ಯೌವನ ಎನ್ನುವುದು ಉತ್ಸಾಹಕ್ಕೆ, ಕಲ್ಪನಾ ಸಾಮರ್ಥ್ಯಕ್ಕೆ ಮತ್ತು ಕ್ರಿಯಾಶೀಲತೆಗೆ ಒಂದು ಸಂಕೇತ ಎಂದು ನಾನು ತಿಳಿದಿದ್ದೇನೆ. ಈ ಒಂದು ಯೌವನವನ್ನು ಯಾರು ತಮ್ಮ ಬದುಕಿನ ಉದ್ದಕ್ಕೂ ಉಳಿಸಿಕೊಳ್ಳುತ್ತಾರೋ ಅವರಿಂದ ಮಾತ್ರ ನಿಜವಾದ ಬದಲಾವಣೆಗಳು ನಮ್ಮ ಪರಿಸರದಲ್ಲಿ ಸಂಭವಿಸಬಹುದು. ನಾನು ಹದಿನೆಂಟು ವರ್ಷದ ಮುದುಕರನ್ನು ಕಂಡಿದ್ದೇನೆ; ಎಪ್ಪತ್ತೈದು ವರ್ಷದ ಯುವಕರನ್ನು ಕಂಡಿದ್ದೇನೆ! ಈ ಹಿನ್ನೆಲೆಯಿಂದ ಹೇಳುವುದಾದರೆ ಯೌವನ ಎನ್ನುವುದು ಕೇವಲ ಒಂದು ವಯೋಮಾನಕ್ಕೆ ಸಂಬಂಧಿಸಿದ್ದಲ್ಲ; ಅದೊಂದು ಉತ್ಸಾಹಪೂರ್ಣವಾದ ಮತ್ತು ಕ್ರಿಯಾಶಾಲಿಯಾದ ಮನಃಸ್ಥಿತಿ ಎಂದೇ ನನ್ನ ತಿಳಿವಳಿಕೆಯಾಗಿದೆ.

ಒಂದು ದೇಶದ ಚರಿತ್ರೆಯ ನಿರ್ಣಾಯಕ ಘಟ್ಟಗಳಲ್ಲಿ ಬದಲಾವಣೆಗಳಾಗಿರುವುದು ಇಂಥ ಕ್ರಿಯಾಶೀಲರಾದ ಯುವಕರಿಂದಲೇ. ಭಾರತೀಯ ಸ್ವಾತಂತ್ರ  ಚಳುವಳಿಯಲ್ಲಿ ಪಾಲುಗೊಂಡವರಲ್ಲಿ ಬಹುಪಾಲು ಅಂದಿನ ವಿದ್ಯಾರ್ಥಿಗಳು ಅಥವಾ ಯುವಕರು ಎಂದು ಹೇಳಬಹುದು- ಅವರಿಗೆ ಸ್ಫೂರ್ತಿ ಹಾಗೂ ಮಾರ್ಗದರ್ಶಕರಾದವರು ಹಿರಿಯರಾಗಿದ್ದರೂ.

ನಾನು ವಿದ್ಯಾರ್ಥಿಯಾಗಿದ್ದ ಕಾಲ ಈ ರಾಷ್ಟ್ರದ ಚರಿತ್ರೆಯಲ್ಲಿ ಅತ್ಯಂತ ಚಲನಶೀಲವಾದ  ಕಾಲವಾಗಿತ್ತು; ಉಜ್ವಲವಾದ ಕಾಲವಾಗಿತ್ತು. ಆಗ ಪರಾಕ್ರಮಣದ ವ್ಯಥೆಯ ಜತೆಗೆ, ಈ ಪರತಂತ್ರದಿಂದ ಪಾರಾಗಿ, ಸ್ವತಂತ್ರವಾಗುವ ಹೋರಾಟದ ಕೆಚ್ಚಿತ್ತು. ಕಣ್ಣ ಮುಂದೆ ಭವ್ಯ ಭಾರತದ ನಿರ್ಮಾಣದ ಕನಸಿತ್ತು. ಜತೆಗೆ ಈ ಗುರಿಗೆ ಮುನ್ನಡೆಸಬಲ್ಲ ಮಾರ್ಗದರ್ಶಕ ಮಹಾ ಸತ್ವಗಳಿದ್ದವು. ರಾಷ್ಟ್ರಕವಿ ಕುವೆಂಪು ಅವರ ಮಾತುಗಳಲ್ಲಿ ಹೇಳಬೇಕಾದರೆ:

ಮುಂದಕ್ಕೆ ಗುರಿಯಿತ್ತು, ಹಿಂದಕ್ಕೆ ಗುರುವಿದ್ದ,
ನುಗ್ಗಿದುದು ಧೀರದಂಡು!

ಆದರೆ ಸ್ವಾತಂತ್ರ  ಬಂದ ಅರ್ಧಶತಮಾನದ ನಂತರದ ಕಾಲದ ಇಂದಿನ ಭಾರತದಲ್ಲಿ ನಿಂತ ನಮ್ಮ ಮುಂದೆ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಸ್ವತಂತ್ರ ಭಾರತವಿದೆ. ಈ ಭಾರತ ಕಂಡ ಪ್ರಜಾಪ್ರಭುತ್ವದ ಕನಸುಗಳು ಈಡೇರದ, ಒಂದು ಉಬ್ಬಸಗೊಳಿಸುವ ಅಸ್ವಸ್ಥತೆ ಈ ದೇಶವನ್ನೆಲ್ಲ ಕಬಂಧನಂತೆ ಆವರಿಸಿಕೊಂಡಿದೆ. ಈ ಆಸ್ವಸ್ಥತೆಯ ಕಾರಣಗಳನ್ನು ಸ್ಥೂಲವಾಗಿ ನಾಲ್ಕು ಎಂದು ಗುರುತಿಸಬಹುದು.

