ಒಡಪುಗಳು :

೧. ಶ್ರೀ ಮನ್ನಾರಾಯಣಿಗೆ ದೈವನು ಭೆಟ್ಟಿಯಾದದ್ದು ಅಶೋಕ ವನದಲ್ಲಿ ನಮ್ಮ ರಾಯರು ಶ್ರೀ………………………. ………………………….. ಹೆಸರು ಹೇಳುವೆನು ಮಹಿಳಾ ಸಮಾಜದಲ್ಲಿ.

೨. ಭಗೀರಥನ ತಪಸ್ಸಿಗೆ ಭಾಗೀರಥಿ ಬಂದಳು ಕಾಶಿಗೆ ರಾಯರಾದ ಶ್ರೀ………………………………………… ಅವರ ಸೇವೆಗೆ ನಾನಾದೆ ದಾಸಿ.

೩. ಸೂರ್ಯ ನಾರಾಯಣನಿಂದ ಆರೋಗ್ಯ ನನ್ನ ಪತಿರಾಯರಾದ ಶ್ರೀ………………………………. ಅವರಿಂದ ನನಗೆ ಸಕಲ ಸೌಭಾಗ್ಯ.

 

ನುಡಿಗಟ್ಟುಗಳು:

೧. ಬಟ್ಟಿಗೊಂದು ಮುರಕಾಸಿಗೊಂಡು.

೨. ದುಡೀಲಿಲ್ಲ ದುಕ್ಕಪಡಲಿಲ್ಲ.

೩. ಉಣ್ಣಲಿಲ್ಲ ಉಡಲಿಲ್ಲ.

೪. ಕಸಬರಿಗೆ ಸುಳಿಯ ಹೆಣ್ಣು.

೫. ಶೆಟ್ಟರ ಸಾಕ್ಷಿ

೬. ಕಚ್ಚೆ ಹರಕ, ಜೊಲ್ಲು ಬುರುಕ ಕಾಲಲ್ಲಿ ನಾಯಿಗೆರೆ ಐತಿ.

೭. ನಾಲಿಗೆ ಮ್ಯಾಲೆ ಕರೆಮಚ್ಚಿ ಅದಾವ.

೮. ಬಾಯಿ ಬಡಕ ಉದುರುಚ್ಚಿಯವನು.

 

ವೈಶ್ಯರಲ್ಲಿ ಮಹಿಳೆಯರಿಗೆ ಕುಟುಂಬದಲ್ಲಿ ಅತ್ಯಂತ ಗೌರವದ ಸ್ಥಾನವಿದೆ. ಗಂಡನ ವ್ಯವಹಾರದಲ್ಲಿ ತಲೆದೂರಿಸದಿದ್ದರೂ ಎಲ್ಲವನ್ನು ತಿಳಿಯಬೇಕೆಂದು ಅಪೇಕ್ಷೆ. ಮಕ್ಕಳ ತಾಯಿಯಾಗಿ ಅವರ ಲಾಲನೆ-ಪಾಲನೆ, ವಿದ್ಯಾಭ್ಯಾಸ, ವೃತ್ತಿ ಮತ್ತು ವಿವಾಹದಲ್ಲಿ ಅವಳದೇ ಅಭಿಪ್ರಾಯಕ್ಕೆ ಮನ್ನಣೆ. ಆದರೆ ಕೆಲಸ ಗಂಡಸರು ಯಾವುದನ್ನೂ ಲಕ್ಷಿಸುವುದಿಲ್ಲ. ಆದರೆ ಬಹುತೇಕ ಯಜಮಾನರು, ತ್ಯಾಗರಾಜರು ಕೀರ್ತನೆಯಲ್ಲಿ ಹೇಳಿದಂತೆ ಕಾಂತದಾಸರು, ಹೆಂಡತಿಯ ಅಭಿಪ್ರಾಯದಂತೆ ನಡೆದರೆ ಮುಂದೆ ತಕರಾರು ಇರುವುದಿಲ್ಲ ಎಂಬ ಭಾವನೆಯಿಂದ ವರ್ತಿಸುತ್ತಾರೆ. ಹೀಗಾಗಿ ಅತ್ತೆಯ ಕಾರುಬಾರು ಸ್ವಲ್ಪ ಕಠಿಣವಾಗಿ ಅನೇಕ ಸಲ ಸೊಸೆಯಂದಿರು ಬಸವಳಿಯುತ್ತಾರೆ. ಅದೇ ಕುಟುಂಬದ ವಿಘಟನೆಗೆ ಕಾರಣವಾಗುತ್ತದೆ. ಆದರೆ ಅನೇಕ ಗೃಹಿಣಿಯರು ಗೃಹ ಕೃತ್ಯವನ್ನು ಮಟ್ಟಸವಾಗಿ, ಮಿತವ್ಯಯದಲ್ಲಿ ಮತ್ತು ಜಗಮೆಚ್ಚುವಂತೆ ನಿಭಾಯಿಸುತ್ತಾರೆ. ಹೆಣ್ಣು ಮಕ್ಕಳನ್ನು ಕರೆಸುವುದು, ಕಳಿಸುವುದು, ವ್ರತನೇಮ ಮಾಡಿಸುವುದು, ಬೀಗರು-ಬಿಜ್ಜರೊಂದಿಗೆ ಹಾರ್ದಿಕ ಸಂಬಂಧಗಳನ್ನು ತೂಗಿಸುವುದು, ದುಃಖದ ಸಮಯದಲ್ಲಿ ಸುಖದ ಸಂದರ್ಭದಲ್ಲಿ ಮುಯ್ಯಿ ಕೊಡುವಲ್ಲಿ ಮುಂತಾದ ಅನೇಕಾನೇಕ ಸಂದರ್ಭದಲ್ಲಿ ನೋಡಿಕೊಳ್ಳುವುದು ಯಜಮಾನತಿಯ ಮುಖ್ಯ ಜವಾಬ್ದಾರಿ.

