ಡಾ. ಬಿ.ಎಸ್‌. ಗದ್ದಗಿಮಠ ಅವರ ಕೌಟುಂಬಿಕ ಜೀವನವು ಸುಂದರ ನಂದನ ವನವಾಗಿತ್ತು. ಬಸಯ್ಯನವರ ಪತ್ನಿ ಅನಸೂಯಾದೇವಿ ಅವರು ತೊರಗಲ್‌ಸಂಸ್ಥಾನದೆ ದಿವನರಾದ ಚರಂತಿಮಟ ಅವರ ಸುಪುತ್ರಿ, ಅನಸೂಯಾದೇವಿ ಅವರು ನಾಲ್ಕನೆಯ ತರಗತಿವರೆಗೆ ಉರ್ದು ಮತ್ತು ಮರಾಠಿಯಲ್ಲಿ, ಏಳನೆಯ ತರಗತಿಯವರೆಗೆ ಕನ್ನಡದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. ಈ ದಂಪತಿಗಳಿಗೆ ಐದು ಜನ ಮಕ್ಕಳು. ಸಾವಳಿಗಯ್ಯ, ರುದ್ರಯ್ಯ (ರವಿ), ಪುಲಕೇಶಿ, ನಿಜಗುಣದೇವ, ಅಕ್ಕಮಹಾದೇವಿ, ಒಟ್ಟು ನಾಲ್ಕು ಗಮಡು ಮಕ್ಕಳು ಒಬ್ಬ ಹೆಣ್ಣು ಮಗಳನ್ನು ಪಡೆದ ತುಂಬು ಸಾಂಸಾರಿಕ ಜೀವನ ಅವರದಾಗಿತ್ತು.

ಗದ್ದಗಿಮಠ ಅವರ ಹಿರಿಯಮಗ ಸವಳಿಗಯ್ಯನವರು ಕೃಷಿ ಕಾಯಕದೊಂದಿಗೆ Horticulture ನಲ್ಲಿ ತುಂಬಾ ಆಸಕ್ತಿಯುಳ್ಳವರಾಗಿ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ದ್ವಿತೀಯ ಸುಪುತ್ರ ರುದ್ರಯ್ಯನವರು ಎಂ.ಎ.,ಎಂ.ಲಿಬ್‌. ಪದವೀಧರರಾಗಿದ್ದು ಹೈದರಾಬಾದಿನ ಕೃಷಿ ಸಂಶೋಧನಾ ಆಡಳಿತಾಧಿಕಾರಿಗಳು ಮತ್ತು Information Science Library Science National Academy ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ತೃತೀಯ ಕುವರ ಪುಲಕೇಶಿಯವರು ಎಂ.ಎಸ್ಸಿ. ಪದವೀಧರರಾಗಿದ್ದು ಬೆಂಗಳೂರಿನಲ್ಲಿ Horticulture ಸಂಶೋಧನಾ ಸಂಸ್ಥೆಯಲ್ಲಿ ತಾಂತ್ರಿಕ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚತುರ್ಥ ಸುಪುತ್ರಿ ಅಕ್ಕಮಹಾದೇವಿ ಅವರು ಮನಃಶ್ಯಾಸ್ತ್ರದಲ್ಲಿ ಎಂ.ಎ. ಪದವೀಧರರಾಗಿದ್ದು ಗುಲ್ಬರ್ಗಾದ ಮಹಿಳಾ ಮಹಾವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿ ವೃತ್ತಿ ನಿರತರಾಗಿರುತ್ತಾರೆ. ಕೊನೆಯ ಮಗ ನಿಜಗುಣದೇವ ಕೃಷಿವಿಜ್ಞಾನದಲ್ಲಿ ಎಂ.ಎಸ್ಸಿ. ಪದವಿ ಪಡೆದು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿರುತ್ತಾರೆ.

