಾಗಿರುತ್ತದೆ. ಮಗುವನ್ನು ಪ್ರಸವಿಸಿದ ನಂತರ ಹೊಕ್ಕುಳ ಬಳ್ಳಿಯನ್ನು ಕತ್ತರಿಸುವ ಮೊದಲು ಪ್ರಾರ್ಥನೆ ಮಾಡುವುದು ಮತ್ತು ಕುಟುಂಬಕ್ಕೆ ಮಗುವನ್ನು ಸೇರಿಸಿಕೊಳ್ಳಬಹುದು. ಬಂಗಾರದ ಕಡ್ಡಿಯಿಂದ ಜೇನು ಮತ್ತು ತುಪ್ಪವನ್ನು ನವಜಾತ ಶಿಶುವಿಗೆ ತಿನ್ನಿಸಲಾಗಿರುತ್ತದೆ. ಎಡಬಲ ಕಿವಿಯಲ್ಲಿ ಮಂತ್ರೋಚ್ಚಾರಣೆ ಮಾಡುತ್ತಾರೆ. ಪುತ್ರ ಮುಖ ದರ್ಶನವಾದೊಡನೆ ತಂದೆಯಾದವನು ಪಿತ್ಯ-ಪುಣ್ಯದಿಂದ ಮುಕ್ತನಾಗುತ್ತಾನೆಂಬ ನಂಬಿಕೆ.

ಒಬ್ಬ ವ್ಯಕ್ತಿಯ ಪರಿಚಯಕ್ಕಾಗಿ ಮಾಡುವುದು ನಾಮಕರಣ. ಹುಟ್ಟಿದ ಕೂಡಲೇ ಮಗುವನ್ನು ತಮ್ಮ ಇಷ್ಟ ದೈವದ ಹೆಸರಿನಿಂದ ತಾಯಂದಿರು ಕರೆಯುತ್ತಾರೆ. ಹುಟ್ಟಿದ ತಿಂಗಳ ಸಂಕೇತನಾಮವನ್ನು ಕೂಡಾ ದಾಖಲಿಸುತ್ತಾರೆ. ನಕ್ಷತ್ರನಾಮ ಅಥವಾ ಜನ್ಮನಾಮವನ್ನು ಮಗುವಿನ ಜನನ ಕಾಲದ ತಾರೆಯ ಆಧಾರದ ಮೇಲೆ ನಿರ್ಧರಿಸುತ್ತಾರೆ. ನಡೋನಾಮ ಅಥವಾ ಲೌಕಿಕ ನಾಮವೆಂದರೆ ಲೋಕ ವ್ಯವಹಾರಕ್ಕೆಂದು ಮಗುವಿಗೇ ನಾಮಕರಣ ಸಂದರ್ಭದಲ್ಲಿ ಪ್ರದಾನ ಮಾಡುವ ಹೆಸರು. ಈ ಹೆಸರೇ ಲೋಕ ಪ್ರಸಿದ್ಧವಾಗುತ್ತದೆ. ಉಳಿದವೆಲ್ಲಾ ಗುಪ್ತವಾಗಿರುತ್ತದೆ. ಜಾತಕದಲ್ಲಿ ಮಾತ್ರ ಉಲ್ಲೇಖವಾಗಿರುತ್ತದೆ.

ವ್ಯಕ್ತಿಯನ್ನು ಪ್ರತ್ಯೇಕವಾಗಿ ಗುರುತಿಸುವುದಕ್ಕಾಗಿ ನಾಮಕರಣ ಮಾಡುತ್ತಾರೆ. ಶಾಸ್ತ್ರಗಳ ಪ್ರಕಾರ ಹೆಸರಿನ ಮೊದಲ ಅಕ್ಷರವು ಮೃದುವಾರ್ಣವಾಗಿರಬೇಕು. ಯ, ರ, ಮ, ಲ, ವ ಈ ವರ್ಣಗಳಲ್ಲಿ ಯಾವುದಾದರೊಂದು ಮಧ್ಯಮ ಅಕ್ಷರವಾಗಿರಬೇಕು. ಕೊನೆಯ ಅಕ್ಷರವು ದೀರ್ಘ ಅಥವಾ ನಿಸರ್ಗದಿಂದ ಕೂಡಿರಬೇಕು. ಗಂಡು ಮಕ್ಕಳಿಗೆ ಎರಡು, ನಾಕು ಮುಂತಾಗಿ ಯುಗ್ಮ ಅಕ್ಷರಗಳಿರುವ ಹೆಸರುಗಳು, ಹೆಣ್ಣು ಮಕ್ಕಳಿಗೆ ಆ ಯುಗ್ಮ ಅಕ್ಷರಗಳುಳ್ಳ ಹೆಸರುಗಳು. ಉತ್ತಮ ಆರಂಭದ ಅಕ್ಷರವು ಒತ್ತಕ್ಷರವಾಗಿರಬಾರದು. ವಸ್ತು ಅಥವಾ ಪಶುಪಕ್ಷಿಗಳ ಹೆಸರನ್ನು ಹಂಗಳೆಯರಿಗೆ ಇಡಬಾರದು. ಹುಟ್ಟಿದ ೧೧, ೧೨ ಅಥವಾ ೧೦೧ನೇ ದಿನ ಅಥವಾ ಎರಡನೇ ವರ್ಷದ ಮೊದಲನೇ ದಿನ ನಾಮಕರಣಕ್ಕೆ ಸೂಕ್ತ (ಸಾರ್ಥ ಷೋಡಕ ಸಂಸ್ಕಾರ ರತ್ನಮಾಲಾ/ಪೆರ್ನ ಕೃಷ್ಣಾಭಟ್ರರು) ಪುರೋಹಿತರಲ್ಲಿ ವಿಚಾರಿಸಿ ಶುಭದಿನದಂದು ನಾಮಕರಣ ಮಾಡಬೇಕು.

ಮಗು ಜನಿಸಿದ ವರ್ಷ ಎರಡನೇ ವರ್ಷ, ಮೂರು ಅಥವಾ ಐದನೇ ವರ್ಷದೊಳಗಡೆ “ಚಂಡಿಕ-ಜವಳ ಕಾರ್ಯಕ್ರಮ ಮಾಡುತ್ತಾರೆ. ಆದರೆ ಕಿವಿ ಚುಚ್ಚುವ ಕಾರ್ಯ ಮಾತ್ರ ಒಂದನೇ ವರ್ಷದೊಳಗೇ ಮುಗಿಸುತ್ತಾರೆ. ಜ್ಯೋತಿ ರ್ನಿಬಂಧ ಮತ್ತು ಸೂಕ್ತ ಸೂತ್ರಗಳ ಪ್ರಕಾರ “ಮಗುವಿನ ರಕ್ಷಣೆ, ಭೂಷಣ, ಧರಿಸು, ಪುಷ್ಟಿ-ಆಯಸ್ಸು ಮತ್ತು ಸಂಪದ ಅಭಿವೃದ್ಧಿಗಾಗಿ” ಕಿವಿ ಚುಚ್ಚಬೇಕು. ಗಂಡು ಮಗುವಿನ ಬಲಕಿವಿಯನ್ನು, ಹೆಣ್ಣು ಮಗುವಿನ ಎಡಕಿವಿಯನ್ನು ಮೊದಲು ಚುಚ್ಚುತ್ತಾರೆ. ಕರ್ಣರಂಧ್ರವು ಸೂರ್ಯ ಕಿರಣವು ಹಾದು ಹೋಗುವಷ್ಟಿರಬೇಕೆಂದು ಶಾಸ್ತ್ರ.