ಅಶಿಕ್ಷಿತರೆನ್ನುವವರ ಸಂಖ್ಯೆ ತೀರಾ ಕಡಿಮೆ. ಓದಲು, ಬರೆಯಲು ಮತ್ತು ಲೆಕ್ಕ ಮಾಡಲು ಎಲ್ಲರಿಗೂ ಬರುತ್ತಿರುತ್ತದೆ. ಗ್ರಾಮಾಂತರದವರಿಗೆ ಅಂಗಡಿ ನಿಭಾಯಿಸಲು ಅಂದರೆ ತೂಕ ಮಾಡೋದು, ಪೊಟ್ಟಣ ಕಟ್ಟೋದು, ಪಟ್ಟಿ ಮಾಡಿ ಹಣ ಪಡೆಯೋದು, ಕಸದ ಕಾಳನ್ನು ಹಸನು ಮಾಡಿ ಮಾರಾಟಕ್ಕೆ ಅಣಿಗೊಳಿಸೋದು, ಬಾಕಿ ವಸೂಲು ಮಾಡೋದು, ಆಳು ಕಾಳಿನ ಮೇಲೆ ಉಸ್ತುವಾರಿ ಮಾಡೋದು ಮುಂತಾದ ಎಲ್ಲಾ ಕೆಲಸ ಬರುತ್ತವೆ. ನಗರ ಪ್ರದೇಶದವರಿಗೆ ಅಡಿಗೆ ಮಾಡೋದು, ಹೊಲಿಗೆ ಯಂತ್ರ, ವಾಷಿಂಗ್‌ಮಷಿನ್‌ಉಪಯೋಗಿಸೋದು, ಸೂಕ್ಷ್ಮ ಕಸೂತಿ ಮಾಡೋದು ಮುಂತಾದ ಅನೇಕ ಕೆಲಸಗಳು ಬರುತ್ತವೆ. ಬ್ಯಾಂಕ್‌ವ್ಯವಹಾರ, ಟೆಲಿಫೋನ್‌, ಕರೆಂಟ್‌ಬಿಲ್‌ಪಾವತಿಸುವುದು, ಮಕ್ಕಳಿಗೆ ಮನೆಪಾಠ ಹೇಳೋದು, ಶಾಲೆಗೆ ಹೋಗಿ ಅವರಿಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸೋದು, ಸ್ಥಳೀಯ ಮಹಿಳಾ ಸಮಾಜ, ರೋಟರಿ, ಇನ್ನರ್ ವೀಲ್‌ಮುಂತಾದ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡೋದು ಗೊತ್ತು.

ಸದ್ಯದ ಪರಿಸ್ಥಿತಿಯಲ್ಲಿ ಗಂಡಸರು ಮಹತ್ವಾಕಾಂಕ್ಷಿಗಳಾಗಿದ್ದಾರೆ. ಗೃಹಿಣಿಗೆ ಗಂಡನ ವ್ಯವಹಾರದ ಸಮಗ್ರ ಪರಿಚಯವಾಗುವುದಿಲ್ಲ. ಆದರೆ ಸ್ಥೂಲವಾದ ಪರಿಚಯವಿರುತ್ತದೆ. ಅವಳೀಗ ಸ್ವಂತಕ್ಕೊಂದಿಷ್ಟು ಉಳಿತಾಯ, ವಿಮೆ ಮತ್ತು ಇನ್‌ವೆಸ್ಟ್‌ಮೆಂಟ್‌ಮಾಡುತ್ತಾಳೆ. ಸಮಕಾಲೀನ ಪರಿಸ್ಥಿತಿಯಲ್ಲಿ ನಿರಾಧಾರ ಸ್ಥಿತಿ ಇರೋದಿಲ್ಲ. ಹಿಂದಿನ ಕಾಲದ ಕುಟುಂಬ ಪದ್ಧತಿಯಲ್ಲಿ ಗಂಡಸರ ಅವ್ಯವಹಾರದಿಂದ ದಿವಾಳಿ-ದೀಪಾವಳಿಯಾದ ಕುಟುಂಬಗಳಲ್ಲಿ ಗೃಹಿಣಿಯರು ನಿರಾಧಾರರಾಗಿ ಅನ್ಯರ ಮನೆಗಳಲ್ಲಿ ಊಳಿಗ ಮಾಡಿದ ಉದಾಹರಣೆಗಳಿವೆ. ಈಗ ವೈಶ್ಯ ಸಮಾಜದಲ್ಲಿ ಮಹಿಳೆಯರು ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ಹಿಡಿತ ಸಾಧಿಸಿದ್ದಾರೆ. ಅನೇಕರು ಇರುವ ಮನೆಯನ್ನಾದರೂ ತಮ್ಮ ಹೆಸರಿಗೆ ಮಾಡಿಸಿಕೊಂಡಿರುತ್ತಾರೆ. ವ್ಯಾಪಾರದಲ್ಲಿ ಆಗುತ್ತಿರುವ ಸ್ಥಿತ್ಯಂತರಗಳ ಕಾರಣದಿಂದ ಮನೆತನಗಳು ಜಾಗರೂಕರಾಗಿದ್ದಾರೆ.

ವೈಶ್ಯ ಜನಾಂಗದ ಮಹಿಳೆಯರು ಕುಟುಂಬ ಯೋಜನೆಯಿಂದ ತುಂಬಾ ಪ್ರಭಾವಿತರಾಗಿದ್ದಾರೆ. ಈಗೆಲ್ಲ ಒಂದು ಮಗುವೇ ಸಾಕೆನ್ನುವವರ ಸಂಖ್ಯೆಯೇ ಹೆಚ್ಚಾಗಿದೆ. ಹೆಣ್ಣಿರಲಿ, ಗಂಡಿರಲಿ ಮುದ್ದಾದ ಮಗುವೊಂದೇ ಸಾಕು. ಆ ಮಗುವನ್ನೇ ಸರಿಯಾಗಿ ಬೆಳೆಸಿ, ಒಳ್ಳೆಯ ಸಂಸ್ಕೃತಿ ನೀಡಿ ಉತ್ತಮಳನ್ನಾಗಿ ಮಾಡಿದರೆ ಸಾಕು ಎನ್ನುತ್ತಾರೆ.