ಮೊದಲನೆಯದು: ಪರಿಸರ ನಾಶದ ತಲ್ಲಣಗಳು.

ಎರಡನೆಯದು: ಕಳೆದ ಎರಡು ಶತಮಾನಗಳ ಕಾಲದಲ್ಲಿ ಈ ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಅನೂಹ್ಯವಾದ ಪ್ರಗತಿಯನ್ನು ಸಾಧಿಸಿದ್ದರೂ, ಈ ಭಾರತದ ಜನಮನಸ್ಸು ಇನ್ನೂ ಅವೈಚಾರಿಕತೆಯಲ್ಲಿ ಮತ್ತು ಹೊಸ ಹೊಸ ಮೂಢನಂಬಿಕೆಗಳಲ್ಲಿ ಸ್ಥಗಿತಗೊಳ್ಳುತ್ತಿರುವ ಕ್ರಮ.

ಮೂರನೆಯದು: ದಿನದಿಂದ ದಿನಕ್ಕೆ ದೇವರು ದೇವಸ್ಥಾನ ಮತ್ತು ಧರ್ಮದ ಹೆಸರಿನಲ್ಲಿ ವಿಜೃಂಭಿಸುತ್ತಿರುವ ಕೋಮುವಾದದ ಅನಾಹುತಗಳು ಮತ್ತು ಜಾಗತಿಕ ಭಯೋತ್ಪಾದಕತೆಯೊಂದಿಗೆ ಅದು ವಿಸ್ತರಿಸಿಕೊಳ್ಳುತ್ತಿರುವ ಸಂಬಂಧದ ಅಪಾಯಗಳು.

ನಾಲ್ಕನೆಯದು: ಜಾಗತೀಕರಣ, ಉದಾರೀಕರಣಗಳ ಜಾಲದಲ್ಲಿ ಈ ದೇಶ ಬಹುರಾಷ್ಟ್ರೀಯತೆಯ ನಿಯಂತ್ರಣಕ್ಕೆ ಒಳಗಾಗಿ ಪಡುತ್ತಿರುವ ಪಾಡುಗಳು.

ಈ ನಾಲ್ಕರಲ್ಲಿ ಮೊದಲನೆಯದಾದ ಪರಿಸರ ನಾಶದ ತಲ್ಲಣ, ಈ ದೇಶದ ಅಭಿವೃದ್ಧಿ ಯೋಜನೆಗಳ ಜತೆಗೆ ತಳುಕು ಹಾಕಿಕೊಂಡಿರುವ ಸಂಗತಿಯಾಗಿದೆ. ಗಾಂಧೀ ಮಾದರಿಯ ಗ್ರಾಮ ಕೇಂದ್ರಿತ ಸರ್ವೋದಯ ಮೂಲವಾದ ಅಭಿವೃದ್ಧಿ ಯೋಜನೆಗಳನ್ನು ಮೂಲೆಗೆ ತಳ್ಳಿ, ನೆಹರೂ ಮಾದರಿಯ ಪಾಶ್ಚಾತ್ಯ ತಂತ್ರಜ್ಞಾನ ಮೂಲವಾದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದದ್ದರಿಂದ, ಮೇಲುನೋಟಕ್ಕೆ ಸಾಕಷ್ಟು ಪ್ರಗತಿಯಾದಂತೆ ತೋರಿದರೂ, ಈ ದೇಶದ ಪರಿಸರದ ಮೇಲೆ ಹಾಗೂ ಅವುಗಳನ್ನವಲಂಬಿಸಿದ ಅರಣ್ಯ ಸಂಸ್ಕೃತಿಗಳ ಮೇಲೆ ಆಗಿರುವ, ಆಗುತ್ತಿರುವ ದುಷ್ಟರಿಣಾಮಗಳು ಗಾಬರಿಗೊಳಿಸುವಂತಿವೆ. ಕುಡಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ ಇವೆಲ್ಲ ಮಲಿನವಾಗಿ, ನಾಳಿನ ಚರಿತ್ರಕಾರರು ಈ ನಮ್ಮ ಕಾಲಮಾನವನ್ನು ‘ಮಾಲಿನ್ಯಯುಗ’ ಎಂದು ಕರೆದರೂ ಆಶ್ಚರ್ಯವಿಲ್ಲ.

ಇನ್ನು ನಾನು ಪ್ರಸ್ತಾಪಿಸಿದ ಎರಡು ಮೂರನೆ ಆತಂಕಗಳಾದ ಅವೈಚಾರಿಕತೆ ಹಾಗೂ ಈ ದೇಶ ಹೇಗೋ ಬಹು ಕಾಲದಿಂದ ಕಾಪಾಡಿಕೊಂಡು ಬಂದ ಕೋಮು ಸಾಮರಸ್ಯದ ಆಕೃತಿಗಳು ಧಾರ್ಮಿಕ ಮೂಲಭೂತವಾದಿಗಳಿಂದ ಚೂರು ಚೂರಾಗುತ್ತಿರುವುದನ್ನು ಅಸಹಾಯಕತೆಯಿಂದ ನಾವು ನೋಡಬೇಕಾಗಿರುವ ದುರಂತ – ಈ ಎರಡೂ ಒಂದಕ್ಕೊಂದು ತಳುಕು ಹಾಕಿಕೊಂಡಿವೆ. ನಿಚ್ಚಳವಾದ ವೈಚಾರಿಕತೆಯಿಂದ ಈ ದೇಶದ ಚರಿತ್ರೆ ಹಾಗೂ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡದೆ ಇದ್ದರೆ ನಾವು ಇನ್ನಷ್ಟು ಅಧೋಗತಿಗೆ ಇಳಿಯುವುದು ಖಂಡಿತ.