ಡಾ. ಗದ್ದಗಿಮಠ ಅವರ ಐದು ಮಕ್ಕಳ ಹೆಸರುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪ್ರತಿಯೊಬ್ಬರ ಹೆಸರಿನಲ್ಲಿ ಒಂದು ವೈಶಿಷ್ಟ್ಯತೆ ಅಡಗಿರುವದು ಕಂಡು ಬರುತ್ತದೆ. ತಮ್ಮ ತಂದೆಯವರ ಹೆಸರನ್ನು ಸಂಪ್ರದಾಯದಂತೆ ಜೇಷ್ಠ ಸುಪುತ್ರನಿಗೆ ಸಾವಳಿಗಯ್ಯ ಎಂದು ನಾಮಕರಣ ಮಾಡಿದ್ದಾರೆ. ಗದ್ದಗಿಮಠ ಅವರು ಸಂಶೋಧನಾ ಕ್ಷೀತಿಜದಲ್ಲಿ ವಿಶೇಷ ಆಸಕ್ತಿವುಳ್ಳವರಾಗಿದ್ದು, ಷಟ್‌ಸ್ಥಲ ಉದ್ಧರಣೆಯ ಅನ್ವೇಷಣೇಯಲ್ಲಿ ನಿರತರಾಗಿರುವ ಸಂದರ್ಭದಲ್ಲಿ ಮತ್ತು ತತ್ವಶಾಸ್ತ್ರದ ಬಗ್ಗೆ ಅಧ್ಯಯನದಲ್ಲಿ ಮಗ್ನರಾಗಿರುವ ಅವಧಿಯಲ್ಲಿ ಎರಡನೆಯ ಮಗ ಜನಿಸಿದ್ದರಿಂದ ರುದ್ರಯ್ಯ ಎಂದು ಹೆಸರು ಇಟ್ಟಿರುತ್ತಾರೆ. ಪುಲಿಗೆರೆಯ ಬಗ್ಗೆ ಸಂಶೋಧನೆ ಕೈಕೊಂಡಾಗ ಮತ್ತೊಬ್ಬ ಮಗ ಜನಿಸಿರುವ ನಿಮಿತ್ತ ಪುಲಕೇಶಿ ಎಂದು ಕರೆದಿರುತ್ತಾರೆ. ವಚನ ಸಾಹಿತ್ಯ ಮತ್ತು ಅಕ್ಕಮಹಾದೇವಿಯ ಜೀವನ ಚರಿತ್ರೆ ಕುರಿತು ಸಂಶೋಧನಾತ್ಮಕ ದೃಷ್ಟಿಕೋನದಿಂದ ಅಧ್ಯಯನ ಮಾಡುವಾಗ ಮಗಳು ಹುಟ್ಟಿರುವುದರಿಂದ ಕುವರಿಗೆ ಅಕ್ಕಮಹಾದೇವಿ ಎಂದು ಹೆಸರು ಇಟ್ಟಿರುತ್ತಾರೆ. ನಿಜಗುಣ ಶಿವಯೋಗಿಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಸಮಯದಲ್ಲಿ ನಿಜಗುಣ ಶಿಯೋಗಿಯೇ ಕೊನೆಯ ಮಗನರೂಪದಲ್ಲಿ ಜನಿಸಿರುತ್ತಾರೆ.

ಬೆಳಗಾಂವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿಯವರಾದ ಚನ್ನಪ್ಪಣ್ಣ ಹಟ್ಟಿಹೊಳಿಯವರೊಂದಿಗೆ ಗದ್ದಗಿಮಠ ಅವರು ಅನ್ಯೋನ್ಯ ಸ್ನೇಹವುಳ್ಳವರಾಗಿದ್ದರು. ಮಲ್ಲಪ್ಪ ಹಟ್ಟಿಹೊಳಿ, ವೀರಭದ್ರಪ್ಪ, ರುದ್ರಪ್ಪ ಹಟ್ಟಿಹೊಳಿಯವರೊಂದಿಗೆ ಈಜಾಡಲು ಕುಸ್ತಿಯಾಡಲು ಹೋಗುತ್ತಿದ್ದರಲ್ಲದೆ, ರುದ್ರಪ್ಪ ಹಟ್ಟಿಹೊಳಿಯವರನ್ನು ತಮ್ಮ ಮನೆಯಲ್ಲಿಯೆ ಇಟ್ಟುಕೊಂಡು ಶಿಕ್ಷಣ ಕೂಡಾ ಕೊಡಿಸಿದ್ದಾರೆ. ವೀರಭದ್ರಪ್ಪನವರು ಅನಕ್ಷರಸ್ಥರಾಗಿದ್ದರೂ ಅವರಿಗೆ ಪ್ರೋತ್ಸಾಹ ಕೊಟ್ಟು ಟಿ.ಡಿ.ಬಿ. ಮೇಂಬರರಾಗಲು ಗದ್ದಗಿಮಠ ಅವರು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ರುದ್ರಪ್ಪ ಮತ್ತು ವೀರಭದ್ರಪ್ಪನವರ ಏಳ್ಗೆಗೆ ಡಾ. ಗದ್ದಗಿಮಠ ಅವರು ಕಾರಣೀಕರ್ತರಾಗಿದ್ದಾರೆ. ಅನೇಕ ಬಡವರಿಗೆ ದೀನ ದಲಿತರಿಗೆ ಉದಾರಭಾವದಿಂದ ಸಹಾಯ ಸಹಕಾರ ನೀಡಿ ಇತರರ ಬದುಕಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ.