ಭ್ರೂಣಹತ್ಯೆ ಮಹಾಪಾಪವೆಂದು ಪರಂಪರಾಗತವಾಗಿ ಮನದೊಳಗೆ ದೃಢವಾದ ನಂಬಿಕೆ ಇರುವುದರಿಂದ ಪ್ರಾಯಶಃ ವೈಶ್ಯರಲ್ಲಿ ಲಿಂಗ ಪರೀಕ್ಷೆ ಮಾಡಿಸುವುದಾಗಲೀ, ಭ್ರೂಣವನ್ನು ತೆಗೆಸುವುದಾಗಲೀ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದರಿಂದ ರೋಗರುಜಿನಗಳು ಕಡಿಮೆ ಆಗುತ್ತಿವೆ. ಆಹಾರದ ಪದ್ಧತಿಯು ಇನ್ನೂ ಸಾಕಷ್ಟು ಬದಲಾಗಬೇಕು. ಆದರೂ ಈಗ ಮಹಿಳೆಯರು ಯೋಗ, ಪ್ರಾಣಾಯಾಮ, ಧ್ಯಾನದ ಕಡೆಗೆ ಗಮನ ನೀಡುತ್ತಿದ್ದಾರೆ. ರವಿಶಂಕರ್ ಗುರೂಜಿ ಅವರ ಕ್ರಿಯಾಯೋಗ, ಸಿದ್ಧ ಸಮಾಧಿಯೋಗ ಮತ್ತಿತರ ಕಾರ್ಯಕ್ರಮಗಳಲ್ಲಿ ಸಾಕಷ್ಟು ವೈಶ್ಯ ಮಹಿಳೆಯರು ಕಾಣುತ್ತಾರೆ. ಅಲ್ಲಲ್ಲಿ ಜನಪ್ರಿಯವಾಗಿರುವ ಲಾಫಿಂಗ್‌ಕ್ಲಬ್‌ಗಳಲ್ಲಿ ಕೂಡಾ ಅವರಿರುತ್ತಾರೆ.

ಕುಟುಂಬ ನಿಯಂತ್ರಣದ ಪ್ರಭಾವದಿಂದ ವೈಶ್ಯರಲ್ಲಿ ಹುಡುಗಿಯರ ಸಂಖ್ಯೆ ಸಾಕಷ್ಟು ಕಡಿಮೆ ಆಗಿದೆ. ಶಿಕ್ಷಿತ ಹುಡುಗಿಯರು ಜೆನೆಟೆಕ್ಸ್‌ದೃಷ್ಟಿಯಿಂದ ಬೇರೆ ಜಾತಿಯವರನ್ನು ಮದುವೆಯಾಗಲು ಬಯಸುತ್ತಾರೆ. ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಸ್ನೇಹಿತರಾದ ಅನೇಕ ಹುಡುಗ-ಹುಡುಗಿಯರು ಅಂತರ್ಜಾತೀಯ ವಿವಾಹವಾಗುತ್ತಾರೆ. ವಿದೇಶಕ್ಕೆ ಓದಲೆಂದು, ಕೆಲಸಕ್ಕೆಂದು ಹೋದವರನೇಕರು ಅಲ್ಲಿಯ ಕನ್ಯೆಯರನ್ನೇ ವರಿಸುತ್ತಾರೆ. ಬಂಗಾಲಿ, ಪಂಜಾಬಿ, ಸಿಂಧಿ, ಬಿಹಾರಿ ಎಂದು ನೋಡದೇ ಅವರವರ ಪ್ರೀತಿಯನ್ನಾಧರಿಸಿ ಮದುವೆಗಳು ನಡೆಯುತ್ತಿವೆ. ಈ ಪ್ರಕ್ರಿಯೆಯು ಕಾಲಾನಂತರ ಜನಾಂಗದ ಸ್ವರೂಪವನ್ನೇ ಬದಲಾಯಿಸಬಹುದಾಗಿದೆ. ಮಹಿಳೆಯರು ಗಂಡಂದಿರು/ಕುಟುಂಬದ ವ್ಯಾಪಾರೋದ್ಯಮಗಳಲ್ಲಿ ಪಾಲುದಾರರಾಗುತ್ತಿದ್ದಾರೆ. ಇನ್‌ಫರ್ ಮೇಷನ್ (ಮಾಹಿತಿ) ತಂತ್ರಜ್ಞಾನ ಬಯೋಟೆಕ್ನಾಲಜಿ ಮುಂತಾದ ರಂಗಗಳಲ್ಲಿ ಮಹಿಳೆಯರು ಧುಮುಕುತ್ತಿದ್ದಾರೆ.