ನಾಲ್ಕನೆಯದಾದ ಜಾಗತೀಕರಣ ಉದಾರೀಕರಣಗಳ ಕಾರಣದಿಂದ ನಮ್ಮ ದೇಶೀಯ ಸಂಸ್ಕೃತಿಗಳು ಕ್ರಮೇಣ ನಾಶವಾಗುವ ಪರಿಸ್ಥಿತಿ ಪ್ರಾಪ್ತವಾಗುವುದಲ್ಲದೆ, ಬಂಡವಾಳಶಾಹಿ ರಾಷ್ಟ್ರಗಳ ಕೈಗೊಂಬೆಯೂ ಮಾರುಕಟ್ಟೆಯೂ ಆಗಿ ಈ ದೇಶ ಪರಿವರ್ತಿತವಾಗಿ, ನಾವು ಬಹುಕಾಲದಿಂದ ಹೋರಾಡಿ ಪಡೆದುಕೊಂಡ ಸ್ವಾತಂತ್ರ ಕ್ಕೆ ಯಾವ ಬೆಲೆಯೂ ಇಲ್ಲವಾಗುವ ಸಂಭವವಿದೆ. ಈ ಸಂದರ್ಭದಲ್ಲಿ ಮಹಾತ್ಮಾಗಾಂಧಿಯವರು ಹೇಳಿದ ಮಾತೊಂದು ನೆನಪಿಗೆ ಬರುತ್ತಿದೆ: ‘ನಾನು ನನ್ನ ಸುತ್ತ ಗೋಡೆ ಕಟ್ಟಿಕೊಂಡು, ನನ್ನ ಮನೆಯ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿಕೊಂಡು ಕೂತಿರಲು ಇಚ್ಛಿಸುವುದಿಲ್ಲ; ಈ ಮನೆಯ ಕಿಟಕಿ ಬಾಗಿಲುಗಳನ್ನೆಲ್ಲ ಅಗಲವಾಗಿ ತೆರೆದಿಡುತ್ತೇನೆ.  ಹತ್ತು ದಿಕ್ಕಿನ ಗಾಳಿಗಳೆಲ್ಲ ಈ ಮನೆಯ ಮೇಲೆ ಬೀಸಲಿ. ಆದರೆ ನಾನು ಮಾತ್ರ ನಿಂತ ನೆಲದಿಂದ ವಿಚಲಿತವಾಗುವುದನ್ನು ನಿರಾಕರಿಸುತ್ತೇನೆ?’ ಈಗ ಈ ಸ್ವತಂತ್ರ ಭಾರತದ ಆಡಳಿತವನ್ನು ಕೈಗೆ ತೆಗೆದುಕೊಂಡ ಪ್ರಭೃತಿಗಳು, ಈ ದೇಶದ ಕಿಟಕಿ ಬಾಗಿಲುಗಳನ್ನೆಲ್ಲ ಅಗಲವಾಗಿ ತೆರೆದಿದ್ದಾರೆ. ಈಗ ಹತ್ತು ದಿಕ್ಕಿನ ಗಾಳಿ ಮಾತ್ರವಲ್ಲ, ಇನ್ನೂ ಏನೇನೋ, ಈ ದೇಶದ ತೆರೆದ ಬಾಗಿಲ ಮೂಲಕ ನುಗ್ಗುತ್ತಿವೆ! ಕೇಳಿಕೊಳ್ಳಬೇಕಾದ ಪ್ರಶ್ನೆ: ನಾವು ಈ ದಾಳಿಗಳಿಂದಾಗಿ, ನಿಂತ ನೆಲದ ಮೇಲೆ ಭದ್ರವಾಗಿ ಕಾಲೂರಿ ನಿಂತಿದ್ದೇವೆಯೆ?