ಡಾ. ಗದ್ದಗಿಮಠ ಅವರು ಅಕಾಲಿಕ ಮೃತ್ಯುವಶರಾದಾಗ ಅವರ ಮಕ್ಕಳು ತುಂಬಾ ಚಿಕ್ಕವರಾಗಿದ್ದರು.  ಧರ್ಮಪತ್ನಿ ಸರ್ವಭಾರ ಹೊತ್ತು ನಿಭಾಯಿಸುವ ದಿಟ್ಟ ಮಹಿಳೆಯಾಗಿದ್ದರು. ಧೈರ್ಯಗೆಡದೆ ಪ್ರತಿಯೊಬ್ಬ ಮಕ್ಕಳು ಉನ್ನತ ಹುದ್ದೆ ಪಡೆಯುವಂತೆ ಶ್ರಮವಹಿಸಿ ಪ್ರಯತ್ನಪಟ್ಟು ಸಾಕಷ್ಟು ನೋವು ನಲಿವಿನಲ್ಲಿ ಈಜಾಡಿ ಯಶಸ್ವಿಯಾದರು. ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದವರಾದ ಅನಸೂಯೂದೇವಿಯವರು ಆದರ್ಶಮಾತೆ ಎನಿಸಿದರು. ತಮ್ಮ ಅತ್ತೆಯವರಾದ ಶಿವಗಂಗಾದೇವಿಯವರಿಂದ ತ್ರಿಪದಿಗಳನ್ನು ನೊರೊಂದು ರಾಗದಲ್ಲಿ ಹಾಡುವ ಕಲೆಯನ್ನು ಎರವಲಾಗಿ ಪಡೆದು ಏಕಮಾತ್ರ ಪುತ್ರಿಯಾದ ಅಕ್ಕಮಹಾದೇವಿಯವರೊಂದಿಗೆ ಧಾರವಾಡದ ಆಕಾಶವಾಣಿಯಲ್ಲಿ ಜಾನಪದ ಹಾಡುಗಳನ್ನು ಹಲವಾರು ಬಾರಿ ಬಿತ್ತಿರಿಸಿ ಸಹೃದಯರ ಮನಸ್ಸನ್ನು ರಂಜಿಸಿದ್ದಾರೆ. ಪತಿಗೆ ತಕ್ಕ ಸತಿಯಾಗಿ ಸಹಬಾಳ್ವೆ ನಡೆಸುತ್ತಾ ಅತಿಥಿಗಳನ್ನು ಸಂತೃಪ್ತಗೊಳಿಸುವುದರಲ್ಲಿಯೇ ಸದಾ ಸಂತೋಷಪಡುತ್ತಿದ್ದ ವಿಶಾಲ ಹೃದಯಿಯಾಗಿದ್ದರು. ಪತಿಯೊಡನೆ ಸರ್ವವಿಧದ ಕಷ್ಟ ಸುಖದಲ್ಲಿ ಸಹಭಾಗಿಣಿಯಾಗಿ ಪತಿಗೆ ಚೈತನ್ಯದ ಸ್ಪೂರ್ತಿಯ ಚಿಲುಮೆಯಂತಿದ್ದ ಅನಸೂಯಾದೇವಿಯವರು ದಿ.೨೪.೧.೧೯೮೩ ರಂದು ಶಿವಾಧೀನರಾದರು.

ಡಾ. ಗದ್ದಗಿಮಠ ಅವರ ತಾಯಿಯವರಾದ ಶಿವಗಂಗಾದೇವಿ ಅವರು ತಮ್ಮ ಸ್ನೇಹಿತೆಯರೊಂದಿಗೆ ಶಿವಶರಣರ ಜೀನವ ಚರಿತ್ರೆಯನ್ನು ಕುರಿತು ಅನೇಕ ರೂಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅವರ ಹಾಡಿನಲ್ಲಿರುವ ನಿರರ್ಗಳ ಶೈಲಿ, ಕಥೆಯ ಬೆಡಗು, ಮಾರ್ದವತೆ, ಮುಂತಾದವುಗಳು ಗದ್ದಗಿಮಠರ ಮನಸ್ಸನ್ನು ಸೆರೆಹಿಡಿದಿರುವುದರಿಂದ ಅವುಗಳನ್ನೆಲ್ಲ ಸಂಗ್ರಹಿಸಿಟ್ಟಿದ್ದಾರೆ. ಹಲವಾರು ವರ್ಷಗಳವರೆಗೆ ಸತತವಾಗಿ ಜಾನಪದ ಸಾಹಿತ್ಯ ಸಂಸ್ಕೃತಿ ಕಲೆಗಳನ್ನು ಸಂಶೋಧನೆ ಕಾರ್ಯಕ್ಕೆ ಅಳವಡಿಸಿ ಪರಿಶೀಲಿಸಿದ್ದಾರೆ. ಈ ಅಪಾರವಾದ ಸಂಕಲನದ ಸವಿರುಚಿಯನ್ನು ಕನ್ನಡಿಗರಿಗೂ ಉಣಬಡಿಸುವ ನಿಮಿತ್ತ ತಾವೇ ಸ್ವತಃ ಜಾನಪದ ಕಾವ್ಯಮಾಲೆಯನ್ನು ಕ್ರಿ.ಶ. ೧೯೫೦ ರಲ್ಲಿ ಪ್ರಾರಂಭಿಸಿ ಅದರ ಮುಖಾಂತರ ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ.