ನಾಡಿಗೆ ಮತ್ತು ರಾಷ್ಟ್ರಕ್ಕೆ ತನ್ನೊಡಲ ಚಿನ್ನವನ್ನು ಧಾರೆಯೆರೆದು ‘ಚಿನ್ನದ ಜಿಲ್ಲೆ’ ಎಂದೇ ಹೆಸರಾಗಿದ್ದ ಅವಿಭಜಿತ ಕೋಲಾರ ಜಿಲ್ಲೆಯು ನಾಡಿನ ಕೃಷಿ, ಸಾಹಿತ್ಯ, ರಾಜಕೀಯ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡಿದ ಗೌರವಕ್ಕೆ ಪಾತ್ರವಾಗಿದೆ. ಸಿಲ್ಕ್ ಅಂಡ್ ಮಿಲ್ಕ್: ಹಣ್ಣು ಮತ್ತು ತರಕಾರಿಗಳ ರಾಜಧಾನಿ ಎನಿಸಿರುವ ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಗಳು ಜನಪರ ಹೋರಾಟಗಳು ಮತ್ತು ಜನಪರ ಸಂಸ್ಕೃತಿಯನ್ನು ಮೆರೆದಿವೆ. ಆಗಸ್ಟ್ ೨೦೦೭ರಂದು ಚಿಕ್ಕಬಳ್ಳಾಪುರ ಉಪವಿಭಾಗವು ಸ್ವತಂತ್ರ ಜಿಲ್ಲೆಯಾಗಿ ಕೋಲಾರದಿಂದ ವಿಭಜನೆ ಹೊಂದಿದೆ. ಆದರೂ ಕೂಡ ಎರಡೂ ಜಿಲ್ಲೆಯ ಜನರು ಭಾವನಾತ್ಮಕ ಮತ್ತು ಸಾಂಸ್ಕೃತಿಕವಾಗಿ ಸಮನ್ವಯತೆ ಹೊಂದಿರುವುದು ಒಂದು ವಿಶಿμಂಔ ಗುಣ. ಈ ಎರಡು ಜಿಲ್ಲೆಗಳು ಒಟ್ಟು ೮೨೨೩ ಚ.ಕಿ.ಮಿ. ವಿಸ್ತೀರ್ಣ ಹೊಂದಿವೆ. ೨೦೦೧ರ ಜನಗಣತಿಯ ಪ್ರಕಾರ ೨೫.೩೬ ಲಕ್ಷ ಜನಸಂಖ್ಯೆ ಇದೆ. ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಜಿಲ್ಲೆಯ ಒಟ್ಟು ಸಾಕ್ಷರತೆ ಪ್ರಮಾಣ (೨೦೦೧) ಶೇಕಡ  ೬೩.೧೪ ರಷ್ಟಿದೆ. ಇದು ರಾಜ್ಯದ ಮತ್ತು  ರಾಷ್ಟ್ರದ ಸರಾಸರಿ ಸಾಕ್ಷರತಾ ಪ್ರಮಾಣಕ್ಕಿಂತ ಕಡಿಮೆ ಇದೆ.

ಐತಿಹಾಸಿಕವಾಗಿ ಕೋಲಾರವು ೨ನೇ ಶತಮಾನದಲ್ಲಿಯೇ ಗಂಗರ ರಾಜಧಾನಿಯಾಗಿದ್ದು, ನಂತರ ಚೋಳರ ಆಳ್ವಿಕೆಗೆ ಒಳಪಟ್ಟಿದೆ. ೪ ರಿಂದ ೧೯ನೇ ಶತಮಾನದವರೆಗೆ ಕದಂಬ, ಗಂಗ, ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರಿನ ಅರಸರು, ಪಾಳೇಗಾರರು ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು.

