ಸನಾತನ ಧರ್ಮ ಅಥವಾ ಹಿಂದೂ ಧರ್ಮದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೂರನೇ ವರ್ಣವೇ ಆರ್ಯವೈಶ್ಯ ಜನಾಂಗ. ಪುರುಷ ಸೂಕ್ತದ ಪ್ರಕಾರ ಆರ್ಯವೈಶ್ಯರು ಶ್ರೀಮನ್ನಾರಾಯಣನ ತೊಡೆಗಳಿಂದ ಜನಿಸಿದರು. ವೈದಿಕ ವಾಜ್ಞಯದಲ್ಲಿ ಈ ವರ್ಣದವರನ್ನು “ವೈಶ್ಯವರ್ಣ”ವೆಂದು ಕರೆಯಲಾಗಿದೆ. ವಿಶಃಗೋಮತಿ ಗೋಯರ ಎಂಬ ಪರ್ಯಾಯ ಹೆಸರುಗಳೂ ಲಭ್ಯವಾಗುತ್ತವೆ. ವಿಶಃ ಎಂದರೆ ಗುಂಪು ಎಂದರ್ಥ. ಪ್ರಾಯಶಃ ವೇದಕಾಲದಲ್ಲಿ ಬ್ರಹ್ಮ ಕ್ಷತ್ರಿಯರಿಗಿಂತ ವೈಶ್ಯರ ಸಂಖ್ಯೆ ಹೆಚ್ಚಿರಬೇಕು. ಗೋಮತಿಃ ಗೋಮಠಃ ಎಂಬ ಸಂಬೋಧನೆಗಳು ಪಶು ಸಂವರ್ಧನೆ, ಕೃಷಿ ಕರ್ಮಗಳನ್ನು ಸೂಚಿಸುತ್ತವೆ. ವೈಶ್ಯರು ಸ್ವಭಾವತಃ ಈ ಉದ್ಯೋಗಗಳಲ್ಲಿ ತೊಡಗಿದ್ದರು.

ಗೋಮತಿ ಎಂಬ ಪದವೇ ಕಾಲಾನುಕಾಲಕ್ಕೆ ಕೋಮಟಿ ಎಂಬ ರೂಪವನ್ನು ಪಡೆದಿರಬಹುದು. ತೆಲುಗಿನ ಮಹಾಕವಿಗಳಾದ ನನ್ನಯ ತಿಕ್ಕನಾರ್ಯರು ರಚಿಸಿದ ಮಹಾಭಾರತದಲ್ಲಿ ವೈಶ್ಯ ಪದಕ್ಕೆ ಪರ್ಯಾಯ ಪದವಾಗಿ ಕೋಮಟಿ ಎಂಬ ಪದವನ್ನು ಪದೇ ಪದೇ ಉಪಯೋಗಿಸಿದ್ದಾರೆ. ವೇದಕಾಲಾನಂತರ ರಚಿತವಾದ ಧರ್ಮಸೂತ್ರಗಳಲ್ಲಿ ವೈಶ್ಯ ಎಂಬ ಪದವೇ ಪ್ರಚಲಿತವಾಗಿದೆ. ಆದರೆ ಜೈನ ಮತ್ತು ಬೌದ್ಧ ಸಾಹಿತ್ಯದಲ್ಲಿ ಗೋಮತಿ ಎಂಬ ಪದವೇ ಉಪಯೋಗಿಸಲ್ಪಟ್ಟಿದೆ. ಬೌದ್ಧಯುಗದಲ್ಲಿ ಧರ್ಮಾವಲಯಂಬಿಗಳಾದ ವರ್ತಕರು ವ್ಯವಸ್ಥೆಗೊಳಿಸಿದ್ದ “ಗೋಮತಿ ವಿಹಾರ”ವು ಆಕಾಲದಲ್ಲಿ ಮದ್ಯ ಏಷಿಯಾದಲ್ಲಿಯೇ ಅತ್ಯಂತ ಬೃಹತ್ತಾದ ಪ್ರಸಿದ್ಧವಾದ ಧಾರ್ಮಿಕ ಸಂಸ್ಥೆಯಾಗಿತ್ತು.

ಮೌರ್ಯ ಯುಗದಲ್ಲಿ ರಚಿತವಾದ ಪಾಣಿನಿಯ “ಅಷ್ಟಾಧ್ಯಾಯಿ” ಮತ್ತು ಕೌಟಿಲ್ಯನ “ಅರ್ಥಶಾಸ್ತ್ರ” ಮತ್ತು ಜಾತಕ ಕಥೆಗಳಲ್ಲಿ ವೈಶ್ಯರ ಬಗ್ಗೆ ಅಸಂಖ್ಯಾತ ವಿವರಗಳಿವೆ. ಪಾಣಿನಿಯ ಕ್ರಿ.ಪೂ. ಐದನೆಯ ಶತಮಾನದಲ್ಲಿಯೇ ವೈಶ್ಯರನ್ನು “ಆಯಸ್ವಾಮಿ ವೈಶ್ಯರೇ” ಅಂದರೆ “ಆರ್ಯ ಸ್ವಾಮಿ ವೈಶ್ಯಯೇ” ಎಂದು ಸಂಬೋಧಿಸಿದ್ದಾರೆ. ಅಧ್ಯಯನ, ಯಜ್ಞ, ದಾನ, ಕೃಷಿ, ಪಶುಪಾಲನೆ ಮತ್ತು ವಾಣಿಜ್ಯ ಎಂಬ ಷಟ್ಕರ್ಮಗಳೇ ವೈಶ್ಯರ ಜೀವನ ವಿಧಾನವಾಗಿತ್ತು. ಅಶೋಕನ ಕಾಲದಲ್ಲಿ ಕೃಷಿ, ಪಶುಪಾಲನೆ ಮತ್ತು ಕುಳಸ ಕಾರ್ಮನಿರರಾಗಿದ್ದ ಬಹುಸಂಖ್ಯಾತ ವೈಶ್ಯರು ಬೌದ್ಧಮತಾವಲಂಬಿಗಳಾದರು. ಅಧ್ಯಯನ, ಯಜ್ಞ, ದಾನ ಕ್ರಿಯೆಗಳಲ್ಲಿ ಶ್ರದ್ಧೆಯಿಂದ ನಿರತರಾದ ಉಳಿದ ಅಲ್ಪಸಂಖ್ಯಾತರು ವಾಣಿಜ್ಯವೊಂದನ್ನೇ ತಮ್ಮ ಬದುಕಿನ ದಾರಿಯೆಂದು ಸ್ವೀಕರಿಸಿದರು.

ಆರ್ಯಭಟನ ಸಮಕಾಲೀನನೂ, ಶೂನ್ಯ ಸಂಕೇತ ನಿರ್ದೇಶಕನೂ ಆದ ಸಂಹಗುಪ್ತನು ವೈಶ್ಯರು, ವಾಣಿಜ್ಯ, ವ್ಯಾಪ್ತಿ ಮತ್ತು ವಿಧಾನಗಳ ಬಗ್ಗೆ ವಿವರಿಸಿದ್ದಾರೆ. ಸರಕುಗಳ ವಿನಿಮಯವನ್ನು (BARTER) “ನಿರುಮಾನ”ವೆನಿಸಿದರೆ ಮಾರುವುದು”. ವಾಣಿಜ್ಯವೆನಿಸಿದರೆ ಕೊಂಡು ಮಾರುವುದು ಕ್ರಯ ವಿಕ್ಷಯವೆನಿಸಿತ್ತು. ಹಣಕ್ಕೆ ಶಂಗಡಿ ಸಾಲವೆಂದೂ, ಬ್ಯಾಂಕಿಂಗ್‌ವ್ಯವಹಾರಕ್ಕೆ “ಋಣ”ವೆಂದೂ ಕರೆಯುತ್ತಿದ್ದರು. ಪಾಣಿನೀಯ ಸೂತ್ರಗಳಲ್ಲಿ ವಾಣಿಜ್ಯ, ವ್ಯವಹಾರದ ಅನೇಕ ಪಾರಿಭಾಷಿಕ ಪದಗಳು ಕಾಣುತ್ತವೆ. ಜಾತಕ ಕಥೆಗಳಲ್ಲಿ ಧನಾಢ್ಯ ಶ್ರೇಷ್ಠಿಗಳ ಉಲ್ಲೇಖವಿದೆ. ಹಲವಾರು ವಾಣಿಜ್ಯ ಸಂಘಗಳ ಅಧ್ಯಕ್ಷರಾಗಿದ್ದ “ಅನಂತ ಪಿಂಡಕನ” ಹೆಸರು ಪ್ರಸಿದ್ಧ. ಹುಯೆನ್‌ತ್ಸಾಂಗ, ಫಾಹಿಯಾನ್‌ಮುಂತಾದ ಚೈನಾ ದೇಶದ ಯಾತ್ರಿಕರ ವರದಿಗಳಲ್ಲಿ ಕೋಮಟಿಗರ ವ್ಯವಹಾರ ಕುಶಲತೆ, ಧಾರ್ಮಿಕ ಸೇವಾ ಪ್ರವೃತ್ತಿಯ ವಿವರಗಳನ್ನು ಕಾಣುತ್ತೇವೆ. ವಾಣಿಜ್ಯ, ಕೈಗಾರಿಕೆ, ದೇಶ ವಿದೇಶ ವ್ಯಾಪಾರ ಮತ್ತು ಕುಶಲ ಕರ್ಮಗಳು ವೈಶ್ಯರ ಮೂಲ ಧನದ ಮೇಲೆ ಆಧಾರಿತವಾಗಿದ್ದವು. ತಕ್ಷಶಿಲಾ, ನಲಂದಾ ಮುಂತಾದ ವಿದ್ಯಾಪೀಠಗಳಿಗೆ ವೈಶ್ಯರು ಅನೇಕ ದಾನದತ್ತಿಗಳನ್ನು ನೀಡಿದ್ದರು.

ಕೋಮಟಿಗರು ಅಥವಾ ವೈಶ್ಯರು ಭಾರತದ ಎಲ್ಲಾ ಕಡೆ ನೆಲೆಸಿದ್ದಾರೆ. ಆದರೆ ಆಯಾ ದೇಶ, ಕಾಲ ಪರಿಸ್ಥಿತಿಗೆ ಅನುಸರಿಸಿ ಅವರ ಆಚಾರ ವಿಚಾರಗಳು ಆರಾಧನಾ ವಿಧಾನಗಳು ಭಿನ್ನವಾಗಿವೆ. ಅವರೀಗ ಸುಮಾರು ೮೩ ವಿಧವಿಧವಾದ ಹೆಸರುಗಳ ಪಂಗಡಗಳಾಗಿದ್ದಾರೆ. ಆದರೆ ವೈಶ್ಯರ ಆಚರಣೆಗಳಲ್ಲಿ ಷೋಡಕ ಸಂಸ್ಕಾರಗಳಲ್ಲಿ ಅಷ್ಟೊಂದು ಬೇಧಗಳಿಲ್ಲ. ಅವರು ಸಸ್ಯಾಹಾರಿಗಳು ಮತ್ತು ಗೋಬ್ರಾಹ್ಮಣರನ್ನು ಶ್ರದ್ದಾಭಕ್ತಿಗಳಿಂದ ಪೂಜಿಸುವವರು. ಭಾರತದಲ್ಲಿ ಕ್ರಿ.ಪೂ. ಕಾಲದಲ್ಲಿ ಉತ್ತರ ಭಾರತದ ಅಹಿಚ್ಛತ್ರ, ಅಯೋಧ್ಯೆ, ಕೌಸಂಬಿ, ಮಥುರಾ ಮುಂತಾದ ರಾಜ್ಯಗಳ ಅಧಿಪತಿಗಳಾಗಿದ್ದರು. ಹರಿಯಾಣದ ಆಗ್ರೋಹ, ಆಂಧ್ರದ ಪೆನುಗೊಂಡ ಮತ್ತು ಕರ್ನಾಟಕದ ಗೇರುಸೊಪ್ಪಯಲ್ಲಿ ವೈಶ್ಯರಾಜರು ಪರಿಪಾಲನೆ ಮಾಡಿದ ದಾಖಲೆಗಳಿವೆ. ಗುಪ್ತವಂಶದ, ಮೌರ್ಯವಂಶದ ಚಕ್ರವರ್ತಿಗಳು ವೈಶ್ಯರೇ ಆಗಿದ್ದರು. ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿ ವೈಶ್ಯರು ಬಹುತೇಕ ವ್ಯಾಪಾರ ಮತ್ತು ವ್ಯವಸಾಯದಲ್ಲಿ ಹಣಕಾಸಿನ ವ್ಯವಹಾರದಲ್ಲಿ ನ್ಯಾಯವಾದಿ ಮುಂತಾದ ವೃತ್ತಿಗಳಲ್ಲಿ ತೊಡಗಿದ್ದರು.