ಮಗು ಜನಸಿದ ವರ್ಷದೊಳಗೆ ನಡೆಯುವ ಮುಖ್ಯ ಆಚರಣೆ ಅನ್ನಪ್ರಾಶನ. ಶುಭ ದಿನ, ಶುಭ ನಕ್ಷತ್ರದಂದು ಅನ್ನ ಪ್ರಾಶನ ನಡೆಯುತ್ತದೆ. ಆ ದಿನ ನಾಲ್ಕಾರು ತರಹದ ಪಾಯಸಗಳನ್ನು ಮಾಡುತ್ತಾರೆ. ಎಲ್ಲ ಪಾಯಸಗಳನ್ನು ಬೆಳ್ಳಿಯ ಬಟ್ಟಲುಗಳಲ್ಲಿ ತುಂಬುತ್ತಾರೆ. ಮಗುವಿನ ಸೋದರ ಮಾವ (ತಾಯಿಯ ಅಣ್ಣ ಅಥವಾ ತಮ್ಮ) ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಪೂರ್ವಾಭಿಮುಖವಾಗಿ ಮಗುವಿಗೆ ಬಂಗಾರದ ಉಂಗುರದಿಂದ ಪಾಯಸವನ್ನು ತಿನ್ನಿಸಬೇಕು. ಮಗುವಿಗೆ ಮತ್ತು ತಾಯಿಗೆ ಸೋದರ ಮಾವನು ವಸ್ತುಗಳನ್ನು ಬೆಳ್ಳಿಯ ಬಟ್ಟಲನ್ನು, ಬಂಗಾರದ ಉಂಗುರವನ್ನು ನೀಡಬೇಕು.

“ಚಂಡಿಕೆ-ಜವಳ” ಕಾರ್ಯಕ್ರಮವು ಅವರವರ ಮನೆಯ ಪದ್ಧತಿಯಂತೆ ನಡೆಯುತ್ತದೆ. ಅನೇಕರು ತಿರುಪತಿ, ಶ್ರಿಶೈಲ, ಧರ್ಮಸ್ಥಳ, ಹಂಪೆ, ಗಾಣಗಾಪುರ ಮುಂತಾದ ಸ್ಥಳಗಳಲ್ಲಿ (ಅವರವರ ಹರಕೆಯಂತೆ) ಮಾಡಿಸುತ್ತಾರೆ. ಉಳಿದವರು ಅವರವರ ಮನೆಯಲ್ಲಿ ಶುಭದಿನದಂದು ಊರಿನ ನಾಯಿಂದನಿಂದಲೇ ಮಾಡುತ್ತಾರೆ. ಆಗಲೂ ಮಗುವನ್ನು ಸೋದರ ಮಾವನೇ ತಮ್ಮ ತೊಡೆಯ ಮೇಲೆ ಕೂಡಿಸಿಕೊಂಡು ಚಂಡಿಕೆ ತೆಗೆಸಬೇಕು. ವೈಶ್ಯರಲ್ಲಿ ಜುಟ್ಟು ಬಿಡುವ ಸಂಪ್ರದಾಯವಿಲ್ಲ.

ಮಗು ಬೆಳೆದಂತೆಲ್ಲಾ ತುಂಬಿದ ಅಕ್ಕರೆಯಿಂದ ನಾನಾ ಕಾರ್ಯಕ್ರಮಗಳು ನಡೆಯುತ್ತವೆ. ಮಗು ಮಗ್ಗುಲು ಹೊರಳಿದರೆ, ಅಂಬೆ ಗಾಲಿಟ್ಟರೆ, ಹೊಸ್ತಿಲು ದಾಟಿದರೆ, ತಡವರಿಸಿ ಏಳುತ್ತಾ, ಬೀಳುತ್ತಾ ನಡೆದರೆ ಹೀಗೆ ನಾನಾ ಸಮಯದಲ್ಲಿ ಆರತಿ ಮಾಡುವುದು, ದೃಷ್ಟಿ ತೆಗೆಯುವುದು, ಪಕ್ಕದ ಮನೆಯವರಿಗೆ ಸಿಹಿ ಕೊಡುವುದು ನಡದೇ ಇರುತ್ತದೆ. ಅಪರೂಪದ ಬಸಿರಾದರೆ ಹೀಗೆ ತೋಟದ ಊಟ, ಬೆಳದಿಂಗಳ ಊಟ, ಹರಿಗೋಲು ಊಟ, ಪಡುಗದ ಮಂಡಿಗೆಯ ಸಾರನೆ ಮುಂತಾದವನ್ನು ಸಡಗರದಿಂದ ಮಾಡುವುದು, ಹೆಣ್ಣಾದರೆ ಗಂಡುವೇಷ-ಗಂಡಾದರೆ ಹೆಣ್ಣು ವೇಷ ಹಾಕುವುದು ಮಾಡುತ್ತಾರೆ. ಮಲ್ಲಿಗೆಯ ಜಡೆ, ಕೇದಗೆಯ ಜಡೆ, ಮುತ್ತಿನ ಜಡೆ ಹೀಗೆ ನಾನಾ ರೀತಿಯಲ್ಲಿ ಮಗುವನ್ನು ಅಲಂಕರಿಸಿ, ಅಳಿಸಿ-ನಗಿಸಿ ತಾಯಂದಿರು ಖುಷಿಪಡುತ್ತಾರೆ.