ಅನೇಕರು ರಾಜಕೀಯದಲ್ಲಿ ಪ್ರಯತ್ನ ನಡೆಸಿದ್ದಾರೆ. ದಾವಣಗೆರೆಯ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರು ವಿಧಾನಸಭಾ ಸದಸ್ಯರಾಗಿ ಕೆಲಕಾಲ ಮಂತ್ರಿಗಳೂ ಆಗಿದ್ದರು. ಶ್ರೀಮತಿ ಮಂಜುಳಾ ಚೆಲ್ಲೂರ್ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದಾರೆ. ಆಂಧ್ರದಲ್ಲಿ ಅನೇಕರು ರಾಜಕೀಯ ಸಮಾಜ ರಂಗದಲ್ಲಿ ಇದ್ದಾರೆ. ಸಮಾಜದಲ್ಲಿ ಅನೇಕರು ವೈದ್ಯಕೀಯ, ಇಂಜಿನಿಯರಿಂಗ್‌, ವಕಾಲತ್ತು, ನೋಟರಿ, ಕಲಾ ಸಾಹಿತ್ಯ ರಂಗದಲ್ಲಿ, ಶ್ರೀಕೃಷ್ಣ ಶೆಟ್ಟರು ಡಾ. ವಿಜಯಾ ಸುಬ್ಬರಾಜ್‌, ಡಾ. ಎಚ್‌.ಎಸ್‌.ಸುಜಾತಾ, ಕೃಷ್ಣ ರಾಯಚೂರು, ಗುರುಮೂರ್ತಿ ಪೆಂಡಕೂರು, ಶ್ರೀಮತಿ ಇಂದ್ರಾಣಿ ನಂದಕುಮಾರ್, ಶ್ರೀಮತಿ ಸುಧಾ ಶ್ರೀನಿವಾಸ, ಡಾ.ರಾಜಶ್ರೀ ಕಿಶೋರ್, ಶ್ರೀಮತಿ ಕೊಪ್ಪರಂ ಅನ್ನಪೂರ್ಣ, ಶ್ರೀಮತಿ ತನುಜಾ ಮುಂತಾದವರು ಪ್ರಸಿದ್ಧರು. ಪತ್ರಿಕಾರಂಗದಲ್ಲಿ ಶೈಲೇಶಚಂದ್ರ ಗುಪ್ತ, ಶ್ರೀ ವೈ.ಕೆ.ರಾಜಗೋಪಾಲ್‌, ಶ್ರೀ ಅಂಜನ್‌ಸೆಟ್ರು, ಶ್ರೀ ರಾಜಶೇಖರ್ ಸೆಟ್ಟಿ, ಶ್ರೀ ಪಂಪಯ್ಯ ಮುಂತಾದವರಿದ್ದಾರೆ. ಈ ರಂಗದಲ್ಲಿ ಮಹಿಳೆಯರು ಕಡಿಮೆ. ಆದರೆ ಶ್ರೀಮತಿ ಶ್ಯಮಂತ ಅವರು ಪತ್ರಕರ್ತರಾಗಿ ಪ್ರಸಿದ್ಧರು. ನಾಟಕ ಮತ್ತು ಸಿನಿಮಾ ರಂಗದಲ್ಲಿ ಹೇಳಿಕೊಳ್ಳುವಂತಹ ನಟನಟಿಯರಿಲ್ಲವೆಂದೇ ಹೇಳಬಹುದು.

ಮಹಿಳೆಯರಲ್ಲಿ ಸ್ವತಂತ್ರವಾಗಿ ಬದುಕಬೇಕೆಂಬ ಹಂಬಲ ಹೆಚ್ಚಾಗಿದೆ. ಅವಿಭಕ್ತ ಕುಟುಂಬದ ಇತಿಮಿತಿಗಳಿಂದ, ಹೊಣೆಗಾರಿಕೆಯಿಂದ ಹೊರಬಂದು ತಮಗೆ ರುಚಿಸುವಂತ ಬದುಕನ್ನು ಅಪೇಕ್ಷಿಸುತ್ತಾರೆ. ಸಂಪ್ರದಾಯವನ್ನು ಗೊಡ್ಡು ಸಂಪ್ರದಾಯವೆಂದು ತಿರಸ್ಕರಿಸಿ ದೂರಸರಿದವರೇ ಹೆಚ್ಚು. ಹೆಣ್ಣು ಮಕ್ಕಳಿಗೆ ಈವರೆಗೆ ಇಲ್ಲದಂತಹ ಆಯ್ಕೆಯ ಅವಕಾಶ ಈಗ ಒದಗಿದೆ. ಓದಿನ ಅವಕಾಶ, ಗಂಡನನ್ನು ಆರಿಸುವ ಅವಕಾಶ, ಉದ್ಯೋಗದ ಅವಕಾಶ ಮತ್ತು ಪ್ರತ್ಯೇಕ ಬದುಕಿನ ಅವಕಾಶಗಳು ಈಗ ಇವೆ. ಹಾಗೆಯೇ ಸಾಕಷ್ಟಿವೆ. ಬೆಂಗಳೂರಿನಂತಹ ನಗರಗಳಲ್ಲಿ ಜೀವಿಸುವವರು ಕುಟುಂಬ ಸೌಖ್ಯದ ಆ ಭಾವದಿಂದ ವಿವಾಹ ವಿಚ್ಛೇದನ ಬಯಸುತ್ತಿದ್ದಾರೆ. ದಂಪತಿಗಳ ನಡುವೆ ಅನವಶ್ಯಕ ಕ್ರೌರ್ಯ, ಜಗಳಗಳು ಉಂಟಾಗುತ್ತಿವೆ. ಹೀಗಾಗಿ ಕೌಟುಂಬಿಕ ಕೌನ್ಸಲಿಂಗ್‌ಅಗತ್ಯವಾಗುತ್ತಿದೆ. ಈ ಹಿಂದೆ ಮನೆಯ ಯಜಮಾನರು ಮಾಡುತ್ತಿದ್ದ ಕೆಲಸವನ್ನು ಅದಕ್ಕೆಂದೇ ತರಬೇತಾದ ಜನ ಮಾಡುತ್ತಿದ್ದಾರೆ. ಅನೇಕರು ಚೀಟಿ, ನೆಟ್‌ವರ್ಕ್‌, ಏಜೆನ್ಸಿ ಮುಂತಾದವುಗಳಲ್ಲಿ ಮೋಸ ಹೋಗುತ್ತಿದ್ದರು.

ಮಕ್ಕಳು ತಂದೆ-ತಾಯಂದಿರನ್ನು ಕಾಪಾಡುವುದು ತಮ್ಮ ಕರ್ತವ್ಯವೆಂದು ತಿಳಿಯುತ್ತಿಲ್ಲ. ಹೀಗಾಗಿ ಅನೇಕ ವೃದ್ಧಾಶ್ರಮಗಳು ಪ್ರಾರಂಭವಾಗಿವೆ. ಯಾವ ಸಮಾಜದಲ್ಲಿ ಅನಾಥಶ್ರಮ, ವೃದ್ಧಾಶ್ರಮಗಳಿವೆಯೇ ಆ ಸಮಾಜದ ಪರಿಸ್ಥಿತಿ ಸರಿಯಿಲ್ಲವೆಂದೇ ಹೇಳಬೇಕು. ಬೆಂಗಳೂರಿನ ಮಲ್ಲೇಶ್ವರದ ಆರ್ಯವೈಶ್ಯ ಸಂಘದವರು “ಹೊಂಗಿರಣ” ಎಂಬ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ವೃದ್ಧರೂ, ಅಸಹಾಯಕರೂ ಆದವರಿಗೆ ಸಂಘದಿಂದ ಟಿಫನ್‌ಕ್ಯಾರಿಯರ್ ಮೂಲಕ ಊಟ ಕಳಿಸುವ (ಪ್ರತಿದಿನ) ವ್ಯವಸ್ಥೆ ಮಾಡಿದ್ದಾರೆ.

