ಅನಂತರ ಸಾಧ್ಯವಾದವರು ಪ್ರತಿ ತಿಂಗಳು ಮಾಸಿಕ ತಿಥಿಯನ್ನು ಮಾಡಲು ಬೇರೆ ಬೇರೆ ಪುಣ್ಯಕ್ಷೇತ್ರಗಳಿಗೆ ವರುಷವಾಗುವವರೆಗೆ ಹೋಗುತ್ತಾರೆ.

ಅದರಲ್ಲಿ ೧) ಶ್ರೀಶೈಲ, ೨) ಹಂಪೆ, ೩) ಕಾಶಿ, ೪) ಗಯಾ, ೫) ಪ್ರಯಾಗ, ೬) ಶ್ರೀರಂಗಪಟ್ಟಣ, ೭) ತಿರುಪತಿ, ೮) ಕಾಳಹಸ್ತಿ, ೯) ಕೃಷ್ಣಾ,೧೦)ಗೋಕರ್ಣ, ೧೧) ಶೃಂಗೇರಿ, ೧೨) ಅಲ್ಲಂಪುರ ಮುಂತಾದ ಸ್ಥಳಗಳಿಗೆ ಹೋಗುತ್ತಾರೆ. ವರ್ಷದ ನಂತರ “ವಷಾಂತಿಕ” ತಿಥಿಯನ್ನು ಎಲ್ಲರೂ ಸೇರಿ ಮಾಡುತ್ತಾರೆ. ವೈಶ್ಯರು, ಹಿರಿಯರು ಗತಿಸಿದ ದಿನ ಮಾಡುವ ಕಾಲತಿಥಿ ಮತ್ತು ಕ್ಷಮಾನಸದಲ್ಲಿ ಮಾಡುತ ತಿಥಿಗಳನ್ನು ತಪ್ಪದೇ ಆಡುತ್ತಾರೆ. ಪ್ರತಿ ಅಮವಾಸ್ಯೆಯ ದಿನ ಎಲ್ಲ ಪಿತೃಗಳನ್ನು ನೆನೆದು ತಿಲತರ್ಪಣ ಬಿಡುತ್ತಾರೆ. ಸಾಧ್ಯವಾದವರು ಉತ್ತರಾಂಚಲನ ಬದರಿ ಕ್ಷೇತ್ರಕ್ಕೆ ಹೋಗಿ ಅಲ್ಲಿನ ಬ್ರಹ್ಮ ಕಾಲವೆಂಬ ಸಥದಲ್ಲಿ ಪಿಂಡ ಸಮರ್ಪಣೆ ಮಾಡುತ್ತಾರೆ. ಅಂಥವರು ವರ್ಷ ವರ್ಷ ಶ್ರದ್ದಾ ಮಾಡುವ ಅವಶ್ಯಕತೆ ಬರುವುದಿಲ್ಲ. ಗಯಾದಲ್ಲಿ ವಿಷ್ಣುಪದದ ಮೇಲೆ ಮಾಡುವ ಶ್ರಾದ್ಧವೇ ಶ್ರೇಷ್ಠವೆಂದು ಹೇಳಲಾಗಿದೆ. ಗುಜರಾತಿಯಲ್ಲಿರುವ ಮಾತೃಗಯಾ ಎಂಬಲ್ಲಿ ತಾಯಿಯು ಶ್ರಾದ್ಧವು ಶ್ರೇಷ್ಠವೆಂದು ತಿಳಿಯುತ್ತಾರೆ. ವರ್ಷಾಂತಿಕವಾದ ಮೇಲೆ “ವಿಮುಖ” ಎಂಬ ಕ್ರಿಯೆ ಮಾಡುತ್ತಾರೆ. ಅದಾದ ನಂತರ ಕುಟುಂಬದಲ್ಲಿ ಮಂಗಲ ಕಾರ್ಯಗಳನ್ನು ನಡೆಸಲು ಅನುಮತಿ ದೊರೆಯುತ್ತದೆ.

ವೈಶ್ಯರು ತಪ್ಪದೇ ಆಚರಿಸುವ ಹತ್ತಿಪ್ಪತ್ತು ಹಬ್ಬಗಳಿವೆ. ಚೈತ್ರ ಶುದ್ಧ ಪಾಡ್ಯಮಿಯು ವರ್ಷದ ಪ್ರಥಮ ದಿವಸ. ಚಾಂದ್ರಮಾನ ಯುಗಾದಿಯು ವರ್ಷದ ಪ್ರಮುಖ ದಿನಗಳಲ್ಲೊಂದು. ಪಾಶ್ಚಾತ್ಯರು ಕೂಡಾ ಹೊಸ ವರ್ಷದ ದಿನಕ್ಕೆ ಮಹತ್ವ ನೀಡಿದ್ದಾರೆ. ಮನೆಯವರೆಲ್ಲಾ ಹೊತ್ತಾರೆ ಎದ್ದು ಅಭ್ಯಂಜನ ಸ್ನಾನ ಮಾಡುತ್ತಾರೆ. ಮನೆಯನ್ನೆಲ್ಲಾ ಶುಭ್ರವಾಗಿ ಸಾರಿಸಿ, ಬಾಗಿಲುಗಳಿಗೆ ಮಾವಿನ ತೋರಣ ಕಟ್ಟುವರು. ಅಂಗಳವನ್ನು ಸುಂದರವಾದ ರಂಗೋಲಿಯು ಅಲಂಕರಿಸುತ್ತದೆ. ಗೃಹಣಿಯರು ಆ ದಿನದ ವಿಶೇಷ ಊಟದ ತಯಾರಿ ನಡೆಸುತ್ತಾರೆ. ಹಿರಿಯರು ದೇವರ ಪೂಜೆ ಮಾಡುತ್ತಾರೆ. ಯುಗಾದಿಗೆ ಹೊರಣದ ಹೋಳಿಗೆ, ಮಾವಿನ ಹಣ್ಣಿನ ಸೀಕರಣೆ ಇರಬೇಕು. ಉಳಿದಂತೆ ಚಟ್ನಿ, ಕೋಸಂಬರಿ, ಕಾಯಿರಸ, ವಾಂಗಿಭಾತ್‌, ತಿಳಿಸಾರು, ಅನ್ನ, ಹಾಲು-ಮೊಸರು, ಹಪ್ಪಳ-ಸಂಡಿಗೆ-ಕರಿದ ಮೆಣಸಿನಕಾಯಿ, ವಡೆ ಅಥವಾ ಹಿಟ್ಟು ಹೆಚ್ಚಿನ ಮೆಣಸಿನಕಾಯಿ ಮಾಡುತ್ತಾರೆ. ಯುಗಾದಿಯ ವಿಶೇಷ ಪದಾರ್ಥವೆಂದರೆ ಬೇವು, ಬೇವಿನ ಹೂ, ಬೆಲ್ಲ, ಹುಣಸೆಹಣ್ಣು, ಗೋಡಂಬಿ, ದ್ರಾಕ್ಷಿ, ಹುರಿಕಡಲೆ, ಗಸಗಸೆ ಮತ್ತು ಹಲವಾರು ಸುಲಿದ ಬೀಜಗಳನ್ನು ಹಾಕುತ್ತಾರೆ. ಕೆಲವರು ಪುಡಿ ಬೇವು ಮಾಡಿದರೆ, ಕೆಲವರು ರಸಬೇವು ಮಾಡುತ್ತಾರೆ. ದೇವರ ಪೂಜೆಯ ನಂತರ ದೇವಾಲಯದಲ್ಲಿ ಆ ವರ್ಷದ ಪಂಚಾಂಗ ಶ್ರವಣ ನಡೆಯುತ್ತದೆ. ಕುಲಪುರೋಹಿತರು ಮುಂಬರುವ ವರ್ಷದ ಫಲಾಫಲಗಳನ್ನು ಮಳೆ ಬೆಳೆ ವಿಚಾರವನ್ನು ಪದಾರ್ಥಗಳ ತೇಜೆ-ಮಂದಿ ಸಮಾಚಾರವನ್ನು ವಿವರಿಸುತ್ತಾರೆ. ಅನಂತರ ಮನೆಗೆ ಬಂದ ಮೇಲೆ ಗಂಡಸರಿಗೆ ಸಾಲಾಗಿ ಕೂಡಿಸಿ ಆರತಿ ಮಾಡುತ್ತಾರೆ. ಆಗ ವಿಶೇಷವಾದ ಹರಕೆಯ ಹಾಡನ್ನು ನಮ್ಮ ಮನೆಗಳಲ್ಲಿ ಹೇಳುತ್ತಿದ್ದರು.

ಮಹಾರಾಜನೆ ನೀ ಬಹುಸುಖಿಯಾಗಿರೈ
ಪ್ರೇಮದಿಂದಲಿ ನೀ ರಾಜ್ಯ ಪರಿಪಾಲಿಸೈ

ಕೆರೆಭಾವಿಯ ಕಟ್ಟು ಗುಡಿಗೋಪುರ ಕಟ್ಟು
ಆರವಂಟಿಗೆ ಅನ್ನ
, ಛತ್ರವನಿಡಿಸೈ

ಅಕ್ಕ ತಂಗಿಯರಲ್ಲಿ ಅಕ್ಕರೆಯಿಂದಲಿ
ತಮವೆ ಮನೆಯ ನೀ ನಡೆಸೈಯಾ
, ಮಹಾರಾಜನ ನೀ

ಹೀಗೆ ಆಶೀರ್ವಾದ ಪರವಾದ ಹಾಡು ಹೇಳಿ ಆರತಿ ಮಾಡಿದ ಮೇಲೆ ಎಲ್ಲರೂ ಸಹ ಪಂಕ್ತಿಯಲ್ಲಿ ಸಾಲಾಗಿ ಕುಳಿತು ಸಖತ್ತಾಗಿ ಊಟ ಮಾಡಿ ಎಲೆ ಅಡಿಕೆ ಹಾಕಿ ಅಡ್ಡಾಗುವುದೇ ಕೆಲಸ. ಹಿಂದಿನ ಕಾಲದಲ್ಲಿ ಉಗಾದಿಗೆ ವಿಶೇಷ ನಾಟಕಗಳು ಇರುತ್ತಿದ್ದವು. ಈಗ ಅವೆಲ್ಲ ಮಾಯವಾಗಿವೆ. ಉಗಾದಿಯಿಂದ ಸಾಲು ಸಾಲಾಗಿ ತೇರು, ಜಾತ್ರೆ ಉತ್ಸವಗಳು ಆರಂಭವಾಗುತ್ತದೆ. ಚೈತ್ರ ಶು|| ನವಮಿಗೆ ಶ್ರೀರಾಮನವಮಿ, ಹುಣ್ಣಿಮೆಗೆ ಹಂಪಿ ಶ್ರೀ ವಿರೂಪಾಕ್ಷ-ಪಂಪಾಂಬಿಕೆಯರ ರಥೋತ್ಸವ ಸಾಂಗವಾಗುತ್ತದೆ.

ಶ್ರೀ ರಾಮನವಮಿಗೆ ಅನೇಕ ಕಡೆ ಸೀತಾಕಲ್ಯಾಣ ಕಾರ್ಯಕ್ರಮ ಮಾಡುತ್ತಾರೆ. ವೈಶ್ಯರ ಮನೆಯಲ್ಲಿ ಪಾನಕ-ಕೋಸಂಬ್ರಿ ತಯಾರಿಸಿ ಬಂಧವರಿಗೆಲ್ಲಾ ನೀಡುತ್ತಾರೆ. ಹೊಸ ಬೀಸಣಿಗೆಗಳನ್ನು ತರಿಸಿ ದೇವರಿಗೆ ಬೀಸಿ, ಅನಂತರ ಬ್ರಾಹ್ಮಣರಿಗೆ ದಾನ ಮಾಡುತ್ತಾರೆ. ಚೈತ್ರಶುದ್ಧ ಹುಣ್ಣಿಮೆಯನ್ನು ಹಂಪಿ ಹುಣ್ಣಿಮೆಯೆಂದೇ ಕರೆಯುತ್ತಾರೆ. ರಾಯಲ ಸೀಮೆಯ ವೈಶ್ಯರಿಗೆ ಆ ದಿವಸ ವಿಶೇಷ ಹಬ್ಬ. ಅನೇಕರು ರಥೋತ್ಸವದಲ್ಲಿ ಪಾಲ್ಗೊಳ್ಳಲು ಹಂಪಿಗೆ ಹೋಗುತ್ತಾರೆ. ಅಸಂಖ್ಯಾತ ಜನ ಸೇರುವ ಈ ಪರಿಭಾಷೆಯಲ್ಲಿ ನೀರು ಮಜ್ಜಿಗೆ ಸಿಗುವುದು ದುಸ್ತರವೆಂಬುದು ಅನುಭವದ ಮಾತು.

ವೈಶಾಖ ಶುದ್ಧ ದಶಮಿಯಂದು ವೈಶ್ಯರ ಕುಲದೇವತೆಯಾದ ವಾಸವಾಂಬೆಯ ಜನ್ಮದಿನ. ಅನೇಕ ಕಡೆ ಐದು-ಆರು ದಿನ ಮೊದಲೇ ದೇವಸ್ಥಾನದಲ್ಲಿ ಉತ್ಸವಗಳು ಪ್ರಾರಂಭವಾಗಿ ಜಯಂತಿಯ ದಿನ ಸಮಾರೋಪ ನಡೆಯುತ್ತವೆ. ಕೆಲವೆಡೆ ವಾಸವಿ ಜಯಂತಿಯಂದು ಪ್ರಾರಂಭವಾಗಿ ಮುಂದೆ ೪-೫-೬ ದಿನ ಉತ್ಸವಗಳು ಎಡೆಬಿಡದೇ ನಡೆಯುತ್ತವೆ. ಜಯಂತಿಯ ಅಂಗವಾಗಿ ರಂಗೋಲಿ ಸ್ಪರ್ಧೆ, ಹಾಡಿನ ಸ್ಪರ್ಧೆ, ಜ್ಞಾಪಕ ಶಕ್ತಿಯ ಸ್ಪರ್ಧೆಗಳು ನಡೆಯುತ್ತವೆ. ಪ್ರತಿಭಾ ಪುರಸ್ಕಾರ, ವಯೋವೃದ್ಧರ ಸನ್ಮಾನ, ಸಂಘ ಸಂಸ್ಥೆಗಳ ವಾರ್ಷಿಕ ಸರ್ವಸದಸ್ಯರ ಸಭೆಗಳು ನಡೆಯುತ್ತವೆ. ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಸಾಮೂಹಿಕ ಭಜನೆ, ಪಾರಾಯಣ, ಪ್ರವಚನಗಳು ನಡೆಯುತ್ತವೆ. ಕಡೆಯ ಅಂದರೆ ವಾಸವಿ ಜಯಂತಿಯ ದಿನ ವಾಸವಾಂಬೆಯ ಪುಷ್ಟ ರಥೋತ್ಸವ ನಡೆಯುತ್ತದೆ. ಆ ದಿನ ಎಲ್ಲರೂ ತಮ್ಮ ವ್ಯವಹಾರಗಳನ್ನು ಬಂದ್‌ಮಾಡಿ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತ ರಾತ್ರಿಯ ಉಪಹಾರದ ವ್ಯವಸ್ಥೆಯೂ ದೇವಾಲಯದಲ್ಲಿರುತ್ತದೆ. ಜ್ಯೇಷ್ಠ ಮಾಸದಲ್ಲಿಯ ಹುಣ್ಣಿಮೆಯನ್ನು ಕಾರಹುಣ್ಣಿಮೆ ಎನ್ನುತ್ತಾರೆ. ಈ ದಿನ ಪಶು ಸಂಪತ್ತಿಗೆ ಮೀಸಲಾದ ದಿನ. ಮನೆಯಲ್ಲಿ ಎಲ್ಲ ದನಕರುಗಳು ಮೈ ತೊಳರೆದು ಕೊಂಬು-ಭುಜ-ಕಾಲುಗಳಿಗೆ ಬಣ್ಣ ಹಚ್ಚಿ ಆ ದಿನ ಕರಿಗಡುಬಿನ ನೈವೇದ್ಯ ಮಾಡಿ ಪಶುಪತಿನಾಥನನ್ನು ಆರಾಧಿಸುತ್ತಾರೆ. ಗೃಹಿಣಿಯರು ಮಡಿಯಲ್ಲಿ ವಟಸಾವಿತ್ರಿ ಕಥೆಯನ್ನು ಪಾರಾಯಣ ಮಾಡುತ್ತಾರೆ. ಸಾವಿತ್ರೀ ಹಾಡನ್ನು ಹೇಳುತ್ತಾರೆ. ಸಾಧ್ಯವಾದರೆ ಆಲದ ಮರದ ಕೆಳಗೆ (ವಟವೃಕ್ಷ) ಪಾರಾಯಣ ಮಾಡುತ್ತಾರೆ. ಸಾಯಂಕಾಲ ಗ್ರಾಮಗಳಲ್ಲಿ ಎತ್ತು, ಹೋರಿ, ಕರುಗಳ ಆಟದ ಸ್ಪರ್ಧೆ ನಡೆಯುತ್ತದೆ. ಗೆದ್ದವರ ರಾಸುಗಳ ಅಲಂಕೃತ ಮೆರವಣಿಗೆ ರಾತ್ರಿ ನಡೆಯುತ್ತದೆ.

ಆಷಾಡ ಮಾಸದ ಶುದ್ಧ ಏಕಾದಶಿ ಎಂದರೆ ಪ್ರಥಮ ಏಕಾದಶಿ. ಆ ದಿನ ವೈಶ್ಯರು ಉಪವಾಸ ಮಾಡಿ ಶ್ರೀ ಪಾಂಡುರಂಗನ ಸ್ಮರಣೆ ಮಾಡುತ್ತಾರೆ. ಪಂಢರ ಪುರದಲ್ಲಿ ಅಂದು ದೊಡ್ಡ ಪರಿಷೆ ಜರುಗುತ್ತದೆ. ಮರುದಿನ ದೇವರ ಪೂಜೆ ಮಾಡಿ ದ್ವಾದಶಿ ಪಾರಣೆ ಮಾಡುತ್ತಾರೆ.

ಶ್ರಾವಣ ಮಾಸವೆಂದರೆ ಸಮಸ್ತ ಪ್ರಕೃತಿಗೆ ಉಲ್ಲಾಸದ ಮಾಸ. ಸಮಯಕ್ಕೆ ಸರಿಯಾಗಿ ಮಳೆ ಬಂದಿದ್ದರೆ ಶ್ರಾವಣವೆಂದರೆ ಕಣ್ಣು ಕಾಣುವವರೆಗೂ ಹಸಿರೇ ಹಸಿರಿನ ಕಾಲ. ಪೈರು, ಪಚ್ಚೆ, ಕಾಡು ಮೇಡು ಆನಂದದಿಂದ ಹೊಸ ನೀರಿನಿಂದ ತುಂಬಿರುತ್ತವೆ. ಕೆರೆಗಳು ಸರೋವರಗಳಂತೆ ಕಾಣುತ್ತಿರುತ್ತವೆ. ಈ ತಿಂಗಳ ಪ್ರಮುಖ ಹಬ್ಬ ದಲಿತರಾದಿಯಾಗಿ ಸಮಸ್ತರೂ ಆಚರಿಸುವ ಹಬ್ಬವೆಂದರೆ ನಾಗರಪಂಚಮಿ. ಶ್ರಾವಣ ಶುದ್ಧ ಚೌತಿ ಮತ್ತು ಪಂಚಮಿ ದಿನಗಳಲ್ಲಿ ಆಚರಿಸುವ ಈ ಹಬ್ಬವು ಫಲಪ್ರಾಪ್ತಿಯ ಬೇಡಿಕೆಯ ಹಬ್ಬ. ಹೊಲದ ಫಸಲು, ಸಮತಾನ ಫಲ ಇತ್ಯಾದಿಯಾಗಿ ಲೌಕಿಕವಾದ ಅನೇಕ ಫಲಗಳಿಗೆ ಬೇಡುವ ಹಬ್ಬ. ಶ್ರಾವಣದಲ್ಲಿ ಎತ್ತುಗಳಿಗೂ ಹೆಚ್ಚು ಕೆಲಸವಿರುವುದಿಲ್ಲ. ಅಕ್ಕ ತಂಗಿಯರು ತವರು ಮನೆಗೆ ಬರುವ ಸುಖ ಸಮಯ. “ಹಾಕಿದ ಬಣವೆ ತುಂಬಿದ ಹಗೇವು ಖಾಲಿ ಆಗುತ್ತದೆ ಶ್ರಾವಣದಲ್ಲಿ” ಎಂಬ ಮಾತು ಸತ್ಯ. ನಾನಾ ಬಗೆಯ ತಂಬಿಟ್ಟಿನ ಉಂಡೆಗಳನ್ನು ಮಾಡುತ್ತಾರೆ. ಅಕ್ಕಿ, ಕಡಲೆ, ಎಳ್ಳು, ಹುರಿಕಡಲೆ ಹೀಗೆ ನಾನಾ ರೀತಿಯ ತಂಬಿಟ್ಟು ಉಂಡೆಗಳನ್ನು ಶ್ರಾವಣದಲ್ಲಿ ಮಾತ್ರ ತಿಂದು ಅರಗಿಸಲು ಸಾಧ್ಯ. ಹಳ್ಳಿಗಾಡಿನಲ್ಲಿ ನಾನಾ ಸ್ಪರ್ಧೆಗಳು ನಡೆಯುತ್ತಿದ್ದವು. ತೆಂಗಿನಕಾಯಿ ಉರುಳಿಸುವುದು, ನಿಂಬೆಹಣ್ಣು ಎಸೆಯುವುದು, ಭಾರ ಎತ್ತುವುದು, ತುಂಬಿದ ಚೀಲಗಳನ್ನು ಎತ್ತುವುದು ಹೀಗೆ ನಾನಾ ಸ್ಪರ್ಧೆಗಳು ನಡೆಯುತ್ತಿದ್ದವು. ನಾಗರ ಚೌತಿಯ ದಿನ ನಾಗಪ್ಪನಿಗೆ (ಕಲ್ಲಿನ ನಾಗರಕ್ಕೆ) ಹೂ, ಗಂಧ, ಕುಂಕುಮ, ಅರಿಷಿಣ ಏರಿಸಿ ಹಾಲೆರೆಯುತ್ತಾರೆ. ಅಂದಿನ ನೈವೇದ್ಯ ಕರಿಗಡುವು, ಪಂಚಮಿಯ ದಿನ ನಾಗಪ್ಪನಿಗೆ ಬೆಳ್ಳಿಯ ಕಂಕಣಗಳು, ಕೋರೆ ಮೀಸೆ, ಸರ್ಪಾಕಾರಗಳನ್ನು ಏರಿಸುತ್ತಾರೆ. ಕವಳಿಕಾಯಿ, ಭತ್ತರಳು, ಎಳೆದ ಹುಣಸಿನಕಾಯಿಗಳನ್ನು ಕಲ್ಲು ನಾಗರಕ್ಕೆ ಎರೆದು, ಬೆಲ್ಲ ನೀರು ಎರೆಯುತ್ತಾರೆ. ಪಂಚಮಿಯ ದಿನ ನಾಗದೇವನಿಗೆ ಹೊಳಿಗೆಯ ನೈವೇದ್ಯ. ಈ ಕಾಲದಲ್ಲಿ ಮರಗಳಿಗೆ ಜೋಕಾಲಿ ಕಟ್ಟಿ ಮಕ್ಕಳೆಲ್ಲಾ ಉತ್ಸಾಹದಿಂದ ತೂಗುತ್ತಾರೆ. ಚೌತಿಯಂದು ಕಚ್ಚಿನ ಕಡಬನ್ನು ಕೆಲವರು ನಿವೇದಿಸುತ್ತಾರೆ.

ವೈಶ್ಯರಲ್ಲಿ ಮದುವೆಯಾದ ಮೊದಲ ವರ್ಷ ಮದುವಣಗಿತ್ತಿಯರು ಶ್ರಾವಣ ಮಾಸದ ಮೊದಲ ಮಂಗಳವಾರದಂದು ಮಂಗಳಗೌರಿ ವ್ರತವನ್ನು ಹಿಡಿಯುತ್ತಾರೆ. ಅವರವರ ಅನುಕೂಲದಂತೆ ಮೂರು-ಐದು ವರ್ಷ ಈ ವ್ರತವನ್ನು ತವರಿಗೇ ಬಂದು ಆಚರಿಸುತ್ತಾರೆ. ಅಥವಾ ಮೊದಲ ವರ್ಷ ಮಾತ್ರ ತವರಿನಲ್ಲಿ ಪ್ರಾರಂಭಿಸಿ, ಉಳಿದ ವ್ರತಗಳನ್ನು ಅತ್ತೆ ಮನೆಯಲ್ಲಿ ಆಚರಿಸುತ್ತಾರೆ. ತಾಯಂದಿರು ಪ್ರಾರಂಭಿಸಿ, ಉಳಿದ ವ್ರತಗಳನ್ನು ಅತ್ತೆ ಮನೆಯಲ್ಲಿ ಆಚರಿಸುತ್ತಾರೆ. ತಾಯಂದಿರು ಅತ್ಯಂತ ಶ್ರದ್ಧೆಯಿಂದ ನವವಧುವಿನಿಂದ ಈ ವ್ರತವನ್ನು ಮಾಡಿಸುತ್ತಾರೆ. ಅನಂತರ ಅಷ್ಟಮಿಗೆ ಬರುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ವ್ರತವನ್ನು ಕೆಲ ಮನೆತನಗಳವರು ಮಾತ್ರ ಮಾಡುತ್ತಾರೆ. ಕೃಷ್ಣನ ರಜತ ಮೂರ್ತಿಯನ್ನು ತಟ್ಟೆಯಲ್ಲಿಟ್ಟು ಸಹಸ್ರನಾಮದಿಂದ ಅರ್ಚಿಸಿ, ವಿವಿಧ ಪುಷ್ಟಗಳನ್ನು ಸಮರ್ಪಿಸಿ ಆರಾಧಿಸುತ್ತಾರೆ. ವಿಶೇಷವೆಂದರೆ ಶ್ರೀ ಕೃಷ್ಣನಿಗೆ ಅರ್ಘ್ಯ ನೀಡುತ್ತಾರೆ. ಜನ್ಮಾಷ್ಟಮಿಯ ದಿನ ಕೃಷ್ಣನಿಗೆ ತರತರದ ಸಿಹಿ ತಿನಿಸುಗಳ ನೈವೇದ್ಯ, ಪ್ರಮುಖ ಸಕ್ಕರೆ ಬೆಣ್ಣೆ ಕಲಸಿದ ನವನೀತ, ನವಮಿಯಂದು ಕೃಷ್ಣನಿಗೆ ಮೃಷ್ಟಾನ್ನ ನೈವೇದ್ಯವಾಗುತ್ತದೆ.

ಇದೇ ರೀತಿ ಶ್ರಾವಣ ಮಾಸದ ಎರಡನೇ ಶುಕ್ರವಾರ ಮಾಡಬೇಕಾದ ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಕೂಡಾ ವೈಶ್ಯರಲ್ಲಿ ಕೆಲ ಮನೆತನದವರು ಮಾತ್ರ ಆಚರಿಸುತ್ತಾರೆ. ಅತ್ಯಂತ ಶ್ರದ್ಧೆಯಿಂದ ಪಾವಿತ್ರತೆಯಿಂದ ಆಚರಿಸುವ ವ್ರತವಾಗಿದೆ. ವರಮಹಾಲಕ್ಷ್ಮಿಯ ಕಥೆಯನ್ನು ಪಾರಾಯಣ ಮಾಡುತ್ತಾರೆ. ತಮಗೆ ಬೇಕಾದ ಬಂಧು ಮಿತ್ರರನ್ನು ಪೂಜೆಗೆ ಆಹ್ವಾನಿಸಿ ಉಡಿತುಂಬುತ್ತಾರೆ. ಶ್ರಾವಣ ಶುದ್ಧ ಹುಣ್ಣಿಮೆಯನ್ನು ಜನಿವಾರದ ಹುಣ್ಣಿಮೆಯೆಂದು ಕರೆಯುತ್ತಾರೆ. ಆ ದಿನ ವೈಶ್ಯರು ಮನೆದೇವರ ಪೂಜೆ ಮಾಡಿ ಅನಂತರ ನೂತನ ಉಜ್ಯೋಪವಿತ್ರವನ್ನು ಧರಿಸಿ ಹಳೆಯದನ್ನು ವಿಸರ್ಜಿಸುತ್ತಾರೆ. ಈಗ ದೇವಾಲಯಗಳಲ್ಲಿ ಎಲ್ಲರೂ ಸೇರಿ ಪುರೋಹಿತ ನೇತೃತ್ವದಲ್ಲಿ ಹಳೇ ಜನಿವಾರವನ್ನು ವಿಸರ್ಜಿಸಿ ಹೊಸದನ್ನು ಧರಿಸುತ್ತಾರೆ. ಇದಕ್ಕೆ ಉಪಾಕರ್ಮ ಎಂದು ಕರೆಯುತ್ತಾರೆ. ಪ್ರಾಯಶಃ ಬ್ರಾಹ್ಮಣರು ಕೂಡ ಅದೇ ದಿನ ಆಚರಿಸುತ್ತಾರೆ. ಶ್ರಾವಣದ ಶುಕ್ರವಾರ ಸಾಯಂಕಾಲ ಶುಕ್ರವಾರದ ಹಾಡು ಮತ್ತು ಶನಿವಾರದ ಸಂಜೆ ಶನಿವಾರ ಹಾಡು ಹೇಳುತ್ತಾರೆ.

ಭಾದ್ರಪದ ಮಾಸದಲ್ಲಿ ಬರುವ ಹಬ್ಬವೆಂದರೆ ಗೌರಿ-ಗಣಪನ ಹಬ್ಬ ಭಾದ್ರಪದ ಶುದ್ಧ ತದಿಗೆಯಂದು ಸುವರ್ಣಗೌರಿ ವ್ರತವನ್ನು ಮಾಡುತ್ತಾರೆ. ಮೃಣ್ಮಯ ಗೌರಿಯನ್ನು ತಯಾರಿಸಿ, ನಾನಾ ವಿಧ ಪುಷ್ಟಗಳಿಂದ ಅಲಂಕರಿಸಿ, ಗೌರೀ ದಾರವನ್ನು ಪತಿಯಿಂದ ಕಟ್ಟಿಸಿಕೊಂಡು (ಮುಂಗೈಗೆ), ಸ್ವರ್ಣಗೌರಿ ಕಥೆಯನ್ನು ಪಾರಾಯಣ ಮಾಡಿ ಗೃಹಿಣಿಯರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಭಾದ್ರಪದ ಶುದ್ಧ ಚೌತಿಯ ದಿವಸ ಮೃಣ್ಮಯ ಬೆನಕನನ್ನು ತಂದು ಪ್ರತಿಷ್ಠಾಪಿಸಿ, ಇಪ್ಪತ್ತೊಂದು ತರದ ಹೊಸಪ್ರತಿಗಳಿಂದಲೂ ನಾನಾ ಪುಷ್ಟಗಳಿಂದಲೂ ಪೂಜೆ ಮಾಡುತ್ತಾರೆ. ಬೆನಕನಿಗೆ ಕಡುಬು, ಪದಪೂಲು, ಮೋದಕಗಳನ್ನು ಕೂಡಾ ಎಪ್ಪತ್ತೊಂದರ ಸಂಖ್ಯೆಯಲ್ಲಿ ನೈವೇದ್ಯ ಮಾಡುತ್ತಾರೆ. ಬಹುತೇಕ ಜನರು ಅದೇ ದಿವಸ ಗಣಪನನ್ನು ವಿಸರ್ಜಿಸುತ್ತಾರೆ. ಕೆಲ ಮನೆಗಳಲ್ಲಿ ಮುಂದಿನ ವರುಷದವರೆಗೂ ಉಳಿಸಿಕೊಂಡು ಪೂಜಿಸುತ್ತಾರೆ. ಭಾದ್ರಪದ ಬಹುಳ ಅಮಾವಾಸ್ಯೆಯೇ ಮಹಾಲಯ ಅಮಾವಾಸ್ಯೆ. ಅನಂತರ ಚತುದರ್ಶಿಯನ್ನು ಆಚರಿಸುತ್ತಾರೆ. ಭಾದ್ರಪದ ಬಹುಳ ಅಮಾವಾಸ್ಯೆಯೇ ಮಹಾಲಯ ಅಮಾವಾಸ್ಯೆ. ಅನಂತರ ಆಶ್ವೀಜ ಶು|| ೧ರಿಂದ ೧೦ರವರೆಗೆ ನವರಾತ್ರಿ-ದಸರಾ ಉತ್ಸವಗಳು ರಾಯರ ಸೀಮೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುತ್ತವೆ. ವೈಶ್ಯರ ದೇವಾಲಯದಲ್ಲಿ ಅಮ್ಮನವರಿಗೆ ಪ್ರತಿದಿನ ಹೊಸದೊಂದು ಅಲಂಕಾರ ಮಾಡುತ್ತಾರೆ. ಶರನ್ನವರಾತ್ರಿ ಉತ್ಸವಗಳಿಗೆ ವಿಶೇಷ ಆಧ್ಯತೆ ನೀಡುತ್ತಾರೆ. ಮನೆಯಲ್ಲಿ ಪಾಡ್ಯ, ದುರ್ಗಾಷ್ಟಮಿ, ಮಹಾನವಮಿ ಆಯುಧ ಪೂಜೆ-ದಸರಾ ವಿಶೇಷ ಹಬ್ಬಗಳು. ಆಯುಧ ಪೂಜೆಯ ದಿನ ಕಾರ್ಖಾನೆ ಅಂಗಡಿ, ಕಾರು-ಲಾರಿ, ತೂಕ ಮಾಡುವ ಚಿಂತಾಲು ಕಲ್ಲು ಪ್ರತಿಯೊಂದು ವಸ್ತುವಿನ ಪೂಜೆ ನಡೆಯುತ್ತದೆ. ದಸರಾ ದಿನ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ನಗರೋತ್ಸವದಲ್ಲಿ ಹೋಗಿ ಬನ್ನಿ ಕೊಟ್ಟು ನಮಸ್ಕರಿಸಿ “ಬಂಗಾರ ಬನ್ನಿ ಸ್ವೀಕರಿಸಿ ಬಂಗಾರದಂತೆ ಇರೋಣ” ಎಂದು ಹಾರೈಸುತ್ತಾರೆ.

ದುರ್ಗಾಷ್ಟಮಿಯಂದು ಕರ್ಜಿಕಾಯಿ, ಮಹಾನವಿಯಂದು ಹೋಳಿಗೆ ಮತ್ತು ವಿಜಯದಶಮಿಯಂದು ಮಂಡಿಗೆ ನೈವೇದ್ಯ ಮಾಡುತ್ತಾರೆ.

ಆಶ್ವೀಜದ ಕೊನೆಗೆ ಬರುವ ದೀಪಾವಳಿಯು ವೈಶ್ಯರಿಗೆ ಅಂಗಡಿ ಪೂಜೆಯೆಂದು ಪ್ರಸಿದ್ಧ. ಚತುದರ್ಶಿಯು ನರಕ ಚತುದರ್ಶಿಯಂದೇ ಪ್ರಖ್ಯಾತ. ಆ ದಿನವೇ ಶ್ರೀಕೃಷ್ಣ-ಸತ್ಯಭಾಮೆಯರು ನರಕಾಸುರನನ್ನು ವಧಿಸಿದರಂತೆ. ಚತುದರ್ಶಿಯ ದಿನ ಬೆಳಗಿನ ಜಾವದಲ್ಲಿಯೇ ಎದ್ದು ಅಭ್ಯಂಗ ಸ್ನಾನ ಮಾಡಿ, ಹೊಸಬಟ್ಟೆ ತೊಟ್ಟು, ನರಕಾಸುರನ ಮೇಲೆ ಕೃಷ್ಣನ ವಿಜಯೋತ್ಸವವನ್ನು ಆಚರಿಸಲು ಪಟಾಕಿ ಹಚ್ಚುವುದು ವಾಡಿಕೆ. ಯಥಾರೀತಿಯಲ್ಲಿ ಮನೆಯಲ್ಲಿ ದೇವರ ಪೂಜೆ ಮತ್ತು ವಿಶೇಷ ಊಟ. ಮಕ್ಕಳಿಗಂತೂ ಪಟಾಕಿ ಹಚ್ಚುವುದೇ ಆಟ. ಈ ದಿನ ಕೆಲವರು ಸಜ್ಜಿಗೆಯ ಹೋಳಿಗೆ ನೈವೇದ್ಯ ಮಾಡುತ್ತಾರೆ.