ನಾಲ್ಕೈದು ವರುಷಗಳವರೆಗೆ ಅಥವಾ ಮಗುವಿಗೊಂದು ತಮ್ಮನೋ, ತಂಗಿಯೋ ಬರುವವರೆಗೆ ಲಲ್ಲೆಗೆರೆಯುತ್ತಾರೆ. ಐದು ವರುಷ ತುಂಬಿದ ನಂತರ ತಪ್ಪದೇ ಶಾಲೆಗೆ ಸೇರಿಸುತ್ತಾರೆ. ಈಗಂತೂ ಮೂರು ವರ್ಷ ದಾಟುತ್ತಲೇ ನರ್ಸರಿ ಶಾಲೆಗೆ ಸೇರಿಸುತ್ತಾರೆ. ಶಾಲೆಗೆ ಸೇರುವಾಗ ಶುಭದಿನ ನೋಡಿ ಮನೆಯಲ್ಲಿ ದೇವರ ಪೂಜೆ ಮಾಡಿ, ಕುಲದೇವರಿಗೆ ಮುಡಿಪು ಕಟ್ಟಿ ಶಾಲೆಯಲ್ಲಿ ದಾಖಲು ಮಾಡುತ್ತಾರೆ. ಮೊದಲು ಶಾಲೆಗೆ ಸೇರಿಸುವಾಗ ೨೫ ಪಾಟಿ (ಸ್ಲೇಟು) ಮತ್ತು ಬಳಪ ಒಯ್ದು ಅಲ್ಲಿ ಬಡಮಕ್ಕಳಿಗೆ ನೀಡಿ, ತರಗತಿಯಲ್ಲಿ ಸರಸ್ವತಿ ಪೂಜೆ ಮಾಡಿಸಿ, ಮಗುವಿನಿಂದ “ಓಂ ನಮಃ ಶಿವಾಯ” ಬರೆಸುತ್ತಿದ್ದರು. ತರಗತಿಯ ಹುಡುಗರಿಗೆ ಮಂಡಾಳು (ಚುರುಮುರಿ) ಡಾಣಿ ಮತ್ತು ಹಸಿಕೊಬ್ಬರಿ ತುಂಡು ನೀಡುತ್ತಿದ್ದರು. ಈಗ ಚಾಕಲೇಟ್‌ವಿತರಿಸುತ್ತಾರೆ.

ಶಾಲೆಗೆ ಸೇರಿದ ನಂತರ ಅವನಿಗಿನ್ನು ನಿಜವಾದ ಶಿಕ್ಷಣ ಆರಂಭವಾಗುತ್ತದೆ. ಹೊತ್ತಿಗೆ ಸರಿಯಾಗಿ ಏಳುವುದು, ಸ್ನಾನ ಮಾಡಿ ದೇವರಿಗೆ ಕೈಮುಗಿದು ಓದಲು ಕೂಡುವುದು, ಶಾಲೆಗೆ ಸಮಯಕ್ಕೆ ಸರಿಯಾಗಿ ಹೋಗಿ, ಶಾಲೆ ಬಿಟ್ಟ ಕೂಡಲೇ ಮನೆಗೆ ಬರುವುದು, ಒಣ ಹರಟೆ, ತಿರುಗಾಟ ಮುಂತಾದವೆಲ್ಲ ಬೇಕಿಲ್ಲ. ಹೆಣ್ಣು ಮಕ್ಕಳ ವಿಚಾರದಲ್ಲಿ ಇನ್ನೂ ಕಟ್ಟುನಿಟ್ಟು. ಸಾಧಾರಣವಾಗಿ ಹುಡುಗಿಯರು ಮೈನೆರೆತ ಕೂಡಲೇ ಶಾಲೆಗೆ ವಿದಾಯ ಹೇಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಕಾಲೇಜುಗಳಾಗಿವೆ. ಅವರೂ ಸಾಕಷ್ಟು ವಿಧ್ಯಾಭ್ಯಾಸ ಮಾಡುತ್ತಾರೆ. ಹೆಣ್ಣು ಮಕ್ಕಳು ಮೈನೆರೆತಾಗ ಅವರನ್ನು ಕೂಡಿಸಿ ಆರತಿ ಮಾಡುವ ಸಂಪ್ರದಾಯವಿತ್ತು. ಆರೇಳು ದಿನ ಹುಡುಗಿಗೆ ಬೇರೆ ಬೇರೆ ವೇಷ ಅಂದರೆ ಲಕ್ಷ್ಮೀ, ಸರಸ್ವತಿ, ದುರ್ಗಾ ಹೀಗೆ ಅಲಂಕರಿಸಿ ಸಾಯಂಕಾಲ ಸಮಯದಲ್ಲಿ ಇಷ್ಟವಾದ ಮಿತ್ರರನ್ನು ಕರೆದು ಆರತಿ ಮಾಡಿ ಶುಭ ಹಾರೈಸಿ ಬಂದವರಿಗೆ ಉಡಿ ತುಂಬಿ ಕಳುಹಿಸುತ್ತಿದ್ದರು. ಈಗಿನ ಹುಡುಗಿಯರು ಈ ಎಲ್ಲಾ ಪ್ರದರ್ಶನಕ್ಕೆ ಒಪ್ಪುವುದಿಲ್ಲ. ಹುಡುಗಿಯರು ಅಡುಗೆ, ಕಸೂತಿ, ರಂಗೋಲಿ, ಚಿತ್ರಕಲೆ, ಸಂಗೀತ ಭರತನಾಟ್ಯ ಮುಂತಾದ ವಿಷಯಗಳಲ್ಲಿ ಪರಿಣತರಾಗುತ್ತಿದ್ದರು. ಈಗ ಕಂಪ್ಯೂಟರ್ ತರಬೇತಿ ಪಡೆಯುತ್ತಾರೆ.

ಹುಡುಗ-ಹುಡುಗಿಗೆ ಯುಕ್ತ ವಯಸ್ಸು ಬಂದ ಕೂಡಲೇ ಕನ್ಯಾ/ವರಾನ್ವೇಷಣೆ ಪ್ರಾರಂಭವಾಗುತ್ತದೆ. ಹಿಂದಿನ ಕಾಲದಲ್ಲಿ ಹತ್ತಿರ ಹತ್ತಿರ ಮತ್ತು ಗುರುತು ಬಲ್ಲ ಕುಟುಂಬಗಳಲ್ಲಿ ಸಂಬಂಧವಾಗುತ್ತಿದ್ದವು. ಆಗ ದೂರ ಪ್ರವಾಸ ಮಾಡುವ ಅನುಕೂಲಗಳಿರಲಿಲ್ಲ. ಬಂದು ಹೋಗಿ ಮಾಡುವುದಕ್ಕೆ ಸನಿಹದಲ್ಲಿಯೇ ಇದ್ದರೆ ಅನುಕೂಲವೆಂದು ಭಾವಿಸುತ್ತಿದ್ದರು. ವೈಶ್ಯರಲ್ಲಿ ಮೊದಲಿನಿಂದಲೂ ಕನ್ಯಾಪಿತರಿಗೆ ವರದಕ್ಷಿಣೆಯೆಂಬುದು ದೊಡ್ಡ ಭಾರ. ಈಗ ಹುಡುಗಿಯರು ಸ್ವಯಂ ಸಂಪಾದನೆ ಮಾಡುವಂತಾಗಿದ್ದಾರೆ. ಡಾಕ್ಟರ್, ಎಂಜಿನಿಯರ್, ವಕೀಲರು, ಆಡಿಟರ್ ಆದರೂ ವರದಕ್ಷಿಣೆ ತಪ್ಪಲಿಲ್ಲ. ಅದರಲ್ಲೂ ನಾನಾ ರೀತಿ ಇದೆ.

