ಪ್ರೇಮ ಸೇವಾನಗರ

ತಾಲ್ಲೂಕು ಕೇಂದ್ರದಿಂದ : ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೨೦ ಕಿ.ಮೀ


ನರಸಾಪುರದಿಂದ ಸುಮಾರು ೪ ಕಿ.ಮೀ ದೂರದಲ್ಲಿರುವ ಪ್ರೇಮಸೇವಾ ನಗರದಲ್ಲಿ ೨೦೦೨ ರಲ್ಲಿ ಲಾಲ್ ಭಗವಾನ್ ದಾಸರು ಎಲ್ ಅಂಡ್ ಎಲ್ ಎಂಬ ಟ್ರಸ್ಟನ್ನು ಪ್ರಾರಂಭಿಸಿ ಇದರ ಮೂಲಕ ವೃದ್ಧರಿಗೆ ಆಶ್ರಯ ನೀಡಿರುವುದಲ್ಲದೇ ಬುದ್ಧಿಮಾಂದ್ಯ ಮಕ್ಕಳ ತರಬೇತಿಗಾಗಿ ಶಾಲೆ ನಡೆಸುತ್ತಿದ್ದಾರೆ.

 

ಆದಿಮ ಮಕ್ಕಳ ವೇದಿಕೆ :

ತಾಲ್ಲೂಕು ಕೇಂದ್ರದಿಂದ : ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೦ ಕಿ.ಮೀ

ಕೋಲಾರದ ಅಂತರಗಂಗೆ ಬೆಟ್ಟದ ಮೇಲೆ ಶಿವಗಂಗೆ ಗ್ರಾಮದಲ್ಲಿ ಸಣ್ಣದೊಂದು ಮಣ್ಣಿನ ಕುಟೀರ ಕಟ್ಟಿಕೊಂಡು ಆರಂಭವಾದ ಆದಿಮ ಇದುವರೆಗೆ ನಿರ್ಲಕ್ಷಿತ ಸಾಂಸ್ಕೃತಿಕ ಸಮುದಾಯಗಳ ಅಂತರಂಗದ ಚಿಲುಮೆಯಾಗಲು ಯತ್ನಿಸುತ್ತಾ ಆ ಸಮೂಹದ ಘನತೆಯನ್ನು ಎತ್ತರಿಸುತ್ತಾ ಬಂದಿದೆ. ಸಮಾಜ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ನಮ್ಮ ಸಾಂಸ್ಕೃತಿಕ ಬೇರುಗಳಲ್ಲಿ ಜೀವಪರ ಉತ್ತರಗಳನ್ನು ಹುಡುಕುವುದು ಆದಿಮದ ಆಶಯ.

ಆದಿಮ ಮಕ್ಕಳ ಸುಪ್ತ ಪ್ರತಿಭೆಗೆ ನೀರೆರೆದು ಅಗತ್ಯ ತರಬೇತಿ ನೀಡುತ್ತಾ ಆಧುನಿಕ ಜಗತ್ತಿನ ಸವಾಲುಗಳಿಗೆ ಸಜ್ಜುಗೊಳಿಸುತ್ತಿದೆ. ಈ ನಡಿಗೆ ಹಾಡು, ನೃತ್ಯರೂಪಕ, ನಾಟಕ ಮುಂತಾದ ಸಮೂಹ ಕಲೆಗಳ ಸಂಭ್ರಮದ ಮೂಲಕ ಸಾಕಾರಗೊಳ್ಳುತ್ತಿದೆ. ಇಲ್ಲಿ ಮಕ್ಕಳಿಗಾಗಿಯೇ ಆದರ್ಶ ಗ್ರಂಥಾಲಯ ಸ್ಥಾಪಿತವಾಗಿದ್ದು, ಮಕ್ಕಳ ಅಭಿರುಚಿಗೆ ತಕ್ಕ ವೇದಿಕೆಯನ್ನು ಒದಗಿಸಿದೆ.