ಹತ್ತೊಂಬತ್ತನೆಯ ಶತಮಾನದ ಮಹಾ ಸಂತರಾದ ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಯೋಗವಿಜ್ಞಾನದ ಪ್ರಯೋಗಶಾಲೆಯಲ್ಲಿ ಸಾಕ್ಷಾತ್ಕರಿಸಿಕೊಂಡು ಸಾರಿದ ಸತ್ಯ ಇದು: ‘ಜಗತ್ತಿನ ಎಲ್ಲ ಧರ್ಮಗಳ ತಿರುಳೂ ಒಂದೇ. ಯಾವ ಒಂದು ಧರ್ಮವೂ ಮತ್ತೊಂದಕ್ಕಿಂತ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ; ಎಲ್ಲ ಧರ್ಮಗಳೂ ಸತ್ಯವೇ. ಮತಗಳೆಲ್ಲ ಮೂಲತಃ ಪಥಗಳೆ. ಶ್ರೀ ರಾಮಕೃಷ್ಣರ ಸಾಕ್ಷಾತ್ ಶಿಷ್ಯರಾದ ಶ್ರೀ ಸ್ವಾಮಿ ವಿವೇಕಾನಂದರು, ಈ ಮಹಾ ಸತ್ಯವನ್ನು ಸೆಪ್ಟಂಬರ್ ಹನ್ನೊಂದು, ೧೮೯೩ರಂದು ಅಮೆರಿಕಾದ ಚಿಕಾಗೋ ನಗರದ ಸರ್ವಧರ್ಮ ಸಮ್ಮೇಳನದಲ್ಲಿ ಜಗತ್ತಿನ ಕಿವಿಗೆ ಕೇಳುವಂತೆ ಉದ್ಘೋಷಿಸಿದ ಒಂದು ಶತಮಾನದ ತರುವಾಯ, ಅದೇ ಸೆಪ್ಟಂಬರ್ ಹನ್ನೊಂದನೆಯ ತಾರೀಖು ೨೦೦೧ರಂದು ಇಸ್ಲಾಂ ಧಾರ್ಮಿಕ ಮೂಲಭೂತವಾದಿ ಉಗ್ರರಿಂದ ಅಮೆರಿಕಾದ ನ್ಯೂಯಾರ್ಕ್ ನಗರದ ಬೃಹತ್ ವಾಣಿಜ್ಯ ಸಂಕೀರ್ಣದ ಅವಳಿ ಕಟ್ಟಡಗಳು ಧ್ವಂಸಗೊಂಡ ಸಂಗತಿ, ಜಗತ್ತಿನಾದ್ಯಂತ ಸುದ್ದಿ ಮಾಡಿ ತಲ್ಲಣದ ತರಂಗಗಳನ್ನು ಎಬ್ಬಿಸಿತೆಂಬುದು ಒಂದು ವಿಪರ‍್ಯಾಸದ ವಿಷಯವಾಗಿದೆ. ಆದರೆ ಇದಕ್ಕೂ ಮುನ್ನ ಅದೇ ಶ್ರೀ ರಾಮಕೃಷ್ಣರ-ಸ್ವಾಮಿ ವಿವೇಕಾನಂದರ ನಾಡಾದ ಭಾರತದಲ್ಲಿ ಕಳೆದ ಎರಡು-ಮೂರು ದಶಕಗಳ ಕಾಲಮಾನದಲ್ಲಿ ಕೋಮುಗಲಭೆಗಳಲ್ಲಿ ಸತ್ತವರ ಸಂಖ್ಯೆ, ಅಮೆರಿಕಾದ ಈ ಬೃಹದ್ ದುರ್ಘಟನೆಯಲ್ಲಿ ಸತ್ತವರ ಸಂಖ್ಯೆಗಿಂತ ಅನೇಕಪಟ್ಟು ಮಿಗಿಲಾಗಿದೆ ಎಂಬ ಸಂಗತಿ ಜಗತ್ತಿನಾದ್ಯಂತ ಅಂತಹ ದೊಡ್ಡ ಸುದ್ದಿಯಾಗದೆ ಹೋದರೂ- ನಿಜಕ್ಕೂ ಅದು ಭಾರತದ ಧಾರ್ಮಿಕ ಸಾಮರಸ್ಯಕ್ಕೆ ಬಿದ್ದ ಬಹುದೊಡ್ಡ ಹೊಡೆತವಾಗಿದೆ. ಇಂಡಿಯಾದ ಚರಿತ್ರೆಯಲ್ಲಿ ಒಂದು ಧರ್ಮದವರಿಗೂ ಮತ್ತೊಂದು ಧರ್ಮದವರಿಗೂ ಸಂಘರ್ಷಗಳು ಉಂಟಾದ ಸಂದರ್ಭಗಳು ಸಾಕಷ್ಟಿದ್ದರೂ, ಅವು ಅನಂತರದ ಸಹಬಾಳ್ವೆಗೆ ಅಷ್ಟೇನೂ ಮಾರಕವಾಗಲಿಲ್ಲವೆಂದು ಹೇಳಬಹುದು. ಜತೆಗೆ ಯಾವ ಧರ್ಮದ ದೊರೆಗಳು ರಾಜ್ಯಭಾರ ಮಾಡಿದರೂ ಅವರು ಬಹುತೇಕ ತಮ್ಮ ರಾಜ್ಯದ ಎಲ್ಲ ಧರ್ಮಗಳವರ ಹಿತವನ್ನು ತಕ್ಕಮಟ್ಟಿಗೆ ಕಾಯ್ದುಕೊಂಡು ಬರುವ ಕಡೆಗೆ ಗಮನವಿತ್ತರೆಂದು ಚಾರಿತ್ರಿಕ ದಾಖಲೆಗಳು ಸಾಬೀತುಪಡಿಸುತ್ತವೆ.  ಇಂಡಿಯಾದ ರಾಜರು ತಾಳಿದ ಧಾರ್ಮಿಕ ನಿಲುವುಗಳನ್ನು  ಸ್ಥೂಲವಾಗಿ ಮೂರು ಬಗೆ ಎಂದು ವಿಂಗಡಿಸಿ ನೋಡಬಹುದು: ಮೊದಲನೆ ವರ್ಗದವರು, ಸರ್ವಧರ್ಮ ಸಹಿಷ್ಣುಗಳು; ಅಶೋಕ-ಅಕ್ಬರ್ ಇಂಥವರು. ಎರಡನೆಯವರು, ಸ್ವಧರ್ಮಸಂರಕ್ಷಕರು, ಎಂದರೆ ಅನ್ಯಧರ್ಮಗಳ ಆಕ್ರಮಣಗಳಿಂದ ಹಿಂದೂಧರ್ಮವನ್ನು ಸಂರಕ್ಷಿಸಿದವರು. ಶಿವಾಜಿ ಮತ್ತು ವಿಜಯನಗರದ ರಾಜರು ಈ ಸಾಲಿಗೆ ಸೇರುತ್ತಾರೆ. ಮೂರನೆಯವರು, ತಮ್ಮ ಧರ್ಮವೇ ಶ್ರೇಷ್ಠ ಎಂದು ಅದನ್ನು ಬಲವಂತವಾಗಿ ಅನ್ಯಧರ್ಮೀಯರ ಮೇಲೆ ಹೇರುವವರು. ಗಝನಿ ಮಹಮ್ಮದ್, ಔರಂಗಜೇಬ್ ಇಂಥವರು. ಈ ಬಗೆಯ ಜನರು ಎಷ್ಟೋ ವೇಳೆ ಅನ್ಯಧರ್ಮೀಯರ ದೇವಾಲಯಾದಿಗಳನ್ನು ನಾಶಪಡಿಸಿದ ನಿದರ್ಶನಗಳೂ ಸಾಕಷ್ಟಿವೆ. ಈ ದಿನ ಒಂದು ನಿರ್ದಿಷ್ಟ ಕೋಮಿಗೆ ಸೇರಿದವರ ಬಗ್ಗೆ ದ್ವೇಷ- ಅಸಹನೆಗಳನ್ನು ಪ್ರಚೋದಿಸಲು, ದೇವಾಲಯ ನಾಶದ ದೃಷ್ಟಾಂತಗಳನ್ನು ಮುಂದಿಡುತ್ತಾ, ಈ ದೇಶದ ಎಲ್ಲ ದೇವಾಲಯಗಳ ನಾಶವೂ, ಉದ್ದೇಶಪೂರ್ವಕವಾದ ಮತೀಯ ದ್ವೇಷಗಳಿಂದಲೇ ಸಂಭವಿಸಿತೆಂದು ಚರಿತ್ರೆಯನ್ನು ವ್ಯಾಖ್ಯಾನಿಸುವವರು ಸಾಕಷ್ಟಿದ್ದಾರೆ. ನಾವು ಈ ಸಂಗತಿಗಳನ್ನು ತಕ್ಕ ಎಚ್ಚರ ಮತ್ತು ವಿವೇಚನೆಯಿಂದ ಪರಿಶೀಲಿಸಿ ಇವುಗಳ ಸತ್ಯಾಸತ್ಯತೆಗಳನ್ನು ಸರಿಯಾಗಿ ಮಂಡಿಸುವ ಅಗತ್ಯವಿದೆ. ಯಾಕೆಂದರೆ ಹಿಂದೆ ಈ ದೇಶದಲ್ಲಿ ಒಂದು ಧರ್ಮದವರ ದೇವಾಲಯಗಳನ್ನು ಇನ್ನೊಂದು ಧರ್ಮದವರು ನಾಶಪಡಿಸಿದ ನಿದರ್ಶನಗಳು ಸಾಕಷ್ಟಿದ್ದರೂ, ಅವೆಲ್ಲವೂ ಧಾರ್ಮಿಕ ಅಸಹನೆಯ ಕಾರಣದಿಂದಲೆ ಸಂಭವಿಸಿದವುಗಳೆಂದು ತೀರ್ಮಾನಿಸುವುದು ಚರಿತ್ರೆಗೆ ಮಾಡುವ ಅಪಚಾರವಾಗುತ್ತದೆ. ವಾಸ್ತವದ ಸಂಗತಿಯೇನೆಂದರೆ ದೇವಾಲಯಗಳು ಹಿಂದಿನ ಕಾಲದ ಸಾಮಾಜಿಕ ಸಂದರ್ಭದಲ್ಲಿ ವಹಿಸುತ್ತಿದ್ದ ಪಾತ್ರ ಬಹುಮುಖಿಯಾಗಿದ್ದರೂ, ಅವು ಸಂಪತ್ತಿನ ಸಂಚಯಸ್ಥಾನಗಳೂ ಆಗಿದ್ದುದರಿಂದ ದೇವಾಲಯಗಳ ಮೇಲೆ ನಡೆದ ದಾಳಿಗಳ ಹಿಂದೆ, ಹೀಗೆ ಸಂಪತ್ತನ್ನು ದೋಚುವ ಆರ್ಥಿಕ ಉದ್ದೇಶವೇ ಪ್ರಧಾನವಾಗಿತ್ತು ಎನ್ನಬಹುದು. ಘಜನಿ ಮಹಮದನು ಗುಜರಾತಿನ ಸುಪ್ರಸಿದ್ಧ ದೇವಾಲಯವನ್ನು ಕೊಳ್ಳೆ ಹೊಡೆಯಲು ಮುಖ್ಯ  ಆಕರ್ಷಣೆಯಾದದ್ದು ಅಲ್ಲಿ ಸಂಚಯನಗೊಂಡ ಸಂಪತ್ತೇ ಹೊರತು, ಆತನ ಧರ್ಮ ದ್ವೇಷವಲ್ಲ ಮತ್ತು ಹೀಗೆ ಸಂಪತ್ತಿಗಾಗಿ ಬೇರೆ ರಾಜ್ಯಗಳ ದೇವಸ್ಥಾನಗಳ ಮೇಲೆ ದಾಳಿ ಮಾಡಿದವರು ಕೇವಲ ಮುಸ್ಲಿಂ ದೊರೆಗಳೇ ಅಲ್ಲ, ಹಿಂದೂ ರಾಜರುಗಳೂ ಮತ್ತೊಬ್ಬ ಹಿಂದೂ ರಾಜರುಗಳ ರಾಜ್ಯಗಳ ಮೇಲೆ ದಾಳಿ ನಡೆಯಿಸಿದಾಗ ಸಂಭವಿಸಿದ ಘಟನೆಗಳೂ ಹೌದು. ನಿದರ್ಶನಕ್ಕೆ ಹೇಳುವುದಾದರೆ ಕಾಶ್ಮೀರ ರಾಜಮನೆತನದ ಹರ್ಷ ಎಂಬಾತನು ದೇವಾಲಯಗಳನ್ನು ಹೀಗೆ ಸಂಪತ್ತಿಗಾಗಿ ಕೊಳ್ಳೆ ಹೊಡೆಯಲೆಂದೇ ‘ದೇವಾಲಯೋತ್ಪಾಟನ ನಾಯಕ’ ಎಂಬ ಮಂತ್ರಿಯನ್ನು ನೇಮಿಸಿದ್ದನಂತೆ! ಅಷ್ಟೇ ಅಲ್ಲ, ಗೆದ್ದ ರಾಜರು ಸೋತ ರಾಜರ ನಗರಗಳನ್ನು ಲೂಟಿ ಮಾಡುವುದು, ಅವರ ದೇವಾಲಯಗಳನ್ನು ನಾಶಪಡಿಸುವುದು, ತಮ್ಮ ವಿಜಯವನ್ನು ಸಾರುವ ಸಂಕೇತವೂ ಆಗಿತ್ತು. ಕರ್ನಾಟಕದ ಪವಿತ್ರ ಕ್ಷೇತ್ರವಾದ ಶೃಂಗೇರಿಯನ್ನು ಮರಾಠರು ಲೂಟಿ ಮಾಡಿದಾಗ, ಆ ಹಾನಿಯ ನಷ್ಟವನ್ನು ಸರಿಪಡಿಸಿ ಶಾರದಾದೇವಿಯ ಪೂಜೆಗೆ ಅನುಕೂಲ ಮಾಡಿಕೊಟ್ಟವನು ಟಿಪ್ಪೂಸುಲ್ತಾನ್. ಕ್ರಿ.ಶ. ೧೬೭೦ರಲ್ಲಿ ಔರಂಗಜೇಬನು ಜಾಟರನ್ನು ಸೋಲಿಸಿ ಮಥುರಾದಲ್ಲಿದ್ದ ಅವರ ಕೇಶವ ದೇವಾಲಯವನ್ನು ನಾಶಪಡಿಸಿ ಅದರ ಪಕ್ಕದಲ್ಲಿ ಈದ್ಗಾವನ್ನು ಕಟ್ಟಿಸಿದ್ದು ಎಷ್ಟು ನಿಜವೋ, ಹಾಗೆಯೇ ಬೃಂದಾವನದ ಶ್ರೀಕೃಷ್ಣ ದೇವಾಲಯಕ್ಕೆ ಕೋಟಿ ರೂಪಾಯಿ ಬೆಲೆ ಬಾಳುವ ದಾನವನ್ನು ಕೊಟ್ಟನೆಂಬುದು ಅಷ್ಟೇ ನಿಜ. ಹನ್ನೊಂದು ಹನ್ನೆರಡನೆ ಶತಮಾನಗಳಲ್ಲಿ ಅನೇಕ ಬಸದಿಗಳು ಶಿವ ದೇವಾಲಯಗಳಾಗಿ ಪರಿವರ್ತನೆ- ಗೊಂಡಿವೆ. ವಿಜಯನಗರದ ರಾಜರ ಕಾಲದಲ್ಲಿ ವೈಷ್ಣವರಿಂದ ಜೈನರ ಮೇಲೆ ಹಲ್ಲೆ ನಡೆದು, ಅನಂತರ ಸಂಧಾನ ನಡೆದು, ಜೈನ ದೇವಾಲಯಗಳ ಉಸ್ತುವಾರಿಯನ್ನು ವೈಷ್ಣವರೇ ನೋಡಿಕೊಳ್ಳಲು ಒಪ್ಪಿದ ಅಪರೂಪದ ಪ್ರಸಂಗವು ದಾಖಲಾಗಿದೆ. ಆದರೆ ಈ ಎಲ್ಲ ಧಾರ್ಮಿಕ ಸಂಘರ್ಷಗಳನ್ನು ಈ ಹೊತ್ತಿನ ಕೋಮುಗಲಭೆಗಳ ಸಾಲಿಗೆ ಸೇರಿಸಲು ಬರುವುದಿಲ್ಲ; ಯಾಕೆಂದರೆ ಇವುಗಳು ಇಂದಿನಂತೆ, ಅಂದಿನ ಆಳರಸರ ಪಾಲಿಗೆ ರಾಜಶಾಸನದ ಸಮಸ್ಯೆಗಳಾಗಿರಲಿಲ್ಲ. ಎಷ್ಟೋ ರಾಜರು, ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಹೋಗುವುದು ಮತ್ತು ಹೋಗಿದ್ದು ಅವರ ವೈಯಕ್ತಿಕ ಆಯ್ಕೆಯ ಸಂಗತಿಯಾಗಿತ್ತು.