ಸಾಲಂಕೃತ ಕನ್ಯಾದಾನ ಎಂದರೆ ಮನೆಯ ಸುಣ್ಣ ಬಣ್ಣದ ಖರ್ಚಿನಿಂದ ಪ್ರಾರಂಭಿಸಿ, ಬಟ್ಟೆ-ಬರೆ, ವಾಚು-ಬಳೆ ಮತ್ತು ಅವರು ಮದುವೆಗೆ ಬರಲು ಬಸ್‌ವ್ಯವಸ್ಥೆಯನ್ನೂ ಕನ್ಯಾಪಿತನೇ ಕೊಡಬೇಕು. ಅನಂತರ ಮಗಳಿಗೆ ಚಿನ್ನದ ಆಭರಣ, ಊಟದ ತಟ್ಟೆ-ತಂಬಿಗೆ ಮುಂತಾದ ಬೆಳ್ಳಿಯ ವಸ್ತುಗಳು ಇತ್ಯಾದಿ ನೀಡಿ ವೈಭವದಿಂದ ಮದುವೆ ಮಾಡಿಕೊಡಬೇಕು.

ಎರಡನೆಯದಾಗಿ ಇಂತಿಷ್ಟೆಂದು ವರದಕ್ಷಿಣೆ ಕೊಡಬೇಕು. ವರನ ಕಡೆಯವರು ವಧುವಿಗೆ ಸಾಕಷ್ಟು ಬಟ್ಟೆ-ಬರೆ, ಆಭರಣ ಮಾಡಿಸಬೇಕು. ಕನ್ಯಾಪಿತನು ಸಾಕಷ್ಟು ಅದ್ಧೂರಿಯಿಂದ ಮದುವೆ ಮಾಡಿಕೊಡಬೇಕು. ಈಗ ಕನಿಷ್ಟ ೪-೫ ಕಿಲೋ ಬೆಳ್ಳಿ ಸಾಮಾನು ಬಯಸುತ್ತಾರೆ. ಅನಂತರ ಮದುವೆಯಾದ ಮೊದಲ ವರ್ಷವಿಡೀ ಬರುವ ಹಬ್ಬಗಳಿಗೆ ಅಳಿಯನನ್ನು ಕರೆಸಿ ಸತ್ಕರಿಸಿ ವಸ್ತ್ರಗಳನ್ನು, ಆಭರಣಗಳನ್ನು ಕೊಡಬೇಕು. ಈಗಂತೂ ಕೆಲವರು ಸ್ಕೂಟರ್ ಕೇಳಿದರೆ, ಕೆಲವರು ಕಾರು ಅಥವಾ ಬೆಂಗಳೂರಿನಲ್ಲೊಂದು ಸೈಟು ಅಥವಾ ಅಪಾರ್ಟ್‌‌ಮೆಂಟ್‌ಕೇಳುತ್ತಾರೆ. ಕೆಲವರು ಕೊಡುತ್ತಾರೆ. ವೈಶ್ಯರಲ್ಲಿ ಮದುವೆಯೆಂಬುದು ತುಂಬಾ ದುಬಾರಿ ವೆಚ್ಚದ ಮತ್ತು ಎರಡೂ ಕಡೆಯವರಿಗೂ ಹೊರಲಾರದಷ್ಟು ಭಾರವಾಗುವ ಪ್ರಸಂಗವಾಗಿದೆ. ದೊಡ್ಡ ಊರಿನವರ ಹಾರಾಟದಿಂದ ಗ್ರಾಮಾಂತರದ ಜನರಿಗೆ ತುಂಬಾ ತೊಂದರೆ ಆಗಿದೆ. ಸಾಮೂಹಿಕ ವಿವಾಹಗಳಿಗಿಂತಲೂ ವೈಶ್ಯರು ತುಂಬಾ ದೂರ. ವರದಕ್ಷಿಣೆಯ ಪಿಡುಗನ್ನು ಎದುರಿಸಲು ಸಾಧ್ಯವಿಲ್ಲವಾಗಿದೆ. ಎಲ್ಲಿಯವರೆಗೆ ಕನ್ಯಾಪಿತರು ತಮ್ಮ ಅಳಿಯ ಅಂಥವನಾಗಿರಬೇಕು. ಇಂಥವನಾಗಿರಬೇಕು ಎಂದು ಬಯಸುವರೋ, ಎಲ್ಲಿಯವರೆಗೆ ದೊಡ್ಡೂರಿನ ಅಳಿಯನ ಮೋಜಿನಿಂದ ಹೊರಬರುವುದಿಲ್ಲವೋ ಅಲ್ಲಿಯವರೆಗೆ ವರದಕ್ಷಿಣೆ ಕಡಿಮೆ ಆಗುವುದಿಲ್ಲ. ಇತ್ತೀಚೆಗೆ ವಿದೇಶದಲ್ಲಿರುವ (ಅನಿವಾಸಿ ಭಾರತೀಯ) ಅಳಿಯನ ಆಸೆಯಿಂದ ಅನೇಕರು ಬೆಸ್ತು ಬಿದ್ದಿದ್ದಾರೆ. ಆದರೆ ಅದು ಕಡಿಮೆ ಆಗಿಲ್ಲ. ಮದುವೆ ಆದನಂತರ ಮಗ ಗೃಹಸ್ಥನಾಗುತ್ತಾನೆ. ಅವನದೊಂದು ಬದುಕು ಪ್ರಾರಂಭವಾಗುತ್ತದೆ. ಅನೇಕರು ತಂದೆ-ತಾಯಿಗಳಿಂದ ದೂರವಾಗುತ್ತಾರೆ. ಕೆಲವರಾದರೂ ತಂದೆ-ತಾಯಿಯರನ್ನು ಕಾಪಾಡುತ್ತಾರೆ.