ಕೋಮಟಿಗರದು ಸುವ್ಯವಸ್ಥಿತವಾದ ಜಾತಿಯಾಗಿದೆ. ಅವರು ನೆಲೆಸಿರುವ ಗ್ರಾಮ, ಪಟ್ಟಣದಲ್ಲಿ “ಒಎದ್ದ ಸೆಟ್ಟಿ” ಅಥವಾ “ಹಿರೋಜೋತ್ರ-ಶೆಟ್ಟರು” ಇರುತ್ತಾರೆ. ಕಳಿಂಗ ವೈಶ್ಯರೆಂಬವರಲ್ಲಿ ಆತನನ್ನು ಮರಿಸೆಟ್ಟಿ ಅಥವಾ ಸೇನಾಪತಿ ಎಂದು ಕರೆಯುತ್ತಾರೆ. ಕಳಿಂಗ ವೈಶ್ಯರು ಆಂಧ್ರಪ್ರದೇಶದ ಶ್ರೀಕಾಕುಳಮ ಮತ್ತು ವಿಶಾಖಪಟ್ಟಣ ಜಿಲ್ಲೆಗಳಲ್ಲಿ ಮಾತ್ರ ಇದ್ದಾರೆ. ಇವರು ಶ್ರೀಕೃಷ್ಣ ದೇವರಾಯರ ಕಳಿಂಗ ದಿಗ್ವಿಜಯದ ನಂತರ ಕಳಿಂಗದಿಂದ ವಲಸೆ ಬಂದವರಿರಬೇಕು.ಇವರ ಮಾತೃಭಾಷೆ ತೆಲುಗು. ಇವರ ಆಚಾರ-ವಿಚಾರಗಳು ಉಳಿದ ವೈಶ್ಯರಂತೆಯೇ ಇವೆ. ಆದರೆ ಇವರು ಮಾಂಸಾಹಾರಿಗಳು. ಇವರಲ್ಲಿ ಅನೇಕ ಹಳ್ಳಿಗಳಲ್ಲಿ ಕುಲರಾಜ ಅಥವಾ ವೈಶ್ಯರಾಜನಿರುತ್ತಾರೆ. ಜನಾಂಗದ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಜನಾಂಗದ ಸಮಾವೇಶಗಳನ್ನು ಏರ್ಪಡಿಸಲು ಮುಮ್ಮಡಿ ಸೆಟ್ಟಿಯ ನೆರವು ಪಡೆಯುತ್ತಾರೆ. ಇವರು ಅಪರಾಧಿಗಳಿಗೆ ದಂಡ, ಶಿಕ್ಷೆ ಮತ್ತು ಬಹಿಷ್ಕಾರ ವಿಧಿಸುತ್ತಿದ್ದರು. ಜಾತಿಯ ಮುಖಂಡರೊಂದಿಗೆ ಸಮಾಲೋಚನೆ ಮಾಡಿ ಸರ್ವ ಸಮ್ಮತ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದರು. ಕ್ಲಿಷ್ಟ ಸಮಸ್ಯೆಗಳನ್ನು ಪರಿಹರಿಸಲು ನ್ಯಾಯಾಲಯದ ನೆರವನ್ನೂ ಪಡೆಯುತ್ತಿದ್ದರು.

ಬರ್ಮಾ ಮತ್ತು ನಮ್ಮ ದೇಶದ ನಡುವೆ ಅಸ್ಸಾಮಿಗೆ ಸೇರಿದ ಪಟ್ನಾಯ್‌ಪರ್ವತ ಶ್ರೇಣಿಯಿದೆ. ಅಲ್ಲಿರುವ ಗಿರಿಜನರಲ್ಲಿ ಕಮ್ಮಾಗಳೆಂಬ ಒಂದು ಬುಡಕಟ್ಟು ಇದೆ. ಇವರ ದೇವತೆಯ ಹೆಸರು ಕೋಮಟೇಶ್ವರಿ. ಗೋಮಟೇಶ್ವರಿ ಎಂಬ ದೇವತಾ ವಿಗ್ರಹವನ್ನು ಮಹಾಭಾರತ ಯುದ್ಧದಲ್ಲಿ ನರಕಾಸುರನ ಮಗನಾದ ಭಗದತ್ತನು ತನ್ನ ಬಲಭುಜದ ಮೇಲೆ ದರಿಸಿದನೆಂದು ವರ್ಣಿಸಲಾಗಿದೆ. ಪಟ್ನಾಯ ಪರ್ವತಗಳ ಪಕ್ಕದಲ್ಲಿ ಮಣಿಪುರವಿದೆ. ಶ್ರೀ ಕನ್ನಿಕಾ ಪುರಾಣದಲ್ಲಿನ ಚಿತ್ರಕಂಠನೆಂಬ ಗಂಧರ್ವನು ಮಣಿಪುರಾಧೀಶನಾಗಿದ್ದನು. ಪಟ್ನಾಯ ಬೆಟ್ಟಗಳ ತಾಲೂಕು ಪತಕೋಯ, ಪತ ಎಂದರೆ ದೊಡ್ಡದು. ಕೋಯಿ ಎಂದರೆ ಬೆಟ್ಟ. ತೆಲುಗಿನಲ್ಲಿ ಪೆನುಕೊಂಡ ಎಂದರೆ ದೊಡ್ಡ ಬೆಟ್ಟ ಅಲ್ಲವೇ?

ಕೋಮಟಿಗರು ಶಿವನ ಅಪ್ಪಣೆಯ ಪ್ರಕಾರ ಕೈಲಾಸದಿಂದ ಭೂಮಿಗೆ ಬಂದರು. ವಿಶ್ವಕರ್ಮನು ನಿರ್ಮಿಸಿದ ಹದಿನೆಂಟು ಪಟ್ಟಣಗಳಲ್ಲಿ (ಪೆನುಗೊಂಡ, ಘಂಟಸಾಲ, ಪುರಂಧ್ರಿಗುಣ, ಪಾಲಂ, ವೀರನಾರಾಯಣ, ಏಲಾಪುರ, ವಿಶಾಖಾ, ಶಿವಪುರ, ಧನದಪುರ, ಧರ್ಮಾವರ, ಜಗನ್ನಾಥ, ಕಳಿಂಗ ಪಟ್ಟಣ) ನೆಲೆಸಿದರು. ಅರವತ್ತುನಾಲ್ಕು ಯೋಜನೆ ವಿಸ್ತಾರದಲ್ಲಿ ಹರಡಿದ ಈ ಪಟ್ಟಣಗಳ ಪ್ರದೇಶಕ್ಕೆ ಪೂರ್ವದಲ್ಲಿ ಗೋದಾವರಿ, ದಕ್ಷಿಣದಲ್ಲಿ ಸಮುದ್ರ, ಪಶ್ಚಿಮದಲ್ಲಿ ಗೋಸ್ತನಿ ಮತ್ತು ಉತ್ತರದಲ್ಲಿ ಗಂಗಾನದಿಗಳು ಸುತ್ತುವರಿದಿವೆ. ಈ ಪ್ರದೇಶಕ್ಕೆ ಪೆನುಗೊಂಡೆಯೇ ರಾಜಧಾನಿ. ಸ್ಕಂದ ಪುರಾಣದ ಊರುಜೋಪಾಖ್ಯಾನ ಪ್ರಸಂಗದಲ್ಲಿ ಆರ್ಯವೈಶ್ಯರ ಆರಾಧ್ಯ ದೇವತೆಯಾದ ವಾಸವಿ ಕನ್ನಿಕಾ ಪರಮೇಶ್ವರಿ ವೃತ್ತಾಂತವು ವರ್ಣಿತವಾಗಿದೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಪೆನುಗೊಂಡನಲ್ಲಿ ಶ್ರೀನಗರೇಶ್ವರ ಮತ್ತು ಜನಾರ್ಧನ ಸ್ವಾಮಿಯ ದೇವಾಲಯವಿದೆ. ಕುಸುಮ ಶ್ರೇಷ್ಠಿಯೇ ಈ ಊರಿನ ಅರಸು. ಅವನು ಪುತ್ರಕಾಮೇಷ್ಠಿಯಾಗ ಮಾಡಿ ಒಬ್ಬ ಮಗನನ್ನೂ, ಮಗಳನ್ನು ಪಡೆದನು. ಮಗನ ಹೆಸರು ವಿರೂಪಾಕ್ಷ, ಮಗಳ ಹೆಸರು ವಾಸವಿ. ವಾಸವಿ ಅತ್ಯಂತ ಸುಂದರಿಯಾಗಿದ್ದಳು. ಇವರ ಕುಲಗುರವೇ ಭಾಸ್ಕರಾಚಾರ್ಯ. ಆ ಕಾಲದಲ್ಲಿ ರಾಜಮಹೇಂದ್ರವರದಲ್ಲಿ ಚಂದ್ರವಂಶದ ವಿಜಯಾರ್ಕನ ಮಗ ವಿಷ್ಣುವರ್ಧನನು ದೊರೆಯಾಗಿದ್ದನು. ವಿಷ್ಣುವರ್ಧನನು ರಾಜ್ಯ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಾ ಪೆನುಗೊಂಡೆಗೆ ಬಂದನು. ಅವನನ್ನು ಗೌರವಾದರದಿಂದ ಸ್ವಾಗತಿಸಲಾಯಿತು. ಅವನಿಗೆ ಸುಮಂಗಲೆಯರು ಸಂಪ್ರದಾಯದಂತೆ ಆರತಿ ಬೆಳಗಿದರು. ಅವರಲ್ಲಿ ಎದ್ದುಕಾಣುವ ಅಪಾರ ಸುಂದರಿ ವಾಸವಿಯನ್ನು ಕಂಡು ಮಹಾಪರವಶನಾದನು. ಅವಳನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಭಿನ್ನವಿಸಿದನು. ಆದರೆ ಕುಸುಮಶ್ರೇಷ್ಠಿಯು ಇದು ಅಧರ್ಮವೆಂದು ನಿರಾಕರಿಸಿದನು. ಈಗಾಗಲೇ ವಿವಾಹಿತನಾದವನು, ಅನ್ಯ ಕುಲದವನು. ಆದ್ದರಿಂದ ಮಗಳನ್ನು ಕೊಡಲಾರೆ ಎಂದನು. ಆಗ ವಿಷ್ಣುವರ್ಧನನು ಬಲಾತ್ಕಾರದಿಂದ ವಾಸವಿಯನ್ನು ಕೊಂಡೊಯ್ದು ಪ್ರಾಣಿಗ್ರಹಣ ಮಾಡುವುದಾಗಿ ಬೆದರಿಸಿದನು. ಕಾಲಾವಕಾಶ ಪಡೆಯುವ ಉದ್ದೇಶದಿಂದ ಹಿರಿಯರೆಲ್ಲಾ ಸೇರಿ ರಾಜನಿಗೆ ಕಪ್ಪ ಕಾಣಿಕೆಗಳನ್ನು ನೀಡಿ ಮತಧರ್ಮದ ವಿಷಯವಾಗಿರೋದರಿಂದ ಎಲ್ಲರೂ ಸೇರಿ ಚರ್ಚಿಸಿ ಮನವೊಲಿಸಿ ತಿಳಿಸುವುದಾಗಿ ರಾಜನನ್ನು ಒಪ್ಪಿಸಿ ಕಳುಹಿಸಿದರು. ಆನಂತರ ಹದಿನೆಂಟು ಪಟ್ಟಣದ ಸಮಸ್ತ ಹಿರಿಯರು ಸೇರಿ ಕುಲಗುರುಗಳ ನೇತೃತ್ವದಲ್ಲಿ ಸಾಧಕ ಬಾಧಕಗಳನ್ನು ಚರ್ಚಿಸಿದರು. ಬಹುಸಂಖ್ಯಾತರು ಸಾಮ್ರಾಟನಿಗೆ ವಿರುದ್ಧವಾಗಿ ನಡೆಯುವುದು ಹಿತವಲ್ಲ. ರಾಜನಿಗೆ ವಾಸವಿಯನ್ನು ಮದುವೆ ಮಾಡಿಕೊಡುವುದೇ ಉಚಿತವೆಂದರು. ಆದರೆ ಮುಖ್ಯವಾಗಿ ವಾಸವಿ ಮತ್ತು ಅವಳೊಂದಿಗೆ ಅನೇಕರು ಬಲಾತ್ಕಾರಕ್ಕೆ ಅಧರ್ಮಕ್ಕೆ ಮಣಿಯಬಾರದೆಂದು ತೀರ್ಮಾನಿಸಿದರು. ವಿಷ್ಣುವರ್ಧನನು ಇದನ್ನು ಅರಿತು ಸೈನ್ಯ ಸಮೇತನಾಗಿ ಪೆನುಗೊಂಡವನ್ನು ಮುತ್ತಿದನು.