ಮನೆಯಿರಬಹುದು. ಹಣವಿರಬಹುದು. ಆದರೆ ನಿಶ್ಯಕ್ತರಾಗಿರುತ್ತಾರೆ. ಅಡುಗೆ ಮಾಡುವವರು ಸಿಗುವುದೂ ಕಷ್ಟ. ಅಂತಹವರಿಗೆ ಈ ವ್ಯವಸ್ಥೆ ಮಹದುಪಕಾರ ಮಾಡಿದೆ. ಈ ಯೋಜನೆಯಲ್ಲಿ ಈಗ ಐವತ್ತಕ್ಕೂ ಹೆಚ್ಚು ಜನರು ಬರೀ “ಮಲ್ಲೇಶ್ವರ”ದಲ್ಲಿಯೇ ನೊಂದಾಯಿಸಿಕೊಂಡಿದ್ದಾರೆ. ಇಂತಹ ಯೋಜನೆಗಳಿಗೆ ಹಣದ ಕೊರತೆ ಆಗೋದಿಲ್ಲ. ಆದರೆ ವ್ಯವಸ್ಥೆ ಮಾಡುವವರು ಬೇಕು. ಆ ಕೆಲಸವನ್ನು ಮಲ್ಲೇಶ್ವರದ ಆರ್ಯವೈಶ್ಯ ಸಂಘದವರು ಮಾಡಿದ್ದಾರೆ. ಜನಾಂಗದ ಸಂಘಟನೆಗಳಾದ ಕರ್ನಾಟಕ ಆರ್ಯವೈಶ್ಯ ಚಾರಿಟೇಬಲ್‌ಟ್ರಸ್ಟ್‌ಮುಂತಾದ ಸಂಸ್ಥೆಗಳು ಸಾಕಷ್ಟು ಶಿಷ್ಯ ವೇತನ ನೀಡುವುದೂ, ಹಾಸ್ಟೆಲ್‌ವ್ಯವಸ್ಥೆ ಮಾಡುವುದೂ ನಡೆದಿದೆ.

ಅನ್ಯ ಜನಾಂಗದವರು ಎಂದೋ ಸೀಮೋಲ್ಲಂಗನ ಮಾಡಿ ನಾನಾ ರಂಗಗಳಲ್ಲಿ ಪ್ರಾಧಾನ್ಯತೆ ಪಡೆದಿದ್ದಾರೆ. ವೈಶ್ಯ ಮಹಿಳೆಯರು ಸಾಮೂಹಿಕ ಭಜನೆ, ಉಪವಾಸ, ಸತ್ಯನಾರಾಯಣ ಪೂಜೆ, ಸಂಕಷ್ಟಿ ಮುಂತಾದವುಗಳಲ್ಲಿಯೇ ಸಾಕಷ್ಟು ಸಮಯ ಕಳೆಯುವುದನ್ನು ಬಿಟ್ಟು ಜನಾಂಗದ ಉದ್ದಾರಕ್ಕೆ ಕೆಲಸ ಮಾಡುವ ಅವಶ್ಯಕತೆ ಇದೆ. ಎಂದಿಗಿಂತಲೂ ಈಗ ಅಂದರೆ ಜಾಗತೀಕರಣದ ಯುಗದಲ್ಲಿ ತಲೆಎತ್ತಿ ನಿಲ್ಲಬೇಕಾದರೆ ಸೂಕ್ತ ತರಬೇತಿ, ಶಿಕ್ಷಣ, ಮುನ್ನೋಟ ಮತ್ತು ವ್ಯವಹಾರ ಕುಶಲತೆಗಳು ಬೇಕು. ವೈಶ್ಯ ಮಹಿಳೆಯರು ಈ ದಿಶೆಯಲ್ಲಿ ಸಾಗಿದ ದಾರಿ ಕಡಿಮೆ. ಸಾಗುತ್ತಿರುವ ವೇಗ ತೀರಾ ಕಡಿಮೆ. ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭೆಯು ಜನಾಂಗದ ಮಹಿಳೆಯರಲ್ಲಿ ಜಾಗೃತಿ ಉಂಟು ಮಾಡಲೂ ಎಚ್ಚರಿಕೆಯನ್ನುಂಟು ಮಾಡಲೂ ಶ್ರಮಿಸಬೇಕಾಗಿದೆ.

ಯಾವ ಜಾತಿಯೇ ಆಗಲಿ, ಮತವೇ ಆಗಲಿ, ನಮ್ಮ ದೇಶದ ಯಾವ ಪ್ರಾಂತವೇ ಆಗಲಿ, ಹೆಣ್ಣಿನ ಬದುಕೆಂದರೆ ನಿರಂತರ ನಿರೀಕ್ಷೆ ಎಂದು ಹೇಳಬಹುದು. ಯೌವನಕ್ಕೆ ಅಡಿಯಿಟ್ಟು ಕೂಡಲೇ ಮದುವೆಗಾಗಿ ಕಾಯುವುದು, ಅನಂತರ ಮಕ್ಕಳಿಗಾಗಿ ಕಾಯುವುದು, ಅದರಲ್ಲೂ ಮಗನಿಗಾಗಿ ಹಂಬಲಿಸುವುದು. ಈ ಮಕ್ಕಳು ಬೆಳೆದ ಮೇಲೆ ಅವರಿಗೆ ಮದುವೆ ಮಾಡಲು ತಹತಹಪಡುವುದು. ಅನಂತರ ಮೊಮ್ಮಕ್ಕಳ ಆಸೆ, ಕುಟುಂಬದ, ಸಮಾಜದ ಮತ್ತು ಜಾತಿಯ ಸಲುವಾಗಿ ಮಾಡಬೇಕಾದುದನ್ನೆಲ್ಲಾ ಮಾಡಿದ್ದೇನೆ ಎಂಬ ಭಾವ ಬಂದೊಡನೆ ಸಾಯಲು ಮಾಡಬೇಕಾದ್ದನ್ನೆಲ್ಲಾ ಮಾಡಿದ್ದೇನೆ ಎಂಬ ಭಾವ ಬಂದೊಡನೆ ಸಾಯಲು ಕಾಯುವುದು, ಅದು ಮುತ್ತೈದೆ ಸಾವಿನ ಅಪೇಕ್ಷೆ, ಯಾರೂ ಅವಳನ್ನು ಎಂದಾದರೂ ನಿನಗೇನು ಬೇಕು ಎಂದು ಕೇಳಿದ್ದಾರೆಯೇ? ಭಾರತೀಯ ಸಂದರ್ಭದಲ್ಲಿ ಅದು ಮುಖ್ಯವೆನಿಸುವುದೆ ಇಲ್ಲ. ಮಹಿಳೆಯರು ಕೂಡಾ ಇಂತಹ ಯೋಚನೆ ಮಾಡುವುದಿಲ್ಲ. ಏನು ಯೋಚಿಸುತ್ತೇವೆಯೋ? ಏನು ಮಾತಾಡುತ್ತೇವೆಯೋ? ಎಂಬ ಆತಂಕ. ಮಹಿಳೆಯರು ಕನಸುಗಳು ವಿಚಿತ್ರವಾಗಿರಬಹುದು. ಮತ್ತು ಅವುಗಳನ್ನು ಅರ್ಥೈಸುವುದೂ ಕಠಿಣ. ಸಾಧಾರಣವಾಗಿ ಮಹಿಳೆಯರು ಪತಿಯ ಸ್ವಾಸ್ಥ್ಯಕ್ಕಾಗಿ ಮತ್ತು ಮಕ್ಕಳ ಯಶಸ್ಸಿಗಾಗಿ ಕನಸು ಕಾಣುವ ಅವಶ್ಯಕತೆ ಅಥವಾ ಅಧಿಕಾರ ಇಲ್ಲವೇ ಇಲ್ಲ. ಯಾವುದೇ ತಾಯಿ ತನ್ನ ಪರಿವಾರದ ಬಗ್ಗೆ ಚಿಂತಿಸಬೇಕಾಗಲೀ, ತನ್ನ ಬಗ್ಗೆ ಅಲ್ಲ ಎಂಬುದು ಎಲ್ಲರ ತೀರ್ಮಾನ.