ಮದುವೆಯ ನಂತರ ವೈಶ್ಯರಲ್ಲಿ ಆಸೆಯಿಂದ ನಿರೀಕ್ಷಿಸುವ ಸಂದರ್ಭವೆಂದರೆ ಮದುವೆಯ ರಜತೋತ್ಸವ. ಇಪ್ಪತ್ತೈದು ವರುಷಗಳ ಸುಖೀ ದಾಂಪತ್ಯವನ್ನು ಆಚರಿಸುತ್ತಾರೆ. ಬಂಧು-ಮಿತ್ರರೊಂದಿಗೆ, ಮಕ್ಕಳು, ಮೊಮ್ಮಕ್ಕಳೊಂದಿಗೆ ಸೇರಿ ಒಂದು ದಿನ ಮುಷ್ಟಾನ್ನ ಭೋಜನ ಮಾಡುತ್ತಾರೆ. ಈಗ ಕೇಕ್‌ಕತ್ತರಿಸುತ್ತಾರೆ. ಮೊಂಬತ್ತಿ ಆರಿಸುತ್ತಾರೆ. ಮತ್ತು ಹಾರೈಸುತ್ತಾರೆ. ಉಡುಗೊರೆ ನೀಡುವುದು, ಸ್ವೀಕರಿಸುವುದು ಖಂಡಿತ ಇರುತ್ತದೆ. ಇದೊಂದು ರೀತಿಯ ಕೌಟುಂಬಿಕ ಸಮ್ಮಿಲನ ಕಾರ್ಯಕ್ರಮ.

ಅನಂತರ ಪ್ರಮುಖ ಆಚರಣೆಯೆಂದರೆ ಯಜಮಾನನಿಗೆ ಅರವತ್ತು ವರುಷ ಪ್ರಾಯ ಬಂದಾಗ ಅಂದರೆ ಐವತ್ತೊಂಭತ್ತು ಮುಗಿದು ಅರವತ್ತನೇ ಜನ್ಮದಿನ ಬರುವುದರೊಳಗೆ ಅನುಕೂಲ ನೋಡಿಕೊಂಡು ಮಾಡುವ ಉತ್ಸವ. ಆ ಸಮಯಕ್ಕೆ ಹೆಂಡತಿ ಬದುಕಿರಬೇಕು. ಇದನ್ನು “ಷಷ್ಠಿಪೂರ್ತಿ ಶಾಂತಿ” ಎಂದು ಕರೆಯುತ್ತಾರೆ. ಸಾಧಾರಣವಾಗಿ ಮೃತ್ಯುಂಜಯ ಜಪ-ಹೋಮ, ಗಣಹೋಮ, ನವಗ್ರಹ ಹೋಮ ಮತ್ತು ಸಾಧ್ಯವಾದರೆ ಸುದರ್ಶನ ಹೋಮ ಮಾಡುತ್ತಾರೆ. ಪತಿ-ಪತ್ನಿಯರನ್ನು ದೊಡ್ಡ ತಕ್ಕಡಿಯಲ್ಲಿ ಕೂಡಿಸಿ, ಅಕ್ಕಿ, ಬೆಲ್ಲ, ಹಣ್ಣು, ಕಾಯಿ, ಬೆಳ್ಳಿ, ಬಂಗಾರ, ತಾಮ್ರ ಮುಂತಾದ ವಸ್ತುಗಳಿಂದ ತುಲಾಭಾರ ಮಾಡಿ, ಆ ವಸ್ತುಗಳನ್ನು ದಾನ-ಧರ್ಮ, ಉಡುಗೊರೆಗೆ ಉಪಯೋಗಿಸುತ್ತಾರೆ. ಸಾಧಾರಣವಾಗಿ ಎರಡು ದಿವಸ ನಡೆಯುವ ಷಷ್ಠಿಪೂರ್ತಿ ಕಾರ್ಯಕ್ರಮವು ಹಿರಿಯರಿಗೆ ಸಂತೃಪ್ತಿ ನೀಡುತ್ತದೆ. ವಿಶೇಷವೆಂದರೆ ಈಗೊಮ್ಮೆ ಮಾಂಗಲ್ಯ ಧಾರಣ ಮಾಡಿಸುತ್ತಾರೆ.

ಅನಂತರ ಎಪ್ಪತ್ತು ವರುಷ ಬಂದಾಗ “ಭೀಮರಥ ಶಾಂತಿ” ಎಂದು ಸಾಧಾರಣವಾಗಿ ಅದೇ ರೀತಿಯ ಜಪ-ತಪ-ಹೋಮಾದಿಗಳನ್ನು ಮಾಡುತ್ತಾರೆ. ಆದರೆ ತುಲಾಭಾರ ಕಾರ್ಯಕ್ರಮವಿರುವುದಿಲ್ಲ. ಆಮೇಲೆ ಎಂಭತ್ತು ವರುಷವಾದಾಗ “ಸಹಸ್ರ ಚಂದ್ರದರ್ಶನ” ಶಾಂತಿಯನ್ನು ನೆರವೇರಿಸುತ್ತಾರೆ. ಯಜಮಾನರಿಗೆ ಎಂಭತ್ತು ವರುಷ ತುಂಬುವಲ್ಲಿ ಅವರು ಕನಿಷ್ಠ ಸಾವಿರ ಹುಣ್ಣಿಮೆಗಳನ್ನು ಕಂಡಿರುತ್ತಾರೆ. ಅಂದರೆ ಸಹಸ್ರ ಚಂದ್ರದರ್ಶನವಾಗಿರುತ್ತದೆ ಎಂಬ ಭಾವನೆ. ಆಗಲೂ ತುಲಾಭಾರ ಕಾರ್ಯಕ್ರಮವಿರುವುದಿಲ್ಲ. ಧಾರಾಳವಾಗಿ ಉಡುಗೊರೆ ನೀಡುವುದು, ಪಡೆಯುವುದು ಇರುತ್ತದೆ.

ಮರಿಮೊಮ್ಮಗ ಜನಿಸಿದಾಗ ನಡೆವ ಉತ್ಸವ-ಕನಕಾಭಿಷೇಕ, ಮಗನ ವಂಶದಿಂದಾಗಲೀ, ಮಗಳ ವಂಶದಿಂದಾಗಲೀ ಮರಿಮೊಮ್ಮಗನ ಜನನವಾದಾಗ ಜೀವಂತವಿರುವ ಅಜ್ಜನಿಗಾಗಲೀ, ಅಜ್ಜಿಗಾಗಲೀ ಅಥವಾ ಇಬ್ಬರೂ ಜೀವಿಸಿದ್ದರೆ ಅವರಿಗೆ ಮರಿಮೊಮ್ಮಗನಿಂದಲೇ ಹಡೆಯುವ ಪುಟ್ಟ ಪುಟ್ಟ ಸುವರ್ಣ ಪುಷ್ಟಗಳ ಅಭಿಷೇಕ. ಈಗಲೂ ಜಪ-ತಪ, ಹೋಮ-ಹವನ ಮಾಡುತ್ತಾರೆ. ಕುಟುಂಬದ ಸದಸ್ಯರು ಇಷ್ಟ ಮಿತ್ರರೂ ಸೇರಿ ದೀರ್ಘಾಯುಷ್ಯವನ್ನು ಹಾರೈಸಿ, ಆಶೀರ್ವಾದ ಪಡೆದು ಸಂಭ್ರಮಿಸುವ ಕಾರ್ಯಕ್ರಮವಾಗಿದೆ. ಅಜ್ಜ-ಅಜ್ಜಿ ಮರಿಮೊಮ್ಮಗನಿಗೆ ಬಾಳೆಯಿಂದ ಹಾಲು ಕುಡಿಸುತ್ತಾರೆ.