ಆಗ ವಾಸವಿಯು ದೇಶ ರಕ್ಷಣೆ, ಧರ್ಮ ರಕ್ಷಣೆ ಮತ್ತು ಪ್ರಜಾಹಿತವೇ ರಾಜಧರ್ಮ. ಆದರೆ ವಿಷ್ಣುವರ್ಧನನು ಕಾಮಾಂಧನಾಗಿ ತಪ್ಪು ಮಾಡುತ್ತಿದ್ದಾನೆ. ಒಂದು ಹೆಣ್ಣಿನ ಸಲುವಾಗಿ ಯುದ್ಧ ಮಾಡಿ ಸಾವಿರಾರು ಜನರ ಸಾವು ನೋವಿಗೆ ಕಾರಣನಾಗುತ್ತಿದ್ದಾನೆ. ತಾನು ಬಯಸಿದ ಕನ್ಯೆಯ ಅಭಿಪ್ರಾಯವನ್ನು ತಿಳಿಯುವ ಸೌಜನ್ಯವೂ ಅವನಿಗಿಲ್ಲ. ದುಷ್ಟರಾಜನಿಗೆ ತಾನೆಂದೂ ವಶವಾಗಬಾರದು. ವಶವಾಗುವುದಿಲ್ಲ. ಹಾಗೆಯೇ ಮುಗ್ಧ ಜನರನ್ನು, ಸೈನಿಕರನ್ನೂ ಮತ್ತಿತರರನ್ನು ಅನವಶ್ಯಕ ಸಾವು-ನೋವುಗಳಿಂದ ಪಾರು ಮಾಡಬೇಕು. ಅಹಿಂಸೆ, ಸತ್ಯನಿಷ್ಠೆಯಿಂದಲೂ, ತ್ಯಾಗದಿಂದಲೂ ರಾಜದರ್ಪವನ್ನು ಎದುರಿಸಬೇಕು ಎಂದು ನಿರ್ಧರಿಸಿದಳು. ವಿಷ್ಣುವರ್ಧನ ರಾಜನ ರಾಯಭಾರಿಗಳು ಕೂಡಾ ವಾಸವಿಯ ತತ್ವಕ್ಕೆ ಮಾರುಹೋಗಿ ಪೆನುಗೊಂಡೆಯಲ್ಲಿಯೇ ನೆಲೆನಿಂತು ವಾಸವಿಯ ರಕ್ಷಣೆಗೆ ಕಂಕಣಬದ್ಧರಾದರು. ಅವರನ್ನೇ ವೀರಮುಷ್ಠಿಗಳೆಂದು ಕರೆಯುತ್ತಾರೆ. ವಿಷ್ಣುವರ್ಧನನು ಪೆನುಗೊಂಡೆಯ ಪ್ರವೇಶ ಮಾಡುವ ಮೊದಲೇ ವಾಸವಿಯು ತನ್ನೊಡನಿದ್ದ ೧೦೨ ಗೋತ್ರರೊಡನೆ ಅಗ್ನಿ ಪ್ರವೇಶವಾದಿ ಆತ್ಮಾಹುತಿಯಾಗಲು ನಿರ್ಧರಿಸಿ ಎಲ್ಲಾ ವ್ಯವಸ್ಥೆ ಮಾಡಿಕೊಂಡಳು. ಕೊನೆಯದಾಗಿ ವಾಸವಿಯು ತನ್ನ ಕುಲಬಾಂಧವರಿಗೆ ಈ ಮಾತುಗಳನ್ನು ತಿಳಿಸಿದಳು.

“ನಿಮ್ಮ ಮನೆಗಳಲ್ಲಿ ಲಕ್ಷ್ಮೀ ಸರಸ್ವತಿಯರು ಸದಾ ಸಂತೋಷದಿಂದ ನೆಲೆಸಿರಲಿ. “ಇಲ್ಲ” ಎಂಬುದು ನಿಮ್ಮಲ್ಲಿ ಇಲ್ಲವಾಗಲಿ, ದಾನ-ಧರ್ಮ, ಪರೋಪಕಾರ, ದೈವಭಕ್ತಿ, ದೀನರಕ್ಷಣೆ, ಅತಿಥಿ ಅರ್ಬಯಾಗತರ ಪೂಜೆಗಳಲ್ಲಿ ನಿಮಗೆ ಶ್ರದ್ಧೆಯಿರಲಿ. ವಿದ್ಯೆ, ವಾಣಿಜ್ಯಗಳಲ್ಲಿ ಪ್ರಖ್ಯಾತರಾಗಿ ರಾಜಸ್ಥಾನ ಮಾನಗಳಿಗೆ ಪಾತ್ರರಾಗಬೇಕು. ಪಂಡಿತರು, ಕವೀಶ್ವರರು ಜಗದ್ಗುರುಗಳು ನಿಮ್ಮೊಂದಿಗೆ ಪ್ರಕಾಶಿಸಲಿ. ಯಜ್ಞಯಾಗಾದಿ, ಷಟ್ಕರ್ಮನಿರತರಾಗಿರಿ. ಧರ್ಮೋದ್ಧರಣ ದೀಕ್ಷಾ ಬದ್ಧರಾಗಿ ಪ್ರಸಿದ್ಧರಾಗಬೇಕು” ಎಂದು ಈ ಭಿನ್ನಮತ ಭಾಗ್ಯವನ್ನು ಕಂಡು ತಲೆಯೊಡೆದು ಮರಣಿದಳು.

ಅನಂತರ ಪೆನುಗೊಂಡೆಯ ನಗರೇಶ್ವರ ದೇವಸ್ಥಾನದಲ್ಲಿ ವಾಸವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ವೈಶ್ಯರಿಗೆ ವಾಸವಿಯು ಆರಾಧ್ಯ ದೇವತೆಯಾದಳು. ದಕ್ಷಿಣ ಭಾರತದ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ ವೈಶ್ಯರು ಶ್ರೀ ಕನ್ನಿಕಾಪರಮೇಶ್ವರಿ ದೇವಿಯ ಭಕ್ತರಾಗಿದ್ದಾರೆ. ಜನಾಂಗಗಳು ವಲಸೆ ಹೋದ ಕಾರಣ ದಕ್ಷಿಣ ಮಹಾರಾಷ್ಟ್ರ ಮತ್ತು ಓರಿಸ್ಸಾದ ಕೆಲ ಭಾಗಗಳಲ್ಲಿಯೂ ವೈಶ್ಯರು ನೆಲೆಸಿದ್ದಾರೆ. ಆದರೆ ಗೋಮಾಂತಕ, ಕೊಂಕಣ, ಕನ್ನಡ ಜಿಲ್ಲೆಗಳು ಮತ್ತು ಕೇರಳದಲ್ಲಿ ಅವರು ಇಲ್ಲವೇ ಇಲ್ಲವೆಂದು ಹೇಳಬಹುದು. ಅತ್ಯಂತ ಧರ್ಮಿಷ್ಠರೆನಿಸಿಕೊಂಡ ಜನಸಮುದಾಯದವೆಂದು ವೈಶ್ಯರು ಪ್ರಸಿದ್ದರಾಗಿದ್ದಾರೆ.

ಈ ಜನಾಂಗದ ವಿಶೇಷವೆಂದರೆ ಇವರು ವೈಷ್ಣವ, ಶ್ರೀ ವೈಷ್ಣವ, ಶಾಕ್ತ ಪಂಥಗಳ ಮಠಗಳಿಗೂ, ಉತ್ತರ ಕರ್ನಾಟಕ ಮತ್ತು ಹಳೇ ಮೈಸೂರಿನ ವೀರಶೈವ ಮಠಗಳಿಗೂ ಭಕ್ತರಾಗಿ ನಡೆದುಕೊಳ್ಳುತ್ತಾರೆ. ಆದರೆ ಇವರು ಮುಖ್ಯವಾಗಿ ಶಿವಾರಾಧಕರು. ಇವರಲ್ಲಿ ವಿಧವಾ ವಿವಾಹ, ವಿವಾಹ ವಿಚ್ಚೇದನ ಸಲ್ಲದು. ಮೃತರಿಗೆ ಅಗ್ನಿ ನಮಸ್ಕಾರ ಮಾಡುತ್ತಾರೆ. ಉತ್ತರ ಮತ್ತು ಮಧ್ಯ ಕರ್ನಾಟಕದ ವೈಶ್ಯರ ಮನೆಮಾತು ಕನ್ನಡ. ಆದರೆ ಸಾಮಾನ್ಯವಾಗಿ ಎಲ್ಲರಿಗೂ ತೆಲುಗು ಬರುತ್ತದೆ. ವಿಜಯನಗರ ಸಾಮ್ರಾಜ್ಯದ ಕಾಲದವರೆಗೆ ಭಾಷೆಗಳು ಜನರನ್ನು ಒಂದು ಮಾಡುವ ಸಾಧನಗಳಾಗಿದ್ದವು. ಆಗ ಭಾಷೆ ಬೇಧವೆ ಇರಲಿಲ್ಲ. ವ್ಯಾಪಾರಸ್ಥರು ಪವಿತ್ರ ವ್ಯವಹಾರಕ್ಕೆಂದು ಅನೇಕ ಭಾಷೆಗಳನ್ನು ಕಲಿಯಬೇಕಾಗುತ್ತದೆ. ಕೆಲ ಊರಿನ ವೈಶ್ಯರು ಸಂಕೇಶ್ವರ ಸ್ವಾಮಿಯೊಬ್ಬರಿಗೆ ನಡೆದುಕೊಳ್ಳುತ್ತಿದ್ದಂತೆ. ಬಹುಜನರ ಬಳ್ಳಾರಿ ಜಿಲ್ಲೆಯ ನಾರಾಯಣದೇವರಕೆರೆ ಗ್ರಾಮದ ಕಬೀರ ಭಾಸ್ಕರಾಚಾರ್ಯರ ಶಿಷ್ಯರಾಗಿದ್ದರು. ನಾರಾಯಣದೇವರಕೆರೆ ಗ್ರಾಮವಿಂದು ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾಗಿದೆ. ಜನಾಂಗದ ಸಮಸ್ಯೆಗಳು, ಧಾರ್ಮಿಕ ವಿವಾದಗಳು ಮತ್ತು ಕುಟುಂಬದ ತಂಟೆಗಳು ಕೂಡಾ ಭಾಸ್ಕರಾಚಾರ್ಯರ ಆಸ್ಥಾನದಲ್ಲಿ ಇತ್ಯಾರ್ಥವಾಗುತ್ತಿದ್ದವು. ಅವರೇ ಜನಾಂಗದ ಸುಪ್ರಿಂಕೋರ್ಟ್‌ಎನಿಸಿದ್ದರು. ಈಗ ಈ ಮನೆತನದವರು ಸರಕಾರಿ ನೌಕರರಾಗಿದ್ದಾರೆ.

ಕೋಮಟಿಗರಲ್ಲಿ ಸಗೋತ್ರ ಸಂಬಂಧ ನಿಷಿದ್ಧ. ಬಹುತೇಕ ಬ್ರಾಹ್ಮಣರು ಅನುಸರಿಸಿ ಜಾತಕ ಸೂತಕಾದಿ ಕರ್ಮಗಳನ್ನು ಮಾಡುತ್ತಾರೆ. ಉಪನಯನವಾದ ಮೇಲೆ ಸಂಧ್ಯಾವಂದನೆ, ಗಾಯತ್ರಿ ಜಪ ಮಾಡುತ್ತಾರೆ. ಇವರಿಗೆ ಓದು, ಬರಹ, ಲೆಕ್ಕ ಪ್ರಧಾನವಾದುದರಿಂದ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುತ್ತಾರೆ. ಕೂಡುವ, ಕಳೆಯುವ, ಗುಣಿಸುವ, ಭಾಗಿಸುವ ಮತ್ತು ಶೇಕಡವಾಡು ಕಂಡು ಹಿಡಿವ ಲೆಕ್ಕಗಳನ್ನು ಬಾಯಿಂದಲೇ ಮಾಡುತ್ತಾರೆ. ಕಾಲಮಾನ ಪರಿಸ್ಥಿತಿಗೆ ಅನುಸಿರಿಸಿದ ಎಲ್ಲ ಜನಾಂಗಗಳಂತೆ ವೈಶ್ಯರೂ ಬದಲಾಗಿ ಸೀಮೋಲ್ಲಂಘನೆ ಮಾಡಿದ್ದಾರೆ. ಸಣ್ಣ ಸಣ್ಣ ವ್ಯಾಪಾರದಿಂದ ಬೃಹತ್‌ಉದ್ದಿಮೆಗಳೆಡೆಗೆ ಹಳ್ಳಿ ಹಳ್ಳಿಯಿಂದ ಪಟ್ಟಣದ ಕಡೆಗೆ ದೇಶ ವಿದೇಶಗಳೆಡೆಗೆ ಅವರು ನಡೆದಿದ್ದಾರೆ. ಜಾತಿಯ ಚೌಕಟ್ಟನ್ನು ಸೋದರಿಕೆ ಸಂಬಂಧ ಪರಿಧಿಯನ್ನು ದಾಟಿ ಅನೇಕ ಅಂತರಜಾತಿಯ ಮತ್ತು ಅಂತರ ಜನಾಂಗೀಯ ಸಂಬಂಧಗಳನ್ನು ಮಾಡಿದ್ದಾರೆ.

ವೈಶ್ಯರ ಭಾರತದ ನಾನಾ ರಾಜ್ಯಗಳಲ್ಲಿ, ನಗರಗಳಲ್ಲಿ ಅಲ್ಲದೇ ವಿದೇಶಗಳಲ್ಲಿ ನೆಲೆಸಿದ್ದಾರೆ. ವೈದ್ಯರೂ, ಇಂಜಿನಿಯರ್, ತಂತ್ರಜ್ಞರೂ, ವಿಜ್ಞಾನಿಗಳೂ, ನ್ಯಾಯಾಧೀಶರೂ, ಅಧಿಕಾರಿಗಳೂ, ವಕೀಲರೂ, ಲೆಕ್ಕಿಗರೂ, ವೈಮಾನಿಕರೂ, ಯೋಜನಾ ಸ್ಥಳಗಳಲ್ಲಿ ಅಲ್ಲದೇ ನಗರದ ಯೋಧರೂ, ರಾಜತಾಂತ್ರಿಕರೂ, ಪತ್ರಕರ್ತರೂ, ಕಲಾವಿದರೂ, ಲೇಖಕರೂ ಆಗುತ್ತಿರುವ ಹೊಸಪೀಳಿಗೆಯ ಜನರು ಪ್ರತಿಭೆಗೆ ತಕ್ಕ ಅವಕಾಶ ಮತ್ತು ಅನುಕೂಲಗಳ ಅನ್ವೇಷಣೆಯಲ್ಲಿ ಎಲ್ಲೆಲ್ಲಿಗೋ ಪಯಣಿಸುತ್ತಿದ್ದಾರೆ. ಅನೇಕ ಪ್ರಸಿದ್ಧ ವಿದ್ಯಾಸಂಸ್ಥೆಗಳೂ, ಬ್ಯಾಂಕ್‌, ಕಲ್ಯಾಣ ಮಂಟಪ, ಅನ್ನಛತ್ರ ಮುಂತಾದ ಧಾರ್ಮಿಕ ಸಂಸ್ಥೆಗಳಲ್ಲದೇ, ಸಹಕಾರ ರಂಗದಲ್ಲಿ ಕೂಡಾ ಯಶಸ್ವೀ ಸಂಸ್ಥೆಗಳು ವೈಶ್ಯರವೇ ಆಗಿವೆ. ಪ್ರತಿಯೊಂದು ಗ್ರಾಮದಲ್ಲಿ ಮಹಿಳಾ ಮತ್ತು ಯುವಜನ ಸಂಘಗಳು ಕೆಲಸ ಮಾಡುತ್ತಿದೆ. ಅರ್ಹ ಮತ್ತು ಬಡ ವಿದ್ಯಾರ್ಥಿಗಳಿಗಾಗಿ ಅನೇಕ ವಿದ್ಯಾರ್ಥಿ/ವಿದ್ಯಾರ್ಥಿನಿ ನಿಲಯಗಳೂ, ಶಿಷ್ಯ ವೇತನ ನೀಡುವ ಸಂಸ್ಥೆಗಳು ನಡೆಯುತ್ತಿವೆ.

ಎಲ್ಲ ಜನಾಂಗಗಳಿಗಿರುವಂತೆ ಕೋಮಟಿಗರಿಗೂ ಒಂದು ಜನಾಂಗೀಯ ಸಂಸ್ಥೆಯ ಒಬ್ಬ ಗುರುವಿನ ಅವಶ್ಯಕತೆಯಿದ್ದು, ಹಿಂದಿನ ಮಠಮಾನ್ಯಗಳು ತೆರೆಮರೆಗೆ ಸೇರಿದ್ದರಿಂದ ಬ್ರಾಹ್ಮಣ ಮಠಗಳು ತಕ್ಕ ಮಾನ್ಯತೆ ನೀಡದ ಕಾರಣ ಹಿರಿಯರೆಲ್ಲಾ ಸೇರಿ ವಾಸವೀ ಪೀಠವನ್ನು ಸ್ಥಾಪಿಸಿದ್ದಾರೆ. ಆದವಾನಿಯ ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿ, ಬಾಲ್ಯದಿಂದಲೂ ಆಧ್ಯಾತ್ಮದಲ್ಲಿ ಆಸಕ್ತರಾದ ಕಾರಣ ಸನ್ಮಾನ ಸ್ವೀಕರಿಸಿ ಸರ್ವಸಂಗ ಪರಿತ್ಯಾಗಿಯಾಗಿ ಸಾಧನೆಯಲ್ಲಿ ತೊಡಗಿದ್ದ  ಚಂದ್ರಶೇಖರಾನಂದ ಗಿರಿಸ್ವಾಮಿಯವರ ಪ್ರಪ್ರಥಮ ವೈಶ್ಯ ಗುರುಗಳೆಂದು ಪೀಠಾಹೋರಣ ಮಾಡಿಸಲಾಗಿದೆ. ಮಠ, ಸಿಂಹಾಸನ, ಕಿರೀಟ, ಪಲ್ಲಕ್ಕಿ, ಕಾಣಿಕೆ ಮುಂತಾದವುಗಳನ್ನು ವಿರೋಧಿಸುವ ಈ ತಪಸ್ವಿಗಳು ಕರ್ನಾಟಕದಾದ್ಯಂತ ಸಂಚರಿಸುತ್ತಾ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಶ್ರೀ ಕನ್ಯಕಾ ಪರಮೇಶ್ವರಿಯ ಒಕ್ಕಲೆನಿಸುವ ಆರ್ಯವೈಶ್ಯ ಜನಾಂಗದವರು ಕರ್ನಾಟಕದ ಹಳೆಯ ಮೈಸೂರು ಪ್ರಾಂತದ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ರಾಯಚೂರು, ಬಳ್ಳಾರಿ, ಕೊಪ್ಪಳ, ಗದಗ, ಧಾರವಾಡ ಮತ್ತು ಬಾಗಲಕೋಟ ಜಿಲ್ಲೆಗಳಲ್ಲೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ವಿಜಾಪುರ, ಬೆಳಗಾವಿ, ಹಾವೇರಿ ಮತ್ತು ಕಾರವಾಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ವಿರಳವಾಗಿ ನೆಲೆಸಿದ್ದಾರೆ. ಕೊಡಗು, ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತೀ ಕಡಿಮೆ ಜನರಿದ್ದಾರೆ. ಇವರು ಎಲ್ಲಿದ್ದರೆ ಅಲ್ಲಿಯವರೊಂದಿಗೆ ಹೊಂದಿಕೊಂಡು ಹಾಲು ಸಕ್ಕರೆಯಂತೆ ಜೀವಿಸುತ್ತಾರೆ. ಆದರೆ ತಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಜೀವನದಲ್ಲಿ ಎಲ್ಲಿದ್ದರೂ ಒಂದೇ ರೀತಿಯ ಸಾಂಸ್ಕೃತಿಕ ಬದುಕು ಇವರದಾಗಿದೆ.

ಇವರಿಗೆ ಪ್ರಿಯವಾದ ಭಾಷೆ ತೆಲುಗು. ಒಂದೊಂದು ಕಡೆ ಒಂದೊಂದು ರೀತಿಯ ತೆಲುಗು ಬಳಕೆಯಲ್ಲಿದೆ. ಕರ್ನಾಟಕದ ಈ ಜನರು ತೆಲುಗಿನಲ್ಲಿ ಕನ್ನಡ ಪದಗಳೇ ಅಧಿಕ. ಹಾಗೆ ನೋಡಿದರೆ ರಾಯಲಸೀಮೆಯೆಂದು ಪ್ರಸಿದ್ಧವಾದ ಅನಂತಪುರ, ಕಡಪ, ಕರ್ನೂಲು ಮತ್ತು ಕಿತ್ತೂರು ಜಿಲ್ಲೆಗಳಿಂದ ವಲಸೆ ಬಂದು ಕರ್ನಾಟಕದಲ್ಲಿ ನೆಲೆಸಿರುವವರೇ ಅಧಿಕ. ತಾಳಿಕೋಟೆ ಕದನದ ನಂತರ ಉಳ್ಳವರೆಲ್ಲಾ ಪ್ರಾಣ ಮತ್ತು ಧರ್ಮ ರಕ್ಷಣೆಗೆಂದು ಮೈಸೂರು ಒಡೆಯರ ರಾಜ್ಯಕ್ಕೆ ವಲಸೆ ಬಂದಿರಬೇಕು. ಹೀಗಾಗಿ ರಾಯಲಸೀಮೆಯ ಅನಂತಪುರ, ಧರ್ಮಾವರ, ಹಿಂದೂಪುರ, ಕದರಿ ಮುಂತಾದ ಕಡೆಯ ವಿಶಿಷ್ಟ ತೆಲುಗಿನ ಮತ್ತೊಂದು ಪರಿಯನ್ನು ಹಳೇ ಮೈಸೂರಿನ ಸೆಟ್ಟರ್ ಮಾತಿನಲ್ಲಿ ಕಾಣಬಹುದು. ಆದರೆ ಇವರೆಲ್ಲಾ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೇ ಕಳಿಸಿದರು. ಕನ್ನಡ ಪತ್ರಿಕೆಗಳನ್ನು ಬೆಂಬಲಿಸಿದರು.

ಆರ್ಯ ವೈಶ್ಯರು ತುಂಗಭದ್ರಾ ನದಿಯ ಉತ್ತರಕ್ಕೆ ವಾಸಿಸುವರೆಲ್ಲಾ ತಮ್ಮ ಹೆಸರುಗಳನ್ನು ಅಲ್ಲಲ್ಲಿಯ ಪದ್ಧತಿಯಂತೆ ಮಾರ್ಪಡಿಸಿದ್ದರು. ನನ್ನ ಹೆಸರು ಬಳ್ಳಾರಿ ಜಿಲ್ಲೆಯ ಪದ್ಧತಿಯಂತಾದರೆ ಪಿ.ಗುರುಮೂರ್ತಿ ಅಥವಾ ಪಿ.ಗುರುಮೂರ್ತಿ ಸೆಟ್ಟಿ ಎಂದಾಗುತ್ತದೆ. ಉತ್ತರ ಕರ್ನಾಟಕದವರ ರೀತಿಯಲ್ಲಾದರೆ, ಗುರುಮೂರ್ತಿ ವಿರುಪಣ್ಣ ಪೆಂಡಕೂರು ಎಂದಾಗುತ್ತದೆ. ಮೊದಲು ನನ್ನ ಹೆಸರು, ತಂದೆಯ ಹೆಸರು ಅನಂತರ ಮನೆತನದ ಹೆಸರು. ಅದೇ ಮೈಸೂರಿನವರ ರೀತಿಯಲ್ಲಾದರೆ ಪಿ.ವಿ.ಗುರುಮೂರ್ತಿ ಸೆಟ್ಟಿ ಅಥವಾ ಗುಪ್ತ ಎಂದಾಗುತ್ತದೆ. ಮೊದಲು ಮನೆತನದ ಹೆಸರು, ತಂದೆಯ ಹೆಸರು ಅನಂತರ ತನ್ನ ಹೆಸರು ಇರುತ್ತದೆ. ವಾಡಿಕೆಯಂತೆ ಗುಪ್ತ ಅಥವಾ ಸೆಟ್ಟಿ ಎಂಬ ಸೂಚಕಪದವೂ ಅಗತ್ಯವಾಗಿರುತ್ತದೆ.