ಪ್ರತಿವರ್ಷವೂ ಮಕ್ಕಳಿಗಾಗಿ ’ಚುಕ್ಕಿಮೇಳ’ ಮಕ್ಕಳ ಬೇಸಿಗೆ ಶಿಬಿರಗಳನ್ನು ಅತ್ಯಂತ ಸಾರ್ಥಕವಾಗಿ ನಿರ್ವಹಿಸುತ್ತಾ ಬಂದಿದ್ದು, ಇದಕ್ಕಾಗಿ ವಿಶಿಷ್ಟ ರೀತಿಯ ಬಯಲು ರಂಗಮಂದಿರ ನಿರ್ಮಾಣವಾಗಿದೆ.

ಪ್ರತಿ ಹುಣ್ಣಿಮೆಯ ರಾತ್ರಿ ಬೆಟ್ಟದ ಮೇಲೆ ನಡೆಯುವ ಹುಣ್ಣಿಮೆ ಹಾಡು ಪ್ರತಿ ತಿಂಗಳು ತಪz ನಡೆಯುತ್ತಾ ಬಂದಿದು, ಸಾವಿರಾರು ಜನ ಉತ್ಸಾಹದಿಂದ ಪಾಲ್ಗೊಂಡು ಹಬ್ಬದ ವಾತಾವರಣ ಸೃಷ್ಟಿಸುತ್ತಾರೆ.

 

ತೇರಹಳ್ಳಿಬೆಟ್ಟ :

ತಾಲ್ಲೂಕು ಕೇಂದ್ರದಿಂದ : ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೦ ಕಿ.ಮೀ

ಶತ ಶೃಂಗದಲ್ಲಿನ ಶೃಂಗದಂತೆ ಭಾಸವಾಗುವ ಗ್ರಾಮ ತೇರುಹಳ್ಳಿ. ಚೋಳ ಗಂಗರ ಗತ ವೈಭವದ ಗಗನ ಸದೃಶವಾದ ಸ್ಮಾರಕವನ್ನು ಇಲ್ಲಿ ಕಾಣಬಹುದು. ನಲ್ಲೂರಿನ ಗಂಗಾಧರೇಶ್ವರ ದೇವಾಲಯವನ್ನು ಗಂಗ ಸಂತತಿಯ ವೀರಗಂಗನು ನಿರ್ಮಿಸಿರುತ್ತಾನೆ. ಈತನಿಗೆ ಕುವಳಾಲಪುರವೇಶ್ವರ, ನಂದಿ, ಗಿರಿನಾಥ ಎಂಬ ಬಿರುದುಗಳಿದ್ದವು. ಈತ ಕ್ರಿ.ಶ.೧೨೧೬ರಲ್ಲಿ ಭವ್ಯವಾದ ಆಲಯ ನಿರ್ಮಾಣ ಮಾಡಿಸಿ ದೇವರ ಪ್ರತಿಷ್ಠೆ ಮಾಡಿಸಿದಂತೆ ತಿಳಿದುಬರುತ್ತದೆ.  ಈ ದೇವಾಲಯದಲ್ಲಿರುವ ಸಪ್ತಮಾತೃಕೆಯರ ಶಿಲ್ಪಗಳು ಚೋಳರ ಕಾಲಕ್ಕೆ ಸೇರಿದ್ದಾಗಿವೆ.

 

ಅಂತರಗಂಗೆ

ತಾಲ್ಲೂಕು ಕೇಂದ್ರದಿಂದ: ೬ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬ ಕಿ.ಮೀ

 