ಇನ್ನು ನೂರು ವರುಷ ಜೀವಂತವಿದ್ದರೆ, ಅವರು ಆರೋಗ್ಯದಿಂದ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಖಂಡಿತವಾಗಿಯೂ ಅದ್ಧೂರಿಯಿಂದ ಶತಮಾನೋತ್ಸವ ಮಾಡುತ್ತಾರೆ. ಆದರೆ ವೈಶ್ಯರಲ್ಲಿ ಈವರೆಗೆ ಯಾರೂ ನೂರು ತುಂಬುವವರೆಗೆ ಬಾಳಿದಂತಿಲ್ಲ. ಈ ಎಲ್ಲಾ ಸಂದರ್ಭಗಳಲ್ಲಿ ಉಳ್ಳವರು ಅವರಿಗಿಷ್ಟವಾದ ಸಂಘ ಸಂಸ್ಥೆಗಳಿಗೆ ದಾನ ಧರ್ಮಗಳನ್ನು ನೀಡುವುದು ವಾಡಿಕೆ. ತಪಸ್ಸು ಮಾಡುವವರಿಗೆ ಹೇಳುವ ಒಂದು ಮಾತು ತಪಸ್ಸು ಮಾಡುವಾಗ, ಸಿದ್ದಿಯಾಗುವವರೆಗೆ ಅತ್ಯಂತ ಲೋಭಿಯಂತೆ ತಪತ್ಸಂಚಯ ಮಾಡಬೇಕು. ಭಗವತ್‌ಪ್ರೀತಿ ಪಾತ್ರರಾಗಿ ಸಿದ್ದರಾದ ಉದ್ದಾರಕ್ಕೆ ತಪಶ್ಯಕ್ತಿಯನ್ನು ವ್ಯಯಿಸಬೇಕು. ವೈಶ್ಯರು ಸಂಪಾದನೆ ಮಾಡುವಾಗ ಕಾಸು ಕಾಸಿಗೆ ಲೆಕ್ಕ ಹಾಕುತ್ತಾರೆ. ವ್ಯಯಿಸುವಾಗ ಅತ್ಯಂತ ಧಾರಾಳವಾಗಿ ಖರ್ಚು ಮಾಡುತ್ತಾರೆ.

ಕೋಮಟಿಗರಲ್ಲಿ ಮರಣವೂ ದೊಡ್ಡ ವೆಚ್ಚದ ಬಾಬ್ತೇ ಆಗಿದೆ. ಅವರ ಆರ್ಥಿಕ ಪರಿಸ್ಥಿತಿ ಏನೇ ಇರಲಿ ಇದು ಗತ್ಯಂತರವಿಲ್ಲದ ಕೆಲಸವಾಗಿದೆ. ಕೆಲವರು ಇನ್ನೊಂದು ದಿನಗಳ ಸೂತಕವನ್ನು ಮತ್ತೆ ೧೫ ದಿನ. ಕೆಲವರು ಹದಿನೈದು ದಿನಗಳ ಸೂತಕವನ್ನು ಆಚರಿಸುತ್ತಾರೆ. ಅವರವರ ಮನೆತನಗಳಲ್ಲಿ ನಡೆದು ಬಂದ ರೀತಿ. ಆದರೆ ಗುಹ್ಯಸೂತ್ರಗಳ ಪ್ರಕಾರ ವೈಶ್ಯರು ಹನ್ನೊಂದು ದಿವಸ ಸೂತಕ ಆಚರಿಸಿದರೆ ಸಾಕಾಗಿದೆ. ಅಪಾರ ಸಂಸ್ಕಾರ ಕ್ರಿಯೆಗಳು ಅಥವಾ ಮರಣೋತ್ಸವ ಕ್ರಿಯೆಗಳು ಸಂವೇದನಾಶೀಲರಿಗೆ ಯಾತನಾಮಯವಾಗಿರುತ್ತವೆ. ಜೀವಿಗೆ ಪ್ರೇತ ಪರಿಸ್ಥಿತಿಯಿಂದ ಬಿಡುಗಡೆಯಾಗಬೇಕೆಂದು ಕೆಲ ಸಂಸ್ಕಾರಗಳನ್ನು ಮಾಡಲೇ ಬೇಕೆಂದು ವಿಧಿಸಲಾಗಿದೆ.

ಜೀವಿಗೆ ಮರಣ ಸನ್ನಿಹಿತವಾಗಿದೆಯೆಂದು ತಿಳಿದ ಮೇಲೆ ಆದಷ್ಟು ಸಂಸಾರ ಬಂಧನದಿಂದ ದೂರವಾಗಲು ಪ್ರಯತ್ನಿಸಬೇಕು. ದೈವ ಚಿಂತನೆ, ಪ್ರಾರ್ಥನೆ, ಧ್ಯಾನಾದಿಗಳನ್ನು ಯಥಾಶಕ್ತಿ ಮಾಡಬೇಕು. ಜೀವಿಯು ದೇಹವನ್ನು ತ್ಯಜಿಸುವ ಸಮಯ ಬಂದಾಗ, ಕೊನೆಯುಸಿರೆಳೆಯುವ ಕಾಲಕ್ಕೆ ಬಾಯಲ್ಲಿ ಗಂಗಾಜಲ, ಪುಣ್ಯ ತೀರ್ಥ ಮತ್ತು ತುಳಸೀ ದಳವನ್ನು ಹಾಕುತ್ತಾರೆ. ದೇವರ ಸ್ಮರಣೆ ಮಾಡುತ್ತಾ ಈ ಕ್ರಿಯೆ ನಡೆಯಬೇಕು. ಒಮ್ಮೆ ಪ್ರಾಣ ಹೋದ ಮೇಲೆ ಶವವನ್ನು ಹೊರಗೆ ತಂದು ತಲೆಗೊಂದು ತೊಟ್ಟು ತುಪ್ಪ ಹಚ್ಚಿ ಸ್ನಾನ ಮಾಡಿಸುತ್ತಾರೆ. ಅನಂತರ ಬೊಂಬುಗಳಿಂದ ತಯಾರಿಸಿದ ಸಿದಿಗೆಯ ಮೇಲೆ ಉತ್ತರಕ್ಕೆ ತಲೆಮಾಡಿ ಜೋಳ ಅಥವಾ ಸಜ್ಜೆಯ ದಂಟಿನ ಮೆತ್ತೆಯ ಮೇಲೆ ಮಲಗಿಸುತ್ತಾರೆ. ಶವವು ಅಲ್ಲಾಡದಂತೆ ಜೋಡು ಹುರಿಹಾಕಿ ಚೆನ್ನಾಗಿ ಬಿಗಿದು ಕಟ್ಟುತ್ತಾರೆ. ತಲೆಯಡಿಗೆ ಶ್ರೀಗಂಧ ಮತ್ತು ತುಳಸೀ ಕಾಷ್ಟದ ತುಂಡನ್ನಿಡಬೇಕು. ಮೈಯನ ಬಿಂದಿಗೆಯಲ್ಲಿ ನೀರು ತುಂಬಿಕೊಂಡು ಮುಂದೆ ಹೋಗಬೇಕು. ಅವನು ಹಿಂದಿರುಗಿ ನೋಡಬಾರದು. ಹಿಂದೆ ಬಂಧು ಬಾಂಧವರು ಶವ ಚಟ್ಟವನ್ನು ಹೆಗಲ ಮೇಲೆ ಹೊತ್ತುಕೊಂಡು ರಾಮನಾಮ ಸ್ಮರಣೆ ಮಾಡುತ್ತಾ ಮುಂದೆ ಸಾಗುತ್ತಾರೆ.