ಉತ್ತರ ಕರ್ನಾಟಕದ ವೈಶ್ಯರು ಪಂಚೆ, ಷರಟು ಅದರ ಮೇಲೆ ಕೋಟು ಧರಿಸಿ ತಲೆಯ ಮೇಲೆ ಹಿರಿಯರಾದರೆ ರುಮಾಲು ಮತ್ತು ಉಳಿದವರು ಟೋಪಿ ಧರಿಸಿರುತ್ತಾರೆ. ಕೈಯಲ್ಲೊಂದು ಛತ್ರಿ, ಬಳ್ಳಾರಿ ನಾಡಿನಲ್ಲಿ ಹಿರಿಯರು ವಿಶಿಷ್ಟವಾದ ಜರು ರುಮಾಲು ಮತ್ತೆ ಕೆಲವರು ವಾರಿ ರುಮಾಲು ಸುತ್ತಿದ್ರೆ, ಉಳಿದವರು ಟೋಪಿ ಅಥವಾ ಗಾಂಧಿಟೋಪಿ ಧರಿಸುತ್ತಾರೆ. ಅಥವಾ ನಾನಾ ವಿಧವಾದ ಕೇಶಾಲಂಕಾರ ಮಾಡಿಕೊಳ್ಳತ್ತಾರೆ. ಹಳೇ ಮೈಸೂರು ಪ್ರಾಂತ್ಯದ ವೈಶ್ಯರು ಜರತಾರಿ ಅಂಚಿನ ಪಂಚೆಯುಟ್ಟು, ತುಂಬು ಕೊರಳಿನ ಕೋಟ (ಜೋಧಪುರಿ) ಧರಿಸಿ, ತಲೆಯ ಮೇಲೆ ಮೈಸೂರು ರುಮಾಲೆಂದೇ ಪ್ರಸಿದ್ಧವಾಗಿರುವ “ಸರಿಗೆ” ರುಮಾಲು ಧರಿಸುತ್ತಾರೆ. ಈ ರುಮಾಲು ಕೂಡ ನಾನಾ ಬಣ್ಣಗಳಲ್ಲಿ, ನಾನಾ ರೀತಿಯ ವಿರುಗುವ ಜರತಾರಿ ಅಂಚಿನಲ್ಲಿ ದೊರೆಯುತ್ತವೆ. ಹೆಗಲ ಮೇಲೊಂದು ಜರೀ ಶಲ್ಯೆಯೂ ಇರುತ್ತದೆ. ವೈಶ್ಯರು ಹಣೆಯ ಮೇಲೆ ವಿಭೂತಿ, ತಿಲಕ, ಕುಂಕುಮ, ಒಂದು ಗೀರಿನ ಕಂಪುನಾಮ ಅಥವಾ ಎರಡು ಬಿಳಿನಾಮದ ನಡುವೆ ಒಂದು ಕೆಂಪುನಾಮ ಧರಿಸುವುದನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಕಾಣಬಹುದು.

ಆಧುನಿಕ ಕಾಲದಲ್ಲಿ ಈ ವೇಷಭೂಷಣದ ಪದ್ಧತಿಗಳು ಗ್ರಾಮಾಂತರದಲ್ಲಿ ಮಾತ್ರ ಉಳಿದಿವೆ.ಅದು ಕೂಡಾ ಒಂದು ತಲೆಮಾರಿನ ಬಿಡಲು ಸಾಧ್ಯವಾಗದ ಅನಿವಾರ್ಯತೆಯಾಗಿದೆ. ಉಳಿದಂತೆ ಪಂಚೆಯೂ ಕೋಟು ಮಾಯವಾಗಿ, ಪ್ಯಾಂಟು, ಬುಷ್‌ಷರಟು, ಟೀಷರ್ಟು, ಜುಬ್ಬಾ, ಸಫಾರಿ, ಸೂಟ್‌ಇತ್ಯಾದಿ ಉಡುಗೊರೆಗಳು ಸಾಮಾನ್ಯವಾಗಿವೆ. ಹಿಂದಿನ ಕಾಲದಲ್ಲಿ ಸ್ತ್ರೀಯರು ಉತ್ತರ ಕರ್ನಾಟಕದಲ್ಲಿ ಮರಾಠೀ ಬ್ರಾಹ್ಮಣರಂತೆ ಕಚ್ಚೆ ಹಾಕಿ ಸೀರೆ ಉಡುತ್ತಿದ್ದರು. ಈಗ ಸೀರೆಗಿಂತ ಸಲ್ವಾರ್ ಕಮೀಜ್‌ಉಡುವ ತರುಣಿಯರೇ ಅಧಿಕ. ದಕ್ಷಿಣ ಭಾಗದಲ್ಲಿ ಸೀರೆ ಉಡುತ್ತಿದ್ದರು. ಆದರೆ ಮುಸುಗು ಹಾಕುವ ಪದ್ಧತಿ ಎಲ್ಲೂ ಇರಲಿಲ್ಲ.

ತುಂಗಭದ್ರೆಯ ಉತ್ತರದ ಜನರು ಮುತ್ತಿನ ಆಭರಣಗಳನ್ನು ಮತ್ತು ಗಟ್ಟಿ ಬಂಗಾರದ ಆಭರಣಗಳನ್ನು ಬಯಸಿದರೆ, ದಕ್ಷಿಣದ ಜನರು ಹರಳುಕಲ್ಲಿನ, ವಜ್ರ ವೈಢೂರ್ಯದ ನಯ ನಾಜೂಕಿನ ಆಭರಣಗಳನ್ನು, ಬೆಳೆ ಬಾಳುವ ಜರತಾರಿ ಕುಸುರಿನ ರೇಶಿಮೆ ವಸ್ತ್ರಗಳನ್ನು ಅಪೇಕ್ಷಿಸುತ್ತಾರೆ. ತಲೆಗೆ ಧರಿಸುವ ಬೈತಲೆ ಬಟ್ಟು, ಮುಡಿಹೂ, ನಾಗರ, ರಾಜಟೆ, ಜಡೆಯಬಿಲೆಯಿಂದ ಮೊದಲು ಮಾಡಿ ಕಿವಿ, ಮೂಗು, ಕಂಠಾಭರಣ, ಡಾಬುಗಳಿಂದ ಅಂದುಗೆ ಕಾಲಗೆಜ್ಜೆಯವರೆಗೆ ಅನೇಕಾನೇಕ ವೇಷಭೂಷಣಗಳನ್ನು ಧರಿಸುತ್ತಿದ್ದರು. ಕೈಗೊಂದು ಕಡಗ, ತೋಡೆ, ಮುತ್ತಿನ, ಹರಳಿನ, ಬಂಗಾರದ ಬಳೆಗಳು, ಕಿವಿಗೆ ಕೆಂಪಿನ, ಪುಷ್ಕರಾಗದ ಮತ್ತು ವಜ್ರದ ಓಲೆಗಳು, ಕೊರಳಿಗೆ ಕಾಸಿನ ಸರ, ಚಂದ್ರಹಾರ, ಚಪಲಹಾರ, ಗೋಪಿನ ಸರ, ಗೋವರ್ಧನ ಸರ, ಕರಿಮಣೆ, ಹವಳ, ಹರಳಿನ, ವಜ್ರದ ಸರಟಡ್ಡಿಕೆಗಳು ಮತ್ತು ಹಾರಗಳು, ವೈಶ್ಯ ಮಹಿಳೆಯರಿಗೆ ಚಿನ್ನಾಭರಣಗಳೆಂದರೆ ಅತಿಶಯ ಪ್ರೀತಿ.

ಪುಟ್ಟ ಮಕ್ಕಳಿಗೆ ಕೂಡ ಅವರ ಹೊರಲಾರದಷ್ಟು ಆಭರಣಗಳನ್ನು ಹಾಕುವುದು ವಾಡಿಕೆ. ಗಂಡಸರಂತೂ ಆ ಕಾಲದಲ್ಲಿ ಬೆಂಡೋಲೆ, ಕೊರಳಿಗೆ ಎಳೆ, ಹುಲಿಯುಗುರು ಅಥವಾ ಪದಕ, ಮುಂಗೈಗೆ ಚೈನು, ಗಡಿಯಾರಕ್ಕೂ ಬಂಗಾರದ ಚೈನು, ಅಂಗಿಗೆ ಚಿನ್ನದ ಎದೆಗುಂಡಿ, ಕೈಗುಂಡಿ ಮತ್ತೆ ಕನಿಷ್ಠ ಕೈಗೆರಡರಂತೆ ಉಂಗುರುಗಳು ಧರಿಸುತ್ತಿದ್ದರು. ಹಳೇ ಮೈಸೂರಿನವರು ತುಂಬು ಕೊರಳಿನ ಕೋಟು ತೊಟ್ಟು ಅದರ ಮೇಲೊಂದು ಸುವರ್ಣ ಸರವನ್ನು ಧರಿಸುತ್ತಿದ್ದರು. ಹಿರಿಯರು ಶ್ರೀಮಂತಿಕೆಯ ದ್ಯೋತಕವಾಗಿ ಬೆಳ್ಳಿ ಹಿಡಿಯ ಬೆತ್ತವನ್ನು ಹಿಡಿಯುತ್ತಿದ್ದರು.

ಆರ್ಯವೈಶ್ಯರು ಮೂಲತಃ ವ್ಯಾಪಾರಿಗಳು. ಅವರ ಜೀವನದಲ್ಲಿ ಹಣ, ಭೂಮಿ, ಬೆಳ್ಳಿ-ಬಂಗಾರಗಳಿಗೆ ಪ್ರಥಮ ಸ್ಥಾನ. ಹಣಗಳಿಸಲೆಂದು ಅವರು ಯಾವ ವ್ಯಾಪಾರವನ್ನಾದರೂ ಮಾಡಲು ತಯಾರು. ಗ್ರಾಮಗಳಲ್ಲಿ ಪುಟ್ಟ ಕಿರಾಣಿ ಅಂಗಡಿ, ಡಬ್ಬಾ ಅಂಗಡಿ, ಲಾಟರಿ ಟಿಕೆಟ್‌ಮಾರುವ ಅಂಗಡಿ, ತೋಟ, ಹೈನುಗಾರಿಕೆ, ಕೋಳಿಸಾಕಣೆ, ಹಾಲು, ಮೊಸರಿನ ವ್ಯಾಪರ, ಚಕ್ಕುಲಿ, ಕೋಡುಬಳೆ ಮುಂತಾದ ಕರಿದ ತಿಂಡಿಗಳ ವ್ಯಾಪಾರ, ಲಡ್ಡು, ಮೈಸೂರು ಪಾಕು ಮುಂತಾದ ಸಿಹಿ ತಿಂಡಿಯ ಮಾರಾಟ, ಸಣ್ಣ ಹೋಟೆಲ್‌, ಅಲ್ಲೊಂದು ಇಲ್ಲೊಂದು ಊಟದ ಹೋಟೆಲ್‌ಮಾಡುತ್ತಾರೆ. ನಾನಾ ತರದ ಏಜೆನ್ಸಿ, ರಿಯಲ್‌ಎಸ್ಟೇಟ್‌, ಅಚ್ಚುಕೂಟ, ಕಬ್ಬಿಣ-ಸಿಮೆಂಟ್‌ಇತ್ಯಾದಿ ಕಟ್ಟಡ ಸಾಮಗ್ರಿ ವಿತರಣೆ, ಬೀಜ-ಗೊಬ್ಬರ, ಪೆಸ್ಟಿಸೈಡ್‌, ಜವಳಿ, ಬೆಳ್ಳಿ-ಬಂಗಾರದ ಅಂಗಡಿ. ಹೀಗೆ ನಾನಾ ಬಗೆಯ ವ್ಯಾಪಾರದಲ್ಲಿ ಅವರು ತೊಡಗಿದ್ದಾರೆ. ಶೇಂಗಾಬೀಜ, ಖಾದ್ಯತೈಲ, ನವಸ್ಪತಿ ತಯಾರಿ, ಹತ್ತಿ ಗಿರಣಿ, ಚುರುಮುರಿ-ಹುರಿಕಡಲೆ ಭಟ್ಟಿ ಇತ್ಯಾದಿಯಾಗಿ ಎಲ್ಲ ವ್ಯಾಪಾರ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಚಲನಚಿತ್ರ ನಿರ್ಮಾಪಕರು, ಪ್ರದರ್ಶಕರು ಮತ್ತು ವಿತರಕರಲ್ಲಿ ಆದ್ಯರೆಂದರೆ ವೈಶ್ಯರೇ. ಪತ್ರಿಕಾರಂಗದಲ್ಲಿ ಕೂಡಾ ಶ್ರೀ ಬಿ.ಎನ್‌.ಗುಪ್ತ ಅಂಥವರು ಮೊದಲ ಪ್ರವರ್ತಕರು. ವೈಶ್ಯರು ಕೃಷಿ ಹುಟ್ಟುವಳಿ ಖರೀದಿ ಮಾರಾಟದಲ್ಲಿ ಅಂತರರಾಜ್ಯ ವ್ಯಾಪಾರಗಳನ್ನು ಏರ್ಪಡಿಸುವಲ್ಲಿ ಪ್ರಖ್ಯಾತರಾಗಿದ್ದರು. ಈಗಂತೂ ದೊಡ್ಡ ದೊಡ್ಡ ಮಾಲ್‌ಗಳನ್ನು, ಲಾಜಿಂಗ್‌ಗಳನ್ನು, ಕಾಫಿ, ಟೀ, ತೋಟಗಳನ್ನು, ದ್ರಾಕ್ಷಿ-ದಾಳಿಂಬೆ ಇತ್ಯಾದಿ ತೋಟಗಳನ್ನು ವೈಶ್ಯರು ಲಾಭಕರವಾಗಿ ನಡೆಸುತ್ತಿದ್ದಾರೆ. ಮದ್ಯ ವ್ಯಾಪಾರದಲ್ಲಿ, ತಯಾರಿಕೆಯಲ್ಲಿ ಮತ್ತು ಚಪ್ಪಲಿ ಮುಂತಾದ ಅಂಗಡಿಗಳನ್ನು ನಿರ್ವಹಿಸಲು ಅವರು ಹಿಂಜರಿಯುತ್ತಾರೆ. ಧರ್ಮಭೀರುಗಳೂ, ಪಾಪ ಪ್ರಜ್ಞೆ ಪೀಡಿತವಾಗಿರುವ ಸಮುದಾಯವು ಕೆಲ ಉದ್ಯೋಗಗಳನ್ನು “ನೀಚ”ವೆಂದು ಭಾವಿಸುವುದೇ ಇದಕ್ಕೆ ಕಾರಣ. ಆದರೆ ಆಧುನಿಕತೆಯ ದಾಳಿಗೆ ಸಿಲುಕಿ ಮನೋಭಾವಗಳು ತೀವ್ರ ಬದಲಾವಣೆಯಾಗುತ್ತಿವೆ.