ಬೆಟ್ಟದ ಸಾಲಿನ ಪೂರ್ವಸಾಲಿನಲ್ಲಿ ಗುಪ್ತಗಾಮಿನಿಯಾಗಿ ಹರಿವ ಅಂತರಗಂಗೆ ಬಸವಣ್ಣನ ಮೂರ್ತಿಯ ಬಾಯಿಂದ ನಿರಂತರ ಉಕ್ಕುತಿದ್ದು ಈ ಜಲಧಾರೆ ಹಾಗೂ ಅಲ್ಲಿನ ಪ್ರಕೃತಿ ಸೌಂದರ್ಯ ಅದ್ಭುತ, ರಮ್ಯ. ೩೬೫ ದಿನಗಳು ಸತತ ನೀರು ಸುರಿವ ಇಲ್ಲಿ ಸುಂದರ ಕೊಳ ಕಟ್ಟಲಾಗಿದೆ. ಕೊಳದ ಮಧ್ಯೆ ರಮ್ಯವಾದ ಮಂಟಪವೊಂದಿದೆ. ಶತಶೃಂಗ ಪರ್ವತ ಎಂದು ಕರೆಯಲಾಗುವ ಈ ಪ್ರದೇಶ ಚಿತ್ರವಿಚಿತ್ರ ರೂಪತಳೆದ ಬಂಡೆಗಳಿಂದ ಮನೋಹರವಾಗಿದೆ. ಹಾವಿನ ಹೆಡೆಯಂತಿರುವ ಪರ್ವತ ಶಿಖರವನ್ನೇರಿದರೆ ಕಾಣುವ ಸುತ್ತಣ ಏಳು ಊರುಗಳ ನೋಟ ನಯನ ಮೋಹಕ.

 

ಕೋಲಾರಮ್ಮ ಮತ್ತು ಸೋಮೇಶ್ವರ ದೇವಾಲಯ

ತಾಲ್ಲೂಕು ಕೇಂದ್ರದಿಂದ : ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೦ ಕಿ.ಮೀ

 

ಕೋಲಾರಮ್ಮನ ದೇವಾಲಯ

ಸೋಮೇಶ್ವರ ದೇವಾಲಯ

ಗಂಗರ ರಾಜಧಾನಿಯಾಗಿದ್ದ ಕೋಲಾರ ನಗರದಲ್ಲಿ ಕಲೆ ಸಂಸ್ಕೃತಿಗಳ ಸಾಕಾರ ರೂಪತಳೆದ ಸ್ಮಾರಕಗಳನ್ನು ಕಾಣಬಹುದಾಗಿದೆ. ಕೋಲಾರದಲ್ಲಿನ ಕೋಲಾರಮ್ಮನ ದೇವಾಲಯವು ಗಂಗರ ಶಿಲ್ಪಕಲೆಯ ಉದಾಹರಣೆಯಾಗಿದೆ. ಇದನ್ನು ರಾಜೇಂದ್ರ ಚೋಳನ ಕಾಲದಲ್ಲಿ ಶಿಲಾಮಯಗೊಳಿಸಲಾಯಿತು. ಈ ಆಲಯಕ್ಕೆ ಒಂದೇ ಮುಖ ಮಂಟಪವಿರುತ್ತದೆ. ಕೋಲಾರಮ್ಮನನ್ನು “ಪೀಡಾರಿಯರ್” ಎಂದು ವ್ಯವಹರಿಸಿದ್ದಾರೆ. ಜಾನಪದರು ಈಕೆಯನ್ನು ಚೇಳೂರಮ್ಮನೆಂದು ಆರಾಧಿಸುತ್ತಾರೆ. ಕೋಲಾರಮ್ಮ ದೇವಾಲಯದ ಹೊರ ಬಿತ್ತಿಗಳ ಮೇಲೆ ಸುಮಾರು ೩೦ ಶಾಸನಗಳಿವೆ. ಇವನ್ನು ಕನ್ನಡ, ತಮಿಳು ಭಾಷೆಗಳಲ್ಲಿ ರಚಿಸಲಾಗಿದೆ.

ಸೋಮೇಶ್ವರ ದೇವಾಲಯವು ಕೋಲಾರದ ಹೃದಯಭಾಗದಲ್ಲಿದ್ದು ಶಿವನನ್ನು ಸೋಮೇಶ್ವರನ ಹೆಸರಿನಲ್ಲಿ ಆರಾಧಿಸಲಾಗುತ್ತದೆ. ಈ ದೇವಾಲಯ ೧೧ನೇ ಶತಮಾನದಲ್ಲಿ ಕೋಲಾರವನ್ನು ಆಳುತ್ತಿದ್ದ ಚೋಳರ ರಾಜರಿಂದ ನಿರ್ಮಾಣವಾಗಿದ್ದು.ಚೋಳರ ಕಲಾ ಶೈಲಿಗೆ ಮಾದರಿಯಾಗಿದೆ. ದೊಡ್ಡಗೋಪುರ ಈ ದೇವಾಲಯದ ಪ್ರಮುಖ ಆಕರ್ಷಣೆ.