ಹೆಣ್ಣು ಮಕ್ಕಳು, ತಂದೆ ತಾಯಿ ಬದುಕಿರುವವರು ಸ್ಮಶಾನಕ್ಕೆ ಬರುವಂತಿಲ್ಲ. ಎಲ್ಲರೂ ಅಂಗಳದಲ್ಲಿಯೇ ಶವಕ್ಕೆ ಪ್ರದಕ್ಷಿಣೆ ಮಾಡಿ, ಶವದ ಬಾಯಿಗೆ ಎಳ್ಳು, ಅಕ್ಕಿ ಹಾಕಿ ಬಾಯಿ ಬಡಕೊಂಡು ಋಣ ತೀರಿಸಿಕೊಳ್ಳುತ್ತಾರೆ. ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ಹಾದಿಯಲ್ಲಿ ಎರಡು ಸ್ಥಳದಲ್ಲಿ ಚಟ್ಟವನ್ನು ಕೆಳಗಿರಿಸಿ ಅಲ್ಲಿದ್ದವರೆಲ್ಲಾಶವ ಪ್ರದಕ್ಷಿಣೆ ಮಾಡಿ ಶವದ ಬಾಯಿಗೆ ಎಳ್ಳು ಹಾಕಿ, ಬಾಯಿ ಬಡಕೋಬೇಕು. ಸ್ಮಶಾನ ತಲುಪಿದ ಮೇಲೆ ಶವವನ್ನು ವಿವಸ್ತ್ರ ಮಾಡಿ, ಆಗಲೇ ಪೇಟಿಸಿಟ್ಟ ತೆರೆಯ ಮೇಲೆ ಇಡಬೇಕು. ಅನಂತರ ಶವದ ಮೇಲೆಲ್ಲಾ ಕಟ್ಟಿಗೆ, ಕರ್ಪುರ, ತುಪ್ಪ ಹಾಕಬೇಕು. ಕಟ್ಟಿಗೆಯ ಮೇಲೂ ಸಾಕಷ್ಟು ತುಪ್ಪ ಅಥವಾ ವನಸ್ಪತಿ ಹಾಕುತ್ತಾರೆ. ಅನಂತರ ಕಮಾಂತರ ಮಾಡಲು ಸಿದ್ಧನಾದ ಆಗಲೇ ಬೆಂಕಿಯನ್ನು ತಂದಿರುವ ಯುಕ್ತಿಯು ನೀರಿನ ಗಡಿಗೆಯನ್ನು ಹೊತ್ತು ಶವಪ್ರದಕ್ಷಿಣೆ ಮಾಡಬೇಕು. ನೀರು ತುಂಬಿದ ಗಡಿಗೆಗೆ ಪಟ್ಟು ರಂದ್ರವನ್ನು ಮಾಡಿ ಸುತ್ತಲೂ ನೀರು ಬೀಳುವಂತೆ ಮಾಡುತ್ತಾರೆ. ಪ್ರತಿ ಪ್ರದಕ್ಷಿಣೆಗೊಂದರಂತೆ ಒಟ್ಟು ಮೂರು ರಂದ್ರಗಳಿಂದ ನೀರು ಸೋರುತ್ತಾ ಖಾಲಿಯಾದ ಗಡಿಗೆಯನ್ನು ಹಿಮ್ಮುಖವಾಗಿಯೇ ಕೆಳಗೆ ಹಾಕಿ ಸ್ವಚ್ಚ ಮಾಡಬೇಕು. ಶವಕ್ಕೆ ಬಿಗಿದ ಹುರಿಯನ್ನು ಕಲ್ಲಿನಿಂದ ಜಜ್ಜಿ ಕತ್ತರಿಸಬೇಕು. ಆ ಕಲ್ಲನ್ನು ಸಮಾನದಲ್ಲಿಯೇ ಬಿಚ್ಚಿಡಬೆಕು. ಅನಂತರ ಜತೆಗೆ ಅಗ್ನಿ ಸ್ಪರ್ಶ ಮಾಡಿ, ಶವವು ಸಂಪೂರ್ಣ ಭಸ್ಮವಾಗುವವರೆಗೆ ಅಲ್ಲಿಯೇ ಇದ್ದು ಅನಂತರ ಅಲ್ಲಿ ನಿಗಾ ಇರಲು ಯಾರನ್ನಾದರೂ ಉಳಿಸಿ ಮರಳಬೇಕು.