ಸಣ್ಣ ಪುಟ್ಟ ವಹಿವಾಟುಗಳಲ್ಲಿ ಯಾರ ಸಹಾಯವೂ ಇಲ್ಲದೆ ಮನೆಯವರೇ ನಿರ್ವಹಿಸುತ್ತಾರೆ. ವ್ಯವಹಾರಗಳು ವಿಸ್ತರಿಸದಂತೆ ಲೆಕ್ಕ ಬರೆಯಲು ಖಾತೆದಾರರು, ಹಣಕಾಸಿನ ವ್ಯವಹಾರಕ್ಕೆ ರೋಖಡಿದಾರರು, ತೂಕ-ಪಟ್ಟಿ ಮಾಡಲು ಗುಮಾಸ್ತರು, ಹೊರುವುದು ಮುಂತಾದ ಕೆಲಸಕ್ಕೆ ಹಮಾಲರು ಕೂಲಿಗಳು ಇರುತ್ತಾರೆ.

ಆರ್ಯವೈಶ್ಯರು ಕುಟುಂಬ ವ್ಯವಸ್ಥೆಯಲ್ಲಿ “ಮಿತಾಕ್ಷರ” ಸೂತ್ರಗಳನ್ನು ಅನುಸರಿಸುತ್ತಾರೆ. ಪಿತೃ ಪ್ರಧಾನವಾದ ಕುಟುಂಬ ಪದ್ಧತಿಯಾದ ಕಾರಣ ಗಂಡುಮಕ್ಕಳಿಗೇ ಸಮಸ್ತ ಹಕ್ಕುಗಳಿರುತ್ತವೆ. ತಂದೆಯ ನಂತರ ಜೇಷ್ಠ ಪತ್ರನದೇ ಕಾರಬಾರು. ಅವನೇ ಮನೆಗೆ ಯಜಮಾನ. ಅಂದ ಮಾತ್ರಕ್ಕೆ ಮಿತಾಕ್ಷರ ಸೂತ್ರಗಳ ಪ್ರಕಾರ ಅವನಿಗೆ ವಿಶೇಷ ಸವಲತ್ತುಗಳೇನೂ ಇಲ್ಲ. ಆಸ್ತಿಯಲ್ಲಿ ಅಂದರೆ ಪರಂಪರಾಗತವಾಗಿ ಬಂದ ಸ್ಥಿತ ಚರಾಸ್ತಿಯಲ್ಲಿ ಎಲ್ಲಾ ಗಂಡು ಮಕ್ಕಳು ಸಮಾನ ಹಕ್ಕಿನವರಾಗಿರುತ್ತಾರೆ. ಒಬ್ಬ ವ್ಯಕ್ತಿಯ ಸ್ವಯಾರ್ಜಿತ ಸಂಪದಾನೆಯ ವಿತರಣೆಯಲ್ಲಿ ಮಾತ್ರ ಕುಟುಂಬದ ಕರ್ತನಿಗೆ ಪರಮಾಧಿಕಾರವಿರುತ್ತದೆ. ಆದರೆ ಹಿಂದೂ ವಾರಸಾ ಕಾಯದೆಯ ಪ್ರಕಾರ ಈತ ಮಗ ಹುಟ್ಟಿದ ತಕ್ಷಣ ಅವನು ಪಾಲುದಾರನಾಗುತ್ತಾನೆ. ಇತ್ತೀಚಿನ ಕಾಯಿದೆಯ ಪ್ರಕಾರ ಹೆಣ್ಣು ಮಕ್ಕಳಿಗೂ ಸಮಾನ ಅಧಿಕಾರವಿದೆ. ಆದರೆ ಈ ಅಧಿಕಾರವನ್ನು ಮನ್ನಿಸಿ ಪಾಲು ಕೊಡುವವರಾರೋ? ತವರು ಮನೆಯ ಪ್ರೀತಿ ಅನುಬಂಧಗಳಿಗಿಂತ ಆಸ್ತಿಯ ಪಾಲು ಮುಖ್ಯವಲ್ಲ. ಎಂದು ಬಹುತೇಕ ಸೋದರಿಯರು ಹಕ್ಕು ಬಿಡುಗಡೆ ಪತ್ರಗಳನ್ನು ಬರೆದು ಕೊಡುತ್ತಾರೆ. ಮಕ್ಕಳು ಪಾಲುವಿಭಾಗ ಸಮಯದಲ್ಲಿ ತಂದೆಗೊಂದು ಪಾಲು ಮಾಡುತ್ತಾರೆ. ಅದು ಅವರ ಶೇಷ ಜೀವನದ ನಿರ್ವಹಣೆಗೆ ಸಾಕಾಗಬಹುದು ಅಥವಾ ಅವರನ್ನು ದೈನ್ಯಾವಸ್ಥೆಗೆ ಇಳಿಸಬಹುದು.

ತಾಯಿ ಮತ್ತು ಸೊಸೆಯಂದಿರ ಸ್ವಂತ ಆಭರಣ ಇತ್ಯಾದಿಗಳನ್ನು ಸತ್ರೀಧನವೆಂದು ಪರಿಗಣಿಸಿ ಅವರವರ ವಸ್ತುಗಳನ್ನು ಅವರವರಿಗೇ ಬಿಡುವುದು ಸಾಮಾನ್ಯ ಸಂಪ್ರದಾಯ. ಕೆಲ ಸಂದರ್ಭಗಳಲ್ಲಿ ಅವುಗಳನ್ನು ತೂಕಮಾಡಿ ಬೆಲೆಕಟ್ಟಿ ಅವರವರಿಗೆ ಬಿಟ್ಟರೂ ಹೆಚ್ಚು ಕಡಿಮೆ ಆದ ಮೊತ್ತಗಳನ್ನು ಕೊಟ್ಟು ಪಡೆದು ಸರಿಪಡಿಸುತ್ತಾರೆ. ಮನೆಯ ಹಣ್ಣುಮಕ್ಕಳಿಗೆ ಅರಿಷಿಣ-ಕುಂಕುಮಕ್ಕೆಂದು ಕೆಲ ಮೊತ್ತಗಳನ್ನು ನಿಗದಿಪಡಿಸುವುದೂ, ಮೂರು ವರುಷಕ್ಕೊಮ್ಮೆಯಾದರೂ ಅವರನ್ನು ತವರಿಗೆ ಕರೆಯಿಸಿ ಉಡಿ ತುಂಬಿ ಕಳುಹಿಸುವುದು ನಡೆಯುತ್ತದೆ. ವಿಧವೆಯರಿಗೆ, ಆಧಾರ ರಹಿತವಾದ ವಿತಂತುಗಳನ್ನು ಕುಟುಂಬದಿಂದ ಜೀವನ ನಿರ್ವಹಣೆಗೆ “ಮಾಸಿಕ ಭರಣ”ವನ್ನು ಪಂಚಾಯಿತಿ ಮೂಲಕ ಅಥವಾ ನ್ಯಾಯಾಲಯಗಳ ಮೂಲಕ ನಿರ್ಧರಿಸಲಾಗುತ್ತದೆ. ಸಹೋದರಿಯರು ಅವರ ಆರ್ಥಿಕ ಪರಿಸ್ಥಿತಿ ಸರಿಯಿದ್ದರೆ ಅಥವಾ ಅವರು ತಮ್ಮ ಕೆಲಸದಿಂದ ಜೀವನ ನಿರ್ವಹಣೆ ಸಾಧ್ಯವಿದ್ದರೆ ತವರು ಮನೆಯವರನ್ನು ಏನೂ ಕೇಳುವುದಿಲ್ಲ. ಅನೇಕರು ದೀಪದ ಬತ್ತಿ, ಪತ್ರವಾಳಿ, ಹಪ್ಪಳ-ಸಂಡಿಗೆ-ಉಪ್ಪಿನಕಾಯಿ, ಬಟ್ಟೆ ಹೊಲಿಯುವುದು ಇತ್ಯಾದಿ ಕೆಲಸ ಮಾಡಿ ಸಂಸಾರ ನಿರ್ವಹಿಸುತ್ತಾರೆ.

ಶೆಟ್ಟರಿಗೆ ಪುತ್ರ ಸಂತಾನದ ಮೇಲೆ ತುಂಬಾ ಆಸೆ. ಅದಕ್ಕಾಗಿ ವ್ರತ-ನೇಮ, ಔಷಧಿ-ಅನುಪಾನ, ಯಾತ್ರ-ತೀರ್ಥ, ಹವನ-ಹೋಮ, ದಾನ-ಧರ್ಮ ಏನೆಲ್ಲಾ ಮಾಡುತ್ತಾರೆ. ಪುತ್ರ ಸಂತಾನವಾಗದಿದ್ದರೆ ಅನೇಕರು ಮೊತ್ತೊಂದು ಮದುವೆ ಮಾಡಿಕೊಂಡು ಅದೃಷ್ಟ ಪರೀಕ್ಷೆ ಮಾಡುತ್ತಾರೆ. ಅಲ್ಲಿಗೂ ಸಂತಾನ ಪ್ರಾಪ್ತಿಯಾಗಿದ್ದರೆ ಸಂಬಂಧಿಗಳಲ್ಲಿ ಒಂದು ಮಗುವನ್ನು ದತ್ತಕ ಮಾಡಿಕೊಳ್ಳುತ್ತಾರೆ. ದತ್ತಕ ಕ್ರಿಯೆಯನ್ನು ಶಾಸ್ತ್ರ ಪ್ರಕಾರ ಮಾಡಿಕೊಳ್ಳಬೇಕಾಗುತ್ತದೆ.