ಆದರೆ ಯಾವಾಗ ಈ ದೇಶ ವಿಭಜನೆಗೊಂಡು ಎರಡಾಯಿತೋ, ಮತ್ತು ಈ ದೇಶದ ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರೈಸ್ತರು ಒಂದು ಬಗೆಯ ಅರಕ್ಷಿತ ಹಾಗೂ ಆತಂಕದ ಸ್ಥಿತಿಗೆ ಒಳಗಾದರೋ ಮತ್ತು ಅವರ ರಾಷ್ಟ್ರೀಯತೆಯನ್ನೆ ಬಹುಸಂಖ್ಯಾತರು ಶಂಕಿಸತೊಡಗಿದರೋ, ಪ್ರಶ್ನಿಸತೊಡಗಿದರೋ, ಅಂದಿನಿಂದ ಈ ದೇಶದ ಕೋಮುವಾದ, ರಾಜಕೀಯದ ವಿಷಯವಾಗಿ, ತೀರಾ ವಿಕೃತಗೊಂಡ ಸ್ವರೂಪವನ್ನು ಪಡೆದುಕೊಂಡಿತು. ತನ್ನ ಸಂವಿಧಾನದಲ್ಲಿ ಸೆಕ್ಯುಲರ್ ಅಥವಾ ಜಾತ್ಯತೀತತೆಯನ್ನು ಘೋಷಿಸಿಕೊಂಡ ಭಾರತದ ರಾಜಕಾರಣದ ಒಂದು ಪಂಗಡವು, ರಾಜಕೀಯ ಲಾಭದ ಕಾರಣಕ್ಕಾಗಿ ‘ಹಿಂದೂ ರಾಷ್ಟ್ರೀಯವಾದ’ವನ್ನು ಎತ್ತಿಹಿಡಿಯುತ್ತ, ತನಗೆ ಅನುಕೂಲಕರವಾದ ರೀತಿಯಲ್ಲಿ ಈ ದೇಶದ ಚರಿತ್ರೆಯನ್ನು ವ್ಯಾಖ್ಯಾನಿಸುತ್ತ, ಕೋಮುವಾದವನ್ನು ಪ್ರಬಲವಾಗಿ ಪ್ರತಿಪಾದಿಸತೊಡಗಿದೆ. ಒಂದು ಧರ್ಮದವರನ್ನು ಇನ್ನೊಂದು ಧರ್ಮದವರ ವಿರುದ್ಧ ಎತ್ತಿಕಟ್ಟುವುದು, ಬಹುಸಂಖ್ಯಾತರ ಸಂಸ್ಕೃತಿಗೆ, ಈ ಅಲ್ಪಸಂಖ್ಯಾತರು ಹೊರಗಿನವರು ಎಂದು ವಾದಿಸುವುದು, ಚರಿತ್ರೆಯ ಉದ್ದಕ್ಕೂ ಹಿಂದೂಧರ್ಮದ ವಿರುದ್ಧವಾಗಿ ಅವರು ಮಾಡಿರುವರೆನ್ನಲಾದ ಅನ್ಯಾಯ- ಅಪಚಾರಗಳನ್ನು ಬಣ್ಣಕಟ್ಟಿ ಎತ್ತಿಹೇಳಿ ಅವರ ಬಗ್ಗೆ ದ್ವೇಷ-ತಿರಸ್ಕಾರಗಳನ್ನು ಹುಟ್ಟಿಸುವುದು ಈ ಕೋಮುವಾದದ ಲಕ್ಷಣವಾಗಿದೆ.

