ಮುಂಜಾನೆ ಮೂರು ಘಂಟೆಗೇ ಕೋಳಿಯ ಕೊರಳು :
ಸತ್ತ ಸದ್ದಿನ ನಡುವೆ ಮೇಲೆದ್ದು, ಪಟಪಟನೆ
ರೆಕ್ಕೆಯ ಕೊಡವಿ, ಕತ್ತಲಿನ ಕೊತ್ತಲವೇರಿ
ತುತ್ತೂರಿಯೂದುವ ಕೊರಳು.

ಓ ಏಳಿರೋ ಏಳಿ ಬೆಳಗಾಗುತಿದೆ,
ಇದಕೆ ಸಂಶಯವಿಲ್ಲ – ಎಂಬಂತೆ
ಒಂದು ಸಲ, ಎರಡು ಸಲ, ಮೂರು ಸಲ
ದಶದಿಕ್ಕಿನಿಂದ ಮೊಳಗಿವೆ ಕೋಳಿಯ ಕೊರಳು.

ಕೋಳಿ ಕೂಗಿದ್ದರಿಂದಲೇ ಬೆಳಗಾಯ್ತೆಂದು ನಂಬುವ ಕಾಲ.
ಊರೆಲ್ಲ ದಡಬಡನೆದ್ದು, ಹೊಲಕೊ ಗದ್ದೆಗೊ
ತಂತಮ್ಮ ಕೆಲಸಕ್ಕೆ ಹೋಗುವ ಕಾಲ.
ಹೆಂಗಸರು ಬೀಸುಗಲ್ಲಿನ ಜೊತೆಗೆ ಸವಿರಾಗವನು ಬೆರಸಿ,
ಕಸಗುಡಿಸಿ, ನೀರೆರಚಿ, ಹೊಸ್ತಿಲ ಹಣೆಗೆ ಕುಂಕುಮವಿರಿಸಿ
ರಂಗೋಲಿ ಬರೆಯುವ ಕಾಲ.

ನನಗೋ ನಿದ್ದೆ
ಈ ಹಾಳು ಕೋಳಿ ಕೂಗಿದುದೇಕೆ ?
ಯಾರು ಕೀ ಕೊಟ್ಟು ಹೀಗೆ ದಿನವೂ ಇಡುತ್ತಾರೆ
ಈ ಎಲ್ಲ ಅಲಾರಂ ಟೈಂಪೀಸಿಗೆ ?
ಕುಕ್ಕುಕೂ ಎಂಬ ದೀರ್ಘಪ್ಲುತದಲ್ಲರಚಿ, ಮತ್ತೆ
ನಿದ್ದೆ ಹೊಡೆಯುತ್ತವೋ ಏನೊ ಈ ಕೋಳಿ.
ಅದ ಕೇಳಿ ನಾವೆಲ್ಲ ಏಳಲೇ ಬೇಕೆ ನೀವೇ ಹೇಳಿ ?
ಈ ಹಾಳು ಕೋಳಿಗಳು ಕೂಗಿಯೇ ಬೆಳಗಾಗಬೇಕೆ ?
ಕೋಳಿ ಕೂಗದಿದ್ದರು ಕೂಡ ಬೆಳಗಾಗಿಯೇ ಆಗುವುದು,
ಆಗ ಏಳಲೇಬೇಕು, ಎದ್ದರಾಯ್ತು.
ಹೀಗಿತ್ತು ಅಂದು, ಆ ಹಳ್ಳಿಯಲಿ ನನ್ನ ತರ್ಕ
*     *     *
ಈಗಲೋ –
ಈ ನಮ್ಮ ನಗರದಲಿ ಕೋಳಿ
ಎಲ್ಲೋ ಏನೊ !
ಅದರ ಸೊಲ್ಲೇ ಇಲ್ಲ !
ಮಾರ್ಕೆಟ್ಟಿನಲ್ಲಿ ಮಾತ್ರ ಬುಟ್ಟಿಯ ತುಂಬ ಕೋಳಿಯ ಮೊಟ್ಟೆ.
ಈ ಊರಿನಲ್ಲೂ ದಿಟದ ಕೋಳಿಗಳುಂಟು ಎಂಬುದಕೆ
ಸಾಕಷ್ಟು ಆಧಾರ ಸಿಕ್ಕಂತಾಯ್ತು.
ಈ ಮೊಟ್ಟೆ ಕೋಳಿಯವೊ ? ಹೌದೆಂದು ಸಿದ್ಧಾಂತ
ಮಾಡಿದ ಮೇಲೆ ಇವುಗಳನ್ನಿಟ್ಟ ಕೋಳಿಗಳೆಲ್ಲಿ
ಎಂಬ ಸಂಶೋಧನೆ.
ಕೋಳಿಯಿರಲೇಬೇಕು, ಇದಕೆ ಸಂಶಯವಿಲ್ಲ,
ಆದರವು ಎಲ್ಲೋ !
ಯಾವುದೋ ಸದ್ದಿರದ ಮೂಲೆಯಲಿ
ಕೊರಳನು ಹಿಸುಕಿ, ಬರಿ ಮೊಟ್ಟೆಯಿಡುವುದ ಮಾತ್ರ
ಕಲಿಸಿದಂತಿದೆ ಅವಕೆ.
ಪಾಪ, ಮಾರ್ಕೆಟ್ಟಿನಲ್ಲಿ ಬುಟ್ಟಿಯ ತುಂಬ
ಅವುಗಳ ಕರುಳು ಸದ್ದಿರದೆ ಬಿದ್ದಿವೆ.
ಒಂದೊಂದು ಮೊಟ್ಟೆಯ ಒಳಗು ಮಲಗಿವೆ ನೋಡು
ಎಂದೆಂದಿಗೂ ತಲೆಯೆತ್ತಿ ಕೂಗದ ಕೊರಳು.
*     *     *
ಇನ್ನು ಮುಂದಿನ ಪ್ರಶ್ನೆ: ಈ ನಗರದಲಿ
ಕೋಳಿಗಳೇಕೆ ?
ಅವು ಕೂಗಿಯೇ ಇಲ್ಲಿ ಬೆಳಗಾಗಬೇಕೆ ?