ದತ್ತಕ ಸ್ವೀಕರಿಸುವಾಗ ಆ ಮಗುವು ತಾವು ಹುಟ್ಟಿದ ಗೋತ್ರದಲ್ಲಿ ಮರಣಿಸಿದಂತೆಯೂ, ದತ್ತಕ, ತಂದೆಯ ಗೋತ್ರದಲ್ಲಿ ಜನಿಸಿದಂತೆಯೂ ಮಂತ್ರವಿಧಿಯ ಮೂಲಕ ದತ್ತಕ ಕ್ರಿಯೆಯನ್ನು ಪೂರೈಸುತ್ತಾರೆ. ಹೀಗೆ ದತ್ತಕ ಬಂದವರಿಗೆ ಸ್ವಂತ ಮಗನಿಗಿರುವಷ್ಟೇ ಅಧಿಕಾರಗಳಿರುತ್ತವೆ. ಆಸ್ತಿಯ ದಾನ, ಸಾಲ, ವಿಕ್ರಯಾದಿ ಸಮಸ್ತ ಹಕ್ಕುಗಳೂ ಅವನಿಗಿರುತ್ತವೆ. ದತ್ತಕ ತಂದೆ ತಾಯಿಯ ಅಪಾರ ವೈದಿಕ ಕ್ರಿಯೆಗಳನ್ನು ಅವನೂ ಅವರ ಮಕ್ಕಳೂ ಮಾಡಿಕೊಂಡು ಹೋಗಬೇಕಾಗುತ್ತದೆ. ಒಂದೊಂದು ಸಲ ಇಬ್ಬರು ಹೆಂಡರಿದ್ದರೆ ಇಬ್ಬರೂ ಬೇರೆ ಬೇರೆ ದತ್ತಕ ತೆಗೆದುಕೊಳ್ಳುತ್ತಾರೆ. ಗಂಡನ ಆಸ್ತಿಯಲ್ಲಿ ಇಬ್ಬರು ಹೆಂಡಿರಿಗೂ ಸಮಾನ ಹಕ್ಕುಗಳಿರುತ್ತವೆ. ಹಿಂದೂ ಕಾಯ್ದೆಯ ಪ್ರಕಾರ ಇನ್ನೊಂದು ಮದುವೆಯಾಗಲು ವಿನಾಯಿತಿಯ ಲಾಭ ಪಡೆದು ಮೊದಲ ಪತ್ನಿಯಿಂದ ಒಪ್ಪಿಗೆ ಪತ್ರ ಪಡೆದು ಮದುವೆಗಳು ನಡೆಯುತ್ತವೆ. ಹೀಗಾಗಿ ಶೆಟ್ಟಿರಲ್ಲಿ ಬಹುಪತ್ನಿತ್ವ ಹೆಚ್ಚು.

ಶ್ರೀ ಕನ್ಯಕಾ ಪುರಾಣದ ಪ್ರಕಾರ ವೈಶ್ಯರಲ್ಲಿ ಸೋದರಿಕೆ ಸಂಬಂಧ ಕಟ್ಟಳೆಯಾಗಿತ್ತು. ಸೋದರಿಕೆಯೆಂದರೆ ತಾಯಿಯ ಅಣ್ಣನ ಅಥವಾ ತಮ್ಮನ ಮಗಳಿದ್ದರೆ ಅಥವಾ ತಂದೆಯ ತಂಗಿ ಅಥವಾ ಅಕ್ಕನಿಗೆ ಮಗಳಿದ್ದರೆ ಮಾಡಿಕೊಳ್ಳಬೇಕು. ನಿರಾಕರಿಸುವಂತಿಲ್ಲ. ಹಾಗೆಯೇ ಮಗಳಿದ್ದರೆ ಅವಳಿಗೆ ಸೋದರ ಮಾವನ ಮಗನಿದ್ದರೆ ನಿರಾಕರಿಸದೇ ಕೊಡಬೇಕಾಗಿತ್ತು. ಅಂತಹ ಸಂಬಂಧಗಳಲ್ಲಿ ಜಾತಕ ನೋಡುವಂತಿಲ್ಲ. ರೂಪ-ವಿರೂಪ, ವಿದ್ಯೆ-ಅವಿದ್ಯೆ, ಕುಂಟು-ಕುರುಡು ಯಾವುದೂ ಗಣನೆಗೆ ಬರಬಾರದೆಂದು ಪುರಾಣದ ಮಾತು. ಅಲ್ಪಸಂಖ್ಯಾತರಾದ ಸಮಾಜ ಮತ್ತು ಪರಸ್ಪರ ಸಂಬಂಧದಿಂದ ಆರ್ಥಿಕ-ಸಾಮಾಜಿಕ ಅನುಕೂಲಗಳಿವೆಯೆಂದು ಗಮನಿಸಿ ಪುರಾಣದ ಈ ಮಾತು ಬಂದಿರಬೇಕು. ಆದರೆ ಕಾಲ ಬದಲಾಗಿದೆ. ಉತ್ತಮ ಮತ್ತು ಆರೋಗ್ಯವಂತ ಸಂತಾನಕ್ಕಾಗಿಯೂ, ಸಂತಾನ ಶಾಸ್ತ್ರದ ಪ್ರಕಾರವಾಗಿಯೂ ಈಗ ಬಂಧುಗಳಲ್ಲಿ ಮದುವೆಯಾಗುವುದು ಕಡಿಮೆಯಾಗಿವೆ. ಹೊರಗಿನ, ದೂರದ ಮತ್ತು ಹೊಸ ಸಂಬಂಧಗಳು ಹೆಚ್ಚಾಗಿವೆ.

ಹಿಂದಿನ ಕಾಲದಲ್ಲಿ ಮದುವೆಗಳು ಏಳು ದಿನ ನಡೆಯುತ್ತಿದ್ದವು. ಕ್ರಮೇಣ ಅದು ಐದು, ಮೂರು, ಎರಡು ದಿನಗಳಾಗಿ ಈಗ ಒಂದೇ ದಿನದಲ್ಲಿ ಮದುವೆ, ಶೋಭನ ಕೂಡಾ ಮುಗಿಯುತ್ತಿದೆ. ಈ ಮೊದಲು ಕನ್ಯೆ ಮೈನೆರೆಯುವ ಮೊದಲೇ ಮದುವೆ ಆಗುತ್ತಿತ್ತು. ಮದುವೆಯ ನಂತರ ಹುಡುಗಿ ದೊಡ್ಡವಳಾದ ಮೇಲೆ ಶೋಭನ ಅಥವಾ ಪ್ರಸ್ತದ ಕಾರ್ಯ ಇರುತ್ತಿತ್ತು. ಈಗ ಎಲ್ಲರೂ ಪ್ರೌಢ ಕನ್ಯೆಯರಾಗಿರುತ್ತಾರೆ. ಆದ್ದರಿಂದ ಲಗ್ನ-ಪ್ರಸ್ತ ಒಂದೇ ದಿನದಲ್ಲಿ ಮುಗಿಯುತ್ತದೆ. ಮದುವೆಗೆ ಮೊದಲು ಕುಲಸ್ತರಿಗೆಲ್ಲಾ ಮಂಗಳವಾದ್ಯದೊಡನೆ ಹೋಗಿ ಲಗ್ನ ಪತ್ರಿಕೆ, ಎಣ್ಣೆ-ಸೀಗೆಪುಡಿ ಕೂಡಾ ಕೊಡುತ್ತಿದ್ದರಂತೆ. ಮದುವೆಗೆ ಮೊದಲು ಕುಂಬಾರರ ಮನೆಗೆ ಹೋಗಿ ಹಸಿಮಡಿಕೆ, ಯಜ್ಞೇಶ್ವರ ಬಾನಿ, ಬಾಸಿಂಗಗಳನ್ನು ತರುತ್ತಿದ್ದರು. ಮದುವೆಗೆ ಮೊದಲು ಅಥವಾ ನಂತರ ಮಧುಮಕ್ಕಳನ್ನು ಎತ್ತಿನ ಬಂಡಿ, ತೆರೆದ ಕಾರು ಅಥವಾ ಕುದುರೆ ಬಂಡಿಯಲ್ಲಿ ಕೂಡಿಸಿ, ಗ್ಯಾಸ್‌ಲೈಟ್‌ಗಳ ಬೆಳಕಿನಲ್ಲಿ ಬ್ಯಾಂಡ್‌ಸಮೇತ ಮೆರವಣಿಗೆ ಮಾಡುತ್ತಿದ್ದರು. ಶ್ರೀಮಂತರು ವಾರಾಂಗನೆಯರಿಂದ ನೃತ್ಯ, ತಮಾಷಾ, ಗಾನ ಕಚೇರಿ ಏರ್ಪಡಿಸುತ್ತಿದ್ದರು. ತಮ್ಮ ಕುಲದೇವತೆಯಾದ ವಾಸವಿಯನ್ನು ಮೋಹಿಸಿ ಮದುವೆಯಾಗಲು ಬಯಸಿದ ರಾಜಮಹೇಂದ್ರವರದ ಚಕ್ರವರ್ತಿ ವಿಷ್ಣುವರ್ಧನನ್ನು ಅಡ್ಡಗಟ್ಟಿ ವಿಳಂಬ ಮಾಡಿದ ಬಾಲಕರಾದ “ಬಾಲನಾಗರು”ಗಳ ಅಪ್ಪಣೆಯನ್ನು ಕನ್ಯಾಪಿತೃಗಳು ಮದುವೆಗೆ ಮೊದಲು ಪಡೆಯಲೇಬೇಕಾಗಿತ್ತು. ವೈಶ್ಯರು ಸಾಗರೋತ್ತರ ವ್ಯಾಪಾರ ಮಾಡುತ್ತಿದ್ದರೆಂಬುದರ ಕುರುಹಾಗಿ ಮದುಮಗನಿಂದ ಕಾಗದದ ಹಡಗುಗಳನ್ನು ಕಾಲುವೆಯಲ್ಲಿ ತೇಲಿ ಬಿಡುತ್ತಿದ್ದರು.

ಮದುವೆಯ ಮೊದಲ ದಿನ ಬೀಗರನ್ನು ಎದುರುಗೊಂಡು ಬಿಡದಿಗೆ ಕರೆತಂದನಂತರ ನಿಶ್ಚಿತಾರ್ಥ ಕಾರ್ಯಕ್ರಮವಿರುತ್ತಿತ್ತು. ಆಗ ವರನಿಗೆ ಸೌಂದರ್ಯ ಪ್ರಸಾಧನ ವಸ್ತುಗಳನ್ನು ಕೊಡುವುದು ವಾಡಿಕೆ. ಅನಂತರ ಶೆಟ್ಟರಿಗೆ ವಿಶಿಷ್ಟವಾದ “ಎದುರಕ್ಕಿ” ಕಾರ್ಯಕ್ರಮ. ವಧೂ-ವರರನ್ನು ಎದುರು ಬದುರಾಗಿ ಮೂರು-ನಾಲ್ಕು ಅಡಿ ದೂರದಲ್ಲಿ ಕೂಡಿಸುವುದು, ಅವರು ಪರಸ್ಪರ ಅಕ್ಕಿಯನ್ನು ತಲೆಯ ಮೇಲೆ ಸುರಿಯುತ್ತಾರೆ. ಚಪ್ಪರ ಪೂಜೆ ಶೆಟ್ರಲ್ಲಿ ವಿಶೇಷ. ಚಪ್ಪರದ ಒಂದು ಕೊಂಬೆಗೆ ಅತ್ತಿಮರದ ತುಂಡೊಂದನ್ನು ಕಟ್ಟಿ ಪೂಜಿಸುತ್ತಾರೆ. ಹಿಂದೆ ಜಲಪ್ರಳಯ, ಅಗ್ನಿ ಪ್ರಳಯಗಳಾದಾಗದ ಅತ್ತಿಯ ಮರದ ಕೊಂಬೆಯೊಂದು ಅವರನ್ನು ಪಾರು ಮಾಡಿತ್ತಂತೆ. ಹಾಗೆಯೇ ಹಂದರ ಪೂಜೆ ಮಾಡಿದಾಗ ಸಾಂಕೇತಿಕವಾಗಿ ಸವಂಡಿಗೆಯಿಟ್ಟು ಹಂದರದ ಮೇಲೆ ಒಣಗಲಿಡುತ್ತಾರೆ. ಮದುವೆಗೆ ಮೊದಲು ವರನು ಕಾಶೀ ಯಾತ್ರೆಗೆ ಹೊರಡುತ್ತಾನೆ. ಈ ಮೊದಲು ಅವನಿಗೆ ಕಸೆಯ ಅಂಗಿ ತೊಡಿಸುತ್ತಿದ್ದರು. ಈಗ ವರನು ಪಂಚೆ ಉಟ್ಟು ಶಲ್ಲೆ ಧರಿಸಿ, ತಲೆಗೊಂದು ಟೋಪಿ ಅಥವಾ ರುಮಾಲು ಧರಿಸಿ, ಚಲ್ಲಪಿ, ಮಿಟ್ಟಿ, ಛತ್ರಿ ಹಿಡಿದು, ಕುಂಕಳಲ್ಲಿ ಬೀಸಣಿಗೆ, ಕೈಲ್ಲಿ ನೀರಿನ ಗಿಂಡಿ ಹಿಡಿದು ಕಾಶಿಗೆ ಪಯಣಿಸುತ್ತಾನೆ. ಆಗ ಕನ್ಯಾಪಿತೃವು ಅವನನ್ನು ಅಡ್ಡಗಟ್ಟಿ ತನ್ನ ಮಗಳನ್ನು ಮದುವೆ ಮಾಡಿಕೊಂಡು ಗೃಹಸ್ಥಾಶ್ರಮ ಸ್ವೀಕರಿಸಬೇಕೆಂದು ಬೇಡುತ್ತಾನೆ. ಮಾವನ ಕನ್ಯಾಸೆರೆಯನ್ನು ಬಿಡಿಸಲಿಕ್ಕಾಗಿ ವರನು ಕಾಶೀಯಾತ್ರೆಗೆ ಹೋಗುವುದನ್ನು ಬಿಟ್ಟು ವಿವಾಹ ಮಂಟಪಕ್ಕೆ ಆಗಮಿಸುತ್ತಾನೆ. ಅವನನ್ನು ಮಾವ ಅಥವಾ ಭಾವಮೈದುನನು ಕಾಲು ತೊಳೆದು ಸತ್ಕರಿಸಿ ಸ್ವಾಗತಿಸುತ್ತಾರೆ.