ಆದರೆ ಈಗಿನ ತಲೆಮಾರಿನವರು ದೊಡ್ಡ ದೊಡ್ಡ ಕನಸು ಕಾಣಲು ಪ್ರಾರಂಭಿಸಿದ್ದಾರೆ. ಭಾರತೀಯ ಅದರಲ್ಲೂ ಸಂಪ್ರದಾಯವಾದಿಯಾದ ವೈಶ್ಯ ಸಮಾಜಕ್ಕೆ ಇದೊಂದು ಪ್ರಬಲ ಸವಾಲು. ಕೆಲವರ ದೃಷ್ಟಿಯಲ್ಲಿ ಅದು ಪಾಪ. ವಿಚಿತ್ರವೆಂದರೆ ಅದೃಷ್ಟವಂತರಾದ ಕೆಲವರು ತಮ್ಮ ಕನಸುಗಳನ್ನು ನನಸು ಮಾಡಿದ್ದಾರೆ. ಕಿರಣ್‌ಬೇಡಿ ಅವರ ಆತ್ಮವೃತ್ತದ ಹೆಸರು ಐ ಡೇರ್, ಯುವತಿಯರ ಅಭಿಪ್ರಾಯವೆಂದರೆ ಕಿರಣ್‌ಬೇಡಿ ಕನಸು ಕಂಡಳು. ಬದುಕನ್ನು ಕಂಡಳು. ನಾವೂ ನಮ್ಮ ಜೀವನದ ಬಗ್ಗೆ ದೊಡ್ಡ ಕನಸು ಕಾಣಬೇಕು ಮತ್ತು ಬದುಕನ್ನು ಅರಿಯಬೇಕು ಎಂಬುದಾಗಿದೆ. ಗ್ರೀಕ್‌ಕಾದಂಬರಿಕಾರ ನಿಕೋ ಕಜಂಟ್ಸಕಿಸ್‌ಹೇಳಿದ. “ಈ ಪ್ರಪಂಚದಲ್ಲಿರುವುದು ಒಬ್ಬಳೇ ಮಹಿಳೆ, ಅವಳಿಗೆ ಅನೇಕ ಮುಖಗಳು” ಇದು ಸತ್ಯ. ಸ್ವಲ್ಪ ಪರೀಕ್ಷಿಸಿದರೆ ಸರೋಜಿನಿ ನಾಯ್ಡು, ಕನಿಮೊಳಿ ಅಗಳಿ, ಹಿಲರಿ ಕ್ಲಿಂಟನ್‌ಮತ್ತು ಪ್ರಿಯಾಂಕ ವಾದೇರ ಆಗಲಿ ಬೇರೆ ಬೇರೆ ಅನಿಸುವುದಿಲ್ಲ. ಅವರೆಲ್ಲರೂ ತಮ್ಮ ಸ್ವಂತಿಕೆ, ಹೊಣೆ ಮತ್ತು ಬಿಡುಗಡೆಯ ಬಗ್ಗೆ ಒಂದೇ ರೀತಿಯಲ್ಲಿ ಚಿಂತಿಸುತ್ತಿರುತ್ತಾರೆ. ಸಮಾಜವು ಮೊದಲಿನಿಂದಲೂ ಅವರನ್ನು ಕಡೆಗಣಿಸಿ ತಪ್ಪು ಮಾಡಿದೆ. ಮಾವೋ ಹೇಳಿದರು. “ಆಕಾಶದ ಅರ್ಧ ಭಾಗವನ್ನು ಮಹಿಳೆಯರು ತುಂಬಿದ್ದಾರೆ” ನಿಜವಲ್ಲವೇ? ಶತಮಾನಗಳಿಂದ ಅರ್ಧಭಾಗ ಜನರನ್ನು (ಮಹಿಳೆಯರನ್ನು) ಸಮಾಜವು ಅಲಕ್ಷಿಸಿದರೆ ಅದು ತಪ್ಪಲ್ಲವೇ? ಪ್ರಪಂಚದ ಬದುಕನ್ನು ಸರಿಮಾಡುವ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಮಹಿಳೆಯರೂ ಭಾಗವಹಿಸಿದರೆ, ಖಂಡಿತ ಜನರ ಜೀವನವು ಸುಧಾರಿಸುತ್ತದೆ. ನಿಚ್ಚಳವಾದ ಈ ವಿಷಯವನ್ನೂ ಸಮಾಜಗಳು ಅರಿಯಬೇಕು. ಅವಜ್ಞೆ ಮಾಡಿದಷ್ಟು ಹಾನಿಯೇ ಆಗುತ್ತದೆ. ಸ್ತ್ರೀವಾದಿಗಳನ್ನು ಪುರುಷದ್ವೇಷಿಗಳೆಂದು ತಿಳಿಬಾರದು. ಯುಗ ಯುಗಗಳಿಂದ ಸ್ತ್ರೀಯರ ಶೋಷಣೆ, ಅತ್ಯಾಚಾರ, ಕೊಲೆ ನಡೆದಿರುವುದನ್ನು ಯಾರಾದರೂ ಖಂಡಿಸಿದರೆ ಅವರು ಸ್ತ್ರೀ ದ್ವೇಷಿಗಳಲ್ಲ. ಮುಂದಿನ ದಿನಗಳ ಬಗ್ಗೆ ಯೋಚಿಸಿದರೆ ಖುಷಿ ಎನಿಸುತ್ತದೆ. ವೈಶ್ಯ ಯುವತಿಯರು ದೈತ್ಯಗತಿಯಲ್ಲಿ ಆಧುನಿಕರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರೇ ಬದುಕಿನ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳಿವೆ. ಸಾಮಾಜಿಕ, ಆರ್ಥಿಕ ಕ್ರಾಂತಿಯ ಮುಖಂಡತ್ವವೂ ಅವರದಾದೀತು. ಈ ಶತಮಾನವನ್ನು ಮನಸ್ಸಿನ ಶತಮಾನವೆಂದು ಕರೆಯಬಹುದು. ಈ ಮನೋಯುಗದಲ್ಲಿ ಖಂಡಿತವಾಗಿ ಮಹಿಳೆಯರೇ ಮುಂದಾಳಾಗುತ್ತಾರೆ. ಗಂಡಸರು ತಮ್ಮ ಹಮ್ಮು-ಬಿಮ್ಮುಗಳನ್ನು ತ್ಯಜಿಸಿ ಈ ಸತ್ಯವನ್ನು ಅರ್ಥಮಾಡಿಕೊಂಡು ಮಹಿಳೆಯರಿಗೆ ಹೆಚ್ಚು ಅವಕಾಶಗಳನ್ನು ನೀಡಬೇಕು. ಅವರ ಅಪೇಕ್ಷೆಗಳನ್ನು ಮನ್ನಿಸಬೇಕು. ಅವರ ವಾದಗಳಿಗೆ ಕಿವಿಗೊಡಬೇಕು. ಮುಷ್ಟಿ ಬಲಕ್ಕಿಂತ ಮೆದುಳಿನ ಬಲ ಮತ್ತು ಹೃದಯದ ಬಲಗಳೇ ಪರಿಣಾಮಕಾರಿ ಎಂದು ಅರಿಯಬೇಕಾಗಿದೆ.

ವೈಶ್ಯ ಸಮಾಜದ ಯುವತಿಯರು ಈ ದಿಸೆಯಲ್ಲಿ ದಿಟ್ಟ ಹೆಜ್ಜೆಗಳನ್ನಿಡುತ್ತಿದ್ದಾರೆ. ಬದುಕಿನ ಎಲ್ಲಾ ರಂಗಗಳಲ್ಲಿ ಪುರುಷರಿಗೆ ಸಮಸಮನಾಗಿ ನಡೆಯಲು ಹೆಣಗುತ್ತಿದ್ದಾರೆ. ಈ ಹೋರಾಟ ತೀವ್ರವಾದರೆ ಸಮಾಜವು ಸದೃಡವಾಗುತ್ತದೆ. ಮತ್ತು ಬದುಕು ಸಹನೀಯವಾಗುತ್ತದೆ. ಸುಂದರವಾಗುತ್ತದೆ.

 