 

ಕೋಲಾರಚಿಕ್ಕಬಳ್ಳಾಪುರ ಹಾಲು ಒಕ್ಕೂಟ

ತಾಲ್ಲೂಕು ಕೇಂದ್ರದಿಂದ : ೧೨ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೨ ಕಿ.ಮೀ

ಕೋಲಾರ - ಚಿಕ್ಕಬಳ್ಳಾಪುರ ಹಾಲು ಒಕ್ಕೂಟ

ಇದು ಒಂದು ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾಗಿದ್ದು, ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಹೈನುಗಾರಿಕೆಯನ್ನೇ ಜೀವನಾಧಾರವಾಗಿ ಅವಲಂಬಿಸಿರುವ ಹಾಲು ಉತ್ಪಾದಕರಿಗೆ ಉತ್ತಮ ಹಾಲು ಖರೀದಿ ದರಗಳನ್ನು ನೀಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

ಈ ಸಂಸ್ಥೆಯಿಂದ ಹಾಲಿನ ವಿವಿಧ ರೀತಿಯ ಹಾಲು ಉತ್ಪನ್ನಗಳನ್ನು ತಯಾರಿಸುತ್ತಿದ್ದು ದೇಶದ ವಿವಿಧ ಕಡೆಗೆ ಸರಬರಾಜು ಮಾಡುತ್ತಿದೆ. ಬೃಹಾದಾಕಾರವಾಗಿ ಬೆಳೆಯುತ್ತಿರುವ ಬೆಂಗಳೂರು, ಚೆನೈ, ಹೈದರಾಬಾದ್ ನಗರಗಳಲ್ಲಿ ಉತ್ಕೃಷ್ಟ ಮಟ್ಟದ ಹೆಚ್ಚಿನ ಹಾಲಿನ ಬೇಡಿಕೆಯನ್ನು ಗುಡ್ ಲೈಪ್ ಮೂಲಕ ಪೂರೈಕೆ ಮಾಡುತ್ತಿದ್ದು, ಪ್ರಸಿದ್ಧಿ ಪಡೆದಿದೆ.

ದಿನಾಂಕ: ೨೭-೦೩-೧೯೮೭ ರಂದು ಬೆಂಗಳೂರು ಒಕ್ಕೂಟದಿಂದ ಬೇರ್ಪಟ್ಟು ಸ್ವತಂತ್ರ ವಾಗಿ ಕಾರ್ಯ ನಿರ್ವಹಿಸುತ್ತಿರುವ ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ೧೧ ತಾಲ್ಲೂಕುಗಳ ೨೯೧೯ ಗ್ರಾಮಗಳನ್ನು ಒಳಗೊಂಡಿದೆ.

 

ಜಾಲಪ್ಪ ಮೆಡಿಕಲ್ ಕಾಲೇಜುಟಮಕ

ತಾಲ್ಲೂಕು ಕೇಂದ್ರದಿಂದ : ೧೨ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೨ ಕಿ.ಮೀ

ಜಾಲಪ್ಪ ಮೆಡಿಕಲ್ ಕಾಲೇಜು ಕೋಲಾರ ಜಿಲ್ಲೆಯ ಏಕೈಕ-ಪ್ರತಿಷ್ಟಿತ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವಾಗಿದೆ. ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಭೇಟಿ ನೀಡಿ ವೀಕ್ಷಣೆ ಮಾಡುವುದು ಉಪಯುಕ್ತಕರವಾಗಿದೆ.

ವಿ.ಸೂ.: ಈ ಕೇಂದ್ರಕ್ಕೆ ಭೇಟಿ ನೀಡಲು ಈ ಸಂಸ್ಥೆಯ ಸಾವರ್ಜನಿಕ ಸಂಪರ್ಕಾಧಿಕಾರಿಗಳಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯತಕ್ಕದ್ದು.