ಬೆಳಗಾಗ ಬಾಗಿಲಲಿ ಹಾಲನು ಕರೆವ
ಗೌಳಿಗಿತ್ತಿಯ ಕಂಠವೊಂದೇ ಸಾಕು,
ಈ ಒಂದು ಮನೆಯೇಕೆ, ಬೀದಿಗೆ ಬೀದಿಯೇ
ಬೆಚ್ಚಿ ಬೀಳುವುದಕ್ಕೆ !

ಅದು ಬೇಡ, ಆಚೆಯ ಮನೆಯ
ಆ ಹಳೆಯ ಮೋಟಾರುಬೈಸಿಕಲ್ಲೇ ಸಾಕು.
ಆ ದೈತ್ಯ ವಾಹನದಾರ್ಭಟಕ್ಕೆ ನಮ್ಮ ಕಿವಿ
ಬಿರಿಯದೆಯೆ ಉಳಿದರೆ, ಆಮೇಲೆ ಮುಂದಿನ ಮಾತು.

ಅಥವಾ ಮಿಲ್ಲುಗಳಿಲ್ಲವೇ ?
ಬೆಳಗಿನ ಮುಖಕ್ಕೆ ಕಪ್ಪು ಹೊಗೆಯನು ಬಳಿದು
ಮೌನದ ಕೊರಳಿಗುರುಳನು ಹಾಕಿ
ಜೀವವ ಸೇದಿಕೊಲ್ಲುವ ಕೂಗು.

ಇಷ್ಟೆಲ್ಲ ಇರಲಾಗಿ ನಾಗರಿಕ ಏರ್ಪಾಟು
ಈ ನಮ್ಮ ನಗರದಲಿ ಆ ಹಳೆಯ
ಕೋಳಿಗಳೆ ಕೂಗಿ ಬೆಳಗಾಗಬೇಕೆ ?
ಅವು ಎಲ್ಲೋ ಒಂದು ಕಡೆ ಬಾಯಿಗೆ ಬಟ್ಟೆಯ ತುರುಕಿ
ಬರಿ ಮೊಟ್ಟೆಯಿಟ್ಟರೆ ಸಾಕು.
ಮಾರ್ಕೆಟ್ಟಿನಲ್ಲಿ ಬುಟ್ಟಿಯ ತುಂಬ
ಅದರ ಸಂತಾನ ಮೊಟ್ಟೆಯಾಗೈತರಲಿ.
ಅದ ತಿಂದು ನಮ್ಮ ಜನ ದೇಹಶಕ್ತಿಯ ಗಳಿಸಿ
ದೇಶವನು ಕಾಪಾಡಲಿ,
‘ನಾಯಮಾತ್ಮಾ ಬಲಹೀನೇನಲಭ್ಯ’- ಎಂಬ ಆ
ಋಷಿವಾಣಿ ಮತ್ತೊಮ್ಮೆ ಮೊಳಗಲಿ ;
ಕೋಳಿಗಳ ಆತ್ಮಕ್ಕೆ ಚಿರಶಾಂತಿ ಲಭಿಸಲಿ !