ಸ್ಮಶಾನಯಾತ್ರೆಯಲ್ಲಿ ಭಾಗವಹಿಸಿದ ಸಾರ್ವಜನಿಕರೆಲ್ಲ ಹಳ್ಳದಲ್ಲೊ, ಸಾರ್ವಜನಿಕ ನಳದ ಹತ್ತಿರವೋ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ಯಜ್ಞೋಪವೀತಗಳನ್ನು ಬದಲಾಯಿಸಿಕೊಂಡು ಮನೆಗೆ ಸೇರಬೆಕು. ಸೂತಕ (ಮೈಲಿಗೆ) ಬಂದವರು ನೇರವಾಗಿ ಅವರವರ ಮನೆ ಸೇರಬೇಕು. ಆ ದಿನ ಮಧ್ಯಾಹ್ನದ ಊಟವನ್ನು ಯಾರಾದರೂ ಬಂಧಗುಗಳು ಕಳುಹಿಸಿಕೊಡುತ್ತಾರೆ. ಅಥವಾ ಸಂಘದಿಂದ ಕಳಿಸುತ್ತಾರೆ. ಶವ ಸಂಸ್ಕಾರದ ನಂತರ ನಾಲ್ಕನೇ ದಿನ ಸ್ಮಶಾನಕ್ಕೆ ಹೋಗಿ ಮೃತನ ಆಸ್ತಿ ನಂಚಯನ ಮಾಡುತ್ತಾರೆ. ಆಸ್ತಿಗಳಲ್ಲಿ ಕೆಲವನ್ನು ಅಂಚೆಯ ಮೂಲಕ ಕಳಿಸಿ ಅಥವಾ ಸ್ವಯಂ ತೆರಳಿ ಕಾಶಿಯಲ್ಲಿ ಗಂಗಾನದಿಯಲ್ಲಿ ವಿಸರ್ಜಿಸುತ್ತಾರೆ. ಅನಂತರ ಎಂಟನೇ ದಿನ “ಧರ್ಮೋದಕ” ಎಂಬ ಕಾರ್ಯಕ್ರಮದಲ್ಲಿ ರಕ್ತ ಸಂಬಂಧಿಗಳು ಮಾತ್ರ ಬಂದು ತಿಲತರ್ಪಣ ನೀಡಿ ಧರ್ಮೋದಕದ ಮೂಲ ಋಣ ತೀರಿಸಿಕೊಳ್ಳುತ್ತಾರೆ. ಆ ದಿನವೇ ಪಿಂಡಗಳನ್ನು ಕಾಗೆಗೆ ಹಾಕುತ್ತಾರೆ. ಕಾಗೆಗಳು ಬಂದು ಪಿಂಡವನ್ನು ಸ್ವೀಕರಿಸಿದರೆ ಮೃತನ ಆತ್ಮಕ್ಕೆ ಶಾಂತಿ, ಆಕಸ್ಮಾತ್‌ಕಾಗೆಗಳು ಬರದಿದ್ದರೆ ಕರ್ಮ ಮಾಡುವವರು ಮೃತಜೀವಿಯ ಆಸೆಗಳೇನಾದರೂ ಇದ್ದರೆ ಪೂರೈಸುವುದಾಗಿ ಭರವಸೆ ನೀಡುತ್ತಾರೆ. ಅನೇಕ ಸಲ ಆಗ ತಕ್ಷಣ ಕಾಗೆಗಳು ಎಲ್ಲಿಂದಲೋ ಬಂದು ಪಿಂಡವನ್ನು ಸ್ವೀಕರಿಸುತ್ತವೆ. ಧರ್ಮೋದಕರ ಮರುದಿನ ಶ್ರಾದ್ಧದ ಅತಿಥಿ ಮತ್ತು ಸಂಪಿಂಡಿಕರಣವೆಂಬ ಕಾರ್ಯವಿರುತ್ತದೆ. ಮೃತನು ತನ್ನ ತಂದೆ, ತಾತ, ಮುತ್ತಾತನವರ ಆತ್ಮಗಳೊಂದಿಗೆ ಏಕೀಭವಿಸುವುದೇ ಸಂಪಿಂಡೀಕರಣ.

ಇನ್ನು ಕೊನೆಯದಾಗಿ ತಿಥಿಯಾನಂತರ ಕರ್ಮ ಮಾಡಿದವರು ದೇವಸ್ಥಾನಕ್ಕೆ ಹೋಗಿ ಬಂದು ಮನೆ ಸೇರುತ್ತಾನೆ. ಅದೇ ಶುಭಸ್ವೀಕಾರ. ಅಂದು ಬಂಧುಗಳು ಕರ್ಮ ಮಾಡಿದವರಿಗೆ ಒಂಟಿ ಪಂಚೆ ಅಥವಾ ಟವಲ್‌ಅಥವಾ ಷರ್ಟ್‌‌ಪೀಸ್‌ಕೊಡುವುದು ವಾಡಿಕೆ. ಅವುಗಳಲ್ಲಿ ಸೋದರ ಮಾವನ ಅಥವಾ ಹೆಣ್ಣುಕೊಟ್ಟ ಮಾವನು ಕೊಟ್ಟ ಬಟ್ಟೆಗಳನ್ನು ಆ ದಿನ ಧರಿಸುತ್ತಾರೆ. ಇದಾದ ಮರುದಿನ ಅಥವಾ ಇನ್ನೊಂದು ದಿನ ವೈಕುಂಠ ಸಮಾರಾಧನೆ ಇರುತ್ತದೆ. ಆ ದಿನ ಬಂದು ಮಿತ್ರರೂ, ಬೇರೆ ಬೇರೆ ಜನಾಂಗದವರೂ, ಆಪ್ತರೆಲ್ಲಾ ಆಗಮಿಸಿ ಸಮಾರಾಧನೆಯಲ್ಲಿ ವಡೆ, ಗಾರಿಗೆ, ರವೆ ಉಂಡೆ ಮುಂತಾದ ವಿಶೇಷ ಪದಾರ್ಥಗಳನ್ನು ಸೇವಿಸಿ ಮೃತನ ನೆನಪಿಗೆ ನೀಡುವ ಕಿರುಕಾಣಿಕೆಗಳನ್ನು ಸ್ವೀಕರಿಸಿ ಆತನ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕೋರುತ್ತಾರೆ.

ಈ ಕರ್ಮಾಂತರದ ಶ್ರಾದ್ಧದ ದಿವಸ ದವಸ ಧಾನ್ಯಗಳನ್ನು ಕೊಡಬೇಕೆಂದು ರೂಢಿ. ೧. ಭೂಮಿ, ೨, ಮನೆ, ೩. ಗೋವು, ೪. ಛತ್ರಿ, ೫, ಪಾದುಕೆ, ೬. ಉಪ್ಪು, ೭. ಹಾಸಿಗೆ, ೮. ಕಬ್ಬಿಣ, ೯. ಕಿಂಚಿತ್‌ಸುವರ್ಣ, ೧೦. ಉದಕ ಕುಂಭ ಇತ್ಯಾದಿ.

ಅವರವರ ಶಕ್ತ್ಯಾನುಸಾರ ವಸ್ತು ರೂಪದಲ್ಲಿ ಅಥವಾ ಹಣದ ರೂಪದಲ್ಲಿ ಈ ವಸ್ತುಗಳನ್ನು ಬ್ರಾಹ್ಮಣರಿಗೆ ದಾನ ಮಾಡುತ್ತಾರೆ. ಮೃತರು ಮುತ್ತೈದೆ ಗೃಹಿಣಿಯಾಗಿದ್ದರೆ ವಿಧಿ ವಿಧಾನಗಳು ಭಿನ್ನವಾಗುತ್ತವೆ. ಅದರಲ್ಲಿ ಪ್ರಮುಖವೆಂದರೆ ಮೃತ ಮುತ್ತೈದೆಯಿಂದ ಬಾಗಿನ ಕೊಡಿಸುತ್ತಾರೆ.