ಈ ಕಡೆಗೆ ವಧುವಿಗೆ ಸೀರೆಯ ಮೇಲೊಂದು ಬಿಳಿಯ ಪಂಚೆಯನ್ನು ಸೊಂಟದಿಂದ ಕುಂಕಳಲ್ಲಿ ಬಿಗಿದು ಕಟ್ಟುತ್ತಾರೆ. ಅದಕ್ಕೆ “ಚೌಕಾಡುವಲ್ಲಿ” ಎಂದು ಹೆಸರು. ಇದು ವೈಶ್ಯರಲ್ಲಿ ಮಾತ್ರ ಇರುವ ಪದ್ಧತಿ. ಅನಂತರ ವಧುವು ಗೌರಿಪೂಜೆ ಅಥವಾ ಹುತ್ತದ ಪೂಜೆ ಅಥವಾ ಎರಡನ್ನೂ ಪೂರೈಸಿ ಮಂಟಪ ಪ್ರವೇಶ ಮಾಡುತ್ತಾಳೆ. ಆಗ ವಧೂ-ವರರು ಪರಸ್ಪರ ವೀಕ್ಷಣೆ ಮಾಡುತ್ತಾರೆ. ಅನಂತರ ಮದುಮಗಳನ್ನು ಬಿದಿರಿನ ತಟ್ಟಿಯಲ್ಲಿ ನಿಲ್ಲಿಸಿ ಮೇಲೆ ಹಕ್ಕಿ ಹಾಕುತ್ತಾರೆ. ಇದಕ್ಕೆ “ಮಚ್ಚಕ್ಕಿ” ಎಂದು ಕರೆಯುತ್ತಾರೆ.ಇದು ಕೂಡ ವೈಶ್ಯರಲ್ಲಿ ಇರುವ ಸಂಪ್ರದಾಯ. ಅನಂತರ ಕನ್ಯಾದಾನ ನಡೆಯುತ್ತದೆ. ವರನ ಕೈಯಲ್ಲಿ ವಧುವಿನ ಕೈಯಿರಿಸಿ ಫಲವಿಟ್ಟು ಕನ್ಯೆಯ ಮನೆತನದ ಹಿರಿಯರೆಲ್ಲಾ ನೀರು ಬಿಟ್ಟು ಧಾರೆ ಎರೆಯುತ್ತಾರೆ. ಈ ಸಮಯದಲ್ಲಿ ವಧೂ-ವರರು ನಿಂತುಕೊಂಡೆ ಇರುತ್ತಾರೆ. ಅನಂತರ ಗೋತ್ರ ಪೂಜೆ ಮಾಡಿ ವಧುವಿನ ಗೋತ್ರ ಬದಲಾವಣೆ ಆಗುವ ಮಂತ್ರಗಳನ್ನು ಹೇಳುತ್ತಾರೆ.

ಮುಹೂರ್ತದ ನಂತರ ಪಂಚಕನ್ಯೆಯರ ಮತ್ತು ವಾಸವಿ ಅಮ್ಮನವರ ಪೂಜೆಯನ್ನು ಮಾಡುತ್ತಾರೆ. ವೈಶ್ಯರು ಯಜುಶ್ಯಾಖಾಧ್ಯಾಯಿಗಳು. ಆದ್ದರಿಂದ ವಧುವಿನ ತಲೆಯ ಮೇಲೆ ನೇಗಿಲಿನ ಮಾಧರಿಯೊಂದನ್ನಿಟ್ಟು ದರ್ಭೆಯ ಹಗ್ಗದ ಸಿಂಬಿಯೊಂದನ್ನಿಟ್ಟು ನೀರೆರೆದು ಆದರ್ಭೆಯ ಹಗ್ಗವನ್ನು ವಧುವಿನ ನಡವಿಗೆ ಕಟ್ಟುತ್ತಾರೆ. ವಿವಾಹ ಸಮಯದಲ್ಲಿ ವಧೂ-ವರರ ಕಂಕಣಕ್ಕಾಗಿ ಏರ್ಪಡಿಸುವ ಮಂತ್ರ ಪೂರ್ವಕವಾದ ಬಂಧನವಿದು. ವಧೂ-ವರರ ಸುತ್ತಲೂ ಸೋದರ ಮಾವಂದಿರು ಅಥವಾ ಪುರೋಹಿತರು ಕುಳಿತು ವಧುವಿಗೆ ನಾಲ್ಕು ಸುತ್ತು ಮತ್ತು ವರನಿಗೆ ಐದು ಸುತ್ತು ಬರುವಂತೆ ದಾರವನ್ನು ಸುತ್ತಿ ಅದರಿಂದ ಕಂಕಣ ಕಟ್ಟುತ್ತಾರೆ. ಗಂಧರ್ವರ ಪ್ರೀತಿಗಾಗಿ ಮದುಮಕ್ಕಳಿಂದ ಭತ್ತದ ಅರಳಿನ ಹೋಮ ಅಂದರೆ “ಲಿಜಾ ಹೋಮ” ಮಾಡಿಸುತ್ತಾರೆ. ಇದು ಬೇರೆ ಮತೀಯಲ್ಲಿಲ್ಲದ ಪದ್ಧತಿ.

“ನಾಕ ಬಲಿ”ಯನ್ನು ನಾಗೋಲಿ ಎನ್ನುತ್ತಾರೆ. ಹಿಂದಿನ ಕಾಲದಲ್ಲಿ ಹಿಟ್ಟಿನ ಬೊಂಬೆಯನ್ನು ಮಾಡಿ ಅದನ್ನು ದರ್ಭೆಯಿಂದ ಛೇದಿಸುತ್ತಿದ್ದರು. ಆದರೆ ಈಗ ಅದು ತಪ್ಪಿ ಐದು ಎಲೆ ಹಾಕಿ ಹಿಟ್ಟಿನ ಐದು ದೀಪ, ಕಡಲೆ ಬೇಳೆ, ಬಾಳೆಹಣ್ಣು, ಪಲ್ಹಾರಗಳನ್ನಿಟ್ಟು ಬಲಿ ಧಾರೆ ಎರೆಯುತ್ತಾರೆ. ಇನ್ನೊಂದು ಮುಖ್ಯವಾದ ಪದ್ಧತಿಯೆಂದರೆ ಹೂಳಲು ಸುತ್ತುವುದು. ಅಂದರೆ ಉಪ್ಪಿನಿಂದ, ಕಡಲಿಟ್ಟಿನಿಂದ ಆನೆ ಮಾಡಿಸಿ, ಅದಕ್ಕೆ ವಧೂ-ವರರಿಂದ ಪ್ರದಕ್ಷಿಣ ಹಾಕಿಸುವುದು. ಅಕ್ಕಿ ಆನೆ ಹತ್ತು ಜೀಟಿ, ಉಪ್ಪಿನ ಆಗೆಗೆ ಬೆಲೆ ಇಲ್ಲ. ಇವೆರಡನ್ನು ಸಮುದ್ರಕ್ಕೆ ಹಾಕೋಣ, ಎರಡೂ ಮುಳುಗುತ್ತವೆ. ಅದರಂತೆ ನಾವಿಬ್ಬರೂ ಸಂಸಾರದಲ್ಲಿ ಮುಳುಗೋಣ ಎನ್ನುತ್ತಾನೆ ಗಂಡು.

ಶ್ರೀಮಂತ ಮಹಾಲಕ್ಷ್ಮೀ ಪೂಜೆ ಎಂಬುದೊಂದು ವೈಶ್ಯರ ವಿಶಿಷ್ಟ ಪದ್ಧತಿ. ಒಂದು ಸಣ್ಣ ಬಾಯಿಯ ತಪ್ಪಲೆಯಲ್ಲಿ ಶಾಂತಿಯುದಕವನ್ನು ಹಾಕಿ ಅದರೊಳಗೆ ಒಂದು ಉಂಗುರ, ಒಂದು ನಿಂಬೆಹಣ್ಣನ್ನು ಹಾಕುತ್ತಾರೆ. ವಧೂವರರು ಇಬ್ಬರೂ ಅದರಲ್ಲಿ ಕೈಹಾಕಿ ಹುಡುಕ ತೊಡಗುತ್ತಾರೆ. ಪುರೋಹಿತರು ಏನು ಕಂಡೆಯಮ್ಮಾ/ಎಂದರೆ ಅವರು “ಕ್ಷೀರ ಸಮುದ್ರದಲ್ಲಿ ರತ್ನ ನೋಡಿದೆ” ಎನ್ನುತ್ತಾಳೆ. ರಾತ್ರಿಗೆ ನಡೆಯೋದು “ಪಾನುಪು” ಅಥವಾ “ವೀಳೆಶಾಸ್ತ್ರ” ಗಂಡು ಹೆಣ್ಣಿಗೆ ಮದುವೆಗೆ ಬಂದವರು ಪರಿಚಯ ಮಾಡಿಕೊಡಲು ಹನ್ನೆರಡು ಬೆಳ್ಳಿಯ ಬಟ್ಟಲಲ್ಲಿ ಅಡಿಕೆ ಹಾಕಿ ದಂಪತಿಗಳನ್ನು ಕರೆದು ಅವರ ಹೆಸರು ಹೇಳಿಸಿ ಕೊಡುತ್ತಾರೆ.

ಇನ್ನೊಂದು ಕಾರ್ಯಕ್ರಮವೆಂದರೆ “ಸಲುಗು ಹಿಡಿಸುವುದು” ಗಂಡಿನ ಹಣೆಗೆ ಕುಂಕುಮ, ಕೆನ್ನೆಗೆ ಅರಿಷಿಣ, ಗಲ್ಲಕೆ ಗಂಧ ಮತ್ತು ಕೊರಳಿಗೆ ಹಾರ ಹಾಕಿಸುವ ಕಾರ್ಯಕ್ರಮ. ಪ್ರತಿಯೊಂದು ಕ್ರಿಯೆ ಮಾಡುವಾಗಲೂ ವಧು-ವರನಿಗೆ

ಎನ್ನರಸ ಚನ್ನರಸ ಪಟ್ಟದರಸ
ಪ್ರಾಣಕಾಂತ ಮುದ್ದು ಮೋಹಕ ಗುಣ ಸಂಪನ್ನ
ಅತ್ತೆಯ ಮಗನೇ
, ಮಾವನ ಮಗನೇ
ಎಲ್ಲಿ ತೋರಿಸು ಎರಡೂ ಕೆನ್ನೆ

– ಎಂದು ಅರಿಷಿಣ ಹಚ್ಚುತ್ತಾಳೆ.

ಆಮೇಲೇ ಗಂಡಿಗೆ ಆರತಿ ಎತ್ತುವುದು, ಆರತಿ ತಟ್ಟೆಗೆ ಒಂದೊಂದು ಹಣ ಹಾಕುವ ರೂಢಿ ಇದೆ. ಕೆಲವು ಸಲ ಎಷ್ಟು ಹಾಡು ಹೇಳಿದರೂ “ಇನ್ನೂ ಹೇಳಲಿ” ಎಂದು ವರನ ಕಡೆಯವರು ಕಾಡುವುದುಂಟು. ಆಗ ವಧು-

ಎಲ್ಲಿಂದ ತಂದಿರಿ ಆರಿಸಿ ಇವರ
ಜೊಲ್ಲು ಬಾಯಿಯವನ
ತಟ್ಟೆಯ ಹಿಡಿದು ಬಾಳೆಲ್ಲಾ ನೊಂದನು
ಅತ್ತಮ್ಮ ನೀವ್‌ಹೇಳಿ “ಆರತಿಗೆ ಏನ ಹಾಕಲಿ”

ಎಂದು ಹಾಡುತ್ತಾಳೆ.