ಅನುಬಂಧ

ಭಾರತ ದೇಶದಲ್ಲಿ ವೈಶ್ಯ ಸಮುದಾಯ ಕರೆಯಲ್ಪಡುತ್ತಿರುವ ಹೆಸರುಗಳು

೧. ಅಗರವಾಲ್‌

೨. ಓಸ್ವಾಲ್‌

೩. ಖಂಡೇವಾಲ್‌

೪. ಪಲ್ಲಿವಾಲ್‌

೫. ಪೊರ್ ವಾಲ್‌

೬. ಭಾಟಿಯಾ

೭. ಮಾಹೇಶ್ವರಿ

೮. ಅಗ್ರಹಾರಿ

೯. ಧೂಸರ್

೧೦. ಉಮರ್

೧೧. ರಸ್ತೋಗಿ

೧೨. ಕೆಸಮಧನ್‌

೧೩. ಲೋಹಿಯಾ

೧೪. ಸೋನಿಯಾ

೧೫. ಸೂರಸೇನಿ

೧೬. ಬಾರಾಸೇನಿ

೧೭. ಬರನ್‌ವಾಲ್‌

೧೮. ಕೆಸರ್‌ವಾನಿ

೧೯. ಅಯೋಧ್ಯ ಬನ್ನಿ

೨೦. ಜೈಸ್‌ವಾರ್

೨೧. ಮಹೋಬಿಯಾ

೨೨. ಮೌರ್ಯ

೨೩. ಬಾಸಿಬನಿಯಾ

೨೪. ಕೋತಬನಿಯಾ

೨೫. ರವೋನಿಯಾ

೨೬. ಜನಾರ್ಯ

೨೭. ಮಾತುರು ವೈಶ್ಯ

೨೮. ಅಯೋಧ್ಯವಾಸಿ ವೈಶ್ಯ

೨೯. ಲೋಹನ

೩೦. ರೆನವಿಬಸಿಯ

೩೧. ಕಾನು

೩೨. ವಿಜಯವರ್ಗಿ

೩೩. ಶ್ರೀಮಾಲಿ

೩೪. ಬೊದೆರ್ವಾಲ್‌

೩೫. ದ್ವಾದಶ ಶ್ರೇಣಿ

೩೬. ಓಸ್‌ವಾಲ್‌ವೈಶ್ಯ

೩೭. ಕೋಬ್‌

೩೮. ದೇಸ್‌ವಾಲ್‌

೩೯. ಗುರ್ಜರ್

೪೦. ಲಾಡ್‌

೪೧. ಸೌರಾಟಿಯಾ

೪೨. ಹರಿಸೋರಾ

೪೩. ಉಕ್ಕಾರ್‌

೪೪. ವಯಾದ್‌

೪೫. ಬನಿಯಾ

೪೬. ಸುವರ್ಣವಣಿಕ್‌

೪೭. ಪಟೋಡಿಯಾ

೪೮. ಕಡೇಸ್‌ಲಿಯಾ

೪೯. ಗಂಧವಣಿಕ್‌

೫೦. ಕಾರುಷಹಾ

೫೧. ಷಹಾ

೫೨. ಸುರಾರ್‌ಬನಿಯಾ

೫೩. ಗುಪ್ತ

೫೪. ನಾಟಕೋಟ

೫೫. ಗೊರಾರಾ

೫೬. ನರಸಿಂಹಪುರ ಮಹಾಜನ

೫೭. ಗಹೋಯ

೫೮. ಕುಂಬಾರ್ ವೈಶ್ಯ

೫೯. ಮೊಡ್‌

೬೦. ಗರೋಲ್‌

೬೧. ಬಡಿಯಾಲ್‌

೬೨. ಕಪಾಲ್‌

೬೩. ಪುರವಾಲ್

೬೪. ಪುತಲಿ ಬನಿಯಾ

೬೫. ಕೋಮಠಿ ಕೋಮಟ್ಲು

೬೬. ಶೆಟ್ಟಿ-ಸೆಟ್ಟಿ

೬೭. ವಣಿಕ್

೬೮. ನಗರ್

೬೯. ದಿನ್‌ವಾಲ್

೭೦. ಝರೋಲಾ

೭೧. ಸೊರಾಟಿಯಾ

೭೨. ಖದೈತ

೭೩. ಹರಿಸೋರಾ

೭೪. ಕಪೋಲಾ

೭೫. ಉರ್ವಾಲಾ

೭೬. ಪಟೋಲಿಯಾ

೭೭. ವಯೋದ

೭೮. ಗವಾರಿ

೭೯. ಕಳಿಂಗ ಕೋಮಟಿ

೮೦. ಬೇರಿ ಕೋಮಟಿ

೮೧. ಬಲಿಜ ಕೋಮಟಿ

೮೨. ನಾಗರ್ ಕೋಮಟಿ

೮೩. ಆರ್ಯವೈಶ್ಯ

(ಈ ವಿವರಗಳು “ಜ್ಯೋತಿಭಾಸ್ಕರಮ್” ಮತ್ತು ‘Hindu Castes Sests’ ಎಂಬ ೧೮೯೬ ರಲ್ಲಿ ರಚಿತವಾದ ಪುಸ್ತಕಗಳ ಮೇಲೆ ಆಧರಿಸಿದೆ.

 

 

ವೇದಕಾಲದ ವೈಶ್ಯರಾಜರು

ಬ್ರಿಸು-ಫಣಿರಾಜರು

೧. ಧ್ರಷ್ಟರಾಜ

೩. ಭರುನಂದನರಾಜ

೫. ಪ್ರಣಸುರಾಜ

೭. ಕನಿತ್ರರಾಜ

೯. ವಿಲಿನಷ್ಟರಾಜ

೧೧. ಕರಂಧನರಾಜ

 

ವೈಶ್ಯಕುಲದ ಚಕ್ರವರ್ತಿಗಳು

೧. ಚಂದ್ರಗುಪ್ತ-೧

೨. ಸಮುದ್ರಗುಪ್ತ

೩. ಚಂದ್ರಗುಪ್ತ-೨

೪. ಕುಮಾರಗುಪ್ತ

೫. ಸ್ಕಂದ ಗುಪ್ತ

೬. ಬುಧ ಗುಪ್ತ

೭. ನರಸಿಂಹ ಗುಪ್ತ

೮. ಯಶೋದರ್ಶನ್

೯. ಶಿಜಾಜಿತ್ತ

೧೦. ಬಿಂಬಸಾರ

೧೧. ಅಜಾತ ಶತ್ರು

೧೨. ಚಂದ್ರಗುಪ್ತಮೌರ್ಯ

೧೩. ಬಿಂದುಸಾರ

೧೪. ಅಶೋಕವರ್ಧನ

೧೫. ಪ್ರಭಾಕರವರ್ಧನ

೧೬. ವರ್ಷವರ್ಧನ

೧೭. ಸಿನುಕ (ಶಾತವಾಹನ)

೧೮. ವತಸಿಷ್ಟಪ್ರು.