ಭೌಗೋಳಿಕವಾಗಿ ಬೆಟ್ಟಗಳು ಹಾಗೂ ಕೆರೆಗಳ ಜಿಲ್ಲೆ ಎಂದೇ ಪ್ರಸಿದ್ಧವಾಗಿರುವ ಈ ಎರಡು ಜಿಲ್ಲೆಗಳಲ್ಲೂ ನೂರರು ಬೆಟ್ಟಗಳು ಹಾಗೂ ಸಾವಿರಾರು (೪೫೦೦ಕ್ಕಿಂತ ಹೆಚ್ಚು) ಕೆರೆಗಳಿವೆ. ಜಿಲ್ಲೆಯಲ್ಲಿರುವ ಬೆಟ್ಟಗಳಿಗೆ ಕೆರೆಗಳು ಪ್ರಕೃತಿಯು ಹಾಕಿರುವ ಮಾಲೆಯಂತಿದೆ. ಜಿಲ್ಲಾದರ್ಶನ ಮಾಡುವ ಮಕ್ಕಳಿಗೆ ಜಿಲ್ಲೆಯ ಬೆಟ್ಟಗಳು ಹಾಗೂ ಕೆರೆಗಳ ಬಗೆಗೆ ಗಮನಕ್ಕೆ ತರುವುದು ಅವಶ್ಯಕ. ಪಂಚಗಿರಿ ಸಮುಚ್ಚಯವಾಗಿರುವ ನಂದಿ ಬೆಟ್ಟವು ಚಿತ್ರಾವತಿ, ಪಾಪಾಗ್ನಿ, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ನದಿಗಳ ಉಗಮ ಸ್ಥಾನವಾಗಿದೆ. ಸರಾಸರಿ ವಾರ್ಷಿಕ ೭೪೪ ಮಿ.ಮೀ. ಮಳೆಯಾಗುವ ಈ ಜಿಲ್ಲೆಯಲ್ಲಿ ಅಂತರ್ಜಲದ ಕೊರತೆ ಉಂಟಾಗಿದ್ದು ಅಂತರ್ಜಲ ವೃದ್ಧಿ ಮತ್ತು ಸಂರಕ್ಷಣೆಗಾಗಿ ಅಗತ್ಯ ಯೋಜನೆಗಳನ್ನು ರೂಪಿಸಬೇಕಾಗಿದೆ.

ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಗಳು ಆಂಧ್ರದ ಗಡಿಯಲ್ಲಿದ್ದು ಭಾಷಿಕ ಪ್ರಭಾವ ಕಂಡುಬರುತ್ತದೆ. ಈ ಜಿಲ್ಲೆಗಳ ಆಡಳಿತ ಹಾಗೂ ಶಿಕ್ಷಣದ ಭಾಷೆ ಕನ್ನಡವೇ ಆಗಿದ್ದರೂ ಸಹ ಸಾಮಾಜಿಕ ವ್ಯವಹಾರದಲ್ಲಿ ತೆಲುಗು ಭಾಷೆಯ ಬಳಕೆಯೇ ಹೆಚ್ಚು. ಸಾಹಿತ್ಯ,

ಸಂಸ್ಕೃತಿ ಹಾಗೂ ರಾಜಕೀಯ ಕ್ಷೇತ್ರಗಳಿಗೆ ವಿಶೇಷ ಕೊಡುಗೆ ನೀಡಿರುವ ಈ ಜಿಲ್ಲೆಯು ನಾಡಿನ ಮೊದಲ ಮುಖ್ಯಮಂತ್ರಿ ಕೆ. ಚಂಗಲರಾಯರೆಡ್ಡಿ ಅವರನ್ನು ಕೊಟ್ಟ ಹೆಗ್ಗೆಳಿಕೆಗೆ ಪಾತ್ರವಾಗಿದೆ. ಅನುಭಾವಿ ಕವಿ ಕೈವಾರ ನಾರಣಪ್ಪ, ಗೂಳೂರಿನ ಅನುಭಾವಿ ಶರಣರು, ಗುಟ್ಟಳ್ಳಿ ಆಂಜನಪ್ಪಸ್ವಾಮಿ, ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ, ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ, ಕನ್ನಡದ ಆಸ್ತಿ ಎನಿಸಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ. ಗುಂಡಪ್ಪ, ತೀ.ತಾ. ಶರ್ಮ ರಂತಹ ದಿಗ್ಗಜರಿಗೆ ಈ ಜಿಲ್ಲೆಯು ಜನ್ಮ ನೀಡಿದೆ.