ವೈಶ್ಯರಲ್ಲಿ ಅನೇಕರು ಆಶ್ವೀಜ ಬ|| ಅಮಾವಾಸ್ಯೆಯ ದಿನವೇ ಅಂಗಡಿ ಪೂಜೆ-ದೀಪಾವಳಿ-ಲಕ್ಷ್ಮೀ ಪೂಜೆ ಮಾಡುತ್ತಾರೆ. ಕೆಲವು ಕಡೆ ಮಾತ್ರ ಕಾರ್ತೀಕ ಶುದ್ಧ ಪಾಡ್ಯಮಿ-ಬಲಿ ಪಾಡ್ಯಮಿಯಂದು ಪೂಜೆ ಮಾಡುತ್ತಾರೆ. ವೈಶ್ಯರಿಗೆ ವರ್ಷದಲ್ಲಿ ಉಗಾದಿ, ಪಾಡ್ಯಮಿ, ಆಶ್ವೀಜ ಶುದ್ಧ ಪಾಡ್ಯಮಿ ಮತ್ತು ಬಲಿಪಾಡ್ಯಮಿ ತುಂಬಾ ಮುಖ್ಯವಾದ ದಿನಗಳು. ಅಂಗಡಿ ಪೂಜೆಗೆ, ಅಂಗಡಿ, ಕಾರ್ಖಾನೆಗಳಿಗೆ ಸುಣ್ಣ-ಬಣ್ಣ ಮಾಡಿಸಬೇಕು. ಅಂಗಡಿಯಲ್ಲಿರುವ ಎಲ್ಲಾ ದೇವರ, ಯಜಮಾನರ ಫೋಟೊಗಳಲ್ಲದೆ ಲೈಸೆಸ್ಸಿತ್ಯಾದಿಗಳನ್ನು ಕೂಡ ತೊಳೆದು ಸ್ವಚ್ಚಮಾಡಿ, ಅರಿಷಿಣ-ಕುಂಕು, ವಿಭೂತಿಯಿಂದ ಅಲಂಕರಿಸುತ್ತಾರೆ. ಪುಟ್ಟಿಗಟ್ಟಲೆ ಚೆಂಡು ಹೂ ತಂದು ಹಾರಕಟ್ಟಿ ಎಲ್ಲ ಕಡೆ ಹಾಕುತ್ತಾರೆ. ಕೆಲಸಗಾರರೆಲ್ಲರಿಗೆ ಬಟ್ಟೆ ಬರೆ, ಬೋನಸ್‌ಕೂಡ ಕೊಡುತ್ತಾರೆ. ಮೊದಲ ಕಾಲದಲ್ಲಿ ದೀಪಾವಳಿಯಿಂದ ದೀಪಾವಳಿಗೆ ಅಕೌಂಟಿಂಗ್‌ವರ್ಷವಾಗಿತ್ತು. ಆದರೆ ಈಗ ದೀಪಾವಳಿಗೆ ಹೊಸ ಖಾತೆ-ಕಿರ್ದಿ ಪುಸ್ತಕಗಳನ್ನಿಟ್ಟು ಪೂಜೆ ಮಾಡುತ್ತಾರಾಗಲಿ ಲೆಕ್ಕದ ವರುಷ ಪ್ರಾರಂಭವಾಗುವುದು ಏಪ್ರಿಲ್‌ಮೊದಲನೇ ತಾರೀಕಿನಂದು.  ಸರಕಾರದ ನಿಬಂಧನೆಗಳ ಪ್ರಕಾರ ಅಕೌಂಟಿಂಗ್‌ವರ್ಷವೆಂದರೆ ಏಪ್ರಿಲ್‌ಒಂದರಿಂದ ಮಾರ್ಚ್‌ಮುವತ್ತೊಂದರವರೆಗೆ ಮಾತ್ರ. ಹಿಂದಿನ ಕಾಲದಲ್ಲಿ ಎಲ್ಲರೂ ಸಾಯಂಕಾಲವೇ ಅಂಗಡಿ ಪೂಜೆ ಮಾಡುತ್ತಿದ್ದರು. ಒದಕ್ಕಿಂತ ಮತ್ತೊಂದು ಅಂಗಡಿ ಸುಂದರವೆನ್ನುವಂತೆ ಅಲಂಕರಿಸಿ, ಗಂಟೆಗಟ್ಟಲೆ ಪಟಾಕಿ ಹಚ್ಚುತ್ತಿದ್ದರು. ಈಗ ಬಹುಜನರು ಮುಂಜಾನೆಯ ಹತ್ತು ಗಂಟೆಗೇ ಆದರೆ ಪುರೋಹಿತರು ನಿಗದಿಪಡಿಸಿದ ಸಮಯಕ್ಕೆ ಪೂಜೆ ಮುಗಿಸುತ್ತಾರೆ. ಪೂಜೆಗೆ ಬಂದವರಿಗೆಲ್ಲಾ ಫಲ ತಾಂಬೂಲ ನೀಡುತ್ತಾರೆ. ಕೆಲ ಅಂಗಡಿಗಳಲ್ಲಿ ಮಂಡಾಳು-ಮೆಣಸಿನಕಾಯಿ, ಉಪ್ಪಿಟ್ಟು, ಕೇಸರಿಬಾತ್‌ಮುಂತಾದ ಫಲಹಾರದ ವ್ಯವಸ್ಥೆಯೂ ಇರುತ್ತದೆ. ಅಂಗಡಿಯಲ್ಲಿ ಪೂಜಾ ವೇದಿಕೆಯ ಮೇಲೆ ಲಕ್ಷ್ಮೀ-ಸರಸ್ವತಿ-ಗಣಪತಿ ಅವರ ಪೋಟೋಗಳನ್ನಿಟ್ಟು ಮುಂದೆ ಒಂದು ತಟ್ಟೆಯಲ್ಲಿ ನೂರೊಂದು, ಐನುರೊಂದು, ಸಾವಿರದೊಂದು ರೂಪಾಯಿ ನಾಣ್ಯಗಳನ್ನು ಪೂಜೆಗೆ ಇಡುತ್ತಾರೆ. ವೇದಿಕೆಯ ಮೇಲೆ ಮನೆಯಲ್ಲಿದ್ದ ನಾನಾ ತರಹದ ಗೊಂಬೆಗಳನ್ನು ವಿಗ್ರಹಗಳನ್ನು ಇಟ್ಟಿರುತ್ತಾರೆ. ಬಂದವರಿಗೆಲ್ಲಾ ಗಂಧ ನೀಡಿ, ಪನ್ನಿರು ಸಿಂಪಡಿಸಿ ಸ್ವಾಗತಿಸುತ್ತಾರೆ.

“ಎಲ್ಲರೂ ಆದಷ್ಟು ಹೆಚ್ಚು ಅಂಗಡಿಗಳಿಗೆ ಹೋಗಿ ನಮಸ್ಕರಿಸಿ ಬರುತ್ತಾರೆ. ಪೂಜಾ ಸಮಯಕ್ಕೆ ಆಗದಿದ್ದರೂ ಅನಂತರ ಹೋಗಿ ಬರುತ್ತಾರೆ. ಈ ದಿನದ ವಿಶೇಷವೆಂದರೆ ಮನೆಯಲ್ಲಿ, ಕಾರ್ಖಾನೆಯಲ್ಲಿ, ಅಂಗಡಿಯಲ್ಲಿ ಅನೇಕ ಕಡೆ ಪೂಜೆ ನಡೆಯುತ್ತದೆ. ಮನೆಯಲ್ಲಿ ಪ್ರತಿ ಜಗಲಿನ ಎಡಬಲಕ್ಕೆ ಮತ್ತು ಅಂಗಳದಲ್ಲಿ ಸಮೃದ್ಧಿಯ ಮತ್ತು ಕೃಷಿಯ ಸಂಕೇತವಾಗಿ ಹಸುವಿನ ಸಗಣಿಯಿಂದ ಮಾಡಿದ “ಗೊಲಕವ್ವ”ನನ್ನು ಇಡುತ್ತಾರೆ. ಗೊಲಕವ್ವನ ಉದರದಲ್ಲಿ ಮೊಸರು ಹಾಕುತ್ತಾರೆ. ಹೊನ್ನಂಬರಿಕೆ ಹೂವಿನ ಗೊಂಚಲು ಸಿಗಿಸುತ್ತಾರೆ. ಸಜ್ಜೆಯ ಅಥವಾ ಜೋಳದ ತೆನೆಗಳನ್ನು ಇಡುತ್ತಾರೆ.

ಕುಲ ಪುರೋಹಿತರು ಮಾರ್ಗದರ್ಶನ ಮಾಡಿದಂತೆ ಮನೆಯ ಹಿರಿಯರು ಪೂಜೆ ಮಾಡುತ್ತಾರೆ. ಅನಂತರ ಪುರೋಹಿತರು ಹೊಸ ಲೆಕ್ಕದ ಪುಸ್ತಕಗಳಲ್ಲಿ ಶ್ರೀಕಾರ ಬರೆಯುತ್ತಾರೆ. ಇಂಥವರ ಅಂಗಡಿಯಲ್ಲಿ ಇಂಥಾ ದಿನ ಇಷ್ಟೊತ್ತಿಗೆ ಶ್ರೀ ಲಕ್ಷ್ಮೀ ಸರಸ್ವತಿ ಪೂಜೆ ಮಾಡಿದ್ದು ಎಂದು ದಾಖಲಿಸುತ್ತಾರೆ. ಅಂಗಡಿಯ ಗೋಡೆಯ ಮೇಲೆ ಶುಭ-ಲಾಭ ಎಂದು ಬರೆಯುತ್ತಾರೆ. ಎಲ್ಲೆಡೆ ಗಂಧವನ್ನು ಸಿಂಪಡಿಸಿ ಪವಿತ್ರೀಕರಿಸುತ್ತಾರೆ. ಈ ದಿನದ ವಿಶೇಷ ವ್ಯವಸ್ಥೆಯೆಂದರೆ ಪುರೋಹಿತರು ಒಂದಾದ ಮೇಲೆ ಮತ್ತೊಂದು ಅಂಗಡಿಗೆ ಪೂಜೆಗೆ ತೆರಳುತ್ತಾರೆ. ಸನಾಯಿ ಮೇಳದವರೂ ಅವರೊಂದಿಗೇ ಹೋಗಿ ಪ್ರತಿ ಅಂಗಡಿಯಲ್ಲಿ ಪೂಜೆಯ ವೇಳೆಗೆ ಮಂಗಲವಾದ್ಯ ಮಾಡಿ ಮುಂದೆ ಸಾಗುತ್ತಾರೆ. ಪ್ರತ್ಯೇಕವಾಗಿ ಸನಾಯಿ ವ್ಯವಸ್ಥೆ ಮಾಡಿಕೊಳ್ಳುವುದು ತಪ್ಪುತ್ತದೆ ಮತ್ತು ವೆಚ್ಚವೂ ಕಡಿಮೆ ಆಗುತ್ತದೆ.

ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತೀಕ ಶುದ್ಧ ಪಾಡ್ಯಮಿಯಂದು ಮೊದಲ್ಗೊಂಡು ತಿಂಗಳ ಕಾಲ ಕಾರ್ತಿಕ ದೀಪೋತ್ಸವ ನಡೆಯುತ್ತದೆ. ಪ್ರತಿದಿನ ಕನಿಷ್ಠ ೧೦೮ ದೀಪಗಳನ್ನು ಹಚ್ಚಿ ದೇವರನ್ನು ಅಷ್ಟಾರ್ಚನಾ ವಿಧಿಯಿಂದ ಸ್ತುತಿಸುತ್ತಾರೆ. ಪ್ರತಿದಿನ ಸೇವಾಕರ್ತರು ಬೇರೆ ಬೇರೆ ಇದ್ದು ಅವರೇ ಬಂದವರಿಗೆ ಪ್ರಸಾದ ನೀಡುತ್ತಾರೆ. ತಿಂಗಳ ಕೊನೆಗೆ ಕಡೇ ಕಾರ್ತೀಕದ ದಿನ ಸಾವಿರಾರು ಹಣತೆಗಳನ್ನು ಹಚ್ಚಿಟ್ಟು ವಿಶೇಷ ವೈಭವದಿಂದ ಅಮ್ಮನವರ ಪೂಜೆ ಮಾಡುತ್ತಾರೆ. ಅನಂತರ ಮಾರ್ಗಶರ ಶುದ್ಧದಿಂದ ಮೊದಲ್ಗೊಂಡು ಉಷ್ಕ ಶುದ್ಧದವರೆಗೆ “ಧನುರ್ಮಾಸ” ಆಚರಣೆ ಇರುತ್ತದೆ. ಬೆಳಗಿನಲ್ಲೇ ಎದ್ದು ಸಾಮೂಹಿಕವಾಗಿ ಭಜನೆ ಮಾಡುತ್ತಾ ನಗರ ಪ್ರದಕ್ಷಿಣೆ ಮಾಡಿ ಅಮ್ಮನವರ ದೇವಾಲಯ ತಲುಪಿ ಎಲ್ಲರು ಸೇರಿ ಕೆಲಕಾಲ ದೈವಸ್ತುತಿ ಮಾಡಿ ಮಂಗಳಾರತಿ ಆಗುತ್ತದೆ. ಧನುರ್ಮಾಸದ ವಿಶೇಷವೆಂದರೆ ಬೆಳಗಿನ ಆರುಗಂಟೆಗೆ ಬಿಸಿ ಬಿಸಿ ಪೊಂಗಲ್‌, ಪುಳಿಯೊಗರೆ ಮುಂತಾದ ಪ್ರಸಾದ ವಿತರಣೆ, ಭಜನೆಗೆ ವಿರಳವಾಗಿದ್ದ ಜನರು ಪ್ರಸಾದದ ವೇಳೆಗೆ ದೇವಾಲಯವನ್ನು ತುಂಬಿರುತ್ತಾರೆ. ಒಂದು ತಿಂಗಳ ಕಾಲ ನಡೆಯುವ ಈ ಭಗವದಾರಾಧನೆಯಲ್ಲಿ ರಂಗಾರಿ ಜನಾಂಗದವರು ನಮ್ಮೂರಲ್ಲಿ ನಮ್ಮೊಂದಿಗೆ ಸೇರಿ ತಾಳ-ತಂಬೂರಿಗಳೊಂದಿಗೆ ನಗರ ಪ್ರದಕ್ಷಿಣೆಗೆ ಕಳೆ ತರುತ್ತಾರೆ.

ಮಾರ್ಗಶಿರ ಶುಕ್ಲಪಕ್ಷದ ಏಕಾದಶಿಯನ್ನು ಮುಕ್ಕೋಟೆ ಅಥವಾ ವೈಕುಂಠ ಏಕಾದಶಿ ಎನ್ನುತ್ತಾರೆ. ಆ ದಿನ ವಿಷ್ಣು ಭಕ್ತರಿಗೆ ಅತ್ಯಂತ ಪವಿತ್ರವಾದ ದಿವಸ. ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಆ ದಿನ ವೈಕುಂಠ ಬಾಗಿಲು ತೆರೆಯುತ್ತಾರೆ. ವೈಶ್ಯರು ಅವರವರ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಿ ದೇವರಿಗೆ ಉಯ್ಯಾಲೆ ಸೇವೆ ಮಾಡುತ್ತಾರೆ. ದೇವರ ಉಯ್ಯಾಲೆಯ ಕೆಳಗಿನಿಂದ ಹಾದು ಪ್ರದಕ್ಷಿಣೆ ಮಾಡುವುದು ಸಂಪ್ರದಾಯ. ಇದೊಂದು ಸಮೂಹಿಕ ಸಂಬಂಧಿಸಿದ ಆಚರಣೆ.

ಮಾಘ ಶುಲ್ಕ ದ್ವಿತೀಯವು ವೈಶ್ಯರಿಗೆ ಅತ್ಯಂತ ಪವಿತ್ರ ದಿನವಾಗಿದೆ. ಅದೇ ದಿವಸ ವಾಸವಾಂಬೆಯು ವಿಷ್ಣುವರ್ಧನನ್ನು ಧಿಕ್ಕರಿಸಿ ಸಾಮೂಹಿಕವಾಗಿ ಅಗ್ನಿ ಪ್ರವೇಶ ಮಾಡಿ ಆತ್ಮಾಹುತಿಯಾದ ದಿವಸ. ಆ ದಿನ ದೇವಾಲಯದಲ್ಲಿ ಎಲ್ಲರೂ ಸೇರಿ ವಾಸವಿಯ ಹೆಸರಿನಲ್ಲಿ ಹೋಮ ಹವನ ಮಾಡುತ್ತಾರೆ. ಪ್ರತಿಯೊಬ್ಬರೂ ಅಗ್ನಿಕುಂಡವನ್ನು ಪ್ರದಕ್ಷಿಣೆ ಮಾಡಿ ವಾಸವಿಗೆ ಕೊಬ್ಬರಿ ತುಂಡು, ಗೋಡಂಬಿ, ದ್ರಾಕ್ಷಿ ಮುಂತಾದ ವಸ್ತುಗಳನ್ನು ಅರ್ಪಿಸುತ್ತಾರೆ. ಜನಾಂಗದ ಮಾನ ಅಭಿಮಾನಗಳನ್ನು ರಕ್ಷಿಸಿ, ಅಹಿಂಸಾ ಮಾರ್ಗದಿಂದ ರಕ್ತ ಪಾತ್ರವನ್ನು ತಪ್ಪಿಸಿ ತಾಯಿ ವಾಸವಾಂಬೆಯು ಆತ್ಮಾಹುತಿಯಾದ ಪವಿತ್ರವಾದ ದಿವಸ. ಪಶುಬಲಕ್ಕೆ, ಅಧಾರ್ಮಿಕ ರಾಜದಂಡಕ್ಕೆ ತಲೆಭಾಗಬಾರದೆಂದು ದಾರಿತೋರಿದ ದಿವಸ.

ಪುಷ್ಯಮಾಸದ ಪ್ರಥಮ ಭಾಗದಲ್ಲಿ ಬರುವ ಮಕರ ಸಂಕ್ರಾಂತಿಯು ಸೂರ್ಯನ ಉತ್ತರಾಯಣವನ್ನು ಸೂಚಿಸುತ್ತದೆ. ದಕ್ಷಿಣ ಭಾರತದವರಿಗೆ ಸಂಕ್ರಾಂತಿಯು ತುಂಬಾ ಪುಣ್ಯಕರ ದಿವಸ. ಕರ್ನಾಟಕಾಂಧ್ರರಿಗೆ ಇದು ಸಂಕ್ರಾಂತಿ. ತಮಿಳರಿಗೆ ಪೊಂಗಲ್‌, ಮಹಾರಾಷ್ಟ್ರೀಯರಿಗೆ ಗುಡಿ ಪಡವಾ. ಪ್ರಮುಖವಾಗಿ ಇದು ಸುಗ್ಗಿಯ ಹಬ್ಬ. ಎಲ್ಲ ಜನರು ಆಚರಿಸುವ ಸೂರ್ಯಾರಾಧನೆಯ ಪರ್ವ ದಿನ. ಪಶುಗಳ ಉತ್ಸವದ ಹಬ್ಬ. ಅಂದಿನ ಸಂಪ್ರದಾಯದ ಪ್ರಕಾರ ಪೂಜೆ ಪುನಸ್ಕಾರದ ನಂತರ ಬಂಧು ಮಿತ್ರರಿಗೆಲ್ಲಾ ಎಳ್ಳು ಬೆಲ್ಲ ವಿತರಿಸಿ “ಎಳ್ಳು ಬೆಲ್ಲ ಸ್ವೀಕರಿಸಿ, ಬೆಲ್ಲದಂತಹ ಮಾತಾಡಿ” ಎಂದು ಹಾರೈಸುತ್ತಾರೆ. ಮಹಾರಾಷ್ಟ್ರದಲ್ಲಿ ಸಕ್ಕರೆಯಿಂದ ಮಾಡಿದ ಕುಸುರೆಳ್ಳು ವಿತರಿಸುತ್ತಾರೆ. ಸೂರ್ಯನು ಮಕರ ರಾಶಿಗೆ ಕಾಲಿಡುವ ದಿನವೇ ಸಂಕ್ರಾಂತಿ. ಅದರ ಹಿಂದಿನ ದಿನಕ್ಕೆ ಬೋಗಿ ಹಬ್ಬವೆಂದು ಹೆಸರು. ಆ ದಿನ ಜೋಳದ ರೊಟ್ಟಿ, ಸಜ್ಜೆಯ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಭರ್ತವೆಂಬ ನಾನಾ ತರಕಾರಿಯ ಪಲ್ಲೆ, ಬೆಣ್ಣೆ ಮತ್ತು ನಾನಾ ತರಹದ ಚಟ್ನಿ, ಮೊಸರು, ಹಸಿ ತರಕಾರಿ, ಆ ದಿನದ ಭೂರಿ ಭೋಜನ. ಸಂಕ್ರಾಂತಿಗೆ ಯಥಾರೀತಿ ಹೋಳಿಗೆಯ ಊಟ. ಆಂಧ್ರದಲ್ಲಿ ಸಂಕ್ರಾಂತಿ ರಂಗೋಲಿಯ ಹಬ್ಬ ಒದಕ್ಕಿಂತ ಒಂದು ದೊಡ್ಡ ರಂಗು ರಂಗಿನ ರಂಗೋಲಿಗಳು ಅಂಗಳ-ಬೀದಿಯನ್ನು ಅಲಂಕರಿಸುತ್ತವೆ. ವ್ಯವಸಾಯದ ಮನೆಗಳಲ್ಲಿ ಎತ್ತು, ದನ-ಕರುಗಳಿಗೆ ಮೈತೊಳೆದು ವಿಶೇಷ ಹೂವಿನಿಂದ ಅಲಂಕರಿಸಿ ಮೆರೆಸುತ್ತಾರೆ. ವೈಶ್ಯರು ತಪ್ಪದೇ ಈ ಹಬ್ಬವನ್ನು ಆಚರಿಸುತ್ತಾರೆ. ಗೃಹಿಣಿಯರು ಸಂಕ್ರಾಂತಿ ಬಾಗಿನವನ್ನು ಕೊಡುತ್ತಾರೆ.