ಸರಿಯಾಗಿ ವಿಚಾರ ಮಾಡಿ ನೋಡಿದರೆ ನಿಜವಾದ ಹಿಂದೂ- ಧರ್ಮವಾಗಲೀ ಭಾರತೀಯ  ಸಂಸ್ಕೃತಿಯಾಗಲೀ ಕೋಮುವಾದವನ್ನೂ, ಧಾರ್ಮಿಕ ಮೂಲಭೂತ ವಾದವನ್ನೂ ಪ್ರತಿಪಾದಿಸುವ ಸ್ವರೂಪದ್ದಲ್ಲ. ಯಾಕೆಂದರೆ ಎಲ್ಲ ಬಗೆಯ ವೈವಿಧ್ಯತೆಗಳನ್ನು ಮಾನ್ಯ ಮಾಡುವುದು ಅದರ ಲಕ್ಷಣವಾಗಿದೆ. ಅನೇಕ ಪರಕೀಯ ಸಂಸ್ಕೃತಿಗಳನ್ನು ಬರಮಾಡಿಕೊಂಡರೂ, ಆ ಕಾರಣಕ್ಕೆ ತನ್ನತನವನ್ನು ಕಳೆದುಕೊಳ್ಳದೆ, ಅವುಗಳೆಲ್ಲದರ ಸಹಬಾಳ್ವೆಗೆ ಅವಕಾಶ ಮಾಡಿಕೊಡುವ ಉದಾರತೆ ಹಿಂದೂ ಧರ್ಮಕ್ಕೆ ಇದೆ. ಜತೆಗೆ ಭಾರತೀಯ ಸಂಸ್ಕೃತಿಗೆ, ಅನೇಕ ಪರಕೀಯ ಧರ್ಮ ಹಾಗೂ ಸಂಸ್ಕೃತಿಗಳು ಕೊಟ್ಟ ಕೊಡುಗೆಗಳನ್ನೂ ನಾವು ನಿರ್ಲಕ್ಷಿಸಲು ಬರುವುದಿಲ್ಲ. ಜಗತ್ತಿನ ಬಹುದೊಡ್ಡ ಧರ್ಮಗಳು ಇಲ್ಲಿಗೆ ಬಂದು ನೆಲಸಿವೆ. ಪ್ರಾಚೀನ ಹಿಂದೂಧರ್ಮದ ಜತೆಗೆ,

ಕ್ರೈಸ್ತ, ಮಹಮದೀಯ, ಬೌದ್ಧ, ಜೈನ, ಪಾರಸಿಕ, ಸೂಫೀ – ಇತ್ಯಾದಿ ವಿವಿಧ ಧಾರ್ಮಿಕ ಪಂಥಗಳು ಇಲ್ಲಿ ನೆಲೆನಿಂತಿವೆ. ಮತ್ತು ಬಹುಮುಖೀ ಸಂಸ್ಕೃತಿಯನ್ನು ಅವು ರೂಪಿಸಿವೆ. ಅವುಗಳದೇ ಆದ ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ಸಾಹಿತ್ಯಗಳನ್ನು ಕೊಡುಗೆಯಾಗಿ ನೀಡಿವೆ. ಮತ್ತು ವಿವಿಧ ತತ್ವ ಪ್ರಣಾಲಿಗಳನ್ನು ಈ ಮಣ್ಣಿನಲ್ಲಿ ಬಿತ್ತಿವೆ. ಆಸ್ತಿಕತೆಯಂತೆ ನಾಸ್ತಿಕ್ಯವೂ, ದೇವಾಲಯ ನಿರ್ಮಾಣದ ಉತ್ಸಾಹದಂತೆ, ದೇವಾಲಯ ನಿರಾಕರಣೆಯ ಧ್ವನಿಗಳೂ ಈ ದೇಶದ ಚರಿತ್ರೆಯ ಒಂದು ಭಾಗವಾಗಿವೆ. ಇದರ ಜತೆ ವಿವಿಧ ಪ್ರಾಂತೀಯ ಉಪಸಂಸ್ಕೃತಿಗಳು, ಅವುಗಳು ಈ ದೇಶದ ಪ್ರಧಾನಧಾರೆಗೆ ಮುಖಾಮುಖಿಯಾಗಿ, ತಮ್ಮ ಪ್ರತಿಕ್ರಿಯೆಗಳನ್ನು ಅಭಿವ್ಯಕ್ತಿಸಿದ ಕ್ರಮಗಳೂ, ವಿವಿಧ ಪ್ರಾದೇಶಿಕ ಭಾಷಾ ಸಾಹಿತ್ಯಗಳಲ್ಲಿ ಮೈಪಡೆದುಕೊಂಡಿವೆ. ಈ ಎಲ್ಲವುಗಳ ಮೊತ್ತವೂ, ಬಹುಸಂಕೀರ್ಣವೂ ಆಗಿರುವ ಭಾರತೀಯ ಸಂಸ್ಕೃತಿಯ ಬಹುಮುಖಿತ್ವವನ್ನು ಅರ್ಥಮಾಡಿಕೊಳ್ಳದೆ, ಇಂಡಿಯಾದಲ್ಲಿರುವುದೇನಿದ್ದರೂ ಮೂಲತಃ ಹಿಂದೂ ಸಂಸ್ಕೃತಿ ಎಂದೂ, ಅದೊಂದೆ ಸರ್ವಶ್ರೇಷ್ಠ ಎಂದೂ, ಉಳಿದವೆಲ್ಲ ಹೊರಗಿನವುಗಳೆಂದೂ ಪ್ರತಿಪಾದಿಸುವುದು ಅವೈಚಾರಿಕ ಮಾತ್ರವಲ್ಲ, ಅಪಾಯಕಾರಿಯಾದದ್ದು ಕೂಡ. ಆದಕಾರಣ ಭಾರತೀಯ ಸಂಸ್ಕೃತಿಯ ಈ ಬಹುಮುಖತ್ವವನ್ನು ನಿರಾಕರಿಸುತ್ತ, ಏಕಮುಖೀ ಸಂಸ್ಕೃತಿಯನ್ನು ಪ್ರತಿಪಾದಿಸುವ ನಿಲುವುಗಳನ್ನು ನಾವು ತೀವ್ರವಾಗಿ ವಿರೋಧಿಸುವುದು ಅಗತ್ಯವಾಗಿದೆ.