ಸಂಕ್ರಾಂತಿಯ ಮತ್ತೊಂದು ವಿಶೇಷವೆಂದರೆ ಪುಟ್ಟ ಮಕ್ಕಳಿಗೆ ಹಣ್ಣೆರೆಯುವ ಕಾರ್ಯಕ್ರಮ. ಎರಡು-ಮೂರು ವರುಷದೊಳಗಿರುವ ಮಕ್ಕಳಿಗೆ ಅಂದು ಅಲಂಕರಿಸಿ ಹಣ್ಣೆರೆಯುತ್ತಾರೆ. ನೆರೆಹೊರೆಯವರೆನ್ನೆಲ್ಲಾ ಆಮಂತ್ರಿಸಿ ಮಗುವಿಗೆ ಆರತಿ ಮಾಡಿ, ಹಾಡು ಹೇಳಿ ಅನಂತರ ಕಬ್ಬಿನ ತುಂಡು ಗಜ್ಜರಿ ತುಂಡು, ಬೆಂಡು-ಬತ್ತಾಸು, ಬಾರೆ ಹಣ್ಣು, ಮಂಡಾಳು, ಗೆಣಸಿನ ತುಂಡು ಕಲಸಿದ ಮಿಶ್ರಣವನ್ನು ಮೂರು ಸಲ ಚಿನ್ನದ ಸರದಿಂದ ಮಗುವಿನ ತಲೆಯ ಮೇಲೆ ಎರೆಯುತ್ತಾರೆ. ಅನಂತರ ನಾಲ್ಕಾರು ಜನ ಆರತಿ ಅಭಿಷೇಕ ಮಾಡಿ ಆಯುಷ್ಯ, ಆರೋಗ್ಯ ಮತ್ತು ಅಭ್ಯುದಯದ ಆಶೀರ್ವಾದ ಮಾಡುತ್ತಾರೆ. ಈ ರುಚಿಯಾದ ಪದಾರ್ಥವನ್ನು ಬಂದವರಿಗೆಲ್ಲಾ ಹಂಚುತ್ತಾರೆ.

ಮಾಘ ಬಹುಳದಲ್ಲಿ ಬರುವ ಮತ್ತೊಂದು ಪವಿತ್ರವಾದ ವ್ರತವೆಂದರೆ ಶಿವರಾತ್ರಿ, ಶಿವರಾತ್ರಿ ಸರ್ವರಿಗೂ ಉಪವಾಸದ ದಿವಸ. ಮೂಲತಃ ಶೈವರೂ, ನಗರೇಶ್ವರನ ಭಕ್ತರೂ ಆದ ವೈಶ್ಯರು ಮಹಾಶಿವರಾತ್ರಿಯನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಮನೆಯಲ್ಲಿ ಶಿವನಿಗೆ ಅಭಿಷೇಕ, ಸಹಸ್ರನಾಮಾರ್ಚನೆ ಮಾಡಿ ಅನಂತರ ಶಿವದೇವಾಲಯಕ್ಕೆ ಹೋಗಿ ಅಲ್ಲಿ ಪೂಜೆ ಮಾಡಿ ಅಥವಾ ಮಾಡಿಸಿ ಬರುತ್ತಾರೆ. ಅನಂತರ ಸಾಧ್ಯವಾದಷ್ಟು ಸಮಯದ ವರೆಗೆ ಉಪವಾಸವಿದ್ದು, ಶಿವನಾಮ, ಸಂಕೀರ್ತನೆಯಲ್ಲಿ ಅಥವಾ ಶಿವಪುರಾಣ ಪಠನೆಯಲ್ಲಿ ತೊಡಗುತ್ತಾರೆ. ಅನಂತರ ಹಣ್ನು ಹಂಪಲು ಸೇವಿಸುತ್ತಾರೆ. ದೇವಸ್ಥಾನಗಳಲ್ಲಿ ನೇಮಕ್ಕೊಂದು ಅಭಿಷೇಕ, ಪೂಜೆಯ ವ್ಯವಸ್ಥೆ ಇರುತ್ತದೆ. ಇಡೀ ರಾತ್ರಿ ಜನರು ದೇವಾಲಯದಲ್ಲಿದ್ದು, ಯಾಮ ಪೂಜೆಗಳಲ್ಲಿ ಭಾಗವಹಿಸಿ ಶಿವನ ಪ್ರೀತಿಗೆ ಪಾತ್ರರಾಗುತ್ತಾರೆ. ಮರುದಿನ ಶಿವನಿಗೆ ಅಭಿಷೇಕಾದಿ ಪೂಜೆಗಳನ್ನು ಮಾಡಿ ನೈವೇದ್ಯವನ್ನು ಸ್ವೀಕರಿಸಿ ಶಿವರಾತ್ರಿ ವ್ರತವನ್ನು ಪೂರೈಸುತ್ತಾರೆ. ಶಿವನನ್ನು ಸಹಸ್ರ ಬಿಲ್ವ-ಪುಷ್ಪಾರ್ಚನೆಯಿಂದ ಪೂಜಿಸಿ, ಶಿವನಿಗೆ ಅರ್ಘ್ಯ ನೀಡುವ ಸಂಪ್ರದಾಯವು ಇದೆ.

ವರ್ಷದಲ್ಲಿ ಕೊನೆಯ ಸಡಗರವಾಗಿ ಕಾಮನ ಹಬ್ಬ ಮತ್ತು ಹೋಳಿ ಹುಣ್ಣಿಮೆ ಬರುತ್ತದೆ. ವೈಶ್ಯರು ಅನೇಕ ಕಡೆ ಹಂದರ ಹಾಕಿ ಕಾಮನ ಮತ್ತು ರತಿಯ ವಿಗ್ರಹಗಳನ್ನಿಟ್ಟು ಹಬ್ಬವನ್ನು ನಡೆಸುತ್ತಾರೆ. ಕಡೆಯ ದಿನ ರಾತ್ರಿ ಕಾಗದದ ಮೇಲೆ ಕಾಮನ ಹಬ್ಬವನ್ನು ನಡೆಸುತ್ತಾರೆ. ಕಡೆಯ ದಿನ ರಾತ್ರಿ ಕಾಗದದ ಮೇಲೆ ಕಾಮನ ಚಿತ್ರವನ್ನು ಬರೆದು ಪುಟ್ಟ ಚಿತೆಯನ್ನೇರ್ಪಡಿಸಿ ಕಾಮದಹನ ಮಾಡುತ್ತಾರೆ. ಮರುದಿನ ಕಾಮನ ಪುನರ್ಜನ್ಮದ ಸಂತೋಷದಲ್ಲಿ ಬಣ್ಣವಾಡುತ್ತಾರೆ.

ವೈಶ್ಯರು ಮೇಲುವರ್ಗದವರಾದ ಕಾರಣ ಮತ್ತು ಅವರ ಬದುಕಿನಲ್ಲಿ ಏಕತಾನತೆ ಕಡಿಮೆ ಇರುವುದರಿಂದ ಶ್ರಮವರ್ಗದಲ್ಲಿ ಹೊರಹೊಮ್ಮುವಂತೆ ಹಾಡು-ಹಸೆ ಕಡಿಮೆ. ಆದರೆ ಸಂದರ್ಭಾನುಸಾರವಾಗಿ ನಾನಾ ರೀತಿಯ ಕತೆಗಳನ್ನು ಹೇಳುವ ಸಂಪ್ರದಾಯವಿತ್ತು. ಹಿಂದೆ ಮನೆಗೆ ಬೇಕಾದ ಅವಲಕ್ಕಿಯನ್ನು ಅವರವರೇ ಕುಟ್ಟಿ ತಯಾರಿಸುತ್ತಿದ್ದರು. ಎಲ್ಲಾ ತರಹದ ಉಪ್ಪಿನಕಾಯಿ, ಚಟ್ನಿ ಪುಡಿ, ಶ್ಯಾವಿಗೆ, ಹಪ್ಪಳ-ಸಂಡಿಗೆ, ಮಸಾಲೆ ಪುಡಿಗಳನ್ನು ಸುತ್ತಣ ಜನರ ಸಹಕಾರದಿಂದ ಮನೆಗಳಲ್ಲಿಯೇ ತಯಾರಿಸುತ್ತಿದ್ದರು. ಸುಮಾರು ಐವತ್ತು ವರುಷಗಳ ಕಳೆದ ಅವಧಿಯಲ್ಲಿ ಬದುಕಿನ ರೀತಿಯೇ ಬದಲಾಗಿದೆ. ರೆಡಿಮೇಡ್‌ವಸ್ತುಗಳು ದಿಢೀರ್ ಪಡಿಗಳು ಮಾರುಕಟ್ಟೆಗೆ ಬಂದಿರುವುದರಿಂದ ಸಮೂಹ ಜೀವನ ಮರೆಯಾಗಿ ಏಕಾಕಿ ಜೀವನವೇ ಅಧಿಕವಾಗಿದೆ. ವಧು-ವರರು ಹೆಸರು ಹೇಳುವಾಗ ಪರಸ್ಪರ ಒಡಪಿನ ಮೂಲಕ ಹೇಳುತ್ತಿದ್ದರು. ಹೆಂಡತಿಯ ಹೆಸರು ಪದ್ಮಾವತಿ ಎಂದಿದ್ದರೆ “ಹಗ್ಗದಲ್ಲಿ ಹೊಡೆದರೆ ಮಗ್ಗುಲಿಗೆ ಬರುತ್ತಾಳೆ ಪದ್ಮಾವತಿ” ಎನ್ನುತ್ತಿದ್ದರು. ಗಂಡನ ಹೆಸರು ಕಲ್ಲಪ್ಪ ಎಂದಿದ್ದರೆ “ಊರವರಿಗೆಲ್ಲಾ ಕಲ್ಲಪ್ಪನಾದರೆನನರಾಯ ನನಗೊಂದೇ ಕಲ್ಲು ಸಕ್ಕರೆಯಪ್ಪಾ” ಎನ್ನುತ್ತಿದ್ದರು. ಹೆಂಡತಿಯ ಹೆಸರು ನಾಗವೇಣಿಯಾದರೆ ಹಲ್ಲುಬ್ಬಿಯಾದರೇನು ನನ್ನರಸಿ ನೀಲ ಜಡೆಯ ನಾಗವೇಣಿ” ಎಂತಲೂ ಗಂಡನ ಹೆಸರು ಹನುಮಂತಪ್ಪ ಆದರೆ ಹೆಸರಾಯಿತು. ಹನುಮಂತಪ್ಪ ಆದರೆ ಎನ್ನರಸ ನೀನಂತೂ ನನ್ನ ಮನಗೆದ್ದೆಪ್ಪ” ಎನ್ನುತ್ತಿದ್ದರು. ಹೀಗೆ ಸರಸ ತುಂಬಿದ ಮಾತುಗಳಲ್ಲಿ ಆಗಿನ ಸಮಾರಂಭಗಳು ಮಿನುಗುತ್ತಿದ್ದವು.