ಒಬ್ಬ ಬರೆಹಗಾರನಾಗಿ ನನಗೆ ಅನ್ನಿಸುವುದೇನೆಂದರೆ, ದೇವರಾಗಲೀ, ದೇವಾಲಯಗಳಾಗಲೀ, ಮತ-ಧರ್ಮಗಳಾಗಲೀ, ಈ ಹೊತ್ತಿನ ಮನುಷ್ಯನ ಮೊದಲ ಅಗತ್ಯಗಳಲ್ಲ. ಅಗತ್ಯವಾದುದೆಂದರೆ, ಈ ಮನುಷ್ಯನ ಮತ್ತು ಅವನನ್ನು ಒಳಗೊಂಡ ಸಮಾಜದ ಸ್ವಾಸ್ಥ ವನ್ನು ಇನ್ನಷ್ಟು ಕೆಡಿಸದ ಹಾಗೆ ಉಳಿಸುವುದು ಹೇಗೆ- ಎನ್ನುವುದು. ಮನುಷ್ಯನ ಆಧ್ಯಾತ್ಮಿಕ ಆವಶ್ಯಕತೆಗಳಾಗಿದ್ದ ಹಾಗೂ ಅವರೆಲ್ಲರನ್ನು ಹಿಡಿದು ಕೂಡಿಸುತ್ತಿದ್ದ ಧರ್ಮ-ದೇವರು- ದೇವಾಲಯಗಳೇ, ಈ ಮನುಷ್ಯರನ್ನು ಒಡೆಯುವ ಸ್ಫೋಟಕ ಸಾಮಗ್ರಿಗಳಾಗಿ ಬಳಕೆಯಾಗುತ್ತಿರುವ ಈ ಹೊತ್ತಿನಲ್ಲಿ, ಇವುಗಳನ್ನು ನಿರಾಕರಿಸಿ ನಿಲ್ಲಬಲ್ಲಂಥ ಮತ್ತು ನಮ್ಮ ರಾಷ್ಟ್ರದ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲಂಥ ಮನಃಸ್ಥಿತಿಯೊಂದು ನಿರ್ಮಾಣವಾದೀತೇ- ಎಂದು ನಾನು ಕಾದಿದ್ದೇನೆ.[1]

ಯಾವುದೂ ಸಣ್ಣದಲ್ಲ : ೨೦೦೪


[1] ೧.   ತಾರೀಖು ೩.೨.೨೦೦೩ ರಂದು ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಹಾಲ್ ನಲ್ಲಿ ಸೇರಿದ ಅಖಿಲ ಭಾರತೀಯ ವಿದ್ಯಾರ್ಥಿ ಸಂಘಟನೆಯ (ಎಸ್. ಎಫ್. ಐ) ಲ್ಲಿ ಮುಖ್ಯ ಅತಿಥಿಯಾಗಿ ನಾನು ಮಾಡಿದ ಭಾಷಣದ ಲೇಖನ ರೂಪ.

೨.   ಈ ಉಪನ್ಯಾಸ ಲೇಖನದಲ್ಲಿ ಪ್ರಸ್ತಾಪಿಸಲಾಗಿರುವ ಕೆಲವು ಚಾರಿತ್ರಿಕ ಸಂಗತಿಗಳಿಗೆ ನಾನು ಶ್ರೀ ರಾಜಾರಾಮ ಹೆಗಡೆಯವರ ‘ಲೌಕಿಕ -ಅಲೌಕಿಕ’ (೨೦೦೧) ಎಂಬ ಕೃತಿಗೆ ಋಣಿಯಾಗಿದ್ದೇನೆ.