ಗಾದೆ ಮಾತುಗಳಂತೂ ಅಡಿಗೊಂದು ನುಡಿಗೊಂದು. ಸೊಸೆಯ ತವರಿನವರನ್ನು ಹೀಯಾಳಿಸಲು ಅವರು ಕೊಟ್ಟ ವಸ್ತುಗಳನ್ನು ಹೀಯಾಳಿಸಲು ನೂರಾರು ಗಾದೆಗಳು. ಮದುವೆ ಸಂದರ್ಭದಲ್ಲಿ ಪ್ರಸಿದ್ಧವಾದ ಬೀಗರ ಹಾಡುಗಳು ಸಾಕಷ್ಟು ರಂಜನೆ ನೀಡುತ್ತಿದ್ದವು. ವ್ಯವಹಾರದ ಜನರಾದ್ದರಿಂದಲೂ ಪ್ರತಿಯೊಂದು ಮಾತು ವ್ಯವಹಾರಿಕ ದೃಷ್ಟಿಯಿಂದ ತುಂಬಿ ತುಳುಕುತ್ತಿದ್ದವು.

 

ಗಾದೆಗಳು:

೧. ದಂಬಡಿ (ಕಾಸು) ದುಡಿಮೆಯಿಲ್ಲ, ಗಳಿಗೆ ಪುರುಸೊತ್ತಿಲ್ಲ.

೨. ಹೂಸು ಬರುಕಿಗೆ ಕೂಸಿನ ನೆಪವಂತೆ.

೩. ಆರು ಹಡೆದವರ ಮುಂದೆ ಮೂರು ಹಡೆದಾಕಿ ಹಾಡ್ಯಾಡಿ ಅತ್ತಳಂತೆ.

೪. ಹಾವು ಅಟ್ಟದ ಮೇಲೆ, ಕರೆ ಬೆಟ್ಟದ ಮೇಲೆ

೫. ಹಾಲಿಲ್ಲಾ ಬಟ್ಲ ಎಲ್ಲಾ ಗುಟುಕ್‌ಅಂದರಂತೆ.

೬. ಮನಸಿನಾಗ ಮಂಡಿಗೆ ಮಾಡಿದರೆ ಗೋಧಿ ರೊಕ್ಕ ಕೊಡೋರು ಯಾರು?

೭. ಕೂತು ಅಂಗಡಿಕಾರ ಕೆಟ್ಟ, ಓಡಾಡಿ ವ್ಯವಸಾಯಗಾರ ಕೆಟ್ಟ.

೮. ಕೆಂಪು ಡೊಂಕು ನುಂಗಿತಂತೆ.

೯. ಹಂಗಾಮ ಮುಗದ ಮ್ಯಾಲೆ ನಿಂಗಮ್ಮ ಬಸಿರಾದಂತೆ.

೧೦. ಅಳೋ ಗಂಡನ್ನ, ನಗೋ ಹೆಣ್ಣನ್ನು ನಂಬಬಾರದಂತೆ.

೧೧. ಶುಭ ನುಡಿಯೇ ಮೊದಲಗಿತ್ತಿ ಅಂದರೆ ಹಂದರದಾಗೆಲ್ಲಾ ಬೋಳೇರು ಅಂದಳಂತೆ.

೧೨. ಮಾಡಲಿಲ್ಲ, ಕಿಸಿಲಿಲ್ಲ ಒಣ ಬಡಿವಾರ

೧೩. ಅಯ್ನೋರ ಮನ್ಯಾಗೆ ಉಂಡಾರಿಲ್ಲ ಕೈಲಾಸ ಕಂಡೋರಿಲ್ಲ.

೧೪. ಕೆಂಪು ಶೆಟ್ಟಿನ್ನ, ಕರೇ ಬ್ರಾಂಬ್ರನ್ನ ನಂಬಬಾರದು.

೧೫. ಇಸಗೊಂಡೋನು ಈರಭದ್ರ, ಕೊಟ್ಟೋನು ಕೋರಭದ್ರ.

೧೬. ಸಾಲ ಕೇಳದೇ ಹೋತು, ಹೊಲ ನೋಡದೇ ಹೋತು.

೧೭. ಹೊಟ್ಟಿ ಹೊರಗಾದರೆ, ಮಟ್ಟೆ ಹೊನ್ನು ಉಳೀತು.

೧೮. ಕುಂತುಂಡರೆ ಕುಡಿಕೆ ಹೊನ್ನು ಸಾಲೋದಿಲ್ಲ.

೧೯. ಸಂಗೀತಂ ಪಾಲಯಿನ ಸೆಟ್ಟಿ ಸಗಮಯಿ ಪೋಯಿನೋ, ಸಾಹಿತ್ಯಂ ಪಾಲಯಿನಿ ಸೆಟ್ಟಿ ಪೂರ್ತಯಿಪೋಐಣೊ.

೨೦. ಮನಿಕಟ್ಟಿ ನೋಡು, ಮದುವಿ ಮಾಡಿನೋಡು.

೨೧. ಕೆಲಸವಿಲ್ಲದ ಬಡಗಿ ಮಗನ ಮುಕುಳಿ ಕೆತ್ತಿ ಮೂರೋಳು ಮಾಡಿದನಂತೆ.

೨೨. ದುಡ್ಡಿನ ಮುಂಡೆಗೆ ದುಗ್ಗಾಣಿ ಕೊಟ್ಟಂತೆ.

೨೩. ದುಡದಿದ್ದಕ್ಕಿಂತ ಪಡೆದದ್ದೇ ಉಣ್ಣೋದು.

೨೪. ಆ ಮನಿಗೆ ತಟ್ಟಿಲ್ಲ, ಈ ಮನಿಗೆ ಕದ ಇಲ್ಲ.

೨೫. ಹತ್ತಿ ತೂಗುವಲ್ಲಿ ನೊಣಕ್ಕೇನು ಕೆಲಸ.

೨೬. ತಾ ಕೆಟ್ಟ ಮಂಗ ಊರೆಲ್ಲಾ ಕೆಡಿಸಿದಂತೆ.

೨೭. ತಾನು ಕಳ್ಳ ಪರರನ್ನ ನಂಬ.

೨೮. ಕಳ್ಳರ ಬಾಳ್ವೆ ಕಲ್ಲಾಬಿಲ್ಲಿ.

೨೯. ಕಳ್ಳನ ಮನಸು ಹುಳ್ಳುಳಗ.

೩೦. ಹಗಲು ಕಂಡ ಭಾವ್ಯಾಗ ರಾತ್ರಿ ಬಿದ್ದಂಗ.

೩೧. ಆಟಾಳಿಗೊಂದು ಪೊಟಾಳು.

೩೨. ಕದ ತಿನ್ನೋರಿಗೆ ಹಪ್ಪಳ ಈಡಾದೀತೆ?

೩೩. ಗಂಜಿ ಕುಡಿಯೋನಿಗೆ ಮೀಸಿ ಯಿಯೊರಾ ಬ್ಯಾರೆ.

೩೪. ಅಗ್ಗಕ್ಕೆ ಮಗ್ಗು ಜೋಳ.

೩೫. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ.

೩೬. ಅತ್ತಿಗೊಂದು ಕಾಲ ಸೊಸೆಗೊಂದು ಕಾಲ.

೩೭. ಅಯ್ಯ ಬರದಿದ್ದರೆ ಅಮಾವಾಸ್ಯೆ ನಿಲ್ಲೋದಿಲ್ಲ.

೩೮. ಎಲ್ಲರ ಮನೆ ದೋಸಿ ತೂತು.

೩೯. ಇಬ್ಬರ ಜಗಳ ಮೂರನೇ ಅವನಿಗೆ ಲಾಭ.

೪೦. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.

೪೧. ಗುಡ್ಡಕ್ಕೆ ಕಲ್ಲು ಹೊತ್ತಂತೆ.

೪೨. ದೂರದ ಬೆಟ್ಟ ನುಣ್ಣಗೆ.

೪೩. ದಿನಾ ಸಾಯೋರಿಗೆ ಅಳೋರು ಯಾರು.

೪೪. ಮಾಡಿದ್ದುಣ್ಣೋ ಮಾರಾಯ.

೪೫. ಮನಸ್ಸಿದ್ದರೆ ಮಾರ್ಗ.

೪೬. ದುಡ್ಡಿದ್ದವನೇ ದೊಡ್ಡಪ್ಪ.

೪೭. ಉಗುರಿನಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡಂತೆ.

೪೮. ತಿಮ್ಮ ಸಾಯಲಿ ಎಂದರೆ ತಮ್ಮ ಸತ್ತನಂತೆ.

೪೯. ಹಸ್ತ ಹಲಸು ಉಣಬೇಕು. ಉಂಡು ಮಾವು ತಿನ್ನಬೇಕು.

೫೦. ಉಂಡೂ ತಿಂದು ಗಂಡಗೆ ಅತ್ತರಂತೆ.